Monday, 16th September 2024

ಶಿಕ್ಷಕರಿಗೆ ಇದೆ ಬೌದ್ದಿಕ ಸಂಕಷ್ಟ !

ದಾಸ್ ಕ್ಯಾಪಿಟಲ್

dascapital1205@gmail.com

ಒಬ್ಬ ರಾಜಕಾರಣಿ, ವೈದ್ಯ, ಎಂಜಿನಿಯರ್, ವಕೀಲ ಅಥವಾ ಇನ್ನು ಯಾವುದೇ ವೃತ್ತಿಯವರಿರಲಿ, ಅವರಾರಿಗೂ ಇಲ್ಲದಿರುವಂಥ ವೃತ್ತಿ ಸಂಕಷ್ಟಗಳು
ಮತ್ತು ಬೌದ್ಧಿಕ ಸಂಕಷ್ಟಗಳು ಶಿಕ್ಷಕನಿಗಿರುತ್ತದೆ, ಅಥವಾ ಈ ವೃತ್ತಿಗಿರುತ್ತದೆಂಬುದು ಅನುಭವಜನ್ಯ ಅಭಿಪ್ರಾಯವೂ ನಂಬಿಕೆಯೂ ಹೌದು.

ಹಾಗಂತ ಅವರಿಗೆಲ್ಲ ಇಂಥ ಸಂಕಷ್ಟಗಳೇ ಇರುವುದಿಲ್ಲ ಎಂಬುದು ನನ್ನ ಮಾತಿನ ಅರ್ಥವಲ್ಲ, ಅಭಿಪ್ರಾಯವೂ ಅಲ್ಲ. ಈ ಸಮಾಜವನ್ನು ಶಿಕ್ಷಣ, ಶಾಲೆ, ಸಮುದಾಯ ಮತ್ತು ಶಿಕ್ಷಕ ಎಂಬೀ ನಾಲ್ಕು ಪರಿಕಲ್ಪನೆಗಳು ಮತ್ತು ಇವುಗಳನ್ನೊಳಗೊಂಡ ಸಂಗತಿಗಳು ಪರಸ್ಪರ ಭಾವನಾತ್ಮಕ, ಮಾನಸಿಕ, ವೈಚಾರಿಕ, ಸಾಮಾಜಿಕ ಸಂಬಂಧ ವನ್ನು ಕಳೆದುಕೊಂಡಿದೆ ಎಂಬುದರ ಬಗ್ಗೆ ಎಷ್ಟು ಸತ್ಯದ ಮಾತುಗಳಿದ್ದರೂ ಇವೆಲ್ಲವೂ ಕೊನೆಗೂ ಗಿರಕಿ ಹೊಡೆಯು ವುದು ಶಿಕ್ಷಕನ ಸುತ್ತಲೇ! ಏಕೆಂದರೆ, ಶಿಕ್ಷಣದ ಕುರಿತಾಗಿ ಯಾವುದೇ ಕಾನೂನುಗಳು ಜಾರಿಗೊಳ್ಳಲಿ, ಮಕ್ಕಳ ಹಕ್ಕುಗಳು ಮತ್ತದರ ರಕ್ಷಣೆಯ ಬಗ್ಗೆ ಏನೇ ಘೋಷಣೆಗಳು ಬರಲಿ, ಸಮುದಾಯ ಎಷ್ಟೇ ಆಪ್ತತೆಯನ್ನೂ ನಿರ್ಲಿಪ್ತತೆಯನ್ನೂ ಉಳಿಸಿಕೊಳ್ಳಲಿ ಅಥವಾ ಬಿಡಲಿ ಅದರ ಆತ್ಯಂತಿಕ ಸ್ಪರ್ಶ ಬಂದು ಮುಟ್ಟುವುದು ಶಿಕ್ಷಕನನ್ನೇ!

ಶಿಕ್ಷಕರಿಗೆ ಇದು ತುಂಬಾ ಗಹನವಾದ ಮತ್ತು ಚಿಂತಿಸಬೇಕಾದ ವಿಚಾರಗಳು ಸದಾ ಇರುತ್ತದೆ. ಹಾಗಂತ ಈ ಚಿಂತಿಸಬೇಕಾದ ವಿಚಾರ ಕೇವಲ ಒಂದು ದಿನz ತಿಂಗಳದ್ದೇ ವರ್ಷದ್ದೇ ಆಗಿರುವುದಲ್ಲ. ಅದು ವೃತ್ತಿಜೀವನದ ಪೂರ್ತಿ ಇರುವಂಥದ್ದು. ಆಫ್ ಕೋರ್ಸ್ ನಿವೃತ್ತಿಯಾದ ಅನಂತರವೂ! ಏಕೆಂದರೆ, ಒಂದು ದೇಶದ ಭವಿಷ್ಯ ವನ್ನು ಗುಡಿಸಿ ಗುಂಡಾಂತರ ಮಾಡಿಬಿಡುವ ತಾಕತ್ತು ತರಗತಿಗಳಲ್ಲಿದೆ. ದೇಶವೊಂದರ ಭವಿಷ್ಯ ಸಿದ್ಧವಾಗುವುದು ತರಗತಿಗಳಲ್ಲಿ ಎಂಬ ಅಬ್ದುಲ್ ಕಲಾಂರ ಮಾತನ್ನು ನೆನಪಿಸಿಕೊಳ್ಳಿ. ಶಿಕ್ಷಣದ ಉನ್ನತೀಕರಣದ ಹಂಬಲದಲ್ಲಿ ಸಿದ್ಧವಾಗುವ ಎಲ್ಲ ಪಾಲಿಸಿಗಳು, ನೀತಿ-ನಿಯಮಗಳು, ಯೋಜನೆಗಳು ವಿದ್ಯಾರ್ಥಿಗಳನ್ನು ತಲುಪುವುದು ಶಿಕ್ಷಕನಿಂದಲೇ!

ಅದು ತರಗತಿ ಯೊಳಗೂ, ಹೊರಗೂ! ಏಕೆಂದರೆ, ಎಲ್ಲ ಶೈಕ್ಷಣಿಕ ನಿಯಮಗಳು, ಪ್ರಾಯೋಗಿಕ ಬದಲಾವಣೆಗಳು, ಐಡಿಯಾಗಳು ಅದರ ಅನುಷ್ಠಾನ ತರಗತಿಯಲ್ಲಿ ಆಗುವುದರಿಂದ ಅದರ ನೇರ ಮತ್ತು ಅಡ್ಡ ಪರಿಣಾಮ ವಿದ್ಯಾರ್ಥಿಗಳಿಗಿಂತ ಶಿಕ್ಷಕರಿಗೇ ಆಗುವುದು ಸಾಮಾನ್ಯ ಮತ್ತು ಹೆಚ್ಚು ಏಕೆಂದರೆ, ಅದನ್ನು ಕಾರ್ಯಗತಗೊಳಿಸಿ ಯಶಸ್ವಿಗೊಳಿಸುವ ಪ್ರಮುಖ ಜವಾಬ್ದಾರಿ ಶಿಕ್ಷಕರದ್ದೇ ಆಗಿರುತ್ತದೆ. ಆ ಪಾಲಿಸಿಯ ಹೇಳುವ ಅಂಶಗಳನ್ನು ಶಿಕ್ಷಕ  ಒಪ್ಪಲಿ, ಒಪ್ಪದಿರಲಿ ಅಥವಾ ಒಳ ಮನಸು ಬೇರೆಯೇ ಇದ್ದೂ ಇಲ್ಲದೆಯೂ ಅದರನುಸಾರ ಬೋಧನೆ ಮಾಡಲೇಬೇಕು. ಫಲಶ್ರುತಿಯನ್ನು ಕಾಣಿಸಲೇಬೇಕು.

ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ಬರಿಸುವುದಕ್ಕೆ ಪ್ರಯತ್ನಿಸಲೇಬೇಕು. ಮತ್ತು ಈ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ನಿರಂತರ ಪ್ರಯತ್ನ ವಾಗಿರಬೇಕು. ಮುಖ್ಯವಾಗಿ, ಈ ನಿರಂತರ ಪ್ರಯತ್ನಕ್ಕೆ ದಿನನಿತ್ಯದ ಶಾಂತ ಮನಃಸ್ಥಿತಿಯೂ ಅಗತ್ಯವಾಗಿ ಇರಬೇಕಾಗುತ್ತದೆ. ಆಡಳಿತಾತ್ಮಕ ಕಾರ್ಯದಲ್ಲಿ
ಶಿಕ್ಷಕರು ತೊಡಗಿಕೊಂಡರೆ ಮಾನಸಿಕವಾದ ಒತ್ತಡ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಈ ಆಡಳಿತಾತ್ಮಕ ಕಿರಿಕಿರಿ ಹಿಂಸೆ ಯನ್ನು ತರುವಂಥದ್ದು. ಏಕೆಂದರೆ, ಇಂಥ ಮನಸ್ಥಿತಿಯಲ್ಲಿ ಹೋಗಿ ತರಗತಿಯಲ್ಲಿ ಚೆನ್ನಾಗಿ ಪಾಠ ಮಾಡದಿದ್ದರೆ ಬೋಧನೆ ನಿಸ್ಸಾರವಾಗಿ ಕಲಿಕೆ ಕುಂಠಿತವಾಗುತ್ತದೆ.

ಒಂದು ಕಡೆ, ಪಠ್ಯಕ್ರಮವನ್ನು ಮುಗಿಸುವ ತವಕ, ಇನ್ನೊಂದು ಕಡೆ, ಕಲಿಕಾ ಪರಿಣಾಮ ಅಪೇಕ್ಷಣೀಯ ಎನ್ನುವಂತೆ ಮಾಡುವ ಒತ್ತಡ-ಎರಡೂ ಒಂದೇ ಶೈಕ್ಷಣಿಕ ವರ್ಷದಲ್ಲಿ ಆಗಬೇಕಾದುದು ಸಾಧ್ಯವಾಗದ ಮಾತು. ಆದರೂ ಸಾಧ್ಯವಾಗಿಸಬೇಕು. ನಿತ್ಯವೂ ಸಾಕಷ್ಟು ಪೂರ್ವಸಿದ್ಧತೆಯೊಂದಿಗೆ ಪಾಠಾಂಶ ಗಳನ್ನು ಪೂರ್ಣಗೊಳಿಸಿ ಪರೀಕ್ಷೆಗೆ ಸಿದ್ಧಪಡಿಸುವುದು ಬಹು ತ್ರಾಸದಾಯಕ. ಅದರಲ್ಲೂ ಕರೋನಾ ಅನಂತರದಲ್ಲಿ ಕಲಿಕೆ ಮತ್ತು ಬೋಧನೆಯ ಹಳಿಯೇ ತಪ್ಪಿಹೋಗಿದೆ. ಇಂಥ ಸಂದರ್ಭದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಅನಿವಾರ್ಯವೋ, ತೀರಾ ಅಗತ್ಯವೋ ಎಂಬಂತೆ ನಾವು ರೂಢಿಸಿಕೊಂಡ ಆನ್‌ಲೈನ್ ಮೂಲಕವಾದ ಬೋಧನೆ ಮತ್ತು ಕಲಿಕೆಯ ಹಳಿತಪ್ಪಿ ಎರಡರ ಸಹಜವಾದ ವೇಗ ಕುಂಠಿತಗೊಂಡೇ ವರ್ಷ ದಾಟಿದೆ.

ಆದ್ದರಿಂದ ಮತ್ತೆ ಹಳಿಗೆ ತರುವುದು ಏಕೆ ತ್ರಾಸ ದಾಯಕವೆಂದರೆ, ಶಿಕ್ಷಕರ ಬೌದ್ಧಿಕವಾದ ಮತ್ತು ಮಾನಸಿಕವಾದ ಅಭಿರುಚಿಯೇ ಬದಲಾಗಿ ಹೋಗಿರುವು ದರಿಂದ! ವಿದ್ಯಾರ್ಥಿಗಳ ಕಲಿಕೆಗೆ ತೊಡಗಿಸಿಕೊಳ್ಳುವ ಶಕ್ತಿಯು ತೀರಾ ಕೆಳಮಟ್ಟವನ್ನು ತಲುಪಿರುವುದರಿಂದ! ಶಿಕ್ಷಕರನ್ನೋ ಶಿಸ್ತುಕ್ರಮ, ನಿಯಮ ಅಂತ ಸರಿದಾರಿಗೆ ಬರುವಂತೆ ಮಾಡಲು ಸಾಧ್ಯವಿದೆ. ಆದರೆ ಕೆಳಮಟ್ಟಕ್ಕೆ ತಲುಪಿದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಮತ್ತೆ ಎಂದಿನ ಸ್ಥಿತಿಗೆ ತರುವುದು ಬಹುಕಷ್ಟಸಾಧ್ಯ!

ಅಷ್ಟೇ ಅಲ್ಲದೆ, ಅದೇ ಬಹುಮುಖ್ಯವಾದುದು. ಎಷ್ಟೇ ಪ್ರಯತ್ನಿಸಿದರೂ ವಿದ್ಯಾರ್ಥಿಗಳನ್ನು ಕಲಿಕೆಗೆ ತೊಡಗಿಸುವುದು ಅಂದುಕೊಂಡಷ್ಟು  ಸುಲಭ ವಲ್ಲ. ಅಂತರಂಗದ ಒತ್ತಡವಿಲ್ಲದೆ ಯಾವ ವಿದ್ಯಾರ್ಥಿಯೂ ಕಲಿಕೆಯಲ್ಲಿ ತೊಡಗಿಸಿಕೊಳ್ಳಲಾರ. ಕಲಿಸುವುದು ಮತ್ತು ಕಲಿಯುವುದು ಮುಖ್ಯವಾಗಿ ತೀರಾ ವೈಯಕ್ತಿಕವಾದ ಆಸಕ್ತಿ ಮತ್ತು ಅಭಿರುಚಿಗೆ ಸೇರಿದ್ದು. ಆಸಕ್ತಿಯಿzಗ ಕುತೂಹಲ ಮತ್ತು ಏಕಾಗ್ರತೆ ತಾನಾಗಿಯೇ ಹುಟ್ಟಿಕೊಳ್ಳುತ್ತದೆ. ಮಕ್ಕಳಲ್ಲಿ ಆಸಕ್ತಿ ಬೆಳೆಯುವಂತೆ ಮಾಡಲು ಶಿಕ್ಷಕರ ಪ್ರಯತ್ನವೂ ಗಮನಾರ್ಹವಾದುದು.

ಇನ್ನೊಂದು ಬೌದ್ಧಿಕ ಸಂಕಷ್ಟವನ್ನು ನಾನಿಲ್ಲಿ ಹೇಳಲೇಬೇಕು. ಯಾರೂ ಅನ್ಯಥಾ ಭಾವಿಸಬಾರದು. ಹಾಗಂತೆ, ಹಿಂದೆಯೆಲ್ಲ ನಮ್ಮ ಕಾಲದಲ್ಲಿ. ಅಂತ ಕಥೆ ಹೇಳುವುದಕ್ಕೆಶುರುಮಾಡುವುದಿಲ್ಲ. ಸ್ವಲ್ಪ ಯೋಚಿಸಿ ನೋಡಿ, ಈಗಲೂ ಶಿಕ್ಷಕರೆಂದರೆ ಗುರುವಿಗೆ ಸಲ್ಲಿಸುವ ಗೌರವ, ಭಕ್ತಿ, ಪೂಜನೀಯ ಭಾವದಲ್ಲಿ ಎಳ್ಳಷ್ಟೂ ಕಡಿಮೆಯಿಲ್ಲದ ಒಂದು ತಲೆಮಾರು ಇದೆ. ಅಂದರೆ ಈ ತಲೆಮಾರಿನ ಕಾಲದಲ್ಲಿ ಶಿಕ್ಷಕರೆಂದರೆ ಕೇವಲ ಶಿಕ್ಷಕರು. ಅವರಲ್ಲಿ ಯಾವುದೇ ವಿಧಗಳು ಇರಲಿಲ್ಲ. ಆದರೆ, ಇಂದು ತಲೆ ಮಾರಾಗಿದೆ. ತಲೆ ಮೂರೂ ದಾಟಿದೆ. ಅಂದರೆ, ಇಂದು ಶಿಕ್ಷಕರಲ್ಲಿ ಕೆಲವು ವೆರೈಟಿಗಳಿವೆ.

ಇದನ್ನು ರಾಜಕೀಯದಲ್ಲಿ ನೋಡುವ ಹಾಗೆ ಜಾತಿ, ಉಪಜಾತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಂತೆಯೇ  ನೋಡಬೇಕಿದೆ. ಹೇಗಿದೆ ಅದು? ನೋಡಿ.
ನಮ್ಮಲ್ಲಿ ಕೇಂದ್ರ ಸರಕಾರ ನಡೆಸುವ ನವೋದಯ ಶಾಲೆಗಳಿವೆ. ಇದರಲ್ಲಿರುವ ಶಿಕ್ಷಕರು ಒಂಥರಾ ಬ್ರಾಹ್ಮಣರ ಹಾಗೆ! ಅವರಿಗೆ ಸಿಗುವ ವೇತನ, ಬೇರೆ ಯಾವ ವೆರೈಟಿಯ ಶಿಕ್ಷಕರಿಗೂ ಸಿಗುವುದಿಲ್ಲ. ಏಕೆಂದರೆ, ರಾಜ್ಯ ಸರಕಾರಿ ನೌಕರರಿಗಿಂತ ಹೆಚ್ಚಿನ ಸಂಬಳ ಅವರದ್ದು! ಅತೀಯೆನಿಸುವಷ್ಟು ಸೌಲಭ್ಯ!
ಕೋಟೆ ಕಟ್ಟಿಕೊಂಡು ಬದುಕುವ ಹಾಗೆ ದೊಡ್ಡ ಕಂಪೌಂಡಿನ ಶಾಲಾ ಸಂಕೀರ್ಣದಲ್ಲಿ ಯಾರ ಯಾವ ಸಂಬಂಧವೂ ಇಲ್ಲದೆ ಆವರು ದ್ವೀಪದಂತೆ ಬದುಕುತ್ತಿದ್ದಾರೇನೋ ಎಂಬಂತೆ ಭಾಸವಾಗುತ್ತಾರೆ. ಇತರ ಶಿಕ್ಷಕ ಸಮುದಾಯದೊಂದಿಗೆ ಇವರು ಅಷ್ಟು ಸುಲಭವಾಗಿ ಬೆರೆಯಲಾರರು.

ಸಮೂಹದೊಂದಿಗೆ ಗುರುತಿಸಿ ಕೊಳ್ಳಬಹುದಾದದ್ದು ಎನ್ನುವಂಥ ಸಂಬಂಧ ಇದರಲ್ಲಿಯ ಶಿಕ್ಷಕರಿಗೆ ಇರುವುದಿಲ್ಲ ಎನ್ನಬಹುದು! ಇಂಥವರು ಜಾತಿವ್ಯವಸ್ಥೆಯ ದೃಷ್ಟಿಯಲ್ಲಿ ಬ್ರಾಹ್ಮಣರು, ಅಂದರೆ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಮೇಲ್ವರ್ಗಕ್ಕೆ ಸೇರಿದವರು ಎಂದು ಪರಿಗಣಿತವಾಗುತ್ತಾರೆ!
ಇನ್ನು ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಮತ್ತು ಸರಕಾರಿ ಅನುದಾನಿತ ಶಾಲೆಯ ಶಿಕ್ಷಕರು ಕ್ಷತ್ರಿಯರ ಹಾಗೆ! ಇವರು ತರಗತಿಯಲ್ಲಿ ಇರುವುದಕ್ಕಿಂತ ಹೆಚ್ಚು ಬೇರೆ ಬೇರೆ ಬಗೆಯ ಶೈಕ್ಷಣಿಕ ಕಾರ್ಯಾಗಾರಗಳು, ತರಬೇತಿಗಳು, ವಿಚಿತ್ರ ಬಗೆಯ ಪ್ರಯೋಗಗಳು, ರೆವಿನ್ಯೂ ಕೆಲಸಗಳು, ಬಿಸಿಯೂಟ, ಆಡಳಿತಾತ್ಮಕ, ಶೈಕ್ಷಣಿಕ ದಾಖಲೆಗಳನ್ನು ದಾಖಲಿಸುವುದು, ಒಂದೇ ಎರಡೇ! ಪಾಠ ಮಾಡುವುದನ್ನೇ ಮರೆತ ಇವರು ನಿತ್ಯ ಹೋರಾಟ ಗಳಲ್ಲಿ ತೊಡಗಿಕೊಂಡ ಕ್ಷತ್ರಿಯರು!

ಇನ್ನು ಸಿಬಿಎಸ್‌ಸಿ ಇಂಟರ್‌ನ್ಯಾಷನಲ್ ಸ್ಕೂಲ್ ಗಳಲ್ಲಿ ಐದಾರೇಳು ಅಂಕಿಗಳ ಸಂಬಳ ಕೊಡುವ, ಅಂತಾರಾಷ್ಟ್ರೀಯ ಮಟ್ಟದ ಪ್ರತಿಭಾ(?)ವಂತರೆಂದು ತಮ್ಮನ್ನು ತಾವೇ ಬಿಂಬಿಸಿಕೊಳ್ಳುವ ಹೈಟೆಕ್ ಶಿಕ್ಷಕರು ವೈಶ್ಯರು! ಇಲ್ಲಿ ಮ್ಯಾನೇಜ್‌ಮೆಂಟಿಗೂ ದುಡ್ಡು! ಶಿಕ್ಷಕರಿಗೂ ದುಡ್ಡು! ದುಡ್ಡು ಮಾಡುವುದೇ ಇವರ ನಿತ್ಯದ ಕೆಲಸ! ಇನ್ನು ರಾಷ್ಟ್ರೀಯ ಹೆzರಿ ಬದಿಯಲ್ಲಿರುವ ಗೂಡಂಗಡಿಗಳ ಹಾಗೆ ಇರುವ ಖಾಸಗಿ ಇಂಗ್ಲಿಷ್ ಮೀಡಿಯಮ್ಮಿನ ಶಾಲೆಗಳಲ್ಲಿ, ಅತೀ ಕಡಿಮೆ, ನಿತ್ಯದ ಬದುಕನ್ನೂ ಸಾಗಿಸಲು ಸಾಕಾಗದಷ್ಟು ಸಂಬಳ ಪಡೆಯುವ, ದಿನಗೂಲಿಯಂತೆ ಸಂಬಳ ಎಣಿಸುವ, ಅಥವಾ ತಿಂಗಳಿಗೆ ನಾಕೈದೋ,
ಏಳೆಂಟೋ ಸಾವಿರ ಪಡೆಯುವ, ಶ್ರಮಕ್ಕೆ ತಕ್ಕ ಸಂಬಳವಿಲ್ಲದ, ದುಡಿಯುವುದನ್ನೇ ಹಣೆಬರೆಹವಾಗಿ ಉಳ್ಳ ಈ ಶಿಕ್ಷಕರು ಶೂದ್ರರು!

ಎಲ್ಲದಕ್ಕೂ ಸಿಗಬಹುದಾದ ಶಿಕ್ಷಕರು ಈ ಶೂದ್ರ ಸ್ವರೂಪಿ ವ್ಯವಸ್ಥೆಯಲ್ಲಿ ಬದುಕನ್ನು ಕಟ್ಟಿಕೊಂಡವರು. ಕೊರೊನಾದಂಥ ಸಂಕಷ್ಟದಲ್ಲಿ ಇವರು ಒಂದೋ ಸಾಯುವ ನಿರ್ಧಾರ ಮಾಡಿದರು. ಇಲ್ಲ ಎಂಥ ಕೆಲಸಕ್ಕೂ ನಿರ್ಧಾರ ಮಾಡಿ ಬದುಕನ್ನು ಹೆಣಗಾಡಿ ಹೆಣಗಾಡಿ ಉಳಿಸಿಕೊಳ್ಳಲು ಶ್ರಮಿಸಿದ ವರು. ಇನ್ನು ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಿವೆ. ಪ್ರೈಮರಿ, ಹೈಸ್ಕೂಲುಗಳಿವೆ. ಇಲ್ಲಿಯ ಶಿಕ್ಷಕರ ಸಂಬಳದ ಕಥೆಗಳೆಲ್ಲ ಇದಕ್ಕೂ ಹಾರಿಬಲ್ ಆಗಿದೆ. ಮೇಲಾಗಿ, ಶಿಕ್ಷಕರಲ್ಲಿ ಸಂಘಗಳಿವೆ. ಅವುಗಳಲ್ಲೂ ಪ್ರತ್ಯೇಕತೆಯಿದೆ. ಅಂದರೆ, ಇವು ಎಲ್ಲ ಶಿಕ್ಷಕರೂ ಸೇರಿ ಮಾಡಿಕೊಂಡ ಸಂಘ ಗಳಲ್ಲ. ಆದ್ದರಿಂದ ಇವುಗಳ ಅಂತರವಿದೆ. ಸೈದ್ಧಾಂತಿಕ ಹೋರಾಟಗಳ ಸ್ವರೂಪದಲ್ಲಿ ಅಭಿಪ್ರಾಯ ಭೇದವಿದೆ. ಹೀಗೆ ಹೇಳುತ್ತಾ ಹೋದರೆ ಮುಗಿಯ ದಷ್ಟು ವಿಚಾರಗಳಿವೆ.

ಒಂದಂತೂ ಸತ್ಯ: ಶಿಕ್ಷಕರು ಅಂದರೆ ಜನರ ಮನಸಲ್ಲಿ ಒಂದು ಕಾಲದಲ್ಲಿ ಇರುವಂಥ ಘನತೆ, ಗೌರವ, ಪೂಜ್ಯಭಾವ ಈಗ ಇಲ್ಲದಿರಲು ಕಾರಣ ಶಿಕ್ಷಕರೇ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ! ಹೀಗಾಗಲು ಕಾರಣವೇನು ಎಂಬುದನ್ನು ಕಂಡುಕೊಳ್ಳುವುದು ಕೂಡ ಶಿಕ್ಷಕರ ಬೌದ್ಧಿಕ ಸಂಕಷ್ಟವಾಗಿದೆ!