Wednesday, 27th November 2024

ನೀರು ಶುದ್ದವಿಲ್ಲ, ಹಣ್ಣು ಹಸನಲ್ಲ, ತರಕಾರಿ ತಿನ್ನೋ ಹಾಗಿಲ್ಲ !

ಸುಪ್ತಸಾಗರ

rkbhadti@gmail.com

ಮೊನ್ನೆ ಮೊನ್ನೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಲಭ್ಯ ತರಕಾರಿಗಳಲ್ಲಿ ಸುರಕ್ಷತಾ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರದ ಲೋಹ ಗಳಿರುವುದು ಬೆಳಕಿಗೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಕೇಂದ್ರ ಮಾಲಿನ್ಯ
ನಿಯಂತ್ರಣ ಮಂಡಳಿಯ ಪ್ರಯೋಗಾಲಯದಲ್ಲಿ ತರಕಾರಿಯ ಮಾದರಿಗಳ ಸಮಗ್ರ ವಿಶ್ಲೇಷಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ಮಾಧ್ಯಮ ವರದಿಗಳ ಆಧಾರದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಎನ್‌ಜಿಟಿಯ ನ್ಯಾ.ಪ್ರಕಾಶ್ ಶ್ರೀವಾಸ್ತವ ನೇತೃತ್ವದ ಪ್ರಧಾನ ಪೀಠ, ‘ಇದೊಂದು ಗಂಭೀರ ಪರಿಸರಕ್ಕೆ ಸಂಬಂಧಿಸಿದ ಪ್ರಕರಣ’ ಎಂದು ಅಭಿಪ್ರಾಯಪಟ್ಟಿದೆ. ಪರಿಸರ ನಿರ್ವಹಣೆ ಹಾಗೂ ನೀತಿ ಸಂಶೋಧನಾ ಸಂಸ್ಥೆಯ (ಎಂಪ್ರಿ) ಅಧ್ಯಯನಗಳನ್ನು ಉಲ್ಲೇಖಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವರದಿ ಸಲ್ಲಿಸಿತ್ತು. ತರಕಾರಿಗಳ ಮಾಲಿನ್ಯದ ಪ್ರಮಾಣವನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದರ ಮೂಲದ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಇದಕ್ಕೆ ನಾನಾ ಇಲಾಖೆಗಳ ಸಹಯೋಗ ಪಡೆಯಬೇಕು ಎಂದು ಮಂಡಳಿ ಕೋರಿತ್ತು.

‘ದಿನಕ್ಕೊಂದು ಸೇಬು ವೈದ್ಯರನ್ನು ದೂರವಿರಿಸುತ್ತದೆ’ ಎಂಬುದು ಬಹಳ ಹಳೆಯು ಮಾತು. ಇವತ್ತು ಮಾರುಕಟ್ಟೆಯಲ್ಲಿ ಸಿಗುತ್ತಿರುವ ಸೇಬು ವೈದ್ಯರನ್ನು ದೂರವಿಡುತ್ತದೋ ಇಲ್ಲವೋ, ಆದರೆ ಬಹುತೇಕ ಸಂದರ್ಭದಲ್ಲಿ ಸ್ವಲ್ಪವೇ ಎಚ್ಚರ ತಪ್ಪಿದರೂ ಅದೇ ಸೇಬು ನಿಮ್ಮನ್ನು ಆಸ್ಪತ್ರೆ ಸೇರುವಂತೆ ಮಾಡಿ, ಅಲ್ಲಿಂದ ಸ್ಮಶಾನವನ್ನೂ ನಿಮಗೆ ಹತ್ತಿರವಾಗಿಸ ಬಲ್ಲುದು ಎಂದರೆ ನಂಬುತ್ತೀರಾ? ಮಾರುಕಟ್ಟೆಯಲ್ಲಿ ಸುಂದರವಾಗಿ ಜೋಡಿಸಿಟ್ಟಿರುವ ದಟ್ಟ ಕೆಂಪು ಬಣ್ಣದ, ಕಣ್ಣು ಕುಕ್ಕುವಂತೆ ಹೊಳೆಯುವ ಸೇಬು ಕಂಡರೆ ಬಾಯಲ್ಲಿ ನೀರೂರುವುದು ನಿಜ. ಹೀಗಾಗಿ ಅದನ್ನ ಕಂಡ ಕೂಡಲೇ ಹಿಂದೆ ಮುಂದೆ ಯೋಚಿಸದೇ ಖರೀದಿಸಿ ಬಿಡುತ್ತೇವೆ.

ಮನೆಗೆ ಹೋದಡನೆ ಮಕ್ಕಳು ಸಹ ಅದರ ಬಣ್ಣಕ್ಕೇ ಮಾರು ಹೋಗಿ ಬಾಯಿಗಿಡುತ್ತವೆ. ಆದರೆ ಸೇಬುವಿನ ಅಂಥ ಹೊಳೆಯುವ ಬಣ್ಣದ ಹಿಂದೆ ಜೀವ
ಮಾರಕ ರಾಸಾಯನಿಕಗಳು ನಮ್ಮ ದೇಹ ಸೇರುತ್ತವೆ ಎಂಬ ಸತ್ಯ ಬಹುತೇಕರಿಗೆ ಗೊತ್ತಿಲ್ಲ. ಸಾಮಾನ್ಯವಾಗಿ ಮಾರುಕಟ್ಟೆಗೆ ಬರುವ ಸೇಬು ಸೇರಿದಂತೆ ಬಹುತೇಕ ಹಣ್ಣುಗಳು ಕೃತಕವಾಗಿ ಮಾಗಿಸಲ್ಪಟ್ಟಿರುತ್ತದೆ. ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ಹಣ್ಣುಗಳು ಮಾಗುವ ಪ್ರಕ್ರಿಯೆಗೆ ಸಹಾಯ ಮಾಡುವ ರಾಸಾಯನಿಕಗಳು ಅಥವಾ ಹಣ್ಣುಗಳು ಬೇಗನೆ ಕಳಿತು ಹಾಳಾಗದಂತೆ ತಡೆಯಲು ಹಾಕುವ ಆಕ್ಸಿನ್‌ಗಳಂಥವುಗಳು ನೇರವಾಗಿ ನಮ್ಮ ಹೊಟ್ಟೆ ಸೇರಿ ದುಷ್ಪರಿಣಾಮ ಬೀರುತ್ತಿವೆ. ಇನ್ನು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳು ನಮ್ಮ ಕೃಷಿ ಪದ್ಧತಿಯ ಅನಿವಾರ್ಯ ಅಂಗಗಳೆಂಬಂತಾಗಿವೆ.

ಸಹಜವಾಗಿ ಇವೆಲ್ಲವೂ ನಾವು ತಿನ್ನುವ ಹಣ್ಣು ತರಕಾರಿಗಳು ಮಾತ್ರವಲ್ಲ ಪ್ರತಿ ಆಹಾರ ಧಾನ್ಯಗಳ ಮೂಲಕ ಪ್ರತಿದಿನ ದೇಹ ಸೇರುತ್ತಿವೆ. ಇಷ್ಟೇ ಆಗಿದ್ದರೆ ಸಮಾಧಾನಪಡಬಹುದಿತ್ತು. ರೈತರಿಂದ ಹಣ್ಣು ತರಕಾರಿಗಳನ್ನು ಖರೀದಿಸುವ ಮಧ್ಯವರ್ತಿ ಗಳು ಅದನ್ನು ಮಾರುಕಟ್ಟೆಗೆ ತರುವ ಮುನ್ನ ಗ್ರಾಹಕರನ್ನು
ಆಕರ್ಷಿಸಲು ಕೃತಕ ಬಣ್ಣಗಳನ್ನು ತುಂಬುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯ ವಂಚನೆ. ಅಂಥ ರಾಸಾಯನಿಕ ಗಳೇ ಸೇಬಿಗೆ ವಿಶಿಷ್ಟ ಪ್ರಕಾಶಮಾನ ಕೆಂಪು ನೋಟವನ್ನು ನೀಡುವುದು.

ಕ್ಯಾರೆಟ್ ಕಿತ್ತಳೆ ಬಣ್ಣದೊಂದಿಗೆ ಮಿರುಗುವುದು ಮತ್ತು ಕೋಸುಗಡ್ಡೆ ಅದರ ತಾಜ ಹಸಿರನ್ನು ಪಡೆಯುವುದು ಸಹ ಇದರಿಂದಲೇ! ಇನ್ನು ಸುವಾಸನೆ ಸೂಸುವ ಗುಲಾಬಿ ಅಥವಾ ದಟ್ಟ ಹಳದಿಯೊಂದಿಗೆ ಕಣ್ಣು ಕುಕ್ಕುವ ಚೀನೀಕಾಯಿ (ಸಿಹಿ ಗುಂಬಳ) ನಿಮ್ಮ ಕಣ್ಣನ್ನು ಪ್ರಚೋದಿಸುತ್ತವೆ. ನಾಲಗೆಯ
ರುಚಿ ಮೊಗ್ಗುಗಳು ಕೆರಳಿಸಬಹುದು. ಆದರೆ ಇವೆಲ್ಲದರ ಈ ‘ತಾಜತನದ’ ಹಿಂದೆ ನಿಜವಾಗಿ ಅತಿಭಯಂಕರ ರಾಸಾಯನಿಕಗಳ ಒಂದು ಅಹಿತಕರ ಮಿಶ್ರಣವಿದೆ ಎಂಬುದು ಅರಗಿಸಿಕೊಳ್ಳಲಾರದ ಸತ್ಯ. ದೀರ್ಘಾವಧಿಯಲ್ಲಿ ಇಂಥ ರಾಸಾಯನಿಕಗಳ ಸೇವನೆ ಖಂಡಿತಾ ಮಾರಕವೆಂಬುದು
ಸಾಬೀತಾಗಿದೆ.

ಸಾಮಾನ್ಯವಾಗಿ ನೀರಿನಲ್ಲಿ ಕರಗಬಲ್ಲ, ಬೇರೆ ಬೇರೆ ಉದ್ಯಮಗಳಲ್ಲಿ ಬಳಸುವ ರಾಸಾಯನಿಕ ಪದಾರ್ಥಗಳಾದ ರೊಡಮೈನ್‌ಆಕ್ಸೆಡ್, ತಾಮ್ರದ ಸಲೇಟ್, ಮೆಲಕೈಟ್ ಹಸಿರು, ಎರಿಟ್ರೋಜಿನ್ ಬಿ ಮತ್ತು ಅಪಾಯಕಾರಿ ಕಾರ್ಬೈಡ್‌ಗಳನ್ನು ಉಪಯೋಗಿಸಿ ಹಣ್ಣುಗಳು ಮತ್ತು ತರಕಾರಿಗಳಿಗೆ ಬಣ್ಣ ಹಾಗೂ ತಾಜತನದ ಭ್ರಮೆಯನ್ನು ತುಂಬಲಾಗುತ್ತದೆ. ಜವಳಿ ಉದ್ಯಮದಲ್ಲಿ ಬಟ್ಟೆಗಳಿಗೆ ಬಣ್ಣ ಹಾಕಲು ಬಳಸುವ ಮೆಲಕೈಟ್ ದ್ರಾವಣದಲ್ಲಿ ಮುಳುಗಿಸಿ
ಮೆಣಸಿನಕಾಯಿ, ಕ್ಯಾಪ್ಸಿಕಮ್, ಸೌತೆಕಾಯಿಗಳು ಮತ್ತು ಬಟಾಣಿಗಳಿಗೆ ಹಚ್ಚ ಹಸಿರನ್ನು ತುಂಬಲಾಗುತ್ತದೆ.

ಮೆಲಕೈಟ್ ದೇಹ ಸೇರಿದಲ್ಲಿ ಜೀವಕೋಶಗಳನ್ನು ಕೊಂದು ಕ್ಯಾನರ್ ಕಾರಕವೂ ಆಗಬಲ್ಲುದು. ಸೋರೆಕಾಯಿ, ಹೀರೆಕಾಯಿ, ಹಾಗಲ, ಬೀನ್ಸ್, ಬೆಂಡೆಕಾಯಿ ಮತ್ತು ನುಗ್ಗೇ ಕಾಯಿ ಗಳಂಥವಕ್ಕೆ ತಾಮ್ರದ ಸಲೇಟ್ ದ್ರಾವಣದಿಂದ ಕೃತಕ ಬಣ್ಣ ಕಟ್ಟಲಾಗುತ್ತದೆ. ಇನ್ನು ತಾಮ್ರದ ಸಲೇಟ್ ಎಲ್ಲರಿಗೂ
ತಿಳಿದಿರುವಂತೆ ಅತ್ಯುತ್ತಮ ಶಿಲೀಂಧ್ರನಾಶಕ. ಕೃಷಿಯಲ್ಲಿ ಹೆಚ್ಚಾಗಿ ಬಳಸಲ್ಪಡುತ್ತದೆಆದರೆ ಇದರ ಅಂಶ ದೇಹ ಸೇರಿದರೆ ಅದು ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಹಾನಿಕಾರಕ ಎನ್ನುತ್ತಾರೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಕರುಣೇಶ್ ಕುಮಾರ್ ಎಚ್. ಎಸ್. ಇಂಥ ರಾಸಾಯನಿಕಗಳು ದೇಹದಲ್ಲಿ ಸೇರಿ ಸ್ವತಂತ್ರ ರಾಡಿಕಲ್‌ಗಳನ್ನು ಸೃಷ್ಟಿಸುತ್ತವೆ. ಇದರಿಂದ ವ್ಯಕ್ತಿಗಳಿಗೆ ವಯಸ್ಸಿಗೆ ಮೊದಲೇ ಮುಪ್ಪಡರುತ್ತದೆ. ಇದಲ್ಲದೇ ಸ್ಟ್ರಾಬೆರಿ, ಚೆರ್ರಿ, ಗೆಣಸು ಮತ್ತು ಸೇಬುಗಳಿಗೆ ಬಣ್ಣ ತಂದುಕಡುವ ಮಾರಕ ರಾಸಾಯನಿಕಗಳಾದ ಕಾರ್ಸಿನೋಜೆನಾಂಡ್ ಹಾಗೂ ರೋಡಮೈನ್-ಬಿ ಗಳು ಚರ್ಮದ ಕಾಯಿಲೆ ಮತ್ತು ಸೋಂಕುಗಳಿಗೆ ಕಾರಣವಾಗಬಹುದು.

ಹಣ್ಣುಗಳು ಮತ್ತು ತರಕಾರಿಗಳನ್ನು ತಾಜಾ ಆಗಿರುವಂತೆ ಕಾಣಲು ಮತ್ತೊಂದು ರಾಸಾಯನಿಕ ಎರಿಟ್ರೋಜಿನ್-ಬಿ ಅನ್ನು ವಿಪರೀತವಾಗಿ ಬಳಸಲಾಗುತ್ತದೆ. ಜತೆಗೆ ಅದರ ಮೇಲೆ ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಸಿಂಪಡಿಸಿರುತ್ತಾರೆ, ಇದನ್ನು ಹೆಚ್ಚಾಗಿ ಸೊಪ್ಪುಗಳಲ್ಲಿ ಬಳಸಲಾಗುತ್ತದೆ. ಮಾವಿನಹಣ್ಣು ಮತ್ತು ಬಾಳೆಹಣ್ಣುಗಳನ್ನು ಕೃತಕವಾಗಿ ಹಣ್ಣಾಗಿಸಲು ವಿವಧ ಕಾರ್ಬೈಡ್‌ಗಳು, ಆರ್ಸೆನಿಕ್ ಮತ್ತು ರಂಜಕವನ್ನು ಬಳಸಲಾ
ಗುತ್ತದೆ. ಇವು ಕ್ಯಾನ್ಸರ್ ಜನಕವಲ್ಲದೆ, ಮೆದುಳಿಗೂ ಹಾನಿಕಾರಕ. ಕಾರ್ಬೈಡ್‌ಗಳು ನಮ್ಮ ದೇಹ ಸೇರಿದೊಡನೆ ಅಸಿಟಲೀನ್ ಅನಿಲವನ್ನು ಉತ್ಪತ್ತಿ ಮಾಡುತ್ತವೆ, ಇದು ಮಿದುಳಿನ ಸರೆಬ್ರಲ್‌ಗೆ ಹಾನಿ ಮಾಡಿ, ದೀರ್ಘಕಾಲದ ಹೈಪೋಕ್ಸಿಯಾ, ಬುದ್ಧಿಮಾಂದ್ಯತೆಯಂತಹ ವಿವಿಧ ನರ ದೌರ್ಬಲ್ಯ ಕಾಯಿಲೆಗಳಿಗೆ ಕಾರಣವಾಗಬಹುದು ಎಂಬುದು ಡಾ.ಕರುಣೇಶ್ ಕುಮಾರ್ ವಿವಿರಣೆ.

ಇಷ್ಟು ಸಾಲದೆಂಬಂತೆ ಮಾರಾಟಗಾರರು ಟೊಮೇಟೊ, ಮೆಣಸಿನಕಾಯಿ, ಸೇಬು ಮತ್ತು ಬದನೆಕಾಯಿಯಂಥವುಗಳ ಮೇಲೆ ಪೆಟ್ರೋಲಿಯಂ ಅಂಶವನ್ನು ಉಜ್ಜಿ ‘-ರ್ಮ್- -ಶ್’ಲುಕ್ ನೀಡುತ್ತಾರೆ! ಪೆಟ್ರೋಲಿಯಂ, ಕಾರ್ಸಿ ನೋಜೆನ್ ಕೂಡ ಮಾನವ ದೇಹಕ್ಕೆ ವಿಷಕಾರಿ. ಇದು ವಿವಿಧ ಶ್ವಾಸಕೋಶ, ಜಠರ ಹಾಗೂ ಕರುಳಿನ ಸಮಸ್ಯೆಗಳನ್ನು ಉಂಟುಮಾಡುತ್ತವೆ. ದಿನದ ಕೊನೆಯಲ್ಲಿ ಅಳುದುಳಿದ ತರಕಾರಿ-ಹಣ್ಣುಗಳನ್ನು ರಾಶಿ ಮಾಡಿ, ಅದು ಹಾಳಾಗದೇ -ಶ್ ಆಗಿ ಇರುವಂತೆ ಭಾಸವಾಗಿಸಲು ಅವುಗಳ ಮೇಲೆ  ಸಿಲಿಕಾನ್‌ಗಳನ್ನು ಸಹ ಸಿಂಪಡಿಸಲಾಗುತ್ತದೆ. ನಂತರ ನೀಲಿ ಟ್ರಿಯಾಲ್ ದ್ರಾವಣದಲ್ಲಿ ಮುಳುಗಿಸಿ ತೆಗೆಯಲಾಗುತ್ತದೆ.

ಇಷ್ಟಕ್ಕೇ ಹಣ್ಣು- ತರಕಾರಿಗಳ ತಾಜಾತನದ ಮೋಸ ಮುಗಿಯುವುದಿಲ್ಲ. ಇದು ಆರಂಭವಾಗುವುದೇ ರೈತರ ಹೊಲದಲ್ಲಿ. ಬಲುಬೇಗ ಬೆಳೆದು ಉತ್ಪನ್ನಗಳನ್ನು ಮಾರುಕಟ್ಟೆಗೆ ರವಾನಿಸಲು ಕೆಲ ರೈತರೇ ಹಾರ್ಮೋನುಗಳನ್ನು ಬಳಸುತ್ತಾರೆಂದರೆ ನಂಬಲೇಬೇಕು! ಪ್ರಾಣಿಗಳ ಬೆಳವಣಿಗೆಗೆ ಬಳಸಲಾಗುವ ಆಕ್ಸಿಟೋಸಿನ್‌ನಂತಹ ಹಾರ್ಮೋನುಗಳನ್ನು ಚುಚ್ಚಲಾಗುತ್ತದೆ.

ಕೃಷಿಯ ರಂಗ ಸಹ ಜಗತೀಕರಣಗೊಂಡ ಪರಿಣಾಮ ಇದು ರೈತರು ಮತ್ತು ಮಾರಾಟಗಾರರನ್ನು ಒಟ್ಟಾಗಿ ಭ್ರಷ್ಟ ಗೊಳಿಸಿರುವ ಜಾಗತಿಕ ಮಾರುಕಟ್ಟೆ ಪ್ರಭಾವ ಇಡೀ ಕೃಷಿ-ಕೃಷಿ ಉತ್ಪನ್ನಗಳ ಮೇಲಿನ ನಂಬಿಕೆಗೇ ಕೊಡಲಿಯೇಟು ನೀಡಿದೆ. ಈ ಹಿನ್ನಲೆಯಲ್ಲಿ ‘ತಾಜ ಹಣ್ಣು ಮತ್ತು ತರಕಾರಿ’ ಎಂಬ ಪದವೇ ಸವಕಲಾಗಿದೆ. ದೇಹದ ಪೌಷ್ಟಿಕಾಂಶಗಳನ್ನು ಹೆಚ್ಚಿಸಿ ನೆಮ್ಮದಿ ಜೀವನಕ್ಕೆ ಸಹಾಯಕವಾಗಬೇಕಿದ್ದ ಹಣ್ಣು- ತರಕಾರಿಗಳ ಬಗೆಗಿನ ‘ಶುದ್ಧ-ಆರೋಗ್ಯಕರ’ ಎಂಬ ಮೂಲಭೂತ ಹೆಗ್ಗಳಿಕೆಯನ್ನೇ ರಾಸಾಯನಿಕಗಳ ನಿರ್ಲಜ್ಜ ಬಳಕೆ ಕೊಂದು ಹಾಕಿದೆ.

ಪೌಷ್ಟಿಕಾಂಶದ ಪ್ರಯೋಜನಗಳನ್ನು ದೊರಕಿಸಿಕೊಡುವ ಬದಲು ಇವೇ ಜೀವ ಮಾರಕವಾಗಿವೆ. ಇನ್ನೊಂದೆಡೆ ದೇಶಕ್ಕೆ ದೇಶವೇ ಜ್ವರ ಪೀಡಿತವಾಗುತ್ತಿದೆ.
ಡೆಂ, ಚಿಕೂನ್ ಗುನ್ಯಾ, ಮಲೇರಿಯಾ, ಕಾಲರಾ, ಹಕ್ಕಿ ಜ್ವರ, ಇದೀಗ ಹಂದಿ ಜ್ವರ ಹೀಗೆ ದಿನಕ್ಕೊಂದು ಕಾಯಿಲೆಗಳು ನಮ್ಮನ್ನು ಬಾಧಿಸುತ್ತಲೇ ಇವೆ. ಸಾಲದದ್ದಕ್ಕೆ ಅತ್ತ ಕರೋನಾವನ್ನು ಜಗತ್ತಿಗೇ ಕೊಡುಗೆಯಾಗಿ ನೀಡಿದ ಚೀನಾ ಮತ್ತೊಮ್ಮೆ ವಿಚಿತ್ರ ನ್ಯುಮೋನಿಯಾದಿಂದ ನಲುಗುತ್ತಿದೆ. ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಓಡಾಡಿದರೆ ತೃಪ್ತಿ ಇಲ್ಲ. ತ್ರೀ ಮೈಕ್ರಾನ್ ಗಾತ್ರದ ಸೂಕ್ಷ್ಮ ಜೀವಾಣುಗಳೂ ಒಳ ಪ್ರವೇಶಿಸದಂತೆ ತಡೆಯುವ ಮೆಡಿಕೇಟೆಡ್ ಮುಖವಾಡವನ್ನೇ ಹಾಕಿಕೊಂಡು ಶಾಲೆಗೆ ಹೋಗಬೇಕೆಂದು ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿರುವ ಮಕ್ಕಳೂ ಹಠ ಮಾಡುತ್ತವೆ. ಹಾಗೆಂದು ಟೀಚರ್ ತಾಕೀತು ಮಾಡಿ ಅವನ್ನು ಕಳಿಸಿರುತ್ತಾರೆ. ಅನಿವಾರ್ಯವಾಗಿ ನೂರಾರು ರು. ತೆತ್ತು ಮುಖವಾಡ ಕಟ್ಟಿ ಕಳಿಸುತ್ತೇವೆ.

ಅದು ಕಿರಿಕಿರಿ ಎನಿಸುತ್ತಿದ್ದರೂ ಮಕ್ಕಳು ಸಸಿಕೊಂಡು ಶಾಲೆಗೆ ಹೋಗುತ್ತವೆ. ಮನೆಯಲ್ಲೇ ಲಾವಂಚದ ಬೇರು, ಜೀರಿಗೆ, ತುಳಸಿ ಹಾಕಿ ಕುದಿಸಿದ, ಪಚ್ಚ ಕರ್ಪೂರ ಬೆರೆಸಿದ ಸುವಾಸನಾಯುಕ್ತ ನೀರಿನ ಮೇಲೆ ನಮಗೆ ನಂಬಿಕೆ ಬರುವುದೇ ಇಲ್ಲ. ನೂರಾರು ರುಪಾಯಿ ಕೊಟ್ಟರೂ ಪರವಾಗಿಲ್ಲ, ರಿಸ್ಕ್ ಏಕೆಂದುಕೊಂಡು ಮಿನರಲ್ ವಾಟರ್ ಕ್ಯಾನ್‌ಗಳನ್ನೇ ತರಿಸಿ ಮನೆಯಲ್ಲಿ ಪೇರಿಸಿಟ್ಟುಕೊಳ್ಳುತ್ತೇವೆ. ಒಂದು ಮಾತು ನೆನಪಿಡಲೇಬೇಕು, ಅಶುದ್ಧ ನೀರು ಇಡೀ ಮಾನವ ಬದುಕನ್ನೇ ಅಸ್ಥಿರಗೊಳಿಸುತ್ತಿದೆ. ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನೇ ನೀರು ಬುಡಮೇಲು ಮಾಡುತ್ತಿದೆ ಎಂದರೆ ಅಚ್ಚರಿ ಎನಿಸ ಬಹುದು. ಆದರೆ ಇದು ಸತ್ಯ.

ಶುದ್ಧ, ಕಲ್ಮಷರತ, ಆರೋಗ್ಯಪೂರ್ಣ ನೀರು ಮಾತ್ರ ಅಭಿವೃದ್ಧಿಯ ಸೂಚ್ಯಂಕವನ್ನು ಏರುಮುಖಗೊಳಿಸಬಹುದು. ಸಾಂಕ್ರಾಕಗಳಿಂದ ಮುಕ್ತ, ಬ್ಯಾಕ್ಟೀರಿಯಾ ರತ, ರಾಸಾಯನಿಕಗಳಿಂದ ದೂರರುವ ನೀರು ನಿಜವಾದ ಅಭಿವೃದ್ಧಿಯ ಸಂಕೇತ. ಮುಂದುವರಿದ ರಾಷ್ಟ್ರಗಳ ಸಾಲಿನತ್ತ ದಾಪು ಗಾಲಿಡುತ್ತಿರುವ ಭಾರತ ಈ ದೃಷ್ಟಿಯಿಂದ ಎಷ್ಟರ ಮಟ್ಟಿಗೆ ಅಭಿವೃದ್ಧಿಯನ್ನು ಸಾಽಸಿದೆ? ಬಹುಶಃ ಇದು ಪ್ರಶ್ನೆಯಾಗಿಯೇ ಉಳಿದುಕೊಳ್ಳುತ್ತದೆ.

ಮೇಲ್ನೋಟಕ್ಕೆ ನಾವು ಪಟ್ಟಿ ಮಾಡ ಹೊರಟರೆ ನೀರಿನಿಂದಲೇ ಹರಡುವ ಏನಿಲ್ಲವೆಂದರೂ ಒಂದು ಹತ್ತಿಪ್ಪತ್ತು ಕಾಯಿಲೆಗಳನ್ನು ಹೆಸರಿಸಬಹುದು. ನೀರಿನ ವೈರಾಣುಗಳಿಂದ ಹರಡಬಹುದಾದ ವೈರಲ್ ಫೀವರ್, ಹೆಪಟೈಟಿಸ್, ಪೊಲಿಯೋ ಇತ್ಯಾದಿಗಳು ಸಾಮಾನ್ಯವೆಂಬಂತಾಗಿದೆ. ಇನ್ನು ಬ್ಯಾಕ್ಟೀರಿಯಾಗಳಿಂದ ಬರುವ ಟೈಫಾಯ್ಡ್, ಪ್ಯಾರಾಟೈಫಾಯ್ಡ್, ಕಾಲರಾ, ಸೂಕ್ಷ್ಮಾಣುಗಳಿಂದ ಬರುವ ಭೇದಿ (ಬ್ಯಾಸೆಲರಿ ಡೀಸೆಂಟ್ರಿ) ಡಯೇರಿಯಾ ಇತ್ಯಾದಿಗಳಲ್ಲದೆ ಅಮೀಬಿಯಾಸಿಸ್‌ನಂಥ ಮಾರಕ ರೋಗಗಳ ನಿರ್ಮೂಲನೆ ನಮ್ಮಿಂದ ಸಾಧ್ಯವೇ ಆಗಿಲ್ಲ.

ಜಂತುಗಳ ಹಾವಳಿಯಂತೂ ಅಶುದ್ಧ ನೀರಿನ ಬಹುದೊಡ್ಡ ಬಳುವಳಿ. ಇದಲ್ಲದೇ ಸ್ಕಿಸ್ಟೋಸೋಮಿಯಾಸಿಸ್, ಗುನ್ಯಾ, ಮೀನಿನ ಬಾಲದ
ಜಂತುವಿನ ಬಾಧೆ ಅಸಹನೀಯ ವೇದನೆಗೆ ಮಾನವನನ್ನು ತುತ್ತಾಗಿಸುತ್ತಿವೆ. ಚರ್ಮ ಸಂಬಂ ರೋಗಗಳು, ಹಲ್ಲಿನ ತೊಂದರೆಗಳು, ಮೂಳೆಗಳಿಗಾಗುತ್ತಿರುವ ಧಕ್ಕೆ…. ಇಂಥವು ಗಳನ್ನು ಬಹುತೇಕರು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಹೀಗಾಗಿ ಇದು ಗಣನೆಗೆ ಸಿಗುತ್ತಿಲ್ಲ. ಆದರೆ ಇವುಗಳು ಉಲ್ಬಣಾ ವಸ್ಥೆಯಲ್ಲಿ ಮಾತ್ರ ತೀರಾ ಅಸಹನೀಯ. ಎಷ್ಟೋ ಬಾರಿ ಅಶುದ್ಧ, ಅಸಮತೋಲಿತ ನೀರಿನ ಸೇವನೆ, ಜಠರ, ಮೂತ್ರಕೋಶಗಳಂಥ ಪ್ರಮುಖ ಅಂಗಗಳಿಗೆ ಹಾನಿ ತಂದು ಜೀವವನ್ನೇ ಬಲಿ ತೆಗೆದುಕೊಂಡಿರುವ ಉದಾಹರಣೆ ಗಳೂ ಇವೆ.

ಇವೆಲ್ಲದರ ನಡುವೆಯೂ ನಾವು ನಲ್ಲಿಯಲ್ಲಿ ಬರುವ ನೀರನ್ನು ಕಣ್ಣು ಮುಚ್ಚಿಕೊಂಡು ಕುಡಿದಿದ್ದೇವೆ; ಕುಡಿಯುತ್ತಿದ್ದೇವೆ. ಕನಿಷ್ಠ ಆ ನೀರಿನ ಮೂಲ ಯಾವುದು ಎಂಬುದರ ಬಗ್ಗೆಯೂ ಯೋಚಿಸಿಲ್ಲ. ಇಂಥ ಸಂದರ್ಭದಲ್ಲಿ ಸಂಸ್ಕರಣೆ ಎಂಬ ಪ್ರಶ್ನೆಯೇ ಇಲ್ಲ. ನೀರಿನ ಕಲುತತೆ, ಅವುಗಳಲ್ಲಿ ಅಪಾಯಕಾರಿ ಕೀಟ ನಾಶಕ ಅಂಶಗಳಿರುವ ಕುರಿತಾದ ಕೂಗು ಎದ್ದಿರುವುದು ಇಂದು ನಿನ್ನೆಯದಲ್ಲ. ದಶಕಗಳಿಂದಲೂ ಈ ಸಂಬಂಧ ಒಂದಲ್ಲ ಒಂದು ವೇದಿಕೆಯಲ್ಲಿ ಚರ್ಚೆ ನಡೆಯುತ್ತಲೇ ಇದೆ. ವರ್ಷಕ್ಕೆ ೪೫ ಸಾವಿರ ಟನ್ ಕೀಟನಾಶಕವನ್ನು ಬಳಸುತ್ತಿರುವ ಭಾರತ ದಲ್ಲಿ ಬಹುಶಃ ಇದಕ್ಕಿಂತ ಇನ್ನೂ ಉತ್ತಮ ಗುಣಮಟ್ಟದ ನೀರು ಸಿಗಲು ಸಾಧ್ಯವೇ ಇಲ್ಲವೆನಿಸುತ್ತದೆ. ಎಷ್ಟೇ ಸಂಸ್ಕರಿಸಿದರೂ ಅಂತರ್ಜಲವೇ ವಿಷಯುಕ್ತವಾಗಿರುವಾಗ ಶುದ್ಧ ನೀರು ಮರೀಚಿಕೆಯಾಗುವುದು ಸಹಜ. ಆದರೆ ಆತಂಕ ವೆಂದರೆ ಪ್ರತಿದಿನ ಮಿಲಿಯನ್ ಗಟ್ಟಲೆ ಗ್ಯಾಲನ್ ನೀರನ್ನು ನಮ್ಮ ಹಳ್ಳಿಯ ಮಂದಿ ಭೂಮಿಯಿಂದ ಎತ್ತಿ ಸಂಸ್ಕರಿಸದೇ ನೇರವಾಗಿ ಕುಡಿಯುತ್ತಿದ್ದಾರೆ. ಅವರು ಬಳಸುವ ನೀರಿನಲ್ಲಿ ಇನ್ನೆಷ್ಟು ಪ್ರಮಾಣದ ಕಲ್ಮಶವಿದ್ದೀತು? ಇನ್ನಾದರೂ ಯೋಚಿಸಬೇಕಿದೆ.