ವಚನ ಜಿಜ್ಞಾಸೆ
ಸಂತೋಷ ಪಿ.ಕೆ
‘ವಚನ ದರ್ಶನ’ ಎಂಬ ಪುಸ್ತಕವನ್ನು ಅಯೋಧ್ಯ ಪ್ರಕಾಶನವು ಇತ್ತೀಚೆಗೆ ಹೊರತಂದಿದ್ದು, ನಾಡಿನ ಕೆಲ ತಲಸ್ಪರ್ಶಿ ಮತ್ತು ವಿಶ್ವಮಾನವ ತತ್ವವನ್ನು ಅನುಸರಿಸುವ ತಥಾಕಥಿತ ಚಿಂತಕರು ಈ ಪುಸ್ತಕದ ವಿರುದ್ಧ ತೀವ್ರ ಹೋರಾಟವನ್ನು ಆರಂಭಿಸಿದ್ದಾರೆ. ಅವರು ಆರಂಭಿಸಿದ್ದು ಚರ್ಚೆಯನ್ನಲ್ಲ, ಬದಲಿಗೆ ವಿರೋಧಿಸುವ ಹೋರಾಟವನ್ನು ಎಂಬ ಅಂಶವನ್ನಿಲ್ಲಿ ಗಮನಿಸಬೇಕು.
ಸಹೃದಯಿ ಬರಹಗಾರರು ಅದನ್ನು ಚರ್ಚೆಗೊಳಪಡಿಸಿ ಹಲವಾರು ಮಗ್ಗಲುಗಳಲ್ಲಿ ವಚನಗಳನ್ನು ಶೋಧಿಸಬೇಕಾಗಿರುವ ಅನಿವಾರ್ಯತೆಯನ್ನು ತಮ್ಮ ಬರಹಗಳ ಮೂಲಕ ಒತ್ತಿಹೇಳುತ್ತಿದ್ದಾರೆ. ಆದರೆ, ಇವಕ್ಕೆ ಕಿವಿ ಗೊಡದ ವಿರೋಽಗಳು ತಥಾಕಥಿತ ಕಥೆಗಳನ್ನೇ ಮುಂದಿರಿಸಿಕೊಂಡು ವಿರೋಧಿ ಸುವ ಹುಮ್ಮಸ್ಸನ್ನು ಮಾತ್ರ ತೋರುತ್ತಿದ್ದಾರೆ.
ನಾಡಿನ ಜೀವಪರ ಚಿಂತಕರೆಂದೇ ಖ್ಯಾತರಾದ ಒಂದಷ್ಟು ‘ಚಿಂತನಾ ಹೋರಾಟಗಾರರು’ (ಹೋರಾಟಕ್ಕೋಸ್ಕರ ಚಿಂತನೆಯನ್ನು ಮಾಡುವವರು ಎಂದರ್ಥ) ಪುಸ್ತಕ ಬಿಡುಗಡೆಯನ್ನು ವಿರೋಧಿಸಿ ಹೋರಾಟ ಮಾಡಿರುವುದು, ಕನ್ನಡ ವಿದ್ವತ್ ವಲಯಕ್ಕೆ ಅಂಟಿಕೊಳ್ಳುತ್ತಿರುವ ಬೌದ್ಧಿಕ ದಾರಿದ್ರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತರ್ಕಶಾಸ್ತ್ರವನ್ನು ಜಗತ್ತಿಗೆ ಪರಿಚಯಿಸಿದ ಭಾರತದ ನೆಲದಲ್ಲಿ ಇಂಥ ವಿಚಾರಹೀನರ ಹೋರಾಟಗಳು ಚಿಂತಕರ ಬದಲಿಗೆ ಚಿಂತನಾ ಹೋರಾಟಗಾರರ ಅಸ್ತಿತ್ವವನ್ನು ಎತ್ತಿಹಿಡಿಯುತ್ತಿವೆ.
‘ವಚನ ದರ್ಶನ’ ಪುಸ್ತಕಕ್ಕೆ ‘ಚಿಂತನಾ ಹೋರಾಟಗಾರ’ರ ವಿರೋಧ ವಿರುವುದಕ್ಕೆ ಮುಖ್ಯಕಾರಣ, ವಚನ ಗಳ ಕುರಿತು ಸಂಘ ಪರಿವಾರದವರು ಮಾತ ನಾಡುತ್ತಿದ್ದಾರೆ ಎನ್ನುವುದೇ ಆಗಿದೆ. ‘ಎಡ’ಪರ ಚಿಂತಕರ ಮೂಲ ಸಂಪನ್ಮೂಲಕ್ಕೆ (ಗಂಜಿ ಎಂಬ ಸಂಪನ್ಮೂಲ) ಕೈಹಾಕಿದರೆ ಜೀವಗಳು ತಡೆಯುವು ದಾದರೂ ಹೇಗೆ? ಆದ್ದರಿಂದಲೇ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವ ಮೂಲಕ ಅವರು ತೀವ್ರವಾಗಿ ವಿರೋಧಿಸುತ್ತಿರುವುದು ಗೋಚರಿಸುತ್ತಿದೆ. ‘ಸಂಸ್ಕೃತ ಕೇವಲ ಬ್ರಾಹ್ಮಣರ ಸ್ವತ್ತಾಗಿತ್ತು, ಅದು ಸಮಾಜದ ಜನಸಾಮಾನ್ಯರಿಗೆ ನಿಷಿದ್ಧವಾಗಿತ್ತು’ ಎಂಬ ಸುಳ್ಳು ವಾದಸರಣಿಯ ಮೂಲಕ ಹಲಬುವ ಎಡಚರರಿಗೆ ವಚನಗಳ ಕುರಿತು ಬೇರೆ ಯಾರೂ ಮಾತಾಡಬಾರದು ಎಂದು ವಿರೋಧಿಸುವುದಕ್ಕೂ ಏನು ವ್ಯತ್ಯಾಸವಿದೆ? ವಚನಗಳು ಎಡಚಿಂತಕರ ಸ್ವತ್ತು ಎಂದು ಬಸವಣ್ಣನವರು ಯಾವುದಾದರೂ ವಚನದಲ್ಲಿ ತಿಳಿಸಿದ್ದಾರೆಯೇ, ಇಲ್ಲವಲ್ಲಾ? ಹಾಗಾದರೆ, ವಚನಗಳ ಕುರಿತು ಇತರರು ಮಾತನಾಡ ಬಾರದು ಎಂಬ ಇವರ ಧಾರ್ಷ್ಟ್ಯ ಮನೋಭಾವವನ್ನು ಅರ್ಥೈಸಿಕೊಳ್ಳುವುದು ಹೇಗೆಂಬುದೇ ನಮ್ಮ ಪ್ರಶ್ನೆ.
ಭಾರತೀಯ ಪರಂಪರೆಯ ಬಗ್ಗೆ ಆಸಕ್ತಿಯಿರುವ ಯಾರಾದರೂ ಕೀರ್ತನೆಗಳು, ವಚನಗಳು ಹಾಗೂ ಇತರೆ ಭಕ್ತಿ ಸಾಹಿತ್ಯಗಳನ್ನು ಓದಬಹುದು, ಭಾಷ್ಯ ಗಳನ್ನು ಬರೆಯಬಹುದು. ಹಾಗಾಗಿಯೇ ಉಪನಿಷತ್ತುಗಳ ಕುರಿತು ೨೦೦ಕ್ಕೂ ಹೆಚ್ಚು ಭಾಷ್ಯಗಳು ನಮ್ಮ ಸಂಪ್ರದಾಯದಲ್ಲಿವೆ. ಹಾಗೆ ನೋಡಿದರೆ, ವೇದಗಳನ್ನು ರಚಿಸಿದವರು ಯಾರು ಎಂಬ ಪ್ರಶ್ನೆಗೆ ನಾವಿನ್ನೂ ತಾರ್ಕಿಕ ಉತ್ತರವನ್ನು ಕಂಡು ಕೊಳ್ಳಲಾಗಿಲ್ಲ; ಆದರೆ ಅದನ್ನು ಬ್ರಾಹ್ಮಣರೇ ಬರೆದಿ
ದ್ದಾರೆ ಎಂಬ ಭ್ರಮೆಯನ್ನಿಟ್ಟುಕೊಂಡು ಧಿಕ್ಕರಿಸುವ ಪರಿಪಾಠ ಬೆಳೆದುಬಂದಿದೆ.
‘ಕೆಲವು ವಚನಗಳು ವೇದಗಳನ್ನು ತಿರಸ್ಕಾರ ಮನೋಭಾವದಿಂದ ನೋಡಿವೆ, ಅಂದರೆ ವೇದಗಳನ್ನು ಅನುಸರಿಸುವ ಬ್ರಾಹ್ಮಣರನ್ನು ತಿರಸ್ಕರಿಸಿವೆ, ಹಾಗಾಗಿ ಬ್ರಾಹ್ಮಣರನ್ನು ವಿರೋಧಿಸುವುದೇ ವಚನಗಳ ಆಶಯ ವಾಗಿದೆ’ ಎಂಬುದು ಹೋರಾಟಗಾರರ ಚಿಂತನೆ ಯಾಗಿದೆ. ಹಾಗಾಗಿ, ‘ವೇದಗಳು ಎಂದರೆ
ಬ್ರಾಹ್ಮಣರು, ಬ್ರಾಹ್ಮಣರು ಎಂದರೆ ಸಂಘಪರಿವಾರ’ ಎಂಬ ಸಮೀಕರಣದ ಮೂಲಕ ‘ವಚನ ದರ್ಶನ’ ಪುಸ್ತಕದ ವಿರುದ್ಧದ ಹೋರಾಟವನ್ನು ಸಮರ್ಥಿಸ ಲಾಗುತ್ತಿದೆ.
ಮೊದಲನೆಯದಾಗಿ, ವಚನಗಳು ವೇದಗಳನ್ನು ತಿರಸ್ಕರಿಸಿವೆಯೇ ಎಂಬ ಪ್ರಶ್ನೆಗೆ ‘ಹೌದು’ ಎಂಬ ಉತ್ತರವು ವಚನಗಳನ್ನು ಓದುವ ಯಾರಿಗಾದರೂ
ಹೊಲಬಾಗುತ್ತದೆ. ಆದರೆ ತಿರಸ್ಕರಿಸುವ ಮತ್ತು ಪುರಸ್ಕರಿಸುವ ಎಲ್ಲಾ ವಚನಗಳಿಗೂ ಅವುಗಳದೇ ಆದ ಸಂದರ್ಭಗಳಿರುತ್ತವೆ, ಆ ಸಂದರ್ಭದಿಂದ ವಾಕ್ಯಗಳನ್ನು ಪ್ರತ್ಯೇಕಗೊಳಿಸಿದರೆ ಅವು ತಮ್ಮ ಅರ್ಥವನ್ನೇ ಕಳೆದುಕೊಳ್ಳುತ್ತವೆ. ಉದಾಹರಣೆಗೆ, ‘ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯ ದುಃ ಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮ ದೇವ’ ಎಂಬ ಬಸವಣ್ಣನವರ ವಚನವು ಏನನ್ನು ತಿಳಿಸುತ್ತದೆ? ವಚನಕಾರರು ಸಮಾಜದ ಕುರಿತು ಏನನ್ನೂ ಮಾಡಲಿಲ್ಲ, ಸಮಾಜದ ಓರೆಕೋರೆಗಳನ್ನು ತಿದ್ದಲು ಪ್ರಯತ್ನಿಸಲಿಲ್ಲ ಎಂದು ಹೇಳಬಹುದೇ? ಅಥವಾ ಎಲ್ಲಾ ಶರಣರು ಕೇವಲ ತಮ್ಮ ಅಧ್ಯಾತ್ಮ ಸಾಧನೆಯಲ್ಲಿ ಮುಳುಗಿದ್ದರು ಎಂದು ಹೇಳಬಹುದೇ? ಒಂದೊಮ್ಮೆ ಹಾಗೆ ಹೇಳಿದರೆ ಸಾಮಾಜಿಕ ಕ್ರಾಂತಿ, ಸಮಾಜ ಸುಧಾರಣೆಯ ಚಳವಳಿ ಎಂಬ ವಾದಗಳು ಬಿದ್ದು ಹೋಗುತ್ತವೆ.
ಆದ್ದರಿಂದ, ಬಿಡಿಯಾದ ವಚನಗಳನ್ನು ಕೈಗೆತ್ತಿಕೊಂಡು ಇಡೀ ವಚನಸಾಹಿತ್ಯದ ಆಶಯವನ್ನು ಅರ್ಥೈಸಿಕೊಳ್ಳುತ್ತಾ ಹೋದರೆ ಮೇಲೆ ತಿಳಿಸಿದ
ಅಪಾರ್ಥವು ಹೆಚ್ಚಾಗುತ್ತದೆ. ಹಾಗಾಗಿ ವಚನ ಸಾಹಿತ್ಯ ವನ್ನು ಇಡಿಯಾಗಿ ನೋಡುವ ಅಗತ್ಯವಿದೆ. ವೇದಗಳನ್ನು ಟೀಕಿಸುವ ವಚನಗಳು ಸಾಕಷ್ಟಿದ್ದರೂ,
ಒಟ್ಟು ಸಂದರ್ಭದಲ್ಲಿ ಯಾವ ಆಶಯವನ್ನು ಹೊಂದಿವೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ವೇದಗಳು ಜ್ಞಾನದ ಶಾಖೆಗಳು ಎಂದು ಪರಿಗಣಿಸಲ್ಪಟ್ಟಿ ದ್ದರೂ ಅಲ್ಲಿಗೆ ಸೀಮಿತವಾಗದೇ, ಪಾರಮಾರ್ಥಿಕ ಲೋಕಕ್ಕೆ ಪ್ರವೇಶ ಪಡೆಯಲು ಅನುಭವಜನ್ಯ ಜ್ಞಾನವೇ ಪ್ರಧಾನ ಎಂಬುದು ಅವರ ಟೀಕೆಗಳ ಇಂಗಿತವಾಗಿದೆ.
‘ಮಣ್ಣು, ಮಡಿಕೆ ದೇವರುಗಳು..’ ಎಂಬ ವಚನದಲ್ಲಿಯೂ ದೇವರುಗಳನ್ನು ಪೂಜಿಸುವಲ್ಲಿಯೇ ನಿಲ್ಲದೆ ಅದಕ್ಕಿಂತಲೂ ಮುಂದೆ ಹೋದರೆ ಸಾಯುಜ್ಯವನ್ನು ಪಡೆಯಲು ಸಾಧ್ಯ ಎಂಬುದು ವಚನದ ಉದ್ದೇಶ ವಾಗಿದೆ. ಇದಕ್ಕೆ ಬಾಹೂರ ಬೊಮ್ಮಣ್ಣ ಬರೆದಿರುವ ವಚನವೇ ಸಾಕ್ಷಿ- ‘ನಾನಾ ಭೇದಂಗಳಲ್ಲಿ ಷಡ್ದರುಶನವ ಹೊಕ್ಕು ತಿಳಿದಡೂ, ಶ್ರುತಿವೇದ ಶಾಸ್ತ್ರ ಪುರಾಣ ಆಗಮಂಗಳ ಕಲಿತಡೂ, ಮೂರುಮಲದ ಭೇದವನರಿತು ಬಿಡುಮುಡಿಯಲ್ಲಿ ಕಳೆದುಳಿಯಬೇಕು. ಇದು ಪ್ರಸಿದ್ಧವಪ್ಪ ತೆರ. ಇದು ಸಂಗನಬಸವಣ್ಣನ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವ ಕೂಡಬೇಕು’. ಏನು ಮಾಡಿದರೇನು ಅನುಭವದ ಅರಿವು ಪಡೆ ಯದೇ ಇದ್ದರೆ ಯಾವ ವೇದ ಶಾಸ್ತ್ರಗಳನ್ನು ಓದಿದರೂ ಶಿವಸಾಯುಜ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂಬುದೇ ಈ ವಚನದ ಆಶಯವಾಗಿದೆ.
ಆದ್ದರಿಂದ ಇಂಥ ಅನೇಕ ವಚನಗಳನ್ನು ನಾವು ಅಧ್ಯಯನ ಮಾಡಿದರೂ ಅದರ ಭಾವವನ್ನು ಅರ್ಥೈಸಿಕೊಳ್ಳುವ ಜರೂರು ನಮ್ಮ ಮುಂದಿದೆ. ವಚನಗಳ ಭಾವ ಮತ್ತು ಆಶಯಗಳನ್ನು ಗ್ರಹಿಸಲು ವಚನ ಸಾಹಿತ್ಯವನ್ನು ಸಮಗ್ರವಾಗಿ ನೋಡಬೇಕಾಗುತ್ತದೆ. ಸಮಾಜದ ಓರೆಕೋರೆಗಳನ್ನು ಅಧ್ಯಾತ್ಮದ ಸಾರದ ಮೂಲಕ ಗುರುತಿಸಿ, ಅದರಿಂದ ಜನಸಾಮಾನ್ಯರನ್ನು ಹೊರತಂದು, ಬಹುದೊಡ್ಡ ಅನುಭಾವಿಗಳ ಗುಂಪನ್ನು ಕಟ್ಟುವಲ್ಲಿ ವಚನ ಸಾಹಿತ್ಯವು ಬಹುಮುಖ್ಯ ಪಾತ್ರವನ್ನು ವಹಿಸಿವೆ. ಯಾವುದೇ ಸಮಾಜವು, ಯಾವುದೇ ಕಾಲದಲ್ಲಿಯೂ ಆದರ್ಶಸ್ವರೂಪದಲ್ಲಿ ಇರಲು ಸಾಧ್ಯವಿಲ್ಲ, ಕೇವಲ ಕಲ್ಪನೆಯಲ್ಲಿ ಇರಬಹುದು ಅಷ್ಟೇ. ಲೌಕಿಕ ಜಗತ್ತಿನ ಬಯಕೆ ಹಾಗೂ ತೃಪ್ತಿಗಳೇ ಮನುಷ್ಯನ ಉನ್ನತೀ ಕರಣಕ್ಕೆ ಅಡ್ಡಿಯಾಗಬಲ್ಲವು ಎಂಬುದನ್ನು ಅರಿತೇ ಹಲವಾರು ಆಧ್ಯಾತ್ಮಿಕ ಪರಂಪರೆಗಳು ಅದರಿಂದ ಬಿಡುಗಡೆ ಹೊಂದುವ ಅನೇಕ ಮಾರ್ಗಗಳನ್ನು ಶೋಧಿಸುತ್ತಾ ಬಂದಿವೆ.
‘ಆಸೆಯೇ ದುಃಖಕ್ಕೆ ಮೂಲ’ ಎನ್ನುವ ಬುದ್ಧನಿಂದ ಹಿಡಿದು, ‘ಮನದ ಮುಂದಣ ಆಸೆಯೇ ಮಾಯೆ’ ಎಂಬ ಅಲ್ಲಮಪ್ರಭುಗಳ ವಚನದವರೆಗೂ ಇಹಲೋಕದ ಲೋಲುಪ್ತತೆಯಿಂದ ಆಚೆಗೆ ತೆರಳುವ ಮಾರ್ಗವನ್ನು ಸೂಚಿಸುತ್ತಲೇ ಬಂದಿದ್ದಾರೆ. ಆತ್ಯಂತಿಕ ಸುಖ ಅಥವಾ ಆನಂದದ ಸ್ಥಿತಿಯನ್ನು ಹೊಂದುವಲ್ಲಿ ಯಾವ ಅಂಶಗಳು ಅಡ್ಡಿಯಾಗಿವೆಯೋ ಅವನ್ನು ಗುರುತಿಸಿ, ಅವುಗಳಿಂದ ವಿಮುಕ್ತಿ ಹೊಂದುವ ಆಶಯವೇ ಅಧ್ಯಾತ್ಮವು ಸಾಮಾಜಿಕೀ ಕರಣಗೊಂಡಿದ್ದರ ಹಿಂದಿನ ಕಾರಣವಾಗಿರಬಹುದು.
ವಿವೇಕಾನಂದರು ಕೂಡ, ‘ಸಮಾಜ ಸುಧಾರಣೆಯನ್ನು ಯಾವುದೇ ಕಾಯ್ದೆ- ಕಾನೂನುಗಳನ್ನು ನೆಚ್ಚುವುದಕ್ಕಿಂತ, ಅಧ್ಯಾತ್ಮವನ್ನು ಹಂಚುವ ಮೂಲಕ ಮಾಡಬೇಕು’ ಎನ್ನುತ್ತಾರೆ. ಈ ಎಲ್ಲಾ ಒಳನೋಟಗಳ ಸಾರವನ್ನು ಗ್ರಹಿಸಿದರೆ, ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರೂ ವ್ಯಕ್ತಿಗಿರುವ ಅಡೆತಡೆಗಳು ತೊಲಗಲು ಸಾಮಾಜಿಕವಾಗಿ ಅವನನ್ನು/ ಅವಳನ್ನು ಸುತ್ತುವರಿದ ಪದರಗಳಿಂದ ಕಳಚಿಕೊಳ್ಳಬೇಕಾಗುತ್ತದೆ. ಹಾಗಾಗಿ ಜನಸಾಮಾನ್ಯರು ನಿಂತಲ್ಲಿಂದ ಮುಂದೆ ಚಲಿಸಲು ಋಷಿಮುನಿಗಳ, ವಚನಕಾರರ ಹಾಗೂ ಇತರ ಆಧ್ಯಾತ್ಮಿಕ ದಾರ್ಶನಿಕರ ದಾರಿದೀಪ ಸಮಾಜಕ್ಕೆ ಎಂದಿಗೂ ಅತ್ಯಗತ್ಯ.
ಈ ಹಿನ್ನೆಲೆಯಲ್ಲಿ, ವಚನಸಾಹಿತ್ಯದ ಕುರಿತು ನಡೆದಿರುವ ಹಲವಾರು ಚರ್ಚೆಗಳನ್ನು ಗಮನಿಸಿದರೆ ಮೇಲೆ ವಿವರಿಸಿದ ಸುಧಾರಣೆಯ ಒಳತಿರುಳು ವಾದ- ವಾಗ್ವಾದಗಳ ನಡುವೆ ಕಳೆದುಹೋದಂತೆ ಕಾಣುತ್ತದೆ. ವಚನ ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವಲ್ಲಿ, ಸಮುದಾಯಗಳನ್ನು ಪರಿವರ್ತಿಸುವಲ್ಲಿ ಶರಣರು ಹಲವು ತೆರನಾದ ಪ್ರಯತ್ನಗಳನ್ನು ಮಾಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅವರ ಪರಿವರ್ತನೆ ಅಥವಾ ಸುಧಾರಣೆಯು, ಆಧ್ಯಾತ್ಮಿಕ ಮಾರ್ಗಕ್ಕೆ ಅಡ್ಡಿಯಾಗಿರುವ ಅಂಶಗಳನ್ನು ತೊಡೆದು ಹಾಕುವುದೇ ಆಗಿತ್ತು ಎಂಬುದನ್ನು ನಾವು ಮರೆತರೆ, ವಚನಸಾಹಿತ್ಯವನ್ನು ಅದರ ಸಂದರ್ಭದಿಂದ ಕಿತ್ತು ಹಾಕಿದಂತೆ. ಯಾವುದೇ ವ್ಯಕ್ತಿಯೂ, ಸಮುದಾಯವೂ ವಚನಗಳನ್ನು ಓದಬಹುದು, ವ್ಯಾಖ್ಯಾನಿಸಬಹುದು. ಅದನ್ನು ವಿರೋಧಿಸುವುದೇ ಜೀವವಿರೋಧಿ ಕಾರ್ಯವಾಗುತ್ತದೆ.
(ಲೇಖಕರು ಸಂಶೋಧಕರು)