Wednesday, 30th October 2024

ಪುಟ್ಟದಾಗಿ ಯೋಚಿಸಿ, ದೊಡ್ಡದಾಗಿ ಬೆಳೆಯೋಣ

ಶ್ವೇತ ಪತ್ರ

shwethabc@gmail.com

ಈ ಶೀರ್ಷಿಕೆಯೊಂದಿಗೆ ಭಗವದ್ಗೀತೆಯ ಎಂಟನೆಯ ಅಧ್ಯಾಯದ ಒಂದು ಕಥೆ ಇಲ್ಲಿ ನೆನಪಿಗೆ ಬರುತ್ತಿದೆ. ರಾಜ ಸತ್ಯವ್ರತನ ಅಂಗೈಯೊಳಗಿದ್ದ ಪುಟ್ಟ ಮೀನು ಮುಂದೆ ದೊಡ್ಡದಾಗಿ ಬೆಳೆದು, ನೀರಿನ ಮಡಕೆಯನ್ನು ಆನಂತರ ನದಿಯನ್ನು ಆಕ್ರಮಿಸಿ ಅದರ ಆಚೆಗೆ ಸಾವಿರಾರು ಮೈಲುಗಳು ಈಜಿದ ಕಥೆ ನಮ್ಮೆಲ್ಲರೆದುರಿಗೆ ಉದಾಹರಣೆಯಾಗಿ ನಿಂತಿದೆ.

ಹಾಗೆಯೇ ಪಕ್ಷಿಗಳ ಕಥೆಯೊಂದನ್ನು ಇಂದು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಒಂದು ದಿನ ಕಾಗೆ ಯೊಂದಕ್ಕೆ ಬಹಳ ಬೇಜಾರಾಯಿತು. ನಾನು ನೋಡಲು ಸುಂದರವಾಗಿಲ್ಲ, ಹೋಗಲಿ ನನಗೆ ಚೆನ್ನಾಗಿ ಹಾಡಲು ಬರುವುದಿಲ್ಲ, ನಾನೊಂದು ಕೊಳಕು ಪಕ್ಷಿ. ಜನ ಯಾವಾಗಲೂ ನನ್ನನ್ನು ಓಡಿಸಲು ಪ್ರಯತ್ನಿಸುತ್ತಾರೆ ಎಂದು ತನ್ನಷ್ಟಕ್ಕೆ ತಾನು ಜೋರಾಗಿ ಹೇಳಿಕೊಂಡು ಬೇಸರ ಮಾಡಿಕೊಳ್ಳುತ್ತಿತ್ತು. ತಕ್ಷಣವೇ ಕಾಗೆಗೆ ಅಲ್ಲೇ ಕೊಳವೊಂದರಲ್ಲಿ ತೇಲುತ್ತಿದ್ದ ಹಂಸವೊಂದು ಕಾಣಿಸಿತು.

ಹಂಸವನ್ನು ಕುರಿತು ಕಾಗೆಯು, ‘ಅರೇ, ನೀನೆಷ್ಟು ಆಕರ್ಷಕವಾಗಿದ್ದೀಯಾ, ನಿನ್ನ ರೆಕ್ಕೆಗಳಂತೂ ಹೊಳೆಯು ತ್ತಿವೆ, ನೀನು ಸುಂದರವಾದ ಕೊಳದಲ್ಲಿ, ಸುಂದರವಾದ ಕಮಲಗಳ ನಡುವೆ ಜೀವಿಸುತ್ತಿಯ. ಎಲ್ಲರೂ ನಿನ್ನನ್ನು ನೋಡಿ ಮೆಚ್ಚಿಕೊಳ್ಳುತ್ತಾರೆ’ ಎಂದಿತು. ಕಾಗೆ ಹೇಳಿದ್ದನ್ನು ಸಮಾಧಾನವಾಗಿ ಕೇಳಿಸಿಕೊಂಡ ಹಂಸ ತಲೆದೂಗುತ್ತಾ, ‘ಗೆಳೆಯಾ, ನಾನು ಬಿಳಿಯ, ಸಪ್ಪೆಯಾಗಿರುವ ಹಾಗೂ ಅನಾಕರ್ಷಕವಾಗಿರುವ ಪಕ್ಷಿ; ಅದೇ ನೀನು ಗಿಳಿಯನ್ನು ನೋಡು. ಅದಕ್ಕೆ ಹೊಳೆಯುವ ಹಸಿರು ಬಣ್ಣ ಜತೆಗೆ ಕೆಂಪು ಕೊಕ್ಕು. ಅದರೊಟ್ಟಿಗೆ ಸಿಹಿ ಯಾದ ಕಂಠ. ಅದನ್ನು ಸಾಕಲು ಎಲ್ಲರೂ ಇಷ್ಟಪಡುತ್ತಾರೆ. ಗಿಳಿ ಎಲ್ಲರಿಗೂ ಅಚ್ಚುಮೆಚ್ಚು’ ಎಂದಿತು. ಇದನ್ನು ಕೇಳಿಸಿಕೊಂಡ ಕಾಗೆ ತಕ್ಷಣವೇ ಗಿಳಿಯ ಬಳಿ ಓಡಿಹೋಗುತ್ತದೆ, ಅದರ ಸೌಂದರ್ಯವನ್ನು ಹೊಗಳುತ್ತದೆ. ಇದನ್ನು ಕೇಳಿಸಿಕೊಂಡ ಗಿಳಿಯು ಕಾಗೆಯನ್ನು ಕುರಿತು, ‘ನನ್ನ ಸೌಂದರ್ಯ ನನಗೆ ಅಪರಿಪೂರ್ಣವೆನಿಸುತ್ತದೆ. ನನಗೆ ನವಿಲಿನ ಹಾಗೆ ಅನೇಕ ಬಣ್ಣಗಳನ್ನು ಹೊಂದಿರಬೇಕೆನ್ನುವ ಅಭಿಲಾಷೆ.

ನನ್ನ ಪ್ರಕಾರ ಈ ಜಗತ್ತಿನ ಅತ್ಯಂತ ಸುಂದರ ಸೃಷ್ಟಿ ನವಿಲು. ಅದು ತನ್ನ ರೆಕ್ಕೆ ಬಿಚ್ಚಿ ಮಳೆಯಲ್ಲಿ ನರ್ತಿಸುವ ಪರಿ ಇದೆಯಲ್ಲ, ಅದು ನೋಡಲು ಅತ್ಯಂತ ಸುಂದರ ಸಂಗತಿ’ ಎನ್ನುತ್ತದೆ. ಈಗ ಕಾಗೆಯು ಅದೃಷ್ಟವಂತ ನವಿಲನ್ನು ಭೇಟಿ ಮಾಡಲು ಹೊರಡುತ್ತದೆ. ಆದರೆ ಕಾಗೆಗೆ ನವಿಲು ದುಃಖವಾಗಿರುವುದನ್ನು ಕಂಡು ಆಶ್ಚರ್ಯವಾಗು ತ್ತದೆ. ನವಿಲು ಕಾಗೆಯನ್ನು ಕುರಿತು, ‘ನನಗೆ ಖಾಸಗಿತನ ವೆಂಬುದೇ ಇಲ್ಲ. ಜನ ಯಾವಾಗಲೂ ನನ್ನನ್ನು ನೋಡಬಯಸುತ್ತಾರೆ. ಬೇಟೆಗಾರ ರಂತೂ ನನ್ನ ರೆಕ್ಕೆ, ಪುಕ್ಕಗಳನ್ನು ಕಿತ್ತು ನನ್ನನ್ನು ಮೃಗಾಲಯಕ್ಕೆ ಅಟ್ಟುತ್ತಾರೆ. ನನ್ನ ಪ್ರಕಾರ ಕಾಗೆಯೇ ನೀನೇ ಅದೃಷ್ಟವಂತ. ಯಾರೂ ನಿನಗೆ ತೊಂದರೆ
ಕೊಡುವುದಿಲ್ಲ, ಎಲ್ಲೆಡೆ ಹಾರಿಕೊಂಡು ಸಂಭ್ರಮಿ ಸುತ್ತೀಯ’ ಎಂದು ಹೇಳಿತು!

ನಿಮಗೂ ಕಾಗೆಯಂತೆ ನಿಮ್ಮ ಬಗ್ಗೆ ನಿಮಗೆ ಅಸಮರ್ಪಕ ಅನುಮಾನಗಳಿವೆಯೇ? ಮತ್ತು ನೀವು ಬೇರೆಯವ ರಲ್ಲಿರುವ ಮತ್ತಿನ್ನೇನೋ ನಮ್ಮ ಬಳಿಯೂ ಇದ್ದಿದ್ದರೆ ನಾವು ಇನ್ನೂ ಖುಷಿಯಾಗಿರಬಹುದು ಎಂದು ಹಲುಬುತ್ತೀರೇ? ನೀವು ನೀವಾಗಿರುವುದಕ್ಕೆ ಜನರು ನಿಮ್ಮನ್ನು ಒಪ್ಪಿಕೊಳ್ಳಲಾರರು ಎಂಬುದಕ್ಕೆ ನಿಮಗೆ ಬೇಸರ ವಿದೆಯೇ? ಕಾಗೆ, ಹಂಸ, ಗಿಳಿ, ನವಿಲು ಎಲ್ಲವೂ ತಮ್ಮದೇ ರೀತಿಯಲ್ಲಿ ವಿಶಿಷ್ಟ ಮತ್ತು ಅನನ್ಯವಾಗಿರುವಂಥವು. ನೀವು ಕೂಡ ಹಾಗೆಯೇ, ನಿಮ್ಮದೇ ರೀತಿಯಲ್ಲಿ ವಿಶಿಷ್ಟ ಮತ್ತು ಅನನ್ಯ. ನಿಮ್ಮದೇ ಸ್ವಂತಿಕೆಯನ್ನು, ವಿಶೇಷತೆಯನ್ನು ಯಾವುದೇ ಕಾರಣಕ್ಕೂ ಹಿಡಿದಿಡಬೇಡಿ.

ನೀವು ವಿಶಿಷ್ಟರು ಮತ್ತು ಈ ಜಗತ್ತಿಗೆ ನಿಮ್ಮದೇ ರೀತಿಯಲ್ಲಿ ಮಿಂಚು ಹರಿಸಲು ಸಮರ್ಥರು ನೆನಪಿಡಿ! ನೀರು ಮಾಡುವ ಕೆಲಸವನ್ನು ಗಾಳಿ ಮಾಡಲು ಸಾಧ್ಯ ವಿಲ್ಲ, ಹಾಗೆಯೇ ತಾಮ್ರ ಮಾಡುವ ಕೆಲಸವನ್ನು ಚಿನ್ನ ಮಾಡಲು ಸಾಧ್ಯವಿಲ್ಲ. ಇರುವೆಯ ಮೃದುತ್ವ ಅದನ್ನು ಮರ ಹತ್ತುವಂತೆ ಮಾಡಿದರೆ, ಮರದ ಬಿಗಿತ
ಅದನ್ನು ಬೇರಿನೆಡೆಗೆ ನೂಕುತ್ತದೆ. ನಾವೆಲ್ಲ ಪ್ರತಿಯೊಬ್ಬರೂ ನಮ್ಮದೇ ರೀತಿಯಲ್ಲಿ ಅನುರೂಪರು. ನೀವು ಒಬ್ಬರೇ ಮಾಡಿ ಮುಗಿಸಬಹುದಾದ ಉದ್ದೇಶ ನಿಮ್ಮ ಬದುಕಿರುತ್ತದೆ.

ಅದರಿಂದಲೇ ನೀವು ವಿಶಿಷ್ಟರೆನಿಸುವುದು. ನೀವು ಈ ಜಗತ್ತಿನಲ್ಲಿರುವುದು ನೀವು ನೀವಾಗಿರಲು, ನೆನಪಿಡಿ. ಇಡೀ ಬ್ರಹ್ಮಾಂಡದ ಇತಿಹಾಸದಲ್ಲಿದಲ್ಲೇ ನಿಮ್ಮಂತೆ ಇನ್ನೊಬ್ಬರಿಲ್ಲ. ನೀವೊಂದು ಅದ್ಭುತ. ಅದನ್ನು ಸಂಭ್ರಮಿಸಿ ಕೃತಜ್ಞತೆಯೊಂದಿಗೆ.

? ಒಪ್ಪಿಕೊಳ್ಳುವಿಕೆ ಸದೃಢರನ್ನಾಗಿಸುತ್ತದೆ: ಒಪ್ಪಿಕೊಳ್ಳುವಿಕೆ ಎಂದರೆ ನಮ್ಮ ಮಿತಿಗಳನ್ನು ಅರಿಯುವುದು ಮತ್ತು ಅದನ್ನು ಖುಷಿಯಾಗಿ ಸ್ವೀಕರಿಸುವುದು. ಉದಾಹರಣೆಗೆ ಬರವಣಿಗೆ ನನ್ನ ಹಂಬಲವಾಗಿತ್ತು. ತುಂಬಾ ಬರೆಯಬೇಕೆನ್ನುವ ಆಶಯವು ನನ್ನದಾಗಿತ್ತು. ಆದರೆ ನನ್ನಿಂದ ಅಷ್ಟೊಂದು ಬರೆಯಲು ಸಾಧ್ಯವೇ ಎಂಬ ಪ್ರಶ್ನೆ, ಅನುಮಾನ ನನ್ನೆದುರಿಗಿತ್ತು. ತುಂಬಾ ಬರೆಯುವುದಕ್ಕೆ ಮೊದಲು ಓದಬೇಕೆನ್ನುವ ಶಿಸ್ತನ್ನು ನಾನೇ ರೂಢಿಸಿಕೊಂಡೆ.

ನಂತರ ದಿನಕ್ಕೆ ಐವತ್ತು ಪದಗಳನ್ನು ಬರೆಯಬೇಕೆನ್ನುವುದನ್ನು ಸಾಧ್ಯವಾಗಿಸುವ ಗುರಿಯಲ್ಲಿ ತೊಡಗಿಸಿಕೊಂಡೆ. ಇದು ನನ್ನ ಬರವಣಿಗೆಗೆ ಒಂದು ಓಘವನ್ನು ತಂದು ಕೊಟ್ಟಿತು. ನನ್ನೊಳಗೂ ಸಂತೋಷ ಮೂಡಿತು. ಮಿತಿ ಗಳನ್ನು ಒಪ್ಪಿಕೊಳ್ಳುವುದೆಂದರೆ ಇದು ಎಂದು ತದನಂತರ ದಲ್ಲಿ ನನಗೆ ತಿಳಿಯಿತು. ನನ್ನ ಬರವಣಿಗೆಯನ್ನು ಪೂರ್ಣ ವಾಗಿ ಬಿಟ್ಟುಕೊಟ್ಟಿದ್ದರೆ ಅದು ಒಪ್ಪಿಕೊಳ್ಳುವಿಕೆಯಾಗುತ್ತಿರಲಿಲ್ಲ. ಬರವಣಿಗೆ ನನಗೊಂದು ಅಸ್ಮಿತೆಯನ್ನು ತಂದು ಕೊಟ್ಟಿದೆ ಎಂತಾದರೆ, ಬರೆಯದೆ ಇದ್ದುಬಿಟ್ಟಿದ್ದರೆ ಅದು ನನ್ನ ಮಿತಿಯನ್ನು ಒಪ್ಪಿಕೊಳ್ಳದೆ ಹೋಗಿಬಿಡುವಂತಾಗಿ ಬಿಡುತ್ತಿತ್ತು. ಜಗತ್ತಿನೆದುರು ನಾವು ಅತ್ಯಲ್ಪರು ಎಂಬ ಅದೇ ಭಾವನೆ ನಾವು ಮುಂದೆ ಸಾಗುವುದಕ್ಕೆ ಸಬಲೀಕರಣ ಶಕ್ತಿಯಾಗಿ ಬಿಡುತ್ತದೆ, ನೆನಪಿರಲಿ.

?ಪುಟ್ಟ-ದೊಡ್ಡದು ಎಂಬ ವಿರುದ್ಧ ಮಾದರಿಗಳು: ನೀವು ಯಾವುದೇ ಮೋಟಿವೇಷನಲ್ ಗುರು, ಲೈಫ್ ಕೋಚ್ ಬಳಿ ಹೋದರೂ ಮೊದಲು ಅವರು ಹೇಳುವುದು
ಒಂದೇ- ‘ದೊಡ್ಡದಾಗಿ ಯೋಚಿಸಿ’. ನಾವು ಒಂದು ಪುಟ್ಟ ಬದಲಾವಣೆಗಾಗಿ ಪುಟ್ಟದಾಗಿ ಯೋಚಿಸಿ ವ್ಯತ್ಯಾಸ ನೋಡೋಣ ಬನ್ನಿ. ದೊಡ್ಡದು ಎಂದಿಗೂ ಎತ್ತರದ ಗುರಿ ಯನ್ನು ಹೊಂದಿರುತ್ತದೆ, ನೀವು ಬದುಕಲು ಇಚ್ಛಿಸುವ ಹಾರೈಕೆಯಾಗಿರುತ್ತದೆ. ಪುಟ್ಟದು ಬಹಳ ಸುಲಭವಾಗಿರುತ್ತದೆ ಮತ್ತು ಅದನ್ನು ಪಡೆಯುವುದು ನೀವೆಷ್ಟೇ ಮಾನಸಿಕ ವಾಗಿ ಕ್ಷೀಣರಾಗಿದ್ದರೂ ಸಾಧ್ಯವಾಗುತ್ತದೆ.

ಒಂದು ಉದಾಹರಣೆಯನ್ನು ನೋಡೋಣ: ನೀವು ಇಪ್ಪತ್ತು ಕೆ.ಜಿ. ತೂಕ ಇಳಿಸಬೇಕೆಂದುಕೊಂಡಿರುತ್ತೀರಿ, ಅದಕ್ಕಾಗಿ ಗ್ರ್ಯಾಂಡ್ ಪ್ಲಾನನ್ನು ಮಾಡಿಕೊಳ್ಳುತ್ತೀರಿ. ಪ್ರತಿದಿನ ಗಂಟೆಗಟ್ಟಲೆ ತಾಲೀಮನ್ನೂ ಮಾಡುತ್ತೀರಿ. ಮುಂದೇನಾಗುತ್ತದೆ? ಕೆಲವು ದಿನಗಳ ನಂತರ ಇದು ನಿಮ್ಮನ್ನು ಸುಸ್ತಾಗಿಸುತ್ತದೆ, ಆಯಾಸಗೊಂಡವ ರನ್ನಾಗಿ ಮಾಡಿಬಿಡುತ್ತದೆ. ನಿಧಾನವಾಗಿ ಮನಸ್ಸು ನೆಪ ಹೇಳಲು ಶುರುವಿಟ್ಟುಕೊಳ್ಳ ತೊಡಗುತ್ತದೆ. ಕುಂಟು ನೆಪಗಳು ತಾಲೀಮನ್ನು ತಪ್ಪಿಸಲು ಪ್ರಯತ್ನಿ
ಸುತ್ತವೆ. ತಾಲೀಮು ಮಾಡಲೇಬೇಕೆಂದು ಎಷ್ಟೇ ಮಾನಸಿಕವಾಗಿ ದೃಢರಾಗಿದ್ದರೂ ದಿನದ ಕೊನೆಯಲ್ಲಿ Decision fatigue ನಿರ್ಧಾರದ ಆಯಾಸವು ನಮ್ಮನ್ನು ನಮಗೆ ಗೊತ್ತಿಲ್ಲದಂತೆ ಕುಗ್ಗಿಸಿಬಿಡುತ್ತದೆ. ನಿಮ್ಮ ಬದುಕಲ್ಲಿ ಹೀಗೆ ಅನೇಕ ಯೋಜನೆಗಳು ಸತತವಾಗಿ ಸೋತು ನೀವು ಹತಾಶರಾಗಿದ್ದೀರಾ? ಹೊಸ ದನ್ನು ಪ್ರಯತ್ನಿಸಿ ನೋಡಿ.

ಗಂಟೆಗಟ್ಟಲೆ ತಾಲೀಮಿನ ಯೋಜನೆಯ ಬದಲು ಹದಿನೈದು ನಿಮಿಷಗಳ ನಡಿಗೆ, ವ್ಯಾಯಾಮದೊಂದಿಗೆ ಪ್ರಾರಂಭಿಸಿ. ಜಸ್ಟ್ ಹದಿನೈದು ನಿಮಿಷ. ಈ ನಿರ್ಧಾರ ದಿಂದ ಆಗುವ ಪ್ರಯೋಜನವೇನೆಂದರೆ, ಆಕಾಶ ಭೂಮಿ ಒಂದಾದರೂ ನೀವು ತಾಲೀಮನ್ನು, ವಾಕ್ ಅನ್ನು, ನಡಿಗೆಯನ್ನು, ವ್ಯಾಯಾಮವನ್ನು ತಪ್ಪದೆ ಮಾಡೇ ಮಾಡುತ್ತೀರಿ. ಪುಟ್ಟದಾಗಿ ಯೋಚಿಸುವ ಪಾಸಿಟಿವಿಟಿ ನಿಮ್ಮೊಳಗಿನ ಆರಾಮದಾಯಕತೆಯನ್ನು ಪೋಷಿಸುತ್ತದೆ. ಮುಂದೆ ಇದೇ ಪುಟ್ಟ ಸಂಗತಿಯು ಹದಿನೈದು ನಿಮಿಷದಿಂದ ಒಂದು ಗಂಟೆಯವರೆಗೂ ನೀವು ವ್ಯಾಯಾಮ ಮಾಡುವಂತೆ, ನಡೆಯುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ.

ಇಲ್ಲಿ ಬೆಕ್ಕಿನ ಒಂದು ಪ್ರಸಂಗವನ್ನು ನಿಮಗೆ ಹೇಳಲೇಬೇಕು. ಒಮ್ಮೆ ವ್ಯಕ್ತಿಯೊಬ್ಬ ತನ್ನ ಮುದ್ದಿನ ಸಾಕುಬೆಕ್ಕನ್ನು ಚಳಿಯಲ್ಲಿ ಹೊರಗೆ ಕರೆದುಕೊಂಡು ಹೋಗಿ ರಸ್ತೆಯ ಮಧ್ಯಭಾಗದಲ್ಲಿ ನಿಲ್ಲಿಸಿಬಿಡುತ್ತಾನೆ. ರಸ್ತೆಯ ಮಧ್ಯಭಾಗ ದಲ್ಲಿ ಚಳಿಯಲ್ಲಿ ನಡುಗುತ್ತಿದ್ದ ಬೆಕ್ಕು, ಚಳಿ ತಾಳಲಾರದೆ ಮನೆಯ ಒಳಗೆ ಓಡಿಹೋಗುತ್ತದೆ. ಬೆಕ್ಕನ್ನು ರಸ್ತೆಯ ಮಧ್ಯಭಾಗದಲ್ಲಿ ನಿಲ್ಲಿಸುವುದಕ್ಕಿಂತ ವ್ಯಕ್ತಿಯು ತನ್ನ ಮನೆಯ ಮುಂದೆಯೇ ನಿಲ್ಲಿಸಲು ಪ್ರಯತ್ನಿಸುತ್ತಾನೆ, ಮತ್ತೆ ಒಳಗೆ ಓಡಿಹೋದ ಬೆಕ್ಕು ನಿಧಾನವಾಗಿ ಕುತೂಹಲ ದಿಂದ ಬಾಗಿಲಿನವರೆಗೂ ಬಂದು ನಿಲ್ಲುತ್ತದೆ. ಇದಾದ ಸ್ವಲ್ಪ ಸಮಯದಲ್ಲೇ ನಿಧಾನವಾಗಿ ಮನೆಯಿಂದ ಹೊರಬರಲು ಪ್ರಯತ್ನಿಸುತ್ತದೆ, ಅಲ್ಲಿಂದ ಮೆಲ್ಲಮೆಲ್ಲಗೆ ನಡುಗುವ ಚಳಿಯಲ್ಲಿ ರಸ್ತೆಗೆ ನೆಗೆಯುತ್ತದೆ, ಖುಷಿಯಿಂದಲೇ. ಇಲ್ಲಿ ಬೆಕ್ಕಿನ ಆರಾಮದಾಯಕ ಮನಸ್ಥಿತಿ ಅದರ ಮಾಲೀಕ ಅದನ್ನು ಮನೆಯ ಹತ್ತಿರವೇ ನಿಲ್ಲಿಸಿದಾಗ, ಬೆಕ್ಕು ಆ ಜಾಗಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತದೆ. ಈ ಹೊಂದಿಕೊಳ್ಳುವಿಕೆಯೇ ಮುಂದೆ ಅದು ರಸ್ತೆಗೆ ಬಂದು ಅನ್ವೇಷಿಸುವುದಕ್ಕೆ
ನಿಧಾನವಾಗಿ ಧೈರ್ಯ ತುಂಬಿಸುವಂತೆ ಮಾಡುತ್ತದೆ.

ಅಂತೆಯೇ ನಾವು ಮಾಡಬೇಕಾದ ಕೆಲಸಗಳು ಮನಸ್ಸನ್ನು ಆರಾಮಾಗಿ ಇರಿಸಲು ಸಾಧ್ಯವಾಗಿಸುವವೇ ಎಂಬುದನ್ನು ನೋಡಬೇಕು. ಹೀಗೆ ಪ್ರಯತ್ನಿಸುತ್ತ ನಾವೇ ಆರಾಮ ದಾಯಕ ಮನಸ್ಥಿತಿಯಿಂದ ಹೊರಬರುತ್ತೇವೆ ನಿಧಾನ ವಾಗಿ. ವಿಷಯಗಳು ಕಠಿಣವಾಗುತ್ತಾ ಹೋದಂತೆ ನಾವು ನಮ್ಮ ಆರಾಮದಾಯಕ ನೆಲೆಯೊಳಗೆ ಅವಿತುಬಿಡಲು ಪ್ರಯತ್ನಿಸುತ್ತೇವೆ. ಇದರಿಂದ ಹೊರಬಂದರೇನೆ ವೈಯಕ್ತಿಕ ಬದಲಾವಣೆ ಸಾಧ್ಯ.

ಮುಗಿಸುವ ಮುನ್ನ: ತುಂಬಾ ದೊಡ್ಡದಾಗಿ ಯೋಚಿಸಿ ಅಸಾಧ್ಯವಾಗಿಸಿಕೊಳ್ಳುವುದಕ್ಕಿಂತ ಪುಟ್ಟದಾಗಿ ಯೋಚಿಸಿ ನಮ್ಮಷ್ಟಕ್ಕೆ ನಾವೇ ಬದಲಾವಣೆಯನ್ನು ತರಲು ಪ್ರಯತ್ನಿಸೋಣ. ಸಾಽಸುವ ಗುರಿಗಳನ್ನು ಎದುರಿಗಿಟ್ಟುಕೊಂಡರೆ ಅದರೆಡೆಗೆ ಬೇಕಾದ ನಮ್ಮ ಸಾಮರ್ಥ್ಯವನ್ನು ಗುರುತಿಸುತ್ತಾ ಖುಷಿಯಾಗಿ ಮುನ್ನಡೆಯಬ ಹುದು. ನಮ್ಮ ಗುರಿಗಳು ವಾಸ್ತವವಿದ್ದಾಗ ಅವುಗಳನ್ನು ಸಾಧ್ಯವಾಗಿಸುವುದು ಸುಲಭ! ಏನಂತೀರಿ…?