Thursday, 28th November 2024

ಒಣಗಿದ ಕಣ್ಣು ಚಿಕಿತ್ಸೆಗೆ ಹೊಸತನದ ಮೆರುಗು

ವೈದ್ಯ ವೈವಿದ್ಯ

drhsmohan@gmail.com

ಒಣಗಿದ ಕಣ್ಣು ಬಹಳ ಕಾಲ ಇದ್ದಾಗ ಕಣ್ಣಿಗೆ ಹಲವಾರು ಸೋಂಕು ತಗಲುವ ಸಾಧ್ಯತೆಯಿದೆ. ಕಣ್ಣಿನ ಹೊರಭಾಗದ ಪಾರದರ್ಶಕ ಪಟಲ ಕಾರ್ನಿಯ ಸೋಂಕಿಗೆ ಒಳಗಾಗಿ ಅಲ್ಸರ್ ಆಗಬಹುದು. ಕಣ್ಣಿನ ದೃಷ್ಟಿ ಬಹಳಷ್ಟು ಕುಂಠಿತಗೊಳ್ಳ ಬಹುದು. ಕಣ್ಣಿನ ನೆರವಿನಿಂದ ಮಾಡುವ ಓದುವ-ಬರೆಯುವ ಕೆಲಸಗಳನ್ನು ಮಾಡಲು ತುಂಬಾ ಕಷ್ಟವಾಗಬಹುದು.

‘ಒಣಗಿದ ಕಣ್ಣು’ ಸಮಸ್ಯೆಗೆ ಇತ್ತೀಚೆಗೆ ಹಲವು ಹೊಸ ಚಿಕಿತ್ಸಾ ಕ್ರಮಗಳು ಹುಟ್ಟಿ ಕೊಂಡಿವೆ. ಇವನ್ನು ಅವಲೋಕಿಸುವ ಮೊದಲು ‘ಒಣಗಿದ ಕಣ್ಣು’ ಎಂಬ ಸ್ಥಿತಿಯ ಬಗ್ಗೆ ಗಮನಹರಿಸೋಣ. ಕಣ್ಣಿಗೆ ಅವಶ್ಯಕವಾದಷ್ಟು ಕಣ್ಣೀರು ಲಭ್ಯವಾಗದಿದ್ದಾಗ ಅದನ್ನು ‘ಒಣಗಿದ ಕಣ್ಣು’ ಅಥವಾ ‘ತೇವಾಂಶ ಕುಂಠಿತ ಕಣ್ಣು’ (Dry Eyes) ಎನ್ನುತ್ತೇವೆ. ಕಣ್ಣೀರು ಉತ್ಪತ್ತಿಯಾಗುತ್ತಿದ್ದರೂ ಗುಣಮಟ್ಟದ ಕಣ್ಣೀರು ಅಲ್ಲವಾಗಿದ್ದರೆ ಅದು ಒಣಗಿದ ಕಣ್ಣಿನ ಲಕ್ಷಣವನ್ನೇ ಹೊಂದುತ್ತದೆ. ಹೀಗಾದಾಗ ಕಣ್ಣಿಗೆ ಉರಿಯೂತ ಉಂಟಾಗಿ ಹಲವು ಕಾಯಿಲೆಗಳಿಗೆ ತುತ್ತಾಗುತ್ತದೆ.

ಸಾಮಾನ್ಯವಾಗಿ ದ್ವಿಚಕ್ರ ವಾಹನ ಓಡಿಸುವಾಗ, ವಿಮಾನ ಪ್ರಯಾಣದ ವೇಳೆ, ಹವಾನಿಯಂತ್ರಿತ ಕೊಠಡಿಯಲ್ಲಿರುವಾಗ, ದೀರ್ಘ ಕಾಲ ಕಂಪ್ಯೂಟರ್/ಲ್ಯಾಪ್‌ಟಾಪ್ ಉಪಯೋಗಿಸುವಾಗ ಹೀಗೆ ಆಗುವ ಸಾಧ್ಯತೆ ಜಾಸ್ತಿ.

ಲಕ್ಷಣಗಳು: ಕಣ್ಣಿನಲ್ಲಿ ಚುಚ್ಚುವ ಅನುಭವ, ತುರಿಕೆ, ಉರಿ, ಕಣ್ಣಿನ ಬದಿಯಲ್ಲಿ ಒಂದು ರೀತಿಯ ದ್ರವ ಶೇಖರಗೊಳ್ಳುವುದು, ತೀಕ್ಷ್ಣ ಬೆಳಕಿಗೆ ಕಣ್ಣು ವಿಚಲಿತಗೊಳ್ಳುವುದು, ಕೆಂಪಾಗುವುದು, ಕಣ್ಣಿನಲ್ಲಿ ವಸ್ತು ಇದ್ದ ಅನುಭವ, ಕಾಂಟ್ಯಾಕ್ಟ್ ಲೆನ್ಸ್ ಧರಿಸಲು
ಸಾಧ್ಯವಿಲ್ಲದ ಪರಿಸ್ಥಿತಿ, ರಾತ್ರಿವೇಳೆ ವಾಹನ ಚಲಾಯಿಸಲು ಕಷ್ಟವಾಗುವುದು, ಇರಿಟೇಶನ್‌ಗೆ ಪ್ರತಿಕ್ರಿಯೆಯಾಗಿ ಕಣ್ಣಿನಲ್ಲಿ ನೀರು ಬರುವುದು, ಕಣ್ಣು ಮಂಜಾಗುವುದು, ಕಣ್ಣಿಗೆ ಆಯಾಸವಾಗುವುದು ಇತ್ಯಾದಿ.

ಕಾರಣಗಳು: ಆರೋಗ್ಯವಂತ ಕಣ್ಣೀರಿನ ಪದರವನ್ನು ಹಾಳುಗೆಡಹುವ ಹಲವಾರು ಅಂಶಗಳು ಇದಕ್ಕೆ ಕಾರಣವಾಗುತ್ತವೆ. ಕಣ್ಣೀರಿನಲ್ಲಿ ಕೊಬ್ಬಿನ ಎಣ್ಣೆಯ ಪದರ, ತಿಳಿಯಾದ ಏಕ್ವಿಯಸ್ ದ್ರವದ ಪದರ, ಒಳಭಾಗದ ಮ್ಯೂಕಸ್ ಪದರ ಎಂಬ ೩
ಪದರಗಳಿವೆ. ಇವುಗಳಲ್ಲಿನ ಎಲ್ಲಾ ಅಂಶಗಳು ಸರಿಯಾಗಿದ್ದರೆ ಕಣ್ಣನ್ನು ಸರಿಯಾಗಿಟ್ಟಿರುತ್ತವೆ, ಸ್ಪಷ್ಟವಾಗಿರುವಂತೆ ನೋಡಿ ಕೊಳ್ಳುತ್ತವೆ. ಈ ಮೂರು ಪದರಗಳ ಯಾವುದೇ ಸಮಸ್ಯೆಯೂ ಒಣಗಿದ ಕಣ್ಣಿನ ಸ್ಥಿತಿಗೆ ಕಾರಣವಾಗಬಹುದು. ಕಣ್ಣೀರಿನ
ತೊಂದರೆಗೆ ಹಲವು ಕಾರಣಗಳಿವೆ. ಅವೆಂದರೆ, ಹಾರ್ಮೋನು ಬದಲಾವಣೆಗಳು, ಆಟೋ ಇಮ್ಯೂನ್ ಕಾಯಿಲೆಗಳು, ಕಣ್ಣು ರೆಪ್ಪೆಯ ಸೋಂಕುಗಳು ಹಾಗೂ ಕಣ್ಣಿನ ಅಲರ್ಜಿ ಕಾಯಿಲೆಗಳು. ಪರಿಣಾಮ, ಕಣ್ಣೀರಿನ ಉತ್ಪಾದನೆ ಕಡಿಮೆಯಾಗುವುದು ಅಥವಾ ಕಣ್ಣೀರು ಬೇಗ ಆವಿಯಾಗಿ ಹೋಗುವುದು.

ಕಣ್ಣು ಅಗತ್ಯ ಪ್ರಮಾಣದ ಕಣ್ಣೀರನ್ನು ಉತ್ಪಾದಿಸಲು ಸಾಧ್ಯವಾಗದಿದ್ದಾಗ ಹೀಗಾಗುತ್ತದೆ. ಇದಕ್ಕೆ ಕೆರಟೋಕಂಜಂಕ್ಟವೈಟಿಸ್ ಸಿಕ್ಕ (Keratoconjunctavitis Sicca) ಎಂದು ಕರೆಯಲಾಗುತ್ತದೆ. ಇದಕ್ಕೆ ಸಾಮಾನ್ಯ ಕಾರಣಗಳೆಂದರೆ ವಯಸ್ಸಾಗು ವಿಕೆ, ಕೆಲವು ಕಾಯಿಲೆಗಳು, ಕಣ್ಣಿನ ಅಲರ್ಜಿ ಕಾಯಿಲೆಗಳು, ರುಮೆಟೈಡ್ ಆರ್ಥರೈಟಿಸ್, ಸ್ಲೀರೋಡರ್ಮ, ಜೋಗ್ರನ್ ಸಿಂಡ್ರೋಮ್, ಸಾರ್ಕೊಯಿಡೋಸಿಸ್, ಥೈರಾಯ್ಡ್ ಕಾಯಿಲೆ, ‘ಎ’ ಅನ್ನಾಂಗದ ಕೊರತೆ. ಹಲವು ಔಷಧಿಗಳು ಇದಕ್ಕೆ ಕಾರಣ ವಾಗಬಹುದು. ಅಂದರೆ, ಆಂಟಿಹಿಸ್ಟಮಿನ್‌ಗಳು, ಡೀಕಂಜಸ್ಟಂಟ್‌ಗಳು, ಹಾರ್ಮೋನ್ ಚಿಕಿತ್ಸೆ, ಅತಿಯಾದ ರಕ್ತದೊತ್ತಡಕ್ಕೆ ಮತ್ತು ಪಾರ್ಕಿನ್ಸನ್ ಕಾಯಿಲೆಗೆ ಉಪಯೋಗಿಸುವ ಔಷಧಗಳು. ಜತೆಗೆ, ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಕ್ಕೆ ತೊಂದರೆಯಾದಾಗ, ಸುದೀರ್ಘ ಕಾಲ ಕಾಂಟ್ಯಾಕ್ಟ್ ಲೆನ್ಸ್ ಉಪಯೋಗಿಸಿದಾಗ, ನರಗಳಿಗೆ ತೊಂದರೆಯಾದಾಗ ಲೇಸರ್‌ನಿಂದ
ಕಾರ್ನಿಯಕ್ಕೆ ಚಿಕಿತ್ಸೆ ಮಾಡಿದಾಗ ಇದು ತಲೆದೋರಬಹುದು.

ಕಣ್ಣೀರು ಬೇಗ ಆವಿಯಾದಾಗ: ಕಣ್ಣಿನ ರೆಪ್ಪೆಯ ಭಾಗದಲ್ಲಿರುವ ಸಣ್ಣ ಗ್ರಂಥಿಗಳು ಉತ್ಪಾದಿಸುವ ಎಣ್ಣೆಯ ರೀತಿಯ ದ್ರವ ಕಟ್ಟಿಕೊಳ್ಳಬಹುದು. ಇದು ಚರ್ಮದ ಹಲವು ಕಾಯಿಲೆಗಳಲ್ಲಿ ಆಗುತ್ತದೆ. ಉದಾ: ರೋಸೇಸಿಯ ಎಂಬ ಚರ್ಮದ ಕಾಯಿಲೆ.
ಕಣ್ಣಿನ ರೆಪ್ಪೆಯ ಕಾಯಿಲೆ ಪೋಸ್ಟೀರಿಯರ್ ಬ್ಲೆ-ರೈಟಿಸ್. ಕಣ್ಣು ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮುಚ್ಚಿ ಬಿಟ್ಟು ಮಾಡಿ ದಾಗ- ಇದು ಪಾರ್ಕಿನ್ಸನ್ ಕಾಯಿಲೆ, ವಾಹನ ಚಲಾಯಿಸುವಾಗ, ದೀರ್ಘಕಾಲ ಕಂಪ್ಯೂಟರ್ ಉಪಯೋಗಿಸುವಾಗ ಇಂಥ ಸಂದರ್ಭಗಳಲ್ಲಿ ಆಗುತ್ತದೆ. ಕಣ್ಣಿನ ರೆಪ್ಪೆಯ ಹಲವು ಕಾಯಿಲೆಗಳು- ತುದಿ ಹೊರ ಭಾಗದಲ್ಲಿ ಹೊರಳಿಕೊಂಡಾಗ (Ectropion), ರೆಪ್ಪೆಯ ತುದಿ ಒಳಭಾಗದಲ್ಲಿ ಹೊರಳಿದಾಗ (Entropion), ಕಣ್ಣಿನ ಹಲವು ಅಲರ್ಜಿಗಳು.

ಒಣಗಿದ ಕಣ್ಣು ಬಹಳ ಕಾಲ ಇದ್ದಾಗ ಕಣ್ಣಿಗೆ ಹಲವಾರು ಸೋಂಕು ಕಾಯಿಲೆಗಳು ಬರುವ ಸಾಧ್ಯತೆ ಇದೆ. ಕಣ್ಣಿನ ಹೊರಭಾಗದ ಪಾರದರ್ಶಕ ಪಟಲ ಕಾರ್ನಿಯ ಸೋಂಕಿಗೆ ಒಳಗಾಗಿ ಅಲ್ಸರ್ ಆಗಬಹುದು. ಕಣ್ಣಿನ ದೃಷ್ಟಿ ಬಹಳಷ್ಟು ಕುಂಠಿತಗೊಳ್ಳಬಹುದು. ಕಣ್ಣಿನ ನೆರವಿನಿಂದ ಮಾಡುವ ಓದುವ ಬರೆಯುವ ಕೆಲಸಗಳನ್ನು ಮಾಡಲು ತುಂಬಾ ಕಷ್ಟವಾಗುತ್ತದೆ.

ಚಿಕಿತ್ಸೆ: ಈಗ ಲಭ್ಯವಿರುವ ಚಿಕಿತ್ಸೆ ಎಂದರೆ ಕೃತಕ ಕಣ್ಣೀರಿನ ಹನಿಗಳನ್ನು ಉಪಯೋಗಿಸುವುದು. ನಿರ್ದಿಷ್ಟ ಕಾರಣ ಕಂಡು ಬಂದರೆ ಅದನ್ನು ಚಿಕಿತ್ಸೆ ಮಾಡುವುದು.

ಕೃತಕ ಕಣ್ಣೀರಿನ ಹನಿ ಔಷಧಗಳು: ಇದರಲ್ಲಿ ಹಲವು ಬಗೆಗಳಿವೆ. ಹನಿ ಔಷಧಗಳಲ್ಲಿ ಪ್ರಿಸರ್ವೇಟಿವ್ ಇಲ್ಲದ ಹನಿ ಔಷಧಗಳು ಕಣ್ಣಿಗೆ ಒಳ್ಳೆಯದು. ಏಕೆಂದರೆ ಇವು ಕಣ್ಣಿಗೆ ಇರಿಯುವುದಿಲ್ಲ. ತಂಪಾದ ಅನುಭವ ಕೊಡುತ್ತವೆ. ಸಾಮಾನ್ಯವಾಗಿ ಕಾಯಿಲೆಯಲ್ಲಿ ಉಪಯೋಗಿಸುವ ಔಷಧಗಳೆಂದರೆ ಸೈಕ್ಲೊಸ್ಪೋರೀನ್ ಕಣ್ಣಿನ ಹನಿ ಔಷಧಗಳು- ಇವು ಕಣ್ಣೀರು ಉತ್ಪತ್ತಿಯಾಗುವುದನ್ನು ಜಾಸ್ತಿ ಮಾಡಿ ಚಿಕಿತ್ಸೆಗೆ ಅನುವು ಮಾಡಿಕೊಡುತ್ತವೆ. ಹಾಗೆಯೇ ಮೀಥೈಲ್ ಸೆಲ್ಯೂಲೋಸ್ ಮತ್ತು ಕಾರ್ಬಾಕ್ಸಿಮಿಥೈಲ್ ಸೆಲ್ಯುಲೋಸ್ ಹಾಗೂ ಪಾಲಿಎಥಿಲೀನ್ ಗ್ಲೈಕಾಲ್- ಈ ಔಷಧಗಳನ್ನು ಕೂಡ ಉಪಯೋಗಿಸುತ್ತೇವೆ. ಹಾಗೆಯೇ ಆ ವ್ಯಕ್ತಿಯ ರಕ್ತದಿಂದಲೇ ತಯಾರುಮಾಡಿದ ಕಣ್ಣಿನ ಹನಿ ಔಷಧಿಗಳನ್ನು ಬಹಳ ತೀವ್ರವಾದ ಒಣಗಿದ ಕಣ್ಣು ಇದ್ದವರಲ್ಲಿ ಉಪಯೋಗಿಸಲಾಗುತ್ತದೆ.

ಹಾಗೆಯೇ ರೆಪ್ಪೆಯ ಮೇಲೆ ಇರುವ ಸೋಂಕು ತೆಗೆಯಲು ಹಲವು ರೀತಿಯ ಕ್ಲೀನರ್‌ಗಳು ಹಾಗೂ ಮುಲಾಮುಗಳನ್ನು ಉಪಯೋಗಿ ಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಲೋಟೆಪ್ರೆಡ್ನಾಲ್ ಎಟಬೊನೆಟ್ ಎಂಬ ಕಡಿಮೆ ಸ್ಟೀರಾಯ್ಡ್ ಅಂಶವಿರುವ ಕಣ್ಣಿನ ಹನಿ ಗಳನ್ನು ಉಪಯೋಗಿಸಲಾಗುತ್ತಿದೆ. ೨೦೨೦ರಲ್ಲಿ ೨೮೦೦ ಜನರಲ್ಲಿ ಕೈಗೊಂಡ ಅಧ್ಯಯನದಲ್ಲಿ ಇದನ್ನು ಉಪಯೋಗಿಸಿದ ನಂತರ ಒಣಗಿದ ಕಣ್ಣಿನ ಚಿಕಿತ್ಸೆಗೆ ಅಮೆರಿಕದ ಎಫ್ಡಿಎ ಒಪ್ಪಿಗೆ ಕೊಟ್ಟಿತು. ೨೦೧೬ರಲ್ಲಿ ಎಫ್ ಡಿಎನಿಂದ ಒಪ್ಪಿಗೆ ದೊರಕಿಸಿ ಕೊಂಡ ಇನ್ನೊಂದು ಔಷಧ ಲಿಫಿಟಿಗ್ರಾಸ್ಟ್. ಇದು ಲಿಂ-ಸೈಟ್ ಫಂಕ್ಷನ್ ಅಸೋಸಿಯೇಟೆಡ್ ಆಂಟಿಜೆನ್ ೧ ಎಂಟಾಗೊನಿಸ್ಟ್ ಗುಂಪಿಗೆ ಸೇರಿದ ಔಷಧ. ಇದು ಕಣ್ಣೀರಿನ ಉತ್ಪಾದನೆ ಹೆಚ್ಚಿಸುತ್ತದೆ. ನಾಲ್ಕು ಬೇರೆ ಬೇರೆ ಸ್ಥಳಗಳಲ್ಲಿ ೧೦೦೦ ಜನರಲ್ಲಿ ರಾಂಡ ಮೈಸ್ಡ್ ಕಂಟ್ರೋಲ್ ಅಧ್ಯಯನ ನಡೆಸಿ ಈ ಔಷಧವನ್ನು ಒಣಗಿದ ಕಣ್ಣಿನ ಚಿಕಿತ್ಸೆಗೆ ಒಪ್ಪಲಾಯಿತು.

ಬೇರೆ ಕ್ರಮಗಳು: ಇಂಟೆನ್ಸ್ ಪಲ್ಸಡ್ ಲೈಟ್ ಥೆರಪಿ- ಇದು ಕಣ್ಣಿನ ಹೊರಭಾಗದ ಚರ್ಮಕ್ಕೆ ಬೆಳಕಿನ ತರಂಗಗಳನ್ನು ಹಾಯಿಸು ತ್ತದೆ. ಇದು ಕಣ್ಣಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಇದರಲ್ಲಿ ಇತ್ತೀಚಿನ ಸುಧಾರಿತ ಬಗೆ ಎಂದರೆ ಅಪ್ಟಿಲೈಟ್. ೨೦೨೧ರಲ್ಲಿ ಎಫ್ ಡಿಎನಿಂದ ಒಪ್ಪಲ್ಪಟ್ಟ ಈ ಚಿಕಿತ್ಸೆಯಲ್ಲಿ ರೆಪ್ಪೆಯಲ್ಲಿರುವ ಮೀಬೋಮಿಯನ್ ಗ್ರಂಥಿಗಳ ಡಿಸ್-ಂಕ್ಷನ್‌ನಿಂದ ಉಂಟಾಗುವ ಒಣಗಿದ ಕಣ್ಣು ಲಕ್ಷಣವನ್ನು ಯಶಸ್ವಿಯಾಗಿ ಉಪಚರಿಸಲಾಗುತ್ತದೆ. ಇನ್ನೆರಡು ಅಂದರೆ ಲಿಪಿ- ಮತ್ತು ಐಲೆಕ್ಸ್- ಈ ಚಿಕಿತ್ಸೆಯಲ್ಲಿ ಶಾಖ ಮತ್ತು ಒತ್ತಡವನ್ನು ಉಪಯೋಗಿಸಿ ಕಣ್ಣಿನ ರೆಪ್ಪೆಗೆ ಮಸಾಜ್ ಮಾಡಲಾ ಗುತ್ತದೆ. ಅದರಿಂದ ಕಟ್ಟಿಕೊಂಡಿರುವ ಎಣ್ಣೆಯ ಅಂಶವನ್ನು ನಿರ್ಮೂಲನ ಮಾಡಲಾಗುತ್ತದೆ.

ಕಣ್ಣೀರು ಬೇಗನೆ ಆವಿಯಾಗಿ ಒಣಗಿದ ಕಣ್ಣು ಉಂಟಾದಾಗ ಉಪಯೋಗವಾಗುವ ಚಿಕಿತ್ಸೆಗಳಿವು: ಕಣ್ಣಿಗೆ ತೂರಿಸುವ ಸಣ್ಣ ಉಪಕರಣ: ಇದು ಹೈಡ್ರಾಕ್ಸಿ ಪ್ರೊಪೈಲ್ ಸೆಲ್ಯುಲೋಸ್ ಒಳಗೊಂಡ ಔಷಧ. ಇದನ್ನು ಕಣ್ಣಿನ ವೈದ್ಯರು ಕಣ್ಣಿನ ಕೆಳರೆಪ್ಪೆಯಲ್ಲಿ ತೂರಿಸುತ್ತಾರೆ. ಅಕ್ಕಿಯ ಸಣ್ಣ ಕಾಳಿನ ರೀತಿಯಲ್ಲಿರುವ ಇದು ನಿಧಾನವಾಗಿ ಕರಗುತ್ತಾ ಹೋಗಿ ಕಣ್ಣೀರಿನ ತೇವಾಂಶ ಜಾಸ್ತಿಯಾಗುವಂತೆ ಮಾಡುತ್ತದೆ.

ಕಣ್ಣಿನ ರೆಪ್ಪೆಯಲ್ಲಿರುವ ಸಣ್ಣ ರಂಧ್ರ ‘ಪಂಕ್ಟಮ್’ ಅನ್ನು ಮುಚ್ಚುವುದು. ಇದರಲ್ಲಿ ಕಣ್ಣಿನ ರೆಪ್ಪೆಯಲ್ಲಿ ಒಂದು ರೀತಿಯ ಪ್ಲಗ್ ಅನ್ನು ತೂರಿಸಿ ಅದರಲ್ಲಿ ಡ್ರೈನ್ ಇಡಲಾಗುತ್ತದೆ. ಕೆಲವೊಮ್ಮೆ ಗಂಭೀರ ಸಂದರ್ಭಗಳಲ್ಲಿ ಶಸ್ತ್ರಕ್ರಿಯೆ ಕೈಗೊಳ್ಳಬೇಕಾಗುತ್ತದೆ.

ಇನ್ನಿತರ ಕ್ರಮಗಳೆಂದರೆ: ಆಹಾರ: ಆಹಾರದಲ್ಲಿ ಒಮೇಗಾ-೩ -ಟಿ ಆಸಿಡ್ ಸಪ್ಲಿಮೆಂಟ್‌ಗಳನ್ನು ಸೇವಿಸಿದರೆ ಈ ಕಾಯಿಲೆಗೆ
ಅನುಕೂಲ. ಕೆಲವು ರೋಗಿಗಳಲ್ಲಿ ವಿಟಮಿನ್ ‘ಎ’ ಮತ್ತು ‘ಡಿ’ ಇರುವ ಆಹಾರವನ್ನು ಸೇವಿಸಿದರೆ ಈ ಒಣಗಿದ ಕಣ್ಣಿನ ಲಕ್ಷಣಗಳು ಕಡಿಮೆಯಾಗುತ್ತವೆ ಎಂದು ಕೆಲವು ಅಧ್ಯಯನಗಳು ತಿಳಿಸುತ್ತವೆ.

ಜೀವನಶೈಲಿ ಮತ್ತು ಕ್ರಮಗಳಲ್ಲಿ ಬದಲಾವಣೆ: ಕಣ್ಣನ್ನು ಅನವಶ್ಯವಾಗಿ ತಿಕ್ಕುತ್ತಿರಬಾರದು. ದಿನದಲ್ಲಿ ಕೆಲವು ಬಾರಿ ಬಿಸಿನೀರಿನ ಶಾಖವನ್ನು ಕಣ್ಣಿನ ರೆಪ್ಪೆಗೆ ಕೊಡುತ್ತಿರಬೇಕು. ಪ್ರಿಸರ್ವೇಟಿವ್ಸ್ ಒಳಗೊಂಡ ಕಣ್ಣಿನ ಹನಿ ಔಷಧಗಳನ್ನು ಉಪಯೋಗಿ ಸುವುದನ್ನು ಆದಷ್ಟು ತಪ್ಪಿಸಬೇಕು. ಆಗಾಗ ಹ್ಯುಮಿಡಿ-ಯರ್ ಗಳನ್ನು ಉಪಯೋಗಿಸುವುದು ಒಳ್ಳೆಯದು. ಕಣ್ಣಿನಲ್ಲಿ ಉರಿ, ಕಡಿತ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ಸಾಧ್ಯವಾದಷ್ಟು ಕಣ್ಣಿಗೆ ವಿರಾಮ ಕೊಡಬೇಕು. ಕಣ್ಣಿನ ರೆಪ್ಪೆಯನ್ನು ಆಗಾಗ ಪಿಳಕಿಸುತ್ತಾ ಇರಬೇಕು. ಪ್ರತಿರಾತ್ರಿ ಪೂರ್ಣವಾದ ನಿದ್ರೆ ಮಾಡಬೇಕು. ದಿವಸದಲ್ಲಿ ಆದಷ್ಟು ಜಾಸ್ತಿ ನೀರು ಕುಡಿಯುತ್ತಿರಬೇಕು. ಮದ್ಯಪಾನದ ಅಭ್ಯಾಸ ಇದ್ದರೆ ಬಹಳ ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವಿಸಬೇಕು. ಮೊಬೈಲ್, ಲ್ಯಾಪ್‌ಟಾಪ್ ಉಪಯೋಗ ವನ್ನು ಆದಷ್ಟು ಮಿತಿಗೊಳಿಸಬೇಕು. ಸಾಧ್ಯವಾದರೆ ಸ್ಕ್ರೀನ್ ಎತ್ತರ ಕಡಿಮೆ ಮಾಡಬೇಕು. ಅಂದರೆ ನೀವು ಮೇಲಿನಿಂದ ಕೆಳಗೆ ವೀಕ್ಷಿಸುತ್ತಿರಬೇಕು. ಕಾಂಟ್ಯಾಕ್ಟ್ ಲೆನ್ಸ್ ಧರಿಸುತ್ತಿದ್ದರೆ ಅದನ್ನು ನಿಯತವಾಗಿ ಸ್ವಚ್ಛಗೊಳಿಸುತ್ತಿರಬೇಕು.

ವಾತಾವರಣದಲ್ಲಿ ಬದಲಾವಣೆ ಮಾಡಿಕೊಳ್ಳುವುದು: ಅಂದರೆ ಸಾಧ್ಯವಾದಷ್ಟು ಹೊರಗಿನ ಹೊಗೆ ಮತ್ತು ಗಾಳಿಯ ಮಲಿನ ವಸ್ತುಗಳ ಸಂಪರ್ಕವನ್ನು ತಪ್ಪಿಸಬೇಕು. ಮನೆಯಿಂದ ಹೊರಗೆ ಹೋಗುವಾಗ ಕೂಲಿಂಗ್ ಅಥವಾ ಟಿಂಟೆಡ್ ಗ್ಲಾಸ್‌ಗಳನ್ನು ಧರಿಸಬೇಕು. ಬಹಳ ಗಾಳಿ ಯುಕ್ತ ವಾತಾವರಣಕ್ಕೆ ಒಡ್ಡಿಕೊಳ್ಳುವಾಗ ಕಣ್ಣನ್ನು ಸಂಪೂರ್ಣವಾಗಿ ಮುಚ್ಚುವ ರೀತಿಯ ಗ್ಲಾಸ್ ಅನ್ನು ಧರಿಸಬೇಕು. -ನ್‌ಗಳು ಮತ್ತು ಹೀಟರ್‌ಗಳ ನೇರವಾದ ಗಾಳಿ ಕಣ್ಣಿಗೆ ಹೋಗದಿರುವ ಹಾಗೆ ನೋಡಿಕೊಳ್ಳಬೇಕು.

ಇತ್ತೀಚಿನ ಹೊಸ ಚಿಕಿತ್ಸೆ: ಉರಿಯೂತ ಕಡಿಮೆ ಮಾಡುವ ಹೊಸ ರೀತಿಯ ಔಷಧಗಳು. ಮೀಬೋಮಿಯನ್ ಗ್ರಂಥಿಯಲ್ಲಿ ತೊಂದರೆ ಇರುವವರಿಗೆ ಎರಡು ಹೊಸ ರೀತಿಯ ಚಿಕಿತ್ಸೆ ಲಭ್ಯವಿದೆ. ೧) ನೋವೋ ೩ ಎಂಬ ಔಷಧ- ದಿವಸದಲ್ಲಿ ೪ ಬಾರಿ ಎರಡೂ ಕಣ್ಣಿಗೆ ಉಪಯೋಗಿಸುವುದು. ೨) ಎಜಡ್‌ಆರ್-ಎಂ ಡಿ-೦೦೧ ಎಂಬ ಮುಲಾಮು. ಇದು ಮೀಬೋಮಿಯನ್ ಗ್ರಂಥಿ
ಯಲ್ಲಿ ಪ್ರೋಟೀನ್‌ಗಳು ಶೇಖರಗೊಂಡು ಒಣಗಿದ ಕಣ್ಣು ಉಂಟಾಗುವುದನ್ನು ನಿಲ್ಲಿಸುತ್ತದೆ.

ಕಣ್ಣಿನ ರೆಪ್ಪೆಯ ಸೋಂಕು ‘ಬ್ಲೆ-ರೈಟಿಸ್’ ಉಂಟುಮಾಡುವ ಡಿಮೊಡೆಕ್ಸ್ ಮೈಟ್ಸ್ ಎಂಬ ಸಣ್ಣಹುಳು ತುಂಬಾ ತೊಂದರೆ ಉಂಟು ಮಾಡುತ್ತದೆ. ಬ್ಲೆ-ರೈಟಿಸ್ ಸೋಂಕಿಗೆ ಶೇ.೫೦ರಷ್ಟು ಬಾರಿ ಇದೇ ಹುಳು ಕಾರಣವಾಗಿರುತ್ತದೆ. ಈಗಿನ ಚಿಕಿತ್ಸೆ ಎಂದರೆ ರೆಪ್ಪೆಯ ಮಾರ್ಜಿನ್‌ಗೆ ಕೆಲವು ಮುಲಾಮು ಹಚ್ಚುವುದು. ಆದರೆ ಈಗ ಟಿಪಿ ೦೩ ಎಂಬ ಹೊಸರೀತಿಯ ಹನಿ ಔಷಧಿಗಳು ಬಂದಿವೆ. ಅವನ್ನು ದಿನದಲ್ಲಿ ೨ ಬಾರಿ ಕಣ್ಣಿಗೆ ಹಾಕಿದರೆ ಅದು ಈ ಸೋಂಕಿಗೆ ಕಾರಣವೆನಿಸುವ ಮೈಟ್ಸ್‌ಗಳನ್ನು ಹೊರ ಹಾಕಿ ಕಾಯಿಲೆ ವಾಸಿಯಾಗು ವಂತೆ ಮಾಡುತ್ತದೆ.

ಅಲರ್ಜಿ ಕಂಜಂಕ್ಟವೈಟಿಸ್‌ಗೆ ಈಗ ಪ್ರಸ್ತುತ ಆಂಟಿ ಹಿಸ್ಟಮೀನ್ ಮತ್ತು ಸ್ಟೀರಾಯ್ಡ್ ಒಳಗೊಂಡ ಕಣ್ಣಿನ ಹನಿ ಔಷಧಗಳನ್ನು ಉಪಯೋಗಿಸುತ್ತೇವೆ. ಇವು ಕಾಯಿಲೆಯ ಲಕ್ಷಣವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುತ್ತವೆ. ಈಗ ೨ ಹೊಸ ರೀತಿಯ ಚಿಕಿತ್ಸೆಗಳು ಲಭ್ಯವಿವೆ. ೧) ರಿಪ್ರೋಕ್ಸ್ ಲಾಪ್: ಇದು ಸ್ಟೀರಾಯ್ಡ್ ಔಷಧದ ಅವಗುಣ ಇಲ್ಲದ ಉರಿಯೂತದ ಔಷಧ. ದಿವಸದಲ್ಲಿ ನಾಲ್ಕು ಬಾರಿ ೧೨ ವಾರಗಳವರೆಗೆ ಉಪಯೋಗಿಸಬೇಕು. ೨) ಐಸಿ ೨೬೫: ಇದೂ ಉರಿಯೂತವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಈ ಹೊಸ ರೀತಿಯ ಚಿಕಿತ್ಸೆಗಳು ಒಣಗಿದ ಕಣ್ಣಿನ ಸಮಸ್ಯೆಯಿರುವ ರೋಗಿಗಳಿಗೆ ವರದಾನವಾಗಿವೆ.