-ಬಸವರಾಜ ಎಂ. ಯರಗುಪ್ಪಿ
ಓರ್ವ ಶ್ರೇಷ್ಠ ಶಿಕ್ಷಕರೂ, ನಮ್ಮ ದೇಶದ ಶಿಕ್ಷಣ ವ್ಯವಸ್ಥೆಗೆ ಅಮೂಲ್ಯ ಕೊಡುಗೆ ನೀಡಿದ ಶಿಕ್ಷಣ ತಜ್ಞರೂ ಮತ್ತು ಮಾಜಿ ರಾಷ್ಟ್ರಪತಿಗಳೂ ಆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು (ಸೆಪ್ಟೆಂಬರ್ ೫) ದೇಶಾದ್ಯಂತ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ. ‘ಗುರು’ ಎಂಬುದು ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಕ್ತಿ ಎಂಬ ಗೌತಮ ಬುದ್ಧನ ಉಕ್ತಿಯು ಶಿಕ್ಷಕರ ಮಹತ್ವವನ್ನು
ವಿವರಿಸುವ ಅವಿಸ್ಮರಣೀಯ ನುಡಿಯಾಗಿದೆ. ‘ಆಚಾರ್ಯ ದೇವೋ ಭವ’ ಎನ್ನುವ ಮೂಲಕ ಗುರುಗಳನ್ನು ಪೂಜಿಸಿ ಗೌರವಿಸುವ ಭವ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ದೇಶ ನಮ್ಮದು. ಶಿಕ್ಷಕನಿಲ್ಲದ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳು ವುದು ಅಸಾಧ್ಯ. ಸುಂದರ ಸಮಾಜವನ್ನು ಸೃಷ್ಟಿಸುವ ತೋಟದ ಮಾಲೀಕರೇ ನಮ್ಮ ಶಿಕ್ಷಕರು. ಸಮಾಜದ ಪ್ರತಿ ಯೊಬ್ಬ ಸಾಧಕನ ಹಿಂದೆಯೂ ಶಿಕ್ಷಕರ ಶ್ರಮ ಇದ್ದೇ ಇರುತ್ತದೆ. ಮಕ್ಕಳ ಲಾಲನೆ-ಪಾಲನೆಯಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವೋ, ಮಕ್ಕಳ ಬೌದ್ಧಿಕ ಜ್ಞಾನವನ್ನು ವರ್ಧಿಸುವಲ್ಲಿ ಶಿಕ್ಷಕರ ಪಾತ್ರವೂ ಅಷ್ಟೇ ಮುಖ್ಯ. ಜಾತಿ, ಧರ್ಮ, ಲಿಂಗ, ಪ್ರಾಂತ್ಯ ಮುಂತಾದವುಗಳನ್ನು ಲೆಕ್ಕಿಸದೆ, ಎಲ್ಲಾ ಮಕ್ಕಳನ್ನು ಸಮಾನ ರೀತಿಯಲ್ಲಿ ನೋಡುವವನೇ ಆದರ್ಶ ಶಿಕ್ಷಕ.
ಡಾ. ರಾಧಾಕೃಷ್ಣನ್ ಎಂಬ ಮಹಾಚೇತನ
ಭಾರತದ ಅಗ್ರಗಣ್ಯ ಶಿಕ್ಷಣತಜ್ಞ, ತತ್ತ್ವಜ್ಞಾನಿ ಮತ್ತು ‘ಭಾರತರತ್ನ’ ಪ್ರಶಸ್ತಿ ಪುರಸ್ಕೃತರಾದ ಡಾ. ರಾಧಾಕೃಷ್ಣನ್ ರವರು ಎಲ್ಲರೂ ಪ್ರೀತಿಸುವ ಮಹಾನ್ ಶಿಕ್ಷಕರಾಗಿದ್ದರು. ೧೮೮೮ರ ಸೆಪ್ಟೆಂಬರ್ ೫ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಅವರು ಜನಿಸಿದ್ದು. ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಹ್ಯಾರಿಸ್ ಮ್ಯಾಂಚೆಸ್ಟರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಮತ್ತು ಆಂಧ್ರ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಅವರದ್ದು. ಸ್ವತಂತ್ರ ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿ ಯಾಗಿದ್ದ ಅವರು, ‘ಶಿಕ್ಷಣವು ಕೇವಲ ಪುಸ್ತಕಗಳಿಂದ ಬರುವುದಿಲ್ಲ’ ಎಂದು ನಂಬಿದ್ದರು. ೧೯೬೨-೬೭ರ ಅವಧಿಯಲ್ಲಿ ಭಾರತದ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಸ್ನೇಹಿತರು ಮತ್ತು ವಿದ್ಯಾರ್ಥಿಗಳು ಅವರ ಜನ್ಮದಿನದ ಆಚರಣೆಗೆಂದು ವಿನಂತಿಸಿದರು. ಅದಕ್ಕೆ ರಾಧಾಕೃಷ್ಣನ್ ಅವರು, ‘ನನ್ನ ಜನ್ಮದಿನವನ್ನು ಆಚರಿಸುವ ಬದಲು ಸೆಪ್ಟೆಂಬರ್ ೫ನ್ನು ಶಿಕ್ಷಕರ ದಿನವಾಗಿ ಆಚರಿಸಿದರೆ ಅದೇ ನನಗೆ ಹೆಮ್ಮೆ ಮತ್ತು ಸೌಭಾಗ್ಯ’ ಎಂದರು. ಅಂದಿನಿಂದ ಈ ಪರಿಪಾಠ ಬೆಳೆದುಬಂದಿದೆ. ‘ಶಿಕ್ಷಕರ ದಿನ’ ಎಂಬುದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ‘ಪರ್ವದಿನ’ವಾಗಿದೆ. ಮಾತ್ರವಲ್ಲ, ಇದು ಶಿಕ್ಷಕರ ಮೌಲ್ಯ ಮತ್ತು ಕಠಿಣ ಪರಿಶ್ರಮಕ್ಕೆ ವಿದ್ಯಾರ್ಥಿಗಳು ಕೃತಜ್ಞತೆಯನ್ನು ಸಲ್ಲಿಸುವ ದಿನವೂ ಆಗಿದೆ. ಬದುಕಿನಲ್ಲಿ ಸರಿ ಮತ್ತು ತಪ್ಪಿನ ನಡುವಿನ ವ್ಯತ್ಯಾಸವನ್ನು ತಿಳಿಹೇಳುವವರೇ ಗುರುಗಳು. ಸುಸಂಸ್ಕೃತ ಸಮಾಜವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಗುರುಗಳು, ವಿದ್ಯಾರ್ಥಿಗಳಲ್ಲಿನ ಶಕ್ತಿ-ಸಾಮರ್ಥ್ಯಗಳನ್ನು ಕ್ಷಿಪ್ರವಾಗಿ ಗ್ರಹಿಸಿ ಅವರನ್ನು ಬೆಳೆಸಿ ಭವಿಷ್ಯ ರೂಪಿಸಿಕೊಡುವಲ್ಲಿ ವರ್ಷವಿಡೀ ಶ್ರಮಿಸುತ್ತಾರೆ.
ಕೇವಲ ಪುಸ್ತಕದ ಕಲಿಕೆ ಮಾತ್ರವಲ್ಲದೆ, ಉತ್ತಮ ಅಭ್ಯಾಸಗಳು, ಕ್ರೀಡಾ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಅಭ್ಯಾಸಗಳಲ್ಲೂ ವಿದ್ಯಾರ್ಥಿಗಳನ್ನು ತೊಡಗಿಸಿ ಅವರ ಸರ್ವತೋಮುಖ ಅಭಿವೃದ್ಧಿಗೆ ಸಂಕಲ್ಪಿಸುತ್ತಾರೆ ಶಿಕ್ಷಕರು. ಮಾತ್ರವಲ್ಲ, ತಮ್ಮ ವಿದ್ಯಾರ್ಥಿಗಳು ನಿರೀಕ್ಷೆ ಯಂತೆಯೇ ವಿಕಸನಗೊಳ್ಳುವಂತಾಗುವುದನ್ನು ಖಾತ್ರಿಪಡಿಸಿ ಕೊಳ್ಳಲು ಶಿಕ್ಷಕರು ತಮ್ಮೆಲ್ಲಾ ಪ್ರಯತ್ನಗಳನ್ನೂ ಮಾಡುತ್ತಾರೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಪಾಲಿಗೂ ಶಿಕ್ಷಕರು ನಿಜಾರ್ಥದಲ್ಲಿ ಪ್ರಾತಃಸ್ಮರಣೀಯರು. ಆದ್ದರಿಂದ ವಿದ್ಯಾರ್ಥಿಗಳು ಮುಂದೆ ಬೆಳೆದು ಹೆಚ್ಚೆಚ್ಚು ವಿದ್ಯಾವಂತರಾಗಿ, ಬದುಕಿನಲ್ಲಿ ಉತ್ತಮ ನೆಲೆಯನ್ನು ಕಂಡುಕೊಂಡ ನಂತರ, ತಮ್ಮೆಲ್ಲ ಸಾಧನೆಗಳಿಗೆ ಮೂಲ ಉತ್ತೇಜನ ನೀಡಿದ್ದೇ ಶಿಕ್ಷಕರು ಎಂದು ಕೃತಜ್ಞತಾಪೂರ್ವಕವಾಗಿ ಅವರನ್ನು ಸ್ಮರಿಸುವ ಪರಿಪಾಠ ನಮ್ಮ ಸಮಾಜದಲ್ಲಿ ಬೆಳೆದುಬಂದಿದೆ. ಇದು ಭಾರತದ ಎಲ್ಲ ಸಮುದಾಯಗಳಲ್ಲೂ ಏಕಪ್ರಕಾರವಾಗಿ ಕಂಡುಬರುವಂಥದ್ದು ಎಂದರೆ ತಪ್ಪಾಗಲಾರದು. ಹಿಂದಿನ ಕಾಲದಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳ ಪಾಲಿನ ಆದರ್ಶ ವ್ಯಕ್ತಿಗಳಾಗಿದ್ದರು. ಆ ಸಮಯದಲ್ಲಿ ಗುರು-ಶಿಷ್ಯರ ಸಂಬಂಧ ಹಾಲು-ಜೇನಿನಂತೆ ಇತ್ತು. ಆದರೆ ಈಚೀಚೆಗೆ ಗುರು-ಶಿಷ್ಯರ ಬಾಂಧವ್ಯದಲ್ಲಿ ಇಂಥ ಸೌಹಾರ್ದ, ಮಾಧುರ್ಯ ಮರೆಯಾಗುತ್ತಿರುವುದು ವಿಷಾದನೀಯ ಸಂಗತಿ.
ಪತಿಯೊಬ್ಬರೂ ನೆನಪಿಡಬೇಕಾದ ಸಂಗತಿಗಳಿವು
- ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಗೆ ಭವಿಷ್ಯವಿಲ್ಲ; ಒಂದು ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಶಿಕ್ಷಕರ ಕೊಡುಗೆ ಅನಿವಾರ್ಯವಾದುದು, ಅಪಾರವಾದುದು.
- ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆಯೇ ಸದಾ ಚಿಂತಿಸುವವರು, ವಿದ್ಯಾರ್ಥಿಗಳ ಸಾಧನೆ ನೋಡಿ ಅದು ತಮ್ಮ ಮಕ್ಕಳ ಸಾಧನೆಯೇ ಎಂಬಂತೆ ಖುಷಿಪಡುವವರೇ ಶಿಕ್ಷಕರು.
- ಬದುಕಿನಲ್ಲಿ ಒಂದು ಗುರಿಯಿರಬೇಕು. ಅದನ್ನು ತಲುಪಲು ಬೇಕಾದ ಮಾರ್ಗದರ್ಶನ ನೀಡುವಂಥ ಒಬ್ಬರು ಒಳ್ಳೆಯ ಗುರು ಸಿಕ್ಕರೆ, ಯಶಸ್ಸು ಎಂಬುದು ಕಷ್ಟವಾಗುವುದಿಲ್ಲ.
- ಶಾಲೆಯಲ್ಲಿ ಪಾಠ ಹೇಳಿಕೊಟ್ಟವರು ಮಾತ್ರವೇ ಗುರುವಲ್ಲ; ಕೆಲಸ ಕಲಿಸಿಕೊಟ್ಟವರು, ಹದ ತಪ್ಪಿದ ಬದುಕಿಗೆ ಸರಿದಾರಿ ತೋರಿಸಿದವರೂ ಗುರುಗಳೇ.
- ವಿದ್ಯಾರ್ಥಿಯಲ್ಲಿನ ಸಂದೇಹ, ಭಯ ಮತ್ತು ಅಜ್ಞಾನವನ್ನು ತೊಡೆದುಹಾಕುವವನೇ ಗುರು.
- ತಾಯಿಯು ಮಗುವಿಗೆ ಜೀವ ನೀಡಿದರೆ, ಶಿಕ್ಷಕರು ಆ ಮಗುವಿಗೆ ಜೀವನವನ್ನೇ ನೀಡುತ್ತಾರೆ.
ಶಿಕ್ಷಕರು ವಿದ್ಯಾರ್ಥಿಗಳ ಸಂಕಷ್ಟದ ನದಿಯನ್ನು ದಾಟಿಸುವ ಅಂಬಿಗರೂ ಹೌದು, ಗುರಿ ಕಟ್ಟಿಕೊಟ್ಟು ಅವರ ಬದುಕಿಗೆ ಭದ್ರ ತಳಪಾಯ ಹಾಕುವವರೂ ಹೌದು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದಿದ್ದಾರೆ ದಾರ್ಶನಿಕ ಕವಿ ಪುರಂದರದಾಸರು.ಏನೂ ತಿಳಿಯದ ಸಾಮಾನ್ಯ ಮನುಷ್ಯನೊಬ್ಬನು ತನ್ನ ಜೀವನದ ಮೌಲ್ಯ, ಗುರಿ ಮತ್ತು ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವನ್ನು ಗುರುವಿನ ಮಾರ್ಗ ದರ್ಶನವಿಲ್ಲದೆ ತಿಳಿಯಲಾರ. ಬದುಕಿನ ವಿವಿಧ ಕಾಲಘಟ್ಟಗಳಲ್ಲಿ ಹಲವು ಸ್ವರೂಪದ ಗುರುಗಳು ನಮಗೆ ಎದುರಾಗುತ್ತಾರೆ. ಮನೆಯಲ್ಲಿ ತಂದೆ-ತಾಯಿ, ನಂತರದಲ್ಲಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಹೀಗೆ ನಾವು ಸಾಂಪ್ರದಾಯಿಕ ಶಿಕ್ಷಣವನ್ನು ಮುಗಿಸುವವರೆಗೂ ಮತ್ತು ತರುವಾಯದ ಬದುಕಿನ ವಿವಿಧ ಘಟ್ಟಗಳಲ್ಲೂ ಸಿಗುವ ಒಬ್ಬೊಬ್ಬ ಗುರುವೂ ಬಾಳಿಗೆ ದಾರಿದೀಪವಾಗಿಯೇ ಪರಿಣಮಿಸುತ್ತಾರೆ.
ಅಡ್ಡಾದಿಡ್ಡಿಯಾಗಿರುವ ಶಿಲೆಯೊಂದು ಸುಂದರವಾದ ಮೂರ್ತಿಯಾಗಿ ರೂಪುಗೊಳ್ಳುವುದರ ಹಿಂದೆ ಓರ್ವ ಸಮರ್ಥ ಶಿಲ್ಪಿ ಇರುವಂತೆಯೇ, ಶುರುವಿನಲ್ಲಿ ಮಣ್ಣಿನ ಮುದ್ದೆಯಂತಿದ್ದ ವಿದ್ಯಾರ್ಥಿಯನ್ನು ಹಂತಹಂತವಾಗಿ ಶಿಕ್ಷಣ ಸಂಸ್ಕಾರಕ್ಕೆ ಒಳಪಡಿಸಿ ಪರಿಪೂರ್ಣ ಸಾಧಕನನ್ನಾಗಿ ಅವನನ್ನು ಹೊರಹೊಮ್ಮಿಸುವಲ್ಲಿಯೂ ಸಾಕಷ್ಟು ‘ಶಿಕ್ಷಕ-ಶಿಲ್ಪಿ’ಗಳ ಯೋಗದಾನವಿರುತ್ತದೆ. ‘ಶಿಕ್ಷಕರು ಸಮಾಜದ ಅತ್ಯಂತ ಜವಾಬ್ದಾರಿಯುತ ಮತ್ತು ಪ್ರಮುಖ ಸದಸ್ಯರು; ಏಕೆಂದರೆ ಅವರ ವೃತ್ತಿಪರ ಪ್ರಯತ್ನಗಳು ಭೂಮಿಯ ಭವಿಷ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ’ ಎಂದಿದ್ದಾರೆ ಮಹಾನು ಭಾವರೊಬ್ಬರು. ಈ ಮಾತನ್ನು
ಮರೆಯದಿರೋಣ.
(ಲೇಖಕರು ಶಿಕ್ಷಕರು)