Monday, 16th September 2024

ಮೋದಿಯವರ ಯಶಸ್ವಿ ಸಂವಹನದ ರಹಸ್ಯವೇನು?

ವಿಶ್ಲೇಷಣೆ
ರಜತ್ ಶರ್ಮಾ, ಇಂಡಿಯಾ ಟಿವಿ ಪ್ರಧಾನ ಸಂಪಾದಕ

ಹಲವು ದಶಕಗಳ ಕಾಲ ಪತ್ರಕರ್ತನಾಗಿ ಹಾಗೂ ಟೀವಿ ಆ್ಯಂಕರ್ ಆಗಿ ಕೆಲಸ ಮಾಡಿದ ನನ್ನನ್ನು ಜನರು ಆಗಾಗ ಕೇಳುವ ಪ್ರಶ್ನೆ ಯೊಂದಿದೆ: ರಜತ್ ಜೀ, ನಿಮ್ಮ ಫೇವರಿಟ್ ಆ್ಯಂಕರ್ ಯಾರು? ಬಹಳಷ್ಟು ಹಿರಿಯ ಆ್ಯಂಕರ್‌ಗಳಿಗೆ ಅವರದೇ ಹಳೆಯ ವರ್ಷನ್ ಇಷ್ಟ. ಅದರಲ್ಲೇ ಸ್ವಲ್ಪ ಸುಧಾರಣೆ ಮಾಡಿಕೊಂಡರೆ ನಾನೇ ಬೆಸ್‌ಟ್‌ ಆ್ಯಂಕರ್ ಎಂದು ಅವರು ಹೇಳುತ್ತಾರೆ. ಆದರೆ, ಪ್ರಾಮಾಣಿಕ ವಾಗಿ ಹೇಳಬೇಕೆಂದರೆ ಎಲ್ಲರ ಮನಸ್ಸಿನಲ್ಲೂ ಇನ್ನೊಬ್ಬ ಫೇವರಿಟ್ ಆ್ಯಂಕರ್ ಇದ್ದೇ ಇರುತ್ತಾರೆ. ನನ್ನ ಮನಸ್ಸಿನಲ್ಲೂ ಇದ್ದಾರೆ.

ಆದರೆ, ನಿಮ್ಮ ಕ್ಷೇತ್ರದ ಹೊರಗಿನ ಒಬ್ಬರು ನಿಮ್ಮೆೆದುರೇ ಅತ್ಯುತ್ತಮ ಆ್ಯಂಕರ್ ಆಗಿ ಮಿಂಚತೊಡಗಿದರೆ? ಅವರನ್ನು ಎಲ್ಲರೂ
ಕುತೂಹಲದಿಂದ ಗಮನಿಸುತ್ತಾರೆ. ನನ್ನ ಫೇವರಿಟ್ ಆ್ಯಂಕರ್ ಗಳ ಸಣ್ಣ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ವ್ಯಕ್ತಿ ಪತ್ರಕರ್ತನೂ ಅಲ್ಲ ಅಥವಾ ಟೀವಿ ಆ್ಯಂಕರ್ ಕೂಡ ಅಲ್ಲ. ಅವರು ಪ್ರಧಾನಿ ನರೇಂದ್ರ ಮೋದಿ.  ಮೋದಿ ಎಷ್ಟು ಚೆನ್ನಾಗಿ ಕಾರ್ಯಕ್ರಮ ನಡೆಸಿ ಕೊಡುತ್ತಾರೆ ಮತ್ತು ಎಂಥಾ ಅದ್ಭುತ ಕೌಶಲದೊಂದಿಗೆ ಜನರ ನಡುವೆ ಅರ್ಥಪೂರ್ಣ ಮಾತುಕತೆ ನಡೆಯುವಂತೆ ಮಾಡುತ್ತಾರೆ ಎಂಬುದಕ್ಕೆ ಇತ್ತೀಚಿನ ಉದಾಹರಣೆ ಫಿಟ್ ಇಂಡಿಯಾ ಡೈಲಾಗ್-2020.

ಜಗತ್ತಿಗೇ ಯೋಗದ ರಾಯಭಾರಿಯಾಗಿ ನಿಂತಿರುವ ಒಬ್ಬ ಉತ್ತಮ ಯೋಗಿಯಾಗಿ ಆ ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ಮೋದಿಗಿಂತ ಒಳ್ಳೆಯ ಆಯ್ಕೆ ಬೇರಾರೂ ಇರಲು ಸಾಧ್ಯವಿರಲಿಲ್ಲ. ಇನ್ನು, ತಮ್ಮ ವೃತ್ತಿಯಲ್ಲಿ ಒಂದು ದಿನವೂ ರಜೆ ತೆಗೆದು ಕೊಳ್ಳದ ಕರ್ಮಯೋಗಿಯಾಗಿ ಅವರು ಫಿಟ್‌ನೆಸ್ ಎಂಬ ಪದಕ್ಕೇ ಅನ್ವರ್ಥನಾಮದಂತಿದ್ದಾರೆ ಕೂಡ. ಹಾಗಂತ ಅಂದಿನ
ಕಾರ್ಯಕ್ರಮದ ಮಾತುಕತೆಯಲ್ಲಿ ನಮ್ಮ ಗಮನ ಸೆಳೆದ ಸಂಗತಿ ಇದ್ಯಾವುದೂ ಅಲ್ಲ.

ಅಂದಿನ ಸಂವಾದದಲ್ಲಿ ಕಾಶ್ಮೀರದ ಯುವ ಫುಟ್‌ಬಾಲ್ ಆಟಗಾರ್ತಿಯಿಂದ ಹಿಡಿದು ಕ್ರಿಕೆಟ್ ಸೂಪರ್‌ಸ್ಟಾರ್‌ವರೆಗೆ, ಪೌಷ್ಟಿ ಕಾಂಶ ತಜ್ಞರಿಂದ ಹಿಡಿದು ಯೋಗ ಗುರುಗಳವರೆಗೆ ಮೋದಿಯವರು ಪ್ರತಿಯೊಬ್ಬರ ಜೊತೆಗೂ ನಿರಾಯಾಸವಾಗಿ ಮಾತನಾಡಿ ದರು. ಅವರವರ ಕ್ಷೇತ್ರದ ಬಗ್ಗೆೆಯೇ ಅವರ ಜೊತೆಗೆ ಸಂವಾದ ನಡೆಸಿದರು. ಬದುಕಿನ ಬೇರೆ ಬೇರೆ ರಂಗಗಳ ಜನರ ಜೊತೆಗೆ ಅವರು ಅವರು ಎಷ್ಟು ಚೆನ್ನಾಗಿ ಕನೆಕ್ಟ್‌ ಆಗುತ್ತಾರೆಂಬುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ನಾನು ಬಹಳ ಹಿಂದೆಯೇ ಅವರಲ್ಲಿ ಈ ಗುಣವನ್ನು ಗಮನಿಸಿದ್ದೇನೆ. ಈಗಂತೂ ಎಲ್ಲರೂ ಅದನ್ನು ನೋಡಬಹುದು.

ಮೋದಿ ಮಾತನಾಡುವಾಗ ಸ್ಫುರಿಸುವ ಬೆಚ್ಚನೆಯ ಭಾವದಿಂದಾಗಿ ಜನರಿಗೆ ಅವರ ಜೊತೆ ಮಾತು ಆರಂಭಿಸುವುದು ಬಹಳ ಸುಲಭವಾಗುತ್ತದೆ. ಅವರ ಜೊತೆ ಸಂಪರ್ಕ ಸಾಧಿಸುವುದು ಹಾಗೂ ಸಂವಹನ ನಡೆಸುವುದು ಸುಲಭವಾಗಿರುವುದರಿಂದ ಅವರೊಂದಿಗೆ ಮಾತನಾಡುವ ವ್ಯಕ್ತಿ ಬೇಗ ತಮ್ಮನ್ನು ತಾವು ಮುಕ್ತವಾಗಿ ತೆರೆದುಕೊಳ್ಳುತ್ತಾರೆ. ಮೋದಿ ಎಷ್ಟು ಆಪ್ತವಾಗಿ ಮಾತು ಕತೆ ನಡೆಸುತ್ತಾರೆಂದರೆ ಅವರ ಜೊತೆಗೆ ಮಾತನಾಡುವವರಿಗೆ ತಾವು ಬಹುದೊಡ್ಡ ನಾಯಕನೊಬ್ಬನ ಜೊತೆಗೆ ಮಾತನಾಡು ತ್ತಿದ್ದೇವೆ ಎಂಬುದೇ ಮರೆತುಹೋಗಿರುತ್ತದೆ. ಉದಾಹರಣೆಗೆ, ಅಂದಿನ ಫಿಟ್ ಇಂಡಿಯಾ ಸಂವಾದದಲ್ಲಿ ಮೋದಿಯವರು ಮಿಲಿಂದ್ ಸೋಮನ್ ಜೊತೆ ಅವರ ವಯಸ್ಸಿನ ಬಗ್ಗೆ ಜೋಕ್ ಮಾಡಿದರು. ಫುಟ್‌ಬಾಲ್ ಆಟಗಾರ್ತಿ ಜೊತೆ ಮಾತನಾಡುವಾಗ ‘ಏಸ್ ಇಟ್ ಲೈಕ್ ಅಫ್ಶಾನ್’ ಎಂಬ ಗಾದೆಯನ್ನೇ ಹೆಣೆದುಬಿಟ್ಟರು.

ವಿರಾಟ್ ಕೊಯ್ಲಿ ಬಳಿ ಯೋ-ಯೋ ಟೆಸ್ಟ್‌ ಬಗ್ಗೆೆ ಕೇಳಿ ತಿಳಿದುಕೊಂಡರು. ಮನ್ ಕಿ ಬಾತ್ ಆರಂಭಿಸಿದಾಗ ಬಹಳ ಜನರು ಅದು
ತಿಂಗಳಿಗೊಮ್ಮೆ ಮೋದಿ ರೇಡಿಯೋದಲ್ಲಿ ಮಾಡುವ ಭಾಷಣವಾಗಿರುತ್ತದೆ ಎಂದು ಭಾವಿಸಿದ್ದರು. ಆದರೆ, ಮೋದಿ ಅದನ್ನೊಂದು ಸಂವಾದವಾಗಿ ಪರಿವರ್ತಿಸಿ ಬಿಟ್ಟಿದ್ದಾರೆ. ಆ ಕಾರ್ಯಕ್ರಮದಲ್ಲಿ ಅವರೇ ಆ್ಯಂಕರ್ ಆಗುವ ಮೂಲಕ ಜನಸಾಮಾನ್ಯರ ಯಶಸ್ಸಿನ ಕತೆಗಳನ್ನು ಎಲ್ಲರೆದುರು ತೆರೆದಿಡುತ್ತಾರೆ. ಅದರಲ್ಲೂ ಅವರು ಜನರ ಜೊತೆಗೆ ಮಾತನಾಡುವಾಗ ಒಬ್ಬ ಶಾಂತ ಸ್ವಭಾವದ ಬುದ್ಧಿವಂತ ಆ್ಯಂಕರ್ ರೀತಿ ಮಾತನಾಡುತ್ತಾರೆ. ಅವರು ನಡೆಸುವ ಸಂವಾದಗಳು ಎಲ್ಲರನ್ನೂ ಒಳಗೊಳ್ಳುವಂತಿರುತ್ತವೆ. ಎಲ್ಲರನ್ನೂ ಒಳಗೊಳ್ಳುವ ಸಂವಾದ ಯಾವಾಗ ಸಾಧ್ಯವೆಂದರೆ ಸಂವಾದದಲ್ಲಿ ಪಾಲ್ಗೊಂಡವರೆಲ್ಲ ಮುಕ್ತ ಮನಸ್ಸಿನಿಂದ ಪರಸ್ಪರರಿಂದ ಕಲಿಯುವ ಮನಸ್ಸು ಹೊಂದಿದ್ದಾಗ. ಇನ್ನೊಬ್ಬರ ಮಾತಿನಲ್ಲಿ ನಾನು ಕಲಿಯುವಂಥದ್ದೇನಾದರೂ ಇರಬಹುದು ಎಂದು ಯೋಚಿಸುವ ಸಾಮರ್ಥ್ಯವೇ ವ್ಯಕ್ತಿಯೊಬ್ಬನನ್ನು ಒಳ್ಳೆಯ ಕೇಳುಗನನ್ನಾಗಿ ಮಾಡುತ್ತದೆ.

ಮೋದಿಯವರಲ್ಲಿರುವ ಅದ್ಭುತ ಸಂವಹನ ಶಕ್ತಿಗೆ ಬಹುಮುಖ್ಯ ಕಾರಣವೆಂದರೆ ಅವರು ತಮ್ಮನ್ನು ಯಾವಾಗಲೂ ಒಬ್ಬ ವಿದ್ಯಾರ್ಥಿ ಎಂದುಕೊಳ್ಳುತ್ತಾರೆ. ಅವರು ಪ್ರಧಾನ ಮಂತ್ರಿಯೇ ಆಗಿರಬಹುದು, ಆದರೂ ಸಣ್ಣವರು, ದೊಡ್ಡವರು ಹೀಗೆ ಪ್ರತಿ ಯೊಬ್ಬರಿಂದಲೂ ತಾನು ಏನಾದರೂ ಕಲಿಯುವುದಿದೆ ಎಂದು ಭಾವಿಸುತ್ತಾರೆ. ಒಬ್ಬ ಒಳ್ಳೆಯ ಆ್ಯಂಕರ್ ಆದವನು ಬೇರೆ
ಬೇರೆ ಕ್ಷೇತ್ರಗಳ ಜನರನ್ನು ಮಾತುಕತೆಯಲ್ಲಿ ಹಿಡಿದಿಡುವಷ್ಟಾದರೂ ಆಯಾ ಕ್ಷೇತ್ರಗಳ ಬಗ್ಗೆ ಒಂದಷ್ಟು ತಿಳಿವಳಿಕೆ ಹೊಂದಿರ ಬೇಕು. ಇದು ಸಾಧ್ಯವಾಗಬೇಕು ಅಂದರೆ ಅವರು ಒಳ್ಳೆಯ ಕೇಳುಗರಾಗಿರಬೇಕು.

ತಾನೊಬ್ಬ ನಿರಂತರ ವಿದ್ಯಾರ್ಥಿ ಎಂದು ಮೋದಿ ಭಾವಿಸಿರುವುದರಿಂದ ಅವರು ಬಹಳ ಸುಲಭವಾಗಿ ಜನರ ಜೊತೆಗೆ
ಮಾತನಾಡುತ್ತಾರೆ. ಇನ್ನು, ಮೋದಿಯವರಿಗೆ ಬಹಳಷ್ಟು ವಿಷಯದ ಬಗ್ಗೆ ಉತ್ತಮ ಜ್ಞಾನವಿದೆ. ಭಾರತದ ಬಹುತೇಕ ಎಲ್ಲಾ
ಜಿಲ್ಲೆಗಳಲ್ಲೂ ಒಂದಷ್ಟಾದರೂ ಸಮಯ ವನ್ನು ತಾನು ಕಳೆದಿರುವುದಾಗಿ ಅವರೇ ಬಹಳ ಸಲ ಹೇಳಿಕೊಂಡಿದ್ದಾರೆ. ಬಿಜೆಪಿಯಲ್ಲಿ ರಾಷ್ಟ್ರೀಯ ಜವಾಬ್ದಾರಿ ವಹಿಸಿಕೊಳ್ಳುವುದಕ್ಕಿಂತ ಮುಂಚೆ ಅವರು ಇಡೀ ದೇಶ ಸುತ್ತುತ್ತಿದ್ದರು. ಎಲ್ಲಾ ವಿಧದ ಜನರ ನಡುವೆ ಬದುಕಿ, ಅವರ ಜೊತೆ ಬೆರೆತಿರುವುದರಿಂದ ಅವರಿಗೆ ದೇಶದ ವೈವಿಧ್ಯಮಯ ಜನರು ಹಾಗೂ ಸಂಸ್ಕೃತಿಗಳ ಬಗ್ಗೆ ಅಪಾರ ತಿಳಿವಳಿಕೆಯಿದೆ. ಈ ತಿಳಿವಳಿಕೆಯನ್ನು ಯಾರೂ ಪುಸ್ತಕ ಅಥವಾ ದಿನಪತ್ರಿಕೆಯಿಂದ ಗಳಿಸಲು ಸಾಧ್ಯವಿಲ್ಲ. ಇದು ಪ್ರಾಯೋಗಿಕ
ಜ್ಞಾನ. ಒಬ್ಬ ಉತ್ತಮ ಪತ್ರಕರ್ತ ಹಾಗೂ ಆ್ಯಂಕರ್ ಆಗುವುದಕ್ಕೆ ಬೇಕಾದ ಗುಣವೂ ಇದೇ ಆಗಿದೆ. ಹೊರಗಿನ ಬಿಸಿಲು ಹಾಗೂ ಧೂಳಿಗೆ ಇಳಿದು ವರದಿ ಮಾಡಿದ ಅನುಭವವಿರುವ ಆ್ಯಂಕರ್‌ಗೂ ಕೇವಲ ಸ್ಟುಡಿಯೋದಲ್ಲಿ ಕುಳಿತು ವರದಿ ಮಾಡಿದ ಆ್ಯಂಕರ್‌ಗೂ ಬಹಳ ವ್ಯತ್ಯಾಸವಿದೆ.

ನೀತಿ ಆಯೋಗ ಇತ್ತೀಚೆಗೆ ಆಯೋಜಿಸಿದ್ದ ಸಂವಾದವೊಂದರಲ್ಲಿ ಮೋದಿ ಕೆಲ ಅಧಿಕಾರಿಗಳು ಹಾಗೂ ತಂತ್ರಜ್ಞರ ಜೊತೆಗೆ ಸ್ಕಿಲ್ ಮ್ಯಾಪಿಂಗ್ ಮತ್ತು ಉದ್ಯೋಗ ಸಂಬಂಧಿ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. ಜನರಿಗೆ ಕೌಶಲ್ಯ ಕೊಡಿಸುವುದು, ಅವರನ್ನು ಉದ್ಯೋಗಕ್ಕೆ ಅರ್ಹರನ್ನಾಗಿಸುವುದು, ಔದ್ಯೋಗಿಕ ಕ್ಲಸ್ಟರ್‌ಗಳಲ್ಲಿನ ಸಾಮಾಜಿಕ ಮೂಲಸೌಕರ್ಯ, ನೌಕರರನ್ನು ಹೇಗೆ ನೋಡಿ ಕೊಳ್ಳುತ್ತಾರೆ ಎಂಬುದರ ಆಧಾರದ ಮೇಲೆ ಕಂಪನಿಗಳಿಗೆ ನೀಡುವ ರೇಟಿಂಗ್ ಹಾಗೂ ಹೊಸತಾಗಿ ತಲೆಯೆತ್ತುತ್ತಿರುವ ಔದ್ಯೋಗಿಕ ಕ್ಲಸ್ಟರ್‌ಗಳಿಗೆ ಅಗತ್ಯರುವ ಮಾನವ ಸಂಪನ್ಮೂಲ ಹೀಗೆ ನಿರ್ದಿಷ್ಟ ವಿಷಯಗಳ ಬಗ್ಗೆ ಮೋದಿ ನಿಖರವಾಗಿ ಪ್ರಶ್ನೆಗಳನ್ನು ಕೇಳಿ ದ್ದನ್ನು ನೋಡಿ ನನಗೆ ಅಚ್ಚರಿಯಾಯಿತು.

ನಿಖರ ಪ್ರಶ್ನೆಗಳು ಹಾಗೂ ಉತ್ತಮ ಮಾಹಿತಿಗಳನ್ನು ನೀಡುವ ಮೂಲಕ ಅವರು ಆ ಸಂವಾದದ ಘನತೆಯನ್ನೇ ಮತ್ತೊಂದು ಎತ್ತರಕ್ಕೆ ಏರಿಸಿದರು. ಸಂವಾದದಲ್ಲಿ ಪಾಲ್ಗೊಂಡವರು ಕೂಡ ಕೊನೆಗೆ ನಾವು ಇನ್ನಷ್ಟು ಆಳವಾಗಿ ಈ ಬಗ್ಗೆ ಯೋಚಿಸಬೇಕಿದೆ ಎಂದು ಹೇಳಿದರು. ಕರೋನಾ ವೈರಸ್ ಬಗ್ಗೆ ಅವರು ಮಾಧ್ಯಮಗಳು, ವೈದ್ಯರು ಹಾಗೂ ಸಮಾಜದ ವಿವಿಧ ರಂಗದಲ್ಲಿರುವವರ
ಜೊತೆಗೆ ನಡೆಸಿದ ಸಂವಾದದಲ್ಲೂ ಇದೇ ಟ್ರೆಂಡ್ ಕಾಣಬಹುದು. ನಿಖರವಾದ ಮಾಹಿತಿಗಳನ್ನು ಕೈಲಿಟ್ಟುಕೊಂಡೇ ಅವರು ಮಾತನಾಡುತ್ತಾರೆ. ತಮ್ಮ ಜೊತೆಗೆ ಮಾತನಾಡುತ್ತಿರುವವರು ಏನು ಮಾಡುತ್ತಿದ್ದಾರೋ ಅದನ್ನು ಅವರು ಏಕೆ ಮಾಡುತ್ತಿದ್ದಾ ರೆಂಬುದನ್ನು ಅವರಿಗೇ ಮನದಟ್ಟು ಮಾಡಿಸುತ್ತಾರೆ.

ಭಾರತೀಯರಿಗೆ ಮಾತನಾಡುವುದೆಂದರೆ ಬಹಳ ಇಷ್ಟ. ಆದ್ದರಿಂದಲೇ ಮೋದಿಯವರ ಫಿಟ್ ಇಂಡಿಯಾ ಡೈಲಾಗ್ ಇರಲಿ ಅಥವಾ ಮನ್ ಕಿ ಬಾತ್ ಇರಲಿ ಅಥವಾ ಅವರು ನಡೆಸಿಕೊಡುವ ಅಂತಹ ಇನ್ನಾವುದೇ ಸಂವಾದ ಕಾರ್ಯಕ್ರಮಗಳಿರಲಿ, ಅವುಗಳನ್ನು ಜನರು ಆಸಕ್ತಿಯಿಂದ ಗಮನಿಸುತ್ತಾರೆ. ಅದಕ್ಕೆ ಮೂಲ ಕಾರಣ ಮೋದಿಯೇ ಎಂಬುದು ಬೇರೆ ವಿಷಯ! ಉತ್ತಮ
ವಾಗ್ಮಿಗಳೆಲ್ಲ ಸಮೂಹ ಸಂವಹನದಲ್ಲಿ ತಜ್ಞರಾಗಿರುತ್ತಾರೆ. ಇವೆರಡರ ನಡುವೆ ಹತ್ತಿರದ ಸಂಬಂಧವಿದೆ. ಆದರೆ, ಮೋದಿ ಯವರದು ಇನ್ನೂ ಅಪರೂಪದ ತಳಿ. ಅವರು ಉತ್ತಮ ಭಾಷಣಕಾರ ಹಾಗೂ ಸಮೂಹ ಸಂವಹನಕಾರ ಎಂಬುದರ ಜೊತೆಗೆ ಅವರೊಬ್ಬ ಅದ್ಭುತ ನಿವಾರ್ಹಕನೂ ಹೌದು. ಬಹುವಿಧದ ಸಂವಹನವನ್ನು ಅವರು ಅತ್ಯುತ್ತಮವಾಗಿ ನಿಭಾಯಿಸುತ್ತಾರೆ.

ಇತ್ತೀಚೆಗೆ ಸುದ್ದಿವಾಹಿನಿಗಳ ಸ್ಟುಡಿಯೋಗಳಲ್ಲಿ ಗದ್ದಲ ಹೆಚ್ಚುತ್ತಿದೆ. ಆ್ಯಂಕರ್‌ಗಳು ತಮ್ಮ ಸಂಪರ್ಕಕ್ಕೆ ಬರುವವರ ಮೇಲೆ ಮುಗಿಬೀಳುತ್ತಿದ್ದಾರೆ. ಅವರೆಲ್ಲ ಮೋದಿಯವರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಕನಿಷ್ಠ ಪಕ್ಷ ಉತ್ತಮ ಮಾಹಿತಿ ಸಂಗ್ರಹ, ತಯಾರಿ ಹಾಗೂ ಸ್ಥಿರತೆಯನ್ನಾದರೂ ರೂಢಿಸಿಕೊಂಡರೆ ತಾವು ಒಳ್ಳೆಯ ಸಂವಾದ ನಡೆಸಬಹುದು ಎಂಬುದನ್ನಾದರೂ
ಅವರು ಮೋದಿಯವರನ್ನು ನೋಡಿ ಕಲಿಯಲಿ.

Leave a Reply

Your email address will not be published. Required fields are marked *