Thursday, 19th September 2024

ಪ್ರೇಕ್ಷಣೀಯ ಸ್ಥಳಗಳ ವೀಕ್ಷಕರಿಂದ ಪರಿಸರಕ್ಕೆ ಮಾರಕವಾಗುತ್ತಿದೆಯೇ ?

ಅಭಿವ್ಯಕ್ತಿ

ರಮಾನಂದ ಶರ್ಮಾ

ramanandsharma28@gmail.com

ಇತ್ತೀಚೆಗೆ ಮಲೆನಾಡಿನ ನನ್ನ ಸ್ನೇಹಿತನ ಊರಿಗೆ ಹೋದಾಗ ಅಲ್ಲಿನ ಕೆಲವು ರಾಜ್ಯ ಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿಗಳು, ಜಿಲ್ಲೆ, ತಾಲೂಕು ಮತ್ತು ಪಂಚಾಯತ್ ರಸ್ತೆಗಳ ಇಕ್ಕೆಲಗಳಲ್ಲಿ ಬಿಸಾಡಿರುವ ಖಾಲಿ ಮದ್ಯದ ಬಾಟಲ್‌ಗಳು, ನೀರಿನ ಬಾಟಲ್‌ಗಳು, ಅರ್ಧ ತಿಂದು ಎಸೆದಿರುವ ಫುಡ್ ಪ್ಯಾಕೆಟ್‌ಗಳು, ತಂಪು ಪೇಯದ ಪ್ಯಾಕೆಟ್‌ಗಳು, ಸೇದಿ ಒಗೆದ ಬೀಡಿ – ಸಿಗರೇಟ್ ಗಳ ತುಂಡುಗಳು, ಪ್ಲಾಸ್ಟಿಕ್ ಕವರುಗಳು ಮತ್ತು ಪ್ಯಾಕೆಟ್ ಗಳನ್ನು ನೋಡಿ ದಂಗಾಗಲು, ನನ್ನ ಸ್ನೇಹಿತ, ನಿಮ್ಮಂಥ ನಗರ ಜೀವಿಗಳು ಸದಾ ಹಾಡಿ ಹೊಗಳುವ ಪರಿಸರ ಪ್ರವಾಸೋದ್ಯಮವನ್ನು ಅನುಭವಿಸುವವರು ಸ್ಥಳೀಯರಿಗೆ ನೀಡಿ ಹೋದ ಕಾಣಿಕೆ ಮತ್ತು ಪ್ರಸಾದ ಎಂದು ವ್ಯಂಗ್ಯವಾಗಿ ಹೇಳುತ್ತಾನೆ.

ಆತ ತನ್ನ ಒಂದೇ ಮಾತಿನಲ್ಲಿ ಹೊರಜಗತ್ತಿಗೆ ಕಾಣದ, ತಿಳಿಯದ ಪರಿಸರ ಪ್ರವಾಸೋದ್ಯಮದ ಕರಾಳ ಮುಖವನ್ನು ಅನಾವರಣಗೊಳಿಸಿದ್ದ. ಸರಕಾರ ಮತ್ತು ಖಾಸಗಿ ಸಂಸ್ಥೆಗಳು ಪರಿಸರ ಪ್ರವಾಸೋದ್ಯಮವನ್ನು ಹೈಪಿಚ್‌ನಲ್ಲಿ ಮಾರ್ಕೆಟಿಂಗ್ ಮಾಡುತ್ತಿರುವುದರ ಫಲವೋ ಏನೋ, ಇತ್ತೀಚೆಗೆ ಕಾಂಕ್ರೀಟ್ ಜಂಗಲ್‌ ಗಳಿಂದ ಪ್ರವಾಸೋದ್ಯಮ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ನಿಸರ್ಗದತ್ತ ಹರಿಯುತ್ತಿದೆ. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ನಿಸರ್ಗ ಸೌಂದರ್ಯವನ್ನು ಸವಿಯಲು, ಪರಿಸರವನ್ನು ಅನುಭವಿಸಲು ಮತ್ತು ಆನಂದಿಸಲು ನಗರ – ಪಟ್ಟಣಗಳಿಂದ ಹಿಂಡುಹಿಂಡಾಗಿ ಪ್ರವಾಸಿಗರು ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಗೆ
ಧಾವಿಸುತ್ತಾರೆ. ನಗರ ಬದುಕಿನ ಏಕತಾನತೆಯಿಂದ ಒಂದೆರಡು ದಿನ ಬದಲಾವಣೆ ಪಡೆಯಲು ಸ್ವಚ್ಛಂದ ಪರಿಸರದ ನಿಸರ್ಗದತ್ತ ತೆರಳುತ್ತಾರೆ. ಈ ಸ್ಥಳಗಳಲ್ಲಿ ಮಠ – ಮಂದಿರ, ಐತಿಹಾಸಿಕ ಸ್ಮಾರಕಗಳು, ತುಂಬಿ ಹರಿಯುವ ಹೊಳೆ – ಹಳ್ಳಗಳು, ಕೆರೆಗಳು ಮತ್ತು ಬೀಚ್‌ಗಳು ಇದ್ದರಂತೂ ಪ್ರವಾಸಿಗರ ದಟ್ಟಣೆ ಹೆಚ್ಚಾಗಿರುತ್ತದೆ. ಈ ಪ್ರವಾಸಿಗರ ಪ್ರವಾಹ ಬಹುತೇಕ ಎಲ್ಲಾ ಪಟ್ಟಣ ಮತ್ತು ನಗರಗಳಿಂದ ನಿಸರ್ಗವನ್ನು ಸವಿಯಲು ಮುಖ್ಯವಾಗಿ ಕರಾವಳಿ ಮತ್ತು ಮಲೆನಾಡು ಜಿಗಳಿಗೆ ಹರಿದುಬರುತ್ತದೆ.

ಶುಕ್ರವಾರ ಸಂಜೆಯಿಂದ ಪ್ರಾರಂಭವಾಗುವ ಟೋಲ್ ನಾಕಾ ಜಾಮ್ ಸೋಮವಾರ ಬೆಳಗಿನವರೆಗೆ ಇರುತ್ತಿದ್ದು, ಟೋಲ್ ನಾಕಾ ಸಿಬ್ಬಂದಿಗಳು ಹೈರಾಣಾಗಿರು ತ್ತಾರೆ. ಪರಿಸರ ಅಥವಾ ನಿಸರ್ಗ ಪ್ರವಾಸೋದ್ಯಮವು ಸಾಮಾನ್ಯ ಪ್ರವಾಸೋದ್ಯಮಕ್ಕಿಂತ ಭಿನ್ನವಾಗಿರುತ್ತದೆ. ಕಡಿಮೆ ವೆಚ್ಚದಲ್ಲಿ ಗ್ರಾಮೀಣ ಜೀವನದ ಸೊಗಡನ್ನು ಅನುಭವಿಸುವುದೇ ಇದರ ವಿಶೇಷ. ಇದರಲ್ಲಿ ಸಾಹಿತಿಗಳು, ಕವಿಗಳು, ಜೀವ ವೈವಿಧ್ಯದ ಹರಿಕಾರರು ಸದಾ ಹಾಡಿ ಹೊಗಳುವ ಹಸಿರು – ಹಳ್ಳ – ಹೊಳೆ – ತೊರೆಗಳು, ಗುಡ್ಡ – ಏರು – ತಗ್ಗುಗಳು, ಕಡಿದಾದ ಕಂದಕಗಳು, ತಲೆಯನ್ನು ಗಿರಗಿರನೆ ತಿರುಗಿಸುವ ಘಟ್ಟದ ರಸ್ತೆಗಳು, ಮುಗಿಲು ಚುಂಬಿಸುವಂಥ ಗಿಡ ಮರಗಳಿಂದ ತುಂಬಿದ ಮತ್ತು ಹಲವು ಕಡೆ ಸೂರ್ಯಕಿರಣಗಳು ಭೂಮಿಗೆ ತಾಗದ ದಟ್ಟವಾದ ಅರಣ್ಯಗಳು, ಸರಕ್ಕನೆ ಹಿಂದೆ ಮುಂದೆ ಹಾದುಹೋಗುವ ವನ್ಯಜೀವಿಗಳು, ಭಯ ಹುಟ್ಟಿಸುವ , ಉಸಿರು ನಿಲ್ಲಿಸುವ ಹುಲಿ – ಚಿರತೆ ಕರಡಿಯಂಥ ಕ್ರೂರ ಮೃಗಗಳು, ಸದಾ ಚಿಲಿ ಪಿಲಿ ಎನ್ನುವ ಹಕ್ಕಿ ಪಕ್ಷಿಗಳನ್ನು ನೋಡುವ ಅವಕಾಶ.

ಮಾಲಿನ್ಯ ರಹಿತ ವಾತಾವರಣವನ್ನು ಕೆಲವು ಘಂಟೆಗಳ ಕಾಲವಾದರೂ ಅನುಭವಿಸುವ ಸಮಯ, ಹಳ್ಳಿಗರ ಸರಳ, ಸುಂದರ , ಮುಗ್ದ, ಆಡಂಬರರಹಿತ ಮತ್ತು ನಿಷ್ಕಲ್ಮಷ ಬದುಕನ್ನು ನೋಡುವ ಮತ್ತು ಅರ್ಥ ಮಾಡಿಕೊಳ್ಳುವ ಅವಕಾಶ. ಇವುಗಳನ್ನು ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ, ಮ್ಯಾಗಜಿನ್‌ಗಳಲ್ಲಿ ಟಿವಿ ಮತ್ತು ಚಲನಚಿತ್ರಗಳಲ್ಲಿ ಮಾತ್ರ ನೋಡಿ ಮತ್ತು ನೋಡಿದವರಿಂದ ಕೇಳಿ ಪುಳಕಿತರಾದವರಿಗೆ ಸ್ವತಃ ಕಣ್ಣಾರೆ ನೋಡಿ ಆನಂದಿಸುವ ಮತ್ತು ಅನುಭವಿಸುವ ಸಂದರ್ಭ.

ನೈಸರ್ಗಿಕ ವಿಪತ್ತುಗಳಿಂದ ಬೆಳೆ ಕೈಗೆ ಬಾರದ ಸ್ಥಿತಿ ಹೆಚ್ಚುತ್ತಿರುವಾಗ ಮತ್ತು ಬೆಳೆ ಇದ್ದಾಗ ಬೆಲೆ ಇಲ್ಲದ ಮತ್ತು ಬೆಲೆ ಇದ್ದಾಗ ಬೆಳೆ ಇಲ್ಲದ ಅರ್ಥಿಕ ಸಂಕಷ್ಟಗಳು ಸದಾ ಎದುರಾಗುತ್ತಿರುವಾಗ, ಈ ಭಾಗದ ಜನರು ಪ್ರವಾಸಿಗರು ತಮ್ಮ ಕಡೆ ಹರಿದುಬರುತ್ತಿರುವುದನ್ನು ಸ್ವಾಗತಿಸಿದ್ದರು. ಇದು ತಮ್ಮ ಆರ್ಥಿಕ ಸಂಕಷ್ಟಗಳಿಗೆ ಸ್ವಲ್ಪ ಮಟ್ಟಿಗಾದರೂ ನೆರವಾಗಬಹುದು ಎಂದು ಆಶಿಸಿದ್ದರು. ಆದರೆ ಅಂದುಕೊಂಡಂತೆ ನಿರೀಕ್ಷೆ ಯ ರೈಲು ಹಳಿ ಏರಲಿಲ್ಲ. ಬಹುತೇಕ ಪ್ರವಾಸಿಗರು ಒಂದು ದಿನದ ಭೇಟಿ ಕೊಟ್ಟರೇ ವಿನಃ ಸ್ಥಳೀಯರ ಆತಿಥ್ಯಕ್ಕೆ ಸ್ಪಂದಿಸಲಿಲ್ಲ. ತಮ್ಮ ತಮ್ಮ ವಾಹನಗಳಲ್ಲಿ ಬಂದು ಹೋದರೇ ವಿನಃ ಸ್ಥಳೀಯ ಸಾರಿಗೆಯವರನ್ನು ಹಿಡಿಯಲಿಲ್ಲ.

ಬರುವಾಗಲೇ ತಿಂಡಿ ತೀರ್ಥಗಳನ್ನು ಕಟ್ಟಿಸಿಕೊಂಡು ಬಂದರೆ ವಿನಃ ಸ್ಥಳೀಯ ಹೋಟೆಲ್ಲುಗಳ ರುಚಿ ನೋಡಲಿಲ್ಲ. ಬಹುತೇಕ ಎಲ್ಲರೂ ರಾತ್ರಿಯೇ ಹಿಂತಿರುಗು ತ್ತಿದ್ದರಿಂದ ಲಾಡ್ಜಿಂಗ್‌ಗಳ ರಿಜಿಸ್ಟರ ಬುಕ್ ಪೂರ್ತಿ ತೆರೆಯಲಿಲ್ಲ. ಹೊಸ ಹೊಸ ಹೋಟೆಲ್ಲುಗಳಿಗೆ ಅಡಿಗಲ್ಲು ಬೀಳಲಿಲ್ಲ. ಅಲ್ಲಲ್ಲಿ ಹೋಂ ಸ್ಟೇ ಮತ್ತು ರೆಸಾಟ್
ಗಳು ತಲೆ ಎತ್ತಿದರೂ ಕೆಲವು ವಿಶೇಷ ಸಂದರ್ಭಗಳನ್ನು ಬಿಟ್ಟು ಬೇರೆ ದಿನಗಳಲ್ಲಿ ದಟ್ಟಣೆ ಕಾಣಲಿಲ್ಲ.

ನಿಸರ್ಗ ಅಥವಾ ಪರಿಸರ ಪ್ರವಾಸೋದ್ಯಮದ ತಾಣಗಳಲ್ಲಿ ಪ್ರವಾಸೋದ್ಯಮದಿಂದ ನಿರೀಕ್ಷೆಯಷ್ಟು ಆರ್ಥಿಕ ಚಟುವಟಿಕೆ ಮತ್ತು ಚೇತರಿಕೆ ಕಾಣದಿರುವ ಮಾತು
ಕೇಳುತ್ತಿದೆ. ಕೆಲವು ಮಾಧ್ಯಮಗಳ ವರದಿಯಂತೆ ಈ ತಾಣದವರು ಇತ್ತೀಚೆಗೆ ಈ ಪರಿಸರ ಅಥವಾ ನಿಸರ್ಗ ಪ್ರವಾಸೋದ್ಯಮವನ್ನು ವಿರೋಧಿಸುತ್ತಿದ್ದಾರಂತೆ. ವಾಸ್ತವ ದಲ್ಲಿ ವರವಾಗಬೇಕಾಗಿದ್ದ ಇದು ಪರಿಸರಕ್ಕೆ ಮಾರಕ ವಾಗುತ್ತಿದೆ ಎನ್ನುವ ಕೂಗು ಕೇಳುತ್ತಿದ್ದು, ಜನರು ಶಪಿಸುತ್ತಿದ್ದಾರೆ.

ಮೇಲ್ನೋಟಕ್ಕೆ ಆರ್ಥಿಕ ಬೆಳವಣಿಗೆಯ ಕ್ರಿಯಾಶೀಲತೆ ಕಾಣದಿರುವುದೇ ಕಾರಣವೆನ್ನುವ ಟೀಕೆ ಕೇಳಿಬರುತ್ತಿದ್ದರೂ, ವಾಸ್ತವದಲ್ಲಿ ನಿಸರ್ಗ ಸೌಂದರ್ಯವನ್ನು
ಸವಿಯಿಲು, ಅನುಭವಿಸಲು ಮತ್ತು ಅನಂದಿಸಲು ಬರುವವರ ವಿಕೃತ ಮನೋಭಾವ ಮತ್ತು ಕುಕೃತ್ಯಗಳು ಸ್ಥಳೀಯರನ್ನು ಕಂಗೆಡಿಸಿದ್ದು ಕಾರಣ ಎನ್ನಲಾಗುತ್ತಿದೆ. ಈ ಪ್ರವಾಸಿಗರು ನಿಸರ್ಗದ ಮಡಿಲಲ್ಲಿ ಮೋಜು- ಮಸ್ತಿ ಮಾಡುತ್ತಾ, ಅಡ್ಡಾಡುತ್ತಾ ಎಂದರಲ್ಲಿ ಮದ್ಯದ ಬಾಟಲ – ನೀರಿನ ಬಾಟಲ್ , ಕಾಗದ ಪೊಟ್ಟಣಗಳನ್ನು,
ಪ್ಲ್ಯಾಸ್ಟಿಕ್ ಚೀಲಗಳನ್ನು ಬಿಸಾಡಿ ಪರಿಸರವನ್ನು ಮಲಿನಮಾಡುವುದು ಅವ್ಯಾಹತವಾಗಿ ನಡೆಯುತ್ತಿದೆ.

ಪರಿಸರವನ್ನು ಸ್ವಚ್ಛಗೊಳಿಸುವುದು ಈ ತಾಣಗಳ ಮತ್ತು ಅಕ್ಕಪಕ್ಕದವರರಿಗೆ ದೊಡ್ಡ ತಲೆನೋವಾಗಿ ಕಾಡುತ್ತಿದೆ. ನಿಸರ್ಗದ ಮಡಿಲನ್ನು ತೆರೆದ ಬಾರ್ ಆಗಿ ಪರಿವರ್ತಿಸಿಕೊಳ್ಳುವ ಕೆಟ್ಟ ಚಾಳಿಯೊಂದಿಗೆ ತಂಪು ನೀಡುವ ಮರದ ಕೆಳಗೆ ಕುಳಿತು ಕಂಠಪೂರ್ತಿ ಮದ್ಯ ಕುಡಿದು, ಧೂಮಪಾನ ಮಾಡಿ, ಕಾಡಿನಲ್ಲಿ ದಾಂಧಲೇ
ಮಾಡುವುದು, ಹುಚ್ಚು ಹಿಡಿದವರಂತೆ ವಿಕಾರ ನೃತ್ಯ ಮಾಡುವುದು ಸಾಮಾನ್ಯ ನೋಟ. ಹೈ ಪಿಚ್‌ನಲ್ಲಿ ಮ್ಯೂಸಿಕ್ ಹಾಕಿಕೊಂಡು ಕುಣಿದು ಕುಪ್ಪಳಿಸಿ ಕಾಡು ಪ್ರಾಣಿಗಳ ನೆಮ್ಮದಿಯನ್ನು ಕೆಡಿಸಿ ಅವುಗಳು ಬೆದರಿ ದಿಕ್ಕಾಪಾಲಾಗಿ ದಿಕ್ಕೆಟ್ಟು ಓಡುವುದು ಬೇರೆ.

ಹಕ್ಕಿ- ಪಕ್ಷಿಗಳು ಈ ದಾಂಧಲೆಗೆ ಭಯಭೀತವಾಗಿ ಕಿರುಚುತ್ತವೆ. ನದಿ ಮತ್ತು ಕೆರೆಗಳ ನೀರನ್ನು ಕುಡಿಯಲು ಬಂದ ಕಾಡು ಪ್ರಾಣಿಗಳು ಪ್ರವಾಸಿಗರು ಬಿಸಾಕಿ ಹೋದ ಪ್ಲ್ಯಾಸ್ಟಿಕ್  ಮತ್ತು ಪಾಲಿಥಿನ್ ಚೀಲ ಮತ್ತು ಪ್ಯಾಕೆಟ್‌ಗಳನ್ನು ತಿಂದು ಗಂಟಲಿಗೆ ಸಿಕ್ಕಿ ಹಾಕಿಕೊಳ್ಳುತ್ತದೆ. ಹಳ್ಳಿಗಳ ಇಕ್ಕಟ್ಟಾದ ರಸ್ತೆಗಳಲ್ಲಿ ಕಿವಿ ಗಡಚಿಕ್ಕುವಂತೆ ಸಂಗೀತ ಹಾಕಿಕೊಂಡು ಹೆzರಿಯಂತೆ ವಾಹನ ಚಲಾಯಿಸುವುದು ಇನ್ನೊಂದು ಯಾತನೆ. ಪಡ್ಡೆ ಹುಡುಗರು ದ್ವಿಚಕ್ರ ವಾಹನಗಳ ಸೈಲೆನ್ಸರ್
ಗಳನ್ನು ತೆಗೆದು ಸುತ್ತಮುತ್ತಲಿನವರ ನೆಮ್ಮದಿ ಭಂಗ ಉಂಟುಮಾಡುವ ಬೈಕ್ ಒಡಿಸುವ ಖಯಾಲಿ ಬೇರೆ.

ಹಳ್ಳಿರಸ್ತೆಯಲ್ಲಿ ಮುಗ್ದ ಹಳ್ಳಿಗರ ಮುಂದೆ ಕೆಲವರು ತಮ್ಮ ವ್ಹೀಲಿಂಗ್ ಕೌಶಲ್ಯವನ್ನು ತೋರಿಸುತ್ತಾರೆ. ಕಾಡುಗಳು ನೋಮ್ಯಾನ್ ಐಲ್ಯಾಂಡ್ ಎನ್ನುವಂತೆ ಕಂಡ ಕಂಡಲ್ಲಿ ಗುಟುಕಾ – ಪಾನ್ ತಿಂದು ಕ್ಯಾಕರಿಸಿ ಉಗುಳುವುದು, ಮಲ ಮೂತ್ರ ವಿಸರ್ಜನೆ ಮಾಡುವುದು ಲಂಗು ಲಗಾಮಿಲ್ಲದೇ ನಡೆಯುತ್ತದೆ. ಎಲ್ಲಾ ರಸ್ತೆಗಳಲ್ಲಿ ಇಕ್ಕೆಲಗಳಲ್ಲಿ ಮತ್ತು ರಸ್ತೆ ಮಧ್ಯೆ, ಕವರ್‌ಗಳು, ಕಾಗದದ ಉಂಡೆಗಳು, ಬಳಸಿದ ಟಿಸ್ಯು ಪೇಪರ್‌ಗಳು, ಖಾಲಿ ಸ್ಯಾಚೆಟ್‌ಗಳು, ಸಿಗರೇಟ್ ಪ್ಯಾಕೆಟ್ ಗಳು, ಅಳಿದುಳಿದ ಆಹಾರ ಪದಾರ್ಥಗಳು, ಮದ್ಯದ ಮತ್ತು ನೀರಿನ ಬಾಟಲ್‌ಗಳನ್ನು ನೋಡಿ ಹಳ್ಳಿಗರು ಈ ಭಾಗ್ಯಕ್ಕೆ ಈ ಪರಿಸರ -ನಿಸರ್ಗ ಪ್ರವಾಸೋದ್ಯಮ ಬೇಕಿತ್ತೇ ಎಂದು ಅಚ್ಚರಿಪಡುತ್ತಾರೆ.

ಇದು ಪುಂಡರೋತ್ಸವವೋ ಅಥವಾ ಪ್ರವಾಸೋದ್ಯಮವೋ ಎಂದು ಪ್ರಶ್ನಿಸುತ್ತಾರೆ. ಹಳ್ಳಿಗರನ್ನು ನಾಗರಿಕ ಪ್ರಜ್ಞೆ ಇಲ್ಲದವರು ಎಂದು ಟೀಕಿಸುವ ಈ ನಗರಿಗರು ಈರೀತಿ ವರ್ತಿಸಬಹುದೇ ಎಂದು ಕೇಳುತ್ತಾರೆ. ಕಂಡ ಬಂಡೆ ಕಲ್ಲುಗಳ ಮೇಲೆ , ಕಂಬಗಳ ಮೇಲೆ, ಸ್ತಂಭಗಳ ಮೇಲೆ, ಮರದ ತೊಗಟೆಯನ್ನು ಸುಲಿದು ಅದರ ಮೇಲೆ ತಮ್ಮ ಪ್ರೀತಿ, ಪ್ರೇಮ,ಮತ್ತು ಪ್ರಣಯಗಳನ್ನು ಹೊರಜಗತ್ತಿಗೆ ನಿವೇದಿಸುವುದು, ತಮ್ಮ ಅಶ್ಲೀಲ ಸಾಹಿತ್ಯದ ಜ್ಞಾನಕೋಶವನ್ನು ಹೊರಚೆಲ್ಲುವುದು ವಾಕರಿಕೆ ಬರುವಷ್ಟು ಕಾಣುತ್ತದೆ. ಉತ್ತರ ಕನ್ನಡ ಜಿಲ್ಲೆಯ ಒಂದು ಪ್ರವಾಸಿ ಸ್ಥಳದಲ್ಲಿ ನದಿಯ ಮಧ್ಯ ಇರುವ ಶಿವಲಿಂಗದ ಮೇಲೆ ಕುಳಿತು ಕೋತಿ ಚೇಷ್ಟೆ ಮಾಡುವುದು, ಮದ್ಯ ಕುಡಿಯುವುದು ಮತ್ತು ಅಶ್ಲೀಲವಾಗಿ ವರ್ತಿಸುವುದನ್ನು ಪ್ರತಿಭಟಿಸಿದ ಉದಾಹರಣೆಗಳು ಇವೆಯಂತೆ.

ಪರಿಸರ ಪ್ರವಾಸೋದ್ಯಮದ ಈ ಕಾಣಿಕೆಯನ್ನು ನೋಡಿ, ಹೇಸಿ, ಕೆಲವು ಸ್ಥಳೀಯ ಮಾಧ್ಯಮಗಳು, ನಿಸರ್ಗದ ಮಡಿಲಿನಲ್ಲಿ ಆಶುಭ್ರತೆ ಮತ್ತು ಮಾಲಿನ್ಯ- ಫಾಲ್ಸ್ ಬಳಿ ಪುಂಡಪೋಕರಿಗಳ ಕಾಟ ಮುಂತಾದ ತಲೆಬರಹದಡಿಯಲ್ಲಿ ಸಂಬಂಧಪಟ್ಟವರ ಗಮನ ಸೆಳೆಯುಲು ಪ್ರಯತ್ನಿಸುತ್ತಿವೆ. ಈ ಪರಿಸರ – ನಿಸರ್ಗ ಪ್ರವಾಸೋದ್ಯಮವನ್ನು ತಮ್ಮ ಅನೈತಿಕ ಚಟು ವಟಿಕೆಗಳಿಗೆ ಬಳಸಿಕೊಳ್ಳುವ ಉದಾಹರಣೆಗಳನ್ನು ಹಳ್ಳಿಗರು ಮುಜುಗರಪಡುತ್ತಾ ಸಾಕ್ಷಿಸಹಿತ ತೋರಿಸುತ್ತಾರೆ. ಮದ್ಯ ಸೇವನೆ ಮಾಡಿಕೊಂಡು ಹೊಡದಾಟ – ಬಡಿದಾಟ ನಡೆದ ಉದಾಹರಣೆಗಳು ಇವೆ.

ಸ್ಥಳೀಯರು ಬುದ್ಧಿ ಮಾತು ಹೇಳಿದರೆ ಅವರ ಮೇಲೆಯೆ ಹಲ್ಲೆ ಮಾಡುತ್ತಾರಂತೆ. ಅನೈತಿಕೆ ಚಟುವಟಿಕೆಗಳು ಲಕ್ಷ್ಮಣ ರೇಖೆಯನ್ನು ಮೀರಿ ನಡೆಯುತ್ತವೆ ಎಂದು ಹಿರಿಯ ನಾಗರಿಕರು ಗೊಣಗುತ್ತಾರೆ. ನೀರಿನ ಝರಿ ಕಂಡಾಗ ಅಕ್ಕಪಕ್ಕದವರನ್ನು ಲೆಕ್ಕಸದೇ ಸ್ನಾನ ಮಾಡುತ್ತಾರಂತೆ. ಚೆಕ್ ಡ್ಯಾಮ್‌ಗಳಿಗೆ ಬಂದಾಗ ಅದರ ಉದ್ದ- ಆಳ ಮತ್ತು ಅಗಲಗಳನ್ನು ನಿರ್ಲಕ್ಷಿಸಿ ಮೇಲಿನಿಂದ ಜಿಗಿದು ಅಸ್ಪತ್ರೆ  ಸೇರಿದವರೂ ಇzರಂತೆ. ಹಳ್ಳಿಗಳಲ್ಲಿ ಹಳ್ಳ – ಕಂದಕಗಳನ್ನು ದಾಟಲು ಹಾಕಿದ ಕಾಲು ಸಂಕಗಳನ್ನು ಮುರಿದು ವಿಕೃತ ಸಂತೋಷವನ್ನು ಪಡೆಯುತ್ತಾರಂತೆ. ಬಂದವರೆಲ್ಲರೂ ಈರೀತಿ ಮಾಡುತ್ತಾರೆ ಎನ್ನಲಾಗದು.

ಒಂದು ತಪ್ಪಲೆ ಹಾಲನ್ನು ಕೆಡಿಸಲು ಒಂದು ಹನಿ ಹುಳಿಸಾಕಲ್ಲವೇ? ಈ ಸಮಸ್ಯೆಯಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ಪ್ರವಾಸೋದ್ಯಮ ಇಲಾಖೆಗಳು ಪಾಲುದಾರರು. ಪ್ರವಾಸಿಗರಿಗೆ ಕುಡಿಯುವ ನೀರು, ಕುಳಿತುಕೊಳ್ಳುವ ತಾಣ, ಸಾರಿಗೆ, ಶೌಚಾಲಯ, ಮೂತ್ರಾಲಯ, ಊಟೋಪಹಾರ ವ್ಯವಸ್ಥೆ ಮತ್ತು ವಸತಿಯನ್ನು ಮಧ್ಯಮವರ್ಗದ ಕಿಸೆಗೆ ಸರಿಯಾಗಿ ಕಲ್ಪಿಸಿದರೆ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಗೈಡ್ ಗಳನ್ನು ಮತ್ತು ಸೆಕ್ಯುರಿಟಿಗಳ ವ್ಯವಸ್ಥೆಯನ್ನು ಮಾಡಿದರೆ ಈ
ಸಮಸ್ಯೆಯನ್ನುನಿಯಂತ್ರಿಸಬಹುದು. ಆದರೆ, ಪ್ರವಾಸೋದ್ಯಮ ಎಂದರೆ ಪಂಚತಾರಾ – ತ್ರಿತಾರಾ ಹೋಟೆಲ್ಲುಗಳು, ಕ್ಲಬ್‌ಗಳು ಮತ್ತು ಬಾರ್ ಗಳು ಎನ್ನುವ
ಮನೋಸ್ಥಿತಿ, ಚಿಂತನೆ ಮತ್ತು ಒತ್ತು ಇರುವಾಗ ಕೆಳಮಟ್ಟದ ಪ್ರವಾಸೋದ್ಯಮ ಗರಿ ಬಿಚ್ಚುವುದು ಕೇವಲ ಚಿಂತನೆಗೆ ಸೀಮಿತ ಎನ್ನಬಹುದು.

ಪ್ರವಾಸೋದ್ಯಮದ ಅಭಿವೃದ್ಧಿಗೆ ವ್ಯಯಿಸಿದ ಹಣಕ್ಕೆ ಮಾಹಿತಿ ಇದೆ. ಹಾಗೆಯೇ ಅದಕ್ಕೆ ಸರಿಯಾಗಿ ಅಭಿವೃದ್ಧಿಯಾಗಿಲ್ಲ ಎನ್ನುವ ಕೂಗೂ ಕೇಳುತ್ತದೆ.

Leave a Reply

Your email address will not be published. Required fields are marked *