Wednesday, 27th November 2024

ಈಗ ಕಾಶ್ಮೀರ್‌ ಫೈಲ್ಸ್ ಓಪನ್ ಮಾಡಬೇಕಿತ್ತಾ ?

ವಿಶ್ಲೇಷಣೆ

ರಾಧಾಕೃಷ್ಣ ಎಸ್‌.ಭಡ್ತಿ

rkbhadti@gmail.com

‘ಈಗ ಇಂಥದನ್ನು ಪಿಕ್ಚರ್ ಮಾಡುವ ಅಗತ್ಯವಿತ್ತಾ? ಇಷ್ಟೊಂದು ಕ್ರೌರ್ಯವನ್ನು ಇಷ್ಟು ಹಸಿಹಸಿಯಾಗಿ ತೋರಿಸೋದು ಅನಿವಾರ್ಯ ವಾಗಿತ್ತ? ದೇಶಾದ್ಯಂತ ಕಳೆದೆರಡು ದಿನಗಳಿಂದ ಸದ್ದು ಮಾಡುತ್ತಿರುವ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿರುವ, 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’ ನೋಡಿ ಹೊರಬರುತ್ತಿರುವ ಬಹುತೇಕ ಸಾಮಾನ್ಯ ಪ್ರೇಕ್ಷಕರ ಪ್ರಶ್ನೆ ಇದು.

ಸಹಜ, ಚಿತ್ರ ನೋಡಿ ಬಂದ ಒಂದಷ್ಟು ಮಂದಿಯ ಮನದಲ್ಲಿ ಇಂಥ ಪ್ರಶ್ನೆಗಳು ಮೂಡುವುದು ಸಹಜ. ಎಂದೋ ಆಗಿ ಹೋದ ಮಳೆಗೆ ಇಂದು ಕೊಡೆ ಹಿಡಿಯುವ ಅಗತ್ಯ, ಔಚಿತ್ಯ ಪ್ರಶ್ನೆಗೆ ಒಳ ಪಡುತ್ತಿದೆ- ಇಂದು ಎಲ್ಲವೂ ತಣ್ಣಗಿದೆ. ಅಲ್ಲಿಂದ ಹೊರಬಿದ್ದ ಪಂಡಿತರ ಪೈಕಿ ಬಹುತೇಕರು ದೇಶಾದ್ಯಂತ ಯಾವ್ಯಾವುದೋ ನಗರ ಗಳಲ್ಲಿ ಎಲ್ಲವನ್ನೂ ಮರೆತು ತಮ್ಮ ಪಾಡಿಗೆ ತಾವು ಬದುಕನ್ನು ಕಟ್ಟಿಕೊಂಡಿದ್ದಾರೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ಯನ್ನು ಸಹ ಕೇಂದ್ರ ಸರಕಾರ ರದ್ದು (2019 ಆ.5)ಮಾಡಿ ಆಗಿದೆ. ಈ ಹಂತದಲ್ಲಿ ‘ಕೋಮು ಪ್ರಚೋದನೆ’ ಯನ್ನು ಉಂಟುಮಾಡುವ ಇಂಥ ಸಿನೆಮಾದ ಅಗತ್ಯವಾದರೂ ಏನಿತ್ತು? ಇರಲಿ, ಬಹುಶಃ ಕಾಶ್ಮೀರದ ಬಗೆಗೆ ಇಂದಿನ ತಲೆಮಾರಿಗೆ ಗೊತ್ತಿದ್ದದ್ದು ಕಡಿಮೆಯೇ; ಸ್ವತಃ ಮೂಲತಃ ಕಾಶ್ಮೀರಿ ಪಂಡಿತರಾಗಿದ್ದವರಿಗೂ.

ಅಂದು, ಅಂದರೆ 1990ರಿಂದ ಆರಂಭಿಸಿ, ಮುಂದಿನ ಒಂದು ವರ್ಷ ನಡೆದ ಪಂಡಿತರ ಸಾಮೂಹಿಕ (ಬಲವಂತದ)ವಲಸೆಯ ಬಳಿಕ ಇಡೀ ದೇಶಕ್ಕೆ ದೇಶವೇ ಭಯಂಕರ ವಿಸ್ಮೃತಿಗೆ ಸಂದಿದೆ. ಚಿತ್ರದ ನಾಯಕ ಪುಷ್ಕರ್‌ನಾಥ್ ಪಂಡಿತ್ (ಅನುಪಮ್ ಖೇರ್)ನಂಥ ಕೆಲವರು ಒಂದಷ್ಟು ವರ್ಷಗಳವರೆಗೆ ಹಠಕ್ಕೆ ಬಿದ್ದವರಂತೆ ಹೋರಾಡಿದ್ದು, ಮತ್ತೆ ಕಾಶ್ಮೀರಕ್ಕೆ ಮರಳುವ ಬಗ್ಗೆ ಕನವರಿಸುತ್ತಲೇ ಇದ್ದುದು ಬಿಟ್ಟರೆ, ಬಹುತೇಕರು ಅದೆಲ್ಲವನ್ನೂ ಮರೆತು ಆಗಿದೆ. ಪುಷ್ಕರ್‌ನ ತಲೆಮಾರಿನ ಯಾರೂ ಇಂದು ಉಳಿದಿಲ್ಲ. ಇದ್ದರೂ ವಯೋ ಸಹಜ ‘ಅಲ್ಜೈಮರ್’ಗೆ ತುತ್ತಾಗಿದ್ದಾರೆ.

ಆಗಿನ್ನೂ ಏರು ಯವ್ವನದಲ್ಲಿದ್ದ ಪುಷ್ಕರ್‌ನ ಮಗನಂಥ ಪಂಡಿತರನ್ನು ‘ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರರು’ ಉಳಿಸಿ ಕಳುಹಿಸಿಲ್ಲ. ಅತ್ತ ಯವ್ವನಕ್ಕೂ ಕಾಲಿಡದೇ, ಇತ್ತ ಬಾಲ್ಯದಲ್ಲೂ ಉಳಿದಿರದ ‘ಶಿವ ಪಂಡಿತ್’ನ ತಲೆಮಾರು ‘ಅಯ್ಯೋ, ಅದರ ಸಹವಾಸವೇ ಬೇಡ, ಹೇಗೋ ಬದುಕಿ ಬಂದು ಇಲ್ಲೆಲ್ಲೋ ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದೇವಲ್ಲ. ಕಾಶ್ಮೀರ ಹಾಳಾಗಿ ಹೋಗಲಿ’ ಎಂಬ ಉದ್ದೇಶ ಪೂರ್ವಕ ಮರೆವನ್ನು ತಂದುಕೊಂಡಿದ್ದಾರೆ. ಇನ್ನು ಆಗಿನ್ನೂ ಹುಟ್ಟಿದ್ದ, ಅಥವಾ ಅಲ್ಲಿ ಬಿಟ್ಟು ಬಂದ ಮೇಲೆ ಹುಟ್ಟಿದ ‘ಕೃಷ್ಣ ಪಂಡಿತ್’ ನ ತಲೆಮಾರಿಗೆ ಅದೆಲ್ಲ ಅಂತೆ ಕಂತೆಗಳ ಕಥೆಯಷ್ಟೆ. ಅವರಿಗೆ ಯಾವೊಂದರ ಬಗ್ಗೆಯೂ ಸ್ಪಷ್ಟತೆಯಿಲ್ಲ.

ಅದು ಬೇಕೂ ಇಲ್ಲ. ಹೆಸರಿನ ಜೊತೆಗೆ ಭಟ್, ಪಂಡಿತ್ ‘ಸರ್ ನೇಮ್’ ಆಗಿ ಸೇರಿರುವುದಷ್ಟೇ ಅವರ ಮೂಲದ ಕ್ವಾಲಿಫಿಕೇಶನ್. ಅದು ಯಾವುದೇ ಘಟನೆಯಾಗಬಹುದು, ಇತಿಹಾಸದ ಬಗೆಗಿನ ನಮ್ಮ ಇಂಥ ಉದ್ದೇಶಪೂರ್ವಕ ವಿಸ್ಮೃತಿ, ಹೋಗಲಿ ಬಿಡು ಎಂಬ ಉದಾ ಸೀನ, ನಿರಂತರ ಸಾಂಸ್ಕೃತಿಕ, ರಾಜಕೀಯ ದಾಳಿಗಳ, ದಾಳಿಕೋರರ ಜತೆಗೆ ಬಲುಬೇಗ ಹೊಂದಿಕೊಂಡು ಹೋಗಿಬಿಡುವ, ಪರಿಸ್ಥಿತಿ ಯೊಂದಿಗೆ ರಾಜಿಯಾಗಿ ಬಿಡುವ ನಮ್ಮ ಮನೋಭಾವವೇ ಈವರೆಗೆ ಭಾರತವನ್ನು ಇಂಥ ಸ್ಥಿತಿಗೆ ತಂದು ನಿಲ್ಲಿಸಿದ್ದೇನೋ?
ಹೂಣರು, ಶಕರು, ಪೋರ್ಚಗೀಸರು, ಡಚ್ಚರು, ಪ್ರಂಚರು, ಮೊಗಲರು, ಇಂಗ್ಲಿಷರು…ಇವರ‍್ಯಾರಿಗೂ ನಾವು ಅಂಥ ಪ್ರತಿರೋಧ ತೋರಿದ್ದೇನಿಲ್ಲ.

ಅಸ್ತ್ರಗಳನ್ನು ಕೈಗೆತ್ತಿಕೊಂಡಿದ್ದೂ ಇಲ್ಲ. ಕಾಶ್ಮೀರವನ್ನು ಕಳಕೊಳ್ಳುವ ಹಂತದಲ್ಲಿದ್ದುದೂ ಬಹುಶಃ ನಮ್ಮ ಇದೇ ಶಾಂತ ಮನಃಸ್ಥಿತಿ ಯಿಂದಲೇ. ಅಂದು ಪ್ರಾಯಶಃ ಪಂಡಿತರೂ ಶಸ್ತ್ರ ಕೈಗೆತ್ತಿಕೊಂಡಿದ್ದರೆ ಅವರಿಗಷ್ಟೇ ಅಲ್ಲ, ಕಾಶ್ಮೀರಕ್ಕೂ ಈ ಪರಿಸ್ಥಿತಿ ಬರುತ್ತಿಲ್ಲವೇನೋ? ಹೌದು, ಸಿನೆಮಾ ತುಂಬ ಸೆನ್ಸಿಟಿವ್ ವಿಷಯವನ್ನು ಒಳಗೊಂಡಿದೆ. ಅವತ್ತಿಂದಲೂ ನಮ್ಮನ್ನು ಇಂಥ ‘ಜಾತ್ಯೀತಿ ಸೆನ್ಸಿಟಿವಿಟಿ’ಯಡಿಯಲ್ಲೇ ಬೆಳೆಸಿದ್ದಲ್ಲವೇ? ಯಾರೊಂದಿಗೂ ಸಂಘರ್ಷಕ್ಕೆ ಇಳಿಯಬಾರದು. ನಮ್ಮದು ಅಲಿಪ್ತ ನೀತಿ. ನಮ್ಮದು ಜಾತ್ಯತೀತ ದೇಶ. ‘ಒಂದು ಕೋಮಿನವರನ್ನು’ ಬಾಂಧವರೆನ್ನಬೇಕು.

ಯಾವುದನ್ನೂ ಒಂದು ದೃಷ್ಟಿಕೋನದಲ್ಲಿ ನೋಡಬಾರದು. ನಮ್ಮಲ್ಲಿ ಅಪರಾಧಿಗೂ ನ್ಯಾಯಾಲಯದಲ್ಲಿ ತನ್ನ ವಾದ ಮಂಡಿಸುವ
ಹಕ್ಕಿದೆ. ಒಂದಷ್ಟು ಮಂದಿ ಉಗ್ರರಾಗುತ್ತಿದ್ದಾರೆ ಅಂದರೆ, ನಕ್ಸಲರಾಗುತ್ತಿದ್ದಾರೆ, ವಿದ್ರೋಹಿಗಳಾಗುತ್ತಿದ್ದಾರೆ ಅಂದರೆ ಅದಕ್ಕೆ ಕಾರಣ ಅದಕ್ಕೆ ಸಮಾಜವೇ ಹೊಣೆ…ಇದನ್ನೇ ಅಲ್ಲವೇ ಬೋಧಿಸುತ್ತ ಬಂದಿದ್ದು. ಹಾಗಾಗಿಯೇ ಇಷ್ಟು ದಿನಗಳವರೆಗೂ ಇಷ್ಟು ‘ಬೆತ್ತಲೆ’ಯಾಗಿ ಕಾಶ್ಮೀರದಂಥ ವಸ್ತುವಿನ ಮೇಲೆ ಸಿನೆಮಾ ಮಾಡುವ ಧೈರ್ಯ ಯಾರಿಗೂ ಇರಲಿಲ್ಲ.

ಸಿನೆಮಾ ಇರಲಿ, ಅಂಥದ್ದರ ಮಾತಾಡುವುದು, ಚರ್ಚೆ ಮಾಡುವುದು ಸಹ ನಮ್ಮ ಸಂವಿಧಾನಾತ್ಮಕ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸ ಎಂಬಂತಾಗಿತ್ತು. ಹೌದು, ಸಿನೆಮಾ ಈಗ ಬೇಕಿರಲಿಲ್ಲ, ಆದರೆ ಇತಿಹಾಸದ ಸತ್ಯವನ್ನು ಹೇಳಲು ಕಾಲದ ಹಂಗೆಲ್ಲಿಯದು? ಹಾಗೆ ನೋಡಿ ದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮ ಈಗ ನಮಗೆ ಅಪ್ರಸ್ತುತವೇ? ಭಾರತೀಯ ಸ್ವಾತಂತ್ರ್ಯ ಹೋರಾಟ ಸೇರಿದಂತೆ ಬಹುತೇಕ (ಸಿನೆಮಾದ -.ರಾಧಿಕಾ ಪಾತ್ರದಂತೆ) ಈವರೆಗೆ ನಮಗೆ ಬೋಧಿಸಿದ್ದು ಅರ್ಧ ಸತ್ಯವನ್ನೇ? ಆ ವಾದವನ್ನು ಇಷ್ಟು ವರ್ಷ ಕೇಳಿ, ನಂಬಿ ಬಂದಿದ್ದೇವಲ್ಲ. ಈಗ ಇನ್ನೊಂದು ಬದಿಯ ಅಭಿವ್ಯಕ್ತಿಗೆ ಅವಕಾಶ ಸಿಕ್ಕರೆ ತಪ್ಪೇನು? ಜನ ನಿರ್ಧರಿಸುತ್ತಾರೆ.

ಹಾಗೂ ತಥಾಕಥಿತವನ್ನೇ (ಈವರೆಗಿನಂತೆ) ನಂಬಿ ಸಿನೆಮಾದಲ್ಲಿ ಹೇಳಿದ್ದು ಸತ್ಯ, ಅಥವಾ ಅದೆಲ್ಲವೂ ಬರೀ ಕಲ್ಪನೆ ಎಂಬ ನಿರ್ಧಾರಕ್ಕೆ ಬರುವ ಸ್ವಾತಂತ್ರ್ಯವೂ ಜನಕ್ಕಿದೆ. ಅವರವರ ವಿವೇಚನೆಗೆ ಬಿಟ್ಟದ್ದು. ಇನ್ನು ಅಂದಿನ ಕಾಶ್ಮೀರ ಹತ್ಯಾಕಾಂಡದ ಬಗೆಗೆ ಸಿನೆಮಾ, ಕಾದಂಬರಿ ಇತ್ಯಾದಿ ಹಿಂದೂ ಸಾಕಷ್ಟು ಬಂದಿವೆ. ಆದರೆ ಯಾವುದನ್ನೂ ಸಿನಿಮೀಯ, ನಾಟಕೀಯವಾಗಿಸಿದೇ, ಸೊಫಿಸ್ಟಿಕೇಟೆಡ್ ಆಗಿಸಲು ಹೋಗದೇ ಘಟನೆಗಳನ್ನು ಇಲ್ಲಿ ಹಸಿಹಸಿಯಾಗಿಯೇ ತರುವ ಪ್ರಯತ್ನ ಮಾಡಿದ್ದಾರೆ ವಿವೇಕ್ ಅಗ್ನಿಹೋತ್ರಿ.

ಹಾಗಾಗಿ ಇಡೀ ಸಿನೆಮಾದಲ್ಲಿ ಅಬ್ಬಾ, ಎನಿಸುವಷ್ಟು ಕ್ರೌರ್ಯ ತುಂಬಿದೆ. ಇಷ್ಟೊಂದು ಕೌರ್ಯದ ಹತ್ಯಾಕಾಂಡ ಅದಾಗಿದ್ದ ಮೇಲೆ, ಈಗ ನಮಗೆ ತೆರೆಯ ಮೇಲೆ ನೋಡಲೇ ಇಷ್ಟೊಂದು ಅಪಸಹ್ಯವಾಗುತ್ತಿದೆ ಎಂದಾದ ಮೇಲೆ ಅದನ್ನು ಅನುಭವಿಸಿದವರ ಮೇಲಾದದ್ದು ಎಂಥ
ಅಮಾನವೀಯವಿದ್ದೀತು? ಅಂಥ ದೌರ್ಜನ್ಯ ನಡೆದಾಗಲೇ ಕುದಿಯದ ದೇಶವಾಸಿಗಳ ರಕ್ತ ಈಗೂ ‘ಸಹಿಷ್ಣುತೆ’ಯ ಗಡಿ ಮೀರುವುದಿಲ್ಲ ಬಿಡಿ!

ಇಡೀ ಸಿನಿಮಾ ಈವರೆಗಿನ ‘ಜಾತ್ಯತೀತತೆ’ಯ ಗಡಿಮೀರಿ, ಕಾಶ್ಮೀರಿ ಪಂಡಿತರ ದೃಷ್ಟಿಕೋನದಲ್ಲಿ ಮೂಡಿ ಬಂದಿರುವುದರಿಂದ ಹಾಗೂ ಮುಸ್ಲಿಂ (ಒಂದು ಕೋಮಿನ ಅಂತಲ್ಲ) ಭಯೋತ್ಪಾದಕತೆಯ ಚಿತ್ರಹಿಂಸೆಗೆ ನಲುಗಿ ಸರ್ವನಾಶವಾದ ಕುಟುಂಬವೊಂದರ ಹಿನ್ನೆಲೆಯಲ್ಲಿ ತೆರೆದುಕೊಳ್ಳುವುದರಿಂದ ‘ದಿ ಕಾಶ್ಮೀರ್ ಫೈಲ್ಸ್’ ಹೆಚ್ಚು ಸದ್ದುಮಾಡುತ್ತಿದೆ. ಹೌದು, ಘಟನೆಯಲ್ಲೂ ರಾಜಕೀಯದ ಬೇಳೆ ಬೇಯಿಸಿ ಕೊಂಡವರದ್ದೇ ಹೆಚ್ಚುಪಾಲು. ಈಗ ಬಹುಶಃ ಸಿನೆಮಾದ ಹೆಸರಲ್ಲೂ. ಆದ್ದರಿಂದಲೇ ಒಂದು ವರ್ಗದ ಮಂದಿಗೆ ಸಿನೆಮಾ ಇಷ್ಟವಾಗಿ
ಮತ್ತು ಮತ್ತೊಂದು ವರ್ಗದವರಿಗೆ ಎಗ್ಸಾಸಿರೇಷನ್ ನಂತೆ ಕಾಣುತ್ತಿದೆ.

ಮೂರುಗಂಟೆಯ ಸಿನೆಮಾ, ಸಿನೆಮಾ ಎಂಬುದಕ್ಕಿಂತ ನಿರ್ದೇಶಕನ ಸುದೀರ್ಘ ತಪಸ್ಸಿಗೆ (ಸಂಶೋಧನೆ) ಸಿದ್ಧಿಸಿದ ಕಾಲಾತೀತಿ
ಅರಿವು, ಜ್ಞಾನ ‘ಪಿಎಚ್‌ಡಿ’. ಹೀಗಾಗಿ ಸಿನಿಮಾದ ಸಿದ್ಧಸೂತ್ರ ಗಳಾಚೆ ಒಂದು ರೀತಿಯಲ್ಲಿ ಡಾಕ್ಯುಮೆಂಟರಿಯ ಅನುಭವ ಕೊಡುತ್ತದೆ. ಹೆಸರೇ ‘ಕಾಶ್ಮೀರಿ ಫೈಲ್ಸ್’; ಹೀಗಾಗಿ ಕಾಶ್ಮೀರದ ಘಟನಾವಳಿಯ ಫುಲ್ ಸಿನೆಮಾದಲ್ಲಿ ಓಪನ್ ಆಗಿದೆ.

ಅಷ್ಟಕ್ಕೂ ಕಾಶ್ಮೀರದಲ್ಲಿ 1980ರ ಕೊನೆ, 1990ರ ದಶಕದ ಆರಂಭದಲ್ಲಿ ನಡೆದದ್ದೇನೂ? ಅದಕ್ಕೆಲ್ಲ ಮೂಲ ಪ್ರೇರಣೆ ಆದ ಘಟನೆ ಯಾವುದು? ಇವೆಲ್ಲವನ್ನೂ ಇತಿಹಾಸ ದೇಶದಿಂದ ಮುಚ್ಚಿಟ್ಟಿದೆ. ಉಗ್ರರನ್ನು ರಾಜಕೀಯ ದಾಳ ಮಾಡಿಕೊಂಡು ತಮ್ಮ ಬೇಳೆಬೇಯಿಸಿ ಕೊಳ್ಳುವ ಪರಂಪರೆ ಕಾಶ್ಮೀರಕ್ಕೆ ಹೊಸತಲ್ಲ. ಅದು ಆರಂಭವಾದುದು ಹೀಗೆ. ಜಮ್ಮು-ಕಾಶ್ಮೀರದ ಅಂದಿನ ಮುಖ್ಯಮಂತ್ರಿ ಶೇಖ್
ಅಬ್ದು 1982ರಲ್ಲಿ ನಿಧನರಾದರು. ಅವರ ಮಗ ಫಾರೂಕ್ ಅಬ್ದುರ ನಾಯಕತ್ವಕ್ಕೆ ನ್ಯಾಷನಲ್ ಕಾನ್ಪರೆನ್ಸ್ ಬಂತು. ಎರಡೇ ವರ್ಷಗಳಲ್ಲಿ ಕೇಂದ್ರ ಸರಕಾರರ ಎನ್‌ಸಿಪಿಯನ್ನು ವಜಾ ಮಾಡಿ ಭಿನ್ನಮತೀಯ ಗುಲಾಂ ಮೊಹಮ್ಮದ್ ಶಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು.

ಇದು ಭಾರೀ ಅಸಮಾಧಾನ ಮತ್ತು ರಾಜಕೀಯ ಅಸ್ಥಿರತೆಗೆ ಕಾರಣವಾಯಿತು. ಇದರಿಂದ ಕೆರಳಿದ ಮುಸ್ಲಿಂ ಉಗ್ರಗಾಮಿ ನಾಯಕರು ಬಂಡೆದ್ದರು. ಆಥವಾ ಹಾಗೆ ಬಂಡೇಳಿಸಿರಬಹುದು ಫಾರೂಕ್ ಅಬ್ದು ಪರ ಗುಂಪು. ಇದರಿಂದ ಬಲಗೊಂಡಿದ್ದು ‘ಜಮ್ಮು ಮತ್ತು ಕಾಶ್ಮಿರ ಲಿಬರೇಷನ್ ಫ್ರಂಟ್’. ಇದನ್ನು ಹತ್ತಿಕ್ಕಲು 1984ರಲ್ಲಿ ಉಗ್ರಗಾಮಿ ನಾಯಕ ಮಕ್ಬೂಲ್ ಭಟ್‌ನನ್ನು ಗಲ್ಲಿಗೇರಿಸಲಾಯಿತು. ಅಸಲಿಗೆ ಇದು ಕಾಂಗ್ರೆಸೇತರ ಪಕ್ಷಗಳ ಬೆಳವಣಿಗೆಯನ್ನು ತಡೆಯುವ, ಉಗ್ರರನ್ನು ರಾಜಕೀಯ ದಾಳ ಮಾಡಿಕೊಂಡಿದ್ದ ಸ್ಥಳೀಯ ಮುಂಖಂಡರಿಗೆ
ತಿರುಗೇಟು ನೀಡುವ ರಾಜಕೀಯ ಕ್ರಮವೂ ಆತ್ತೆನ್ನಲಾಗುತ್ತದೆ.

ಏತನ್ಮಧ್ಯೆ 1986ರಲ್ಲಿ, ರಾಜೀವ್ ಗಾಂಧಿ ಸರಕಾರ ಬಾಬ್ರಿ ಮಸೀದಿ ಬೀಗ ತೆರೆದು ಹಿಂದೂಗಳಿಗೆ ಪ್ರಾರ್ಥನೆಗೆ ಅನುವು ಮಾಡಿಕೊಟ್ಟದ್ದು ಕಾಶ್ಮೀರದ ಅಸಮಾಧಾನಕ್ಕೆ ಎಡೆ ಮಾಡಿತ್ತು. ಇದನ್ನು ಬಳಸಿಕೊಂಡು ಅಂದಿನ ಕಾಂಗ್ರೆಸ್ ನಾಯಕ ಮುಫ್ತಿ ಮೊಹಮ್ಮದ್ ಸಯೀದ್ ಪ್ರತಿನಿಧಿಸುತ್ತಿದ್ದ ಅನಂತನಾಗ್ ಸೇರಿದಂತೆ ಎಲ್ಲೆಡೆ ಹಿಂದೂ ದೇವಾಲಯಗಳ ಮೇಲೆ ಸರಣಿ ದಾಳಿಗಳು ನಡೆದವು. ನಿಧಾನಕ್ಕೆ ದೇಗುಲಗಳಲ್ಲಿ ಪೂಜೆ ಸಲ್ಲಿಸುತ್ತಿದ್ದ ಕಾಶ್ಮೀರಿ ಪಂಡಿತರ ಅಂಗಡಿಗಳು ಮತ್ತು ಆಸ್ತಿಗಳ ಮೇಲೆ ಪ್ರತ್ಯೇಕತಾವಾದಿಗಳು ದಾಳಿ ಆರಂಭಿಸಿ ದರು. ಇದೇ ಪಂಡಿತರ ಮೇಲಿನ ದೌರ್ಜನ್ಯಕ್ಕೆ ನಾಂದಿಯಾಯಿತು. 1989ರ ಸೆಪ್ಟೆಂಬರ್‌ನಲ್ಲಿ ಕಾಶ್ಮೀರಿ ಬಿಜೆಪಿ ನಾಯಕ ಟೀಕಾ ಲಾಲ್ ತಪ್ಲೊ ಹತ್ಯೆ ಬಳಿಕ ತೀವ್ರಗೊಂಡಿತು. ಕೊನೆಗೆ ಇಡೀ ಪಂಡಿತರ ಸಮುದಾಯವನ್ನೇ ಕಾಶ್ಮೀರ ಬಿಟ್ಟು ಓಡಿಸುವ ಮಟ್ಟಕ್ಕೆ ಪರಿಸ್ಥಿತಿ ಬಂದಿತ್ತು.

1990 ಜನವರಿಯ ಒಂದು ದಿನ ಕಣಿವೆ ರಾಜ್ಯದ ಮಸೀದಿಗಳ ಮುಂದೆ ನೆರೆದ ಬೃಹತ್ ಜನಸ್ತೊಮಕ್ಕೆ ಕಾಶ್ಮೀರಿ ಪಂಡಿತರನ್ನು ‘ಮತಾಂತರU ಳಿಸುವ, ಓಡಿಸುವ, ಕೊಲ್ಲುವ’ ಅಧಿಕೃತ ಫರ್ಮಾನು ಧರ್ಮಗುರುಗಳಿಂದ ಹೊರಬಿತ್ತು. ಭಾರತ ವಿರೋಧಿ ಘೋಷಣೆ ಬಲಗೊಂಡಿದ್ದು ಆಗಲೇ. ಕೊನೆಗೆ ದಿಕ್ಕುಗಾಣದೇ ಹಿಂಸೆಗೆ ಬೆಚ್ಚಿದ ಪಂಡಿತರು ವಲಸೆಗೆ ಶುರುವಿಟ್ಟುಕೊಂಡರು. ಮುಂದಿನದೆಲ್ಲವೂ ಇತಿಹಾಸ. ವರ್ಷದಲ್ಲಿ ಸುಮಾರು 3.5 ಲಕ್ಷ ಪಂಡಿತರು ಕಾಶ್ಮಿರ ತೊರೆದದ್ದು, 1997ರ ಮಾರ್ಚ್‌ನಲ್ಲಿ 7 ಪಂಡಿತರನ್ನು ಮನೆಯಿಂದ ಹೊರಗೆಳೆದು ಜನರೆದುರೆ ಭಯೋತ್ಪಾದಕರು ಗುಂಡಿಕ್ಕಿದ್ದು, 1998ರ ಜನವರಿಯಲ್ಲಿ ವಂಧಾಮಾ ಗ್ರಾಮದಲ್ಲಿ ಮಹಿಳೆಯರು,
ಮಕ್ಕಳು ಸೇರಿ 23 ಕಾಶ್ಮಿರ ಪಂಡಿತರನ್ನು ಹತ್ಯೆ ಮಾಡಿದ್ದು ಎಲ್ಲವೂ ‘ದಿ ಕಾಶ್ಮೀರ್ ಫೈಲ್ಸ್’ ಆಯಿತು.

ಆದರೆ, ಕಾಶ್ಮೀರದಿಂದ ಜೀವ ಉಳಿಸಿಕೊಳ್ಳಲು ದೇಶದ ಬೇರೆ ಬೇರೆ ಕಡೆ ಓಡಿ ಬಂದ ಪಂಡಿತ ಕುಟುಂಬಗಳು ಈಗಲೂ ದಯನೀಯ ಬದುಕು ನಡೆಸುತ್ತಿದ್ದಾರೆ. ಕ್ಯಾಂಪ್‌ಗಳಲ್ಲಿ, ಟೆಂಟ್‌ಗಳಲ್ಲಿ ನಿರಾಶ್ರಿತ ಜೀವನದ ನರಕ ಕಾಣುತ್ತಿದ್ದಾರೆ. ಸುದೀರ್ಘ 32 ವರ್ಷಗಳ ನಂತರವೂ ಅವರಿಗೊಂದು ಭರವಸೆ ದೊರೆತಿಲ್ಲ, ಹಿಂದಿರುಗುವ ಆಸೆಯೂ ಅವರಲ್ಲಿ ಕೆಲವರಿಗೆ ಬತ್ತಿಲ್ಲ. 2014ರಲ್ಲಿ ಕೇಂದ್ರದಲ್ಲಿ ಮೋದಿ ಸರಕಾರ ಬಂದಾಗ, ಜಾಲತಾಣಗಳಲ್ಲಿ ಪಂಡಿತರ ‘ಹಮ್ ವಾಪಸ್ ಜಾಯೇಂಗೇ’ ಟ್ರೆಂಡ್ ಆದರೂ ಪರಿಸ್ಥಿತಿ ಬದಲಾಗಿಲ್ಲ. ಈಗ ಆರ್ಟಿಕಲ್ 370 ರದ್ದಾಗಿದೆ.

ಮೊನ್ನೆಮೊನ್ನೆ ಮತ್ತೆ ಪಂಡಿತರನ್ನು ಕೊಂದಿದ್ದು, ಕಾಶ್ಮೀರ ಇನ್ನೂ ಸುರಕ್ಷಿತವಾಗಿಲ್ಲ ಎನಿಸಿದೆ. ಅದು ಸುರಕ್ಷಿತವಾಗಬೇಕೆಂದರೆ, ಅಂದಿನ ‘ಕಾಶ್ಮೀರ್ ಫೈಲ್ಸ್’ ತೆರೆದು ಕೇಂದ್ರ ಸರಕಾರ ಸಮಗ್ರ ಉನ್ನತ (ಅದು ನ್ಯಾಯಾಂಗವೋ, ಮತ್ತಿನ್ನಾವದೋ) ತನಿಖೆ ನಡೆಸಬೇಕು. ತಪ್ಪಿತಸ್ಥರ ಘೋಷಣೆಯೊಂದಿಗೆ ಪಂಡಿತರಲ್ಲಿನ ಅಭದ್ರತೆಯ ಆತಂಕವನ್ನು ದೂರ ಮಾಡುವ ವಾತಾವರಣ ಸ್ಥಾಪನೆ ಆಗಬೇಕು. ಈಗಲೂ ನಿಲ್ಲದ ಇಸ್ಲಾಮಿಕ್ ಉಗ್ರವಾದಕ್ಕೆ ಬೆಚ್ಚಿ ಮತ್ತೆ ಪಂಡಿತರ ವಲಸೆ ಹೊರಡದಂತೆ ತಡೆಯಬೇಕು. ಕಾಶ್ಮೀರ ಮೊದಲಿನ ಜ್ಞಾನ ಕೇಂದ್ರವಾಗಬೇಕು.

ಈ ಎಲ್ಲ ‘ಬೇಕು’ ಸಂಕಲ್ಪದ ಹೊಣೆ ಈ ಸಮಾಜದ ಮೇಲಿದೆ ಎಂಬದನ್ನು ಎಚ್ಚರಿಸಲು, ಇತಿಹಾಸ ಆ ಸಮುದಾಯದ ಮೇಲೆ ಎಸಗಿದ ದ್ರೋಹಕ್ಕೆ ಪಶ್ಚಾತ್ತಾಪ ಪಡಲಿಕ್ಕಾದರೂ ‘ದಿ ಕಾಶ್ಮಿರ್ ಫೈಲ್ಸ್’ ತೆರೆಯ ಮೇಲೆ ಇಷ್ಟು ‘ಓಪನ್’ ಆಗಬೇಕಿತ್ತು!