ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
‘ಜಪಾನಿನಲ್ಲಿ ಭೂಕಂಪ ಸಂಭವಿಸಿ ಮೂರು ದಿನ ಜನ ಜೀವನ ಅಸ್ತವ್ಯಸ್ತವಾದರೂ, ವಿದ್ಯುಚ್ಛಕ್ತಿ ಪೂರೈಕೆಗೆ ಸ್ವಲ್ಪವೂ ವ್ಯತ್ಯಯವಾಗುವುದಿಲ್ಲ. ಆಫ್ರಿಕಾದಲ್ಲಿ ಕರೆಂಟ್ ಕಂಬದ ಮೇಲೆ ಎರಡು ಹಕ್ಕಿಗಳು ಕಚ್ಚಾಡಿಕೊಂಡರೂ
ಸಾಕು, ಒಂದು ವಾರ ಕರೆಂಟ್ ಇರೋಲ್ಲ’. ಈ ಮಾತನ್ನು ಬೇರೆ ಯಾರಾದರೂ ಹೇಳಿದ್ದರೆ ತಮಾಷೆಯ ಮಾತೆಂದು ನಕ್ಕು ಸುಮ್ಮನಾಗಬಹುದಿತ್ತು. ಆದರೆ ಈ ಮಾತು ಬಂದಿದ್ದು ಜಿಂಬಾಬ್ವೆ ಕ್ರಾಂತಿಕಾರಿ ನಾಯಕ ಮತ್ತು ಆ ದೇಶದ ಪ್ರಧಾನಿ ರಾಬರ್ಟ್ ಮುಗಾಬೆ ಬಾಯಿಯಿಂದ.
ಜಪಾನಿನಲ್ಲಿ ಪ್ರತಿ ಐದು ನಿಮಿಷಕ್ಕೊಮ್ಮೆ ಭೂಮಿ ಅದುರಿದ ಅಥವಾ ಸಣ್ಣಗೆ ಕಂಪಿಸಿದ ಅನುಭವವಾಗುತ್ತದೆ. ಕೆಲವು ಸಲ ಭೂಕಂಪವಾಗಿದ್ದು ಅಲ್ಲಿನ ಜನರಿಗೆ ಗೊತ್ತೇ ಆಗುವುದಿಲ್ಲ. ಅಷ್ಟರಮಟ್ಟಿಗೆ ಅವರು ಭೂಕಂಪಕ್ಕೆ ಹೊಂದಿಕೊಂಡಿzರೆ. ಇಡೀ ವಿಶ್ವದಲ್ಲಿ ಅನುಭವಕ್ಕೆ ಬರುವ ಭೂಕಂಪಗಳ ಪೈಕಿ ಶೇ.20ರಷ್ಟು ಜಪಾನಿನಲ್ಲಿ ಸಂಭವಿಸುತ್ತದೆ. ಹಿಂದಿನ ವರ್ಷ ಒಂದೇ ದಿನ ಹತ್ತಕ್ಕಿಂತ ಹೆಚ್ಚು ಸಲ ಭೂಮಿ ಕಂಪಿಸಿತ್ತು.
‘ಭೂಕಂಪದಿಂದ ಜನ ಸಾಯುವುದಿಲ್ಲ. ಆದರೆ ಭೂಕಂಪದಿಂದ ಕಟ್ಟಡಗಳು ಉರುಳಿ ಜನ ಸಾಯುತ್ತಾರೆ’ (Earthquakes don’t kill people- buildings do) ಎಂಬುದು ಹಳೆಯ ಉಕ್ತಿ. ಭೂಕಂಪ ಸಂಭವಿಸಿದರೆ ಜನರಿಗೆ ಗಾಯಗಳಾಗುವುದಿಲ್ಲ ಮತ್ತು ಯಾರೂ ಸಾಯುವುದಿಲ್ಲ. ಆದರೆ ಗಟ್ಟಿಮುಟ್ಟಾಗಿ ಕಟ್ಟದ ಕಟ್ಟಡಗಳು ಉರುಳಿ ಅದರಡಿ ಬಿದ್ದು, ಸಿಕ್ಕಿ ಹಾಕಿಕೊಂಡು ಜನ ಸಾಯುತ್ತಾರೆ. ಜಗತ್ತಿನಲ್ಲಿ ಪ್ರತಿ ವರ್ಷ ಭೂಕಂಪ ಸಂಬಂಧಿ ಘಟನೆಯಲ್ಲಿ ಸುಮಾರು 20 ಸಾವಿರ ಮಂದಿ ಸಾಯುತ್ತಾರೆ.
“ನಾನು ಅಮೆರಿಕದಲ್ಲಿದ್ದಷ್ಟು ದಿನ ರಾತ್ರಿ ಬೆತ್ತಲೆಯಾಗಿ ಮಲಗುತ್ತಿದ್ದೆ. ಜಪಾನಿಗೆ ಬಂದ ನಂತರ ಬಟ್ಟೆ ಧರಿಸಿ ಮಲಗುವುದನ್ನು ರೂಢಿಸಿಕೊಂಡೆ. ರಾತ್ರಿ ಯಾವ ಕ್ಷಣದದರೂ ಭೂಕಂಪ ಸಂಭವಿಸಿದರೆ, ತಕ್ಷಣ ಬಟ್ಟೆ ಧರಿಸಿ ಮನೆಯಾಚೆ ಓಡುವುದು ತಡವಾಗಬಹುದೆಂದು ನನ್ನ ಶೈಲಿಯನ್ನು ಬದಲಿಸಿಕೊಂಡೆ” ಎಂಬ ಜಪಾನಿನ ಉದ್ಯಮಿ ಯೊಬ್ಬರ ಮಾತು ಭೂಕಂಪಕ್ಕೆ ಅಲ್ಲಿನ ಜನ ಯಾವ ರೀತಿ ಸನ್ನದ್ಧರಾಗಿರುತ್ತಾರೆ ಎಂಬುದರ ದ್ಯೋತಕ.
ಜಪಾನ್ ನಲ್ಲಿ ಭೂಕಂಪ ಸಂಭವಿಸಿದಾಗ ಜನರಿಗೆ ಮೊಬೈಲ್ ಆಪ್‌ಗಳ ಮೂಲಕ ತಕ್ಷಣದ ಎಚ್ಚರಿಕೆ ಸಂದೇಶಗಳು ಬರುತ್ತವೆ.
ಇದನ್ನು ಭೂಕಂಪ ಮುನ್ನೆಚ್ಚರಿಕೆ ವ್ಯವಸ್ಥೆ (Earthquake Early Warning System) ಎಂದೂ ಕರೆಯಲಾಗುತ್ತದೆ. ಈ ವ್ಯವಸ್ಥೆ ಅತ್ಯಂತ ಸುಧಾರಿತ ಮತ್ತು ಪ್ರಪಂಚದ ಮೊಟ್ಟಮೊದಲ ತುರ್ತು ಎಚ್ಚರಿಕೆ ವ್ಯವಸ್ಥೆಗಳಂದು. ಭೂಕಂಪ ಮುನ್ನೆಚ್ಚರಿಕೆ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ? ಜಪಾನ್‌ನಲ್ಲಿ ಭೂಕಂಪ ತೀವ್ರತೆಯನ್ನು ಅಳೆಯುವ ಹಲವು ಸೆನ್ಸರ್‌ಗಳನ್ನು ನೆಲದಡಿ ಅಳವಡಿಸಲಾಗಿದೆ. ಈ ಸೆನ್ಸರ್‌ಗಳು ಭೂಕಂಪದ ಕೇಂದ್ರಬಿಂದು (Epicenter) ಮತ್ತು ಪ್ಲೇಟ್‌ಗಳ (ಭೂಪದರ)ಚಲನೆಯ ತೀವ್ರತೆಯನ್ನು ತಕ್ಷಣವೇ ಗುರುತಿಸುತ್ತವೆ.
ಭೂಕಂಪದ ಪ್ರಾಥಮಿಕ ಅಲೆಗಳು (Primary Waves) ಮತ್ತು ತೀವ್ರ ಸ್ವರೂಪದ ಅಲೆಗಳು (Secondary Waves) ನೆಲದ ಮೂಲಕ ಚಲಿಸುತ್ತವೆ. ಸೆನ್ಸರ್‌ಗಳು ಈ ಅಲೆಗಳನ್ನು ತಕ್ಷಣ ಗುರುತಿಸಿ, ಎಲ್ಲ ಪ್ರಾಂತಗಳಿಗೆ ಮುನ್ನೆಚ್ಚರಿಕೆ ಸಂದೇಶವನ್ನು ಕಳುಹಿಸುತ್ತವೆ. ಇದರಿಂದ ಭೂಕಂಪದ ಕೇಂದ್ರ ಬಿಂದುವಿನಿಂದ ದೂರ ಇರುವ ಪ್ರದೇಶಗಳಿಗೆ ಕೆಲವು ಸೆಕೆಂಡುಗಳ ಮುನ್ನವೇ ಎಚ್ಚರಿಕೆ ಸಂದೇಶಗಳನ್ನು ನೀಡಬಹುದು.
ಭೂಕಂಪದಿಂದ ಭೂಮಿ ಸಣ್ಣಗೆ ಕಂಪಿಸಿದರೂ, ಸೆನ್ಸರ್ ಅದನ್ನು ಗ್ರಹಿಸಿ ಆ ಮಾಹಿತಿಯನ್ನು ಮೊಬೈಲ್‌ಗಳ ಮೂಲಕ ತುರ್ತು ಸಂದೇಶವಾಗಿ ಕಳಿಸುತ್ತದೆ. ಭೂಕಂಪ ಸಂದೇಶಗಳನ್ನು ಕಳುಹಿಸುವ ಮೊಬೈಲ್ ಆಪ್‌ಗಳನ್ನು ಸಾಮಾನ್ಯವಾಗಿ ಎಲ್ಲರೂ ಡೌನ್ ಲೋಡ್ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ, ಯಾಹೂ ಜಪಾನ್ ಡಿಸಾಸ್ಟರ್ ಆಪ್, ಎನ್‌ಎಚ್‌ಕೆ ವರ್ಲ್ಡ್ ಜಪಾನ್ ಆಪ್, ಲೈನ್ ಡಿಸಾಸ್ಟರ್ ನೋಟಿಫಿಕೇಶನ್ ಆಪ್, ಜಪಾನ್ ಮೀಟಿಯ ರೊಲಾಜಿಕಲ್ ಏಜೆನ್ಸಿ ಆಪ್ ಇತ್ಯಾದಿ. ಇವು ತಕ್ಷಣ ಭೂಕಂಪ ಎಚ್ಚರಿಕೆ ಸಂದೇಶಗಳನ್ನು ರವಾನಿಸುತ್ತವೆ. ಮೊಬೈಲ್ ನೋಟಿಫಿಕೇಶನ್ ಬರುತ್ತಿರುವಂತೆ ಜನ ಜಾಗೃತರಾಗಲು ಅನುಕೂಲವಾಗುತ್ತದೆ. ಟಿವಿ ಮತ್ತು ರೇಡಿಯೋಗಳಲ್ಲಿ ಕೂಡ ತಕ್ಷಣದ ಎಚ್ಚರಿಕೆ ಘೋಷಣೆಗಳನ್ನು ಪ್ರಸಾರ ಮಾಡಲಾಗುತ್ತದೆ.
ಈ ಮಾಹಿತಿಯು ಭೂಕಂಪದ ತೀವ್ರತೆಯ ಪ್ರಮಾಣ (Magnitude) ಮತ್ತು ಇದರ ಶಕ್ತಿ, ಭೂಕಂಪದ ಕೇಂದ್ರಬಿಂದು
(Epicenter) ಮತ್ತು ಸಂಭವಿಸುವ ಅಂದಾಜು ಸಮಯ, ಜನರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಹೋಗುವ ಸೂಚನೆ, ಭೂಕಂಪದಿಂದ ಸಮುದ್ರದ ಅಲೆಗಳ ಮಟ್ಟ ಏರಿಕೆಯಾಗುವ ಎಚ್ಚರಿಕೆಯನ್ನು ಒಳಗೊಂಡಿರುತ್ತವೆ. ಈ ಸಂದೇಶ ಗಳು ಭೂಕಂಪ ಸಂಭವಿಸಿದ ನಂತರ ಅಲ್ಲ, ಅದಕ್ಕೂ ಮುನ್ನವೇ ಬರುವುದು ಗಮನಾರ್ಹ. ಇದು ಜನರಿಗೆ ಸುರಕ್ಷಿತ ಸ್ಥಳಗಳಿಗೆ ಹೋಗಲು ಕೆಲವು ಸೆಕೆಂಡುಗಳ ಕಾಲಾವಕಾಶವನ್ನು ನೀಡುತ್ತದೆ. ಈ ಸಂದೇಶಗಳು ಫ್ಯಾಕ್ಟರಿ ಗಳಲ್ಲಿ ಯಂತ್ರಗಳನ್ನು ತಕ್ಷಣ ಸ್ಥಗಿತಗೊಳಿಸಲು ಅಥವಾ ಶಿಂಕನ್ಸೆನ್ (Bullet Train) ಸೇರಿದಂತೆ ರೈಲುಗಳನ್ನು ತಕ್ಷಣ ತಡೆಯಲು ಸಹಾಯ ಮಾಡುತ್ತವೆ. ಇದು ಜನರು ಪ್ರಾಣ ಉಳಿಸಿಕೊಳ್ಳಲು, ಬೇರೆಯವರಿಗೆ ನೆರವಾಗಲು ಸಹಾಯಕ. ಜನರು ಈ ಎಚ್ಚರಿಕೆ ಸಂದೇಶಗಳನ್ನು ಹೇಗೆ ಬಳಸುತ್ತಾರೆ? ಮೊಬೈಲುಗಳಿಗೆ ಭೂಕಂಪ ಎಚ್ಚರಿಕೆ ಸಂದೇಶ ಬರು ತ್ತಿದ್ದಂತೆ, ಕಟ್ಟಡದ ಸುರಕ್ಷಿತ ಅಥವಾ ಬಯಲು ಪ್ರದೇಶಗಳ ಕಡೆ ಓಡುತ್ತಾರೆ ಅಥವಾ ಅಡಗುತ್ತಾರೆ.
ಗ್ಯಾಸ್ ಪೈಪುಗಳನ್ನು ತಕ್ಷಣ ಸ್ಥಗಿತಗೊಳಿಸುತ್ತಾರೆ, ಬಿಸಿನೀರು, ತೈಲ ಅಥವಾ ವಿದ್ಯುತ್ ಉಪಕರಣಗಳನ್ನು ಹಠಾತ್ ಶಟ್‌ಡೌನ್ ಮಾಡುತ್ತಾರೆ. ತಮ್ಮನ್ನಷ್ಟೇ ಅಲ್ಲ, ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಮತ್ತು ಸಂರಕ್ಷಿಸಲು ಈ
ಮಾಹಿತಿ ಅತ್ಯಂತ ನಿರ್ಣಾಯಕ.
ಜಪಾನಿನಲ್ಲಿ ಮನೆ, ಅಪಾರ್ಟ್‌ಮೆಂಟ್ ಅಥವಾ ಆಫೀಸ್‌ನಲ್ಲಿ ಒಂದು ನಿರ್ದಿಷ್ಟ ಪ್ರದೇಶವನ್ನು ಭೂಕಂಪ ತುರ್ತು ಪ್ರದೇಶ ಎಂದು ಗುರುತಿಸುತ್ತಾರೆ. ಭೂಕಂಪದ ಸಂದೇಶ ಬರುತ್ತಿದ್ದಂತೆ ಎಲ್ಲರೂ ಕಟ್ಟಡಗಳಿಂದ ಕನಿಷ್ಠ ಇನ್ನೂರು ಮೀಟರ್ ದೂರವಿರುವ ಆ ಬಯಲು ಪ್ರದೇಶದಲ್ಲಿ ಬಂದು ಸೇರುತ್ತಾರೆ. ಜಪಾನ್‌ನಂಥ ಭೂಕಂಪಪ್ರಾಬಲ್ಯ ಪ್ರದೇಶಗಳಲ್ಲಿ ಈ ಮುನ್ನೆಚ್ಚರಿಕೆ ವ್ಯವಸ್ಥೆಗಳು ಅನೇಕ ಜೀವಗಳನ್ನು ಉಳಿಸಲು ಬಹಳ ಮುಖ್ಯವಾಗಿವೆ. ಜನರ ಸುರಕ್ಷತೆ ಮತ್ತು ಹಿತಕ್ಕಾಗಿ ಅಲ್ಲಿನ ಸರಕಾರ, ತಂತ್ರeನದ ನೆರವಿನೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡು ತ್ತದೆ. ಅಂಥ ಸಂದರ್ಭದಲ್ಲಿ ಯಾವುದೇ ಗಲಿಬಿಲಿ, ಗೊಂದಲಕ್ಕೆ ಆಸ್ಪದವಿರದ ರೀತಿಯಲ್ಲಿ ಜನರೂ ವರ್ತಿಸುತ್ತಾರೆ.
ಜಪಾನ್ ಎಂಬ ವೃದ ರ ದೇಶ
‘ವೃದ್ಧರು ದೇಶಕ್ಕೆ ಹೊರೆಯಲ್ಲ, ಅವರ ಅನುಭವವನ್ನು ಉಪಯೋಗಿಸಿಕೊಳ್ಳದ ದೇಶ ಬಡವಾಗುತ್ತದೆ’ ಎಂಬು ದನ್ನು ಜಗತ್ತಿಗೆ ಸಾರಿದ ದೇಶವೆಂದರೆ ಜಪಾನ್. ಜಗತ್ತಿನಲ್ಲಿ ಅತಿ ಹೆಚ್ಚು ವೃದ್ಧರನ್ನು ಹೊಂದಿರುವ ದೇಶ ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ ಜಪಾನ್, ವೃದ್ಧರನ್ನುಮತ್ತಷ್ಟು ಗೌರವದಿಂದ ನೋಡಿಕೊಳ್ಳುವ ಜವಾಬ್ದಾರಿ ತನ್ನ ಮೇಲಿದೆ ಎಂದು ಭಾವಿಸಿದೆ. ಇತ್ತೀಚೆಗೆ ಈ ನಿಟ್ಟಿನಲ್ಲಿ ಜಪಾನ್ ಸರಕಾರ ಒಂದು ಸುತ್ತೋಲೆ ಹೊರಡಿಸಿದ್ದು, 75 ವರ್ಷ ದಾಟಿದವರನ್ನು ‘ದೇಶದ ಸಂಪತ್ತು’ ಎಂದು ಭಾವಿಸಬೇಕೆಂದು ಅದು ಹೇಳಿದೆ.
ಇದು ವೃದ್ಧರೆಡೆಗಿನ ಭಾವನೆಯನ್ನೇ ಬದಲಿಸಲು ಸಹಾಯಕವಾಗಿದೆ. ಜಪಾನ್ ದೇಶದಲ್ಲಿ ಮನುಷ್ಯನ ಜೀವಿತ ಅವಧಿ ಜಾಸ್ತಿಯಾಗಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ವೃದ್ಧರ ಪಟ್ಟಿಗೆ ಹೆಚ್ಚಿನ ಜನ ಸೇರ್ಪಡೆಯಾಗುತ್ತಿzರೆ. ಆದರೆ
ಅವರು ಸಮಾಜಕ್ಕೆ ಹೊರೆ ಎಂಬ ಭಾವನೆ ಬರಬಾರದು ಮತ್ತು ವೃದ್ಧರ ಅನುಭವವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಹೊಸ ಹೊಸ ಯೋಜನೆಗಳನ್ನು ಚಿಂತಿಸಲಾಗುತ್ತಿದೆ.
ಈ ಕಾರಣದಿಂದ 75 ವರ್ಷದೊಳಗಿನವರನ್ನು ‘ಪೂರ್ವ ವೃದ್ಧ’ರು (Pre-Old) ಎಂದು ಕರೆಯಲಾಗುತ್ತಿದೆ. ನಿವೃತ್ತಿ
ವಯಸ್ಸನ್ನು 65ಕ್ಕೆ ಏರಿಸಲಾಗಿದೆ. 65 ದಾಟಿದವರು ಸಶಕ್ತರಾಗಿದ್ದರೆ, ಅವರ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸ ಮಾಡಲು ಅನುವುಮಾಡಿಕೊಡಲಾಗುತ್ತದೆ. ವ್ಯಕ್ತಿಯ ಜೀವಿತ ಅವಧಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ, ವೃದ್ಧರ ಸಂಖ್ಯೆಯೂ ಅದಕ್ಕನುಗುಣವಾಗಿ ಏರುವುದು ಸಹಜ.
ಆದರೆ ವೃದ್ಧರು ಸಮಾಜಕ್ಕೆ ಅನಪೇಕ್ಷಿತರೆನಿಸಿಕೊಳ್ಳಬಾರದು. ಈ ಕಾರಣದಿಂದ ಅವರ ಅನುಭವವನ್ನು ರಾಷ್ಟ್ರೀಯ ಉತ್ಪಾದನೆಯಲ್ಲಿ ಬಳಸಿಕೊಳ್ಳಬೇಕು ಎಂಬುದು ಅಲ್ಲಿನವರ ಚಿಂತನೆಯಾಗಿದೆ. ಬಹುತೇಕ ದೇಶಗಳು ವೃದ್ಧರನ್ನು ಅನುತ್ಪಾದಕರೆಂಬಂತೆ ನೋಡುತ್ತವೆ. ಅವರನ್ನು ರಚನಾತ್ಮಕವಾಗಿ ತೊಡಗಿಸಿಕೊಳ್ಳುವ ಯಾವ ಕಾರ್ಯಕ್ರಮ ವನ್ನೂ ರೂಪಿಸುವುದಿಲ್ಲ. ಆದರೆ ಈ ವಿಷಯದಲ್ಲಿ ಜಪಾನ್ ಇಡೀ ಜಗತ್ತಿಗೆ ಮಾದರಿಯಾಗಿದೆ. ವಯಸ್ಸಾದವರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಯಾವ ದೇಶಕ್ಕೂ ಭೂಷಣವಲ್ಲ ಎಂಬುದು ಜಪಾನಿಯರ ಚಿಂತನೆ. ಜಪಾನಿನ ಜನಸಂಖ್ಯೆಯ ಶೇ.30ರಷ್ಟು ಮಂದಿ 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು. ಯುರೋಪಿನಲ್ಲಿ ಈ ಪ್ರಮಾಣ ಶೇ.21 ರಷ್ಟಿದ್ದರೆ, ಅಮೆರಿಕದಲ್ಲಿ ಶೇ.17ರಷ್ಟಿದೆ.
ಜಪಾನಿನಲ್ಲಿ ಜನನ ಪ್ರಮಾಣ ಕಡಿಮೆಯಾಗಿರುವುದು, ಜೀವಿತ ಅವಧಿ ಜಾಸ್ತಿಯಾಗಿರುವುದು ವೃದ್ಧರ ಸಂಖ್ಯೆ ಜಾಸ್ತಿ
ಯಾಗಲು ಕಾರಣ. ಇತ್ತೀಚಿನ ದಿನಗಳಲ್ಲಿ ಜಪಾನಿಯರಲ್ಲಿ ವೃದ್ಧರ ಬಗ್ಗೆ ಇದ್ದ ಭಾವನೆಗಳು ನಿಧಾನವಾಗಿ ಬದಲಾಗುತ್ತಿವೆ. ವೃದ್ಧರು ಸಹ ಅನ್ಯ ಕಾರಣಗಳಿಂದ ಸಶಕ್ತರು ಮತ್ತು ಅವರ ಅನುಭವಗಳು ವ್ಯರ್ಥವಾಗಬಾರದು ಎಂಬುದು ಅವರ ಕಾಳಜಿ. ಆದರೆ ಅನೇಕ ದೇಶಗಳು ವೃದ್ಧರ ಬಗ್ಗೆ ಇನ್ನೂ ಹಳೆಯ ಅಭಿಪ್ರಾಯಕ್ಕೆ ಜೋತು
ಬಿದ್ದಿವೆ. ವೃದ್ಧರೆಂದರೆ ‘ಹಿರಿಯ ಯುವಕರು’, ‘ಅನುಭವಗಳಿಂದ ಸಮೃದ್ಧರಾದವರು’, ‘ಅನುಭವದಲ್ಲಿ ಸರಿಸಾಟಿ ಇಲ್ಲದವರು’ ಎಂಬ ಅಭಿಪ್ರಾಯವನ್ನು ಮೂಡಿಸಲು ಜಪಾನ್ ಶ್ರಮಿಸುತ್ತಿದೆ. ಚಿಕ್ಕ ಮಕ್ಕಳಿಗೆ ಶಾಲಾ ಪಠ್ಯಪುಸ್ತಕ ಗಳಲ್ಲಿ ವೃದ್ಧರ ಬಗ್ಗೆ ಗೌರವ ಮೂಡಿಸುವ ಪಾಠಗಳನ್ನು ಸೇರಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ವೃದ್ಧರಿಗೆ ಆದ್ಯತೆ ನೀಡುವ ನಿಯಮಗಳನ್ನು ಸಹ ಜಾರಿಗೆ ತಂದಿದೆ. ಜಪಾನಿನಲ್ಲಿ ವೃದ್ಧರಾಗಿರುವುದು ಅಭಿಮಾನದ ಸಂಗತಿ.
ಪ್ರತಿಮೆಗಳ ದೇಶ
ಜಪಾನಿನ ಯಾವುದೇ ನಗರದಲ್ಲಿ ಓಡಾಡುವಾಗ ಸ್ಮಾರಕ, ಪ್ರತಿಮೆ, ಪುತ್ಥಳಿಗಳನ್ನು ನೋಡದೇ ಇರಲು ಸಾಧ್ಯವಿಲ್ಲ. ಇದಕ್ಕೆ ಬೌದ್ಧ ಧರ್ಮದ ಪ್ರಭಾವವೂ ಕಾರಣ. ಚೀನಾದಿಂದ ಕೊರಿಯಾ ಮೂಲಕ ಬಂದ ಬೌದ್ಧ ಧರ್ಮ ಜಪಾನಿ ನಲ್ಲಿ ಬಲವಾಗಿ ಬೇರುಬಿಟ್ಟಿದೆ. ಆ ದೇಶದ ರಾಜರು ಬುದ್ಧನ ಪ್ರತಿಮೆಗಳನ್ನು ಎಡೆ ಸ್ಥಾಪಿಸಿದರು. ಇದು ಸ್ಥಳೀಯ ಶಿಂಟೋ ಕಲೆಯ ಮೇಲೂ ಅಗಾಧ ಪ್ರಭಾವವನ್ನು ಬೀರಿತು. ಹೀಗಾಗಿ ಶಿಂಟೋ ದೇವಾಲಯಗಳಲ್ಲೂ ಬುದ್ಧನ ಕಲ್ಲಿನ ಪ್ರತಿಮೆಗಳನ್ನು ಹೆಚ್ಚಾಗಿ ಕಾಣಬಹುದು. ರಸ್ತೆಯ ಪಕ್ಕದಲ್ಲಿ, ಉದ್ಯಾನದಲ್ಲಿ, ಕಾಡಿನಲ್ಲಿ, ಮನೆಗಳಲ್ಲಿ ಸಣ್ಣ-ಪುಟ್ಟ ಪ್ರತಿಮೆಗಳನ್ನು ಕಾಣಬಹುದು. ಇವು ಕೇವಲ ಅಲಂಕಾರಿಕವಷ್ಟೇ ಅಲ್ಲ. ಪ್ರತಿಮೆಗಳಲ್ಲಿ ಜಪಾನಿಯರ ನಂಬಿಕೆ ಭಿನ್ನವಾಗಿದೆ.
ಜಪಾನಿನಲ್ಲಿ ಭೂಕಂಪ ಮತ್ತು ನೈಸರ್ಗಿಕ ದುರಂತಗಳು ಆಗಾಗ ಸಂಭವಿಸುತ್ತಿರುತ್ತವೆ. ಪುಸ್ತಕ, ಕಟ್ಟಡ ಮತ್ತು ಮನುಷ್ಯರನ್ನು ಘಾಸಿಗೊಳಿಸಬಹುದು, ಧ್ವಂಸಗೊಳಿಸಬಹುದು. ಆದರೆ ಪ್ರತಿಮೆಗಳನ್ನು ಸುಲಭವಾಗಿ ನಾಶ ಪಡಿಸಲು ಸಾಧ್ಯವಿಲ್ಲ. ಅದರಲ್ಲೂ ಕಲ್ಲಿನ ಪ್ರತಿಮೆಗಳಿಗೆ ಘಾಸಿಯಾದರೂ, ಸಂಪೂರ್ಣವಾಗಿ ಧ್ವಂಸಗೊಳಿಸುವುದು ಕಷ್ಟವೇ. ನೈಸರ್ಗಿಕ ಪ್ರಕೋಪಗಳಿಂದ ಮೇಲಿಂದ ಮೇಲೆ ತೊಂದರೆಗೊಳಗಾಗುವ ದೇಶದಲ್ಲಿ ಯಶಸ್ಸು, ಸಾಧನೆ, ಮೌಲ್ಯ, ಸಿದ್ಧಾಂತಗಳನ್ನು ಪ್ರತಿಮೆಗಳ (Statues) ಮೂಲಕ ಸಂರಕ್ಷಿಸುವುದು ಬಹಳ ಮುಖ್ಯ. ಇದು ಆ ದೇಶದಲ್ಲಿ ಪ್ರತಿಮೆಗಳ ಸ್ಥಾಪನೆಗೆ ಕಾರಣವಾಗಿದೆ.
1498ರಲ್ಲಿ ಜಪಾನಿನ ಟೋಕಿಯೋಕ್ಕೆ ಸನಿಹದ ಕಮಕೂರ ನಗರ ಸುನಾಮಿಗೆ ತುತ್ತಾಗಿ ಮಟ್ಟಸವಾಗಿ ಹೋಯಿತು. ಆ ದುರಂತದಲ್ಲಿ ಸಾವಿರಾರು ಜನ ಸತ್ತುಹೋದರು. ಮುದ್ರಿತ ಅಕ್ಷರ, ಪುಸ್ತಕಗಳೆಲ್ಲ ಕೊಚ್ಚಿ ಹೋದವು. ಆ ನಗರ ದಲ್ಲಿರುವ ಕಲ್ಲಿನ ಬುದ್ಧನ ವಿಗ್ರಹಗಳ ಹೊರತಾಗಿ ಉಳಿದುವೆಲ್ಲ ತೇಲಿಹೋದವು. ಬುದ್ಧನ ವಿಗ್ರಹ ನೆಲಕ್ಕುರುಳಿತ್ತು. ಪ್ರತಿಮೆ ಅಲ್ಲಲ್ಲಿ ಜಖಂಗೊಂಡಿತ್ತು. ಅದನ್ನು ನಿಪುಣ ಶಿಲ್ಪಿಗಳು ದುರಸ್ತಿಗೊಳಿಸಿದರು. ಆ ಭೀಕರ ಸುನಾಮಿ ಹೊಡೆತದಲ್ಲಿ ಬುದ್ಧನ ವಿಗ್ರಹ ತೇಲಿಹೋಗದೇ, ಧ್ವಂಸವಾಗದೇ ಉಳಿಯಿತು.
ಪ್ರಾಕೃತಿಕ ದುರಂತಗಳು ಆಗಾಗ ಸಂಭವಿಸುವ ಜಪಾನಿನಂಥ ದೇಶದಲ್ಲಿ ಸಾಮೂಹಿಕ ನೆನಪುಗಳನ್ನು ಕಾಪಾಡಿ ಕೊಳ್ಳುವುದು ಸಹ ಅಷ್ಟೇ ಮುಖ್ಯ. ಹೀಗಾಗಿ ಕಲ್ಲಿನ ವಿಗ್ರಹ ಅಥವಾ ಪ್ರತಿಮೆಗಳನ್ನು ಸ್ಥಾಪಿಸಿ ನೆನಪುಗಳನ್ನು ಚಿರಸ್ಥಾಯಿಯಾಗಿರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಭೂಕಂಪವೂ ಹಾಸ್ಯಕ್ಕೆ ಪ್ರೇರಣೆ ಜಪಾನಿಯರು ಮೌನ ಹಾಸ್ಯಪ್ರಿಯರು. ಹೊರಗಿಂದ ನೋಡಿದರೆ ಹೆಚ್ಚು ನಗಲಿಕ್ಕಿಲ್ಲ ಎಂದು ಅನಿಸಿದರೂ, ಶುದ್ಧ ಹಾಸ್ಯವನ್ನು
ಎಂಜಾಯ್ ಮಾಡಬಲ್ಲರು. ಭೂಕಂಪದಂಥ ಗಂಭೀರ ಮತ್ತು ಭಯಾನಕ ವಿಷಯದ ಬಗ್ಗೆ ಸಹ ವಕ್ರತುಂಡೋಕ್ತಿ ಚಟಾಕಿ ಹರಿಸಿ ಚೋದ್ಯ ಮಾಡಬಲ್ಲರು. ಜಪಾನಿನಲ್ಲಿ ದಿನದಲ್ಲಿ ಮೂರ್ನಾಲ್ಕು ಕಡೆಗಳಲ್ಲಿ ಭೂಮಿ ನಡುಗುವು ದರಿಂದ, ಭೂಕಂಪವೂ ಹಾಸ್ಯದ ವಿಷಯವಾಗಿರುವುದು ವಿಪರ್ಯಾಸವೇ ಸರಿ.
ಒಮ್ಮೆ ಜಪಾನಿನ ಖ್ಯಾತ ಬರಹಗಾರ ಹರುಕಿ ಮುರಾಕಮಿ, “ಜಪಾನ್‌ನಲ್ಲಿ ಭೂಮಿ ಅಡಲಾರಂಭಿಸಿದರೆ, ನಾನು ನನ್ನ ಟೇಬಲ್ ಮೇಲೆ ಕುಳಿತುಕೊಳ್ಳುತ್ತೇನೆ. ಯಾಕೆಂದರೆ ಅದೂ ಅಡ್ತಿರೋದ್ರಿಂದ, ನರ್ವಸ್‌ನೆಸ್ ಸ್ವಲ್ಪ ಕಡಿಮೆ ಆಗುತ್ತೆ!” ಎಂದು ಹೇಳಿದ್ದರು. “ಭೂಕಂಪದ ಎಚ್ಚರಿಕೆಯು ತಕ್ಷಣವೇ ಬರುತ್ತೆ, ಆದರೆ ನಾವು ಎಚ್ಚರವಾಗೋಕೆ ಇನ್ನೂ ೧೦ ನಿಮಿಷ ಬೇಕಾಗುತ್ತೆ” ಎಂದು ಅವರು ಹೇಳಿದ್ದು ಹಾಸ್ಯವಷ್ಟೇ ಅಲ್ಲ, ಕಟುವಾಸ್ತವವೂ ಹೌದು.
“ಜಪಾನ್‌ನಲ್ಲಿ ಭೂಕಂಪ ಸಂಭವಿಸುವುದು ಸಾಮಾನ್ಯ, ಆದ್ದರಿಂದ ನಾನು ಮನೆಯಲ್ಲಿ ‘ಡಾನ್ಸ್ ಫಾರ್’ ಮಾಡಿ
ಕೊಂಡಿದ್ದೇನೆ. ಅಡೋದು ಕೇವಲ ಭೂಮಿಯೊಂದೇ ಅಲ್ಲ!” ಎಂದು ಜಪಾನಿನ ಖ್ಯಾತ ಡಾನ್ಸರ್ ಹೇಳಿದ್ದು ಸಹ ವಿಚಿತ್ರವಾದರೂ ಸತ್ಯ.
“ಜಪಾನ್‌ನಲ್ಲಿ, ಭೂಕಂಪ ಮತ್ತು ಇಂಟರ್ನೆಟ್ ಸಿಗುವುದಿಲ್ಲ ಎಂಬುದು ಒಂದೇ ರೀತಿಯ ತುರ್ತು ಪರಿಸ್ಥಿತಿ ಯನ್ನುಂಟು ಮಾಡುತ್ತದೆ” ಎನ್ಸು ಪಿಕೋ ಇಯೆರ್ ಬರೆದಿದ್ದರು. ಜಪಾನಿನ ಭೂಕಂಪದ ಬಗ್ಗೆ ಇನ್ನೊಂದು ಮಾತಿದೆ- “ನಾನು ಭೂಕಂಪದಲ್ಲಿ ಯಾರನ್ನು ಕಳೆದುಕೊಂಡಿದ್ದೀನಿ ಅಂತ ಆಲೋಚನೆ ಮಾಡ್ತಾ ಇರುವಷ್ಟ ರೊಳಗೆ, ಮತ್ತೊಮ್ಮೆ ಭೂಕಂಪ ಸಂಭವಿಸಿರುತ್ತದೆ”.
“ಜಪಾನಿನಲ್ಲಿ ಥ್ರಿಲ್ಲರ್, ಹಾರರ್, ಸಸ್ಪೆನ್ಸ್ ಮತ್ತು ಕಾಮಿಡಿ ಈ ನಾಲ್ಕರ ಅನುಭವ ಆಗಬೇಕು ಅಂದ್ರೆ ಭೂಕಂಪ ವೊಂದೇ ಸಾಕು” ಎಂಬ ಮಾತಿದೆ.
ಟೋಕಿಯೋದ ಅಕಿಯಬಾರ ಪ್ರದೇಶದಲ್ಲಿ ಒಂದೆಡೆ ಮೊಬೈಲ್ ಅಂಗಡಿಯಲ್ಲಿ ಬರೆದ ಒಂದು ಸ್ಲೋಗನ್ ಹೀಗಿತ್ತು- “ಜಪಾನಿನ ಮನೆಗಳು ಮಾತ್ರ ಅಲ್ಲ, ಜನರ ಮೊಬೈಲ್‌ಗೂ ಕಂಪನ ಪ್ರೂಫ್ ಕೇಸ್ ಇದೆ!” ((In Japan, even
people’s phones have earthquake-proof cases, not just the houses!). “ಜಪಾನಿನಲ್ಲಿ ಬಾರ್ ನಲ್ಲಿ ಸ್ನೇಹಿತರ ನ್ನು ಭೇಟಿ ಮಾಡುವುದೆಂದರೆ ಅದು ನೆಲ ನಡುಗುವ ಅನುಭವವೇ” ((In Japan, meeting friends at Bar always includes a groundshaking experience!) ಎಂದು ಹೇಳುವುದುಂಟು.
ಜಪಾನಿಯರ ಜೀವನ ತತ್ವವೊಂದಿದೆ. ಅಲ್ಲೂ ಅವರು ಭೂಕಂಪವನ್ನು ಹಾಸ್ಯ ಮಾಡುತ್ತಾರೆ. “ನೀನೇ ಜಂಪ್ ಮಾಡಬೇಕಿಲ್ಲ, ನಿನಗಾಗಿ ನೆಲವೇ ಜಂಪ್ ಮಾಡುತ್ತದೆ” ಎಂದು ಭೂಕಂಪವನ್ನು ಛೇಡಿಸುತ್ತಾರೆ. ಜಪಾನಿಯರು ಭೂಕಂಪಕ್ಕೆ ಹೇಗೆ ಹೊಂದಿಕೊಂಡಿದ್ದಾರೆಂದರೆ ಅದನ್ನು ನೋಡಿ ಹಾಸ್ಯ ಮಾಡುವಷ್ಟು. ಬಡತನ ಇರುವ ದೇಶ
ಗಳು ತಮ್ಮ ಹಸಿವನ್ನು ನೋಡಿ ಹಾಸ್ಯ ಮಾಡಿಕೊಳ್ಳುವಂತೆ, ಜಪಾನಿಯರು ಭೂಕಂಪ ನೋಡಿ ನಗುವುದನ್ನು ರೂಢಿಸಿಕೊಂಡಿದ್ದಾರೆ.
ಇದನ್ನೂ ಓದಿ: @vishweshwarbhat