Saturday, 27th July 2024

’ವೀರ ಸಾವರ್ಕರ್‌’ ಸಂಸತ್ತಿನಲ್ಲಿರಬೇಕಿತ್ತು !

ವೀಕೆಂಡ್ ವಿತ್ ಮೋಹನ್

camohanbn@gmail.com

ಬ್ರಿಟಿಷರು ಭಾರತದಿಂದ ಕಾಲ್ತೆಗೆದು ೭೫ ವರ್ಷ ಕಳೆದರೂ ಅವರು ಬಿಟ್ಟು ಹೋಗಿರುವ ಕೆಲವು ಕುರುಹುಗಳು ಭಾರತದಲ್ಲಿ ಇನ್ನೂ ಉಳಿದುಕೊಂಡಿವೆ. ಬೆಂಗಳೂರಿನ ಹಲವು ರಸ್ತೆಗಳ ಹೆಸರು ಇಂದಿಗೂ ಬ್ರಿಟಿಷರ ಕಾಲದ್ದೇ ಇರುವುದು ನಮ್ಮ ಕಣ್ಣ ಮುಂದಿದೆ,

ರಾಣಿ ವಿಕ್ಟೋರಿಯಾ ಹೆಸರಿನ ಆಸ್ಪತ್ರೆ ಇಂದಿಗೂ ಬೆಂಗಳೂರಿನ ಪ್ರಮುಖ ಸರಕಾರಿ ಆಸ್ಪತ್ರೆಯಾಗಿದೆ. ‘ಲೇಡಿ ಕರ್ಜನ’ ಆಸ್ಪತ್ರೆ ಬ್ರಿಟಿಷರ ಕಾಲ ದಿಂದಲೂ ಬೆಂಗಳೂರಿನಲ್ಲಿದೆ. ಇವು ಬೆಂಗಳೂರಿನ ಬೆರಳೆಣಿಕೆಯ ಉದಾಹರಣೆಯಾದರೆ ದೇಶಾದ್ಯಂತ ಅವೆಷ್ಟೋ ರಸ್ತೆಗಳು, ಆಸ್ಪತ್ರೆಗಳು, ಕಟ್ಟಡಗಳು ಬ್ರಿಟಿಷರ ಕಾಲzಗಿರಬಹುದು. ಅದೆಲ್ಲ ಹಾಗಿರಲಿ, ಕಳೆದ ೭೫ ವರ್ಷಗಳಿಂದ ಬ್ರಿಟಿಷರು ಕಟ್ಟಿಸಿದ್ದ ಸಂಸತ್ ಭವನದಲ್ಲಿಯೇ ಸದನದ ಕಲಾಪಗಳು ನಡೆಯುತ್ತಿದ್ದವು.

ದೊಡ್ಡ ದೊಡ್ಡ ನಿರ್ಣಯಗಳನ್ನು ಆ ಸಂಸತ್ತಿನಲ್ಲೇ ತೆಗೆದುಕೊಳ್ಳಲಾಗಿದೆ. ಬ್ರಿಟಿಷ್ ಆಡಳಿತಾವಧಿಯಲ್ಲಿನ ಅನೇಕ ನಿರ್ಣಯಗಳನ್ನೂ ಅವರು ಈ ಕಟ್ಟಡದಲ್ಲಿಯೇ ಕೈಗೊಂಡಿದ್ದರು. ಬ್ರಿಟಿಷ್ ಅಧಿಕಾರಿಗಳು ವಿನ್ಯಾಸ ಗೊಳಿಸಿದ್ದ ಸಂಸತ್ ಕಟ್ಟಡದ ನಿರ್ಮಾಣ ೧೯೨೧ರಲ್ಲಿ ಪ್ರಾರಂಭವಾಗಿ ೧೯೨೭ ರಲ್ಲಿ ಉದ್ಘಾಟನೆಗೊಂಡಿತು. ೧೯೫೦ರಲ್ಲಿ ಭಾರತದ ಸಂವಿಧಾನ
ರಚನೆಯ ನಂತರ ಭಾರತ ಸರಕಾರದ ಅಧಿಕೃತ ಸಂಸತ್ ಭವನವಾಗಿ ಈ ಕಟ್ಟಡ ಪರಿವರ್ತನೆಯಾಯಿತು. ಇದೀಗ ನಮ್ಮದೇ ನೂತನ ಸಂಸತ್ ಭವನ ‘ಸೆಂಟ್ರಲ್ ವಿಸ್ತಾವನ್ನು ನಾಳೆ ೨೮ರಂದು ಪ್ರಧಾನಮಂತ್ರಿಗಳು ಲೋಕಾರ್ಪಣೆ ಮಾಡುತ್ತಿದ್ದಾರೆ.

ಭಾರತವು ಆರ್ಥಿಕತೆಯಲ್ಲಿ ಜಗತ್ತಿನಲ್ಲಿ ಐದನೇ ಸ್ಥಾನದಲ್ಲಿರುವ ದೇಶ. ಬ್ರಿಟಿಷರನ್ನು ಹಿಂದಿಕ್ಕಿ ಭಾರತದ ಆರ್ಥಿಕತೆ
ಪ್ರಗತಿಯತ್ತ ಮುನ್ನುಗ್ಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವೇ ನಿರ್ಮಿಸಿರುವ ನೂತನ ಸಂಸತ್ತಿನ ಅವಶ್ಯಕತೆಯಿತ್ತು.
೨೦೧೨ರಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನೂತನ ಸಂಸತ್ ಭವನ ನಿರ್ಮಿಸಲು ನಿಶ್ಚಯಿಸಲಾಗಿತ್ತು. ಆದರೆ
ಎಂದಿನಂತೆ ಕಾಂಗ್ರೆಸ್ ಮಾತುಗಳು ಕೇವಲ ಹೇಳಿಕೆಗಳಿಗಷ್ಟೇ ಸೀಮಿತವಾಗಿ ನೂತನ ಸಂಸತ್ ಕಟ್ಟಡದ ಕಾಮಗಾರಿ ಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಲಿಲ್ಲ.

ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ನಂತರ ಇದರ ಕಾಮಗಾರಿಯನ್ನು ಕೈಗೆತ್ತಿಕೊಂಡರು. ಟಾಟಾ ಸಂಸ್ಥೆಯ ಸಹಯೋಗದಲ್ಲಿ ‘ಸೆಂಟ್ರಲ್ ವಿಸ್ತಾ’ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಯಿತು. ತಾನೇ ಶಂಕುಸ್ಥಾಪನೆ ಮಾಡಿ ತಾನೇ ಉದ್ಘಾಟನೆ ನೆರವೇರಿಸುವುದರಲ್ಲಿ ಮೋದಿಯವರು ಎತ್ತಿದ ಕೈ. ಸ್ವಾತಂತ್ರ್ಯದ ೭೫ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಸ್ವದೇಶೀ ನಿರ್ಮಿತ ನೂತನ ಸಂಸತ್ ಭವನ ಉದ್ಘಾಟನೆ ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ.

ಸ್ವಾತಂತ್ರ್ಯ ವೀರ ಸಾವರ್ಕರ್ ಜನ್ಮದಿನದಂದು ನೂತನ ಸಂಸತ್ ಉದ್ಘಾಟನೆಗೊಳ್ಳುತ್ತಿರುವುದು ಮತ್ತೊಂದು ಹೆಮ್ಮೆಯ ಸಂಗತಿ. ಸ್ವಾತಂತ್ರ್ಯಾ ನಂತರ ಭಾರತದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಹಲವು
ನಾಯಕರು ಸಂಸತ್ತಿನಲ್ಲಿ ಕುಳಿತು ದೇಶವನ್ನು ಮುನ್ನಡೆಸಬೇಕಿತ್ತು. ವಿಪರ್ಯಾಸವೆಂದರೆ ನೆಹರು ಕುಟುಂಬಸ್ಥರು ಇಡೀ ದೇಶವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಮೂಲಕ ಸಂಸತ್ತನ್ನು ಸೀಮಿತ ಮಾಡಿಬಿಟ್ಟರು.

ಸಕಲ ಸೌಲಭ್ಯವಿರುವ ಕೊಠಡಿಯಲ್ಲಿ ಆರಾಮಾಗಿ ಜೈಲುವಾಸ ಅನುಭವಿಸಿದ ನೆಹರು, ಎಂದಿಗೂ ಸಹ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟವನ್ನು ಮಾಡಲಿಲ್ಲ. ಬ್ರಿಟಿಷರಿಂದ ಹಲ್ಲೆಗೊಳಗಾಗಿ ಚಿತ್ರಹಿಂಸೆ ಅನುಭವಿಸಿದ ವೀರ ಸಾವರ್ಕರ್ ಸಂಸತ್ತಿನಲ್ಲಿ ರಾಜ್ಯಭಾರ ಮಾಡಬೇಕಿತ್ತು. ಬ್ರಿಟಿಷರ ವಿರುದ್ಧ ಭಾರತೀಯ ಸೈನ್ಯವನ್ನೇ ಕಟ್ಟಿದ ಸುಭಾಷ್ ಚಂದ್ರ ಬೋಸ್ ಸಂಸತ್ತಿನಲ್ಲಿ ರಾಜ್ಯಭಾರ ಮಾಡಬೇಕಿತ್ತು. ದಲಿತರ ಗಟ್ಟಿ ಧ್ವನಿಯಾಗಿದ್ದ ಬಾಬಾಸಾಹೇಬರನ್ನು ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ ಪಕ್ಷ ಅವರನ್ನು ಸಂಸತ್ತಿಗೆ ಬರದಂತೆ ತಡೆದಿತ್ತು. ಇವರ ಜತೆಗೆ ಮತ್ತಷ್ಟು ಮಹಾನ್ ನಾಯಕರಿಗೆ ಭಾರತವನ್ನು ಮುನ್ನಡೆಸುವ ಅರ್ಹತೆಯಿದ್ದರೂ ನೆಹರು ಅವರ ಸ್ವಾರ್ಥದಿಂದಾಗಿ ಇವರ‍್ಯಾರೂ ಸಂಸತ್ ಪ್ರವೇಶಿಸಲಿಲ್ಲ.

ಇರುವೆಗಳು ಕಟ್ಟಿದ್ದ ಹುತ್ತದಲ್ಲಿ ಮತ್ಯಾರೋ ಬಂದು ಸೇರಿಕೊಳ್ಳುವಂತೆ ಸಾವಿರಾರು ಕ್ರಾಂತಿಕಾರಿಗಳ ಹೋರಾಟದ ಪರಿಶ್ರಮದ ಫಲವನ್ನು ತನ್ನ ಹೆಗಲ ಮೇಲೆ ಏರಿಸಿಕೊಂಡವರು ನೆಹರು. ಅಂಡಮಾನ್ ದ್ವೀಪದ ಭಯಾನಕ ಜೈಲಿನಲ್ಲಿ ಹತ್ತಾರು ವರ್ಷಗಳ ಕಾಲ ಕರಿನೀರಿನ ಶಿಕ್ಷೆ ಅನುಭವಿಸಿದ ವೀರ ಸಾವರ್ಕರ್ ಚಿತ್ರಪಟವನ್ನು ಸಂಸತ್ತಿನಲ್ಲಿ ಇರಿಸಲು ‘ಅಟಲ್
ಬಿಹಾರಿ ವಾಜಪೇಯಿ’ ಬರಬೇಕಾಯಿತು. ಬ್ರಿಟಿಷರ ಕಾಲದಲ್ಲಿ ಸಾವರ್ಕರ್ ಬರೆದಿದ್ದ ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಪುಸ್ತಕವನ್ನು ಮುದ್ರಿಸಲು ಬಿಟ್ಟಿರಲಿಲ್ಲ.

ಸ್ವಾತಂತ್ರ್ಯಾ ನಂತರ ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್, ಬ್ರಿಟಿಷರ ಹಾದಿಯನ್ನೇ ಅನುಸರಿಸಿ ವೀರ ಸಾವರ್ಕರರ ಇತಿಹಾಸವನ್ನೇ ಮುಚ್ಚಿಹಾಕಿತ್ತು. ಲೊಡ್ಡೆಗಳ ಇತಿಹಾಸದಲ್ಲಿ ಸಾವರ್ಕರರನ್ನು ಹೇಡಿಯಂತೆ ಬಿಂಬಿಸಿ ಅವಮಾನ ಮಾಡಲಾ ಗಿತ್ತು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ತನ್ನ ದೇಹದ ರಕ್ತ ಹರಿಸಿದ್ದ ಸಾವರ್ಕರ್ ಸಂಸತ್ತಿನ ಸಾಲುಗಳಲ್ಲಿ ಕುಳಿತು ಭವ್ಯ ಭಾರತದ ನೀತಿಗಳ ಬಗ್ಗೆ ಚರ್ಚಿಸಬೇಕಿತ್ತು.

ಕೇಂದ್ರ ಸರಕಾರದ ಪ್ರತಿಯೊಂದು ಯೋಜನೆಯ ಬಗ್ಗೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಕಾಂಗ್ರೆಸ್, ಗಾಜಿನ
ಮನೆಯಲ್ಲಿ ಕುಳಿತು ಕಲ್ಲು ಹೊಡೆಯುತ್ತದೆ. ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಆಹ್ವಾನಿಸಿಲ್ಲ ವೆಂದು ಹೊಸದೊಂದು ರಾಜಕೀಯ ಶುರು ಮಾಡಿದೆ. ೧೯೮೭ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂಸತ್ತಿನ ನೂತನ ಗ್ರಂಥಾಲಯ ಉದ್ಘಾಟನೆಯನ್ನು ತಾವೇ ಮಾಡಿದ್ದರು; ಬದಲಿಗೆ ರಾಷ್ಟ್ರಪತಿಗಳಿಗೆ ಆಹ್ವಾನವಿರಲಿಲ್ಲ. ೨೦೧೦ರಲ್ಲಿ ಸೋನಿಯಾ ಗಾಂಧಿ ‘ಅಟಲ್ ಟನಲ್’ಗೆ ಭೂಮಿ ಪೂಜೆ ಮಾಡಿದ್ದರು. ಕೇಂದ್ರ ಸರಕಾರದ ಯೋಜನೆಯೊಂದಕ್ಕೆ ಭೂಮಿ ಪೂಜೆ ಮಾಡಲು ಪ್ರಧಾನಿಯೂ ಆಗಿರದ ಸೋನಿಯಾ ಗಾಂಧಿ ಯಾಕೆ ಬರಬೇಕಿತ್ತು? ೨೦೦೯ರಲ್ಲಿ ಮುಂಬೈ ನಗರದ ‘ಬಾಂದ್ರಾ ಮತ್ತು ವರ್ಲಿ’ ಸೀ ಲಿಂಕ್ ಉದ್ಘಾಟನೆಯನ್ನೂ ಸೋನಿಯಾ ಗಾಂಧಿಯವರೇ ಮಾಡಿದ್ದರು.

ತನ್ನ ಅಧಿಕಾರವಧಿಯಲ್ಲಿ ಜಾರಿಗೆ ತಂದಿರುವ ಅಷ್ಟೂ ಯೋಜನೆಗಳಿಗೆ ತಮ್ಮ ಕುಟುಂಬ ಸದಸ್ಯರ ಹೆಸರನ್ನೇ ಬಳಸಿಕೊಂಡಿ ರುವ ನೆಹರು ಕುಟುಂಬದ ಕುಡಿಗಳು ಈಗ ಸೆಂಟ್ರಲ್ ವಿಸ್ತಾ ಬಗ್ಗೆ ಮಾತನಾಡುತ್ತಿದ್ದಾರೆ. ಅತ್ತ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್, ಹೈದರಾಬಾದಿನಲ್ಲಿ ನೂತನ ಕಾರ್ಯದರ್ಶಿ ಕಾರ್ಯಾಲಯ ಉದ್ಘಾಟನೆಗೆ ತೆಲಂಗಾಣದ ರಾಜ್ಯಪಾಲರನ್ನು ಆಹ್ವಾನಿಸಿರಲಿಲ್ಲ. ಆದರೆ ಸೆಂಟ್ರಲ್ ವಿಸ್ತಾ ಉದ್ಘಾಟನೆಗೆ ರಾಷ್ಟ್ರಪತಿಗಳು ಬರದಿರುವುದರ ಬಗ್ಗೆ ಮಾತನಾಡುತ್ತಾರೆ.

ಪ್ರಪಂಚದ ನಾನಾ ಸಂಸತ್ತುಗಳಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಹಲವು ಸಂಸತ್ತುಗಳಲ್ಲಿ ಭಾಷಣವನ್ನೂ ಮಾಡಿದ್ದಾರೆ. ಆಸ್ಟ್ರೇಲಿಯಾ ದೇಶದ ಘಟಾನುಘಟಿ ನಾಯಕರುಗಳು ಪ್ರಧಾನಿ ಮೋದಿಯವರನ್ನು ‘ಬಾಸ್’ ಎಂದು ಕರೆಯುತ್ತಾರೆ. ಒಂದು ಕಾಲದಲ್ಲಿ ಭಯೋತ್ಪಾದಕರ ಸ್ವರ್ಗವಾಗಿದ್ದ ಕಾಶ್ಮೀರದಲ್ಲಿ ಇಂದು ಜಿ-೨೦ ಶೃಂಗಸಭೆ ನಡೆಯುತ್ತಿದೆ. ಕಾಶ್ಮೀರಕ್ಕೆ ವಿಶೇಷ
ಸ್ಥಾನಮಾನ ಕೊಟ್ಟಿದ್ದ ನೆಹರು ಹಿಂಬಾಲಕರು ಸೋನಿಯಾ ಗಾಂಧಿಯನ್ನು ಸಂತೋಷ ಪಡಿಸಲು ನೂತನ ಸಂಸತ್ತಿನ
ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಅಂದಾಜು ೯೭೧ ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗಿರುವ ನೂತನ ಸಂಸತ್ತಿನ ಖರ್ಚಿನ ಬಗ್ಗೆ ಕೊಂಕು ಮಾತನಾಡುವ ಕಾಂಗ್ರೆಸಿಗರು, ದೆಹಲಿಯ ಮುಖ್ಯ ಭಾಗದಲ್ಲಿ ಸಾವಿರಾರು ಕೋಟಿ ಬೆಲೆ ಬಾಳುವ ಸ್ಥಳದಲ್ಲಿ ತಮ್ಮ ಕುಟುಂಬಸ್ಥರ ಸಮಾಧಿ ಗಳಿರುವ ಜಾಗದ ಬಗ್ಗೆ ಯಾಕೆ ತುಟಿ ಬಿಚ್ಚುವುದಿಲ್ಲ? ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ೨೦೦೪ ರಲ್ಲಿ ಅಂದಾಜು ೧೫೦ ಕೋಟಿ ರು. ವೆಚ್ಚದಲ್ಲಿ ‘ವಿಕಾಸ ಸೌಧ’ವನ್ನು ನಿರ್ಮಾಣ ಮಾಡಿದ್ದರು. ಅಂದು ಸಹ ಸರಕಾರದ ಹಣದಲ್ಲಿಯೇ ಕಟ್ಟಲಾಗಿತ್ತು.

ಆಗ ಚರ್ಚೆಯಾಗದ ಐಷಾರಾಮಿ ಕಟ್ಟಡದ ವಿಷಯ, ೨೦ ವರ್ಷಗಳ ನಂತರ ಮೋದಿಯವರು ೯೭೧ ಕೋಟಿ ರು. ವೆಚ್ಚದಲ್ಲಿ ನೂತನ ಸಂಸತ್ ಭವನವನ್ನು ನಿರ್ಮಾಣ ಮಾಡಿದ ಸಮಯದಲ್ಲಿ ಚರ್ಚೆಯಾಗಿರುತ್ತದೆ. ಬ್ರಿಟಿಷರ ವಿರುದ್ಧದ ಹೋರಾಟದ
ಸಮಯದಲ್ಲಿಯೂ ಐಷಾರಾಮಿ ಜೀವನ ನಡೆಸಿತ್ತು ನೆಹರು ಕುಟುಂಬ. ನಂತರದ ದಿನಗಳಲ್ಲಿಯೂ ತನ್ನ ಅಧಿಕಾರಾವಧಿಯಲ್ಲಿ ಐಷಾರಾಮಿ ಜೀವನ ನಡೆಸುತ್ತಲೇ ಬಂದಿದೆ.

ನ್ಯಾಯಾಲಯವು ರಾಹುಲ್ ಗಾಂಧಿಯ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಿದ ನಂತರವೂ ದೆಹಲಿಯಲ್ಲಿನ
ಬಂಗಲೆಯನ್ನು ಬೇಗನೆ ಬಿಟ್ಟುಕೊಟ್ಟಿರಲಿಲ್ಲ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಿಂಗಳ ನಂತರ ತಮಗೆ ನೀಡಿದ್ದ ಸರಕಾರಿ ಬಂಗಲೆಯನ್ನು ತೊರೆದಿದ್ದರು. ಅಽಕಾರವನ್ನು ದುರುಪಯೋಗಪಡಿಸಿಕೊಂಡು ವಿಲಾಸೀ ಜೀವನ ನಡೆಸಿದ ನಾಯಕರು ರಾಷ್ಟ್ರದ ಹೆಮ್ಮೆಯ ಪ್ರತೀಕವಾದ ‘ಸೆಂಟ್ರಲ್ ವಿಸ್ತಾ’ದ ಐಷಾರಾಮೀತನದ ಬಗ್ಗೆ ಮಾತನಾಡುತ್ತಾರೆ. ೨೦೨೬ರ ಹೊತ್ತಿಗೆ ಇಡೀ ದೇಶದಲ್ಲಿ ಸಂಸತ್ ಸ್ಥಾನಗಳ ಮರುವಿಂಗಡಣೆಯಾಗಲಿದ್ದು ಸಂಸತ್ ಸದಸ್ಯರ ಸಂಖ್ಯೆ ೫೪೩ ರಿಂದ ಸುಮಾರು ೮೪೮ ರ ಆಸುಪಾಸಿಗೆ ತಲುಪಲಿದೆ.

ಅಷ್ಟು ಸಂಸದರಿಗೆ ಕೂರಲು ಹೆಚ್ಚಿನ ಜಾಗ ಬೇಕಾಗುತ್ತದೆಯೆಂಬ ಸಾಮಾನ್ಯ ಜ್ಞಾನವಿಲ್ಲದೆ ಮೋದಿಯನ್ನು ವಿರೋಧಿಸುವ ಏಕೈಕ ಉದ್ದೇಶದಿಂದ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ೧೯೪೭ರಲ್ಲಿ ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸಿದ ಸಂದರ್ಭದಲ್ಲಿ ಮೊದಲ ಪ್ರಧಾನಮಂತ್ರಿಯಾಗಿದ್ದ ನೆಹರುಗೆ ನೀಡಿದ್ದ ತಮಿಳುನಾಡಿನ ‘ಸೆಂಗೋಲ’ಅನ್ನು ನೂತನ ಸಂಸತ್ತಿನಲ್ಲಿ ಸ್ಪೀಕರ್ ಕೂರುವ ಜಾಗದಲ್ಲಿ ಪ್ರತಿಷ್ಠಾಪಿಸಲಾ ಗುವುತ್ತಿರುವದು ಮತ್ತೊಂದು ವಿಶೇಷ.

ಬ್ರಿಟಿಷರಿಂದ ಅಧಿಕಾರ ಹಸ್ತಾಂತರವಾಗಿದ್ದರೂ ಅವರು ಕಟ್ಟಿಸಿದ್ದ ಸಂಸತ್ತಿನಿಂದ ಹೊರಬಂದಿರಲಿಲ್ಲ. ಬ್ರಿಟಿಷರ  ಮನಃಸ್ಥಿತಿ ಯನ್ನೇ ತೋರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಭಾರತೀಯರು ನಿರ್ಮಾಣ ಮಾಡಿರುವ ನೂತನ ಸಂಸತ್ ಕಟ್ಟಡ ಇಷ್ಟವಿಲ್ಲ. ಇಲ್ಲಸಲ್ಲದ ನೆಪವೊಡ್ಡಿ ಸೆಂಟ್ರಲ್ ವಿಸ್ತಾ ಉದ್ಘಾಟನೆಯ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.

ವಿರೋಧಿಗಳು ತಮ್ಮ ಸ್ವಾರ್ಥಕ್ಕಾಗಿ ಏನೇ ಹೇಳಿದರೂ, ಬ್ರಿಟಿಷರು ಕಟ್ಟಿದ್ದ ಕಟ್ಟಡದಿಂದ ಭಾರತೀಯರು ಕಟ್ಟಿರುವ ನೂತನ ಸಂಸತ್ ಭವನಕ್ಕೆ ಅಧಿಕೃತ ಚಾಲನೆ ಸಿಗಲಿದೆ. ೭೫ ವರ್ಷಗಳ ನಂತರ ವೀರ ಸಾವರ್ಕರ್ ಸದಾ ಹೇಳುತ್ತಿದ್ದ ‘ಸ್ವಾತಂತ್ರ್ಯ ಲಕ್ಷಿ ಕಿ ಜೈ’ ಘೋಷ ವಾಕ್ಯ ಮತ್ತೊಮ್ಮೆ ನೆನಪಾಗುತ್ತಿದೆ. ಅವರ ತ್ಯಾಗಕ್ಕೆ ಬೆಲೆಕಟ್ಟಲಾಗುವುದಿಲ್ಲ ಒಮ್ಮೆಯಾದರೂ ಅವರು
ಸಂಸತ್ತಿನಲ್ಲಿರಬೇಕಿತ್ತು.

error: Content is protected !!