Friday, 21st June 2024

ಸಾಮಾಜಿಕ ಮಾಧ್ಯಮಗಳ ಕೊಂಡಿ ಕಳಚೋಣ…

ಶ್ವೇತ ಪತ್ರ

shwethabc@gmail.com

ಅಂತರ್ಜಾಲ, ಸಾಮಾಜಿಕ ಮಾಧ್ಯಮಗಳಿಗೆ ನಾವು ವ್ಯಸನಿಗಳಾಗುತ್ತಿರುವ ಹೊತ್ತಲ್ಲಿ, ನಮ್ಮ ಮಾನಸಿಕ ಆರೋಗ್ಯ ಮತ್ತು
ಯೋಗಕ್ಷೇಮವನ್ನು ಕಾಪಿಟ್ಟುಕೊಳ್ಳುವ ಬಗೆಗಿನ ಕಳೆದ ವಾರದ ನನ್ನ ಅಂಕಣದ ಕುರಿತಾಗಿ ಓದುಗರಾದ ಉಷಾ ಭಟ್‌ರವರು ಪ್ರತಿಕ್ರಿಯಿಸುತ್ತಾ, ‘ಈ ವ್ಯಸನದಿಂದ ಹೊರ ಬರುವ ಪ್ರಯತ್ನಗಳ ಬಗ್ಗೆ ತಿಳಿಸಿದ್ದರೆ ಚೆನ್ನಾಗಿತ್ತು, ತುಂಬಾ ಜನರಿಗೆ ಅದರಿಂದ ಸಹಾಯವಾಗುತ್ತಿತ್ತು.

ಅರ್ಧ ಗಂಟೆಯಾದರೂ ಮೊಬೈಲ್ ಮುಟ್ಟದೆ ಹಾಗೂ ಟೈಮಿಂಗ್ ಇನ್ನೂ ಜಾಸ್ತಿ ಮಾಡಿಕೊಳ್ಳುತ್ತಾ ಸಾಗುವ ಒಂದು ಮನಸ್ಥಿತಿ ಬರಿಸಿಕೊಳ್ಳುವ ಬಗೆ, ಮೊಬೈಲ್ ಬಳಸಿದ ಮೇಲೆ ಆಗುವ ಗಿಲ್ಟ್ ಇತ್ಯಾದಿಗಳ ಬಗ್ಗೆಯೂ ಬರೆದಿದ್ದರೆ ನಮಗೆ ಉಪಯುಕ್ತ ವಾಗುತ್ತಿತ್ತು’ ಎಂದಿದ್ದರು.

ಹಾಗಾಗಿ, ಕಳೆದ ವಾರದ ಅಂಕಣದ ಮುಂದುವರಿದ ಭಾಗವಾಗಿ ಇವತ್ತಿನ ಬರಹವನ್ನು ನೀಡುತ್ತಿರುವೆ. ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ, ಅತಿಯಾದ ವ್ಯಸನಕ್ಕೂ ಕಾರಣವಾಗಿದೆ. ಇದೇ ವಿಷಯಕ್ಕೆ ಸಂಬಂಧ ಪಟ್ಟಂತಿ ರುವ ಸಂಶೋಧನಾ ಲೇಖನಗಳನ್ನು ಓದುವಾಗ, ಅನೇಕ ಮನೋವೈಜ್ಞಾನಿಕ ಹಾಗೂ ವರ್ತನಾತ್ಮಕ ಸಿದ್ಧಾಂತಗಳು ತಂತ್ರ ಜ್ಞಾನದ ವ್ಯಸನವನ್ನು ವಿವರಿಸು ತ್ತವೆ.

ಇವುಗಳಲ್ಲಿ ಕಲಿಕಾ ಸಿದ್ಧಾಂತ, ಸಾಮಾಜಿಕ ಕೌಶಲಗಳ ಕೊರತೆಯ ಸಿದ್ಧಾಂತಗಳು, ಸಂಜ್ಞಾನಾತ್ಮಕ ವರ್ತನಾ ಮಾದರಿ ಗಳು ಕೂಡ ಸಾಮಾಜಿಕ ಮಾಧ್ಯಮಗಳಿಗೆ ಅಂಟಿ ಕೊಂಡಿರುವ ನಮ್ಮ ಜಾಡ್ಯದ ಕುರಿತಾಗಿ ವಿಶೇಷವಾಗಿ ವಿವರಿಸುತ್ತವೆ. ಆದಾಗ್ಯೂ ಈ ವ್ಯಸನಕ್ಕೆ ಮನೋವೈಜ್ಞಾನಿಕವಾಗಿ ಪರಿಸ್ಥಿತಿಯನ್ನು ಸುಧಾರಿಸಲು ಪ್ರಮಾಣಿತ ಚಿಕಿತ್ಸಾ ಕ್ರಮಗಳು ರೂಪಿತ ವಾಗಿರುವುದು ಹೆಚ್ಚಾಗಿ ಕಂಡುಬರುವು ದಿಲ್ಲ.

ಹಾಗಂತ ಇಲ್ಲವೇ ಇಲ್ಲವೆಂದಲ್ಲ. Indian Journal of Psychiatry ಯಲ್ಲಿ ಪ್ರಕಟವಾದ ಲೇಖನವೊಂದು ತಂತ್ರಜ್ಞಾನ, ಅಂತರ್ಜಾಲ, ಸಾಮಾಜಿಕ ಮಾಧ್ಯಮದ ವ್ಯಸನದಿಂದ ಹೊರಬರುವ ಕುರಿತಾದ ಆಶಾದಾಯಕವಾದ ಬೆಳವಣಿಗೆಯ ಬಗ್ಗೆ ಮಾತನಾಡುತ್ತದೆ. ಸಾಮಾನ್ಯ ವಾಗಿ ಮದ್ಯಪಾನ, ಧೂಮಪಾನ ಇವೇ ಮುಂತಾದ ಚಟಗಳಿಗೆ ದಾಸರಾದವರಿಗೆ ಮನೋ ಸಾಮಾಜಿಕ ಚಿಕಿತ್ಸೆಯನ್ನು ವ್ಯಕ್ತಿಗತ ನೆಲೆಗಟ್ಟಿನಲ್ಲಿ ನೀಡಲಾಗುತ್ತದೆ.

ಇದೇ ಪ್ರಮಾಣಿತ ಚಿಕಿತ್ಸೆಯ ಆಧಾರದಲ್ಲಿ, ಸಾಮಾಜಿಕ ಮಾಧ್ಯಮಗಳಿಗೆ ಅಂಟಿಕೊಂಡಿರುವವರ ಮಾನಸಿಕ, ಸಾಮಾಜಿಕ,
ಜೈವಿಕ, ವರ್ತನಾತ್ಮಕ ಹಾಗೂ ಭಾವನಾತ್ಮಕ ಕಾರ್ಯವೈಖರಿ ಮತ್ತು ಯೋಗಕ್ಷೇಮವನ್ನು ಅನೌಪಚಾರಿಕವಾದ
ಚಟುವಟಿಕೆಗಳು ಮತ್ತು ತಂತ್ರಗಳ ಮೂಲಕ ಸಕಾರಾತ್ಮಕವಾಗಿ ಬದಲಾಯಿಸುವ ಪ್ರಯತ್ನ ಮಾಡಲಾಗುತ್ತಿದೆ.

ಈ ಮನೋಸಾಮಾಜಿಕ ಪ್ರಮಾಣಿತ ಚಿಕಿತ್ಸೆಯು ವ್ಯಕ್ತಿಯ ವ್ಯಕ್ತಿತ್ವದಲ್ಲಿ ಮೂರು ಮುಖ್ಯ ಬದಲಾವಣೆಯನ್ನು ಹೊರತರಲು ಆಶಿಸುತ್ತದೆ. ಮೊದಲನೆಯದು, ಸಾಮಾಜಿಕ ಮಾಧ್ಯಮಗಳ ವ್ಯಸನಕ್ಕೊಳಗಾದವರ ರೋಗ ಲಕ್ಷಣಗಳನ್ನು (ದೈಹಿಕ ಹಾಗೂ ಮಾನಸಿಕ) ಗುರುತಿಸುವುದು. ಎರಡನೆಯದು, ಅವರ ದೈನಂದಿನ ಕಾರ್ಯ ಚಟುವಟಿಕೆಗಳ ಮೇಲೆ ಗಮನವಿಡುವುದು; ಇಲ್ಲಿ
ದೈನಂದಿನ ಕಾರ್ಯಚಟುವಟಿಕೆ ಎಂದರೆ ಕೇವಲ ಬದುಕಿಗೆ ಬೇಕಾದ ದೈಹಿಕ ಚಟುವಟಿಕೆಗಳಲ್ಲ. ಅದರ ಜತೆಯಲ್ಲೇ ಪರಸ್ಪರ ಸಂಬಂಧಗಳೊಡನೆ ಬೆರೆಯುವಿಕೆ, ಕುಟುಂಬ ಹಾಗೂ ಸ್ನೇಹಿತರೊಂದಿಗಿನ ಆತ್ಮೀಯ ಸಂವಹನ ಮತ್ತು ತೊಡಗಿಸಿಕೊಳ್ಳು ವಿಕೆಯು ಈ ಅಂಶದಲ್ಲಿ ಸೇರಿರುತ್ತದೆ.

ಮೂರನೆಯ ಮತ್ತು ಕೊನೆಯ ಅಂಶ ವೆಂದರೆ ಯೋಗಕ್ಷೇಮ. ಇಲ್ಲಿ ವ್ಯಸನಕ್ಕೊಳಗಾದ ವ್ಯಕ್ತಿಯ ಅಧ್ಯಾತ್ಮ, ಜೀವನತೃಪ್ತಿ, ಬದುಕಿನ ಕುರಿತಾದ ಉತ್ಕೃಷ್ಟತೆ ಯನ್ನು ಅರಿಯಲು ಪ್ರಯತ್ನಿಸುತ್ತ, ಆ ಮೂಲಕ ಮನುಷ್ಯರಿಂದ, ಸಮಾಜದಿಂದ, ಭಾವನೆ ಗಳಿಂದ ವಿಮುಕ್ತರಾಗಿ ಯಂತ್ರಗಳೆಡೆಗೆ ಮುಖಮಾಡಿ ಕುಳಿತಿರುವವರನ್ನು ಪುನಃ ಚೇತರಿಸಿಕೊಳ್ಳುವಂತೆ ಮಾಡುತ್ತ, ಸಮರ್ಥವಾದ ಸ್ವಯಂ ನಿರ್ದೇಶಕ ಬದುಕನ್ನು ಕಟ್ಟಿಕೊಡುವ ಧ್ಯೇಯವನ್ನು ಮನೋಸಾಮಾಜಿಕ ಚಿಕಿತ್ಸೆ ಹೊಂದಿರುತ್ತದೆ.

ನಾವೇಕೆ ಯಂತ್ರಗಳಿಗೆ, ಅಂತರ್ಜಾಲಕ್ಕೆ, ಸ್ಮಾರ್ಟ್ ಫೋನುಗಳಿಗೆ, ಸಾಮಾಜಿಕ ಮಾಧ್ಯಮಗಳಿಗೆ ಅಡಿಕ್ಟ್ ಆಗುತ್ತೇವೆ ಎಂಬುದನ್ನು ವೈಜ್ಞಾನಿಕವಾಗಿ ವಿವರಿಸುವ ಕೆಲವು ಥಿಯರಿಗಳನ್ನು ನಾವಿಲ್ಲಿ ಗಮನಿಸಲೇಬೇಕು. ಆ ಮೂಲಕ ಅವೇ ವೈಜ್ಞಾನಿಕ ವಿವರಣೆಗಳು ಯಂತ್ರಗಳಿಂದ ಕೊಂಡಿ ಕಳಚುತ್ತಾ, ನಮ್ಮನ್ನು ಸ್ಮಾರ್ಟ್ ಫೋನುಗಳಿಂದ ವಿಮುಖವಾಗಿಸುವತ್ತ ಸಹಕಾರಿಯಾಗುತ್ತವೆ.

ಕಲಿಕಾ ಸಿದ್ಧಾಂತದ ಪ್ರಕಾರ, ತಂತ್ರಜ್ಞಾನದ ಬಳಕೆಯು ವ್ಯಕ್ತಿಗತವಾಗಿ ಸಕಾರಾತ್ಮಕವಾದ ಪುನರ್‌ಬಲವನ್ನು ಉಂಟು
ಮಾಡುವ ಪರಿಣಾಮವನ್ನು ಒದಗಿಸುತ್ತದೆ ಎನ್ನುವುದನ್ನು ನಾವಿಲ್ಲಿ ವಿಶೇಷವಾಗಿ ಗಮನಿಸಬೇಕಿದೆ. ಅದೇ ಪ್ರತಿಫಲದಾಯಕ ಕೊರತೆಯ ಪ್ರಕಲ್ಪನೆಯು, ಮನುಷ್ಯರಲ್ಲಿ ದೈಹಿಕವಾಗೋ, ಮಾನಸಿಕವಾಗೋ, ಸಾಮಾಜಿಕವಾಗೋ, ಭಾವನಾತ್ಮಕ ವಾಗೋ ಏನಾದರೂ ಕೊರತೆ ಉಂಟಾದರೆ ಆ ಕೊರತೆಯೂ ಮತ್ತಿನ್ನಾವುದೋ ಉತ್ತೇಜನಕಾರಿ ಪ್ರಚೋದನೆಯತ್ತ ಮುಖ ಮಾಡುತ್ತದೆ. ಈ ನಿಟ್ಟಿನಲ್ಲಿ ಕೈಗೆಟುಕುವ ತಂತ್ರಜ್ಞಾನ ಹಾಗೂ ಸ್ಮಾರ್ಟ್ ಫೋನ್‌ಗಳು ಈ ಕೊರತೆಯನ್ನು ನೀಗಿಸುವ ಪ್ರತಿಫಲನಗಳಾಗಿ ತತ್‌ಕ್ಷಣವೇ ಕಾರ್ಯಪ್ರವೃತ್ತವಾಗುತ್ತವೆ, ಜತೆಯಲ್ಲೇ ವ್ಯಸನಕ್ಕೂ ಕಾರಣವಾಗಿಬಿಡುತ್ತವೆ.

ಹಠಾತ್ ಪ್ರವೃತ್ತಿ ಎಂಬುದು ಸ್ಮಾರ್ಟ್ ಫೋನುಗಳ ವ್ಯಸನಿಗಳಾಗುವುದಕ್ಕೆ ಕಾರಣವಾಗುವ ಮತ್ತೊಂದು ರಿಸ್ಕ್ ಫ್ಯಾಕ್ಟರ್. ಅಂತರ್ಜಾಲವು ಮನುಷ್ಯನ ಸಂವೇದನೆಯ ಹುಡುಕಾಟದ ವರ್ತನೆಗೆ ಇಂಬುಕೊಡುವುದರಿಂದ ಇಲ್ಲಿ ವ್ಯಸನಕ್ಕೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಂಜ್ಞಾನಾತ್ಮಕ-ವರ್ತನಾ ಮಾದರಿಯು ಸಾಮಾನ್ಯವಾಗಿ ಮನುಷ್ಯರು ತಮ್ಮ ನಿಜಬದುಕಿನ ಸಮಸ್ಯೆಗಳಿಂದ ತಾತ್ಕಾಲಿಕವಾಗಿ ತಪ್ಪಿಸಿಕೊಳ್ಳುವ ‘ಪಲಾಯನಮಾರ್ಗ’ದಲ್ಲಿ ಸ್ಮಾರ್ಟ್ ಫೋನುಗಳ, ಸಾಮಾಜಿಕ ಮಾಧ್ಯಮದ ವ್ಯಸನಕ್ಕೊಳಗಾಗುತ್ತಾರೆ ಎಂಬುದನ್ನು ಪ್ರತಿಪಾದಿಸುತ್ತದೆ.

ಋಣಾತ್ಮಕ ತಳಹದಿಯ ಮೇಲೆ ನಿಂತಿರುವ ನಂಬಿಕೆಗಳು ಅಂತರ್ಜಾಲದ ಅಡಿಕ್ಷನ್‌ಗೆ ಕಾರಣವಾಗಿಬಿಡಬಹುದು. ಜತೆಗೆ ಸಾಮಾಜಿಕ ಕೌಶಲದ ಕೊರತೆಯ ಸಿದ್ಧಾಂತದ ಅನ್ವಯ, ವ್ಯಕ್ತಿಗಳಲ್ಲಿ ಕಂಡುಬರುವ ಅತ್ಯಂತ ಕಡಿಮೆ ಪ್ರಮಾಣದ ಸಾಮಾಜಿಕ ಹೊಂದಾಣಿಕೆಯ ಕೌಶಲ ಜತೆಗೆ ಆತಂಕದ ಮನೋಭಾವವಿರುವ ವ್ಯಕ್ತಿಗಳು ಸಹ ಸಮ್ಮೋಹನಕ್ಕೆ ಒಳಗಾದ ವರಂತೆ ಅಂತರ್ಜಾಲದ ಅಡಿಕ್ಷನ್‌ಗೆ ಸದ್ದಿಲ್ಲದೆ ಒಳಗಾಗಿಬಿಡುತ್ತಾರೆ. ಈಗ ಬಹುಮುಖ್ಯವಾಗಿ ಮಾತನಾಡಬೇಕಿರುವ
ವಿಚಾರ ಅಂತರ್ಜಾಲ, ಸ್ಮಾರ್ಟ್ ಫೋನುಗಳ ಕೊಂಡಿ ಕಳಚಿಕೊಳ್ಳುವ ಕುರಿತಾದದ್ದು.

ಅಂತರ್ಜಾಲ, ಸ್ಮಾರ್ಟ್ ಫೋನುಗಳ ಸಕಾರಾತ್ಮಕ ಅನುಕೂಲಗಳು ದಿನನಿತ್ಯದ ಬದುಕಲ್ಲಿ ಹಾಸುಹೊಕ್ಕಾಗಿರುವಾಗ, ಅದರಿಂದ ಸಂಪೂರ್ಣ ವಿಮುಕ್ತಿ ಪಡೆದುಬಿಡಬಹುದೆಂಬುದು ಅಪ್ರಾಯೋಗಿಕವಾದದ್ದು. ಇದು ವ್ಯಸನಕ್ಕೆ ಒಳಗಾಗಿ
ರುವವರನ್ನು ಒಳಗೊಳ್ಳುತ್ತದೆ. ಇಲ್ಲಿ ಮುಖ್ಯವಾಗಿ ನಾವು ಅನುಸರಿಸಬೇಕಾದ ತತ್ತ್ವವೆಂದರೆ, ಮಿತವಾದ-ನಿಯಂತ್ರಿತವಾದ ಸ್ಮಾರ್ಟ್ಫೋನಿನ ಬಳಕೆ. ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನಿಯಾಗಿದ್ದ, ಇಂಟರ್ನೆಟ್ ಅಡಿಕ್ಷನ್ ಡಿಸಾರ್ಡರ್ ಹಾಗೂ ಆನ್‌ಲೈನ್ ವರ್ತನೆಯ ಬಗ್ಗೆ ಸುದೀರ್ಘ ಸಂಶೋಧನೆ ಮಾಡಿದ ಡಾ.ಕಿಂಬರ್ಲಿ ಯೂಂಗ್ ಅವರು ಅಂತರ್ಜಾಲದ ಕೊಂಡಿಯಿಂದ ನಿಧಾನವಾಗಿ ಕಳಚಿಕೊಳ್ಳುವ ಎಂಟು ಪ್ರಮುಖ ವಾದ ಚಿಕಿತ್ಸಾತಂತ್ರಗಳನ್ನು ಸೂಚಿಸುತ್ತಾರೆ.

ಅವೆಂದರೆ: ೧. ವಿರುದ್ಧವಾದುದನ್ನು ಅಭ್ಯಾಸ ಮಾಡುವುದು: ಅಂತರ್ಜಾಲದ, ಸಾಮಾಜಿಕ ಮಾಧ್ಯಮಗಳ ವ್ಯಸನಕ್ಕೊಳ
ಗಾದವರು ಯಾವ ರೀತಿ ಮೊಬೈಲ್ ಬಳಕೆ ಮಾಡುತ್ತಾರೆ ಎಂಬುದನ್ನು ಗಮನಿಸಿ, ಅವರು ಹೊಂದಿಕೊಂಡ ಆ ವಿನ್ಯಾಸವನ್ನು ತಪ್ಪಿಸುತ್ತಾ ಹೋಗುವುದು. ಉದಾಹರಣೆಗೆ, ಕೆಲಸದಿಂದಲೋ, ಸ್ಕೂಲು-ಕಾಲೇಜುಗಳಿಂದಲೋ ಮನೆಗೆ ಬಂದು ಮೊಬೈಲ್ ಹಿಡಿದು ಕೂತರೆ ಅದನ್ನು ಬೇರೆಯ ಕೆಲಸದ ಮೂಲಕ ತಪ್ಪಿಸುವುದು, ವಾಕ್ ಮಾಡುವುದು, ಸಂಗೀತ ಕೇಳುವುದು, ಮನೆಯ
ವರೆಲ್ಲ ಕೂತು ಮಾತನಾಡುವುದು, ಹೊರಗೆ ಷಟ್ಲ್ ಆಡುವುದು ಹೀಗೆ.

೨. ಮೊಬೈಲ್ ಬದಲಿಗೆ ಹೊರಗಿನ ಉಪಕರಣಗಳ ಬಳಕೆ: ಮುಂಜಾನೆ ಬೇಗ ಏಳಲು ಮೊಬೈಲ್ ಅಲಾರ್ಮ್ ಬದಲಾಗಿ ಸಾಂಪ್ರದಾಯಿಕ ಅಲಾರ್ಮ್ ಟೈಂಪೀಸ್ ಅನ್ನೇ ಉಪಯೋಗಿಸುವುದು. ಜತೆಗೆ ಮೊಬೈಲ್, ಕಂಪ್ಯೂಟರ್ ಬಳಕೆ ಮಾಡು ವಾಗಲೂ ಅಲಾರ್ಮ್ ಇಟ್ಟುಕೊಂಡು ನಿರ್ದಿಷ್ಟ ಸಮಯವನ್ನು ಗೊತ್ತುಮಾಡಿಕೊಳ್ಳುವುದು. ಇದಕ್ಕೆ ‘ಸ್ಕ್ರೀನ್ ಟೈಮಿಂಗ್’ ಎಂದು ಹೇಳಬಹುದು.

೩. ನಿರ್ದಿಷ್ಟ ಗುರಿಗಳನ್ನು ಹೊಂದುವುದು: ಇಡೀ ಶನಿವಾರ, ಭಾನುವಾರಗಳಂದು ಮೊಬೈಲ್‌ನಲ್ಲಿ ಕಳೆದು ಹೋಗುವ ನಾವು, ಆ ದಿನಗಳಲ್ಲಿ ಬೇರೆ ಸಾಮಾಜಿಕ, ಸಾಮುದಾಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಉದಾಹರಣೆಗೆ ಗಿಡ ನೆಡುವ ಕಾರ್ಯಕ್ರಮ, ಸೈಕ್ಲಿಂಗ್-ಬೈಕಿಂಗ್ ಕ್ಲಬ್‌ಗಳಿಗೆ ಸೇರಿಕೊಳ್ಳುವುದು, ಮನೆಯಲ್ಲೇ ಗಾರ್ಡನಿಂಗ್ ಮಾಡುವ ಹೊಸ ಅಭಿರುಚಿ
ಯನ್ನು ಪ್ರಯತ್ನಿಸುವಿಕೆ, ಅಂಚೆಚೀಟಿ ಸಂಗ್ರಹಿಸುವಿಕೆ ಹೀಗೆ ಹತ್ತು ಹಲವಾರು ಹವ್ಯಾಸಗಳಲ್ಲಿ ನಾವು ನಮ್ಮನ್ನು ತೊಡಗಿಸಿ ಕೊಳ್ಳಬೇಕಿದೆ.

೪. ಕೆಲವು ಅಪ್ಲಿಕೇಷನ್‌ಗಳನ್ನು ಅನುಪಸ್ಥಿತಿಗೊಳಿಸುವುದು: ಆಕರ್ಷಣೀಯವಾದ ಆಪ್‌ಗಳಾದ ಫೇಸ್ ಬುಕ್, ಇನ್‌ಸ್ಟಾ ಗ್ರಾಮ್, ಆನ್‌ಲೈನ್ ಗೇಮ್‌ಗಳು ಇವನ್ನು ಮ್ಯೂಟ್ ಮಾಡಿ ಇಡುವುದು. ಹೀಗೆ ಮಾಡುವುದರಿಂದ ಅನಗತ್ಯ ನೋಟಿಫಿ ಕೇಷನ್‌ಗಳ ಕಿರಿಕಿರಿ ಇಲ್ಲದಂತಾಗಿ ಪದೇಪದೆ ಮೊಬೈಲ್‌ನೊಳಗೆ ಇಣುಕುವುದು ತಪ್ಪುತ್ತದೆ.

೫. ಎಚ್ಚರಿಕೆಯ ಗಂಟೆ: ಸ್ಮಾರ್ಟ್ ಫೋನುಗಳ ವ್ಯಸನದ ಕುರಿತಾದ ಎಚ್ಚರಿಕೆಯ ಕಾರ್ಡುಗಳನ್ನು ಮಾಡಿ ನಮಗೆ
ಕಾಣಿಸು ವಂತೆ ಅಂಟಿಸಿಕೊಳ್ಳುವುದು.

೬. ವೈಯಕ್ತಿಕ ವಿವರಣೆಯ ಪಟ್ಟಿ: ಅಂತರ್ಜಾಲದ ವ್ಯಸನದಿಂದ ನಮ್ಮ ಬದುಕಿನಲ್ಲಿ ಆಗಿರುವ ಬೇರೆಲ್ಲ ಏರು ಪೇರುಗಳ ಕುರಿತಾಗಿ ಯೋಚಿಸಿ ಆ ಅಸ್ತವ್ಯಸ್ತತೆಗಳನ್ನು ಸರಿಪಡಿಸುವುದು.

೭. ಸಾಮಾಜಿಕ ಗುಂಪು: ಸಾಮಾಜಿಕವಾಗಿ ವಿಮುಖರಾಗಿಯೇ ಎಷ್ಟೋ ಜನ ಸ್ಮಾರ್ಟ್ ಫೋನುಗಳಿಗೆ ಅಂಟಿಕೊಂಡಿರು ವುದು. ಹಾಗಾಗಿ ಸಾಮಾಜಿಕ ಗುಂಪುಗಳಿಗೆ ಮತ್ತೆ ಸೇರಿಕೊಳ್ಳುತ್ತಾ ಮುಕ್ತವಾಗಿ ಬೆರೆಯಬೇಕು.

೮. ಕೌಟುಂಬಿಕ ಚಿಕಿತ್ಸೆ: ಸ್ಮಾರ್ಟ್ ಫೋನುಗಳನ್ನು ಕೆಳಗಿಟ್ಟು ಭಾವನಾತ್ಮಕವಾಗಿ, ಸಂವೇದನಾತ್ಮಕವಾಗಿ ಕುಟುಂಬದ ವಲಯಕ್ಕೆ ಅಂಟಿಕೊಳ್ಳುತ್ತಾ ಸಂತೋಷ ಹಂಚಿಕೊಂಡು ಹಗುರಾಗುವುದು.

ನೆನಪಿಡಿ, ಇವೆಲ್ಲ ‘ಅಬ್ರಕಡಬ್ರ ಮ್ಯಾಜಿಕ್’ನಂತೆ ಚಿಟಿಕೆ ಹೊಡೆಯುವಷ್ಟರಲ್ಲಿ ಸಾಧ್ಯವಾಗುವುದಿಲ್ಲ, ನಿರಂತರ ಪ್ರಯತ್ನ ದಿಂದಷ್ಟೇ ಸಾಧ್ಯ. ಕೊನೆಯಲ್ಲಿ ಒಂದು ಮಾತು- Touch Humans, Not screens..

error: Content is protected !!