Monday, 16th September 2024

ಅನುಭವಿಸದ ಆಸ್ತಿ, ಚಿತ್ರದಲ್ಲಿರುವ ಭಕ್ಷ್ಯದಂತೆ !

ವಿದೇಶವಾಸಿ

dhyapaa@gmail.com

ಲೌಕಿಕ ವಸ್ತುಗಳಿಗೆ ಹಣ ವ್ಯಯಿಸುವುದು ಅವರಿಗೆ ಮಕ್ಕಳಾಟಿಕೆಯಂತೆ ಕಂಡಿರಬಹುದು. ಅಂಕಿ ಅಂಶಗಳ ಶ್ರೀಮಂತಿಕೆಯೇ ಸಾಧನೆ ಯಂತೆ ಕಂಡಿರಬಹುದು. ಒಂದಂತೂ ಖರೆ, ಅವರು ತಮ್ಮ ಎಲ್ಲ ಸಾಧನೆಗೆ ನಿಜವಾದ ಹಣ ಬಳಸಿದ್ದಕ್ಕಿಂತ ಕಾಗದದ ಮೇಲಿನ ಅಂಕೆ-ಸಂಖ್ಯೆ ಬಳಸಿದ್ದೇ ಹೆಚ್ಚು.

ವಿಶ್ವದ ಅತೀ ಶ್ರೀಮಂತರಲ್ಲಿ ಒಬ್ಬರಾದ ವಾರೆನ್ ಬಫೆಟ್ ಅವರ ಸಂದರ್ಶನ ನೋಡು ತ್ತಿದ್ದೆ. ಸಂದರ್ಶಕಿ ಬಫೆಟ್ ಅವರನ್ನು, ‘ನಿಮ್ಮ ಕಿಸೆಯಲ್ಲಿ ಎಷ್ಟು ಹಣ ಇರುತ್ತದೆ?’ ಎಂದು ಕೇಳಿದಳು. ಬಫೆಟ್ ’ನಾಲ್ಕು ನೂರರಿಂದ ಐದು ನೂರು ಡಾಲರ್ ಎಂದು ಉತ್ತರಿಸಿ ದರು. ಸಂದರ್ಶಕಿ ‘ನೋಡಬಹುದೇ?’ ಎಂದು ಕೇಳಿದಾಗ, ಬಫೆಟ್ ತಮ್ಮ ಜೇಬಿನಿಂದ ಪರ್ಸ್ ತೆಗೆದು ತೋರಿಸಿದರು. ಐದು ನೂರು ರುಪಾಯಿಯ ಮೇಲೆ ಒಂದಷ್ಟು ಬಿಡಿ ನೋಟುಗಳಿದ್ದವು.

ಒಂದೆರಡು ಹೆಚ್ಚುಕಮ್ಮಿ, ಸುಮಾರು ನೂರು ಬಿಲಿಯನ್ ಡಾಲರ್ ತೂಗುವ ವಿಶ್ವದ ಎಂಟನೆಯ ಶ್ರೀಮಂತ ಬ-ಟ್ ಕಿಸೆಯಲ್ಲಿ ಐದುನೂರು ಡಾಲರ್ ಮಾತ್ರ ಎಂದರೆ ನಂಬಲೇಬೇಕು. ಅದೇ ಸಂದರ್ಶನ ದಲ್ಲಿ, ಅವರೇ ಹೇಳುವಂತೆ, ನಿತ್ಯವೂ ಅವರ ಕಿಸೆಯಲ್ಲಿರುವುದು ಅಷ್ಟೇ ಹಣವಂತೆ. ಹೆಚ್ಚಿನ ಹಣ ನೀಡಬೇಕಾದಾಗ ಅವರು ಕ್ರೆಡಿಟ್ ಕಾರ್ಡ್ ಬಳಸುತ್ತಾರಾದರೂ, ಸಣ್ಣ ಪುಟ್ಟ ಖರ್ಚು ಮಾಡುವಾಗ ಅವರು ಹಣ ನೀಡಲು ಇಷ್ಟಪಡುತ್ತಾರಂತೆ.

ನನ್ನ ಕೈಯಾರೆ ಹಣ ನೀಡಿದಾಗ ಸಿಗುವ ಅನುಭವ (ಸಂತೋಷ)ವೇ ಬೇರೆ ಎನ್ನುತ್ತಾರೆ ಬಫೆಟ್. ಅಂದಹಾಗೆ, ವಾರೆನ್ ಬಫೆಟ್ ತಮ್ಮ ಆದಾಯದ ಶೇಕಡಾ ತೊಂಬತ್ತೊಂಬತ್ತರಷ್ಟನ್ನು ಜನಹಿತ ಕಾರ್ಯಗಳಿಗೆ ದಾನ ಮಾಡುವ ವಾಗ್ದಾನ ಮಾಡಿದ್ದಾರೆ. ಬಟ್ಟೆ ವ್ಯಾಪಾರದಿಂದ ಆರಂಭಿಸಿ, ನಂತರ ತನ್ನ ಎಲ್ಲ ಚಾಣಾಕ್ಷತನವನ್ನು ಉಪಯೋಗಿಸಿ, ಕಂಪನಿಗಳಲ್ಲಿ, ಶೇರುಗಳಲ್ಲಿ ಹಣ ಹೂಡಿ, ಮಾರುಕಟ್ಟೆಯ ಏರಿಳಿತ ಗಳನ್ನು ಗಮನಿಸಿ, ನ್ಯಾಯಯುತವಾಗಿಯೇ ಅಧಿಕ ಲಾಭ ಗಳಿಸಿದವರು ಬಫೆಟ್. ಬಹುತೇಕ ಎಲ್ಲ ವ್ಯವಹಾರಗಳನ್ನೂ ಕಾಗದ ಪತ್ರದ ಮುಖೇನವೇ ನಡೆಸಿ, ಕಾಗದದ ಮೇಲಿನ ಬಲಿಷ್ಠ ಸಂಖ್ಯಾಬಲದಿಂದಲೇ ಲೋಕ ವಿಖ್ಯಾತರಾದವರು ಬಫೆಟ್. ಮನೆ ಕಟ್ಟದೇ, ಕಾರ್ಖಾನೆ ಕೊಳ್ಳದೇ, ಜಮೀನು ಖರೀದಿಸದೇ, ಭೌತಿಕವಾಗಿ ಏನನ್ನೂ ಖರೀದಿಸದೇ ಅಥವಾ ಮಾರದೇ, ಕೇವಲ ಕಾಗದ ಪತ್ರದ ಶ್ರೀಮಂತ ಎಂದರೂ ತಪ್ಪಿಲ್ಲ. ಇದಕ್ಕೂ ಬುದ್ಧಿವಂತಿಕೆ ಬೇಕು ಎನ್ನುವುದನ್ನು ಯಾವ ಕಾಲಕ್ಕೂ ತಳ್ಳಿಹಾಕುವಂತಿಲ್ಲ.

ಶೇರು, ಬಾಂಡ್, ಠೇವಣಿ, ಉದ್ದಿಮೆಯಲ್ಲಿ ಪಾಲುದಾರಿಕೆಯ ಕರಾರುಪತ್ರ, ಎಲ್ಲದರಲ್ಲೂ ಶ್ರೀಮಂತರಾದದ್ದು ಕಾಗದದ ಮೇಲೆಯೇ. ಹಾಗೆಯೇ, ದಾನ ಧರ್ಮಕ್ಕೆಂದು ಹಣ ಸಂದಾಯ ಮಾಡುವುದೂ ಕಾಗದದ ಮುಖಾಂತರವೇ. ಅವರ ಹಣದ, ಐಶ್ವರ್ಯದ ಸಂಖ್ಯೆ ಹೆಚ್ಚಾದದ್ದು, ಕಮ್ಮಿ ಯಾದದ್ದು ಎರಡೂ ಕಾಗದದ ಮೇಲೆಯೇ ಎಂಬುದು ಸತ್ಯ.

ಅಷ್ಟು ಶ್ರೀಮಂತರಾದ ಬ-ಟ್ ಇತ್ತೀಚಿನವರೆಗೂ ತಮ್ಮ ಹಳೆಯ ಕಾರನ್ನೇ ಉಪಯೋಗಿಸುತ್ತಿದ್ದರು. ತಮ್ಮ ಹಳೆಯ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಇವೆರಡನ್ನೂ ಅವರು ಬಹಳ ಇಷ್ಟಪಟ್ಟಿರಬಹುದು. ಅವುಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಿರ ಬಹುದು. ಅಥವಾ ಕಾಗದದ ಮೇಲೆ ಅಕ್ಷರದ ರೂಪದಲ್ಲಿರುವ ತಮ್ಮ ಹಣ ಅಥವಾ ಆಸ್ತಿಯ ಸಂಖ್ಯೆಯನ್ನು ಭೌತಿಕವಾದ ಐಷಾರಾಮಿ
ವಸ್ತುವನ್ನಾಗಿ ಬದಲಾಯಿಸದೇ, ಅಂಕಿ ಅಂಶಗಳಿಂದಲೇ ಸಂತೋಷಪಟ್ಟಿರಬಹುದು.

ಲೌಕಿಕ ವಸ್ತುಗಳಿಗೆ ಹಣ ವ್ಯಯಿಸುವುದು ಅವರಿಗೆ ಮಕ್ಕಳಾಟಿಕೆಯಂತೆ ಕಂಡಿರಬಹುದು. ಅಂಕಿ ಅಂಶಗಳ ಶ್ರೀಮಂತಿಕೆಯೇ ಸಾಧನೆ ಯಂತೆ ಕಂಡಿರಬಹುದು. ಒಂದಂತೂ ಖರೆ, ಅವರು ತಮ್ಮ ಎಲ್ಲ ಸಾಧನೆಗೆ ನಿಜವಾದ ಹಣ ಬಳಸಿದ್ದಕ್ಕಿಂತ ಕಾಗದದ ಮೇಲಿನ ಅಂಕೆ-ಸಂಖ್ಯೆ ಬಳಸಿದ್ದೇ ಹೆಚ್ಚು.

ಇರಲಿ, ಒಬ್ಬ ಉದ್ಯಮಿ ಅಥವಾ ವ್ಯಾಪಾರಸ್ಥ ಅಥವಾ ಒಬ್ಬ ವ್ಯವಸ್ಥಾಪಕ, ಬಹುತೇಕ ಕಾರ್ಯ ನಿರ್ವಹಿಸುವುದು ತನ್ನ ಕಚೇರಿಯಿಂದ. ತನ್ನ ಉದ್ದಿಮೆಗೆ ಸಂಬಂಧಪಟ್ಟ ಪ್ರಕಟಣೆ ಹೊರಡಿಸುವುದು, ವರದಿ ನೋಡುವುದು, ಮುಂದಿನ ಗುರಿಯನ್ನು ಪಟ್ಟಿಮಾಡುವುದು, ಹಿಂದಿನ ಚಟುವಟಿಕೆಗಳನ್ನು ನೋಡುವುದು, ಆದಾಯ ಹೆಚ್ಚಿಸಲು ಬೇಕಾದ ಯೋಜನೆ ಮಾಡುವುದು, ಎಲ್ಲವೂ ತಾನು ಕುಳಿತ ಕಚೇರಿಯಿಂದ. ಹಣವನ್ನು ಯಾವ ಸಂದ ರ್ಭದಲ್ಲಿ ಹೇಗೆ, ಎಷ್ಟು, ಖರ್ಚುಮಾಡಬೇಕು, ಎಲ್ಲಿ, ಎಷ್ಟೆಷ್ಟು ತೊಡಗಿಸಬೇಕು, ಖರ್ಚನ್ನು ಹೇಗೆ
ಕಡಿತಗೊಳಿಸಬೇಕು, ತೆರಿಗೆಯನ್ನು ಹೇಗೆ ತಪ್ಪಿಸಬೇಕು ಎಂಬ ವಿಚಾರ ಮಾಡುವುದೂ ಆಫೀಸಿನಲ್ಲಿಯೇ.

ಹೀಗೆ ಒಂದೇ ಸ್ಥಳದಲ್ಲಿ ಕುಳಿತು, ಕಾಗದದ ಮೇಲೆ ಬರೆದ ಅಂಕಿ ಅಂಶಗಳನ್ನು ಬಲಪಡಿಸುವಲ್ಲಿ ಸ-ಲನಾದರೆ ಖುಷಿಪಡುತ್ತಾನೆ. ಸಂಖ್ಯಾಬಲ ವೃದ್ಧಿಸಿದರೆ ಸಂತೋಷಪಡುತ್ತಾನೆ. ಆದರೆ ಈ ಎಲ್ಲ ಕ್ರಿಯೆಗಳು ವಾಸ್ತವವಾಗಿ ನಡೆಯುವ ಸಮಯದಲ್ಲಿ ಅಥವಾ ಸ್ಥಳದಲ್ಲಿ ಆತ ಇರುವುದಿಲ್ಲ. ದೈಹಿಕವಾಗಿ ಅಥವಾ ಮಾನಸಿಕವಾಗಿ ತನ್ನನ್ನು ನೇರವಾಗಿ ತೊಡಗಿಸಿಕೊಳ್ಳುವುದಿಲ್ಲ. ನಿಜವಾದ ಘಟನೆ ನಡೆಯುವ ಸ್ಥಳದಿಂದ ದೂರವೇ ಇರುತ್ತಾನೆ ಎಂದಾದರೆ, ಒಂದು ರೀತಿಯಲ್ಲಿ ಉಪಯೋಗಿಸದ, ಅನುಭವಿಸದ, ಕೇವಲ ಕಾಗದದ ಮೇಲಿನ
ಸಂಖ್ಯಾಬಲದ ಆಟ ಆಯಿತಲ್ಲ? ನಾವು ನಿಜವಾಗಿ ಅನುಭವಿಸಲು ಆಗದಿದ್ದರೆ ಅದು ಯಾವ ಸೀಮೆಯ ಶ್ರೀಮಂತಿಕೆ? ಬಳಸದ ಆಸ್ತಿ, ಐಶ್ವರ್ಯಗಳು ಕಾಗದದ ಮೇಲಿನ ನಕಾಶೆ ಇದ್ದಂತೆ. ನಕಾಶೆ ತೆರೆದು, ಅದರಲ್ಲಿರುವ ಭೂಪ್ರದೇಶಗಳನ್ನು ನೋಡಿ, ಆ ಪ್ರದೇಶಗಳೆಲ್ಲ ತನ್ನವೆಂದು ಭಾವಿಸಿ, ಅಲ್ಲ ಓಡಾಡಿದಂತೆ.

ನಕಾಶೆಯಲ್ಲಿರುವ ಚಿತ್ರಗಳಾಗಲಿ, ವಸ್ತುಗಳಾಗಲಿ ನಿಜ ವಾದದ್ದಲ್ಲ. ಚಿತ್ರದಲ್ಲಿರುವ ಮರ ನೆರಳು ಕೊಡುವುದಿಲ್ಲ, ಹಕ್ಕಿಗಳು ಸದ್ದು ಮಾಡುವುದಿಲ್ಲ, ಹೂವು ಪರಿಮಳ ಬೀರುವುದಿಲ್ಲ, ಕಾರು ಚಲಿಸುವುದಿಲ್ಲ. ಕಾಗದದ ಮೇಲಿರುವ ಉಡುಗೆಯನ್ನು ತೊಡಲಾಗುವು ದಿಲ್ಲ. ಚಿತ್ರದಲ್ಲಿರುವ ಸುಂದರವಾದ ತಿಂಡಿ-ತಿನಿಸುಗಳ ರುಚಿ ಗೊತ್ತಾಗುವುದಿಲ್ಲ. ಏನೇ ಇದ್ದರೂ ಅದೊಂದು ಕಲ್ಪನೆ ಅಷ್ಟೇ. ಕಾಗದದ ಮೇಲೆ ಎಷ್ಟೇ ವಿಸ್ತಾರವಾಗಿ ವರ್ಣಿಸಿದರೂ ಅದು ಅನುಭವಿಸಿದಂತಲ್ಲ.

ಹೋಳಿಗೆಯನ್ನು ಬೇಕಾದರೆ ಇಪ್ಪತ್ತೈದು ಪುಟದಷ್ಟು ವಿವರಿಸಿ, ಹತ್ತು ಚಿತ್ರ ಹಾಕಿ, ಒಂದು ತುಂಡು ಬಾಯಲ್ಲಿ ಹಾಕಿದಾಗ ಸಿಗುವ ಒಂದು ಅನುಭವ ಆ ಇಪ್ಪತ್ತೈದು ಪುಟಗಳಲ್ಲಿ, ಹತ್ತು ಚಿತ್ರಗಳಲ್ಲಿ ಸಿಗುವುದಿಲ್ಲ. ಕಾಗದದ ಮೇಲಿನ ಆಸ್ತಿಯೂ ಇದಕ್ಕೆ ಹೊರತಲ್ಲ. ಸುಮ್ಮನೆ ಒಂದು ಉದಾಹರಣೆಗೆ ಹೇಳುತ್ತೇನೆ. ಒಬ್ಬ ವ್ಯಕ್ತಿ, ತನಗೆ ನಿಸರ್ಗದ ಮಡಿಲಲ್ಲಿ ಏಕಾಂತದಲ್ಲಿರುವುದು ಇಷ್ಟ ಎಂಬ ಕಾರಣಕ್ಕೆ ಗುಡ್ಡದ ಮೇಲೋ, ನದಿಯ ತೀರದ ಅಥವಾ ಸಮುದ್ರ ತಟದ ಮನೆ ಕಟ್ಟಿಸುತ್ತಾನೆ ಅಂದುಕೊಳ್ಳಿ.

ಆ ಮನೆ ಕಟ್ಟಿಸುವ ಪೂರ್ವದಲ್ಲಿ ಆತ ನಗರದ ಜನಜಂಗುಳಿಯ ಮಧ್ಯದಲ್ಲಿರುವ ಆರ್ಕಿಟೆಕ್ಟ್, ಇಂಜಿನಿಯರ್ ಕಚೇರಿಗೆ ಐವತ್ತು ಬಾರಿ ಹೋಗಿ ಚರ್ಚಿಸುತ್ತಾನೆ. ಐದು ತಿಂಗಳು ಪ್ರತಿ ನಿತ್ಯ ಜನನಿಬಿಡ ಪ್ರದೇಶದಿಂದ ಕೆಲಸಗಾರರನ್ನು ಕರೆತರುತ್ತಾನೆ. ಟ್ರಾಫಿಕ್ ಜಾಮ್‌ನ ನಡುವೆಯೂ ಪ್ರತಿನಿತ್ಯ ಪೇಟೆಗೆ ಹೋಗಿ ಮನೆ ಕಟ್ಟಲು ಬೇಕಾದ ಅವಶ್ಯಕ ವಸ್ತುಗಳನ್ನು ಖರೀದಿಸಿ ತರುತ್ತಾನೆ. ಆತ ಇಷ್ಟೆಲ್ಲ ಮಾಡು ವುದು ಮುಂದೊಂದು ದಿನ ತನ್ನ ಇಷ್ಟದಂತೆ ನೆಲೆಸಬಹುದು ಎಂದು ತಾನೇ? ಒಂದು ವೇಳೆ, ಕಾರಣಾಂತರದಿಂದ ಕೆಲವು ವರ್ಷಗಳ ವರೆಗೆ ಅಲ್ಲಿ ಹೋಗಿ ನೆಲೆಸಲು ಸಾಧ್ಯವಾಗದಿದ್ದಲ್ಲಿ ಅಥವಾ ಒಂದು ವೇಳೆ ಸರಿಯಾಗಿ ಐದು ದಿನವೂ ವಾಸ ಮಾಡಲು ಸಾಧ್ಯವಾಗದಿದ್ದಲ್ಲಿ ಅದರಿಂದ ಏನು ಪ್ರಯೋಜನ? ಅಲ್ಲಿ ಹೋಗುವವರೆಗೂ ಆತನಿಗೆ ಆ ಮನೆ ಕಾಗದದ ಮೇಲಿರುವ ಅಥವಾ ಮನಸಿನ
ಒಳಗಿರುವ ಆಸ್ತಿ. ಕಾಗದ ಮೇಲಿರುವುದು ಅಥವಾ ಮನಸ್ಸಿನ ಒಳಗಿರುವುದು, ಎರಡೂ ಒಂದೇ.

ತನ್ನ ಬಳಿ ಇಂತಹ ಒಂದು ಮನೆ ಇದೆ ಎಂದು ಆತ ಸಮಾಧಾನ ಪಟ್ಟುಕೊಳ್ಳಬಹುದೇ ವಿನಃ ಅನುಭವಿಸಿದ ಆನಂದ ಆತನಿಗೆ ಲಭಿಸುವು ದಿಲ್ಲ. ಇನ್ನೊಂದು ಉದಾಹರಣೆ ಹೇಳಿದರೆ ಈ ವಿಷಯದಲ್ಲಿ ಇನ್ನೂ ಹೆಚ್ಚಿನ ಸ್ಪಷ್ಟತೆ ಸಿಕ್ಕೀತು. ಒಂದು ಶ್ರೀಮಂತ ಕುಟುಂಬದಲ್ಲಿ ತಂದೆ, ತಾಯಿ ಒಂದೆರಡು ಮಕ್ಕಳು. ಅದರಲ್ಲಿ ಒಬ್ಬ ಮಗನಿಗೆ ಉದ್ಯಮಿ ಯಾಗಬೇಕೆಂಬ ಉತ್ಕಟ ಬಯಕೆ ಇರುತ್ತದೆ.

ಮುಂಚೆಯೂ ಕೆಲವು ಉದ್ಯಮಕ್ಕೆ ಪ್ರಯತ್ನಿಸಿ ಕೈ ಸುಟ್ಟುಕೊಂಡಿದ್ದ ಆತನಿಗೆ ಇನ್ನಷ್ಟು ಹಣ ನೀಡಲು ಶ್ರೀಮಂತ ತಂದೆಗೆ ಮನಸ್ಸಿರುವು ದಿಲ್ಲ. ತಂದೆಯ ಬಳಿ ಕೇಳಿಯೂ ಆತ ಹಣ ಕೊಡದಿದ್ದಾಗ, ಮಗ ತಿಜೋರಿಗೆ ಕೈ ಹಾಕುತ್ತಾನೆ. ತಂದೆಯ ಅರಿವಿಗೆ ಬಾರದಂತೆ ಒಂದಷ್ಟು ಹಣ (ಹತ್ತು ಲಕ್ಷ ಅಂದುಕೊಳ್ಳಿ) ಒಂದಷ್ಟು ಚಿನ್ನ (ಒಂದು ಕಿಲೋ ಅಂದುಕೊಳ್ಳಿ) ಕೊಂಡು ಹೋಗಿ ಅದನ್ನು ಮಾರಿ ಬಂದ ಹಣದಿಂದ ತನ್ನ ಹೊಸ ಉದ್ಯಮವನ್ನು ಆರಂಭಿಸುತ್ತಾನೆ. ಎಷ್ಟೋ ದಿನಗಳವರೆಗೆ ಇದರ ಅರಿವೇ ಇಲ್ಲದ ತಂದೆ ನಿಶ್ಚಿಂತನಾಗಿರುತ್ತಾನೆ. ಮುಂದೊಂದು ದಿನ ಚಿನ್ನದ ಅವಶ್ಯಕತೆ ಇದ್ದಾಗ ತಿಜೋರಿ ತೆಗೆದು ನೋಡಿದ ಶ್ರೀಮಂತನಿಗೆ ಚಿನ್ನ, ಹಣ ಕಡಿಮೆಯಾದದ್ದು ಕಾಣಿಸುತ್ತದೆ.

ಈ ಒಂದು ಸನ್ನಿವೇಶವನ್ನು ಕೂಲಂಕಷವಾಗಿ ಪರಿಶೀಲಿಸಿ. ಶ್ರೀಮಂತ, ತನ್ನ ಹಣ, ಚಿನ್ನವೆಲ್ಲ ಕಪಾಟಿನಲ್ಲಿ ಸುರಕ್ಷಿತವಾಗಿದೆ ಎಂದು ತಿಳಿದಿದ್ದರೂ, ಅಸಲಿಗೆ ಅದು ಕಮ್ಮಿಯಾಗಿರುತ್ತದೆ. ಅಂದರೆ, ಶ್ರೀಮಂತ ಹತ್ತು ಲಕ್ಷ ರುಪಾಯಿ ಮತ್ತು ಒಂದು ಕಿಲೋ ಚಿನ್ನ ಕಳೆದುಕೊಂಡ ಬಡವನಾಗಿರುತ್ತಾನೆ. ಅದು ಆತನಿಗೆ ತಿಳಿಯುವುದು ತಿಜೋರಿ ತೆಗೆದು ನೋಡಿದಾಗ ಮಾತ್ರ. ಒಂದು ವೇಳೆ ಆತ ಸಾಯುವವರೆಗೂ ತಿಜೋರಿ ತೆರೆಯದೇ ಇದ್ದರೆ, ತಿಜೋರಿ ಖಾಲಿಯಾದರೂ ಆತನಿಗೆ ತಿಳಿಯುತ್ತಿರಲಿಲ್ಲ.

ಏಕೆಂದರೆ ಆತನಿಗೆ ತಾನು ಎಣಿಸಿಟ್ಟಿದ್ದು ಮಾತ್ರ ನೆನಪಿತ್ತು. ಸಾಯುವವರೆಗೂ ಆತ ತನ್ನ ಹಣ, ಚಿನ್ನ ತಿಜೋರಿಯಲ್ಲಿ ಭದ್ರವಾಗಿದೆ ಎಂಬ ಭ್ರಮೆಯಲ್ಲಿಯೇ ಇರುತ್ತಿದ್ದ. ಅದೇ ಮಗನ ವಿಚಾರಕ್ಕೆ ಬಂದರೆ, ಆತನ ಬಳಿ ಹಣವಿರಲಿಲ್ಲ. ಹೋಗಲಿ, ತನ್ನ ಬಳಿ ಒಂದಷ್ಟು ಹಣ, ಚಿನ್ನ, ಆಸ್ತಿ ಇದೆ ಎಂಬ ಕಾಗದದ ಚೂರೂ ಇರಲಿಲ್ಲ. ಕದ್ದದ್ದೇ ಆದರೂ ಹಣ ವನ್ನು ನಿಜವಾಗಿ ಬಳಸಿಕೊಂಡದ್ದು, ಅನುಭವಿಸಿದ್ದು ಮಗ. ಇದನ್ನು ಇನ್ನೂ ಒಂದು ರೀತಿಯಲ್ಲಿ ಹೇಳುವುದಾದರೆ, ಶ್ರೀಮಂತ ಗಳಿಸಿಟ್ಟದ್ದು ಅವನ ಅವಶ್ಯಕತೆಗಿಂತ ಹೆಚ್ಚು ಎಂದಾಯಿತು.

ಇಂದಿನ ದಿನಗಳಲ್ಲಿ ಬಹುತೇಕ ಎಲ್ಲವೂ ಕಾಗದದ ಮೇಲಿನ ಆಟ. ಮೊದಲಾದರೆ ಶೇರು ಖರೀದಿಸಿದರೆ, ಬಾಂಡಿನಲ್ಲಿ, ಮ್ಯೂಚುಯಲ್ -ಂಡ್‌ನಲ್ಲಿ ಹಣ ವಿನಿಯೋಗಿಸಿದರೆ ಒಂದು ಪ್ರಮಾಣಪತ್ರವಾದರೂ ಬರುತ್ತಿತ್ತು. ಅದನ್ನು ಕೈಯಲ್ಲಿ ಮುಟ್ಟಬಹುದಾಗಿತ್ತು, ಬಣ್ಣ ನೋಡಿ ಸಮಾಧಾನಪಟ್ಟು ಕೊಳ್ಳಬಹುದಾಗಿತ್ತು. ಈಗ ಅದರ ಕೆಲಸ ಏನಿದ್ದರೂ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ. ನಾವು ಮೊಬೈಲ್‌ನಲ್ಲಿ ಎಷ್ಟೇ ಆಟ ಆಡಿದರೂ, ನಿಜವಾದ ಆಟದ ಅನುಭವ ಆಗಲು ಸಾಧ್ಯವಿಲ್ಲ.

ಕ್ರಿಕೆಟ್, ಟೆನಿಸ್, ಫುಟ್ಬಾಲ್ ಆಟವನ್ನು ಮೈದಾನದಲ್ಲಿ ಆಡುವುದಕ್ಕೂ, ಮೊಬೈಲ್‌ನಲ್ಲಿ ಆಡುವುದಕ್ಕೂ ವ್ಯತ್ಯಾಸ ಇದ್ದೇ ಇದೆ.
ಎಲ್ಲಕ್ಕಿಂತ ಹೆಚ್ಚಾಗಿ, ಎಷ್ಟೋ ಸಲ ನಾವು ಕಾಗದದ ಮೇಲೆ ಶ್ರೀಮಂತರೂ ಬಡವರೂ ಆಗುತ್ತಿರುತ್ತೇವೆ. ಕೆಲವೊಮ್ಮೆ ನಮಗೆ ಅದರ ಅರಿವೂ ಆಗುವುದಿಲ್ಲ. ನೀವು ನೂರು ರುಪಾಯಿಗೆ ಒಂದು ಶೇರು ಖರೀದಿಸಿದ್ದೀರಿ ಅಂದುಕೊಳ್ಳಿ. ಕಾರಣಾಂತರಗಳಿಂದ ಒಂದು ತಿಂಗಳು ನಿಮಗೆ ಅದರ ಕುರಿತು ವಿಚಾರ ಮಾಡಲು ಆಗಲಿಲ್ಲ ಅಂದುಕೊಳ್ಳಿ.

ಈ ನಡುವೆ ನೀವು ಖರೀದಿಸಿದ ಶೇರು ನೂರಹತ್ತಕ್ಕೆ ಜಿಗಿದು, ತೊಂಬತ್ತಕ್ಕೆ ಕುಸಿದು, ಏರುಪೇರಾಗುತ್ತಿರುತ್ತದೆ. ಒಂದು ವೇಳೆ ನೀವು ಅದನ್ನು ಗಮನಿಸುತ್ತಿದ್ದರೂ ಸರಿ, ಇದ್ದಕ್ಕಿದ್ದಂತೆ ಆ ಕಂಪನಿಯೇ ಮುಳುಗಿಹೋಯಿತು ಎಂದರೆ? ಕೆಲವೇ ದಿನಗಳ ಹಿಂದೆ ನಿಮ್ಮನ್ನು ಶ್ರೀಮಂತನನ್ನಾಗಿಸಿದ ಕಾಗದದ ಚೂರೇ ನಿಮ್ಮನ್ನು ಬಡವನನ್ನಾಗಿಸುತ್ತದೆ ಎಂದಾಯಿತಲ್ಲ. ಕಣ್ಣಿಂದ ನೋಡದೇ, ಕೈಯಿಂದ ಮುಟ್ಟದೇ, ಯಾವುದನ್ನೂ ಅನುಭವಿಸದೇ ಕೇವಲ ಒಂದು ಕಾಗದದಿಂದ ನಾವು ಬಡವರೂ, ಶ್ರೀಮಂತರೂ ಆಗುತ್ತೇವೆ ಎಂದರೆ, ಕಾಗದಲ್ಲಿರುವ ಆಸ್ತಿಗೂ, ನೀರ ಮೇಲಿನ ಗುಳ್ಳೆಗೂ ಏನು ವ್ಯತ್ಯಾಸ? ಅದೆಲ್ಲ ಬೇಡ, ಮನೆಗೆ ಬರುವಾಗ ನಿಮ್ಮ ಕಿಸೆಯಲ್ಲಿ ಒಂದು ಸಾವಿರ
ರುಪಾಯಿ ಇರುತ್ತದೆ.

ಹೆಂಡತಿ ಹಾಲಿನವನಿಗೆ ಕೊಡಲು ನೂರು ರುಪಾಯಿ ತೆಗೆಯುತ್ತಾಳೆ ಅಂದರೆ ನೀವು ಅಷ್ಟರ ಮಟ್ಟಿಗೆ ಬಡವರಾದಿರಿ. ಒಂದು ತಾಸಿನ ಬಳಿಕ ಆಕೆಯ ಸ್ನೇಹಿತೆ ಹಿಂದೊಮ್ಮೆ ಪಡೆದಿದ್ದ ನೂರು ರುಪಾಯಿಯನ್ನು ಹಿಂತಿರುಗಿಸುತ್ತಾಳೆ. ಅದನ್ನು ಆವಳು ನಿಮ್ಮ ಕಿಸೆಯಲ್ಲಿ ಹಾಕುತ್ತಾಳೆ. ಅಂದರೆ, ನಿಮಗೆ ಅರಿವಿಲ್ಲದೆಯೇ ನೀವು ಆಗಾಗ ಬಡವರೂ, ಶ್ರೀಮಂತರೂ ಆಗುತ್ತಿರುತ್ತೀರಿ ಎಂದರೆ, ಅದಕ್ಕೆ ಏನು ಅರ್ಥ? ಒಂದೇ ಮಾತಿನಲ್ಲಿ ಹೇಳುವುದಾದರೆ, ನಮ್ಮಲ್ಲಿ ಇರುವುದನ್ನು ಎಷ್ಟು ಸಾಧ್ಯವೋ ಅಷ್ಟು ಅನುಭವಿಸಬೇಕು.

ಅನುಭವಿಸಲು ಆಗದಿದ್ದದ್ದು, ಹೊಟ್ಟೆ ತುಂಬಿದ ಮೇಲೆ ಎಲೆಯಲ್ಲಿ ಉಳಿಯುವ ಪದಾರ್ಥಕ್ಕೆ ಸಮ. ಅದಕ್ಕೇ ಇರಬೇಕು ವಾರೆನ್ ಬ-ಟ್ ತಾವು ಗಳಿಸಿದ್ದರಲ್ಲಿ ತೊಂಬತ್ತೊಂಬತ್ತು ಪ್ರತಿಶತ ದಾನ ಮಾಡಲು ನಿರ್ಧರಿಸಿದ್ದು !