ದಾಸ್ ಕ್ಯಾಪಿಟಲ್
dascapital1205@gmail.com
ವರ್ತಮಾನದಲ್ಲಿ ಮಾತು ತನ್ನ ಅಸೀಮಿತವಾದ ಒಲಿಸಿಕೊಳ್ಳುವ ಮತ್ತು ಒಲಿವ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ನಾವು ಪರಿವರ್ತನೆಯಾಗುವುದು, ನಮ್ಮ ಅರಿವು ವಿಸ್ತರಿಸಿಕೊಳ್ಳುವುದೆಂದರೆ ಮಾತಿಗಿರುವ ಅನಂತ ಸಾಧ್ಯತೆಯನ್ನು, ಪರಿಧಿಯನ್ನು ದಾಟಿ ಗೆಲ್ಲುವುದೆಂದೇ ಅರ್ಥಮಾಡಿಕೊಂಡು ಬದುಕಿದ್ದ ನಮ್ಮ ಹಿರಿಯರನ್ನು ಮರೆತು ನಾವು ಮಾತ್ರ ಮಾತು ಬಲ್ಲವರು ಎಂಬಂತೆ ಮನಸಿಗೆ ತೋಚಿದಂತೆ ಮಾತನಾಡುತ್ತಿದ್ದೇವೆ. ಮಾತು ಪ್ರತಿನಿಧಿಸಬಲ್ಲ, ಪ್ರತಿಕ್ರಿಯಿಸಬಲ್ಲ, ಪರಿಣಮಿಸಬಲ್ಲ ಪ್ರೇರಕ ವಾಗಬಲ್ಲ, ಉತ್ತೇಜಿಸಬಲ್ಲ ಯಾವ ಅಂಶಗಳ ಬಗ್ಗೆಯೂ ಎಚ್ಚರವಿದ್ದೂ, ಎಚ್ಚರವಿಲ್ಲದೆಯೂ ಮಾತನಾಡುವ ಮಾತು ಸೋತ ವರು ಮತ್ತು ಮಾತು ಸತ್ತವರು ಮಾತನಾಡುತ್ತಲೇ ಇದ್ದಾರೆ.
ಮಾತು ಸತ್ತಿದೆಯೆಂದು ಭಯೋತ್ಪಾದಕರು ಮಾತ್ರ ಸಾಬೀತು ಮಾಡುತ್ತಿಲ್ಲ. ಪುಡಿ ರಾಜ ಕಾರಣಿಗಳು, ಪ್ರಗತಿಪರರು, ಬುದ್ಧಿಜೀವಿ ಗಳು, ಸಿನಿಮಾದವರು, ಮಾಧ್ಯಮದವರು, ಅವರಿವರು ಅಂತಿಲ್ಲ ಎಲ್ಲರೂ ಅವರೊಂದಿಗೆ ಸ್ಪರ್ಧೆಗೆ ಇಳಿದಿದ್ದಾರೆ. ಸಂಸ್ಕಾರ, ಸಂಸ್ಕೃತಿ ಹೀನರು ರಾಜಕಾರಣದಲ್ಲಿ ಇದ್ದ ಕಾಲದಲ್ಲೂ ಮಾತು ಸೋತೂ ಗೆದ್ದಿತ್ತು; ಗೆದ್ದೂ ಸೋತಿತ್ತು. ಈಗ ಮಾತು ಸೋಲು ತ್ತಿಲ್ಲ, ಸಾಯುತ್ತಿದೆ!
ಸುತ್ತಲೂ ನಿತ್ಯವೂ ಕೇಳಿಸುವಂಥ ಮಾತುಗಳು ಗಾಳಿಗೆ ತೂರಿಹೋಗುವ ಹೊಟ್ಟಾಗಿ ಕಾಣುತ್ತಿವೆ. ಗ್ರಹಿಸಿ ನೋಡಿ: ಕಲೆ ಸಾಹಿತ್ಯ ಸಂಗೀತಗಳನ್ನು ಉಳಿಸುವ ಮಾತುಗಳು ಕೇಳು ತ್ತವೆ. ಯಾವುದೋ ಜನಾಂಗದ ವೇದನೆಯ ಮಾತು ಕೇಳುತ್ತದೆ. ಮನುಷ್ಯ, ಮರ, ಪ್ರಾಣಿ ಪಕ್ಷಿ ಜಂತುಗಳನ್ನು ಪ್ರೀತಿಸುವ ಅವುಗಳ ರಕ್ಷಣೆಯ ದನಿಯೊಂದು ಕೇಳುತ್ತದೆ. ಗೆಲುವಿನ ಮಾತೂ ಕೇಳುತ್ತದೆ. ಸೋಲಿನ ಮಾತೂ ಕೇಳುತ್ತದೆ. ನಿರಾಸೆಯ ಮಾತೂ ಕೇಳುತ್ತದೆ. ವೈರಾಗ್ಯದ ಮಾತೂ ಕೇಳುತ್ತದೆ.
ಹಸುಮಕ್ಕಳ ರೋದನೆ ಕೇಳುತ್ತದೆ. ಶೋಷಣೆಯ ಮಾತು ಕೇಳುತ್ತದೆ. ಆರೋಪದ ಮಾತುಗಳು ಅಬ್ಬರಿಸಿ ರಾಚುತ್ತವೆ. ಜರೆಯುವ, ನಿಂದಿಸುವ ಮಾತುಗಳೂ ಕಿವಿಗಡಚುತ್ತವೆ. ಗಂಟಲು ನರ ಕಿತ್ತುಹೋಗುವ ತಾರಕದ ಮಾತುಗಳು ಬಯಲಲ್ಲಿ ಮಿತಿಮೀರುತ್ತಿವೆ. ಎಲ್ಲೂ ಮಾತಿದೆ, ಎಲ್ಲರ ಬಳಿಯೂ ಮಾತಿದೆ. ಅದು ಅಮೃತರೂಪದಲ್ಲಿಯೂ ಇದೆ, ವಿಷದ ರೂಪದಲ್ಲಿಯೂ ಇದೆ. ಕೆಲವು ಮಾತುಗಳು ಕೇಳಿಸುತ್ತವೆ. ಕೆಲವನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಯಾವ ಮಾತುಗಳಿಂದ ಏನು ಪ್ರಯೋಜನವಿದೆ ಎಂಬುದು ಅರಿವಾಗುವುದು ಕೇಳಿಸಿಕೊಂಡ ಮೇಲೆಯೇ!
ಆಳುಗರ ವಿರುದ್ಧದ ಮಾತೂ, ಪರವಾಗಿನ ಮಾತೂ ಕೇಳುತ್ತದೆ. ತೀರದಷ್ಟು ಭರವಸೆಗಳ ಮಾತೂ ಕೇಳುತ್ತದೆ. ಎಡ-ಬಲದ ಮಾತುಗಳು ಕೇಳುತ್ತವೆ. ರಾಜಕೀಯದಲ್ಲಿ ಸೇಡಿನ-ಪ್ರತಿಸೇಡಿನ ಮಾತುಗಳು ಕೇಳುತ್ತವೆ. ಅನಾಥರ ಅಳುವಿನ ಮಾತು ಕೇಳುತ್ತದೆ. ಯಾರಿಗೂ ಕೇಳಿಸದ, ಸುಡುಬಿಸಿಲಲ್ಲಿ ದುಡಿಯುವವರ ಮಾತು ಮುಗಿಲು ಮುಟ್ಟುವವರೆಗೆ ಕೇಳುತ್ತದೆ. ತರಗತಿಯಲ್ಲಿ ಭವಿಷ್ಯ
ದ ಬದುಕನ್ನು ಕಟ್ಟುವ ಮಾತುಗಳು ಕೇಳುತ್ತದೆ.
ಬೀದಿಯಲ್ಲಿ ಬದುಕನ್ನು ಕಟ್ಟಿಕೊಳ್ಳುವ ಮಾತು ಕೇಳುತ್ತದೆ. ಅರಮನೆಯಂಥ ಮನೆಯಲ್ಲಿ ಮಾತು ಕಳಾಹೀನವಾಗಿದೆ.
ಎಲ್ಲಿಯೋ ನಡೆದ ಒಂದು ಕೊಲೆ, ಹಗರಣ, ಅತ್ಯಾಚಾರ, ಹತ್ಯಾಚಾರ, ಭ್ರಷ್ಟಾಚಾರ, ಅಪಹರಣ, ದರೋಡೆ, ದೊಂಬಿ ಗಳು, ರಾಜಕಾರಣಿಯೊಬ್ಬ ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದ ಸುದ್ದಿ, ಮಠಾಧಿಪತಿಯೊಬ್ಬ ಸಾರ್ವಜನಿಕವಾಗಿ ಅವಮಾನಕ್ಕೆ ಗುರಿ ಯಾದ ಸನ್ನಿವೇಶ, ಅ ಅಮಾಯಕನೊಬ್ಬನ ಕೊಲೆಯಾಗುವುದು, ತತ್ಸಂಬಂಧಿತವಾಗಿ ಘರ್ಷಣೆ, ಸಂಪು ನಡೆಯಿತು ಅಂದು ಕೊಳ್ಳಿ.
ಸಂಬಂಧವೇ ಇಲ್ಲದವರು ಸೆರೆಯಾಗುತ್ತಾರೆ. ಕೋಮು ಸೌಹಾರ್ದತೆಯನ್ನೇ ಪ್ರಧಾನವಾಗಿಟ್ಟುಕೊಂಡು ರಾಜಕೀಯ ಪಕ್ಷಗಳು, ರಾಜಕಾರಣಿಗಳು ಪರಸ್ಪರ ಕೆಸರೆರಚುವ ಕಾರ್ಯದಲ್ಲಿ ಉದ್ಯುಕ್ತರಾಗುತ್ತಾರೆ. ಸಂಬಂಧಪಟ್ಟವರು ಕಾನೂನು ಕ್ರಮ ಜರುಗಿಸುತ್ತೇ ವೆಂದು ಹೇಳುತ್ತಾರೆ. ಈ ಮಧ್ಯೆಯೇ ಹಲವರು ಹಲವು ಬಗೆಯಲ್ಲಿ ಹೇಳಿಕೆ ಕೊಡುತ್ತಾರೆ. ಇವೆಲ್ಲವೂ ನಡೆಯುತ್ತಿವೆ ಎಂಬುದರ ಅರಿವಿದ್ದೂ ಇಲ್ಲದಂತೆ ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನಗಳು ನಡೆಯುತ್ತಲೇ ಇರುತ್ತವೆ.
ವಿಶ್ವವಿದ್ಯಾಲಯದಲ್ಲಿ ಪುಂಡರ ಪುಂಡಾಟಿಕೆಗಳು ಪ್ರಭುತ್ವದ ವಿರುದ್ಧ ನಿತ್ಯವೂ ನಡೆಯುತ್ತವೆ. ಈ ಮಧ್ಯೆ ಲೋಕದ ನಿತ್ಯದ ವ್ಯವಹಾರಗಳು ನಡೆಯುತ್ತಲೆ ಇರುತ್ತವೆ. ಅದ್ಯಾವುದೋ ಪತ್ರಕರ್ತನೊಬ್ಬನ, ಸಿನೆಮಾ ನಟ ನಟಿಯ, ಕ್ರಿಕೆಟ್ ಆಟಗಾರನ, ರಾಜಕಾರಣಿ ಯೊಬ್ಬನ ಖಾಸಗಿ ವಿಷಯಗಳು ೨೪೭ ಟಿವಿಯಲ್ಲಿ ಜಗತ್ತಿನ ಅಚ್ಚರಿಗಳಲ್ಲಿ ಎಂಟನೆಯದೆಂಬಂತೆ ಪದೆಪದೇ ಬಿತ್ತರಗೊಳ್ಳುತ್ತದೆ. ಅದನ್ನು ಜನತೆ ಕಣ್ಣು ಬಾಯಿ ಬಿಟ್ಕೊಂಡು ನೋಡುತ್ತದೆ.
ಮತ್ತೆ ಮತ್ತೆ ನೋಡುತ್ತ ಇನ್ನೂ ಕುತೂಹಲದಿಂದ ಇನ್ನಷ್ಟು ಸುದ್ದಿಗಾಗಿ ಚಪ್ಪರಿಸುತ್ತದೆ. ಮಾಧ್ಯಮಗಳು ತಾವೇ ಜನತೆಯ ಭಾವನೆಯ ಪ್ರತಿನಿಧಿಗಳು ಎಂಬಂತೆ ವೇಷ ಧರಿಸುತ್ತವೆ. ಒಂದು ಕಾಲದಲ್ಲಿ ಆದರ್ಶ ಯಾವ ಮಟ್ಟಿಗೆ ಇತ್ತು ಎಂದರೆ, ಒಂದು ಘಟನೆಯಾದರೆ ಇಡೀ ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶವೇ ತಲ್ಲಣಿಸುತ್ತಿತ್ತು. ಯಾರಿಗೇ ಆದರೂ ನೋವಾಗುವಂಥ ಆಘಾತ ವನ್ನು ನೀಡಲು ಜನ ಹೆದರುತ್ತಿದ್ದರು.
ಮಾನಕ್ಕೆ ಪ್ರಾಣಕ್ಕಿಂತ ಹೆಚ್ಚಿನ ಬೆಲೆಕೊಟ್ಟು ಕೆಟ್ಟ ಪದಗಳನ್ನು ಮತ್ತೊಬ್ಬರ ಮೇಲೆ ಪ್ರಯೋಗಿಸದ ಕಾಲವೊಂದಿತ್ತು. ಅನ್ಯರ ವಿಚಾರದಲ್ಲಿ ಮಾತಾಡಲು ಹಿಂದೆ ಮುಂದೆ ನೋಡುತ್ತಿದ್ದರು. ಯೋಚಿಸಿ ಮಾತಾಡುತ್ತಿದ್ದರು. ಈಗ ಅವೆಲ್ಲವೂ ಸೋತು ಮಾತಿನಿಂದ ಯಾವುದೂ ಸಾಧ್ಯವಾಗಬಹುದು, ಏನೂ ಆಗಬಹುದು ಅನ್ನಿಸಿಬಿಟ್ಟಿದೆ. ಮನುಷ್ಯ ಸಂಬಂಧಗಳು, ಮಾನವೀಯತೆ
ಕಣ್ಮರೆಯಾಗಿ ಸಂದರ್ಭಕ್ಕೆ ಬೇಕಾದಂತೆ ನಾಲಗೆಯನ್ನು ಹೊರಳಿಸುವ ಪ್ರವೃತ್ತಿ ಎಡೆ ಸಾಂಕ್ರಾಮಿಕದಂತೆ ಹರಡುತ್ತಿದೆ. ಸುಳ್ಳು ಹೇಳುವುದು ಈಗ ರಾಜಕೀಯದಲ್ಲಿ ಮಾತ್ರ ಇಲ್ಲ. ಅದರ ವ್ಯಾಪ್ತಿ ಮತ್ತು ವ್ಯಾಪಕತೆ ಎಡೆ ಪಸರಿಸಿದೆ.
ನಮ್ಮ ಪೂರ್ವಿಕರಲ್ಲಿ ಮಾತಿಗೆ ಎಲ್ಲ ಶಕ್ತಿಯೂ ಇತ್ತೆಂಬ ನಂಬಿಕೆಯಿತ್ತು. ಅದ್ಯಾವುದೋ ನದಿಯ ದಡದಲ್ಲಿ, ನಿಶ್ಶಬ್ದ ಸ್ಥಳದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕೂತು ಈ ಬದುಕಿನ ಬಗ್ಗೆ ಅತ್ಯಂತ ಗಂಭೀರವಾಗಿಯೂ ಮೋದದಿಂದಲೂ ಮತ್ತೆ ಮತ್ತೆ ಬದುಕಿಗೆ ಅಂಟಿ ಕೊಳ್ಳುವ ಶಕ್ತಿಯನ್ನು, ಬಿಡುಗಡೆಯ ಸಾಮರ್ಥ್ಯವನ್ನು ಪಡೆಯುವ ಒಂದು ಕಾಲವಿತ್ತು. ತನ್ನ ಅಂತರಂಗದಲ್ಲಿ ತಾನೇ ಅಚ್ಚರಿ ಪಡುವಂತೆ ದೇವರಲ್ಲಿ ಆಡಿಕೊಳ್ಳಬಹುದಾದ ಮಾತುಗಳನ್ನು ಮನುಷ್ಯ ವರ್ತಮಾನದಲ್ಲಿ ಮರೆತು ಬಿಟ್ಟಿದ್ದಾನೆ.
ಯಾವುದು ತನ್ನ ಅಗಾಧತೆಯಿಂದ ಮನುಷ್ಯನ ಬೌದ್ಧಿಕ ಮತ್ತು ಮಾನಸಿಕ ಔನ್ನತ್ಯವನ್ನು ಅಭಿವ್ಯಕ್ತಿಸಲು ಮಾಧ್ಯಮವಾಗಿತ್ತೋ ಅಂಥ ಮಾತಿಂದು ಸೋತಿಲ್ಲ, ಸಾಯುತ್ತಿದೆ. ಮಾತಿಗೇ ಮಾತಾಡುವಷ್ಟೂ ಶಕ್ತಿಯಿಲ್ಲ. ಮಾತಿಗೆ ಜೀವ ಬರುವುದು ಮೌನದಲ್ಲಿ; ಅಲ್ಲಿಯೇ ಅದರ ಅಪಾರವೂ ಅಪರಿಮಿತವೂ ಆದ ಶಕ್ತಿಯೂ ವ್ಯುತ್ಪತ್ತಿಯಾಗುವುದು. ಹಿಂದೆ ಮನೆಗಳಲ್ಲಿ ಮಾತುಗಳ
ಮಧ್ಯೆಯೇ ಹಿರಿಯರ ಮೌನದ ವ್ರತವಿರುತ್ತಿತ್ತು.
ದೈನಂದಿನ ಬದುಕಲ್ಲಿ ಹಿರಿಯರು ಇದನ್ನು ಅನುಸರಿಸುತ್ತಿದ್ದರು. ಅದು ಕಿರಿಯರಿಗೆ ಮಾದರಿಯಾಗುವುದಷ್ಟೇ ಅಲ್ಲದೆ ಮಾತು ಮತ್ತು ಮೌನದ ಮಹತ್ವವನ್ನು, ಶಕ್ತಿಯನ್ನು ತಿಳಿಸುತ್ತಿತ್ತು. ಮೌನದ ಮೊಗ್ಗನ್ನೊಡೆದು ಮಾತು ಹುಟ್ಟಬೇಕು ಎಂಬಲ್ಲಿ ಮನಸಿನ ಅನಂತ ಭಾವನೆಗಳು, ವಿಚಾರಗಳು ಹರಳುಗಟ್ಟುವುದು ಮೌನದ ಒಡಲ ಎಂಬುದನ್ನು ನಮ್ಮ ಪೂರ್ವಜರು ಅರಿತಿದ್ದರು.
ಸೆರೆಮನೆಯಲ್ಲೂ, ಬಂಧನದಲ್ಲೂ, ನೋವಿನಲ್ಲೂ, ಬಡತನದಲ್ಲೂ, ದುಃಖದಲ್ಲೂ ಜಗತ್ತಿನ ಶ್ರೇಷ್ಠ ಗ್ರಂಥಗಳು ಹುಟ್ಟಿವೆ ಯೆಂದರೆ ಮೌನ ತಾಕತ್ತನ್ನು ಊಹಿಸಲೂ ಅಸಾಧ್ಯ! ಬೈಬಲ್ಲಿನ ಒಂದು ಮಾತು ಹೀಗಿದೆ: In the beginning was the word. ಮೌನ ಮಾತಿನ ಮೊದಲಿನ ಹಂತ. ಮೌನದ ಒಡಲ ಸೃಷ್ಟಿಶೀಲತೆಯ ಮೊಟ್ಟೆಯಿರುವುದು. ಭಕ್ತಿಗೆ ಮಾತಿಗಿಂತ ಮೌನದ ಹಂಗು ಆಧಿಕ್ಯ. ಎದುರು ನಿಂತವನನ್ನೂ ಮಾತಿನಿಂದ ಗೆಲ್ಲಬ, ಒಲಿಸಿಕೊಳ್ಳಬ, ಮರುಳು ಮಾಡಬ, ಚಿಂತನೆಗಳನ್ನು ರವಾನಿಸಬ ಎಂಬ ಅರಿವು ಕುಸಿದು ಮಾತಿನ ಶಕ್ತಿ ಸಾಯುತ್ತಿದೆ.
ಯಾವ ಆದರ್ಶವನ್ನೂ ಮಾತಿನಿಂದ ಕಟ್ಟಲು ಸಾಧ್ಯವಿದೆಯೆಂಬ ನಂಬಿಕೆ, ವಿಶ್ವಾಸ, ಭರವಸೆ ಮತ್ತು ವಾಸ್ತವ ಪಾತಾಳಕ್ಕೆ ಕುಸಿದದ್ದು ಮಾತಿಗಿರುವ ಶಕ್ತಿಯ ನಿರಂತರವಾದ ಈ ಸಾಯುವಿಕೆಯಿಂದ. ರಾಜಕಾರಣಿಯೊಬ್ಬನ, ಮಂತ್ರಿಯೊಬ್ಬನ, ವಿದ್ವಾಂಸ ನೊಬ್ಬನ ಮಾತಿಗೆ ಜನತೆ ಗೌರವ ಕೊಡುತ್ತಿದ್ದ ದೇಶವಿದು. ನಾಗರಿಕ ಪ್ರಪಂಚವೇ ಅಸಹ್ಯಪಡುವ ಇಂದಿನ ಸನ್ನಿವೇಶದ ಭಾರತ
ದಲ್ಲಿ ದುರಂತವೂ ತಮಾಷೆಯೂ ಆಗಿ ಕಾಣುವುದೆಂದರೆ, ಇವುಗಳ ನಡುವೆಯೇ ಭವ್ಯಭಾರತದ ಭವಿಷ್ಯದ ನಮ್ಮ ಮಕ್ಕಳನ್ನು ತರಗತಿಗಳಲ್ಲಿ ಹುಸಿಯ ಆದರ್ಶಗಳನ್ನು ಬೋಧಿಸುತ್ತ ರೂಪಿಸುತ್ತಿರುವುದು ಅವ್ಯಾಹತವಾಗಿ ನಡೆಯುತ್ತಲೇ ಇರುವುದು.
ಕೊನೆಯ ಮಾತು: ಮತ್ತೆ ಮತ್ತೆ ಚಿಂತಿಸುತ್ತ ಆಂತರ್ಯದಲ್ಲಿ ನಂಬಿದ್ದನ್ನು ಹೇಳುವ ಧೈರ್ಯ ತೋರಬೇಕು; ಎಲ್ಲದರಲ್ಲೂ
ತುಂಬಿಹೋಗಿರುವ ಹೊಲಸು ರಾಜಕೀಯದ ಮಧ್ಯೆ! ಅನಂತಮೂರ್ತಿ ಹೇಳಿದರು: ವಾಕ್ ವೈಭವ ಅಪಾಯಕಾರಿ. ಯಾಕೆಂದರೆ ಆದು ಸಮೂಹವನ್ನು ಉದ್ರೇಕಗೊಳಿಸುತ್ತದೆ. ಸುಳ್ಳುಗಳನ್ನು ಕೇಳಿಸಿಕೊಂಡು ಬದುಕೋದು ಸಾಮಾನ್ಯವಾಗಿ ಎಲ್ಲರಿಗೂ ಕ್ಷೇಮವೆನಿಸುತ್ತದೆ. ಹಿತವೆನಿಸುತ್ತದೆ. ಆದರೂ ಜನರ ಆತ್ಮ ಸತ್ಯಕ್ಕಾಗಿ ಹಸಿದಿರುತ್ತದೆ. ಆದ್ದರಿಂದ ನಾವು ನಮ್ಮ ಅತ್ಯಂತ ಏಕಾಂಗಿತನದಲ್ಲಿ ನಾನೇ ನಂಬಿದ್ದನ್ನು ಹೇಳುವ ಧೈರ್ಯ ಮಾಡಬೇಕು.
ಹೊರಗಿನ ಗದ್ದಲಕ್ಕೆ ಕಿವಿಕೊಡುವ ಸಂದರ್ಭದಲ್ಲೂ ಒಳಗಿನ ಪ್ರeಯನ್ನು ಕಳೆದುಕೊಳ್ಳಬಾರದು. ಮಾತಿಗೆ ಹದವಾಗಿ ಮೆದು ವಾಗಿ ಒಲಿಸಿಕೊಳ್ಳುವ, ಗೆಲ್ಲಿಸಿ ಕೊಳ್ಳುವ ಶಕ್ತಿಯನ್ನು ಹೊಂದಿದೆಯೆಂಬ ಭರವಸೆಯಲ್ಲಿ ಮಾತನ್ನು ಆಡುತ್ತ, ಎದುರಾಳಿ ಯನ್ನು ಎದುರಿಸಬೇಕು. ಮಾತಿನ ಎಲ್ಲವನ್ನೂ ಗೆದಿಯಬ ಎಂಬ ಶಕ್ತಿಯನ್ನು ಬೆಳೆಸಿಕೊಳ್ಳುವ ಗುಣ ನಾಗರಿಕ ಪ್ರಪಂಚಕ್ಕೆ ಮಾತ್ರ ಇದೆಯೆಂದು ನಂಬಿಯೇ ನಾವೆಲ್ಲ ನಮ್ಮ ನಾಗರಿಕತೆಯ ಮೂಲ ಸೆಲೆಯಾದ ಶ್ರದ್ಧೆಯನ್ನೂ, ನಿಷ್ಠೆಯನ್ನೂ ಘನತೆ ಯನ್ನೂ ಉಳಿಸಿ ಬಾಳಿಸಿಕೊಳ್ಳಬೇಕಾದ ತುರ್ತು ಈಗಿದೆ. ಮಾತು ಸೋಲಬಾರದು, ಸಾಯಲೂ ಬಾರದಂತೆ ಜೀವಂತ ವಾಗಿ ಕಟ್ಟಿಕೊಳ್ಳ ಬೇಕಿದೆ ನಮ್ಮ ನಡುವೆ!
Read E-Paper click here