Wednesday, 27th November 2024

ಸಿಂಗಳೀಕಗಳಿಗೆ ಸಿಗದ ಉಪ್ಪಾಗೆ; ಉಳಿವ ಬಗೆ ?

ಸುಪ್ತ ಸಾಗರ

ರಾಧಾಕೃಷ್ಣ ಎಸ್.ಭಡ್ತಿ

rkbhadti@gmail.com

ಪಶ್ಚಿಮಘಟ್ಟಗಳೆಂದರೆ ಅದು ನೂರಾರು ಬಗೆಯ ಸ್ತನಿಗಳು, ಸಾವಿರಾರು ಪಕ್ಷಿ ಸಂಕುಲ, ಸರೀಸೃಪ, ಜಲಚರಗಳ ಜೀವ ವೈವಿಧ್ಯದ ತೊಟ್ಟಿಲು. ಜಗತ್ತಿನ ಬೇರೆಡೆ ಎಲ್ಲೂ ಕಾಣ ಸಿಗದ ಅತ್ಯಪರೂಪದ ಜೀವಿಗಳ ಅಪೂರ್ವ ತಾಣ. ಅಂಥ ಜೀವಿಗಳಲ್ಲಿ ಒಂದಾದ ಸಿಂಗಳೀಕಗಳ ವಿನಾಶಕ್ಕೆ ಕಾರಣವಾಗುತ್ತಿದೆ ಮಲೆನಾಡಿಗರ ವನಸ್ಪತಿ ಪ್ರೇಮ!

ಒಮ್ಮೆಮ್ಮೆ ತೀರಾ ಜುಗುಪ್ಸೆ ಬರುವುದು, ನಮ್ಮ ಬಗ್ಗೆಯೇ ನಮ್ಮಲ್ಲಿ ಧಿಕ್ಕಾರ ಮನೋ ಭಾವ ಮೂಡುವುದು ಇದೇ ಕಾರಣಕ್ಕೆ. ತೀರಾ ನಮ್ಮದೇ ಅನ್ನುವುದನ್ನೂ ನಾವು ಉಳಿಸಿ ಕೊಳ್ಳುವ ಯೋಗ್ಯತೆ ತೋರುವುದಿಲ್ಲ. ಜೀವವೈವಿಧ್ಯದ ದೃಷ್ಟಿಯಿಂದಲಂತೂ ನಾವೆಷ್ಟು ಬೇಜವಾಬ್ದಾರಿಯಿಂದ ವರ್ತಿಸುತ್ತೇವೆಂದರೆ ಅದೆಷ್ಟೋ ಅಪರೂಪದ ತಳಿಗಳು ಪತ್ತೆಯಾಗುವ ಮುಂಚೆಯೇ ನಾಶ ವಾಗಿ ಹೋಗಿರುತ್ತವೆ. ನಮ್ಮ ಸೃಷ್ಟಿಯಲ್ಲಿ ಇಂಥದ್ದೊಂದು ಇತ್ತು ಎಂಬುದಕ್ಕೆ ಕನಿಷ್ಠ ಕುರುಹೂ ಇಲ್ಲದಂತಾಗಿ ಬಿಡುತ್ತವೆಂದರೆ ನಾವಿನ್ನೆಷ್ಟು ನಾಚಿಗೆಗೆಟ್ಟವರು ನೋಡಿ!

ಪಶ್ಚಿಮಘಟ್ಟಗಳು ಮತ್ತಲ್ಲಿ ಇರಬಹುದಾದ ಜೀವ ಸಂಕುಲಗಳ ನಾಶವನ್ನು ಗಮನಿಸಿ ದಾಗ ಖಂಡಿತಾ ನಮ್ಮ ತಲೆಮಾರಿನ ಒಂದಿಡೀ ಜನಾಂಗ ತಲೆ ತಗ್ಗಿಸಲೇಬೇಕಾಗುತ್ತದೆ. ತೀರಾ ಇತ್ತೀಚಿನ ಉದಾಹರಣೆ Lion tailed Macaque… ಹೆಸರೇನೋ ಸಿಂಹವೇ. ಆದರೂ ಸಿಂಹವಲ್ಲ. ಯಾವುದಿದು ಅಂದುಕೊಂಡ್ರಾ? ನಮ್ ಸಿಂಗಳೀಕ ಕಣ್ರೀ. ‘ಉಪ್ಪಾಗೆ’ ಅಥವಾ ‘ಉಪ್ಪಾಕೆ’ ಎಂಬ ವನಸ್ಪತಿ ಯೊಂದರ ಮಿತಿಮೀರಿದ ಬಳಕೆಯಿಂದ ಈ ವಿರಳಾತಿ ವಿರಳ ಜೀವಿ ಮತ್ತೂ ವಿನಾಶದಂಚಿಗೆ ತಲುಪುತ್ತಿದೆ ಎಂಬ ಸಂಗತಿ ನಿಜಕ್ಕೂ ಆತಂಕಕಾರಿ.

ಕಾಡಿನ ಸಣ್ಣಪುಟ್ಟ ಬೆಳವಣಿಗೆಯನ್ನೂ ಸುಲಭದಲ್ಲಿ ಪತ್ತೆ ಹಚ್ಚಿ ಸುತ್ತಮುತ್ತಲಿನ ಪರಿಸರಕ್ಕೆ ಸಂದೇಶ ರವಾನಿಸುವ ಮಹದು ಪಕಾರಿ ಪ್ರಾಣಿ ಸಿಂಗಳೀಕ. ಇದರ ಪರಿಚಯ ನಮಗೆ ಇದ್ದೇ ಇದೆ. ಅದರಲ್ಲೂ ಮಲೆನಾಡಿನವರಿಗಂತೂ, ಇದರ ಹೆಸರಿನಿಂದಲೇ ಹಿತವಾಗಿ ವ್ಯಂಗ್ಯವಾಡುವಷ್ಟು ಆಪ್ತ. ಅನುಮಾನವೇ ಇಲ್ಲ, ಸಿಂಹದಂತೆಯೇ, ಇದಕ್ಕೂ ಮುಖದ ಸುತ್ತ ಕೂದಲಿರುತ್ತದೆ; ಬಾಲದ ತುದಿಯಲ್ಲಿ ಕೂದಲಿನ ಗೊಂಚಲೂ ಇರುತ್ತದೆ. ಈ ಕಾರಣಕ್ಕೇ ಇಂಗ್ಲಿಷ್‌ನಲ್ಲಿ ಇದರ ಹೆಸರಿಗೆ ಸಿಂಹವನ್ನು ತಂದು ಜೋಡಿಸಿದ್ದಿರಬಹುದು. ಆದರೆ ಕೂದಲಿನ ಬಣ್ಣ ಮಾತ್ರ ಕೇಸರಿಯ ಬದಲು ಬೂದು ಬಣ್ಣದ್ದಾಗಿರುತ್ತದೆ.

ಮೈ ಬಣ್ಣ ಗಾಢ ಕಪ್ಪು. ಸ್ತನಿ ವರ್ಗಕ್ಕೆ ಸೇರಿದ ಸಿಂಗಳೀಕ ಸೈಕೋಪಿಥೆಸಿಡೆ ಕುಟುಂಬದ ಸದಸ್ಯ. ಸಿಲೆನಸ್ ಪ್ರಬೇಧ. ಕಪ್ಪು ಮೈ ಬಣ್ಣ, ಬಿಳಿ ಕುತ್ತಿಗೆಯಿದ್ದು, 42 ರಿಂದ 61 ಸೆಂಟಿ ಮೀಟರ್ ಎತ್ತರ ಬೆಳೆಯುತ್ತವೆ. 2 ರಿಂದ 10 ಕೆಜಿಯವರೆಗೆ ಭಾರ ಹೊಂದಿದ್ದು, 25 ಸೆಂಟಿಮೀಟರ್ ಉದ್ದದ ಬಾಲ ಇರುತ್ತದೆ. ನಿಮಗೆ ಗೊತ್ತೇ? ಮರದ ಮೇಲೆಯೇ ಬದುಕಿನ ಶೇ.99ರಷ್ಟು ಭಾಗ ಕಳೆಯುವ ಸಿಂಗಳೀಕ, 17 ಬಗೆಯ ಶಬ್ದಗಳನ್ನು ಹೊಮ್ಮಿಸಬಲ್ಲ ಅಪರೂಪದ ಜೀವ ಸಂಕುಲ.

ನಮ್ಮಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿ ಹಾಗೂ ಹೊನ್ನಾವರದ ಗೇರುಸೊಪ್ಪ ಭಾಗದಲ್ಲಿ ಬಿಟ್ಟರೆ ಅತ್ಯಂತ ವಿರಳ ಸಂಖ್ಯೆಯಲ್ಲಿ
ಕೇರಳ ಮತ್ತು ತುಳುನಾಡಿನ ಕಾಡಿನಲ್ಲಷ್ಟೇ ಕಾಣಬರುವ ಅನರ್ಘ್ಯ ಸಂಪತ್ತು. ಅದೇ ಕ್ಷಣಕ್ಕೆ, ದೇಶದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳಲ್ಲಿ ಪ್ರಮುಖವಾದುದು ಕೂಡ.

ಹೌದು, ಜಗತ್ತಿನಲ್ಲಿ ಬೇರೆಲ್ಲೂ ಕಾಣದ ಅಪರೂಪದ ತಳಿ ಇದು. ಅದರಲ್ಲೂ ಅತೀ ಹೆಚ್ಚು ಸಂಖ್ಯೆಯಲ್ಲಿರುವುದು, ಶರಾವತೀ ಕಣಿವೆಯಲ್ಲಿ 2011ಗಣತಿಯ ಪ್ರಕಾರ, ಶರಾವತಿ ಕಣಿವೆ ಪ್ರದೇಶದಲ್ಲಿ ಸುಮಾರು ೬೧೭ ಸಿಂಗಳೀಕಗಳು ಕಂಡುಬಂದಿವೆ. ಒಟ್ಟು ಇವುಗಳ ಸಂಖ್ಯೆ ಇರುವುದೇ 3000-3500 ಎನ್ನುತ್ತವೆ ಅಂಕಿ-ಸಂಖ್ಯೆಗಳು. ಕೇರಳದ ಮೌನ ಕಣಿವೆಯಲ್ಲಿ (19.6), ತಮಿಳು ನಾಡು ಅಣ್ಣಾಮಲೈ ಅರಣ್ಯ ಪ್ರದೇಶದಲ್ಲಿ (16.3), ಗೇರುಸೊಪ್ಪದಲ್ಲಿ (24.7) ಸರಾಸರಿ ಪ್ರಮಾಣದಲ್ಲಿ ಕಂಡುಬರುತ್ತವೆ.

ಇವು ಎಲ್ಲಿ ಇರುತ್ತವೋ, ಅಲ್ಲಿ ಅತೀ ಹೆಚ್ಚು ಜೀವವೈವಿಧ್ಯ ಇದೆ ಎಂದೇ ಅರ್ಥ. ಇವುಗಳನ್ನು ಫ್ಲ್ಯಾಗ್‌ಶಿಪ್ ಸ್ಪೀಶೀಸ್ ಎಂದೂ ಕರೆಯುತ್ತಾರೆ. ಬೀಜ ಪ್ರಸರಣೆಯ ಮೂಲಕ, ಪರಿಸರಕ್ಕೆ ಮಹದುಪಕಾರ ಮಾಡಿಕೊಡುತ್ತವೆ. ಎಲ್ಲ ತರಹದ ಹಣ್ಣುಗಳನ್ನು, ಬೀಜಗಳನ್ನು ಮತ್ತು ಕೆಲವೊಮ್ಮೆ ಮರದ ಪೊಟರೆಗಳನ್ನು ತಮ್ಮ ಹಲ್ಲಿನಿಂದ ಕೆರೆದು, ಅಲ್ಲಿರುವ ಹಕ್ಕಿಗಳ ಮೊಟ್ಟೆಗಳನ್ನೂ ತಿನ್ನುತ್ತವೆ. ಕಾಡಿನಲ್ಲಿ ಸ್ವತಂತ್ರವಾಗಿ ಸುಮಾರು 20 ವರ್ಷಗಳವರೆಗೂ ಬದುಕುತ್ತವೆ.

ಮೃಗಾಲಯದಂತಹ ಕೃತಕ ಪರಿಸರಗಳಲ್ಲಿ 30 ವರ್ಷಗಳ ತನಕವೂ ಬದುಕಿದ ಉದಾಹರಣೆಗಳಿವೆ. ಹೆಣ್ಣು ತನ್ನ 6-7 ನೇ ವಯಸ್ಸಿಗೆ ಪ್ರೌಢಾವಸ್ಥೆಗೆ ತಲುಪುತ್ತವೆ. ಗಂಡು 8-9ನೇ ವಯಸ್ಸಿಗೆ ಪ್ರೌಢಾವಸ್ಥೆಗೆ ತಲುಪುತ್ತವೆ. ಗುಂಪು-ಗುಂಪಾಗಿಯೇ ವಾಸಿಸುತ್ತವೆ. ಒಂದು ಗುಂಪಿನಲ್ಲಿ, 6ರಿಂದ 35 ಸದಸ್ಯರವರೆಗೂ ಇರುತ್ತವೆ. ಒಂದು ಗುಂಪಿನಲ್ಲಿ ಪ್ರೌಢಾವಸ್ಥೆಗೆ ಇನ್ನೂ ಬಾರದಿರುವ 2-3 ಗಂಡು ಸಿಂಗಳೀಕಗಳು, 5-6 ಹೆಣ್ಣುಗಳು ಇರುತ್ತವೆ. ಗುಂಪಿಗೊಬ್ಬ ನಾಯಕ ಇರುತ್ತಾನೆ. ಈತನನ್ನು ಆಲಾ-
ಮೇಲ್ ಎಂದು ಕರೆಯುತ್ತಾರೆ. ಇಡೀ ಗುಂಪಿನ ರಕ್ಷಣೆ ಮಾಡುವುದು ನಾಯಕನ ಹೊಣೆ. ಮರಿ- ಮಕ್ಕಳನ್ನು ನೋಡಿಕೊಂಡು ಇರುವುದು ಹೆಣ್ಣುಗಳ ಕೆಲಸ. ಇತರೆ ಗಂಡು ಸೀಮಗಳೀಕಗಳು ಆಹಾರವನ್ನು ಹುಡುಕಿ ತರುತ್ತವೆ.

ಗರ್ಭಾವಸ್ಥೆಯ ಅವಧಿ ಆರು ತಿಂಗಳು ಮಾತ್ರ. ಸಾಮಾನ್ಯವಾಗಿ, ಡಿಸೆಂಬರ್‌ನಿಂದ ಫೆಬ್ರವರಿಯೊಳಗೆ ಮರಿಗಳನ್ನು ಹಾಕುತ್ತವೆ. ಆಲಾ-ಮೇಲ್ ಮಾತ್ರ ತನ್ನ ಗುಂಪಿನ ಹೆಣ್ಣುಗಳೊಂದಿಗೆ ಸಂಭೋಗ ಕ್ರಿಯೆ ನಡೆಸುತ್ತದೆ. ಇವುಗಳು ಬಹಳಷ್ಟು ಸಮಯವನ್ನು ತಮ್ಮನ್ನು ಮತ್ತು ತಮ್ಮ ಸಂಗಾತಿಯ ಮೈ ಶುದ್ದೀಕರಿಸುವ ಕ್ರಿಯೆಯಲ್ಲಿ ಮುಳುಗಿರುತ್ತವೆ. ಇದನ್ನು ‘ಗ್ರೂಮಿಂಗ್’ ಎಂದು ಕರೆಯುತ್ತಾರೆ. ಗಂಡು ಸಿಂಗಳೀಕನ ಬಾಲವು ಹೆಚ್ಚು ಬಿಳಿ ಬಣ್ಣದ ಪಚ್ಚೆಯಿರುತ್ತದೆ.

ಹೆಣ್ಣಿನ ಬಾಲ ಸಾಮಾನ್ಯವಾಗಿರುತ್ತದೆ. ಸಿಂಗಳೀಕಗಳಲ್ಲಿ ಏಳೆಂಟು ತಳಿಗಳಿವೆ. ಆದರೆ ಬೇರೆ ತಳಿಗಳಂತೆ ಇವು ಮನುಷ್ಯನ ಒಡನಾಡವನ್ನು ಬಯಸುವುದಿಲ್ಲ. ಆದಷ್ಟು ಮನುಷ್ಯನ ವಾಸನೆಯೂ ಸುಳಿಯದಂತಹ ಜಗಗಳಲ್ಲಿ ವಾಸಿಸುತ್ತವೆ. ಮರ ಹತ್ತುವುದು ಇಳಿಯುವುದು ಎಂದರೆ ಇವುಗಳಿಗೆ ನೀರು ಕುಡಿದಷ್ಟೇ ಸಲೀಸು. ನೋಡು ನೋಡುತ್ತಿದ್ದಂತೆ ಅತ್ಯಂತ ವೇಗವಾಗಿ ಪರಾರಿಯಾಗಿ ಬಿಡುತ್ತವೆ.

ದುರದೃಷ್ಟವೆಂದರೆ, ಮನುಷ್ಯನ ಸಹವಾಸವೇ ಬೇಡ ಎಂದು ಅವೇ ದೂರ ಹೋದರೂ, ಮನುಷ್ಯ ಅವನ್ನು ಬಿಡುತ್ತಿಲ್ಲ. ಅನು ಮಾನವೇ ಇಲ್ಲ, ಮರಗಳ ಮಾರಣ ಹೋಮವೇ ಸಿಂಗಳೀಕಗಳ ಅವನತಿಗೆ ಕಾರಣ. ಸಾಲದ್ದಕ್ಕೆ ಆಹಾರ ಮತ್ತು ಜಗಕ್ಕೆ ಅವುಗಳ ಜತೆ ಪೈಪೋಟಿಗೇ ಇಳಿದಿದ್ದಾನೆ. ಇದರಲ್ಲಿ ಎಂದಿನಂತೆ ಮನುಷ್ಯನೇ ಗೆಲ್ಲುತ್ತಿದ್ದಾನೆ. ಇದಕ್ಕೆ ಒಂದು ಸೂಕ್ತ ಉದಾಹರಣೆ ಮಲೆ ನಾಡಿನ ಅರಣ್ಯದಲ್ಲಿ ಹೇರಳವಾಗಿದ್ದ ಉಪ್ಪಾಗೆ(ಉಪ್ಪಾಕೆ) ಹಣ್ಣು. ಇದು ಸಿಂಗಳೀಕಗಳ ಅತೀ ಪ್ರಿಯವಾದ ಆಹಾರ. ಮಲೆನಾಡಿ ನಲ್ಲಿ ಇದರ ಹಣ್ಣುಗಳನ್ನು ತಂದು ಒಣಗಿಸಿ ಎಣ್ಣೆ ತೆಗೆದು ತುಪ್ಪಕ್ಕೆ ಪರ್ಯಾಯವಾಗಿ ಬಳಸಲಾಗುತ್ತದೆ.

ಜತೆಗೆ ಹೇರಳ ಔಷಧಿಯ ಗುಣಗಳನ್ನೂ ಇವು ಹೊಂದಿರುತ್ತವೆ. ಬಹಳಷ್ಟು ಜನ ಅದರಲ್ಲೂ ಮಲೆನಾಡಿನಿಂದ ಹೊರಗಿನವರು ಉಪ್ಪಾಗೆಯ ಹೆಸರನ್ನೂ ಕೇಳಿರಲಿಕ್ಕಿಲ್ಲ. ಆದರೆ, ಪೌಷ್ಟಕಾಂಶ, ಔಷಧಿಯ ಗುಣಗಳ ದೃಷ್ಟಿಯಿಂದ ಪಶ್ಚಿಮಘಟ್ಟ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಈ ವಿಶಿಷ್ಟ ಹಣ್ಣು(ಕಾಯಿ)ಯನ್ನು ಅನರ್ಘ್ಯ ರತ್ನವೆನ್ನಬಹುದು. ಉಪ್ಪಾಗೆ ಮರವಾಗಿ ಬೆಳೆಯಬಲ್ಲುದು.

ಸಸ್ಯಶಾಸ್ತ್ರದಲ್ಲಿ ಗಾರ್ಸಿನಿಯಾ ಕುಟುಂಬದಲ್ಲಿ ಬರುವ ಇವು ಗಾರ್ಸಿನೀಯಾ ಗಮ್ಮಿಗಟ್ಟ (Garcenia gummi & gutta) ಎಂಬ ವೈeನಿಕ ಹೆಸರನ್ನು ಹೊಂದಿವೆ. ಗಾಂಬೋಜ್, ಕಾಚ್ ಪುಳಿ, ಕಾಚಂಪುಳಿ, ಪಣಪ್ಪುಳಿ, ಮಂತುಹುಳಿ ಎಂಬಿತ್ಯಾದಿ ಹೆಸರುಗಳಿಂದಲೂ ನಾನಾ ಪ್ರದೇಶಗಳಲ್ಲಿ ಇದನ್ನು ಗುರುತಿಸುತ್ತಾರೆ. ತಮಿಳು ಮತ್ತು ಮಲಯಾಳಂನಲ್ಲಿ ಕೋಡಂಪುಳಿ ಎಂದು ಕರೆಯಲಾಗುತ್ತದೆ. ನಿಮಗೆ ಅಚ್ಚರಿಯಾಗಬಹುದು ಪಶ್ಚಿಮಘಟ್ಟಪ್ರದೇಶ, ಈಶಾನ್ಯ ಭಾರತದ ಪ್ರದೇಶಗಳಲ್ಲಿ ಉಪ್ಪಾಗೆಯ ೩೫ಕ್ಕೂ ಹೆಚ್ಚು ಪ್ರಭೇದಗಳು ಕಂಡುಬರುತ್ತವೆ. ನಮ್ಮಲ್ಲಿ ಅಲ್ಲದೇ ಇಂಡೋನೇಷ್ಯಾ ಮತ್ತು ಆಫ್ರಿಕಾದ ಕಾಡುಗಳಲ್ಲೂ ಉಪ್ಪಾಗೆ
ಅಲ್ಲಲ್ಲಿ ಕಾಣಸಿಗುತ್ತದೆ. ಮುರಗಲು, ಅರಿಸಿಣಗುರಗಿ, ಜಾಣಗೆ, ಕಾಡುಮುರಗಲು ಸಹ ಇದೇ ಜಾತಿಗೆ ಸೇರಿದ್ದು, ಮಲೆನಾಡು, ಉತ್ತರ ಕನ್ನಡ ಜಿಗಳ ಕಾಡಿನಲ್ಲಿ ಇವೆಲ್ಲವೂ ಯಥೇಚ್ಛವಾಗಿವೆ.

ಸಾಮಾನ್ಯ ಎತ್ತರ 10 ರಿಂದ 20 ಮೀಟರ್‌ಗಳಾಗಿದ್ದರೂ ಇವು 30 ಮಿ.ವರೆಗೂ ಬೆಳೆಯಬಲ್ಲವು. ನಾವೆಲ್ಲ ಚಿಕ್ಕವರಿದ್ದಾಗ ಬೇಸಿಗೆ ರಜೆ ಕಳೆಯಲು ಅಜ್ಜಿಮನೆಗೆ ಹೋದರೆ, ಇರುತ್ತಿದ್ದುದೇ ಉಪ್ಪಾಗೆ, ಮುರುಗಲು ಮರದ ಕೆಳಗೆ. ಸಿಹಿ ಮಿಶ್ರಿತ ಹುಳಿಯ ಇದರ ಹಣ್ಣುಗಳು ಸಹಜವಾಗಿ ಮಕ್ಕಳನ್ನು ಆಕರ್ಷಿಸುತ್ತದೆ. ಫೆಬ್ರುವರಿ-ಮಾರ್ಚನಲ್ಲಿ ಹೂ ಬಿಟ್ಟು, ಕಾಯಾಗಿ, ಜೂನ್-ಜುಲೈ ತಿಂಗಳ ಮಳೆಗಾಲದಲ್ಲಿ ಹಣ್ಣಾಗುತ್ತವೆ. ಉಪ್ಪಾಗೆಯ ಹಣ್ಣುಗಳ ಬಣ್ಣ ತಿಳಿಹಳದಿ.

ಉಬ್ಬು ತಗ್ಗಿನ ಮೇಲ್ಮೈ. ಥಟ್ಟನೆ ನೋಡಿದರೆ ಪುಟ್ಟ ಸಿಹಿಗುಂಬಳದಂತೆಯೇ. ಹಣ್ಣನ್ನು ಒಡೆದರೆ ರಸಭರಿತ ಪದರದಲ್ಲಿ ಅಡಗಿ ಕುಳಿತ 6-8 ಬೀಜಗಳು. ಇಂಥ ಬೀಜಗಳನ್ನು ಒಣಗಿಸಿಯೇ ವನಸ್ಪತಿ ತುಪ್ಪ ತಯಾರಿಸುವುದು. ಆಹಾರವಾಗಿಯಷಟೇ ಅಲ್ಲದೇ ಮೊದಲೇ ಹೇಳಿದಂತೆ ಔಷಧಿಯ ಗುಣಗಳಿಂದ ಅಮೂಲ್ಯವೆನಿಸುತ್ತದೆ ಇದು. ಕೊಡಗಿನ ಅರಣ್ಯ ಭಾಗದಲ್ಲೂ ಉಪ್ಪಾಗೆ ಇದ್ದು,
ಕಾಚಂಪುಳಿ ಅಥವಾ ಮಂತಪುಳಿ ಎಂದು ಸ್ಥಳೀಯವಾಗಿ ಪ್ರಸಿದ್ಧ.

ಕೊಡಗಿನಲ್ಲಿ ಸುಮಾರು 30-40 ಪ್ರಭೇದಗಳನ್ನು ವಾಣಿಜ್ಜಿಕವಾಗಿಯೂ ಕಾಫಿಯ ತೋಟಗಳ ನಡುವೆ ಅಲ್ಲಲ್ಲಿ ಬೆಳೆಯ ಲಾಗುತ್ತದೆ. ಕೊಡಗಿನಲ್ಲಿ 60-80 ಅಡಿ ಎತ್ತರದ ಬೃಹತ್ ಗಾತ್ರದ ಮರಗಳೂ ಇವೆ. ಉತ್ತಮ ಫಸಲು ದೊರೆತರೆ ಒಂದು ದೊಡ್ಡ ಮರದಲ್ಲಿ 15 ರಿಂದ 20 ಕ್ವಿಂಟಲ್ ಹಣ್ಣುಗಳು ದೊರೆತ ಉದಾಹರಣೆಗಳೂ ಇವೆ. ಈ ಹಣ್ಣಿನ ಒಣಸಿಪ್ಪೆ ಸಂಸ್ಕರಿಸಿ ಗೊಜ್ಜು ತಯಾರಿಸಿ ಸಂಗ್ರಹಿಸಿಡುತ್ತಾರೆ. ಮಳೆಗಾಲದಲ್ಲಿ ಹುಣಸೆಯ ಬದಲು ಅಡುಗೆಗೆ ಇದನ್ನೇ ಬಳಸುವುದೂ ಉಂಟು. ಕೊಡಗು ಹಾಗೂ ಕೇರಳದಲ್ಲಂತೂ ಹಂದಿ ಮತ್ತು ಮೀನಿನ ಅಡುಗೆಗಳಿಗೆ ಉಪ್ಪಗೆ ಸಿಪ್ಪೆಯ ರಸ ಹೇಳಿಮಾಡಿಸಿದ್ದು. ಇನ್ನು ಸಿಪ್ಪೆಯನ್ನು ಒಣಗಿಸಿ, ಪುಡಿಮಾಡಿಟ್ಟುಕೊಮಡು ಅಡುಗೆಗೆ ಬಳಸುವುದೂ ಉಂಟು.

ಇಂಥ ಒಣಗಿದ ಸಿಪ್ಪೆ ಎರಡು ವರ್ಷಗಳವರೆಗೂ ತಾಳಿಕೆ ಬರುತ್ತದೆ. ಉಪ್ಪಾಗೆಯ ಸಿಪ್ಪೆಯಲ್ಲಿ ಹೈಡ್ರಾಕ್ಸಿ ಸಿಟ್ರಿಕ್ ಅಂಶ ಇದ್ದು,
ಬೊಜ್ಜು ಕರಗಿಸಲು ಸಹಾಯಕವೆನ್ನುತ್ತಾರೆ ವೈದ್ಯರು. ಮಲಬದ್ದತೆ, ಮುಟ್ಟಿನತೊಂದರೆ, ಜಂತುಹುಳದ ಬಾಧೆಗಳಿಗೂ
ಪರಿಹಾರವಾಗಿ ನಾಟಿ ವೈದ್ಯದಲ್ಲಿ ಉಪ್ಪಾಗೆ ಬಳಕೆಯಲ್ಲಿದೆ. ಮನುಷ್ಯನಿಗೆ ಈ ಹಣ್ಣಿನ ಪರಿಚಯವಾಗುತ್ತಿದ್ದಂತೆಯೇ, ಅದನ್ನು ವ್ಯಾಪಾರೀಕರ ಣಗೊಳಿಸಿ ಕಳ್ಳ ಸಾಗಣೆ ಆರಂಭಿಸಿದ. ದಿನದಿಂದ ದಿನಕ್ಕೆ ಕಾಡಿನಲ್ಲಿ ಬೀಜ ಪ್ರಸರಣ ಕಡಿಮೆಯಾಗಿ ಮರಗಳ ಸಂಖ್ಯೆ ವಿರಳವಾಗುತ್ತಿದ್ದಂತೆ ಸಿಂಗಳೀಕಗಳ ಆಹಾರಕ್ಕೆ ಕುತ್ತು ಬಂದಿದೆ. ಹೀಗಾಗಿ ಅವು ವಲಸೆ ಹೋಗುತ್ತಿವೆ. ಇಷ್ಟಕ್ಕೇ ನಿಲ್ಲಲಿಲ್ಲ; ಮನುಷ್ಯನ ಉಪದ್ರವ. ಕೃಷಿ ಭೂಮಿ ವಿಸ್ತರಣೆ, ಜಲಾಶಯಗಳ ನಿರ್ಮಾಣಕ್ಕಾಗಿ ಕಾಡಿನ ನಾಶ, ರಸ್ತೆ, ವಸತಿ ಪ್ರದೇಶಗಳಿಗಾಗಿ ಅತಿಕ್ರಮಣದಂಥ ಹಲವಾರು ಕಾರಣಗಳಿಂದ ಸಿಂಗಳೀಕಗಳು ನೆಲೆ ಕಳೆದುಕೊಳ್ಳುತ್ತಿವೆ.

ಜೀವನಕ್ಕೆ ಅತೀ ಮುಖ್ಯವಾದ ಆಹಾರ-ನೆಲೆಯೇ ಇಲ್ಲದಂತಾಗಿ ಅವು ಊರಿಗೆ, ತೋಟ -ಗದ್ದೆಗಳಿಗೆ ದಾಂಗುಡಿಯಿಡಲಾ ರಂಭಿಸಿದವು. ಬೆಳೆಗಳ ನಾಶ ತಡೆಯಲು ಹಳ್ಳಿಗರು ಇದರ ಬೇಟೆಗೆ ಇಳಿದಿದ್ದಾರೆ. ಕರಾವಳಿ-ಮಲೆನಾಡಿನ ಕೆಲ ಬುಡಕಟ್ಟು ಜನಾಂಗದವರು ಇವನ್ನೂ ಆಹಾರಕ್ಕಾಗಿಯೂ ಬೇಟೆಯಾಡುತ್ತಾರೆ. ಪರಿಣಾಮ ಇವುಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡು ಬಂದಿದೆ. ಈಗಾಗಲೇ ಐಯುಸಿಯನ್ ಕೆಂಪು ಪಟ್ಟಿಗೆ ಇವು ಸೇರಿ ಐದು ವರ್ಷ ಆಗಿಬಿಟ್ಟಿದೆ.

1981ರಲ್ಲಿ ಸಿಂಗಳೀಕಗಳ ರಕ್ಷಣೆಗಾಗಿಯೇ ಕೇರಳದ ಮೌನ ಕಣಿವೆಯಲ್ಲಿ ಅಣೆಕಟ್ಟು ಯೋಜನೆಯನ್ನೇ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನಿಲ್ಲಿಸಿದ್ದನ್ನು ಓದಿದ್ದೆ. ಕಳೆದ ಎರಡು ವರ್ಷಗಳಲ್ಲಿ ಇವನ್ನು ರಕ್ಷಿಸಲು ಹಲವಾರು ಪ್ರಯತ್ನಗಳು ನಡೆದಿವೆ. ಸೈಲೆಂಟ್ ವಾಲಿ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಸುಮಾರು 15-20 ಸಿಂಗಳೀಕ ಗುಂಪುಗಳನ್ನು ರಕ್ಷಿಸಲಾಗಿದೆ. ಕಾಡುಗಳಲ್ಲಿ ಹಾದು ಹೋಗುವ ವಿದ್ಯುತ್ ತಂತಿಗೆ ಸಿಲುಕಿ ಕಳೆದ ಒಂದೇ ವರ್ಷದಲ್ಲಿ ಆರೇಳು ಸಿಂಗಳೀಕಗಳು ಸತ್ತಿವೆ.

ಇದೀಗ ರಾಜ್ಯ ಅರಣ್ಯ ಇಲಾಖೆ ವಿದ್ಯುತ್ ನಿರೋಧಕ ತಂತಿಗಳ ಬದಲಾವಣೆಯ ಯೋಜನೆಯ ಪ್ರಸ್ತಾಪ ಮುಂದಿಟ್ಟಿದೆ.
ಸಲೀಸಾಗಿ ಓಡಾಡಲು ರಬ್ಬರ್ ಸೇತುವೆಗಳನ್ನು ಕಾಡಿನ ಮಧ್ಯ-ಮಧ್ಯದಲ್ಲಿ ನಿರ್ಮಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯನ ಹಸ್ತಕ್ಷೇಪ ಅರಣ್ಯದೊಳಗೆ ನಿಂತು ನಮ್ಮ ಮೊದಲಿನ ದಟ್ಟ ಕಾಡು ಮತ್ತು ಜೀವಸೆಲೆಗಳಾದ ಕೆರೆಗಳ ಪುನರು ಜ್ಜೀವನವಾದಲ್ಲಿ ಇಂಥ ಮಾತ್ರ ಇಂಥ ಅಪರೂಪದ ಜೀವ ಸಂಕುಲದ ಉಳಿವು ಸಾಧ್ಯ. ಇಲ್ಲದಿದ್ದರೆ ದಶಕದಲ್ಲಿ ಸಂಭವಿಸಬಹು ದೆಂದು ಹೇಳಲಾಗುತ್ತಿರುವ 6ನೇ ಸಾಮೂಹಿಕ ಜೀವ ಸಂಕುಲ ನಾಶದಲ್ಲಿ ಸಿಂಗಳೀಕಗಳೂ ಅಳಿದು ಹೋದರೆ ಅಚ್ಚರಿಯಿಲ್ಲ.