Monday, 16th September 2024

ಅಲ್ಲಿ ಬಡತನ ಇದೆ, ಆದ್ರೆ ನಂಬಲಾಗದಂಥ ಶ್ರೀಮಂತಿಕೆಯೂ ಕಾಣಬಹುದು !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

ಅವು 1990ರ ಕೊನೆಯ ದಿನಗಳು. ಅಮೆರಿಕದ ನೆಬ್ರಸ್ಕಾದ ವೈದ್ಯಾಧಿಕಾರಿ ಸ್ಟೀಫನ್ ಲೂಬಿ ಪಾಕಿಸ್ತಾನದ ಕರಾಚಿಗೆ ಹೊರಟ. ತಕ್ಷಣ ಅಲ್ಲಿಂದ ವಾಪಸ್ ಬರುವುದು ಅವನ ಉದ್ದೇಶವಾಗಿರಲಿಲ್ಲ. ತಾನು ಅಂದುಕೊಂಡ ಕಾರ್ಯ ಈಡೇರುವ ತನಕ, ಕರಾಚಿ ಯಲ್ಲಿಯೇ ಇರಬೇಕು ಎಂದು ಅವನು ನಿರ್ಧರಿಸಿದ್ದರಿಂದ ಒನ್ – ವೇ ಟಿಕೆಟ್ ಖರೀದಿಸಿದ್ದ.

ನಿಮಗೆ ಗೊತ್ತಿರಬಹುದು, ಕರಾಚಿ ಜಗತ್ತಿನಲ್ಲಿಯೇ ಅತ್ಯಂತ ಜನಸಾಂದ್ರತೆ ಇರುವ ನಗರ. ಪಾಕಿಸ್ತಾನದ ಸಿಂಧ್ ಪ್ರಾಂತದ ರಾಜಧಾನಿಯಾಗಿರುವ ಕರಾಚಿಯ ಜನಸಂಖ್ಯೆ ಎರಡು ಕೋಟಿ ಹದಿನೈದು ಲಕ್ಷಕ್ಕಿಂತ ಅಧಿಕ. ಜಗತ್ತಿನ ಐದನೆಯ ಅತಿ ಹೆಚ್ಚು ಜನ ವಾಸ ಮಾಡುವ ಕುಖ್ಯಾತಿ ಹೊಂದಿರುವ ಈ ನಗರದಲ್ಲಿ ಅರವತ್ತು ಲಕ್ಷಗಳಿಗಿಂತ ಅಧಿಕ ಮನೆಗಳಿವೆ. ಅವುಗಳ ಪೈಕಿ ಅರ್ಧದಷ್ಟು ಮನೆಗಳನ್ನು ಮನೆಗಳು ಎಂದು ಕರೆದರೆ ಅಣಕ ಮಾಡಿದಂತೆ. ಇದು ಪಾಕಿಸ್ತಾನದ ಅತ್ಯಂತ ಕ್ರಿಯಾಶೀಲ ಮತ್ತು ಹೆಚ್ಚು ಹಣಕಾಸು ವಹಿವಾಟು ನಡೆಯುವ ನಗರವೂ ಹೌದು.

ಹಲವು ಕೈಗಾರಿಕೆಗಳು ಸಹ ಇಲ್ಲಿವೆ. ದೇಶದ ಜಿಡಿಪಿಗೆ ಶೇಕಡಾ 20ರಷ್ಟು ಈ ನಗರವೊಂದೇ ನೀಡುತ್ತದೆ. ವಿಮಾನ ನಿಲ್ದಾಣ, ಬಂದರು ಇರುವ ಈ ನಗರದಲ್ಲಿ ಅತಿ ಶ್ರೀಮಂತರು ಮತ್ತು ಕಡುಬಡವರು ಮಾತ್ರ ಇರುವುದು. ಅಲ್ಲಿ ಆ ಎರಡು ವೈರುಧ್ಯಗಳನ್ನು
ಒಂದೆಡೆ ನೋಡಬಹುದು. ನಗರದ ಕೆಲವೆಡೆ ಅತ್ಯಂತ ಶ್ರೀಮಂತ ಬಡಾವಣೆಗಳನ್ನು ಕಾಣಬಹುದು. ಕರಾಚಿಯ ಕೆಲವು ಕಡೆ ಓಡಾಡಿದರೆ ಅಲ್ಲಿ ಬಡತನ ಇದೆ ಆದ್ರೆ ನಂಬಲಾಗದಂಥ ಶ್ರೀಮಂತಿಕೆಯನ್ನು ಕಾಣಬಹುದು.

ಆ ನಗರದ ಶೇಕಡಾ ಅರವತ್ತರಷ್ಟು ಜನಸಂಖ್ಯೆ ಕೊಳಗೇರಿ, ವಸಾಹತುಗಳಲ್ಲಿ ವಾಸಿಸುತ್ತಾರೆ. ಆ ಮನೆಗಳನ್ನು ಹಳೆ ಬೋರ್ಡ್‌ ಗಳು, ಬೂಸಿಯ ಬ್ಲಾಕುಗಳು, ಪ್ಲಾಸ್ಟಿಕ್, ತಗಡು, ಶೀಟುಗಳಿಂದ ನಿರ್ಮಿಸಲಾಗಿದೆ. ಈ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಗಳಿಲ್ಲ. ವಿದ್ಯುಚ್ಛಕ್ತಿಯೂ ಇಲ್ಲ. ಶೌಚಾಲಯಗಳಿಲ್ಲ. ಒಂದು ಮನೆಯಲ್ಲಿ ಆರರಿಂದ ಹನ್ನೆರಡು ಜನ ವಾಸಿಸುತ್ತಾರೆ. ಹೊರಗಿನ ವರು ಇಲ್ಲಿನ ನೀರನ್ನು ಕುಡಿದರೆ ನೂರಕ್ಕೆ ನೂರು ಜಲಜನ್ಯ ರೋಗಗಳಿಂದ ಕಾಯಿಲೆ ಬೀಳುತ್ತಾರೆ. ಇಡೀ ನಗರದಲ್ಲಿ ಧೂಳೋ ಧೂಳು. ಮಳೆಗಾಲದಲ್ಲಿ ಇಡೀ ನಗರ ಕೆಸರು ಗzಯಂತೆ ಗೋಚರಿಸುತ್ತದೆ.

ಬಾಕಿ ಉಳಿದ ದಿನಗಳಲ್ಲಿ ಅಸಹನೀಯವೆನಿಸುವ ಧೂಳು. ಕೊಳಗೇರಿಗಳಲ್ಲಿ ಕಸವೋ ಕಸ. ರಾತ್ರಿಯಾಯಿತೆಂದರೆ ಹೆಜ್ಜೇನು ಪಡೆಗಳಂತೆ ಗೋಚರಿಸುವ ಸೊಳ್ಳೆಗಳು. ಭೂಮಿಯ ಮೇಲಿನ ನರಕ ನೋಡಬೇಕೆನಿಸಿದರೆ, ಈ ನಗರದ ಕೆಲವು ಬಡಾವಣೆಗಳಿಗೆ ಹೋಗಬೇಕು. ಮನುಷ್ಯ ಮಾತ್ರದವರು ಬದುಕುಳಿಯಲು ಸಾಧ್ಯವಿಲ್ಲ. ಹೊರಗಿನ ವರು ಇಲ್ಲಿ ಬಂದು ಉಳಿದರೆ ಎರಡು ದಿನ ಗಳಲ್ಲಿ ಕಾಯಿಲೆ ಬೀಳುತ್ತಾರೆ. ಮಲೇರಿಯಾ, ವಾಂತಿ-ಭೇದಿ, ಹೊಟ್ಟೆ ನೋವು, ಕಣ್ಣುರಿ, ಕಾಮಾಲೆ, ಆನೆ ಕಾಲು ರೋಗ, ಪೋಲಿಯೋ ಈ ಕೊಳಗೇರಿಗಳಲ್ಲಿ ಸಾಮಾನ್ಯ. ಮೂರರಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ.

ಅಷ್ಟೊಂದು ಭಾರಿ ಸಂಖ್ಯೆಯ ಜನ, ಅಷ್ಟು ಸಣ್ಣ ಜಾಗದಲ್ಲಿ ಒತ್ತಟ್ಟಿಗೆ ಬದುಕುತ್ತಿರುವುದರಿಂದ, ವೈರಸ್ ಮತ್ತು ಬ್ಯಾಕ್ಟೀರಿಯಾ ಸೋಂಕು ಸಾಮಾನ್ಯ. ಯಾವ ಕೋನದಿಂದ ನೋಡಿದರೂ, ಅದು ವಾಸಯೋಗ್ಯ ನಗರವೇ ಅಲ್ಲವೇ ಅಲ್ಲ. ಸ್ಟೀಫನ್ ಲೂಬಿ ಮತ್ತು ಅವನ ತಂಡ ಬಂದಿಳಿದಾಗ, ಕರಾಚಿ ನಗರವನ್ನು ನೋಡಿ ಕಂಗಾಲಾಗಿ ಹೋದರು. ಈ ನಗರವನ್ನು ಸುಧಾರಿಸುವುದಿರಲಿ, ಅಲ್ಲಿ ಸುರಕ್ಷಿತವಾಗಿ ಬದುಕುವುದು ಸಹ ಸಾಧ್ಯವೇ ಇಲ್ಲ ಎಂದು ಆ ಕ್ಷಣದಲ್ಲಿ ಅವರಿಗೆ ಅನಿಸಿತು. ಅವರ ತಂಡದಲ್ಲಿದ್ದ ಇಬ್ಬರು, ಬದುಕಿದರೆ ಗಾಳಿ ಕುಡಿದುಕೊಂಡಾದರೂ ಜೀವಿಸಬಹುದು, ಆದರೆ, ಕರಾಚಿಯಲ್ಲಿ ಮಾತ್ರ ಉಳಿಯುವುದು ಸಾಧ್ಯವೇ ಇಲ್ಲ, ಇನ್ನು ಆ ಜನರ ಜೀವನ ಅಭ್ಯಾಸವನ್ನು ಬದಲಿಸುವುದು ದೂರವೇ ಉಳಿಯಿತು ಎಂದು ವಾಪಸ್ ಹೊರಟು ಹೋದರು. ಆದರೆ, ಕರಾಚಿ ನಗರದ ಚಿತ್ರಣ ನೋಡಿ

ಲೂಬಿಯ ಜಂಘಾಬಲವೇ ಉಡುಗಿ ಹೋಯಿತು. ಈ ನಗರದಲ್ಲಿ ಮುಂದಿನ ಒಂದು ವರ್ಷ ಕಳೆಯುವುದು ಹೇಗೆ ಎಂಬ ಚಿಂತೆ ಅವನನ್ನು ಗಾಢವಾಗಿ ಕಾಡಲಾರಂಭಿಸಿತು. ಆದರೆ, ಅವನ ಮುಂದೆ ಒಂದು ದಿವ್ಯ ಸಂಕಲ್ಪವಿತ್ತು. ಆತ ಒಂದು ಮಹಾನ್ ಹೋರಾಟಕ್ಕೆ ತನ್ನನ್ನು ಸಮರ್ಪಿಸಿಕೊಂಡಿದ್ದ. ಹೀಗಾಗಿ ಏನೇ ಆದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಗಟ್ಟಿ ಮನಸ್ಸು ಮಾಡಿ, ಅಲ್ಲಿಯೇ ಇರಲು ನಿರ್ಧರಿಸಿದ.

ಲೂಬಿಗೆ ಎಲ್ಲಿಂದ ಕೆಲಸ ಆರಂಭಿಸುವುದು ಎಂಬುದು ಅರ್ಥವೇ ಆಗಲಿಲ್ಲ. ಒಂದು ವಾರ ಇಡೀ ಕರಾಚಿ ನಗರವನ್ನು ಸುತ್ತಿದ. ಕೊಳೆಗೇರಿ ಪ್ರದೇಶಗಳಲ್ಲಿ ಹದಿನೈದು ದಿನಗಳ ಕಾಲ ಕಾಲ್ನಡಿಗೆಯಲ್ಲಿ ಸುತ್ತಿದ. ಸ್ವತಃ ದೇವರೇ ಬಂದರೂ ಈ ಜನರನ್ನು ಬದಲಿಸಲು ಸಾಧ್ಯವೇ ಇಲ್ಲ ಎಂದು ಅವನಿಗೆ ಅನಿಸಿತು. ಕಾರಣ ಅವರಲ್ಲಿ ಶೇಕಡಾ ಎಪ್ಪತ್ತರಷ್ಟು ಮಂದಿ ಅಶಿಕ್ಷಿತರಾಗಿದ್ದರು. ಅಂಥವರ ಬದುಕಿನಲ್ಲಿ ಸಣ್ಣ ಬದಲಾವಣೆ ಮಾಡುವುದು ಸಹ ಅಸಾಧ್ಯವೆಂದು ಅವನಿಗೆ ಅನಿಸಿತು.

ಕೊಳಕು ಪರಿಸರದಲ್ಲಿ ಹುಟ್ಟಿ, ಅದೇ ಪರಿಸರದಲ್ಲಿ  ಜೀವಿಸುತ್ತಿರುವ, ಅದೇ ಪರಿಸರದಲ್ಲಿ ಇಷ್ಟು ವರ್ಷಗಳ ಕಾಲ ಬದುಕು ಸಾಗಿಸಿದವರ ಮುಂದೆ ಸ್ವಚ್ಛತೆಯ ಪಾಠ ಹೇಳಿದರೆ ಅವರಿಗೆ ಅರ್ಥವಾಗುವುದಾದರೂ ಹೇಗೆ ಎಂದು ಅವನಿಗೆ ಬಲವಾಗಿ ಅನಿಸಲಾರಂಭಿಸಿತು. ಹೊಲಸಿನಲ್ಲಿ ಮುಳುಗಿ ತೇಲುವ ಹಂದಿಗಳಿಗೆ ಸ್ವಚ್ಛತೆ ಪಾಠ ಮಾಡಿದರೆ ಅರ್ಥವಾಗುವುದುಂಟೇ?
ಲೂಬಿ ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟ!

ಆದರೆ, ಹಿಂದಕ್ಕೆ ಹೆಜ್ಜೆ ಇರಿಸುವ ಪ್ರಶ್ನೆಯೇ ಇರಲಿಲ್ಲ. ತನ್ನ ಮೇಲಿರುವ ಸವಾಲಿನ ಅಗಾಧತೆಯ ಪ್ರಮಾಣವನ್ನು ಮತ್ತೆ ಮತ್ತೆ ಧೇನಿಸಿಕೊಂಡ. ಎಲ್ಲಿಂದಲೋ ಕೆಲಸ ಆರಂಭಿಸಲೇಬೇಕಿತ್ತು. ಆದರೆ, ತನ್ನ ಕಾರ್ಯದಲ್ಲಿ ತಾನು ಗುರಿ ಮುಟ್ಟಿಯೇ ಮುಟ್ಟುತ್ತೇನೆ ಎಂಬ ಭರವಸೆಯ ಗಿಡಕ್ಕೆ ನೀರೆರೆದು, ಕೆಲಸ ಶುರು ಮಾಡಿಕೊಂಡ. ಕೊಳೆಗೇರಿಗಳಲ್ಲಿ ವಾಸಿಸುವ ಕೋಟ್ಯಂತರ ಜನ, ದಿನವೂ ಸ್ನಾನ ಮಾಡುತ್ತಿರಲಿಲ್ಲ. ಅಲ್ಲದೇ ಕೆಲವರು ದಿನಕ್ಕೊಮ್ಮೆ ಸ್ವಚ್ಛವಾಗಿ ಕೈತೊಳೆಯುತ್ತಿರಲಿಲ್ಲ. ಸ್ನಾನ ಮಾಡಿಸುವುದಕ್ಕಿಂತ ಇವರಲ್ಲಿ ಪ್ರತಿದಿನ ನಾಲ್ಕು ಸಲ ಕ್ಲೀನಾಗಿ ಕೈತೊಳೆಯುವುದನ್ನು ಅಭ್ಯಾಸ ಮಾಡಿಸಿದರೆ, ತಾನು ಅರ್ಧ ಗೆದ್ದಂತೆ ಎಂದು ಅವನಿಗೆ ಅನಿಸಿತು. ಇದೊಂದು ಕ್ರಿಯೆಯಲ್ಲಿ ಯಶಸ್ವಿಯಾದರೆ, ಅವರಲ್ಲಿ ಸ್ವಚ್ಛತೆ ಬಗ್ಗೆ ಅಗಾಧ ಬದಲಾವಣೆ ತರಬಹುದು ಎಂದು ಅವನಿಗೆ ಅನಿಸಿತು.

ಅಲ್ಲದೇ ಕೈತೊಳೆಯುವುದರ ಬಗ್ಗೆ ಅವರಿಗೆ ಪಾಠ ಮಾಡಿದರೆ, ಅವರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಅವರ ಮನವೊಲಿಸುವುದು ಸುಲಭವಾಗಿತ್ತು. ಲೂಬಿ ಮತ್ತು ಅವನ ಗೆಳೆಯರು ಆ ಕೊಳೆಗೇರಿಗಳಿಗೆ ಹೋಗಿ ತಮ್ಮನ್ನು ‘ಕೈ ಹಿಡಿಯುವ ಸ್ನೇಹಿತರು’ ಎಂದು ಪರಿಚಯಿಸಿಕೊಂಡು, ನಿಧಾನವಾಗಿ ಅವರಲ್ಲಿ ವಿಶ್ವಾಸ ಮೂಡಿಸಿಕೊಂಡು, ಯಾಕೆ ಕೈ ತೊಳೆಯಬೇಕು, ಅದರಿಂದ ಹೇಗೆ ರೋಗಗಳು ಹರಡುವುಡನ್ನು ತಡೆಗಟ್ಟಬಹುದು, ಪ್ರತಿದಿನ ನಮ್ಮ ಕೈಯಿಂದ ಎಷ್ಟು ರೋಗಾಣುಗಳು ಹರಡುತ್ತವೆ ಮುಂತಾದ ಸರಳ ವಿಷಯಗಳ ಬಗ್ಗೆ ಸುಲಭವಾಗಿ ವಿವರಿಸಲಾರಂಭಿಸಿದರು.

ನೀವೆಲ್ಲ ಸಾಬೂನಿಂದ ಕೈ ತೊಳೆಯಬೇಕು ಎಂದು ಹೇಳಿದರೆ ಅವರು ಕೇಳಿ ಸುಮ್ಮನಾಗುತ್ತಿದ್ದರೇನೋ? ಆದರೆ, ಲೂಬಿ ಒಂದು ಉಪಾಯ ಮಾಡಿದ್ದ. ಪ್ರಾಕ್ಟರ್ ಅಂಡ್ ಗ್ಯಾಂಬಲ್ ಬಹುರಾಷ್ಟ್ರೀಯ ಕಂಪನಿ ಜತೆ ಮಾತಾಡಿ, ಉಚಿತವಾಗಿ ಸಾಬೂನುಗಳನ್ನು ಪೂರೈಸುವಂತೆ ಒಪ್ಪಂದ ಮಾಡಿಕೊಂಡಿದ್ದ. ಕೊಳಗೇರಿಯಲ್ಲಿನ ಮನೆಗಳಿಗೆ ಹೋಗಿ ಕೈತೊಳೆಯುವಂತೆ ಪಾಠ ಮಾಡಿ ಬರುವಾಗ
ಅವರಿಗೆ ಪುಕ್ಕಟೆಯಾಗಿ ಸಾಬೂನು ನೀಡಿ ಬರುತ್ತಿದ್ದ.

ಯಾವುದೇ ಕ್ರಿಯೆಯಾದರೂ ಅಭ್ಯಾಸವಾಗಿ, ಹವ್ಯಾಸವಾಗಿ ಬದಲಾಗಬೇಕೆಂದರೆ, ಮಾಡಿದ ಕ್ರಿಯೆಯನ್ನೇ ಪದೇ ಪದೆ ಮಾಡ ಬೇಕು. ಆದ್ದರಿಂದ ಅವರಿಗೆ ಬರೀ ಸಾಬೂನು ನೀಡಿದ ಮಾತ್ರಕ್ಕೆ ಅವರೆಲ್ಲ ಕೈ ತೊಳೆಯುವುದಿಲ್ಲ. ಅವರು ದಿನದಲ್ಲಿ ಕನಿಷ್ಠ ನಾಲ್ಕು ಸಲ ಕೈತೊಳೆದರೆ ಮಾತ್ರ ಅದು ಅಭ್ಯಾಸವಾಗಿ ಪರಿವರ್ತನೆಯಾಗಲು ಸಾಧ್ಯ. ಹೀಗಾಗಿ ಬೆಳಗ್ಗೆ ಯಾರ ಮನೆಗೆ ಹೋಗಿ ಸ್ವಚ್ಛತೆ ಬಗ್ಗೆ ಪಾಠ ಮಾಡಿ ಬರುತ್ತಿದ್ದರೋ, ಅವರ ಮನೆಗೆ ಪದೇ ಪದೆ ಹೋಗಿ ಅವರು ಕೈ ತೊಳೆಯುತ್ತಿದ್ದಾರೋ ಇಲ್ಲವೋ ಎಂಬುದನ್ನು ಖಾತ್ರಿ ಪಡಿಸಲು ತನ್ನ ತಂಡದ ಸದಸ್ಯರನ್ನು ಕಳುಹಿಸುತ್ತಿದ್ದ.

ಪದೇ ಪದೆ ಕೈ ತೊಳೆಯುವುದರಿಂದ ಸಾಬೂನು ಬೇಗ ಖರ್ಚಾಗುತ್ತಿತ್ತು. ಅದು ಖರ್ಚಾಗುತ್ತಿದ್ದಂತೆ ಎರಡನೇ ಸಾಬೂನು ನೀಡುತ್ತಿದ್ದ. ಸಾಬೂನು ಸವೆದು ಹೋಗುತ್ತಿದ್ದಂತೆ ಹೊಸ ಸಾಬೂನು ಕೊಡುತ್ತಾರೆ ಎಂಬ ಕಾರಣಕ್ಕೆ ದಿನಕ್ಕೆ ಎರಡು-ಮೂರು ಸಲ  ಕೈ ತೊಳೆಯುತ್ತಿದ್ದವರು ಕ್ರಮೇಣ ಆರೇಳು ಸಲ ತೊಳೆಯಲಾರಂಭಿಸಿದರು. ಮೊದಲ ಸಲ ಕೊಟ್ಟ ಸಾಬೂನು ಖಾಲಿ ಯಾಗುತ್ತಿದ್ದಂತೆ, ಎರಡನೇ ಸಲ ಸುವಾಸನೆಯುಳ್ಳ, ಬೇಗನೆ ಬುರುಗು ನೊರೆ ಬರುವ (ಸೇಫ್ ಗಾರ್ಡ್) ಸಾಬೂನನ್ನು ಕೊಡುತ್ತಿದ್ದ. ಈ ಸಾಬೂನಿನಿಂದ ಕೈತೊಳೆದರೆ ಸುವಾಸನೆ ಮತ್ತು ಫ್ರೆಶ್ನೆಸ್ ಕೆಲಕಾಲ ಇರುತ್ತಿತ್ತು. ಈ ಸುವಾಸನೆ ಸೆಳೆತ ಎಂಥದ್ದೊಂದರೆ,
ಅದು ಆಗಾಗ ಕೈತೊಳೆಯುವಂತೆ ಪ್ರೇರೇಪಿಸುತ್ತಿತ್ತು. ಹತ್ತು – ಹನ್ನೆರಡನೆಯ ಸಾಬೂನು ಖಾಲಿಯಾಗುವ ಹೊತ್ತಿಗೆ ಆ
ಕೊಳೆಗೇರಿ ಜನರಲ್ಲಿ ಆಗಾಗ ಕೈತೊಳೆಯುವುದು ಅಭ್ಯಾಸವಾಗಿ ಹೋಯಿತು. ಆಗ ಲೂಬಿ ಮತ್ತು ಅವನ ತಂಡದವರು ಅವರಿಗೆ ತಟ್ಟನೆ ಸಾಬೂನು ಪೂರೈಸುತ್ತಿರಲಿಲ್ಲ.

ಒಂದೆರಡು ದಿನ ಬಿಟ್ಟು ಕೊಡುತ್ತಿದ್ದರು. ಆದರೆ, ಅವರಲ್ಲಿ ಏನೋ ಚಡಪಡಿಕೆ. ಕೈತೊಳೆಯದೇ ಇರಲು ಆಗುತ್ತಿರಲಿಲ್ಲ. ಈ ಅವಧಿಯಲ್ಲಿ ಉಚಿತ ಸಾಬೂನಿಗೆ ಕಾಯುವ ಬದಲು, ಅಂಗಡಿಗಳಿಗೆ ಹೋಗಿ ಖರೀದಿಸಿ ತರಲಾರಂಭಿಸಿದರು. ಯಾವಾಗ ಜನ
ತಾವಾಗಿಯೇ ಸಾಬೂನನ್ನು ಖರೀದಿಸಲಾರಂಭಿಸಿದರೋ, ಅಲ್ಲಿಗೆ ಲೂಬಿ ಮತ್ತು ಅವನ ತಂಡದವರು ಅದನ್ನು ಉಚಿತವಾಗಿ ಕೊಡುವುದನ್ನು ನಿಲ್ಲಿಸಿದರು. ಅಷ್ಟೊತ್ತಿಗೆ ಅವರೆಲ್ಲರಿಗೆ ದಿನದಲ್ಲಿ ಕನಿಷ್ಠ ಮೂರ್ನಾಲ್ಕು ಸಲ ಕೈ ತೊಳೆಯುವುದು ಅಭ್ಯಾಸ ವಾಗಿ ಹೋಗಿತ್ತು. ಅವರೆಲ್ಲರೂ ಹೊಸ ಅಭ್ಯಾಸಕ್ಕೆ ಒಗ್ಗಿಕೊಂಡಿದ್ದರು.

ಇದು ಅವರ ಪಾಲಿಗೆ behavior change ಎನ್ನುವುದಕ್ಕಿಂತ new habit adoption  ಆಗಿ ಮಾರ್ಪಾಟಾಗಿತ್ತು. ಆರಂಭದಲ್ಲಿ ಲೂಬಿ ಮತ್ತು ಅವನ ತಂಡದವರು ಮೂರು ಕೊಳೆಗೇರಿಗಳಲ್ಲಿ ಇದನ್ನು ಕೈಗೆತ್ತಿಕೊಂಡಿದ್ದರು. ಅಲ್ಲ ಸಿಕ್ಕ ಅಭೂತ ಪೂರ್ವ ಬದಲಾವಣೆ ಅವರಲ್ಲಿ ಹೊಸ ಹುರುಪು, ಹುಮ್ಮಸ್ಸನ್ನು ಮೂಡಿಸಿದ್ದವು. ಇದೇ ಪ್ರಯೋಗವನ್ನು ಕರಾಚಿ ನಗರದಲ್ಲಿ ರುವ ಇತರ ಕೊಳೆಗೇರಿ ಗಳಿಗೂ ವಿಸ್ತರಿಸಲು ನಿರ್ಧರಿಸಿದರು. ಅಲ್ಲೂ ಸಹ ಈ ಅಭಿಯಾನ ಪ್ರಾಕ್ಟರ್ ಅಂಡ್ ಗ್ಯಾಂಬಲ್ (ಪಿ ಅಂಡ್ ಜಿ) ಪ್ರೋತ್ಸಾಹ ನೀಡಿತು. ಇದರಿಂದ ಪಿ ಅಂಡ್ ಜಿ ಕಂಪನಿಗೆ ಏನು ಲಾಭ ಎಂದು ಕೇಳಬಹುದು.

ಆರಂಭದಲ್ಲಿ ‘ಕೈ ತೊಳೆಯುವ ಜಾಗೃತಿ ಅಭಿಯಾನ’ ಆರಂಭಿಸಿದ ನಾಲ್ಕು ತಿಂಗಳುಗಳ ನಂತರ, ಕೊಳಗೇರಿಗಳ ಸುತ್ತ ಮುತ್ತ ‘ಸೇಫ್ ಗಾರ್ಡ್’ ಸಾಬೂನಿನ ಮಳಿಗೆಗಳು ತಲೆಯೆತ್ತಿದವು. ಎಲ್ಲಾ ಕಿರಾಣಿ ಅಂಗಡಿ, ಸೂಪರ್ ಬಜಾರುಗಳಲ್ಲಿ ಈ ಸಾಬೂನು ಅಚ್ಚರಿ ಪ್ರಮಾಣದಲ್ಲಿ ಮಾರಾಟವಾಗಲಾರಂಭಿಸಿದವು. ಉಚಿತವಾಗಿ ಕೊಟ್ಟು ಜನರಲ್ಲಿ ಸಕಾರಾತ್ಮಕ ಹವ್ಯಾಸ ಬಿತ್ತಿದ್ದಕ್ಕೆ
ಪಿ ಅಂಡ್ ಜಿ ಕಂಪನಿ ಜನರ ವಿಶ್ವಾಸವನ್ನೂ ಗಳಿಸಿತು. ಕೇವಲ ಆರು ತಿಂಗಳ ಅವಽಯಲ್ಲಿ ಕರಾಚಿ ನಗರದಲ್ಲಿ ಅದ್ಭುತ ಬದಲಾವಣೆಗಳಾಗಿದ್ದವು. ಮಕ್ಕಳಲ್ಲಿ ರೋಗದ ಲಕ್ಷಣಗಳು ನಿಧಾನವಾಗಿ ಕಡಿಮೆ ಆಗಿದ್ದವು. ಅತಿಸಾರ ರೋಗ ಶೇಕಡಾ ಐವತ್ತೆರಡರಷ್ಟು ಕಡಿಮೆಯಾಗಿತ್ತು. ನ್ಯುಮೋನಿಯಾ ಶೇಕಡಾ ನಲವತ್ತೆಂಟರಷ್ಟು ಕಡಿಮೆಯಾಗಿತ್ತು. ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ಬರುವ ರೋಗಗಳು ಶೇಕಡಾ ಅರವತ್ತರಷ್ಟು ಕಡಿಮೆಯಾಗಿದ್ದವು.

ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಯಿತು. ಅಷ್ಟೇ ಅಲ್ಲ, ಲೂಬಿ ಮತ್ತು ಅವನ ತಂಡದ ಸದಸ್ಯರು ಆರು ವರ್ಷಗಳ ನಂತರ ಕರಾಚಿ ನಗರಕ್ಕೆ ಹೋದರು. ಅಲ್ಲಿ ಆದ ಬದಲಾವಣೆಗಳನ್ನು ಕಂಡು ಅವರಿಗೇ ವಿಸ್ಮಯ. ಇಂಥ ಅದ್ಭುತ ಬದಲಾವಣೆಗಳಿಗೆ ಕಾರಣಕರ್ತರಾಗಿದ್ದು ತಾವೇನಾ ಎಂಬ ಅಚ್ಚರಿ ಅವರಲ್ಲಿ. ಕೊಳೆಗೇರಿ ನಿವಾಸಿಗಳು ಎರಡು-ಮೂರು ದಿನ ಗಳಾದರೂ ಸ್ನಾನ ಮಾಡುತ್ತಿರಲಿಲ್ಲ.

ಕೆಲವರು ವಾರಕ್ಕೊಮ್ಮೆ ಮಾತ್ರ ಸ್ನಾನ ಮಾಡುತ್ತಿದ್ದರು. ಅಂಥವರೆಲ್ಲ ಪ್ರತಿದಿನ ಜಳಕ ಮಾಡಲಾರಂಭಿಸಿದ್ದರು. ಈ ಮೂಲಕ ಅವರಲ್ಲಿ ತಮ್ಮ ಮನೆಯನ್ನು, ಮನೆಯ ಸುತ್ತಮುತ್ತಲಿನ ಪರಿಸರವನ್ನು, ವಠಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂಬ ಜಾಗೃತಿ ತನ್ನಷ್ಟಕ್ಕೆ ಮೊಳಕೆಯೊಡೆಯಲಾರಂಭಿಸಿತು. ತಮ್ಮನ್ನು ಬಾಧಿಸುತ್ತಿದ್ದ ಸಮಸ್ಯೆಗಳಿಂದ ಮುಕ್ತರಾಗಲು ಅವರು ಸ್ವಚ್ಛತೆಗೆ ಶರಣಾಗಿದ್ದರು. ಕೊಳೆಗೇರಿಗಳಲ್ಲಿ ಸಾರ್ವಜನಿಕ ಸ್ನಾನ ಘಟ್ಟಗಳು ತಲೆಯೆತ್ತಿದ್ದವು. ಅಲ್ಲಿ ಸಾಬೂನು ಇಡುವ ಸ್ಟ್ಯಾಂಡ್‌ ಗಳನ್ನು ಇರಿಸಿದ್ದರು. ಕೈ ತೊಳೆಯುವ ಅಭಿಯಾನ ಕರಾಚಿಯಲ್ಲಿ ಪರಿಸರವನ್ನು ಸ್ವಚ್ಛವಾಗಿಡುವ ಆಂದೋಲನವಾಗಿ ಪರಿವರ್ತನೆಯಾಗಿತ್ತು.

ಇತ್ತೀಚೆಗೆ ನಾನು ಜೇಮ್ಸ್ ಕ್ಲಿಯರ್ ಬರೆದ Atomic Habits : An easy and proven way to build good habits and break bad ones ಎಂಬ ಪುಸ್ತಕವನ್ನು ಓದುತ್ತಿದ್ದೆ. ಸಣ್ಣ ಸಣ್ಣ ಸಂಗತಿಗಳಿಂದ ಅಸಾಧಾರಣ ಬದಲಾವಣೆಗಳನ್ನು ತರುವುದು ಹೇಗೆ ಎಂಬುದನ್ನು ವಿವರಿಸುವ ಪುಸ್ತಕವದು. ಕರಾಚಿಯ ಕೊಳೆಗೇರಿಗಳಲ್ಲಿ ಒಂದು ಸಾಬೂನು ಯಾವ ರೀತಿಯಲ್ಲಿ ಕ್ರಾಂತಿಯ ನ್ನುಂಟು ಮಾಡಿತು ಎಂಬ ಒಂದು ಅಧ್ಯಾಯ ವನ್ನು ಓದಿ ಮುಗಿಸಿದಾಗ, ಇವನ್ನೆಲ್ಲ ನಿಮಗೂ ಹೇಳಬೇಕು ಎಂದೆನಿಸಿತು.

Leave a Reply

Your email address will not be published. Required fields are marked *