ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ಬೆಂಗಳೂರಿನಲ್ಲಿ ಸುಮಾರು ವರ್ಷಗಳ ಹಿಂದೆ ವಿಶ್ವ ಬಂಟರ ಸಮಾವೇಶ ನಡೆದಿತ್ತು. ಜೀವರಾಜ್ ಆಳ್ವ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು. ‘ಮಿಸ್ ವರ್ಲ್ಡ್’ ಕಿರೀಟ ಧರಿಸಿದ ಐಶ್ವರ್ಯ ರೈ ಅವರನ್ನು ಈ ಕಾರ್ಯ ಕ್ರಮದ ಉದ್ಘಾಟನೆಗೆ ಆಮಂತ್ರಿಸಲಾಗಿತ್ತು. ಐಶ್ವರ್ಯರನ್ನು ಕಂಡ ತಕ್ಷಣ ಪುಳಕಿತರಾದ ಕೆಲವು ಪತ್ರಕರ್ತರು, ಹೇಗಿದ್ದರೂ ಅವರು ಮಂಗಳೂರಿನವರು ಮತ್ತು ಕನ್ನಡ ಬಲ್ಲವರೆಂದು, ಕನ್ನಡದಲ್ಲಿ ಮಾತಾಡಲಾರಂಭಿಸಿದರು. ಆದರೆ ಐಶ್ವರ್ಯ ರೈ, “ನನ..ಗೆ … ಕ …ನ್ನ…ಡ ಬ .. ರೊಲ್ಲ” ಎಂದು ಹೇಳಿ ತಬ್ಬಿಬ್ಬುಗೊಳಿಸಿದ್ದರು.
ಸಾಮಾನ್ಯವಾಗಿ ಕನ್ನಡದವರ ಹತ್ತಿರ ಹೋಗಿ, ನಮ್ಮ ಮಾತೃಭಾಷೆಯಲ್ಲಿ ಮಾತಾಡಿದಾಗ, ಅವರು “ನನಗೆ ಕನ್ನಡ
ಬರೊಲ್ಲ, ಸ್ಸಾರಿ” ಎಂದು ಹೇಳಿದರೆ ಅದರಿಂದಾಗುವ ಬೇಸರ ಅಷ್ಟಿಷ್ಟಲ್ಲ. ಕೆಲವರಿಗೆ ನಿಜಕ್ಕೂ ಕನ್ನಡ ಬರುವುದಿಲ್ಲ ಮತ್ತು ಇನ್ನು ಕೆಲವರಿಗೆ ಕನ್ನಡ ಗೊತ್ತಿದ್ದೂ ಬರೊಲ್ಲ ಎಂದು ಸೋಗು ಹಾಕುತ್ತಾರೆ. ಈ ಎರಡೂ ಪ್ರಸಂಗಗಳಲ್ಲಿ ಬೇಸರವಾಗುತ್ತದೆ. ಬಾಲಿವುಡ್ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಮೂಲತಃ ಕನ್ನಡದವರು. ಅವರ ತಂದೆ ಪ್ರಕಾಶ ಪಡುಕೋಣೆ ಸಹ ಕನ್ನಡದವರು. ದೀಪಿಕಾ ನಟಿಸಿದ ಮೊದಲ ಸಿನಿಮಾ ಕೂಡ ಕನ್ನಡದ್ದೇ. ಆದರೆ ಅವರ ಬಳಿ ಕನ್ನಡದಲ್ಲಿ ಮಾತಾಡಿದರೆ, ನಿಮಗೆ ನಿರಾಸೆಯಾದೀತು.
ಈ ವಿಷಯದಲ್ಲಿ ನಮ್ಮ ಕ್ರಿಕೆಟ್ ಆಟಗಾರರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ ಪ್ರಸಾದ್ ಅವರೇ
ವಾಸಿ. ಅವರು ಅಚ್ಚ ಕನ್ನಡದಲ್ಲಿ ಮಾತಾಡುತ್ತಾರೆ. ಸ್ವಲ್ಪವೂ ನಖರಾ ಮಾಡುವುದಿಲ್ಲ. ಅಂತಾರಾಷ್ಟ್ರೀಯ ಪಂದ್ಯ ಗಳಲ್ಲೂ ಅವರು ಮೈದಾನದಲ್ಲೂ ತಮ್ಮ ತಮ್ಮ ಕನ್ನಡದಲ್ಲಿ ಮಾತಾಡಿದ್ದುಂಟು. “ನನಗೆ ಕನ್ನಡದಲ್ಲಿ ಫ್ಲೂಯೆನ್ಸಿ ಇಲ್ಲ.. ಹೀಗಾಗಿ ಇಂಗ್ಲಿಷಿನಲ್ಲಿ ಮಾತಾಡುತ್ತೇನೆ” ಎಂದು ಸಹ ಇವರು ಹೇಳುವುದಿಲ್ಲ. ಅಸ್ಖಲಿತ ಕನ್ನಡದಲ್ಲಿಯೇ ಮಾತಾಡುತ್ತಾರೆ.
ಕನ್ನಡ ಗೊತ್ತಿದ್ದೂ, ‘ಕನ್ನಡ ಬರೊಲ್ಲ’ ಎಂದು ಸೋಗು ಹಾಕುವವರು ಆತ್ಮಸಾಕ್ಷಿ ಇಲ್ಲದವರು, ಬೇರೆ ಸಂಸ್ಕೃತಿಗೆ ಗುಲಾಮರಾದವರು. ನಾನು ಕೆಲವು ವರ್ಷಗಳ ಹಿಂದೆ, ಅಂತಾರಾಷ್ಟ್ರೀಯ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು, ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸನಲ್ಲಿರುವ ಯುರೋಪಿಯನ್ ಯೂನಿಯನ್ (ಇಯು) ಪ್ರಧಾನ ಕಚೇರಿಗೆ ಹೋಗಿz. ಅಲ್ಲಿ ಮಲ್ಲಿ ಎಂ.ಪಿ. ಎಂಬುವವರನ್ನು ಭೇಟಿ ಮಾಡಿz. ಅವರು ಇಯು ಮಾಧ್ಯಮ ಕಾರ್ಯದರ್ಶಿ ಅವರಿಗೆ ಮೂರನೇ ಸಹಾಯಕರಾಗಿದ್ದರು. ಅವರನ್ನು ನೋಡಿದರೆ ಅಪ್ಪಟ ಕನ್ನಡಿಗರು ಎಂದು ಹೇಳಬಹುದಿತ್ತು. ನಾನು ಕನ್ನಡದವನೆಂದು ಪರಿಚಯಿಸಿಕೊಂಡೆ.
ಆದರೆ ಅವರು ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದರು. ಆರಂಭಿಕ ಮಾತುಕತೆಯ ನಂತರ, ನನಗೆ ತಡೆದುಕೊಳ್ಳ ಲಾಗಲಿಲ್ಲ. “ನೀವು ಕನ್ನಡದವರಾ?” ಎಂದು ಕೇಳಿದೆ. ಅದಕ್ಕೆ ಅವರು ಇಂಗ್ಲಿಷಿನಲ್ಲಿ, “ನನ್ನ ಪೂರ್ತಿ ಹೆಸರು ಮಲ್ಲಿಕಾರ್ಜುನ ಮಾಲಿಪಾಟೀಲ, ನಾನು ಮೂಲತಃ ಧಾರವಾಡದವನು. ಆದರೆ ಇಲ್ಲಿ ಕಳೆದ 22 ವರ್ಷಗಳಿಂದ ವಾಸವಾಗಿದ್ದೇನೆ, ಹೀಗಾಗಿ ನನಗೆ ಕನ್ನಡ ಮರೆತುಹೋಗಿದೆ” ಎಂದು ಹೇಳಿದರು. ಅದಾದ ಬಳಿಕ ನಾನು ಅವರ ಜತೆ ಅರ್ಧ ಗಂಟೆ ಇದ್ದೆ. ಅವರು ಅಪ್ಪಿತಪ್ಪಿಯೂ ಕನ್ನಡದಲ್ಲಿ ಮಾತಾಡಲು ಉತ್ಸುಕತೆ ತೋರಲಿಲ್ಲ. ಹಾಗೆಂದು ಅವರ ಇಂಗ್ಲಿಷ್ ಅಷ್ಟೇನೂ ಸೊಗಸಾಗಿರಲಿಲ್ಲ. “ನಿಮ್ಮ ಮನೆಯವರು ಬೆಲ್ಜಿಯಂನವರಾ?” ಎಂದು ಬೇಕೆಂದೇ ಕೇಳಿದೆ. “ನೋ..ನೋ.. ಶಿ ಈಸ್ ಫ್ರಮ್ ಸೌದತ್ತಿ” ಎಂದರು. ಹಾಗಾದ್ರೆ ಮನೆಯಲ್ಲಿ ಖಂಡಿತವಾಗಿಯೂ ಅವರು ಕನ್ನಡದ ಮಾತಾಡುತ್ತಾರೆ ಎಂಬುದು ಖಾತ್ರಿಯಾಗಿ ಹೋಯಿತು. ನಮ್ಮವರೇ ನಮ್ಮ ಭಾಷೆ ಬರೊಲ್ಲ ಎಂದು ಅಭಿಮಾನ ದಿಂದ ಹೇಳುವುದು ಅದೆಂಥ ಆತ್ಮಸಂತಸ ನೀಡಬಹುದು, ನನಗಂತೂ ಅರ್ಥವಾಗಿಲ್ಲ.
1964ರ ಜೂನ್ ತಿಂಗಳ ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಕುಲಮರ್ವ ಬಾಲಕೃಷ್ಣ ಅವರು ಖ್ಯಾತ ಕ್ರಿಕೆಟಿಗ, ಭಾರತ
ತಂಡದ ಬಲಗೈ ಆರಂಭಿಕ ಆಕ್ರಮಣಕಾರಿ ಬ್ಯಾಟ್ಸ್ಮನ್ ಬುಧಿ ಕುಂದರನ್ (ಇವರ ಹೆಸರಿನಲ್ಲಿಯೇ ‘ರನ್’ ಇದ್ದುದು ಕಾಕತಾಳೀಯ) ಅವರ ಬಗ್ಗೆ ಒಂದು ಸಂದರ್ಶನ ಲೇಖನ ಬರೆದಿದ್ದಾರೆ. ಕುಲಮರ್ವ ಬಾಲಕೃಷ್ಣ ಕುಂದರನ್ ಅವರನ್ನು ಸಂದರ್ಶಿಸಬಯಸಿದ್ದು ಅವರು ತಮ್ಮೂರಿನವರು, ದಕ್ಷಿಣ ಕನ್ನಡದವರು, ತುಳು ಭಾಷಿಕರು ಎಂಬ ಕಾರಣಕ್ಕೆ.
ಮೂಲತಃ ಕುಂದರನ್ ದಕ್ಷಿಣ ಕನ್ನಡದ ಮೂಲ್ಕಿಯವರು. ಆದರೆ ಮುಂಬೈಯಲ್ಲಿ ವಿದ್ಯಾಭ್ಯಾಸ ಮುಂದು ವರಿಸಿದವರು. ಕುಲಮರ್ವ ಅವರು ಕುಂದರನ್ರನ್ನು ಭೇಟಿಯಾಗುತ್ತಿದ್ದಂತೆ, ತುಳುವಿನಲ್ಲಿ ಮಾತಾಡಲು ಆರಂಭಿಸಿ ದರು. “ನನಗೆ ತುಳು ಬರೊಲ್ಲ” ಎಂದು ಕುಂದರನ್ ಇಂಗ್ಲಿಷಿನಲ್ಲಿ ಹೇಳಿದರು. “ಹಾಗಾದರೆ ಕನ್ನಡ ?” ಎಂದು ಕೇಳಿದರು. ಅದಕ್ಕೆ ಆ ಬ್ಯಾಟ್ಸ್ಮನ್, “ನೋ ಕನ್ನಡ” ಎಂದು ಹೇಳಿದರು. ನಮ್ಮ ಊರಿನವರಾದರೂ ಇವರಿಗೆ ನಮ್ಮ ಭಾಷೆಯೇ ಬರುವುದಿಲ್ಲವಲ್ಲ ಎಂದು ಕುಲಮರ್ವರಿಗೆ ಆ ಕ್ಷಣದಲ್ಲಿ ಅನಿಸಿರಬೇಕು.
ಶಾಮ್ ಬೆನೆಗಲ್ ನಮ್ಮವರು, ಶಾಂತಾರಾಮ್ ನಮ್ಮವರು, ಗುರುದತ್ತ (ವಸಂತಕುಮಾರ ಶಿವಶಂಕರ ಪಡುಕೋಣೆ)
ನಮ್ಮವರು, ಸುನಿಲ್ ಶೆಟ್ಟಿ ನಮ್ಮವರು ಎಂದು ಅಭಿಮಾನದಿಂದ ಕೊಚ್ಚಿಕೊಳ್ಳುತ್ತೇವೆ. ಆದರೆ ಅವರಾರೂ ತಮಗೆ ಕನ್ನಡ ಬರೊಲ್ಲ ಎಂದು ಹೇಳಿದರೆ, ಅದರಿಂದಾಗುವ ಬೇಸರ ಅಷ್ಟಿಷ್ಟಲ್ಲ.
ಯಾರು ಬುದ್ಧಿವಂತರು?
ಸುಮಾರು ವರ್ಷಗಳ ಹಿಂದಿನ ರೀಡರ್ಸ್ ಡೈಜೆಸ್ಟ್ ಮಾಸಿಕದಲ್ಲಿ ಓದಿದ ಒಂದು ಪ್ರಸಂಗವಿದು. ಮುಸ್ಸೋಲಿನಿ ಅಧಿಕಾರಕ್ಕೆ ಬಂದ ಕೆಲ ದಿನಗಳಲ್ಲಿ ಅಮೆರಿಕದ ಶ್ರೀಮಂತ ಆರ್ಟ್ ಸಂಗ್ರಹಕಾರ ಇಟಲಿಗೆ ಬಂದು, 16ನೇ ಶತಮಾನದ ಪ್ರಸಿದ್ಧ ಕಲಾವಿದ ಟಿಟಿಯನ್ನ ಬೃಹತ್ ವರ್ಣಚಿತ್ರವನ್ನು ಭಾರಿ ಬೆಲೆಗೆ ಖರೀದಿಸಿದ.
ಅದನ್ನು ಅಮೆರಿಕಕ್ಕೆ ತೆಗೆದುಕೊಂಡು ಹೋಗುವುದು ಅವನ ಉದ್ದೇಶವಾಗಿತ್ತು. ಆದರೆ ಅದನ್ನು ಇಟಲಿಯಿಂದ ಹೊರಗೆ ತೆಗೆದುಕೊಂಡು ಹೋಗಲು ಮುಸ್ಸೋಲಿನಿ ಸರಕಾರ ಅನುಮತಿ ನೀಡಲಿಕ್ಕಿಲ್ಲ ಎಂದು ಅವನಿಗೆ ಕೆಲವರು ಹೇಳಿದರು. ಆಗ ಆ ಅಮೆರಿಕನ್ ಕಲಾ ಸಂಗ್ರಹಕಾರನಿಗೆ ಅತೀವ ಬೇಸರವಾಯಿತು. ಇದನ್ನು ತನ್ನ ದೇಶಕ್ಕೆ ತೆಗೆದು ಕೊಂಡು ಹೋಗುವುದು ಹೇಗೆ ಎಂದು ಆತ ಒಬ್ಬ ಸಲಹೆಗಾರನನ್ನು ಕೇಳಿದ. ಅದಕ್ಕೆ ಆತ ಒಂದು ಸಲಹೆ ನೀಡಿದ- “ಒಂದು ಕೆಲಸ ಮಾಡಿ, ಟಿಟಿಯನ್ನ ವರ್ಣಚಿತ್ರದ ಮೇಲೆ ಮುಸ್ಸೋಲಿನಿ ವರ್ಣಚಿತ್ರವನ್ನು ಬಿಡಿಸುವಂತೆ ಸ್ಥಳೀಯ ಕಲಾವಿದನಿಗೆ ಹೇಳಿ. ಆತ ಅದನ್ನು ಬಿಡಿಸಿಕೊಡುತ್ತಾನೆ.
ಮುಸ್ಸೋಲಿನಿ ಆಡಳಿತದ ಅಧಿಕಾರಿಗಳು ತಮ್ಮ ನಾಯಕನ ಚಿತ್ರವನ್ನು ಅಮೆರಿಕಕ್ಕೆ ತೆಗೆದುಕೊಂಡು ಹೋಗು ವವನು ಮುಸ್ಸೋಲಿನಿ ಅಭಿಮಾನಿಯಿರಬೇಕೆಂದು, ತಕ್ಷಣ ಸಂತೋಷದಿಂದ ಅನುಮತಿ ನೀಡುತ್ತಾರೆ. ಅಮೆರಿಕಕ್ಕೆ ಹೋದ ನಂತರ, ಮೇಲಿನ ಪೇಂಟಿಂಗ್ ಅನ್ನು ಕೆರೆಸಿ ತೆಗೆದುಹಾಕಿ”.
ಅಮೆರಿಕದ ಕಲಾ ಸಂಗ್ರಹಕಾರನಿಗೆ ಇದು ಅದ್ಭುತ ಐಡಿಯಾ ಎಂದೆನಿಸಿತು. ಆತ ತಕ್ಷಣ ಸ್ಥಳೀಯ ಕಲಾಕಾರನನ್ನು ಕರೆಯಿಸಿ, ಟಿಟಿಯನ್ ಪೇಂಟಿಂಗ್ ಮೇಲೆ ಮುಸ್ಸೋಲಿನಿ ಪೇಂಟಿಂಗ್ ಬಿಡಿಸಿಕೊಡುವಂತೆ ಹೇಳಿದ. ಆತ ಬಿಡಿಸಿ ಕೊಟ್ಟ. ಮುಂದೆ ಆತ ಅಂದುಕೊಂಡಂತೆ ಆಯಿತು. ಯಾವ ತೊಂದರೆಯೂ ಇಲ್ಲದೇ ಪೇಂಟಿಂಗ್ ಅನ್ನು ಸುಲಭ ವಾಗಿ ಅಮೆರಿಕಕ್ಕೆ ತೆಗೆದುಕೊಂಡು ಬಂದ. ಬಂದವನೇ ಆ ಪೇಂಟಿಂಗ್ ಮೇಲೆ ಬಿಡಿಸಿದ ಮುಸ್ಸೋಲಿನಿ ಚಿತ್ರವನ್ನು ಕೆರೆಸಿ ಹಾಕುವಂತೆ ನುರಿತ ಪೇಂಟರ್ಗೆ ಹೇಳಿದ. ಆತ ಹರಿತವಾದ ಚಾಕುವಿನಿಂದ ಬಹಳ ನಾಜೂಕಿನಿಂದ ಮೇಲಿನ ಪದರ ಕೆರೆಸಿ ಹಾಕಿದ. ಟಿಟಿಯನ್ನ ಅದ್ಭುತ ಪೇಂಟಿಂಗ್ ಎದ್ದು ಕಂಡಿತು. ಅಷ್ಟಕ್ಕೇ ಸುಮ್ಮನಾಗದ ಪೇಂಟರ್, “ಸರ್, ಈ ಟಿಟಿಯನ್ ಪೇಂಟಿಂಗ್ ಕೆಳಗೆ ಬೇರೆ ಇನ್ನೊಂದು ಪೇಂಟಿಂಗ್ ಇರುವಂತಿದೆ” ಎಂದು ಹೇಳಿದ. ಕಲಾ ಸಂಗ್ರಹಕಾರನಿಗೆ ದಿಗಿಲಾಯಿತು. ಆ ಪೇಂಟರ್, ಟಿಟಿಯನ್ನ ಪೇಂಟಿಂಗ್ ಅನ್ನು ಕೆರೆಸುತ್ತಿದ್ದಂತೆ ಮತ್ತೊಂದು ಚಿತ್ರ ಎದ್ದು ಬಂದಿತು. ನೋಡಿದರೆ ಮುಸ್ಸೋಲಿನಿ ಪೇಂಟಿಂಗ್!
ಹೀಗೊಂದು ಸಂಭಾಷಣೆ
ಕೆಲವು ವರ್ಷಗಳ ಹಿಂದೆ, ಸ್ವೀಡನ್ ರಾಜಧಾನಿ ಸ್ಟಾಕ್ಹೋಮ್ಗೆ ನಾನು ಹೋದಾಗ ಅಲ್ಲಿ ಕೇಳಿದ್ದು. ಒಮ್ಮೆ ಅಮೆರಿಕದ ಪ್ರವಾಸಿಗ ಸ್ಟಾಕ್ಹೋಮ್ನಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದ. ಅವನ ಪಕ್ಕದಲ್ಲಿ ಸ್ವೀಡಿಷ್ ಪ್ರಜೆ ಕುಳಿತಿದ್ದ. ಇಬ್ಬರೂ ಪರಸ್ಪರ ಪರಿಚಿತರಾದರು. ಹರಟೆ ಹೊಡೆಯಲಾರಂಭಿಸಿದರು. ಅಮೆರಿಕನ್ ಪ್ರಜೆ ಬಡಾಯಿ ಕೊಚ್ಚಿ ಕೊಳ್ಳುತ್ತಿದ್ದ- “ಜಗತ್ತಿನಲ್ಲಿಯೇ ಅಮೆರಿಕದಂಥ ಪ್ರಜಾಸತ್ತಾತ್ಮಕ ದೇಶ ಮತ್ತೊಂದಿಲ್ಲ. ವೈಟ್ ಹೌಸಿಗೆ ಹೋಗಿ ಅಧ್ಯಕ್ಷನನ್ನು ಭೇಟಿ ಮಾಡಬಹುದು. ಅವನ ಜತೆ ಕೈಕುಲುಕಬಹುದು. ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸ ಬಹುದು. ಇವೆ ಬೇರೆ ದೇಶಗಳಲ್ಲಿ ಸಾಧ್ಯವಿಲ್ಲ. ಅದರಲ್ಲೂ ನಿಮ್ಮ ದೇಶದಲ್ಲಂತೂ ಸಾಧ್ಯವೇ ಇಲ್ಲವೇನೋ?” ಇದೇನು ಅಮೆರಿಕನ್ ಪ್ರವಾಸಿಗ ತನ್ನ ದೇಶದ ಬಗ್ಗೆ ಬಹಳ ಬಡಾಯಿ ಕೊಚ್ಚಿಕೊಳ್ಳುತ್ತಾನಲ್ಲ ಎಂದು ಸ್ವೀಡಿಷ್ ಪ್ರಜೆಗೆ ಅನಿಸಿತು. ಆತ ಅಷ್ಟು ಹೇಳಿದ ನಂತರ ತಾನೂ ತನ್ನ ದೇಶದ ಬಗ್ಗೆ ಹೇಳದಿದ್ದರೆ ಹೇಗೆ ಎಂದು ಅನಿಸಿತು. “ನಿಮ್ಮದೇನು ಮಹಾ? ನಮ್ಮ ದೇಶದಲ್ಲಿ ರಾಜ ಮತ್ತು ಶ್ರೀಸಾಮಾನ್ಯ ಒಂದೇ ಬಸ್ಸಿನಲ್ಲಿ ಕುಳಿತುಕೊಂಡು ಪ್ರಯಾಣ ಮಾಡುತ್ತಾರೆ, ಗೊತ್ತಾ?” ಎಂದ ಸ್ವೀಡಿಷ್ ಪ್ರಜೆ.
ಅಷ್ಟೊತ್ತಿಗೆ ಮುಂದಿನ ಸ್ಟಾಪ್ ಬಂತು. ಸ್ವೀಡಿಷ್ ಪ್ರಜೆ ಬಸ್ಸಿನಿಂದ ಇಳಿದು ಹೋದ. ಅವರಿಬ್ಬರ ಸಂಭಾಷಣೆಯನ್ನು
ಮತ್ತೊಬ್ಬ ಕೇಳಿಸಿಕೊಳ್ಳುತ್ತಿದ್ದ. “ನಿಮ್ಮ ಪಕ್ಕದಲ್ಲಿ ಕುಳಿತಿದ್ದವ ಯಾರು ಗೊತ್ತಾಯಿತಾ?” ಎಂದು ಕೇಳಿದಕ್ಕೆ ಅಮೆರಿಕದ ಪ್ರವಾಸಿಗ ಗೊತ್ತಿಲ್ಲ ಎಂದು ತಲೆ ಅಡಿಸಿದ. ಅದಕ್ಕೆ ಮತ್ತೊಬ್ಬಾತ ಹೇಳಿದ- “ಆತನೇ ಸ್ವೀಡನ್ನ ಆರನೇ ರಾಜ ಗುಸ್ತಾ- ಅಡಾಲ!”
ಪತ್ರಕರ್ತರಲ್ಲಿ ಬದಲಾವಣೆ ಬೇಕು
ಪತ್ರಕರ್ತರ ಬಗ್ಗೆ ಒಂದು ಆರೋಪವಿದೆ. ಅದೇನೆಂದರೆ, ಬೇರೆಯವರ ತಪ್ಪುಗಳನ್ನು ಮುಖಪುಟದಲ್ಲಿ ದೊಡ್ಡದಾಗಿ ಪ್ರಕಟಿಸುವ ಪತ್ರಕರ್ತರು, ತಮ್ಮ ತಪ್ಪುಗಳನ್ನು ಮಾತ್ರ ಒಳಪುಟಗಳಲ್ಲಿ ಸಣ್ಣದಾಗಿ ಪ್ರಕಟಿಸುತ್ತಾರೆ. ಇದು ನಿಜವೂ ಹೌದು. ಈ ವಿಷಯದಲ್ಲಿ ಪತ್ರಕರ್ತರು ಇನ್ನಷ್ಟು ಹೃದಯ ವೈಶಾಲ್ಯ ಮೆರೆಯಬೇಕು ಎಂದು ಎಲ್ಲರೂ ಬಯಸು ತ್ತಾರೆ. ಇಂದಿಗೂ ಅನೇಕ ಓದುಗರ ತಕರಾರೇನೆಂದರೆ, ಪತ್ರಕರ್ತರೇಕೆ ತಮ್ಮ ತಪ್ಪುಗಳನ್ನು ಮುಖಪುಟದಲ್ಲಿ ಪ್ರಕಟಿಸುವುದಿಲ್ಲ ಎಂದು. ಅಸಲಿಗೆ, ಪತ್ರಕರ್ತರು ತಮ್ಮ ತಪ್ಪುಗಳನ್ನು ಬೇಗ ಒಪ್ಪಿಕೊಳ್ಳುವುದಿಲ್ಲ. ತಪ್ಪು ಬೇರೆಯ ವರ ಗಮನಕ್ಕೆ ಬಂದ ನಂತರ, ಪಾರಾಗುವ ಮಾರ್ಗವಿದೆಯಾ, ಬೇರೆಯವರ ಮೇಲೆ ಹೊರಿಸಬಹುದಾ ಎಂದು ಯೋಚಿಸುತ್ತಾರೆ. ಅವ್ಯಾವವೂ ಸಾಧ್ಯವಿಲ್ಲ ಎಂಬುದು ಗೊತ್ತಾದ ನಂತರ, ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಆಗಲಾದರೂ ಅದನ್ನು ಮುಖಪುಟದಲ್ಲಿ ಪ್ರಕಟಿಸಬಹುದ? ಉಹುಂ.. ಅದನ್ನು ಒಳಪುಟದಲ್ಲಿ ಸಣ್ಣದಾಗಿ ಪೇಜ್ ಫಿಲ್ಲರ್ ಆಗಿ ಬಳಸಿ ಕೈ ತೊಳೆದುಕೊಳ್ಳುತ್ತಾರೆ. ಮುಖಪುಟದ ಕ್ಷಮಾಪಣೆ ಪ್ರಕಟಿಸಬೇಕು ಎಂದು ಕೋರ್ಟ್ ತೀರ್ಪು ನೀಡಿದ ಪ್ರಸಂಗಗಳನ್ನು ಬಿಟ್ಟರೆ, ಉಳಿದ ಸಂದರ್ಭಗಳಲ್ಲಿ ಅಲ್ಲಿ ಅದನ್ನು ಪ್ರಕಟಿಸಿದ್ದು ಇಲ್ಲವೇ ಇಲ್ಲ.
ತಪ್ಪು ಮಾಡಿದ್ದು ಗೊತ್ತಾಗುತ್ತಿದ್ದಂತೆ, ‘ಕ್ಠಿಜ್ಚಿhqs Zb ಡಿಜಿಠಿe Zbಟ್ಠ್ಟ’ ಕ್ಷಮಾಪಣೆಯನ್ನು ಪ್ರಕಟಿಸಬೇಕಂತೆ.
ಅದರಿಂದ ಪತ್ರಿಕೆಯ ಮಾನ-ಮರ್ಯಾದೆ ಹೋಗುವ ಬದಲು ಜಾಸ್ತಿಯಾಗುತ್ತದೆ. ಪತ್ರಿಕೆ ಬಗ್ಗೆ ವಿಶ್ವಾಸಾರ್ಹತೆ ಜಾಸ್ತಿಂiಗುತ್ತದೆ.
ಓದುಗರಲ್ಲಿ ತಾವು ಓದುವ ಪತ್ರಿಕೆ ಬಗ್ಗೆ ವಿನೀತ ಭಾವ ಬೆಳೆಯುತ್ತದೆ. ತಪ್ಪನ್ನು ಓದುಗರೇ ಎತ್ತಿ ತೋರಿಸ ಬೇಕೆಂದಿಲ್ಲ, ಪತ್ರಿಕೆಯ ಸಂಪಾದಕೀಯ ಸಿಬ್ಬಂದಿಗೆ ಗೊತ್ತಾದರೂ ಸಾಕು, ಮರುದಿನವೇ ಕ್ಷಮಾಪಣೆ ಕೋರಿ, ಸರಿಯಾದ ಮಾಹಿತಿ ನೀಡ ಬೇಕು. ಯಾವ ಕಾರಣಕ್ಕೂ ಓದುಗರನ್ನು ದಾರಿ ತಪ್ಪಿಸಬಾರದು, ಯಾವತ್ತೂ ಅವರಿಗೆ ನಿಖರ, ಸ್ಪಷ್ಟ ಮತ್ತು ಸತ್ಯವಾದ ಮಾಹಿತಿಯನ್ನೇ ನೀಡಬೇಕು. ಸುದ್ದಿ ನೀಡುವ ಅವಸರದಲ್ಲಿ ತಪ್ಪುಗಳಾಗುವುದು ಸಹಜ. ಹಾಗಂತ ನಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳಬಾರದು. ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದೆಂದರೆ, ಓದುಗರನ್ನು ವಾಸ್ತವದಿಂದ ವಿಮುಖಗೊಳಿಸಿದಂತೆ.
ಪತ್ರಿಕೋದ್ಯಮದಲ್ಲಿ ಒಂದು ಮಾತಿದೆ- “ಯಾವ ಸಂಪಾದಕನೂ ಓದುಗರ ಮುಂದೆ ಕ್ಷಮೆಯಾಚಿಸಿ ಸಣ್ಣವ
ನಾಗಿಲ್ಲ”. ಹೀಗಿರುವಾಗ ಮುಖಪುಟದಲ್ಲಿ ಕ್ಷಮೆಯಾಚಿಸಲು ಯಾಕೆ ಹಿಂದೇಟು ಹಾಕಬೇಕು? ತನ್ನ ಪತ್ರಿಕೆಯ ಒಳಪುಟಗಳನ್ನು ಓದುಗರು ಓದುವುದಿಲ್ಲ ಎಂದು ಭಾವಿಸುವ ಸಂಪಾದಕ ಮಾತ್ರ ಹೀಗೆ ಯೋಚಿಸಬಲ್ಲ. ಅಮೆರಿಕದ ಅಲಬಾಮಾದಲ್ಲಿ ‘ಮೊಬೈಲ್ ಪ್ರೆಸ್ ರಜಿಸ್ಟರ್’ ಎನ್ನುವ ಪತ್ರಿಕೆಯಿದೆ. ತಾನು ಏನೇ ತಪ್ಪು ಮಾಡಿದರೂ ತಿದ್ದುಪಡಿ, ವಿಷಾದ ಮತ್ತು ಕ್ಷಮೆಯಾಚನೆಯನ್ನು ಮುಖಪುಟದಲ್ಲಿಯೇ ಅದು ಪ್ರಕಟಿಸುತ್ತದೆ. ಅದಕ್ಕೆಂದೇ
ನಿರ್ದಿಷ್ಟ ಜಾಗವನ್ನು ಮೀಸಲಿಟ್ಟಿದೆ. ಅದೇ ರೀತಿ, ‘ಅಗಸ್ಟಾ ಕ್ರಾನಿಕಲ್’ ಎಂಬ ಪತ್ರಿಕೆ ಯಾವ ಪುಟದಲ್ಲಿ, ಯಾವ ಜಾಗದಲ್ಲಿ ತಪ್ಪು ವರದಿ ಪ್ರಕಟವಾಗಿದೆಯೋ, ಅದೇ ಜಾಗದಲ್ಲಿ, ತಿದ್ದುಪಡಿ ಪ್ರಕಟಿಸುತ್ತದೆ. ತಪ್ಪುಗಳನ್ನು ಒಪ್ಪಿ ಕೊಳ್ಳುವುದು ನಮ್ಮ ದೌರ್ಬಲ್ಯವಲ್ಲ, ಅದು ಅವಮಾನವೂ ಅಲ್ಲ. ಅದು ಪ್ರಾಮಾಣಿಕತೆ ಮತ್ತು ಓದುಗರನ್ನು ಗೌರವಿಸುವುದರ ಸಂಕೇತ.
ನಾವು ಮಾಡಿದ ತಪ್ಪು ವರದಿಗೆ, ತಿದ್ದುಪಡಿ ಪ್ರಕಟಿಸಿದರೆ, ಯಾವ ಓದುಗನೂ ಕೋರ್ಟಿಗೆ ಹೋಗುವುದಿಲ್ಲ. ಇದನ್ನು
ನಿರಾಕರಿಸಿದಾಗ ಮಾತ್ರ ಆತ ಕಾನೂನು ಕ್ರಮಕ್ಕೆ ಮುಂದಾಗುತ್ತಾನೆ. ಕೋರ್ಟಿನಲ್ಲಿ ಪ್ರಕರಣ ಇತ್ಯರ್ಥವಾಗಲು ಹಲವಾರು ವರ್ಷಗಳು ಹಿಡಿಯುವುದರಿಂದ, ಓದುಗರು ಮರೆತು ಬಿಡುತ್ತಾರೆಂದು ಸಂಪಾದಕರು ಕ್ಷಮೆ ಯಾಚಿಸು ವುದಿಲ್ಲ ಅಥವಾ ತಿದ್ದುಪಡಿಯನ್ನೂ ಪ್ರಕಟಿಸುವುದಿಲ್ಲ. ‘ಅಮೆರಿಕನ್ ಲಾಯರ್’ ಎಂಬ ಪ್ರಮುಖ ನಿಯತಕಾಲಿಕ ಒಂದು ‘ತಿದ್ದುಪಡಿ ಶಿಷ್ಟಾಚಾರ’ವನ್ನು ಹೊಂದಿದೆ. ಪತ್ರಿಕೆಯಲ್ಲಿ ಯಾರು ತಪ್ಪು ಮಾಡಿದ್ದಾರೋ, ಅದಕ್ಕೆ ಕಾರಣರಾದವರ ಹೆಸರುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತದೆ. ‘ತಪ್ಪಾಯ್ತು, ತಿದ್ಕೋತೀವಿ’ ಎಂಬುದಕ್ಕಿಂತ ಹೆಚ್ಚಿನ ವಿನೀತ ಭಾವ ಸಂಪಾದಕನಿಗೆ ಮತ್ತೊಂದಿಲ್ಲ.
ನಮ್ಮಲ್ಲಿ ಇನ್ನಷ್ಟು ಬದಲಾವಣೆಗಳಾಗಬೇಕು. ತಪ್ಪುಗಳನ್ನು ಒಪ್ಪಿಕೊಳ್ಳಬೇಕು, ಆದರೆ.. ಕೆಲವು ಸಲ ಮಾಡಿದ ತಪ್ಪಿಗಿಂತ, ನಂತರ ಪ್ರಕಟಿಸಿದ ತಿದ್ದುಪಡಿ, ಸ್ಪಷ್ಟನೆ ಇನ್ನೂ ಆಭಾಸವನ್ನುಂಟುಮಾಡುತ್ತವೆ.
ರಂಗಭೂಮಿ ಅಲ್ಲ, ಹುಚ್ಚಾಸ್ಪತ್ರೆ
ಒಮ್ಮೆ ಮಾಸ್ಟರ್ ಹಿರಣ್ಣಯ್ಯ ಅವರ ಜತೆಗೆ ವೇದಿಕೆ ಹಂಚಿಕೊಂಡಿz. ಆ ದಿನ ಅವರು ಅದ್ಭುತವಾಗಿ ಮಾತಾಡಿ ದರು. ಕಾರ್ಯಕ್ರಮ ಮುಗಿದ ಬಳಿಕ ಹಲವರು ಅವರನ್ನು ಸುತ್ತು ವರಿದು ಅಭಿನಂದಿಸಿದರು. ಅವರಬ್ಬರು, “ಹಿರಣ್ಣಯ್ಯ ನವರೇ, ನೀವು ರಂಗಭೂಮಿಯ ನಟರಾಗುವ ಬದಲು ಲೋಕಸಭಾ ಸದಸ್ಯರಾಗಿದ್ದರೆ ಎಷ್ಟು ಚೆನ್ನಾಗಿತ್ತು. ನಿಮ್ಮ ಮಾತಿನಿಂದ ಇಡೀ ಲೋಕಸಭೆ ತಲೆದೂಗುವಂತೆ ಮಾಡಬಹುದಾಗಿತ್ತು. ಲೋಕಸಭೆಗಿಂತ ದೊಡ್ಡ ರಂಗಭೂಮಿ ಯಾವುದಿದೆ? ಈಗಲೂ ಕಾಲ ಮಿಂಚಿಲ್ಲ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ” ಎಂದು
ಹೇಳಿದರು.
ಅದಕ್ಕೆ ಹಿರಣ್ಣಯ್ಯನವರು ಥಟ್ಟನೆ ಹೇಳಿದರು- “ಅಲ್ಲಯ್ಯಾ, ನಾನು ಲೋಕಸಭಾ ಸದಸ್ಯನಾಗಿದ್ದಿದ್ದರೆ ಮೂರ್ಖನ ಹಾಗೆ ಬಾಯಿಮುಚ್ಚಿ ಕುಳಿತು ಎದ್ದು ಬರಬೇಕಾಗುತ್ತಿತ್ತು. ನಮ್ಮ ರಾಜ್ಯದಿಂದ ಹೋದ ಒಬ್ಬನೇ ಒಬ್ಬ ಲೋಕಸಭಾ ಸದಸ್ಯ ಮಾತಾಡಿದ್ದನ್ನು ನೀವೆಲ್ಲ ಕೇಳಿದ್ದೀರಾ, ನೋಡಿದ್ದೀರಾ? ಇಲ್ಲಿ ನೀವೆಲ್ಲ ನನ್ನ ಮಾತನ್ನು ಕೇಳಿದಿರಿ ಎಂದು ಅಲ್ಲಿ ಯಾರು ಕೇಳುತ್ತಾರೆ? ಅಲ್ಲಿದ್ದವರಿಗೆ ಮಾತನ್ನು ಕೇಳುವ ವ್ಯವಧಾನ ಇಲ್ಲ. ಲೋಕಸಭಾ ಸದಸ್ಯನಾದರೆ ಪಕ್ಷದ ನಾಯಕರು ಹೇಳಿದಂತೆ ಮೂಕನಾಗಿ ಇರಬೇಕಾಗುತ್ತದೆ. ನಾನು ಹಾಗೆ ಇರುವುದುಂಟಾ? ಅಷ್ಟಕ್ಕೂ ಲೋಕಸಭೆ ಅನ್ನೋದು ರಂಗಭೂಮಿ ಅಲ್ಲ. ಅದೊಂದು ಹುಚ್ಚಾಸ್ಪತ್ರೆ. ಹೀಗಾಗಿ ನಾನು ನನ್ನ ಪಾಡಿಗೆ ನಾಟಕ ಮಾಡಿ ಕೊಂಡಿರುತ್ತೇನೆ. ಅದೇ ನನಗೆ ಇಷ್ಟ. ನನಗೆ ಮೂಕನ ಪಾತ್ರ ಮಾಡಿ ಗೊತ್ತಿಲ್ಲ”.
ಇದನ್ನೂ ಓದಿ: @vishweshwarbhat