Monday, 16th September 2024

ರಾಜಕೀಯದಲ್ಲಿ ಸಮಾಜವಾದಿಗಳು ಉಳಿದಿದ್ದಾರೆಯೇ ?

ವಿಶ್ಲೇಷಣೆ
ಗೋಪಾಲಕೃಷ್ಣ ಗಾಂಧಿ ಮಾಜಿ ರಾಜ್ಯಪಾಲರು

ಅಬ್ ಕೆ ಹಮ್ ಬಿಖರೆ ತೋ ಖ್ವಾಬೋಂ ಮೇ ಮಿಲೇ/ ಜೈಸೆ ಸೂಖೆ ಹುಯೆ ಫೂಲ್ ಕಿತಾಬೋಂ ಮೇ ಮಿಲೇ (ಚೆಲ್ಲಾ ಪಿಲ್ಲಿಯಾಗಿ ಹೋಗಿದ್ದೇವೆ, ನಾವೀಗ ಕನಸುಗಳಲ್ಲಷ್ಟೇ ಒಬ್ಬರನ್ನೊಬ್ಬರು ಭೇಟಿ ಮಾಡಲು ಸಾಧ್ಯ/ ಪುಸ್ತಕದ ಪುಟಗಳ ನಡುವೆ ಒಣಗಿದ ಹೂವು ಸಿಕ್ಕಂತೆ). – ಮಕ್ಬೂಲ್

ರಾಮವಿಲಾಸ್ ಪಾಸ್ವಾನ್ ಅವರ ನಿಧನದ ನಂತರ ಪ್ರಮುಖ ಪ್ರಶ್ನೆಯೊಂದು ಹುಟ್ಟಿದೆ. ಭಾರತದ ರಾಜಕಾರಣದಲ್ಲಿ ಇನ್ನು ಸಮಾಜವಾದಿಗಳು ಉಳಿದಿದ್ದಾರೆಯೇ? ಹೀಗೆ ಕೇಳಿದರೆ ಕೆಲವರು ರಾಮವಿಲಾಸ್ ಪಾಸ್ವಾನ್ ನಿಜಕ್ಕೂ ಸಮಾಜವಾದಿಯಾಗಿದ್ದರೇ ಎಂದು ಪ್ರಶ್ನಿಸಬಹುದು.

ಆದರೆ, ಅವರ ವೃತ್ತಿಜೀವನದ ಗ್ರಾಫನ್ನು ಸೂಕ್ಷ್ಮವಾಗಿ ನೋಡಿದರೆ ಅವರಿಗೆ ಸಮಾಜವಾದದ ಬಗ್ಗೆ ಒಲವಿದ್ದುದು, ಅದರಲ್ಲಿ ನಂಬಿಕೆಯಿದ್ದುದು ಹಾಗೂ ಸಮಾಜವಾದದ ಗಾಢ ಸಂಪರ್ಕವಿದ್ದುದು ಕಾಣಿಸುತ್ತದೆ. ಅದರ ಜೊತೆಗೇ ಭಾರತದ ಸಮಾಜವಾದಿ ಗಳು ಇತಿಹಾಸದ ಪುಟ ಸೇರಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದಕ್ಕೂ ಇದು ನೆರವಾಗುತ್ತದೆ. ನಿಜ ಹೇಳಬೇಕೆಂದರೆ ಭಾರತದ ಕಾರ್ಮಿಕ ವರ್ಗದವರ ಒಳಿತಿಗಾಗಿ, ಶ್ರಮಜೀವಿಗಳ ಪರವಾಗಿ ಹಾಗೂ ಹೊಸ ವಿದ್ಯಮಾನವಾಗಿ ಪರಿಣಮಿಸಿರುವ ವಲಸೆ ಕಾರ್ಮಿಕರ ಉದ್ಧಾರಕ್ಕಾಗಿ ಹಳೆ ಮಾದರಿಯ ಸಮಾಜವಾದದಲ್ಲಿ ಹೇಳಿದ ರೀತಿಯಲ್ಲಿ ಕೆಲಸ ಮಾಡುತ್ತಿರುವ ಅನೇಕ ವ್ಯಕ್ತಿಗಳು ನಮಗೆ ಕಾಣಸಿಗುತ್ತಾರೆ. ಮೇಧಾ ಪಾಟ್ಕರ್, ಅರುಣಾ ರಾಯ್, ಬೇಜ್ವಾಡಾ ವಿಲ್ಸನ್, ಯೋಗೇಂದ್ರ ಯಾದವ್, ಪಿ.
ಸಾಯಿನಾಥ್ ಹೀಗೆ ಅನೇಕರು ಈ ಪಟ್ಟಿಗೆ ಸೇರುತ್ತಾರೆ.

ನಾನು ಪ್ರಾತಿನಿಧಿಕವಾಗಿ ಕೆಲ ಹೆಸರುಗಳನ್ನು ಮಾತ್ರ ಹೇಳಿದ್ದೇನಷ್ಟೆ. ಇದೇ ಮಾದರಿಯಲ್ಲಿ ಅತ್ಯಂತ ಬದ್ಧತೆ ಹಾಗೂ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಿರುವ ಇನ್ನೂ ಅನೇಕರು ನಮ್ಮ ನಡುವೆ ಇದ್ದಾರೆ. ಇವರ ಜೊತೆಗೆ ಇನ್ನೂ ಅಸಂಖ್ಯ ಕಾರ್ಮಿಕ ಸಂಘಟನೆಗಳು ಕ್ರಿಯಾಶೀಲವಾಗಿವೆ. ಅವುಗಳ ಜೊತೆಗೆ ಕಿಸಾನ್ ಸಭಾಗಳಿವೆ. ಆದರೆ, ಭಾರತದ ರಾಜಕಾರಣ ದಲ್ಲಿ ಸಮಾಜವಾದಿಗಳು ಉಳಿದಿದ್ದಾರೆಯೇ? ಎಂಬ ಪ್ರಶ್ನೆಯ ಮೂಲಕ ನಾನು ಕೇಳುತ್ತಿರುವುದು ಪಕ್ಷ ರಾಜಕಾರಣದಲ್ಲಿ ಸಮಾಜ ವಾದಿಗಳು ಉಳಿದಿದ್ದಾರೆಯೇ ಎಂದು. ಅಂದರೆ, ಜನರಿಗೆ ರಾಜಕೀಯ ಆಯ್ಕೆಯಾಗಿ, ಕಾಯ್ದೆ ಕಾನೂನುಗಳನ್ನು ರೂಪಿಸಲು
ರಾಜಕಾರಣದಲ್ಲಿ ಪರ್ಯಾಯ ಶಕ್ತಿಯಾಗಿ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಎಂದು ಭಾರತದ ಸಂವಿಧಾನವು ಯಾವುದನ್ನು ಹೇಳುತ್ತದೆಯೋ ಅದನ್ನು ರಕ್ಷಿಸುವ ಸಲುವಾಗಿ ಜನರಿಂದ ಮತ ಕೇಳುವ – ಮತ ಪಡೆಯುವ ಅಥವಾ ಸೋಲುವ – ವ್ಯಕ್ತಿಗಳಾಗಿ ಸಮಾಜವಾದಿಗಳು ಉಳಿದಿದ್ದಾರೆಯೇ? ಸ್ಪಷ್ಟ ಉತ್ತರ – ಇಲ್ಲ ಇಲ್ಲ.

ಸಂವಿಧಾನದ ಪ್ರಸ್ತಾವನೆಯಲ್ಲಿ ಹೇಗೆ ಸಮಾಜವಾದಿ – ಸೋಷಿಯಲಿಸ್ಟ್ ಎಂಬ ಪದ ಉಳಿದುಕೊಂಡಿದೆಯೋ ಹಾಗೆಯೇ ಇಂದು ರಾಜಕೀಯ ಪಕ್ಷಗಳಲ್ಲೂ ಈ ಪದ ಆಯಾ ಸಂದರ್ಭಕ್ಕೆ ತಕ್ಕಂತೆ ಬಳಕೆಯಾಗಲು ನಾಮ್‌ಕೆವಾಸ್ತೆ ಉಳಿದುಕೊಂಡಿದೆ. ಆಚಾರ್ಯ ನರೇಂದ್ರ ದೇವ, ಜಯಪ್ರಕಾಶ್ ನಾರಾಯಣ್, ಕಮಲಾದೇವಿ ಚಟ್ಟೋಪಾಧ್ಯಾಯ, ರಾಮಮನೋಹರ ಲೋಹಿಯಾ, ಅಶೋಕ ಮೆಹ್ತಾ, ಮಧು ದಂಡವತೆ, ಮೃಣಾಲ್ ಗೋರ್, ಎಸ್.ಎಂ.ಜೋಶಿ, ಜಾರ್ಜ್ ಫೆರ್ನಾಂಡಿಸ್, ಮಧು ಲಿಮಯೆ ಮುಂತಾದ ಹಳೆಯ ತಲೆಮಾರಿನ ಕಟ್ಟರ್ ಸಮಾಜವಾದಿಗಳೆಲ್ಲ ಇಂದು ಪುಸ್ತಕದೊಳಗಿನ ಒಣಗಿದ ಹೂವಾಗಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಹಳೆಯ ಕತೆಗಳು, ಕಾಂಗ್ರೆಸ್ ಸೋಷಿಯಲಿಸ್ಟ್ ಪಾರ್ಟಿಯ ಇತಿಹಾಸ, ಸಮಾಜವಾದಿ ಪಕ್ಷ, ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಹಾಗೂ ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿಯ ಹೆಸರುಗಳಲ್ಲಿ ಮಾತ್ರ ಇಂದು ಸಮಾಜವಾದ ನಮಗೆ ಕಾಣಿಸುತ್ತಿದೆ. ಇನ್ನು, ಸಮಾನತೆ ಮತ್ತು ಸಮಾನ ಹಕ್ಕುಗಳುಳ್ಳ ಸಮ-ಸಮಾಜ, ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆ ಹಾಗೂ ಏಕಸ್ವಾಮ್ಯರಹಿತ ಆರ್ಥಿಕ ವ್ಯವಸ್ಥೆಯನ್ನು ರಕ್ತಕ್ರಾಂತಿಯ ಉದ್ದೇಶವಿಲ್ಲದೆ ಪ್ರತಿಪಾದಿಸುವ ರಾಜಕಾರಣಿಗಳು ನಮ್ಮಲ್ಲಿದ್ದಾರೆ. ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಪಕ್ಷದವರು. ಆದರೆ, ನನ್ನ ಪ್ರಶ್ನೆಯಿರುವುದು ಭಾರತೀಯ ಕಮ್ಯುನಿಸ್ಟರ ಬಗ್ಗೆ ಅಲ್ಲ. ಏಕೆಂದರೆ ಇವರು ಭಾರತದ ಸಮಾಜವಾದಿಗಳಿಗಿಂತ ಕೊಂಚ ಭಿನ್ನರು.

ಹಾಗಾದರೆ ಭಾರತೀಯ ಸಮಾಜವಾದಿಗಳು ಯಾರಾಗಿದ್ದರು? ಮೊದಲನೆಯದಾಗಿ, ಭಾರತೀಯ ಸಮಾಜವಾದಿಗಳೆಂದರೆ ಅವರು ವ್ಯಕ್ತಿವಾದಿ, ಮುಕ್ತ ಚಿಂತನೆಯುಳ್ಳವರು ಹಾಗೂ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಮಾನತೆಯನ್ನು ಸಮಾನವಾಗಿ  ಪ್ರತಿಪಾದಿಸುವವರಾಗಿದ್ದರು. ಎರಡನೆಯದಾಗಿ, ಅವರು ಜನರಿಗೆ ಅಧಿಕಾರ ಸಿಗಬೇಕು ಎಂದು ಮನಸಾರೆ ದುಡಿಯುತ್ತಿದ್ದರು. ವೈಯಕ್ತಿಕವಾಗಿ ತಾವು ಯಾವುದೇ ಹುದ್ದೆ ಹೊಂದುವುದರಲ್ಲಿ ಅವರಿಗೆ ಆಸಕ್ತಿಯಿರಲಿಲ್ಲ.

ಮೂರನೆಯದಾಗಿ, ಭಾರತದಲ್ಲಿ ಸಮಾಜವಾದಕ್ಕೆ ಪರ್ಯಾಯವಾಗಿ ಟ್ರಸ್ಟೀಶಿಪ್ ಇರಬೇಕು ಎಂಬ ಗಾಂಧಿಜಿಯವರ ಚಿಂತನೆ ಯನ್ನು ವಿರೋಧಿಸುತ್ತಲೇ ಭಾರತದ ಸಮಾಜವಾದಿಗಳು ಗಾಂಧೀಜಿಯವರನ್ನು ಬೌದ್ಧಿಕವಾಗಿ, ವೈಯಕ್ತಿಕವಾಗಿ ಹಾಗೂ ಎಲ್ಲ
ರೀತಿಯಲ್ಲೂ ಅತ್ಯುಚ್ಚ ಮಟ್ಟದಲ್ಲಿ ಗೌರವಿಸುತ್ತಿದ್ದರು. ಮತ್ತು ಈ ವಿಚಾರವು ಬಾಬಾಸಾಹೇಬ್ ಅಂಬೇಡ್ಕರ್ ಮುಂತಾದವರ ವಿಚಾರಗಳು ತಮ್ಮ ಮೇಲೆ ಪ್ರಭಾವ ಬೀರುವುದಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಿದ್ದರು. ನಾಲ್ಕನೆಯದಾಗಿ, ಭಾರತದ
ಸಮಾಜವಾದಿಗಳು ವೈಯಕ್ತಿಕವಾಗಿ ಅತ್ಯಂತ ಸ್ವಚ್ಛ ಹಾಗೂ ಪ್ರಾಮಾಣಿಕ ವ್ಯಕ್ತಿತ್ವದ, ಸರಳವಾಗಿ ಹಾಗೂ ಕಷ್ಟಪಟ್ಟು ಬದುಕುವ ವ್ಯಕ್ತಿಗಳಾಗಿದ್ದರು.

ಐದನೆಯದಾಗಿ, ಭಾರತದ ಸಮಾಜ ವಾದಿಗಳು ಮೊದಲಿಗೆ ಒಬ್ಬ ಚಿಂತಕ ರಾಗಿರುತ್ತಿದ್ದರು. ಅದನ್ನು ಕಾರ್ಯರೂಪಕ್ಕಿಳಿಸುವು ದನ್ನು ಎರಡನೆಯ ಆದ್ಯತೆಯಾಗಿ ಪರಿಗಣಿಸುತ್ತಿದ್ದರು. ತಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕಿಳಿಸುವುದೇ ಹೌದಾದರೆ ಆಗ ತೀರಾ ಅಗತ್ಯಬಿದ್ದಾಗ ಮಾತ್ರ ಅದಕ್ಕೊಂದು ವ್ಯೂಹಾತ್ಮಕ ತಂತ್ರಗಾರಿಕೆ ರೂಪಿಸುತ್ತಿದ್ದರು. ಈ ಚಿಂತಕನಲ್ಲಿ ವ್ಯವಸ್ಥೆಯ
ಕುರಿತು ಅತ್ಯಂತ ಸಹಜವಾಗಿ ಒಂದು ಸಿಟ್ಟಿರುತ್ತಿತ್ತು. ಏಕೆಂದರೆ ಭಾರತದ ಸಮಾಜವಾದಿ ಯಾವಾಗಲೂ ಶಾಂತಚಿತ್ತದವ ನಾಗಿರುತ್ತಿರಲಿಲ್ಲ. ಅವನು ಸದಾಕಾಲ ಒಳಗೊಳಗೇ ಕುದಿಯುತ್ತಿರುತ್ತಿದ್ದ.

ಈ ಐದು ಗುಣಗಳೇ ನರೇಂದ್ರ ದೇವ, ಜೆಪಿ, ಕಮಲಾದೇವಿ, ಲೋಹಿಯಾ ಹಾಗೂ ಅವರ ಜೊತೆಗಾರರನ್ನು ವೈಯಕ್ತಿಕವಾಗಿ ಅತ್ಯಂತ ಜನಪ್ರಿಯ ವ್ಯಕ್ತಿಗಳನ್ನಾಗಿಸಿದ್ದವು. ಆದರೆ, ಇವೇ ಗುಣಗಳು ರಾಜಕೀಯವಾಗಿ ಇವರನ್ನು ಅತ್ಯಂತ ದುರ್ಬಲರನ್ನಾಗಿಸಿ ದ್ದವು. ಈ ಗುಣಗಳು ಅವರಿಗೆ ಬೆಂಬಲಿಗರನ್ನೂ, ಆರಾಧಕರನ್ನೂ ತಂದುಕೊಟ್ಟಿದ್ದವು. ಆದರೆ, ಒಂದು ರಾಜಕೀಯ ಪಕ್ಷಕ್ಕಿರ ಬೇಕಾದ ಶಕ್ತಿಯನ್ನು ಇವು ತಂದುಕೊಡಲಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ಜನಸಂಘಕ್ಕೆ, ನಂತರದ ದಿನಗಳಲ್ಲಿ ಭಾರತೀಯ ಜನತಾ
ಪಕ್ಷ (ಬಿಜೆಪಿ) ಹಾಗೂ ಇತರ ಹಲವಾರು ಪ್ರಾದೇಶಿಕ ಪಕ್ಷಗಳಿಗೆ ಆರ್ಥಿಕ ಬೆಂಬಲ ಹರಿದುಬಂದಂತೆ ಈ ಸಮಾಜವಾದಿಗಳ ಪಕ್ಷಕ್ಕೆ ಹಣ ಹರಿದುಬರಲಿಲ್ಲ.

ಇನ್ನೂ ಎರಡು ಲಕ್ಷಣಗಳನ್ನು ನಾನು ಹೇಳಲೇಬೇಕು – ಒಂದನ್ನು ಖಾಸಗಿ ಎಂದೂ, ಇನ್ನೊಂದನ್ನು ತಾತ್ವಿಕವೆಂದೂ ಅಂದು ಕೊಳ್ಳಿ. ಭಾರತೀಯ ಸಮಾಜವಾದಿಗಳು ಖಾದಿ ಧರಿಸುವಷ್ಟು ಗಾಂಽವಾದಿಗಳಾಗಿದ್ದರು. ಆದರೆ, ಬಹುತೇಕ ಖಾದಿಧಾರಿಗಳ ರೀತಿಯಲ್ಲಿ ಇವರು ತಮ್ಮ ವಸಕ್ಕೆ ಗಂಜಿಯ ತಿಳಿ ಹಾಕಿ ಗರಿಗರಿ ಮಾಡಿಕೊಳ್ಳುತ್ತಿರಲಿಲ್ಲ. ಇನ್ನು, ಭಾರತದ ಸಮಾಜವಾದಿ ಗಳಲ್ಲಿದ್ದ ತಾತ್ವಿಕ ಸಿದ್ಧಾಂತಕ್ಕೆ ಬರುವುದಾದರೆ ಇವರಲ್ಲಿ ಸೋಲಿನ ಭೀತಿ ಇರಲಿಲ್ಲ. ಅಥವಾ ಭಾರತದ ಸಮಾಜವಾದಿಗಳಿಗೆ
ಸೋಲೇ ಇಷ್ಟವಾಗಿತ್ತು ಎಂದೂ ಬೇಕಾದರೆ ಹೇಳಬಹುದು.

ಇವರ ಪೈಕಿ ಕೊನೆಕೊನೆಗೆ ಉಳಿದುಕೊಂಡವರು ಇತರರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನೇ ಸುಲಭದ ಆಯ್ಕೆಯಂತೆ ಪರಿಗಣಿಸಿದರು. ಇಂಥವರು ರಾಜಕೀಯವಾಗಿ ಬಚಾವಾದರು, ಆದರೆ ತಾತ್ವಿಕವಾಗಿ ನಶಿಸಿಹೋದರು. ಪರಿಣಾಮ? ರುಚಿ ಉಳಿಯಿತು, ಆದರೆ ಉಪ್ಪು ಆವಿಯಾಗಿ ಹೋಯಿತು. ಸ್ಥಾನಮಾನ ಅಥವಾ ಘನತೆ ಉಳಿಯಿತು, ಆದರೆ ಯಶಸ್ಸು ಭಾರತೀಯ
ಸಮಾಜವಾದಿಗಳನ್ನು ನುಂಗಿಹಾಕಿತು. ಭಾರತದ ಸಮಾಜವಾದಿಗಳಿಂದ ನಾಂದು ಉಳಿಸಿಕೊಂಡ ಗುಣವೆಂದರೆ ಸಿಟ್ಟಿಗೇಳುವ ಮನಸ್ಸು ಮಾತ್ರ. ಆದರೆ, ಹಾಗೆ ಸಿಟ್ಟಿಗೇಳಬೇಕು ಎಂದಾದರೂ ಬೆಂಕಿಗೆ ಕಿಡಿ ಹೊತ್ತಿಸಲು ಹಾಥ್ರಸ್‌ನ ಅತ್ಯಾಚಾರದಂತಹ ಅವರ್ಣನೀಯ ದುರಂತವೇ ಘಟಿಸಬೇಕು.

ಭಾರತದ ಸಮಾಜವಾದಿಗಳು ಎಂದೂ ಯೋಚನಾಶಕ್ತಿಯುಳ್ಳ ರಾಜಕಾರಣಿಯಾಗಿರಲಿಲ್ಲ, ಬದಲಿಗೆ ಅವರು ರಾಜಕಾರಣ ದಲ್ಲಿರುವ ಚಿಂತಕರಾಗಿದ್ದರು. ಸಮಾಜವಾದವೆಂಬುದು ಒಂದು ಪಂಥವಲ್ಲ. ಇದೊಂದು ಸ್ಥಳ. ಇದೊಂದು ದಿಕ್ಕು. ಅಥವಾ ಗಾಂಧಿಜಿಯವರು ಹೇಳಿದಂತೆ ಇದೊಂದು ಅಂತರಾತ್ಮದ ಧ್ವನಿ. ಸಮಾಜವಾದವನ್ನು ಇತಿಹಾಸದ ಪುಸ್ತಕದೊಳಗೆ ಅಪ್ಪಚ್ಚಿ ಯಾದ ಹೂವನ್ನಾಗಿ ಮಾಡಿರುವ ಸಂಗತಿಯೂ ಇದೇ ಆಗಿದೆ.

Leave a Reply

Your email address will not be published. Required fields are marked *