ಸುಪ್ತ ಸಾಗರ
rkbhadti@gmail.com
ನಾಳೆ ಬೆಳಗಾದರೆ ಇನ್ನೊಂದು ಕ್ಯಾಲೆಂಡರ್ ಬದಲಾಗುತ್ತದೆ. ಅದರೊಟ್ಟಿಗೆ ಬದಲಾಗಬೇಕಾದ್ದು ನಮ್ಮೆಲ್ಲರ ಬದಕಿನಲ್ಲಿ ಬಹಳಷ್ಟಿದೆ. ಪ್ರತಿ ಹೊಸ ವರ್ಷದ ಆರಂಭಕ್ಕೂ ಇಂಥ ಬದಲಾವಣೆಯ ಸಂಕಲ್ಪಗಳು ಪ್ರತಿಯೊಬ್ಬರ ಮನದಲ್ಲೂ ಮೂಡುತ್ತವೆ, ಆದರೆ ಮೂಡಿದಷ್ಟೇ ವೇಗದಲ್ಲಿ ಮರೆಯಾಗುತ್ತವೆ. ಹಾಗೇ
ನೋಡಿದರೆ ಸಂಕಲ್ಪಗಳಿಗೆ ಬೇಕಿರುವುದು ಮುಹೂರ್ತಗಳಲ್ಲ; ದೃಢ ಮನಸು. ಅಂಥ ಮನಸಿದ್ದರೆ ಯಾವತ್ತಾದರೂ, ಯಾವುದೇ ಕ್ಷಣದಲ್ಲಾದರೂ ಪಣ ತೊಟ್ಟು ನಿಲ್ಲಬಹುದು.
ಒಮ್ಮೆ ಗಟ್ಟಿ ಮನಸು ಮಾಡಿದರೆ ಅರ್ಧ ಕೆಲಸ ಆದಂತೆಯೇ. ಅಂಥ ಮನಸಿಗೆ ಅಡ್ಡಿ ಬರುವುದು ನಮ್ಮೊಳಗೆ ಸೃಷ್ಟಿಗೊಳ್ಳುವ, ನಿಜಕ್ಕೂ ಇಲ್ಲದ ನೆಪಗಳು ಮಾತ್ರ. ಹೋಸ ವರ್ಷದ ಹೊಸ್ತಿಲಲ್ಲಿ ನಾನಂದುಕೊಂಡದ್ದನ್ನು ನಿಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದೇನೆ; ಬೇಕಿದ್ದರೆ ನೀವು ಬಳಸಿಕೊಳ್ಳಬಹುದು.
***
ದೇವರಿಲ್ಲ ಅಂತಲ್ಲ. ಅವನ ಮೇಲಿನ ನಂಬಿಕೆ ಬೇಡ ಅಂತಲೂ ಅಲ್ಲ. ಇಂಥವು ಬೇಕಾಗುವುದು ನಮ್ಮ ವಿಶ್ವಾಸವನ್ನು ಹೆಚ್ಚಿಸಲು. ಭಗವದ್ವಿಶ್ವಾಸ ಇಡುವ ಮೊದಲು ನಮ್ಮೊಳಗಿನ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಎಲ್ಲ ಧರ್ಮಗಳ ಸಾರವೂ ಇದೇ. ಜೀವನದ ಯಶಸ್ಸಿನ ರಹಸ್ಯ ಅಡಗಿರುವುದು ಧರ್ಮ, ಸಿದ್ಧಾಂತಗಳಲ್ಲಿ ಅಲ್ಲವೇ ಅಲ್ಲ. ದೇವರೆಂಬು ದನ್ನು ವಿಶ್ವಾಸ ವೃದ್ಧಿಯ ಅಸವಾಗಿ ಉಪಯೋಗಿಸಬೇಕು. ಆಚಾರ್ಯ ರಜನೀಶರು ಹೇಳುವುದು ಬಹಳ ಸ್ವಾರಸ್ಯಕರವಾಗಿದೆ. ನಮಗೆ ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ಅಂದೊದು ರೀತಿಯ ನೆಮ್ಮದಿ, ಶಾಂತಿಯ ಅನುಭೂತಿ ಆಗುತ್ತದೆ. ದೇವರ ಮೂರ್ತಿಯನ್ನು ನೋಡುತ್ತಿದ್ದಂತೆಯೇ
ನಿರಾಳ ಭಾವ ಮೂಡುತ್ತದೆ. ಕಾರಣವಿಷ್ಟೇ, ದೇಗುಲದ ಒಳಗೆ ಇರುವುದು ದೇವತಾ ಬಿಂಬವಷ್ಟೇ ಅಲ್ಲ. ಅದು ನಮ್ಮ ವ್ಯಕ್ತಿತ್ವದ ಬಿಂಬ. ದೇವರ ಪ್ರತಿಮೆಯಲ್ಲಿ ನಮ್ಮ ಪ್ರತಿಬಿಂಬವನ್ನು ನಾವು ನೋಡಿಕೊಳ್ಳತೊಡಗುತ್ತೇವೆ. ಬೇರೆಲ್ಲ ಜಂಜಡಗಳು, ಸಮಸ್ಯೆಗಳನ್ನು ಮರೆತು ಏಕಾಗ್ರತೆಗೆ ಜಾರುತ್ತೇವೆ.
ನಮ್ಮ ತಪ್ಪು, ಲೋಪ ದೋಷಗಳನ್ನೆಲ್ಲ ಒಂದೊಂದಾಗಿ ನೆನಪಿಗೆ ತಂದುಕೊಳ್ಳುತ್ತೇವೆ. ಅದನ್ನೆಲ್ಲ ಒಪ್ಪಿಕೊಂಡು ಪಶ್ಚಾತ್ತಾಪಕ್ಕೆ ಜಾರುತ್ತೇವೆ. ಇನ್ನು ಅದು ಪುನಾರಾವರ್ತನೆ ಮಾಡದಿರುವ ಸಂಕಲ್ಪ ತೊಡುತ್ತೇವೆ. ಇದೇ ಆತ್ಮ ವಿಮರ್ಶೆ. ಇಂಥ ಸ್ವವಿಮರ್ಶೆಯ ಮನಸ್ಸು ಮತ್ತು ಸಾಮರ್ಥ್ಯಗಳು ನಮ್ಮಲ್ಲಿ ಬಲವಾಗಿದ್ದರೆ ದೇಗುಲಕ್ಕೇ ಹೋಗಬೇಕೆಂದೇನೂ ಇಲ್ಲ. ದೇವರನ್ನು ನಂಬದೆಯೂ, ಪೂಜೆ, ಪ್ರಾರ್ಥನೆಗಳನ್ನು ಮಾಡದೆಯೂ ವಿಶ್ವಾಸ ವೃದ್ಧಿಗೊಳಿಸಿಕೊಳ್ಳಲು ಸಾಧ್ಯ. ಒಳ್ಳೆಯತನ ಎಂಬುದೇ ಎಲ್ಲ ಧರ್ಮದ ಸಾರ. ಒಳ್ಳೆಯವರಾಗಿ ಬಾಳಲು ಯಾವುದೇ ಧರ್ಮ, ದೇವರೇ ಬೇಕಿಲ್ಲ.
ನಮ್ಮಲ್ಲಿ ವಿಶ್ವಾಸ ವೃದ್ಧಿಸಿಕೊಂಡರೆ ಭಗವದ್ವಿಶ್ವಾಸ ತನ್ನಿಂದ ತಾನೇ ಮೊಳೆಯುತ್ತದೆ. ಯಾರಿಗೆ ತನ್ನ ಮೇಲೆ ನಂಬಿಕೆ ಇರುತ್ತದೋ ಅವರು ಬೇರೆಯವರನ್ನೂ ನಂಬುತ್ತಾರೆ. ಇದಕ್ಕೆ ದೇವರೂ ಹೊರತಲ್ಲ. ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಋಜು ಮಾರ್ಗದಲ್ಲಿ ಪ್ರಾಮಾಣಿವಾಗಿ ಪ್ರಯತ್ನ ಮಾಡೋಣ. ಕೈಲಾಗದ ಹೇಡಿಗಳು, ಅಬಲರು ಮಾತ್ರ ಹಣೆಬರಹ, ದೇವರು ಕೊಟ್ಟದ್ದೇ ಇಷ್ಟು ಎಂದು ಗೊಣಗುತ್ತ, ಕೊರಗುತ್ತ ಇರುತ್ತಾರೆ ನೆನಪಿರಲಿ.
***
ಅಯ್ಯೋ ಗ್ರಹಚಾರ ಬೆನ್ನು ಹತ್ತಿಬಿಟ್ಟಿದೆ. ಜಾತಕದಲ್ಲಿ ಗ್ರಹದೋಷವಿದೆ. ನನ್ನ ಹಣೆ ಬರಹ ಸರಿ ಇಲ್ಲ. ಕೆಲ ದಿನಗಳಿಂದ ನನ್ನ ಟೈಮೇ ಸರಿ ಇಲ್ಲ. ಯಾವ ಜನ್ಮದ
ಕರ್ಮವೋ ಏನೋ, ಅನುಭವಿಸುತ್ತಿದ್ದೀನಿ… ಇಂಥ ಮಾತುಗಳನ್ನೂ ಜೀವನದಲ್ಲಿ ಆಗಾಗ ಹೇಳಿಕೊಳ್ಳುತ್ತಲೇ ಇರುತ್ತೇವೆ. ಇದನ್ನೇ ನಾವು ಪಲಾಯನವಾದ ಎನ್ನುವುದು. ಜೀವನದಲ್ಲಿ ನಾವು ಮಾಡಿಕೊಳ್ಳುವ ತಪ್ಪುಗಳನ್ನು ಜಾತಕ, ಹಣೆಬರಹ, ಕರ್ಮದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತೇವೆ. ಹಾಗೆಂದು ಇವೆಲ್ಲವೂ ಸುಳ್ಳೆಂದು ವಾದಿಸುತ್ತಿಲ್ಲ. ಜ್ಯೋತಿಷ್ಯ ಮತ್ತು ಜಾತಕ ಫಲ ಎಂಬುದು ಅತ್ಯಂತ ವೈಜ್ಞಾನಿಕವಾಗಿ ರೂಪಿತಗೊಂಡ ಭಾರತೀಯ ಶಾಸ್ತ್ರಗಳು.
ಇವು ಮನುಷ್ಯನ ಮನಸ್ಸನ್ನು ವ್ಯಾಖ್ಯಾನಿಸುತ್ತವೆ. ನಮ್ಮ ಜಾತಕವನ್ನು ಆಧರಿಸಿ ಆಯಾ ಸನ್ನಿವೇಶದಲ್ಲಿ ನಮ್ಮ ಮನಸ್ಸನ್ನು ನಾವು ಅರಿತುಕೊಳ್ಳಬೇಕೇ ವಿನಾ ಅದನ್ನೇ ಹಳಿಯುತ್ತ ಮತ್ತೆ ಮತ್ತೆ ತಪ್ಪೆಸಗುವುದು ಸಲ್ಲ. ಹಣೆಬರಹವನ್ನು ಯಾರೂ ತಪ್ಪಿಸಲಾಗದು ಎಂಬ ನಿರಾಶವಾದವನ್ನು ಬಿಟ್ಟು ನಮ್ಮ ಜಾತಕ, ಹಣೆಬರಹ ಗಳನ್ನು ನಾವೇ ಬರೆದುಕೊಳ್ಳೋಣ. ಪೂರ್ಣ ಪ್ರಯತ್ನದ ಬಳಿಕ ಸಿಕ್ಕುವ ಫಲ ಬೇರೆಯದೇ ಆಗಿರಬಹುದು. ಎಲ್ಲ ಪ್ರಯತ್ನಗಳೂ ನಾವಂದುಕೊಂಡ ಫಲವನ್ನೇ ಕೊಟ್ಟು ಬಿಡುತ್ತವೆ ಎನ್ನಲಿಕ್ಕಾಗದು. ಉದಾಹರಣೆಗೆ ನಾವು ಪೈಲೆಟ್ ಆಗಬೇಕೆಂದು ಬಯಸುತ್ತೇವೆ. ಆ ನಿಟ್ಟಿನಲ್ಲಿ ಓದಿಯೂ ಓದುತ್ತೇವೆ. ಇದನ್ನು ‘ಕೋರ್ ಕಾಂಪಿಟೆನ್ಸಿ’ ಎಂದು ಕರೆಯುತ್ತೇವೆ. ಯಾವುದೇ ವ್ಯಕ್ತಿ ಒಂದು ನಿಗದಿತ ವಿಷಯ ಅಥವಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡುವುದನ್ನು ಹೀಗೆಂದು ಕರೆಯಲಾಗುತ್ತವೆ.
ಎಷ್ಟೋ ವೇಳೆ ಪ್ರವೃತ್ತಿಯೇ ಕೋರ್ ಕಾಂಪಿಟೆನ್ಸಿ ಆಗಿರಬಹುದು. ಪೈಲೆಟ್ನ ಉದಾಹರಣೆ ತೆಗೆದುಕೊಂಡರೆ ಅದು ವೃತ್ತಿ ಆಗಿ ಪರಿಗಣಿತವಾಗುತ್ತದೆ. ಇದೇ ನಮ್ಮ ಕೋರ್ ಕಾಂಪಿಟೆನ್ಸಿ ಅಲ್ಲ. ವೈಯಕ್ತಿಕ ನೈಪುಣ್ಯ ನಮ್ಮೊಳಗೆ ಇನ್ನಾವುದೋ ವಿಚಾರದಲ್ಲಿ ಅಡಗಿರುತ್ತದೆ. ಅದನ್ನು ಗುರುತಿಸಿಕೊಳ್ಳುವುದು ನಮ್ಮದೇ ಹೊಣೆ. ನಮ್ಮ ಆಸಕ್ತಿಗಳಿಗೆ ನಾವೇ ನೀರೆರೆದುಕೊಂಡು, ನಮ್ಮನ್ನು ನಾವೇ ಬೆಳೆಸಿಕೊಳ್ಳುತ್ತ, ಅವಕಾಶಗಳನ್ನು ಸೃಷ್ಟಿ ಮಾಡಿಕೊಳ್ಳುತ್ತ ಹೋಗಬೇಕು.
ನಮಗಾಗಿ ಇನ್ನಾರೋ ಅವಕಾಶಗಳನ್ನು ಸೃಷ್ಟಿಸಿ ಕಾಯುತ್ತ ಕೂರುವುದಿಲ್ಲ.
ಇದಕ್ಕಾಗಿ ವಿಶೇಷ ಪ್ರಯತ್ನ, ಶ್ರಮ, ಗಮನ ಕೇಂದ್ರೀಕರಿಸಿಕೊಳ್ಳಬೇಕು. ಯಾರು ಏನಾದರೂ ಹೇಳಿಕೊಳ್ಳಲಿ. ನಾವು ಏನಂದುಕೊಂಡಿರುತ್ತೀವೋ ಅದೇ
ಸರಿ. ಬೇರೆಯವರ ಬಗ್ಗೆ ತಲೆ ನಾವೇಕೆ ಯೋಚಿಸೋಣ? ಇನ್ನೊಂದು ಪ್ರಮುಖ ಸಂಗತಿಯೆಂದರೆ ಈ ಜಗತ್ತಿನಲ್ಲಿ ಯಾವುದೇ ವಿಷಯ, ಸಂಗತಿಗಳು ಸಣ್ಣದಲ್ಲವೇ ಅಲ್ಲ. ಒಂದೊಮ್ಮೆ ಚಿಕ್ಕ ಸಂಗತಿ ಎಂಬುದು ಯಾವುದಾದರೂ ಇದ್ದರೆ, ಅದರಲ್ಲಿ ಈವರೆಗೆ ಯಾರೂ ದೊಡ್ಡ ಸಾಧನೆ ಮಾಡಿಲ್ಲವೆಂದೇ ಅರ್ಥ. ಅಂಥ ಸಾಧಕರು ನಾವೇ ಯಾಕಾಗ ಬಾರದು? ಹಣೆಬರಹವನ್ನು ನಿಂದಿಸುತ್ತ ಕುಳಿತುಕೊಳ್ಳುವು ದರಿಂದ ಅದಷ್ಟೇ ಸಾಧನೆಯಾಗುತ್ತದೆ. ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯ ಇಲ್ಲ ಎಂಬುದು ಸರಿ, ಹಾಗೆಂದು ಏನು ಆಗಬೇಕೆಂದು ನಾವು ಬಯಸಬಹುದಲ್ಲ?
***
ಮಹಾವಿಷ್ಣುವಿನ ದಶಾವತಾರ ನಮಗೆ ಗೊತ್ತಿದೆ. ಆ ಮಹಾನುಭಾವ ಧರ್ಮ ರಕ್ಷಣೆಗಾಗಿ ಹತ್ತು ಅವತಾರಗಳನ್ನು ಎತ್ತಿ ಬಂದನಂತೆ. ಅದಲ್ಲದೇ ಇನ್ನೂ ಹತ್ತಾರು ವೇಷಗಳಲ್ಲಿ ಕಾಣಿಸಿಕೊಂಡಿದ್ದಾನೆನ್ನುತ್ತವೆ ನಮ್ಮ ಪುರಾಣಗಳು. ಇದ್ದಿರಲೂಬಹುದು. ಅದು ಅವರವರ ನಂಬಿಕೆ ಬಿಟ್ಟ ವಿಷಯ. ನಮ್ಮ ನಡುವೆಯೂ ಬಹಳಷು ಮಂದಿ ಯಾವ್ಯಾವುದೋ ಕಾರಣಕ್ಕೆ ಏನೇನೋ ಅವತಾರಗಳನ್ನು ತಾಳುತ್ತಾರೆ. ನಮ್ಮ ಕೆಲ ರಾಜಕಾರಣಿಗಳಂತೂ ದಿನಕ್ಕೊಂದು, ಕ್ಷಣಕ್ಕೊಂದು ಬಣ್ಣ ಬದಲಿಸುತ್ತಾರೆ. ನಟರು, ಕಲಾವಿದರು ಸನ್ನಿವೇಶಕ್ಕೆ ತಕ್ಕಂತೆ ಪಾತ್ರಗಳನ್ನು ಹಾಕುವುದು ವೃತ್ತಿ ಎನಿಸಿಕೊಂಡಿದೆ. ಅವೆಲ್ಲ ಬಿಟ್ಹಾಕಿ, ಇವತ್ತಿನ ನಮ್ಮ -ಷನ್,
ಟ್ರೆಂಡ್ ಬದಲಾಗುವುದು ನಿರಂತರ ಪ್ರಕ್ರಿಯೆ.
ಇಷ್ಟೆಲ್ಲ ಪ್ರತಿ ನಿತ್ಯವೂ ಬದಲಾಗುತ್ತಿದೆ ಎನ್ನುವಾಗ ನಾವೇಕೆ ಬದಲಾಗುವುದೇ ಇಲ್ಲ. ನಮ್ಮ ಮನಸ್ಸನ್ನು ಜಡ್ಡುಗಟ್ಟಿಸಿಕೊಂಡೇ ಗೂಟ ಹೊಡಕೊಂಡು ಕುಳಿತಿರುತ್ತೇವೆ. ನಮ್ಮ ಜೀವನ ಶೈಲಿ, ಸ್ವಭಾವ ಬದಲಾಗುವುದೇ ಇಲ್ಲ. ಅದನ್ನು ಬದಲಿಸಿಕೊಳ್ಳುವ ಯೋಚನೆಯನ್ನೂ ಮಾಡುವುದಿಲ್ಲ. ಹಾಗೆಂದು ನಮ್ಮ ಸ್ವಂತಿಕೆ, ವ್ಯಕ್ತಿತ್ವವನ್ನೇ ಕಳಕೊಳ್ಳಬೇಕೆಂಬುದು ನನ್ನ ವಾದವಲ್ಲ. ಹೊಸತಕ್ಕೆ ನಾವು ತೆರಕೊಳ್ಳದಿದ್ದರೆ ಜೀವನ ನಿಂತ ನೀರಾಗಿಬಿಡುತ್ತದೆ. ಬೆಳವಣಿಗೆಯನ್ನೇ ಕಾಣುವುದಿಲ್ಲ. ನಾವು ಅಭಿವೃದ್ಧಿಯನ್ನೇ ಕಾಣುವುದಿಲ್ಲ. ನಮ್ಮ ಬೆಳವಣಿಗೆ ಬಗ್ಗೆ ನಮಗೆ ಸದಾ ಒಂದು ಮಟ್ಟದ ಅತೃಪ್ತಿ ಕಾಡುತ್ತಲೇ ಇರಬೇಕು. ಪ್ರತಿ ನಿತ್ಯವೂ
ನಾವು ಬದಲಾಗುತ್ತಲೇ ಇರಬೇಕು. ಮಹಾವಿಷ್ಣು ಹತ್ತು ಅವತಾರಗಳನ್ನು ಎತ್ತಿದನೋ ಇಲ್ಲವೋ, ಆದರೆ ಆ ಬದುಕಿನ ಅವಸ್ಥಾಂತರ ಚಲನಶೀಲತೆಯ ಸಂಕೇತ. ಒಂದು ಚಿಕ್ಕ ಬೀಜ ಮಣ್ಣಿಗೆ ಬಿದ್ದ ಮರುಕ್ಷಣವೇ ಬದಲಾಗಲು ಆರಂಭಿಸುತ್ತದೆ.
ಅದು ಬಿದ್ದಲ್ಲಿಯೇ ಬಿದ್ದು ಬೆಚ್ಚಗೆ ಮಲಗಿಕೊಂಡಿದ್ದರೆ ಮತ್ತೊಂದು ಮಹಾವೃಕ್ಷ ಬೆಳೆದು ನಿಲ್ಲಲು ಸಾಧ್ಯವೇ ಇಲ್ಲ. ಬೀಜ ಬೀಗಬೇಕು, ತನ್ನ ತೊಗಟೆಯನ್ನು ಕಳಚಿ,
ಮೊಳಕೆಯನ್ನು ಹೊರದಬ್ಬಬೇಕು, ಬೇರು ಬಿಟ್ಟು ನಿಲ್ಲಬೇಕು. ಚಿಗುರರಳಿಸಿ ಟಿಸಿಲೊಡೆದು ತಲೆ ಎತ್ತಬೇಕು… ಗಿಡ ಬೆಳೆದು ವೃಕ್ಷವಾಗಿ, ಫಲ ಬಿಟ್ಟು ಮತ್ತೆ ಬೀಜಕ್ಕೆ ನಿಲ್ಲಬೇಕು. ಈ ಚಕ್ರ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಒಂದು ಪುಟ್ಟ ಬೀಜವೇ ನಿಂತಲ್ಲಿ ನಿಲಲಾರದು ಎಂದಾದಮೇಲೆ ನಾವೇಕೆ ಜೋಭದ್ರ ಸ್ಥಿತಿಯಲ್ಲಿ ಉಳಿದುಬಿಡುತ್ತೇವೆ? ಹೋಸತನ್ನು ಸ್ವಾಗತಿಸೋಣ. ನಿತ್ಯವೂ ಹೊಸದಾಗಿ ಬದುಕೋಣ.
ಬದಲಾದ ವ್ಯವಸ್ಥೆಗೆ ನಮ್ಮನ್ನು ನಾವು ತೆರೆದುಕೊಳ್ಳೋಣ. ಆತ್ಮವಿಶ್ವಾಸಿ ಮಾತ್ರವೇ ಬದಲಾವಣೆಯನ್ನು ದೈರ್ಯವಾಗಿ ಸ್ವೀಕರಿಸಬಲ್ಲ. ಹೇಡಿ, ಅಪ್ಪ ಹಾಕಿದ ಮರಕ್ಕೆ ಜೋತು ಬಿದ್ದು ಕೂತಿರುತ್ತಾನೆ.
***
ಒಂದಷ್ಟು ತಪ್ಪುಗಳನ್ನು ಮಾಡಲೇಬೇಕು, ಯಾರು ಬೇಡವೆನ್ನುತ್ತಾರೆ? ಬೇಡವೆಂದರೆ ಅನ್ನಲಿ ಬಿಡಿ. ಯಾರೋ ಬೇಡವೆನ್ನುತ್ತಾರೆಂಬ ಕಾರಣಕ್ಕೆ ನಾವು ತಪ್ಪನ್ನೇ ಮಾಡದೇ ಹೋದರೆ ಅಷ್ಟರ ಮಟ್ಟಿಗೆ ಜೀವನವನ್ನು ಕಳಕೊಂಡಂತೆಯೇ. ಅದು ಯಾರು ಇಂಥವನ್ನೆಲ್ಲ ಅತಿ ಶಿಸ್ತಿನ ಬದುಕಿನ ಭ್ರಮೆಯನ್ನು ಬಿತ್ತಿಬಿಟ್ಟರೋ ಗೊತ್ತಿಲ್ಲ. ಹುಟ್ಟುತ್ತಲೇ ನಮಗೆ ಹಾಗೆ ಮಾಡಬೇಡ, ಹೀಗೆ ಮಾಡುವುದು ಸಲ್ಲ. ನೀನು ಹೀಗೆಯೇ ಇರಬೇಕು. ಇದನ್ನಷ್ಟೇ ಮಾಡಬೇಕು. ನಾವು ಹಾಕಿದ ಗೆರೆಯನ್ನು ಮೀರಲೇಬೇಡ… ಇಂಥವೆಲ್ಲ ಹೇರಿಕೆಯನ್ನು ಹೆತ್ತವರು ನಡೆಸುತ್ತಲೇ ಬರುತ್ತಿರುತ್ತಾರೆ. ತಪ್ಪಲ್ಲ ಬಿಡಿ. ಮಕ್ಕಳು ಎಲ್ಲಿ ಹಾಳಾಗಿಹೋಗುತ್ತಾರೋ ಎಂಬ
ಭಯ, ಆತಂಕ ಹೆತ್ತವರನ್ನು ಕಾಡುವುದು ಸಹಜ. ಆದರೆ ತಪ್ಪಿನ ಅರಿವೇ ಇಲ್ಲದೇ ಬದುಕು ಸುಂದರ, ಸುಗಮವಾಗಲು ಸಾಧ್ಯವೇ ಇಲ್ಲ.
ಇದು ಹಾಗಿರಲಿ. ಒಮ್ಮೆ ಕೆಲ ತರಕಾರಿ ಬೆಳೆಯ ಬಗ್ಗೆ ಚರ್ಚಿಸಿ ಬರೋಣ. ಮನೆಯಲ್ಲೊಂದು ಕುಂಬಳ ಬೀಜವನ್ನು ಹಾಕಿದ್ದೀರಿ ಎಂದಿಟ್ಟುಕೊಳ್ಳಿ. ಸಾಕಷ್ಟು ಮಣ್ಣು, ನೀರು, ಗೊಬ್ಬರ ಎಲ್ಲವನ್ನೂ ಕೊಟ್ಟಿದ್ದೀರಿ. ಬೀಜ ಮೊಳಕೆಯೊಡೆದು, ಚಿಗುರಿ ಬಳ್ಳಿ ಹಬ್ಬಿ, ಸೊಕ್ಕಿ ಬೆಳೆಯುತ್ತದೆ. ಗಿಡದ ಬೆಳವಣಿಗೆಯನ್ನು ಕಂಡು ಸಾಕಷ್ಟು ಕಾಯಿಬಿಡಬಹುದೆಂಬ ಲೆಕ್ಕಾಚಾರ ಶುರುಮಾಡಿರುತ್ತೀರಿ. ಪ್ರತಿ ಗೆಲ್ಲಿಗೂ ಹೂವು ಕಾಣಿಸಿಕೊಳ್ಳುತ್ತದೆ. ಓಹ್, ಇನ್ನೇನು ತಿಂಗಳೊಪ್ಪತ್ತಿನಲ್ಲಿ ರಾಶಿರಾಶಿ ಕುಂಬಳದ ಫಸಲು ಎಂದು ಕಾಯುತ್ತ ಕೂತರೆ ನಿಮಗೆ ನಿರಾಸೆ ಕಟ್ಟಿಟ್ಟದ್ದು. ಏಕೆಂದರೆ ಅರಳಿದ ಹೂವು ಹೀಚಾಗಿ ಪರಿವರ್ತನೆಯಾಗದೇ ಉದುರಿ ಬಿದ್ದುಹೋಗುತ್ತದೆ. ಚಿಂತೆಗಿಟ್ಟುಕೊಳ್ಳುತ್ತದೆ. ಬಂಜೆ ಸಸಿಯಿರಬೇಕೆಂದುಕೊಳ್ಳುತ್ತೀರಿ. ಕೊನೆಗೆ ಯಾರೋ ತುಸು ತಜ್ಞರು ಹೇಳುತ್ತಾರೆ :‘ಸೊಕ್ಕಿ ಬೆಳೆದ ಬಳ್ಳಿಯ ಕುಡಿಯನ್ನೆಲ್ಲ ಚಿವುಟಿ
ಸಾಂಬಾರೋ, ಪಲ್ಯವನ್ನೋ ಮಾಡಿಬಿಡಿ.
ಮುಂದಿನ ಚಿಗುರಿಗೆ ಒಳ್ಳೆ ಕಾಯಿ ಕಚ್ಚುತ್ತದೆ’ ಎಂದು. ಅಷ್ಟು ಚೆಂದ ಬೆಳೆದ ಬಳ್ಳಿಯನ್ನು ಕತ್ತರಿಸುವುದೇ? ಹಾಗೆ ಕತ್ತರಿಸಿದರೆ ಗಿಡದ ಬೆಳವಣಿಗೆಗೆ ಧಕ್ಕೆಯಾಗುವು ದಿಲ್ಲವೇ? ಗಿಡ ಸೊರಗಿದರೆ ಕಾಯಿ ಬಿಡುವುದಾದರೂ ಹೇಗೆ? ಇಂಥವೆಲ್ಲ ಸಂದೇಹ ಸಹಜ. ಆದರೆ ನಿಜವಾಗಿ ಬಳ್ಳಿ ಹೀಗೆ ಸೊಂಪಾಗಿ ಬೆಳೆದದ್ದೇ ಫಸಲಿಗೆ ಮಾರಕ. ಂದೆಡೆಉ ಸಲ ಹೀಗೆ ಚಿಗುರು ಚಿವುಟಿದ ಬಳಿಕ ಒಳ್ಳೆಯ ಬೆಳೆ ಬರುತ್ತದೆ. ಜೀವನದಲ್ಲಿ ಮಾಡುವ ತಪ್ಪುಗಳೆಂದರೆ ಸೊಂಪಾಗಿ ಬೆಳೆದ ಬಳ್ಳಿಯ ಕುಡಿ ಚಿವುಟಿದ ಹಾಗೆಯೇ. ತಪ್ಪುಗಳು ಒಮ್ಮೊಮ್ಮೆ ನಮ್ಮ ಬೆಳವಣಿಗೆಯನ್ನು ಚಿವುಟುತ್ತವೆ. ಆದರೆ, ಅದು ಜೀವನವನ್ನು ಹೇಗೆ ಎದುರಿಸಬೇಕು ಎಂಬುದರ ಅನುಭವ
ನೀಡುತ್ತವೆ. ಹಾಗೆಂದು ತಪ್ಪು ಮಾಡುವುದೇ ಜೀವನದ ಉದೇಶವೂ ಅಲ್ಲ.
ಎಲ್ಲ ಪಾಠಗಳನ್ನೂ ನಾವು ತಪ್ಪು ಮಾಡಿಯೇ ಕಲಿಯಬೇಕೆಂದೇನೂ ಇಲ್ಲ. ಗೊತ್ತೀದ್ದೂ ತಪ್ಪು ಮಾಡುವುದು ಮೂರ್ಖತನವೆಂದೂ ಅನಿಸಿಕೊಳ್ಳುತ್ತದೆ.
ಆದರೆ ಅರಿವಿಲ್ಲದೇ ತಪ್ಪು ಮಾಡುವ ಅವಕಾಶವನ್ನು ಮಿಸ್ ಮಾಡಿಕೊಳ್ಳುವಂತಿಲ್ಲ. ಏಕೆಂದರೆ ಈಗ ನಾವು ತಪ್ಪು ಮಾಡದೇ ಹೋದರೆ ನಿವೃತ್ತಿ ಜೀವನದಲ್ಲಿ ನೆನೆಪಿಸಿಕೊಂಡು ನಗುವ, ಕಿರಿಯರಿಗೆ ಉಪದೇಶ ಕೊಡುವ ಅವಕಾಶದಿಂದ ವಂಚಿತರಾಗುತ್ತೇವೆ.
***
ಅಯ್ಯೋ, ಹೇಳಿಕೊಳ್ಳಲಿ ಬಿಡಿ. ಅದಕ್ಯಾಕೆ ನೀವು ತಲೆಕೆಡಿಸಿಕೊಳ್ಳಬೇಕು? ಬಹುತೇಕರು ಎಡವುವುದೇ ಇಲ್ಲಿ ಅಂತ ಅನ್ನಿಸುತ್ತದೆ. ಯಾರೋ ಏನೋ ಹೇಳಿದರು
ಎಂದಾಕ್ಷಣ ಇರಬಾರದ ಜಾಗದಲ್ಲಿ ಇರುವೆ ಹೊಕ್ಕ ರೀತಿಯಲ್ಲಿ ಆಡಲು ಆರಂಭಿಸಿಬಿಡುತ್ತಾರೆ. ಅದರ ಅಗತ್ಯವಾದರೂ ಏನು ಅಂತೀನಿ? ನಮ್ಮ ಸಮಾಜದಲ್ಲಿ ಈ ಆರೋಪ ಮಾಡುವುದು ಅನ್ನುವುದಿದೆಯಲ್ಲ ಅದೊಂದು ರೀತಿಯಲ್ಲಿ ಜೂಜಾಗಿಬಿಟ್ಟಿದೆ. ಕಳಕೊಳ್ಳುವುದು ಏನೂ ಇಲ್ಲವಲ್ಲ? ಅದಕ್ಕೇ ಹೀಗೆ ಬಾಯಿಗೆ ಬಂದಂತೆ ಮಾತನಾಡುವುದನ್ನು ರೂಢಿಸಿಕೊಂಡುಬಿಟ್ಟಿದ್ದಾರೆ ನಮ್ಮ ಜನ. ಇನ್ನೂ ವಿಚಿತ್ರ ಎಂದರೆ ಈ ಆರೋಪ ಎಂಬ ವಿಷಯದಲ್ಲಿ ಅದನ್ನು ಹೊರಿಸಿದವನ ಹೊಣೆಗಾರಿಕೆ ಏನೂ ಇರುವುದೇ ಇಲ್ಲ. ಅವನಿಗೆ ಗೊತ್ತು ನಾನು ಏನು ಹೇಳಿದರೂ ಜನ ಅದನ್ನು ಪ್ರಶ್ನೆ ಮಾಡದೇ ಕಿವಿಗೊಡುತ್ತಾರೆ ಎಂದು. ಹೀಗಾಗಿ ಅದಕ್ಕೆ ಯಾವುದೇ ಆಧಾರದ ಪರಿಶೀಲನೆಯನ್ನಾಗಲಿ, ವಿವೇಚನೆಯನ್ನಾಗಲೀ ಮಾಡುವ ಗೋಜಿಗೇ ಹೀಗದೇ ಯಾರ ಮೇಲೋ, ಏನೋ ಆರೋಪಿಸಿಬಿಡುತ್ತಾನೆ. ಮತ್ತೆಂದೂ ಅದನ್ನು ಅವನು ಸಾಬೀತುಪಡಿಸಬೇಕಾಗಿಯೇ ಇಲ್ಲ.
ಅದು ನಿಜವಾಗಲಿ, ಸುಳ್ಳಾಗಲಿ, ಜನ ನಂಬಲಿ, ಬಿಡಲಿ ಮತ್ತವ ಕಳಕೊಳ್ಳುವುದೇನೂ ಇಲ್ಲ. ಅದೇನೋ ಹೇಳುತ್ತಾರಲ್ಲ, ಮಾವಿನ ಮರಕ್ಕೆ ಕಲ್ಲು ಹೊಡೆದಂತೆ ಅಂತ ಹಾಗೆ. ಕಲ್ಲು ನಮ್ಮದೇನೂ ಅಲ್ಲ. ಹೋದರೆ ಹೋಗಲಿ. ಅಕಸ್ಮಾತ್ ಹಣ್ಣಿಗೆ ತಾಗಿ ಅದು ಬಿದ್ದರೆ ಲಾಭವಾದಂತಾಯಿತು! ಹೀಗಾಗಿ ಅವನು ಕಲ್ಲು ಹೊಡೆದು
ನೆಮ್ಮದಿಯಾಗಿದ್ದುಬಿಡುತ್ತಾನೆ. ಆದರೆ, ಆರೋಪ ಹೊರಿಸಿಕೊಂಡವ ಮಾತ್ರ ಹಾಗಿರಲು ಸಾಧ್ಯವೇ ಇಲ್ಲ. ತನ್ನ ವಿರುದ್ಧದ ಆರೋಪದಲ್ಲಿ ಸತ್ಯಾಂಶವಿದ್ದರೆ ಅದು ಸಾರ್ವಜನಿಕಗೊಂಡು ಇನ್ನಷ್ಟು ಅವಮಾನವಾಗದಂತೆ ತಡೆಯಲು ಇನ್ನಿಲ್ಲದ ಕಸರತ್ತು ಆರಂಭಿಸಬೇಕು. ಏನೋ ಆ ಕ್ಷಣದ ತಪ್ಪು ಅದು, ಅಸಲಿಗೆ ತಾನು ಅಂಥವನಲ್ಲ ಎಂಬುದನ್ನು ಮನವರಿಕೆಮಾಡಿಕೊಡಲು ಹೆಣಗಬೇಕು.
ಒಂದೊಮ್ಮೆ ಆರೋಪದಲ್ಲಿ ಹುರುಳಿಲ್ಲದಿದ್ದರೆ, ಅದನ್ನು ಸುಳ್ಳೆಂದು ಸಾಬೀತುಪಡಿಸಲು ಗುದ್ದಾಡಬೇಕು. ಎಷ್ಟೇ ಮಾಡಿದರೂ ಮುಜುಗರವಂತೂ ತಪ್ಪಿದ್ದಲ್ಲ. ಸತ್ಯ ಸಾಬೀತಾದ ಮೇಲೂ ಒಮ್ಮೆ ಆರೋಪ ಬಂದುಬಿಟ್ಟರೆ ಮತ್ತೆ ಜನ ಅನುಮಾನದಿಂದಲೇ ನೋಡುತ್ತಿರುತ್ತಾರೆ. ಹೀಗಾಗಿ ಆರೋಪಕ್ಕೆ ಜನ ಹೆದರುತ್ತಾರೆ. ಆದರೆ,
ಯಶಸ್ವಿ ವ್ಯಕ್ತಿ ಎಂದಿಗೂ ಆರೋಪದ ಬಗ್ಗೆ ತಲೆ ಕೆಡಿಸಿಕೊಂಡು ಸಮಯ ವ್ಯರ್ಥ ಮಾಡುವುದೇ ಇಲ್ಲ. ತಾನು ಏನೆಂಬುದು ಜನಕ್ಕೆ ಗೊತ್ತಿದೆ. ತನ್ನ ಮೇಲೆ ತನಗೆ ವಿಶ್ವಾಸವಿದೆ. ಹೊಟ್ಟೆಕಿಚ್ಚಿಗೋ, ವಿದ್ರೋಹಕ್ಕೋ, ವಿಪರೀತ ಬುದ್ಧಿಯಿಂದಲೋ ಜನ ಮಾತನಾಡಿದರೆ ಅದಕ್ಕೆ ತಾನೇಕೆ ಹೊಣೆಯಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಬಗ್ಗೆ ಜನ ಮಾತನಾಡುತ್ತಿದ್ದಾರೆ ಎಂದರೆ ತನ್ನ ಕೆಲಸ ಗಮನಕ್ಕೆ ಬರುತ್ತಿದೆ ಎಂತಲೇ ಅರ್ಥ…. ಇಂಥ ಮನೋಭಾವದೊಂದಿಗೆ ಜತೆಗೊಂದು ಸಣ್ಣ ಆತ್ಮ ವಿಮರ್ಶೆಯೊಂದಿಗೆ ಮುನ್ನುಗ್ಗೋಣ, ಹೊಸ ವರ್ಷದಲ್ಲಿ. ನನಗೇ ಒಳ್ಳೆಯದಾಗಲಿ; ಆಗುತ್ತೆ. ನಿಮಗೂ…