ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ಟೋಕಿಯೋ ನಗರದಲ್ಲಿ ನೀವು ಮನೆ ಮಾಡಿದರೆ, ಅಲ್ಲಿ ನಿಮ್ಮ ಮನೆಯನ್ನು ನೀವೇ ಸ್ವಚ್ಛಗೊಳಿಸಿಕೊಳ್ಳಬೇಕು. ಕಾರಣ ಮನೆಯಲ್ಲಿ ಕೆಲಸ ಮಾಡುವ ಸೇವಕರು ಅಥವಾ ಕೆಲಸದಾಳುಗಳು ಅಲ್ಲಿ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ, ಅವರ ಸೇವೆಯನ್ನು ಪಡೆಯಲು ಸಾಧ್ಯವಾಗದಷ್ಟು ದುಬಾರಿ.
ಹಾಗೇ ಟೋಕಿಯೋದಲ್ಲಿ ಪೌರ ಕಾರ್ಮಿಕರೂ ಇಲ್ಲ. ನಮ್ಮ ಬೀದಿಯನ್ನು ನಾವೇ ಸ್ವಚ್ಛಗೊಳಿಸಿಕೊಳ್ಳಬೇಕು. ನಮ್ಮ ಮನೆ
ಸುತ್ತ-ಮುತ್ತಲಿನ ಪ್ರದೇಶ, ಕಾಲುದಾರಿಗಳನ್ನೂ ಆಯಾ ಮನೆಯವರೇ ಗುಡಿಸಿ ಒಪ್ಪವಾಗಿಟ್ಟುಕೊಳ್ಳಬೇಕು. ಅವರು ಅದೆಷ್ಟೇ
ಉನ್ನತ ಹುzಯಲ್ಲಿರಬಹುದು, ಈ ವಿಷಯದಲ್ಲಿ ಯಾರೂ ತಮ್ಮ ಅಂತಸ್ತುಗಳನ್ನು ಮೆರೆಯುವುದಿಲ್ಲ. ಅಷ್ಟಕ್ಕೂ ಅವರ ಮನೆ
ಯನ್ನು ಬೇರೆಯವರು ಬಂದು ಸ್ವಚ್ಛಗೊಳಿಸಿ ಹೋಗುವುದಿಲ್ಲ. ಕಾರಣ ಅಲ್ಲಿ ಪೌರ ಕಾರ್ಮಿಕ ಎಂಬ concept ಇಲ್ಲವೇ ಇಲ್ಲ.
ಈ ಕಾರಣದಿಂದ ಯಾರೂ ತಮ್ಮ ಮನೆಗಳಿಂದ ಒಂದು ಸಣ್ಣ ಕಸ-ಕಡ್ಡಿಯನ್ನೂ ಬೀದಿಗೆ ಎಸೆಯುವುದಿಲ್ಲ. ನಮ್ಮಲ್ಲಿ ಎಲ್ಲರ
ಮನೆಗಳು ಸ್ವಚ್ಛವಾಗಿರುತ್ತವೆ, ಆದರೆ ಬೀದಿಗಳೆಲ್ಲ ಕಸಕಡ್ಡಿಗಳಿಂದ ತುಂಬಿರುತ್ತವೆ. ಇದಕ್ಕೆ ಕಾರಣ ನಾವು ಎಸೆದ ಹೊಲಸು, ಕಸ,
ತ್ಯಾಜ್ಯಗಳನ್ನು ಬೇರೆಯವರು ಸ್ವಚ್ಛಗೊಳಿಸಬೇಕು ಎಂದು ಅಪೇಕ್ಷಿಸುತ್ತೇವೆ. ಬೀದಿಯನ್ನು ಸ್ವಚ್ಛವಾಗಿಸುವುದು ನಮ್ಮ ಕೆಲಸ
ಅಲ್ಲ ಎಂದು ನಾವು ಭಾವಿಸಿದ್ದೇವೆ.
ಹೀಗಾಗಿ ಇಲ್ಲಿ ಕಸ ಎಸೆಯುವವರೂ ನಾವೇ. ಆದರೆ ಅಲ್ಲಿ ಸರಿ ವಿರುದ್ಧ. ನಮ್ಮ ಮನೆಯನ್ನು ಚೆಂದವಾಗಿಟ್ಟುಕೊಳ್ಳುವಂತೆ, ಮನೆ
ಮುಂದಿನ ಬೀದಿಯನ್ನೂ ಸ್ವಚ್ಛವಾಗಿಟ್ಟುಕೊಳ್ಳುವ ಹೊಣೆಗಾರಿಕೆ ಮನೆಯವರದೇ. ಈ ಕಾರಣದಿಂದ ಪ್ರತಿಯೊಬ್ಬರೂ ತಮ್ಮ ತಮ್ಮ
ಮನೆಯನ್ನಷ್ಟೇ ಅಲ್ಲ, ಸುತ್ತಲಿನ ಬೀದಿ ಮತ್ತು ಪರಿಸರವನ್ನು ಅಂದವಾಗಿಟ್ಟುಕೊಳ್ಳುತ್ತಾರೆ. ಸಾಧ್ಯವಾದಷ್ಟು ಹೂಕುಂಡಗಳನ್ನಿಟ್ಟು ಅಲಂಕರಿಸಿರುತ್ತಾರೆ. ತಮ್ಮ ಮನೆ ಸುತ್ತಮುತ್ತ ಮರ- ಗಿಡಗಳನ್ನು ಬೆಳೆಸುವುದರಲ್ಲಿ ಆಸಕ್ತಿ ತೋರಿಸುತ್ತಾರೆ. ಅಂದರೆ
ಮನೆಯೊಳಗಿನ ಸ್ವಚ್ಛತೆಗಷ್ಟೇ ಅಲ್ಲ, ಮನೆ ಹೊರಗಿನ ಅಂದ ಮತ್ತು ಸ್ವಚ್ಛತೆಗೂ ಮಹತ್ವ ನೀಡುತ್ತಾರೆ.
ಹೀಗಾಗಿ ಅಲ್ಲಿ ಗಲೀಜಾಗಿರುವ ಬೀದಿಯನ್ನು ನೋಡಲು ಸಾಧ್ಯವಿಲ್ಲ. ಕೆಲವು ಬೀದಿಗಳಲ್ಲಿ ವಯಸ್ಸಾದವರಿದ್ದರೆ, ಅವರು
ತಮ್ಮ ಮನೆ ಮುಂದಿನ ಜಾಗವನ್ನಷ್ಟೇ ಅಲ್ಲ, ಅಕ್ಕ-ಪಕ್ಕದವರ ಮನೆಗಳನ್ನೂ ಸ್ವಚ್ಛಗೊಳಿಸುತ್ತಾರೆ. ಅಲ್ಲಿನ ಎಲ್ಲ ಬೀದಿಗಳಲ್ಲೂ
ಇದೇ ನಿಯಮ ಆದೇಶವಿಲ್ಲದೇ ಜಾರಿಯಾಗಿರುವುದನ್ನು ಕಾಣಬಹುದು.
ಈ ಬಡಾವಣೆಗಳಲ್ಲಿ ಕಾಣುವ ಇನ್ನೊಂದು ಪ್ರಮುಖ ಅಂಶವೆಂದರೆ, ನೀರವ ಪರಿಸರ. ಎಲ್ಲೂ ಗೌಜು-ಗದ್ದಲ ಕೇಳಲು ಸಾಧ್ಯವೇ ಇಲ್ಲ. ಮುಖ್ಯರಸ್ತೆಯ ವಾಹನಗಳ ಓಡಾಟದ ಸದ್ದು ಕೇಳಿಸಬಾರದೆಂದು ಅಲ್ಯೂಮಿನಿಯಂ ಅಥವಾ ಗಾಜಿನ ತಡೆಗೋಡೆ ನಿಲ್ಲಿಸಿರುವುದನ್ನು ಕಾಣಬಹುದು. ಹಳ್ಳಿಯಲ್ಲಿ ಮಾತ್ರ ಅಲ್ಲ, ಟೋಕಿಯೋದಂಥ ನಗರಗಳಲ್ಲೂ ಜನವಸತಿ ಪ್ರದೇಶಗಳು ಗದ್ದಲಮುಕ್ತ. ಈ ವಿಷಯದಲ್ಲಿ ಟೋಕಿಯೋ ಜಗತ್ತಿನ ಉಳಿದ ನಗರಗಳಿಗಿಂತ ವಿಭಿನ್ನ. ಏಕೆಂದರೆ ಅಲ್ಲಿ Tranquility (ಶಾಂತಿ) ಮತ್ತು Activity (ಚಟುವಟಿಕೆ) ಎರಡೂ ಒಂದೆಡೆ ನೆಲೆಸಿವೆ. ನಗರ ಜೀವನ ಗದ್ದಲಮಯ ಎಂದು ಭಾವಿಸಿದವರಿಗೆ ಟೋಕಿಯೋ ಒಂದು ‘ಸಾಂಸ್ಕೃತಿಕ ಆಘಾತ’ ನೀಡುತ್ತದೆ.
ಜನನಿಬಿಡ, ಜನವಸತಿಯುಕ್ತ ಪ್ರದೇಶ ಎಂದ ಮಾತ್ರಕ್ಕೆ ಅದು ಗದ್ದಲಮಯವಾಗಿರಬೇಕು ಎಂಬ ನಿಯಮವೇನಿಲ್ಲ ಎಂಬುದನ್ನು ಟೋಕಿಯೋದಲ್ಲಿ ಅನುಭವಿಸಬಹುದು. ಇಡೀ ನಗರ ತನ್ನ ಪಾಡಿಗೆ ಅಧ್ಯಯನದಲ್ಲಿ ನಿರತವಾದಂತೆ, ಧ್ಯಾನದಲ್ಲಿ ಮಗ್ನವಾದಂತೆ ಭಾಸವಾಗುತ್ತದೆ. ಜಪಾನಿನ ಹಳ್ಳಿಗಳು ಶಾಂತ ಪರಿಸರಕ್ಕೆ ಎಷ್ಟು ಪ್ರಸಿದ್ಧವೋ, ನಗರಗಳೂ ಆ ಮಾತಿಗೆ ಹತ್ತಿರವಾಗಿರುವ ವಿಸ್ಮಯವನ್ನು ಅನುಭವಿಸಬಹುದು. ನಗರ ಎಂದ ಮಾತ್ರಕ್ಕೆ ಗದ್ದಲಗಳಿಂದಲೇ ಏಕೆ ಕೂಡಿರಬೇಕು ಎಂಬುದು ಜಪಾನಿಯರ ವಾದ. ಹೀಗಾಗಿ ತಮ್ಮ ಸುತ್ತಮುತ್ತ ಅವರು ಶಾಂತ ವಾತಾವರಣವನ್ನು ಸಹಜವಾಗಿ ನಿರ್ಮಿಸಿಕೊಳ್ಳುತ್ತಾರೆ. Look at London or Paris; they’re both filthy. You don’t get that in Tokyo. The proud residents look after their city ಎಂದು ತಡವೋ ಅಂದೋ ಎಂಬ ಜಪಾನಿನ ಖ್ಯಾತ ವಾಸ್ತುಶಾಸ್ತ್ರಜ್ಞ ಹೇಳುತ್ತಾನೆ. ನಮ್ಮ ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕಾದ ಹೊಣೆಗಾರಿಕೆ ಸರಕಾರದ್ದಲ್ಲ, ಜನರದ್ದು.
ನಾವು ಮಾಡಿದ ಹೊಲಸನ್ನು ಸರಕಾರ ತೆಗೆದು ಸ್ವಚ್ಛಗೊಳಿಸಬೇಕು ಎಂದು ಯೋಚಿಸುವುದೇ ಸರಿಯಲ್ಲ ಎಂದು ಆತ ಹೇಳುತ್ತಾನೆ.
ಜಪಾನಿನಲ್ಲಿ ಬೀದಿ ಚೊಕ್ಕವಾಗಿರಲು ತಂತ್ರeನ, ಸಂಪ್ರದಾಯ ಮತ್ತು ಸ್ವಚ್ಛತೆಗೆ ಆ ದೇಶ ನೀಡಿದ ಮಹತ್ವವೇ ಕಾರಣ. ಜಪಾನ್ ಈ ಮೂರು ಸಂಗತಿಗಳ ಸಂಗಮವಾಗಿರುವುದನ್ನು ಗುರುತಿಸಬಹುದು. ಗದ್ದಲದ ನಗರಗಳಿಂದ ಶಾಂತವಾದ ಉಪನಗರ ಪ್ರದೇಶ ಗಳವರೆಗೆ, ಜಪಾನ್ ರಸ್ತೆ ಶುಚಿಗೊಳಿಸುವ ವಿಷಯದಲ್ಲಿ ನವೀನ ವಿಧಾನಗಳನ್ನು ಅಭಿವೃದ್ಧಿಪಡಿಸಿದೆ. ಅದು ಆದೇಶ ಮತ್ತು ದಕ್ಷತೆಯ ಸಾಂಸ್ಕೃತಿಕ ಗೌರವವನ್ನು ಪ್ರತಿಬಿಂಬಿಸುತ್ತದೆ.
ಜಪಾನಿನ ಸ್ವಚ್ಛತೆ ಕೇವಲ ಆಧುನಿಕ ವಿದ್ಯಮಾನವಲ್ಲ. ಇದು ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಅಲ್ಲಿನ ಬೀದಿಗಳಲ್ಲಿ
ಯಂತ್ರಗಳಲ್ಲಿ ಸ್ವಚ್ಛಗೊಳಿಸುವವರ ಹಾಗೆಯೇ, ಕೈಯಲ್ಲಿ ಗುಡಿಸುವವರನ್ನೂ ಕಾಣಬಹುದು. ಈ ಕಸ ಗುಡಿಸುವ ಯಂತ್ರಗಳು
ಅತ್ಯಾಧುನಿಕ ತಂತ್ರeನವನ್ನು ಅಳವಡಿಸಿಕೊಂಡಿವೆ. ಧೂಳಿನ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸುಧಾರಿತ ಶೋಧನೆ
ವ್ಯವಸ್ಥೆಗಳನ್ನು ಒಳಗೊಂಡಂತೆ, ಜಪಾನಿನ ಪರಿಸರ ಆ ಆಶಯಕ್ಕೆ ಹೊಂದಿಕೆಯಾಗುತ್ತದೆ. ಅಂಗಡಿಯವರು ಮತ್ತು ನೆರೆಹೊರೆಯ
ನಿವಾಸಿಗಳು ಸೇರಿದಂತೆ ನಾಗರಿಕರು, ಸ್ವಚ್ಛವಾದ ಬೀದಿಗಳನ್ನು ನಿರ್ವಹಿಸಲು ಸಮುದಾಯದ ಪ್ರಯತ್ನಗಳಲ್ಲೂ ಆಗಾಗ
ಪಾಲ್ಗೊಳ್ಳುವುದು ಸಹಜ.
ಜಪಾನಿನಲ್ಲಿ ಬೀದಿ ಗುಡಿಸುವವರು ಬೀದಿಗಳನ್ನು ಸ್ವಚ್ಛವಾಗಿಡುವ ಸಂಗತಿಗಿಂತ ಇನ್ನೂ ಹೆಚ್ಚಿನದನ್ನು ಸಂಕೇತಿಸುತ್ತಾರೆ.
ಅವರು ನಿಖರತೆ, ದಕ್ಷತೆ ಮತ್ತು ಪರಿಸರ ನಿರ್ವಹಣೆ ಎಂಬ ಜಪಾನಿನ ಅನನ್ಯ ಮೌಲ್ಯಗಳನ್ನು ಪ್ರತಿನಿಧಿಸುತ್ತಾರೆ. ಪ್ರಪಂಚ
ದಾದ್ಯಂತದ ನಗರಗಳು ಶುಚಿತ್ವ ಮತ್ತು ಸುಸ್ಥಿರತೆಯನ್ನು ಸುಧಾರಿಸಲು ಪ್ರಯತ್ನಿಸುತ್ತಿರುವಾಗ, ರಸ್ತೆ ಗುಡಿಸುವ ಜಪಾನಿನ
ವಿಧಾನವು ಇತರ ದೇಶಗಳಿಗೆ ಅನುಸರಿಸಲು ಮಾದರಿಯಾಗಿ ಕಾರ್ಯನಿರ್ವಹಿಸುತಿರುವುದು ಗಮನಾರ್ಹ. ಜಪಾನಿನಲ್ಲಿ ಸ್ವಚ್ಛತೆಯ ಪಾಠವನ್ನು ಮಕ್ಕಳಿಗೆ ಸಣ್ಣವರಿರುವಾಗಲೇ, ಮನೆ ಮತ್ತು ಶಾಲೆಗಳಲ್ಲಿ ಕಲಿಸುತ್ತಾರೆ. ಅಷ್ಟೇ ಅಲ್ಲ, ಆಗಾಗ ಸ್ಪೋಗೋಮಿ ವಿಶ್ವಕಪ್ (SpoGomi World Cup) ಎಂಬ ಸ್ವರ್ಧೆಯನ್ನು ಸಂಘಟಿಸಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಇದು ಕಸ ಹೆಕ್ಕುವ ಕ್ರೀಡೆ. ಸಾರ್ವಜನಿಕ ಸ್ಥಳಗಳಲ್ಲಿ ಯಾರು ಹೆಚ್ಚು ಕಸವನ್ನು ಆಯುತ್ತಾರೋ, ಆತನೇ ವಿಜಯಿ. ಆತನಿಗೆ ಕಪ್ ನೀಡಿ ಗೌರವಿಸಲಾಗುತ್ತದೆ. ಈ ಕ್ರೀಡೆಯಲ್ಲಿ ಇಪ್ಪತ್ತು-ಐವತ್ತು ಜನರುಳ್ಳ ತಂಡಗಳೂ ಭಾಗವಹಿಸುವುದುಂಟು.
ಟೋಕಿಯೋದ ಬಹಳಷ್ಟು ಕಂಪನಿಗಳಲ್ಲಿ ಆಫೀಸನ್ನು ಅಲ್ಲಿನ ಸಿಬ್ಬಂದಿಯೇ ಸ್ವಚ್ಛಗೊಳಿಸುತ್ತಾರೆ. ಕಂಪನಿಯ ಮುಖ್ಯಸ್ಥ
ಟಾಯ್ಲೆಟ್ ನಿಂದ ಹಿಡಿದು, ತನ್ನ ಕೋಣೆಯನ್ನೂ ಸ್ವಚ್ಛಗೊಳಿಸಿಕೊಳ್ಳುತ್ತಾನೆ. ಅದಕ್ಕೆಂದೇ ಪ್ರತ್ಯೇಕ ವಿಭಾಗವಿಲ್ಲ. ಜನರು
ತಮ್ಮನ್ನು ತಾವು ಸ್ವಚ್ಛಗೊಳಿಸಬೇಕೆಂದು ಅವರು ಬಯಸುತ್ತಾರೆ ಎಂಬುದು ಇದಕ್ಕೆ ಕಾರಣ. ಜಪಾನಿಯರು ತಮ್ಮ ಸುತ್ತ ಸಾಕಷ್ಟು
ಕಸದ ತೊಟ್ಟಿಗಳನ್ನು ಇಟ್ಟಿರುವುದಿಲ್ಲ. ಬಹಳಷ್ಟು ಕಸದ ಡಬ್ಬಿಗಳಿದ್ದರೆ, ಎಲ್ಲಿ ಬೇಕಾದರೆ ಅಲ್ಲಿ, ಮನಸೋ ಇಚ್ಛೆ ಎಲ್ಲ ಕಸವನ್ನು
ಎಸೆಯುವಂತೆ ಪ್ರೇರೇಪಿಸುತ್ತದೆ. ಆದರೆ ಯಾವುದೇ ಕಸದ ಡಬ್ಬಿಗಳನ್ನು ಹೊಂದಿಲ್ಲದಿದ್ದರೆ, ಅಕ್ಷರಶಃ ನಮ್ಮ ಕೈಯಲ್ಲಿಯೇ
ಕಸವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳಬೇಕಲ್ಲ? ದುರ್ನಾತ ಬೀರುವ ಕಸವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾ ಗುವುದರಿಂದ ಅಂಥ ಆಹಾರ ತ್ಯಾಜ್ಯವನ್ನು ತರುವ ಸಾಧ್ಯತೆ ಕಡಿಮೆ.
ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡಲು ಕಸವನ್ನು ಆರಿಸಲು ‘ಸಮುರೈ ಸ್ಟ್ರೀಟ್ ಕ್ಲೀನರ್ಸ್’ ಎಂಬ ತಂಡವೂ ಇದೆ. ಈ ಕಾರ್ಯತಂಡ ಟೋಕಿಯೋದ ಬೀದಿಗಳನ್ನು ಸ್ವಚ್ಛಗೊಳಿಸಲು ಕಸವನ್ನು ಆರಿಸುವ ಸಾಧನವಾಗಿ ಸಮುರೈ ಕತ್ತಿಗಳನ್ನು ಬಳಸುತ್ತದೆ. ಅವರು ತಮ್ಮ ಬೆನ್ನಿನ ಮೇಲೆ ಕಸದ ಪೆಟ್ಟಿಗೆಗಳನ್ನು ಒಯ್ಯುತ್ತಾರೆ. ಆ ಪೆಟ್ಟಿಗೆಗಳಲ್ಲಿ 45 ಲೀಟರುಗಳಷ್ಟು ಕಸವನ್ನು ಹಿಡಿದಿಟ್ಟುಕೊಳ್ಳಬ
ಹುದು. ಜಪಾನಿನಲ್ಲಿ ಇದ್ದಷ್ಟು ಹೊತ್ತು ಸುಂದರ ಪರಿಸರದಲ್ಲಿ, ಸುಂದರ ತಾಣದಲ್ಲಿ, ಸುಂದರ ಮನಸ್ಸಿನ ಜನರೊಂದಿಗೆ ಇದ್ದೀರಿ
ಎಂಬ ಭಾವನೆ ಮೂಡುತ್ತದೆ ಎಂಬುದು ಅತಿಶಯೋಕ್ತಿಯಲ್ಲ.
ನಮ್ಮ ದೇಶದಲ್ಲಿ ಕಸ ಯಾರ ಸ್ವತ್ತೂ ಅಲ್ಲ. ಅದನ್ನು ತೆಗೆಯುವ ಹೊಣೆಗಾರಿಕೆ ಬೇರೆಯವರದ್ದೇ ಹೊರತು ನಮ್ಮದಲ್ಲ. ಆದರೆ
ಜಪಾನಿನಲ್ಲಿ ಕಸ ಪ್ರತಿಯೊಬ್ಬನ ಸ್ವತ್ತು. ಎಲ್ಲರೂ ತಮ್ಮ ಕಸವನ್ನು ತಾವೇ ತೆಗೆದು ಸ್ವಚ್ಛಗೊಳಿಸುತ್ತಾರೆ. ಬೇರೆಯವರ ಕಸ ಕಂಡರೆ,
ಅದನ್ನು ತೆಗೆಯುವುದೂ ತಮ್ಮದೇ ಜವಾಬ್ದಾರಿ ಎಂದು ಭಾವಿಸುತ್ತಾರೆ. ನಮ್ಮ ದೇಶದಲ್ಲಿ ಪೌರ ಕಾರ್ಮಿಕರ ಜತೆಗೆ ಹೆಚ್ಚೆಂದರೆ ಆಮ್
ಆದ್ಮಿ ಪಕ್ಷದ ಕಾರ್ಯಕರ್ತರು ಸಾರ್ವಜನಿಕವಾಗಿ ಪೊರಕೆ ಹಿಡಿಯಬಹುದು. ಆದರೆ ಜಪಾನಿನಲ್ಲಿ ಎಲ್ಲರೂ ಜಾಡಮಾಲಿಗಳಾಗಲು ಸಿದ್ಧರಿರಬೇಕು!
ಆತ್ಮಹತ್ಯೆ: ದಂಡ ಯಾರಿಗೆ?
ಜಪಾನಿನ ರಾಜಧಾನಿ ಟೋಕಿಯೊದಲ್ಲಿದ್ದಷ್ಟು ಹೊತ್ತು, ಟ್ರೇನಿನ ಸದ್ದಿನಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ರಾತ್ರಿ ಹನ್ನೆರಡರಿಂದ
ಬೆಳಗಿನ ಜಾವ ಐದರ ತನಕ ಆ ಸದ್ದಿನ ಅಂತರ ಜಾಸ್ತಿಯಾಗಬಹುದಷ್ಟೆ. ಟೋಕಿಯೋದಲ್ಲಿ ಒಂದು ಡಜನ್‌ಗಿಂತ ಜಾಸ್ತಿ ಬೇರೆ ಬೇರೆ ರೈಲು ಮಾರ್ಗಗಳಿರಬಹುದು ಮತ್ತು ಅದಕ್ಕೆ ತಕ್ಕ ರೈಲುಗಳಿರಬಹುದು. ಆ ಪೈಕಿ ಯಮನೊತೆ ಲೈನಿನಲ್ಲಿ ಪ್ರತಿ ಎರಡು ನಿಮಿಷಗಳಿಗೊಮ್ಮೆ ಟ್ರೇನು ಹಾದು ಹೋಗುತ್ತಿರುತ್ತದೆ. ಈ ಮಾರ್ಗದಲ್ಲಿ ಸಂಚರಿಸುವ ಟ್ರೇನು ನೂರಕ್ಕೂ ಹೆಚ್ಚು ನಿಲ್ದಾಣಗಳನ್ನು ಬಳಸಿ ಹೋಗುವಾಗ ದಿನದಲ್ಲಿ ಕನಿಷ್ಠ ಮೂವತ್ತು ಲಕ್ಷ ಜನರನ್ನು ಹೇರಿಕೊಂಡು ಹೋಗುವುದು ಸಣ್ಣ ಸಂಗತಿಯಲ್ಲ. ಇನ್ನು ಬೇರೆ ಬೇರೆ ಟ್ರೇನುಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯನ್ನು ಲೆಕ್ಕ ಹಾಕಿದರೆ, ಅದು ಐವತ್ತು-ಅರವತ್ತು ಲಕ್ಷ ದಾಟಬಹುದು. ಟೋಕಿಯೋದ ಯಾವ ಭಾಗದಲ್ಲಿದ್ದರೂ ಟ್ರೇನಿನ ಸದ್ದು ಹಿನ್ನೆಲೆ ಸಂಗೀತದಂತೆ ಕೇಳುತ್ತಲೇ ಇರುವುದು ಸುಳ್ಳಲ್ಲ.
ಟೋಕಿಯೋದಲ್ಲಿ ನಾನು ತಂಗಿದ್ದ ಹೋಟೆಲಿನ ಸನಿಹದಲ್ಲಿಯೇ ರೈಲುಮಾರ್ಗ ಹಾದುಹೋಗಿತ್ತು. ಪ್ರತಿ ಎರಡು ನಿಮಿಷಕ್ಕೊಮ್ಮೆ ರೈಲಿನ ಸದ್ದು ಕಿರಿಕಿರಿಯನ್ನುಂಟು ಮಾಡಿದರೂ, ಕ್ರಮೇಣ ಅದಕ್ಕೆ ಹೊಂದಿಕೊಂಡಿದ್ದೆ. ಟೋಕಿಯೋದಲ್ಲಿ ಇದ್ದಷ್ಟು ಹೊತ್ತು ಟ್ರೇನಿನ ಸಪ್ಪಳ ಕೇಳಿಸದಿದ್ದರೆ ಜನಜೀವನ ಅಸ್ತವ್ಯಸ್ತವಾಗಿದೆ ಎಂದೇ ಅರ್ಥ. ಅದು ಕೇಳಿಸುತ್ತಿದ್ದರೇ ಸಮಾಧಾನ. ನಮ್ಮ ದೇಶದಲ್ಲಿರುವಂತೆ, ಜಪಾನಿನಲ್ಲೂ ರೈಲು ಬರುತ್ತಿರುವಾಗ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದುಂಟು. ಆದರೆ ಇಂಥ ಘಟನೆ ಇತ್ತೀಚಿನ ದಿನಗಳಲ್ಲಿ ತೀರಾ ವಿರಳ. ಇದಕ್ಕೆ ಕಾರಣ, ಯಾರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ, ಅಂಥವರ ಕುಟುಂಬ ವರ್ಗದವರು ರೈಲು ಇಲಾಖೆಗೆ ದಂಡ ಪಾವತಿಸಬೇಕು. ಹೀಗಾಗಿ ಆತ್ಮಹತ್ಯೆಗೆ ಆಲೋಚಿಸುವವರು, ತಮ್ಮ ಕೃತ್ಯದಿಂದಾಗಿ ಬದುಕಿದ್ದವರನ್ನು ತೊಂದರೆಗೆ ಸಿಲುಕಿಸುವುದು ಬೇಡ ಎಂಬ ಕಾರಣಕ್ಕೆ ರೈಲು ಹಳಿಗಳ ಮೇಲೆ ಬಿದ್ದು ಆತ್ಮಹತ್ಯೆಗೆ ಮುಂದಾಗುವುದಿಲ್ಲ.
ಈ ಕಾನೂನು ಜಾರಿಗೆ ತಂದ ನಂತರ, ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕಮ್ಮಿಯಾಗಿದೆಯಂತೆ. ಅಷ್ಟಾಗಿಯೂ ಆತ್ಮಹತ್ಯೆಗೆ ಮುಂದಾಗುವವರು ಹೆಚ್ಚಿನ ಸಂದರ್ಭಗಳಲ್ಲಿ ತೀವ್ರ ಖಿನ್ನತೆಗೆ ಒಳಗಾಗಿ ಒಬ್ಬಂಟಿ ಜೀವನ ಸಾಗಿಸುವವರಾಗಿರುತ್ತಾರೆ.
ಸೃಜನಶೀಲ ನಗರ
ಜಗತ್ತಿನಲ್ಲಿಯೇ ಟೋಕಿಯೋವನ್ನು ಅತ್ಯಂತ ವಿಭಿನ್ನ ಮತ್ತು ಸೃಜನಶೀಲ ನಗರ ಎಂದು ಕರೆಯುತ್ತಾರೆ. ಟೋಕಿಯೋಕ್ಕೆ ಮಾತ್ರ ಈ ವಿಶೇಷ ‘ಹಣೆಪಟ್ಟಿ’ ಏಕೆ ಎಂದು ಯಾರಿಗಾದರೂ ಅನಿಸದಿರದು. ಟೋಕಿಯೋ ನಗರದಲ್ಲಿ ಒಂದು ಪ್ರದೇಶ ಅಥವಾ ಒಂದು ಬಡಾವಣೆ ಇದ್ದ ಹಾಗೆ ಮತ್ತೊಂದಿಲ್ಲ. ಪ್ರತಿಯೊಂದೂ ಭಿನ್ನ.
ಟೋಕಿಯೋದಲ್ಲಿ ಹರಾಜುಕು ಎಂಬ ಪ್ರದೇಶವಿದೆ. ಅಲ್ಲಿ ಹೆಚ್ಚಾಗಿ ಯುವ ಜನರನ್ನು ಕಾಣಬಹುದು. ಅಲ್ಲಿ ವಾಸಿಸುವವರ ಪೈಕಿ ಶೇ.80ರಷ್ಟು ಮಂದಿ, 45 ವರ್ಷಕ್ಕಿಂತ ಕಮ್ಮಿ ವಯಸ್ಸಿನವರು. ಆ ಪ್ರದೇಶವನ್ನು ಅತ್ಯಂತ fashionable ಅಂತಲೂ
ಕರೆಯುತ್ತಾರೆ. ಹಾಗೆ ಮುಂದಕ್ಕೆ ಹೋದರೆ, ಶಿಂಜುಕು ಎಂಬ ಪ್ರದೇಶವಿದೆ. ಅಲ್ಲಿ ವಾಸಿಸುವವರಲ್ಲಿ 60 ವರ್ಷ ದಾಟಿದವರ
ಸಂಖ್ಯೆ ಹೆಚ್ಚು. ಅಲ್ಲಿ ದುಬಾರಿ ಅಂಗಡಿಗಳ ಸಂಖ್ಯೆಯೂ ಹೆಚ್ಚು. ಹಾಗೇ ಮುಂದಕ್ಕೆ ಹೋದರೆ ಶಿನ್-ಒಕುಬೊ ಎಂಬ ಪ್ರದೇಶ
ಸಿಗುತ್ತದೆ. ಅಲ್ಲಿ ವಾಸಿಸುವವರಲ್ಲಿ ಹೆಚ್ಚಿನವರು ಕೊರಿಯಾ ಮೂಲದವರು. ಯಾರನ್ನು ನೋಡಿದರೂ ಒಂದೇ ರೀತಿ ಕಾಣುತ್ತಾರೆ. ಅಲ್ಲಿ ನಾವೇನಾದರೂ ತಪ್ಪಿಸಿಕೊಂಡರೆ ಹುಡುಕುವುದು ಸುಲಭ. ಹಾಗೇ ಸುಗಮೋ ಎಂಬ ಇನ್ನೊಂದು ಪ್ರದೇಶವಿದೆ.
ಅಲ್ಲಿ ೭೦-೮೦ ವರ್ಷ ಮೇಲ್ಪಟ್ಟ ಅಜ್ಜ-ಅಜ್ಜಿಯರೇ ಕಾಣುತ್ತಾರೆ. ಅಂದ ಹಾಗೆ ಅಲ್ಲಿನ ಒಂದು ಬೀದಿಯಲ್ಲಿ ಬರೀ ಊರುಗೋಲು (ವಾಕಿಂಗ್ ಸ್ಟಿಕ್) ಮತ್ತು ವಿಗ್ ಅಂಗಡಿಗಳೇ ಕಾಣುತ್ತವೆ. ಶಿಮೊಕೀಟಜವಾ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾಜ್ ಕ್ಲಬ್‌ಗಳಿವೆ ಮತ್ತು ಸೆಕೆಂಡ್ ಹ್ಯಾಂಡ್ ಬಟ್ಟೆ ಅಂಗಡಿಗಳಿವೆ. ಕೊಎನ್ಜಿ ಎಂಬ ಪ್ರದೇಶದಲ್ಲಿ 10-20 ಮಂದಿಯನ್ನು ಕುಳ್ಳಿರಿಸಿಕೊಂಡು, ಅವರ ಮನರಂಜನೆಗೆ ಹಾಡುವ ಸಂಗೀತಗಾರರು ಕಾಣುತ್ತಾರೆ. ಇಬ್ಬರು-ಮೂವರು ಕೇಳುಗರಿದ್ದರೂ ಸಾಕು, ಅಂದು ಪುಟ್ಟ ಸಂಗೀತಗೋಷ್ಠಿ ಏರ್ಪಟ್ಟಿರುತ್ತದೆ.
ಇಂಥ ಗುಣವಿಶೇಷವುಳ್ಳವರು, ಇಂಥದೇ ಪ್ರದೇಶದಲ್ಲಿ ವಾಸಿಸಬೇಕು ಎಂದು ಯಾರು ನಿರ್ಧರಿಸುತ್ತಾರೋ ಎಂಬ ಸೋಜಿಗದ ಪ್ರಶ್ನೆ ಪ್ರತಿ ಬಡಾವಣೆಗೆ ಹೋದಾಗಲೂ ಮೂಡುತ್ತದೆ. ಪ್ರತಿ ಬಡಾವಣೆಯೂ ಒಂದಿಂದು ಕಾರಣಕ್ಕೆ ಹೆಸರುವಾಸಿಯಾಗಿರುವುದು ವಿಶೇಷ. ಪ್ರಾಯಶಃ ಈ ಕಾರಣಕ್ಕೇ ಇರಬೇಕು, ಟೋಕಿಯೋವನ್ನು ‘ಸೃಜನಶೀಲ ನಗರ’ ಎಂದು ಕರೆಯುವುದು.
ನಿರಂತರ ಬದಲಾವಣೆಯ ನಗರ
25-30 ವರ್ಷಗಳ ಹಿಂದೆ, ನೀವು ಲಂಡನ್ನಿನ ಬೀದಿಯಲ್ಲಿ ಓಡಾಡಿದ್ದರೆ, ಈಗ ಅಲ್ಲಿ ತಿರುಗುವಾಗ ಹೆಚ್ಚಿನ ವ್ಯತ್ಯಾಸಗಳೇನೂ
ಕಾಣುವುದಿಲ್ಲ. ಅಲ್ಲಿ ಹೊಸ ಕಟ್ಟಡಗಳು ತಲೆಯೆತ್ತಿರುವ ಸಾಧ್ಯತೆ ತೀರಾ ಕಮ್ಮಿ. ರಸ್ತೆಯ ರೂಪ ಬದಲಾಗಿರುವ ಸಾಧ್ಯತೆಯೂ
ಕಮ್ಮಿ. ಅದರಲ್ಲೂ ಲಂಡನ್‌ನ ಪಾರ್ಲಿಮೆಂಟ್ ಸ್ಟ್ರೀಟ್, ಬಿಗ್ ಬೆನ್ ಗಡಿಯಾರ ಪ್ರದೇಶ, ಟ್ರಫಲಗರ್ ವೃತ್ತಕ್ಕೆ ಹೋಗುವ
ದಾರಿ, ಕಳೆದ ಕಾಲು ಶತಮಾನಗಳಿಂದ ಹೇಗಿವೆಯೋ, ಇಂದಿಗೂ ಹಾಗೇ ಇವೆ. ಆ ಬೀದಿಗಳಲ್ಲಿದ್ದ ಕೆಂಪು ಟೆಲಿಫೋನ್ ಬೂತ್
ಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ, ಅದರೊಳಗೆ ಈಗ ಟೆಲಿಫೋನ್ ಇಲ್ಲದಿದ್ದರೂ. ಅಷ್ಟರಮಟ್ಟಿಗೆ ಬ್ರಿಟಿಷರು ಸ್ಥಿರತೆಯನ್ನು ಕಾಪಾಡಿಕೊಂಡಿದ್ದಾರೆ. ಈ ಮಾತಿಗೆ ಜಪಾನಿಯರು ಸರಿ ವಿರುದ್ಧ. ಒಂದು ವರ್ಷದ ಹಿಂದೆ ಟೋಕಿಯೋ ನಗರಕ್ಕೆ ಬಂದವರಿಗೆ ಎಲ್ಲವೂ ಹೊಸತು ಎಂಬ ಭಾವನೆ ಮೂಡಿದರೆ ಅಚ್ಚರಿಯಿಲ್ಲ. ಕಾರಣ ಟೋಕಿಯೋ ನಿರಂತರವಾಗಿ ಬದಲಾಗುತ್ತಲೇ ಬಂದಿದೆ. ಟೋಕಿಯೋ ದಲ್ಲಿ 1981ಕ್ಕಿಂತ ಹಿಂದೆ ಕಟ್ಟಿದ ಕಟ್ಟಡಗಳನ್ನು ಕಾಣುವುದು ಸಾಧ್ಯವಿಲ್ಲ.
ಕಾರಣ 1981ರಲ್ಲಿ ಕಟ್ಟಡ ನಿರ್ಮಾಣ ನಿಯಮವನ್ನು ಸಂಪೂರ್ಣ ಬದಲಾಯಿಸಲಾಯಿತು. ಭೂಕಂಪದ ಹೊಡೆತಗಳನ್ನು ತಡೆದುಕೊಳ್ಳಲು ಕಟ್ಟಡ ನಿರ್ಮಾಣ ನಿಯಮಗಳಿಗೆ ಸಾಕಷ್ಟು ತಿದ್ದುಪಡಿ ತರಲಾಯಿತು. ಅದು ಅನಿವಾರ್ಯವೂ ಆಗಿತ್ತು.
ಸಾಮಾನ್ಯವಾಗಿ ಪ್ರತಿ ಎರಡು-ಮೂರು ವರ್ಷಗಳ ಅವಧಿಯಲ್ಲಿ ಟೋಕಿಯೋದ ಬೀದಿಗಳು ಹೊಸ ರೂಪ ಪಡೆಯುತ್ತವೆ.
ಜಗತ್ತಿನಲ್ಲಿಯೇ ಅತಿ ಹೆಚ್ಚು ಜಗಮಗಿಸುವ ನಿಯಾನ್ ಫಲಕಗಳು ಮತ್ತು ದೀಪಗಳುಳ್ಳ ‘ಶಿಬುಯಾ ಪ್ರದೇಶ’ ಪ್ರತಿ ಎರಡು
ವರ್ಷಗಳಿಗೊಮ್ಮೆ ತನ್ನ ಖದರನ್ನೇ ಪೂರ್ತಿ ಬದಲಿಸಿಕೊಳ್ಳುತ್ತದೆ.
ಎರಡು ವರ್ಷ ಬಿಟ್ಟು ಅಲ್ಲಿಗೆ ಹೋದರೆ, ಯಾವುದೋ ಅಪರಿಚಿತ ಸ್ಥಳಕ್ಕೆ ಅಥವಾ ಸಂಪೂರ್ಣ ಹೊಸ ಪ್ರದೇಶಕ್ಕೆ ಭೇಟಿ
ನೀಡಿದ ಅನುಭವವಾಗುವಷ್ಟು ಬದಲಾಗಿರುತ್ತದೆ. ತಮ್ಮ ದೇಶ ಆಗಾಗ ಪ್ರಾಕೃತಿಕ ದುರಂತಗಳಿಗೆ ತುತ್ತಾಗುವುದರಿಂದ, ಯಾವುದೂ ಶಾಶ್ವತ ಅಲ್ಲ ಎಂಬ ಭಾವನೆ ಜಪಾನಿಯರಲ್ಲಿದೆ. ಹೀಗಾಗಿ ಎಲ್ಲವೂ ಹೊಸ ಹೊಸ ಸ್ವರೂಪದಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಅವರ ಯೋಚನೆಯಲ್ಲಿ ಅಂತರ್ಗತವಾಗಿರುವ ಅಂಶ. ಟೋಕಿಯೋದಲ್ಲಿ ಒಂದು ಕಟ್ಟಡದ ಸರಾಸರಿ ಜೀವಿತ ಅವಽ ೪೦ ವರ್ಷ ಅಥವಾ ಅದಕ್ಕಿಂತ ಕಮ್ಮಿ. ಯಾರಾದರೂ ‘ನಾನು 15 ವರ್ಷಗಳ ಹಿಂದೆ ಟೋಕಿಯೋಕ್ಕೆ ಹೋಗಿದ್ದೆ’ ಅಂತ ಹೇಳಿದರೆ, ಈಗ ಆ ಟೋಕಿಯೋ ಅಸ್ತಿತ್ವದಲ್ಲಿ ಇಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲು ಅಸಾಧ್ಯವಾಗಬಹುದು. ಟೋಕಿಯೋದಲ್ಲಿ ಸ್ಥಿರವಾಗಿರುವುದು ನಿರಂತರ ಬದಲಾವಣೆಯೊಂದೇ.
ಕಾರಿನ ಹಂಗಿಲ್ಲ
ಸ್ವಂತ ಕಾರು ಇಲ್ಲದೆ ಅಮೆರಿಕದ ಯಾವ ನಗರದಲ್ಲೂ ಇರಲು ಸಾಧ್ಯವಿಲ್ಲ. ಹೀಗಾಗಿ ಅಮೆರಿಕಕ್ಕೆ ಹೋದವರು ಎಲ್ಲಕ್ಕಿಂತ ಮುನ್ನ
ಹೇಗಾದರೂ ಮಾಡಿ ಕಾರನ್ನು ಖರೀದಿಸಲು ಹಣ ಕೂಡಿಡುತ್ತಾರೆ. ಆದರೆ ಟೋಕಿಯೋ ನಗರದಲ್ಲಿ ಕಾರಿನ ಅಗತ್ಯವೇ ಕಂಡು
ಬರುವುದಿಲ್ಲ. ಸಾರ್ವಜನಿಕ ಸಾರಿಗೆ (Public transport) ವ್ಯವಸ್ಥೆ ಅಷ್ಟು ಅಚ್ಚುಕಟ್ಟಾಗಿದೆ. ಅದು ಜಗತ್ತಿನಲ್ಲಿಯೇ ಅತ್ಯುತ್ತಮ ಎಂದು ಹೇಳಬಹುದು. ಟ್ರೇನು ಮತ್ತು ಬಸ್ಸು ಸಂಪರ್ಕ ಅದೆಷ್ಟು ವ್ಯವಸ್ಥಿತವಾಗಿದೆಯೆಂದರೆ, ಯಾವ ಪ್ರದೇಶ ಅಥವಾ ಕಟ್ಟಡವನ್ನು ತಲುಪಲೂ ಮುನ್ನೂರು ಮೀಟರಿಗಿಂತ ಹೆಚ್ಚು ನಡೆಯಬೇಕಿಲ್ಲ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನೀವು ಸ್ವಂತ ಕಾರಿನಲ್ಲಿ ಹೋಗುವುದಕ್ಕಿಂತ ಬೇಗ, ಟ್ರೇನು ಅಥವಾ ಬಸ್ಸಿನಲ್ಲಿ ಹೋಗಿ ತಲುಪಬಹುದು. ಒಂದು ಅಥವಾ ಎರಡು ಕಿ.ಮೀ. ದೂರ ಕ್ರಮಿಸಲು ಸೈಕಲ್ ವಾಸಿ. ಟೋಕಿಯೋದಲ್ಲಿ ಕಾರು ಖರೀದಿಸುವ ಮುನ್ನ ಪಾರ್ಕಿಂಗ್ ತಾಣವನ್ನು ಖರೀದಿಸುವುದು ಅನಿವಾರ್ಯ. ಇಲ್ಲದಿದ್ದರೆ ಕಾರು ಖರೀದಿಸಲು ಅನುಮತಿ ನೀಡುವುದಿಲ್ಲ. ಈ ಎಲ್ಲ ಉಸಾಬರಿಗೆ ಮದ್ದೆಂದರೆ ಸಾರ್ವಜನಿಕ ಸಾರಿಗೆಗೆ ಶರಣಾಗುವುದು.
ಟೋಕಿಯೋದಲ್ಲಿ ಹತ್ತಾರು ವರ್ಷವಿದ್ದೂ ಸ್ವಂತ ಕಾರು ಖರೀದಿಸದಿರುವ ದೊಡ್ಡ ವರ್ಗವೇ ಇದೆ. ಅವರಿಗೆ ಕಾರಿನ ಅಗತ್ಯವೇ ಕಂಡುಬಂದಿಲ್ಲ. ಸೋಜಿಗವೆಂದರೆ, ಅಲ್ಲಿ ಸ್ವಂತ ಕಾರನ್ನು ಇಟ್ಟುಕೊಳ್ಳುವುದು ಪ್ರತಿಷ್ಠೆಯ ಸಂಕೇತವೂ ಅಲ್ಲ.
ಇದನ್ನೂ ಓದಿ: @vishweshwarbhat