Monday, 16th September 2024

ವಂದೇ ಭಾರತ್ ಪಯಣಕ್ಕೆ ರಾಜಕೀಯ ಲೇಪ ಬೇಡ !

ಶಶಾಂಕಣ

shashidhara.halady@gmail.com

ಬೆಂಗಳೂರಿನಿಂದ ಧಾರವಾಡಕ್ಕೆ ಚಲಿಸಲು ಆರಂಭವಾಗಿರುವ ‘ವಂದೇ ಭಾರತ್’ ರೈಲು ಈಗ ಸಾಕಷ್ಟು ‘ಸದ್ದು’ ಮಾಡಲು ಆರಂಭಿಸಿದೆ. ಎಷ್ಟರ
ಮಟ್ಟಿಗೆ ಎಂದರೆ, ಅದರ ಹೆಸರನ್ನು ಸಹ ಕೆಲವರು ಸಣ್ಣಗೆ ಕುಹಕವಾಡುತ್ತಿದ್ದಾರೆ! ಇರಲಿ, ಅದು ಬೇರೆ ವಿಷಯ. ಈಗ ಬೆಂಗಳೂರಿನಿಂದ  ಧಾರವಾಡಕ್ಕೆ ಸುಮಾರು ೬ಗಂಟೆ ೨೫ ನಿಮಿಷಗಳ ಅವಧಿಯಲ್ಲಿ ಚಲಿಸುತ್ತಿರುವ ರೈಲನ್ನು ಕಂಡು ಸಾಕಷ್ಟು ಮಂದಿ ಖುಷಿಯಾಗಿದ್ದಾರೆ.

ಜತೆಗೆ, ‘ಬೆಂಗಳೂರಿನವರು ಮಾತ್ರ ವಂದೇ ಭಾರತ್ ಪಯಣದ ಸುಖ ಅನುಭವಿಸಿದರೆ ಸಾಕೆ, ನಮಗೂ ಅದರ ಭಾಗ್ಯ ಕರುಣಿಸಿ’ ಎಂದು ತುಮಕೂರು, ಅರಸಿಕೆರೆ, ಬೀರೂರು ಮೊದಲಾದ ಊರುಗಳವರು ಬೇಡಿಕೆ ಇಟ್ಟಿದ್ದಾರೆ. ಈಗ ಬೆಂಗಳೂರಿನಿಂದ ಚಲಿಸುತ್ತಿರುವ ಈ ರೈಲಿಗೆ, ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಿಲುಗಡೆ ಇದೆ. ಇನ್ನೂ ಕೆಲವು ಊರುಗಳಲ್ಲಿ ನಿಲುಗಡೆ ಕೊಡಿ ಎಂಬ ಬೇಡಿಕೆ ಎಷ್ಟು ಸಮಂಜಸ? ಆ ಮಾರ್ಗದಲ್ಲಿರುವ ಹೆಚ್ಚಿನ ಪ್ರಮುಖ ಊರುಗಳಲ್ಲಿ ನಿಲ್ಲುತ್ತಾ ಹೋದರೆ, ‘ವಂದೇ ಭಾರತ್’ ರೈಲಿನ ಪರಿಕಲ್ಪನೆಯೇ ತಲೆಕೆಳಗಾಗುವುದಿಲ್ಲವೆ? ತ್ವರಿತವಾಗಿ, ವೇಗವಾಗಿ, ಹೆಚ್ಚು ನಿಲುಗಡೆಗಳಿಲ್ಲದೇ ಒಂದು ನಗರವನ್ನು ಇನ್ನೊಂದು ನಗರಕ್ಕೆ ಸಂಪರ್ಕಿಸಬೇಕಾದ ಈ ವೇಗದ ರೈಲನ್ನು, ಹಲವು ನಿಲುಗಡೆ ಗಳಿಗೆ ಒಳಪಡಿಸಿದರೆ, ಸಾಮಾನ್ಯ ಎಕ್ಸ್‌ಪ್ರೆಸ್ ರೈಲಿಗೂ ‘ವಂದೇ ಭಾರತ್’ ಎಕ್ಸ್‌ಪ್ರೆಸ್‌ಗೂ ಏನು
ವ್ಯತ್ಯಾಸ ಉಳಿದೀತು? ವಾಸ್ತವವಾಗಿ ವಂದೇ ಭಾರತ್ ರೈಲು ಎಂದರೆ ಅತಿ ವೇಗವಾಗಿ ಚಲಿಸುತ್ತಾ, ಹೆಚ್ಚು ಕುಲುಕಾಡದೇ, ಹೆಚ್ಚು ಸದ್ದು ಮಾಡದೇ ಓಡುವ, ಓಡುತ್ತಿರುವ ರೈಲು; ಲೋಟದಲ್ಲಿ ಇಟ್ಟ ನೀರು ಸಹ ತುಳುಕದೇ ಇರುವಷ್ಟು ನಾಜೂಕಾಗಿ ಈ ರೈಲು ಓಡುತ್ತಿದೆ.

ಎಷ್ಟೋ ಊರುಗಳವರು ಇದೊಂದು ರೈಲು ತಮ್ಮ ಊರಿನ ರೈಲ್ವೆ ಸ್ಟೇಷನ್ ಮೂಲಕ ಚಲಿಸಿದ ರೂ ಸಾಕು, ರೋಮಾಂಚನಗೊಳ್ಳುತ್ತಿದ್ದಾರೆ; ನಿಲುಗಡೆಯೇ ಬೇಕೆಂದಿಲ್ಲ, ತಾವು ಅದನ್ನು ನೋಡಿದರೇ ಅದೊಂದು ಭಾಗ್ಯ ಎಂದು ಖುಷಿಪಡುವ ಅವೆಷ್ಟೋ ಮಂದಿ ಇದ್ದಾರೆ. ವಂದೇ ಭಾರತ್ ರೈಲು ಒಂದು ಹಳ್ಳಿಯ ಬಳಿಯ ರೈಲು ಹಳಿಯ ಮೇಲೆ ಚಲಿಸುತ್ತಿರುವುದನ್ನು ವಿಡಿಯೋ ಮಾಡಿ, ಆ ಪ್ರದೇಶದ ಜನರು ಎಲ್ಲರಿಗೂ ಹಂಚಿದ್ದಾರೆ – ಸ್ವೀಟ್ ಹಂಚಿದಂತೆ.

ವಂದೇ ಭಾರತ್ ರೈಲಿನಲ್ಲಿ ಚಲಿಸಿದ ಹಲವರು ಅದರ ಜತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ, ಅದರೊಳಗಿನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ, ಆ ರೈಲಿನಲ್ಲಿ ಪಯಣಿಸುವುದೇ ಒಂದು ಪ್ರತಿಷ್ಠೆಯ ವಿಚಾರ ಎಂದು ತಿಳಿದು, ಅಂತಹ ತಮ್ಮ ಪಯಣದ ವಿಚಾರವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಸಹಜವಾಗಿ, ತಮ್ಮ ಊರಿನಲ್ಲೂ ಆ ರೈಲಿನ ನಿಲುಗಡೆಯಾಗಲಿ ಎಂದು ಆಸೆ ಪಟ್ಟರೆ ಅದು ಸಹಜ ಎಂದೆನ್ನಬಹುದಾದರೂ, ಹಲವು ನಿಲುಗಡೆ ಪಡೆಯುತ್ತಾ ಹೋದರೆ ಆ ರೈಲು ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಆಗುವುದಿಲ್ಲ, ಬೇರೇನೋ ಹೆಸರಿನ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಆದೀತು.

ಆಗ ‘ವಂದೇ ಭಾರತ್’ ರೈಲುಗಳನ್ನು ಆರಂಭಿಸಿದ ಉದ್ದೇಶವೇ ವಿಫಲವಾದೀತು. ೨೦೧೯ರ ಫೆಬ್ರವರಿಯಲ್ಲಿ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನವದೆಹಲಿಯಿಂದ ವಾರಣಾಸಿಗೆ ಚಲಿಸಿತು. ೭೫೯ ಕಿಮೀ ದೂರವನ್ನು ಸುಮಾರು ಎಂಟು ಗಂಟೆಯ ಅವಧಿಯಲ್ಲಿ ಕ್ರಮಿಸಿದ ಈ ರೈಲು, ನಿಜವಾಗಿಯೂ ನಮ್ಮ ದೇಶದ ಪ್ರಮುಖ ಸುದ್ದಿ ಎನಿಸಿತು, ಸೆನ್ಸೇಷನಲ್ ಸುದ್ದಿಯಾಗಿ ಪ್ರಚಾರಗೊಂಡಿತು. ಆ ರೈಲು ನವದೆಹಲಿಯಿಂದ ಹೊರಟ ನಂತರ, ವಾರಣಾಸಿ ತಲುಪುವ ತನಕ ಅದಕ್ಕೆ ಇರುವುದು ಕೇವಲ ಎರಡು ನಿಲುಗಡೆ. ಜತೆಗೆ, ಹೆಚ್ಚು ಕುಲುಕಾಡದ, ಆಧುನಿಕ ಸೌಲಭ್ಯ ಮತ್ತು ಆಕರ್ಷಕ ನೋಟ ಹೊಂದಿದ ಬೋಗಿಗಳು.

ಉತ್ತಮ ಟ್ರಾಕ್; ಆದ್ದರಿಂದಲೇ ಕೇವಲ ಎಂಟು ಗಂಟೆಯ ಅವಽಯಲ್ಲಿ ೭೫೯ ಕಿ. ಮೀ. ದೂರವನ್ನು ಅದು ಚಲಿಸಬಲ್ಲುದಾಗಿದೆ. ಆ ರೈಲಿನ ಮೊದಮೊದಲ ಪಯಣಗಳಲ್ಲಿ ಎಮ್ಮೆ ಅಡ್ಡಬಂದು ಅವಘಡ ನಡೆದಾಗ, ಅದೂ ಸುದ್ದಿಯಾಯಿತು! ಆದರೆ, ಕ್ರಮೇಣ ದೇಶದಾದ್ಯಂತ ಹಲವು ವಂದೇ ಭಾರತ್ ರೈಲುಗಳನ್ನು ಆರಂಭಿಸಲಾಯಿತು. ಈಗ ನಮ್ಮ ದೇಶದಲ್ಲಿ ೨೩ ವಂದೇ ಭಾರತ್ ರೈಲುಗಳಿದ್ದು, ದೆಹಲಿ-ವಾರಣಾಸಿ ರೈಲು ಅತಿ ವೇಗವಾಗಿ ಚಲಿಸುತ್ತಿದೆ.

ನಮ್ಮ ರಾಜ್ಯದ ಒಳನಾಡಿನಲ್ಲಿ ಈಗ ಮೊದಲ ಬಾರಿಗೆ, ಬೆಂಗಳೂರು ಧಾರವಾಡದ ನಡುವೆ ವಂದೇ ಭಾರತ್ ಆರಂಭಗೊಂಡಿದೆ. ನಮ್ಮ
ರಾಜ್ಯದಲ್ಲಿ ಚಲಿಸುವ ಇನ್ನೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿರುವ ಮೈಸೂರು – ಚೆನ್ನೈ ರೈಲನ್ನು ಗಮನಿಸಿದಾಗ, ಕೆಲವು ಪ್ರಮುಖ ಅಂಶಗಳು
ಎದ್ದು ಕಾಣುತ್ತವೆ. ಅತಿ ಕಡಿಮೆ ಅವಧಿಯಲ್ಲಿ ಚಲಿಸಲು ಅನುಕೂಲವಾಗವಂತೆ, ಚೆನ್ನೈ ಮತ್ತು ಮೈಸೂರು ನಡುವೆ ಅದಕ್ಕೆ ನೀಡಿರುವುದು ಕೇವಲ
ಎರಡು ನಿಲುಗಡೆಗಳು : ಬೆಂಗಳೂರು ಮತ್ತು ಕಾಟ್‌ಪಾಡಿ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ನಿಲ್ದಾಣ
ದಿಂದ ಹೊರಟ ಆ ರೈಲು, ಕಂಟೋನ್ಮೆಂಟ್‌ನಲ್ಲಿ ಸಹ ನಿಲ್ಲುವುದಿಲ್ಲ; ಅತ್ತ ಚೆನ್ನೈ ನಗರದಲ್ಲೂ ಒಂದೇ ನಿಲುಗಡೆ. ಆದ್ದರಿಂದಲೇ ಅದು ಸುಮಾರು
ನಾಲ್ಕೂವರೆ ಗಂಟೆಯ ಅವಧಿಯಲ್ಲಿ ಬೆಂಗಳೂರಿ ನಿಂದ ಚೆನ್ನೈ ತಲುಪುತ್ತದೆ.

ಅದರಲ್ಲಿ ಪಯಣಿಸುವ ಅನುಭವ ಹಿತಕರ; ಹೆಚ್ಚು ಕುಲುಕಾಟವಿಲ್ಲದ, ಸರಿಸುಮಾರು ವಿಮಾನದ ಪಯಣಕ್ಕೆ ಹೋಲಿಸಬಹುದಾದ ಅನುಭವ; ಒಳಗಿನ ವಿನ್ಯಾಸವೂ ವಿಮಾನದ ಆಸನ ವಿನ್ಯಾಸವನ್ನು ಹೋಲುತ್ತದೆ. ನಡುವೆ ಬೇಕೆನಿಸಿದರೆ ಕುರುಕಲು ತಿಂಡಿ, ಚಹಾ, ಕಾಫಿ ಮತ್ತು ಊಟದ ಸಮಯವಾದರೆ ಊಟವನ್ನು ಪಡೆಯಬಹುದು. ಈ ರೈಲು, ಮೈಸೂರಿನಿಂದ ಹೊರಟು ೧೯೭ ಕಿ.ಮೀ. ಕ್ರಮಿಸಿ, ಕೇವಲ ೬ ಗಂಟೆ ೩೦ ನಿಮಿಷದ ಅವಧಿಯಲ್ಲಿ ಚೆನ್ನೈ ತಲುಪುತ್ತದೆ. ಈ ಮಟ್ಟದ ಹೆಚ್ಚಿನ ವೇಗವನ್ನು ಅದು ಪಡೆದುಕೊಳ್ಳಲು ಪ್ರಮುಖ ಕಾರಣವೆಂದರೆ, ನಡುವೆ ಹೆಚ್ಚು ನಿಲುಗಡೆ ಇಲ್ಲದೇ ಇರುವುದು. ಬೆಂಗಳೂರು ಮತ್ತು ಧಾರವಾಡದ ನಡುವೆ ಈಗ ಆರಂಭವಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್, ನಿಜವಾಗಿಯೂ ಅಂತಹದೊಂದು ಹೈಸ್ಪೀಡ್ ಎಕ್ಸ್‌ಪ್ರೆಸ್‌ನ ಅನುಭವವನ್ನು ನೀಡಬೇಕೆಂದರೆ, ಇದೇ ರೀತಿ ಕಡಿಮೆ ನಿಲುಗಡೆಯೊಂದಿಗೆ ಚಲಿಸಬೇಕು. ಈಗಾಗಲೇ ಅದಕ್ಕೆ ನೀಡಿರುವ ಯಶವಂತಪುರ ನಿಲುಗಡೆ ಸಹ, ಒಂದು ರೀತಿಯಲ್ಲಿ ಪಯಣದ ಅವಧಿಗೆ ಒಂದು ಹೊರೆ; ಆ ಸುತ್ತಲಿನ ಜನರಿಗೆ ಅನುಕೂಲವಾಗಬಹುದು ಎಂಬ ವಿಚಾರ ಬೇರೆ; ವಂದೇ ಭಾರತ್ ಪರಿಕಲ್ಪನೆಗೆ, ಈ ರೀತಿ ಒಂದೇ ನಗರದಲ್ಲಿ ಎರಡು ನಿಲುಗಡೆ ನೀಡುವುದು ವಿರುದ್ಧ ಎನಿಸಿದೆ.

ಆದ್ದರಿಂದಲೇ, ಈ ರೈಲಿಗೆ ಇನ್ನಷ್ಟು ಊರುಗಳಲ್ಲಿ ನಿಲುಗಡೆಯನ್ನು ನೀಡಿದರೆ, ಅದು ಬೇರೊಂದು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಆಗಿ
ಪರಿವರ್ತನೆಗೊಳ್ಳಬಹುದು ಅಷ್ಟೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಜಪಾನಿನ ಬುಲೆಟ್ ಟ್ರೈನ್‌ಗೆ ಹೋಲಿಕೆ ಉಳ್ಳದ್ದು ಎಂದು ಹಲವರು ಭಾವಿಸಿರುವುದುಂಟು. ಆದರೆ, ಜಪಾನಿನ ಬುಲೆಟ್ ಟ್ರೈನ್‌ಗೂ, ವಂದೇ ಭಾರತ್ ಎಕ್ಸ್‌ಪ್ರೆಸ್‌ಗೂ ಹೆಚ್ಚು ಹೋಲಿಕೆ ಇಲ್ಲ. ಏಕೆಂದರೆ, ಜಪಾನಿನಲ್ಲಿ ಬುಲೆಟ್ ಟ್ರೈನ್‌ಗಳಿಗಾಗಿ, ಪ್ರತ್ಯೇಕ ಹಳಿಗಳಿವೆ. ಬುಲೆಟ್ ಟ್ರೈನ್‌ಗಳು ಜಪಾನಿನಲ್ಲಿ ಆರಂಭಗೊಂಡದ್ದು ೧೯೬೪ರಲ್ಲಿ; ಆಗಲೇ ಅವುಗಳ ಗರಿಷ್ಠವೇಗ ೨೨೦ ಕಿಮೀ. ಈಗಿನ ತಲೆಮಾರಿನ ಬುಲೆಟ್ ಟ್ರೈನುಗಳು ಸುಮಾರು ೩೦೦ ಕಿ.ಮೀ. ವೇಗದಲ್ಲಿ ಚಲಿಸಬಲ್ಲವು.

ಜಪಾನಿನ ಪ್ರಮುಖ ನಗರಗಳನ್ನು ತ್ವರಿತವಾಗಿ ಸಂಪರ್ಕಿಸುವ ಬುಲೆಟ್ ಟ್ರೈನ್‌ಗಳು, ಅಲ್ಲಿ ಸಂಪರ್ಕ ಕ್ರಾಂತಿಯನ್ನೇ ಮಾಡಿವೆ. ಈಗಲೂ ಜಪಾನಿನವರು ಹೊಸ ಹೊಸ ಹಳಿಗಳನ್ನು ನಿರ್ಮಿಸುತ್ತಾ, ಹೊಸ ಬುಲೆಟ್ ಟ್ರೈನ್ ಗಳ ಯೋಜನೆ ನಡೆಸಿದ್ದಾರೆ. ವಿಶೇಷವೆಂದರೆ ಯು.ಎಸ್. (ಅಮೆರಿಕ)ನಲ್ಲಿ ಬುಲೆಟ್ ರೈಲು ಗಳಿಲ್ಲ! ೨೦೨೬ರಲ್ಲಿ ಮೊದಲ ಬುಲೆಟ್ ಟ್ರೈನ್ ಅಲ್ಲಿ ಚಲಿಸಲಿದೆ. ಅಲ್ಲಿನ ವಾಹನ ಲಾಬಿ, ವಿಮಾನ ಸೌಲಭ್ಯ ಗಳಿಂದಾಗ ಈ ವಿಳಂಬ. ಜಪಾನ್ ರೀತಿ ಬುಲೆಟ್ ಟ್ರೈನುಗಳು ಈಗ ತೈವಾನ್, ಚೀನಾ ಮತ್ತು ಯು.ಕೆ.ನಲ್ಲಿ ಮಾತ್ರ ಇವೆ. ನಮ್ಮ ದೇಶದಲ್ಲಿ
ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೆಟ್ ಟ್ರೈನ್ ಯೋಜನೆಗೆ ಚಾಲನೆ ದೊರೆತಿದ್ದು, ೨೦೨೭ರ ಸಮಯದಲ್ಲಿ ಆ ಬುಲೆಟ್ ಟ್ರೈನ್, ನಮ್ಮ
ದೇಶದ ಮೊದಲ ಬುಲೆಟ್ ಟ್ರೈನ್ ಆಗಿ ಚಲಿಸುವ ನಿರೀಕ್ಷೆ ಇದೆ.

ಈ ನಡುವೆ, ‘ವಂದೇ ಭಾರತ್’ ರೈಲುಗಳ ಸೌಲಭ್ಯವು ನಮ್ಮ ದೇಶದ ಬುಲೆಟ್ ಟ್ರೈನ್ ಎಂದು ನಮಗೆ ನಾವೇ ಸಮಾಧಾನ ಪಟ್ಟುಕೊಳ್ಳುವುದುಂಟು; ಹಾಗೆ ನೋಡಿದರೆ ಅದರಲ್ಲಿ ತಪ್ಪೇನೂ ಇಲ್ಲ ಎನ್ನಬಹುದು. ಏಕೆಂದರೆ, ಬ್ರಿಟಿಷರ ಕಾಲದಲ್ಲಿ ಆರಂಭಗೊಂಡ ನಮ್ಮ ದೇಶದ ರೈಲುವೇ ಸಂಪರ್ಕ ಜಾಲವು, ವಿಶ್ವದಲ್ಲೇ ಅಪ್ರತಿಮ ಮತ್ತು ಇದೊಂದು ಅದ್ಭುತ ವ್ಯವಸ್ಥೆ ಎಂದು ಹೊಗಳಿಸಿ ಕೊಂಡದ್ದೂ ಉಂಟು. ಬಡ ದೇಶ, ಹಾವಾಡಿಗರ ದೇಶದ ಎಂದು ವ್ಯಂಗ್ಯಕ್ಕೆ ಒಳಗಾಗಿದ್ದ ನಮ್ಮ ದೇಶದಲ್ಲಿ ಸಾವಿರಾರು ಕಿ.ಮೀ.ಚಲಿಸುವ ರೈಲು ವ್ಯವಸ್ಥೆಯನ್ನು ಕಂಡು, ಇದು ಹೇಗೆ ಸಾಧ್ಯ ಎಂದು
ಪಾಶ್ಚಾತ್ಯರು ಬೆರಗಾಗಿದ್ದರಿಂದಲೇ ಇಂತಹ ದೊಂದು ಹೊಗಳಿಕೆ ಹೊರಟಿರಬಹುದು, ಹೊರತು, ಜಪಾನ್, ಚೀನಾ, ಜರ್ಮನಿ ಮೊದಲಾದ ದೇಶಗಳಲ್ಲಿರುವ ರೈಲು ಸಂಪರ್ಕವನ್ನು ಹೋಲಿಸಿ ಅಲ್ಲ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರದ ಮೊದಲ ಕೆಲವು ದಶಕಗಳಲ್ಲಿ, ರೈಲುಗಳ ವ್ಯವಸ್ಥೆ ಸಾಕಷ್ಟು ಅಭಿವೃದ್ಧಿ ಹೊಂದಿದರೂ, ಜಪಾನ್ ಅಥವಾ ಪಾಶ್ಚಾತ್ಯ ದೇಶಗಳೊಂದಿಗೆ ಹೋಲಿಸುವ ರೀತಿ ಅಭಿವೃದ್ಧಿ ಹೊಂದಿಲ್ಲ ಎಂದೇ ಹೇಳಬಹುದು. ಈಚಿನ ದಶಕಗಳಲ್ಲಿ ನಮ್ಮ ರೈಲು
ವ್ಯವಸ್ಥೆ ವೈವಿಧ್ಯಮಯವಾಗಿ ಬೆಳೆದಿದೆ: ಜನ ಶತಾಬ್ದಿ, ಶತಾಬ್ದಿ, ರಾಜಧಾನಿ, ಡಬಲ್ ಡೆಕರ್ ರೈಲು, ಸಂಪರ್ಕ ಕ್ರಾಂತಿ, ಗರೀಬ್ ರಥ್, ಸೂಪರ್ ಫಾಸ್ಟ್ ರೈಲು, ವಿದ್ಯುದೀಕರಣ; ಈಗ ವಂದೇ ಭಾರತ್ ಎಕ್ಸ್‌ಪ್ರೆಸ್.

ವಿಶ್ವದ ಅತ್ಯಂತ ದಕ್ಷ ರೈಲುವೇ ವ್ಯವಸ್ಥೆಗಳಲ್ಲಿ ನಮ್ಮ ದೇಶದ ರೈಲು ವ್ಯವಸ್ಥೆಯೂ ಸೇರಿದೆ ಎಂಬುದರಲ್ಲಿ ಅನುಮಾನವಿಲ್ಲ. ಈಚಿನ ಒಂದೆರಡು ದಶಕಗಳಲ್ಲಿ, ರೈಲ್ವೇ ಇಲಾಖೆಯು ತನ್ನ ಕಾಲ ಮೇಲೆ ತಾನೇ ನಿಲ್ಲುವಂತೆ ಮಾಡುವ ಪ್ರಯತ್ನಗಳು ನಡೆದಿವೆ ಎಂದೇ ಹೇಳಬೇಕು. ಇಪ್ಪತ್ತನೆಯ ಶತ
ಮಾನದ ಕೊನೆಯ ವರ್ಷಗಳ ತನಕ ಪ್ರಯಾಣದ ದರ ಅತಿ ಕಡಿಮೆ ಇತ್ತು. ಪ್ಯಾಸೆಂಜರ್ ರೈಲು ಪಯಣದ ಟಿಕೀಟು ದರದ ರೀತಿಯೇ, ಎಕ್ಸ್‌ಪ್ರೆಸ್
ರೈಲುಗಳ ಹಾಸಲು ಸಹ ಕಡಿಮೆ ಮಟ್ಟದಲ್ಲೇ ಇತ್ತು. ಪ್ರಯಾಣಿಕರು ರೈಲುಗಳಲ್ಲಿ ಚಲಿಸುವುದರಿಂದ ರೈಲ್ವೆ ಇಲಾಖೆಗೆ ನಷ್ಟವಾಗುತ್ತಿದೆ, ಆ
ನಷ್ಟವನ್ನು ಸರಕು ಸಾಗಾಣಿಕೆಯ ಮೂಲಕ ಸರಿ ದೂಗಿಸಲಾಗುತ್ತಿದೆ ಎಂದು ಆಗ ಹೇಳಲಾಗುತ್ತಿತ್ತು.

ಇಪ್ಪತ್ತೊಂದನೆಯ ಶತಮಾನದಲ್ಲಿ, ರೈಲ್ವೇ ಇಲಾಖೆಯು ಎಲ್ಲಾ ವಿಭಾಗಗಳಲ್ಲೂ ಲಾಭ ಗಳಿಸುವ ಪ್ರಯತ್ನ ನಡೆದಿದೆ. ಈಗ ಸೂಪರ್ ಫಾಸ್ಟ್ ಎಕ್ಸ್
ಪ್ರೆಸ್, ಶತಾಬ್ದಿ, ರಾಜಧಾನಿ ಮೊದಲಾದ ರೈಲು ಗಳಲ್ಲಿ ಪಯಣಿಸಿದರೆ ಸಾಕಷ್ಟು ಅಧಿಕ ಮೊತ್ತದ ಹಾಸಲನ್ನು ತೆರಬೇಕು. ಈಗ ನಮ್ಮಲ್ಲಿನ ಕೆಲವು
ವರ್ಗಗಳ ಜನರು ಎ.ಸಿ. ಕೋಚ್‌ನ ಪಯಣವನ್ನು ಇಷ್ಟಪಡುತ್ತಿದ್ದಾರೆ; ಹೆಚ್ಚು ಹಾಸಲನ್ನು ತೆತ್ತರೂ ಪರವಾಗಿಲ್ಲ, ಹೆಚ್ಚು ಅನುಕೂಲ, ವೇಗದ
ಪಯಣವು ಇಂದಿನ ಆದ್ಯತೆ ಎನಿಸಿದೆ. ರಾಜಧಾನಿ, ಶತಾಬ್ದಿ ಮೊದಲಾದ ರೈಲುಗಳ ಐಷಾರಾಮಿ ಪಯಣವನ್ನು ಇಷ್ಟಪಡುವ ಜನವರ್ಗವೇ ಇಂದು
ಸೃಷ್ಟಿಯಾಗಿದೆ.

ಎಕ್ಸ್‌ಪ್ರೆಸ್ ರೈಲುಗಳಿಗೆ ಹೋಲಿಸಿದರೆ, ‘ವಂದೇ ಭಾರತ್’ ರೈಲುಗಳ ಟಿಕೇಟು ದರ ತುಸು ಅಧಿಕ. ಇಡೀ ರೈಲನ್ನು ಹವಾನಿಯಂತ್ರಣಕ್ಕೆ ಒಳಪಡಿಸಿರುವುದರಿಂದಾಗಿ, ಹೆಚ್ಚು ನಿಲುಗಡೆ ನೀಡದೇ ತ್ವರಿತವಾಗಿ ಓಡಿಸುತ್ತಿರುವುದರಿಂದಾಗಿ, ಈ ರೀತಿಯ ದುಬಾರಿ ಹಾಸಲು ದರದ ನಿಗದಿ ಅನಿವಾರ್ಯ ಎನಿಸಿರಬಹುದು. ಆದರೆ, ಇಷ್ಟೊಂದು ದುಬಾರಿ ಬೆಲೆ ತೆತ್ತು ಆ ರೈಲುಗಳಲ್ಲಿ ಸಂಚರಿಸುವ ಜನರು ಸಾಕಷ್ಟಿದ್ದಾರೆ ಎಂಬುದಕ್ಕೆ, ‘ವಂದೇ ಭಾರತ್’ ರೈಲುಗಳಲ್ಲಿ ಬುಕ್ ಆಗುತ್ತಿರುವ ಸೀಟುಗಳ ಸಂಖ್ಯೆಯೇ ಸಾಕ್ಷಿ.

ಬೆಂಗಳೂರು- ಧಾರವಾಡ ನಡುವೆ ಚಲಿಸುತ್ತಿರುವ ವಂದೇ ಭಾರತ್ ರೈಲಿಗೆ ಇನ್ನೂ ಹೆಚ್ಚಿನ ನಿಲುಗಡೆ ನೀಡಿದರೆ, ಪಯಣದ ಅವಧಿ ಹೆಚ್ಚಳಗೊಂಡು, ಆ ರೈಲಿನ ಪರಿಕಲ್ಪನೆಯೇ ವಿಫಲವಾದೀತು. ಬೇರೆ ವಂದೇ ಭಾರತ್ ರೈಲು ಗಳಿಗೆ ಹೋಲಿಸಿದರೆ, ಅದಕ್ಕೆ ಈಗ ನೀಡಿರುವ ನಿಲುಗಡೆಗಳ ಸಂಖ್ಯೆಯೇ ಅಽಕ ಎನ್ನಬಹುದು. ಕೇವಲ ೬ ಗಂಟೆ ೨೫ ನಿಮಿಷಗಳಲ್ಲಿ ಗುರಿಯನ್ನು ಮುಟ್ಟುವ, ನಮ್ಮ ರಾಜ್ಯದ ಒಳನಾಡಿನಲ್ಲಿ ಚಲಿಸುವ ಮೊದಲ ‘ವಂದೇ ಭಾರತ್’ ರೈಲನ್ನು ಸ್ವಾಗತಿಸೋಣ!

Leave a Reply

Your email address will not be published. Required fields are marked *