Monday, 16th September 2024

ಏನಾದರೂ ಸರಿಯೇ, ದೊಡ್ಡವರು ದೊಡ್ಡವರೇ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

ಕೆಲವು ಘಟನೆಗಳನ್ನು ಮರೆತರೂ, ಅವು ನಮ್ಮನ್ನು ಬೇರೊಂದು ರೀತಿಯಲ್ಲಿ ನೆನಪಿಸುತ್ತಲೇ ಇರುತ್ತವೆ. ಆ ಘಟನೆಗಳು ನಮ್ಮಂದು ವಿವೇಕದ ಸೆಲೆಯನ್ನು ಮೂಡಿಸುತ್ತಲೇ ಇರುತ್ತವೆ. ಅದರಲ್ಲೂ ಅವು ನಮಗೆ ಬೇಕಾದವರ ಕುರಿತಾಗಿದ್ದರೆ, ಸಂಬಂಧ ವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಹಾಯಕವಾಗುತ್ತದೆ. ಈ ಮಾತನ್ನು ಯಾಕೆ ಹೇಳುತ್ತಿದ್ದೇನೆಂದರೆ, ಕಳೆದ ವರ್ಷ ಒಂದು ಘಟನೆ ನಡೆಯಿತು.

ಅದೊಂದು ತೀರಾ ಅನಪೇಕ್ಷಿತ ಪ್ರಸಂಗ. ಹಿಂದಿನ ವರ್ಷ ರಾಜ್ಯ ಸರಕಾರ ಕೆಲವು ಪ್ರಾಧಿಕಾರ ಮತ್ತು ಅಕಾಡೆಮಿಗಳಿಗೆ ಮುಖ್ಯಸ್ಥ ರನ್ನು ನೇಮಿಸಿತು. ಪುಸ್ತಕ ಪ್ರಾಧಿಕಾರಕ್ಕೆ ಅಧ್ಯಕ್ಷರೊಬ್ಬರನ್ನು ನೇಮಿಸಿದ ಬಗ್ಗೆ ನಾನು ನನ್ನ ಅಂಕಣದಲ್ಲಿ ಟೀಕಿಸಿ ಬರೆದಿz. ಆ ಅಧ್ಯಕ್ಷರ ನೇಮಕದ ಹಿಂದೆ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಗಳು ಪ್ರಭಾವ ಬೀರಿದ್ದಾರೆಂದು ನನ್ನ ಮೂಲಗಳು ಖಚಿತಪಡಿಸಿದ ಹಿನ್ನೆಲೆಯಲ್ಲಿ ಬರೆದ ಲೇಖನ ಅದಾಗಿತ್ತು. ಈ ಲೇಖನ ವಿವಾದವನ್ನೆಬ್ಬಿಸಿತು.

ಮೈಸೂರಿನಲ್ಲಿ ಶ್ರೀಗಳ ಭಕ್ತರು ಪತ್ರಿಕೆಯ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ಮಾಡಿದರು. ಇದಕ್ಕೆ ಶ್ರೀಗಳ ಸಮ್ಮತಿ ಇಲ್ಲ ಎಂಬುದು ನನಗೆ ನೂರಕ್ಕೆ ನೂರರಷ್ಟು ಗೊತ್ತಿತ್ತು. ಕಾರಣ ನನ್ನ ಮತ್ತು ಶ್ರೀಗಳ ಅವರ ಸಂಬಂಧ ಅಂಥದ್ದು. ಅಷ್ಟಕ್ಕೂ ನಾನು ಆ ಲೇಖನವನ್ನು ಸದುದ್ದೇಶದಿಂದಲೇ ಬರೆದಿz. ಸ್ವಾಮೀಜಿ ಹೆಸರಿಗೆ ಸ್ವಲ್ಪವೂ ಅಪಚಾರವಾಗಬಾರದು ಎಂಬುದೇ ನನ್ನ ಪ್ರಧಾನ ಆಶಯವಾಗಿತ್ತು. ಆದರೆ ಕೆಲವರು ಅದನ್ನು ಅಪಾರ್ಥ ಮಾಡಿಕೊಂಡರು. ನಾನು ಕಳೆದ ಕಾಲು ಶತಮಾನದಿಂದ ಶ್ರೀಗಳ ಜತೆ ಹತ್ತಿರದ ಒಡನಾಟ ಇಟ್ಟುಕೊಂಡವನು. ಸುತ್ತೂರು ಮಠದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವನು. ಸ್ವಾಮೀಜಿ ಅವರ ಜತೆಗೆ ಹತ್ತಾರು ವೇದಿಕೆಗಳಲ್ಲಿ ಭಾಗವಹಿಸಿದವನು. ಮಠದ ಚಿಂತಕರ ಚಾವಡಿಯ ಸದಸ್ಯನೂ ಆಗಿದ್ದವನು.

ಸುತ್ತೂರು ಮಠಕ್ಕೆ ಡಾ.ಅಬ್ದುಲ್ ಕಲಾಂ ಬಂದಾಗ, ಸ್ವಾಮೀಜಿ ಅವರು ನನ್ನ ಕುಟುಂಬವನ್ನು ವೇದಿಕೆಗೆ ಕರೆದು, ರಾಷ್ಟ್ರಪತಿ ಗಳಿಂದ ಸನ್ಮಾನ ಮಾಡಿಸುವ ಮೂಲಕ ತೋರಿದ ವಿಶೇಷ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಮಠದಲ್ಲಿ ನಡೆಯುವ ಹತ್ತಾರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಶ್ರೀಗಳು ನನಗೆ ಅನೇಕ ಬಾರಿ ಕಲ್ಪಿಸಿಕೊಟ್ಟಿದ್ದಾರೆ. ನನ್ನ ಮತ್ತು ಅವರ ನಡುವಿನ ಈ ಗೌರವಪೂರ್ವಕ ಬಾಂಧವ್ಯ ಅಂದಿನಿಂದ ಇಂದಿನವರೆಗೂ, ಒಂದು ಸಣ್ಣ ಪ್ರಮಾಣದ ಲೋಪ ವನ್ನು ಕಂಡಿಲ್ಲ.

ಇವೆಲ್ಲಕ್ಕಿಂತ ಮಿಗಿಲಾಗಿ, ಸುತ್ತೂರು ಶ್ರೀಗಳಂದು ವಿಶೇಷ ಗುಣವಿದೆ. ಅದೆಂದರೆ ಅವರ ಸಕಾರಾತ್ಮಕ, ಪ್ರಚ್ಛನ್ನ ವ್ಯಕ್ತಿತ್ವ. ಅವರು ಪೀಠಕ್ಕೆ ಬಂದಂದಿನಿಂದ ಒಂದು ಸಲವೂ ಆಕಾರಣಕ್ಕೆ ಸುದ್ದಿಯಾದವರಲ್ಲ. ಪ್ರಚಾರಪ್ರಿಯರೂ ಅಲ್ಲ. ವಿವಾದವನ್ನು ಮೈಮೇಲೆ ಎಳೆದುಕೊಂಡವರಲ್ಲ. ಅವರು ಜಾತಿ, ಸಮುದಾಯವನ್ನು ಮೀರಿ ಎ ರಾಜಕೀಯ ಪಕ್ಷಗಳ ನಾಯಕರ ಜತೆಗೂ ಉತ್ತಮ ಬಾಂಧವ್ಯ ಹೊಂದಿದವರು.

ಅವರೊಂದು ತುಂಬಿದ ಕೊಡ. ಸದಾ ಮಂದಸ್ಮಿತವನ್ನೇ ಮುಖಮುದ್ರೆಯನ್ನಾಗಿಸಿಕೊಂಡ ಸ್ವಾಮೀಜಿ, ನಕಾರಾತ್ಮಕತೆಯಿಂದ ಯಾವತ್ತೂ ದೂರ. ಸಭೆ – ಸಮಾರಂಭಗಳಲ್ಲೂ ಅವರ ಮಾತು ನ್ಯಾಯಪೀಠದಲ್ಲಿ ಕುಳಿತ ನ್ಯಾಯವೇತ್ತನನ್ನು ನೆನಪಿಸುತ್ತದೆ.
ಕೊನೆಯಲ್ಲಿ ಇಡೀ ಕಾರ್ಯಕ್ರಮವನ್ನು ಶ್ರೀಗಳು sum up  ಮಾಡುವ ರೀತಿ ಮಾತ್ರ ಅನುಕರಣೀಯ. ಶ್ರೀಗಳದು ಸಮಚಿತ್ತ, ಸಂತುಲಿತ ಭಾವ. ಅವರ ಬಾಯಿಂದ ಒಮ್ಮೆಯೂ ಅಪದ್ಧಗಳು, ಅಸಂಬದ್ಧಗಳು, ಆಭಾಸಗಳು ಹೊರಹೊಮ್ಮಿದ್ದೇ ಇಲ್ಲ. ಅವರು ಅಷ್ಟು ಸಮತೋಲಿತ ವ್ಯಕ್ತಿ.

ಬದನವಾಳು ಹೊತ್ತಿ ಉರಿದಾಗ, ಸ್ವಾಮೀಜಿ ಎ ಪಕ್ಷಗಳ ರಾಜಕೀಯ ಪ್ರಮುಖರನ್ನು ಒಟ್ಟಿಗೆ ಕರೆದುಕೊಂಡು ಪ್ರಕ್ಷುಬ್ಧ ಸ್ಥಿತಿ ಯಲ್ಲೂ ಆ ಗ್ರಾಮದಲ್ಲಿ ಶಾಂತಿ ಪಾದಯಾತ್ರೆ ಮಾಡಿ ಸೌಹಾರ್ದತೆ ಬೆಳಗಿದ ರೀತಿ ಲೋಕಮಾನ್ಯ. ಇನ್ನು ಅವರು ಮಠದ ಕಾರ್ಯಚಟುವಟಿಕೆಗಳನ್ನು ಬೆಳೆಸಿದ ರೀತಿ ಎ ಮಠಾಧೀಶರಿಗೂ ದಾರಿದೀಪ. ಶಿಸ್ತು, ಅಚ್ಚುಕಟ್ಟುತನ, ಒಳ್ಳೆಯ ಆಡಳಿತ ಮತ್ತು
ಸಮಾಜಮುಖಿ ಕೆಲಸಗಳಿಗೆ ಸುತ್ತೂರು ಮಠ ಅತ್ಯುತ್ತಮ ನಿದರ್ಶನ.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಶ್ರೀಗಳು ನನ್ನನ್ನು ನಡೆಸಿಕೊಂಡ ರೀತಿ, ಅನೇಕ ಸಲ ನನಗೇ ಬೆರಗು ಮೂಡಿಸಿದೆ. ಅಂಥವರನ್ನು ನಾನು ನೋಯಿಸುವ ಅಥವಾ ವೃಥಾ ಟೀಕೆ ಮಾಡುವ ಪ್ರಶ್ನೆಯೇ ಇಲ್ಲ. ಅದು ‘ವಿಶ್ವೇಶ್ವರ ಭಟ್ ಬ್ರಾಂಡ್ ಆಫ್ ಜರ್ನಲಿಸಂ’ ಅಲ್ಲ. ಆದರೂ ಆ ಲೇಖನಕ್ಕೆ ಹುಳಿ ಹಿಂಡಿ, ಉಪ್ಪು ಖಾರ ಸವರುವ ಕೆಲಸವನ್ನು ಕೆಲವರು ಮಾಡಿದರು. ಇನ್ನು ಕೆಲವರು ಬೇಳೆ ಬೇಯಿಸಿಕೊಳ್ಳುವ ಹುನ್ನಾರಕ್ಕೂ ಮುಂದಾದರು. ನನಗೆ ಚೆನ್ನಾಗಿ ಗೊತ್ತಿತ್ತು, ಶ್ರೀಗಳು ನನ್ನ ಆಶಯವನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆಂದು. ಅಷ್ಟಕ್ಕೂ ಅವರು ಆ ಲೇಖನದಿಂದ ಸ್ವಲ್ಪವೂ ವಿಚಲಿತರಾಗಿರಲಿಲ್ಲ.

ಮನಸ್ಸನ್ನು ಕೆಡಿಸಿಕೊಂಡಿರಲಿಲ್ಲ. ಮೂರು-ನಾಲ್ಕು ದಿನ ಮೈಸೂರಿನ ಸುತ್ತಮುತ್ತ ಪ್ರತಿಭಟನೆ, ನಿಂದನೆ ಮತ್ತು ವಿವಾದದ
ಕಾವು ಇತ್ತು. ನಂತರ ಎಲ್ಲವೂ ತಣ್ಣಗಾಯಿತು. ಇಡೀ ಘಟನೆಯಿಂದ ಶ್ರೀಗಳಿಗೆ ಎ ಕಸಿವಿಸಿಯಾಗಿರಬಹುದಾ ಎಂದು ನಾನು ನನ್ನೊಳಗೆ ಮುಜುಗರಪಟ್ಟುಕೊಂಡೆ. ಸುಳ್ಳೇಕೆ, ‘ಇದು ಬೇಕಿತ್ತಾ?’ ಎಂದು ಬೇಸರವನ್ನೂ ಪಟ್ಟುಕೊಂಡೆ. ಸಂಪಾದಕನ ಬದುಕಿ ನಲ್ಲಿ ಇವೆ ಇದ್ದಿದ್ದೇ ಎಂದುಕೊಂಡು ಸುಮ್ಮನಾದೆ. ಆದರೆ ಈ ವಿವಾದದಲ್ಲಿ ಶ್ರೀಗಳು ನಡೆದುಕೊಂಡ ರೀತಿ, ನನಗೆ ಅವರ ಬಗೆಗಿದ್ದ ಗೌರವ, ಅಭಿಮಾನವನ್ನು ಇಮ್ಮಡಿಗೊಳಿಸಿತು.

ಒಂದು ತಿಂಗಳ ನಂತರ..ನಮ್ಮ ಪತ್ರಿಕೆಯ ಸಂಪಾದಕೀಯ ಸಲಹೆಗಾರರೂ, ಆತ್ಮೀಯರೂ ಆದ ನಂಜನಗೂಡು ಮೋಹನ್ ಅವರು, ತಮ್ಮ ಮಗನ ಮದುವೆ ಆಮಂತ್ರಣ ನೀಡಲು ಸುತ್ತೂರು ಮಠಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಈ ವಿವಾದ
ಪ್ರಸ್ತಾಪವಾಯಿತಂತೆ. ಮೋಹನ್ ಅವರೇ, ‘ಸ್ವಾಮೀಜಿ, ಅದೊಂದು ಅನಪೇಕ್ಷಿತ ವಿವಾದ, ಭಟ್ಟರು ನಿಮ್ಮ ಮೇಲಿನ ಪ್ರೀತಿ ಯಿಂದಲೇ ಬರೆದಿದ್ದಾರೆ. ಅಷ್ಟಕ್ಕೂ ನಿಮ್ಮ ವಿರುದ್ಧ ಬರೆಯುವಂಥದ್ದೇನಿದೆ?’ ಎಂದರಂತೆ. ಆಗ ಸ್ವಾಮೀಜಿಯವರು, ‘ಹೌದು, ನಾನು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ನನಗೆ ಭಟ್ಟರು ಗೊತ್ತು. ಪತ್ರಿಕೆಯೆಂದ ಮೇಲೆ ಇವೆ ಸಹಜ.

ಮೊನ್ನೆ ನಂಜನಗೂಡಿನಿಂದ ಕೆಲವರು ಬಂದಿದ್ದರು. ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು. ನಾನೇ ಸುಮ್ಮನಿದ್ದೇನೆ, ನಿಮಗೇಕೆ ಆ ಪ್ರತಿಭಟನೆಯ ಉಸಾಬರಿ, ನಾವು ಕಾವಿಧಾರಿ ಸನ್ಯಾಸಿಗಳು, ಹೊಗಳಿಕೆ – ತೆಗಳಿಕೆಗೆ ಕಿವಿ ಕೊಡಬಾರದು ಎಂದು ಹೇಳಿ ಅವರನ್ನು ಕಳಿಸಿದೆ. ಭಟ್ಟರು ಹೇಗಿದ್ದಾರೆ? ಅವರಿಗೆ ಕೇಳಿದ್ದೇನೆಂದೂ, ಮಠಕ್ಕೆ ಬರಲು ಹೇಳಿದ್ದೇನೆಂದೂ ತಿಳಿಸಿ’ ಎಂದು ಹೇಳಿದರಂತೆ.

ಶ್ರೀಗಳ ಮಾತಿನಲ್ಲಿ ಕಹಿಭಾವದ ಲವಲೇಶವೂ ತೊಟ್ಟಿಕ್ಕಿರಲಿಲ್ಲ. ಈ ವಿಷಯವನ್ನು ಮೋಹನ್ ಅಂದು ಸಂಜೆಯೇ ತಿಳಿಸಿದರು. ಮಠದಿಂದ ಹೊರಬಂದವರೇ ಸ್ವಾಮೀಜಿಯವರ ಸಹೋದರ ಎಸ್.ಪಿ. ಉದಯ ಶಂಕರ ಅವರೊಂದಿಗೆ ದೂರವಾಣಿಯಲ್ಲೂ
ಮಾತಾಡಿಸಿದರು. ಅವರದೂ ಸಹೃದಯವೇ. ಅನಂತರ ತಿಳಿಯಿತು, ಅವರು ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಜಯರಾಜೇಂದ್ರ ಸ್ವಾಮಿಗಳ ತಂದೆ ಎಂದು. ಮೋಹನ್ ಅವರ ಮಗನ ಮದುವೆಗೆ ಹೋದಾಗ ಸುತ್ತೂರು ಮಠಕ್ಕೆ ಹೋಗಿ ಶ್ರೀಗಳನ್ನು ಭೇಟಿ ಮಾಡಲು ನಿರ್ಧರಿಸಿದೆ.

ಮದುವೆ ನಡೆಯುವ ಸ್ಥಳದಿಂದ, ಮಠ ಐದಾರು ಕಿಮಿ ಹತ್ತಿರದಲ್ಲಿತ್ತು. ಮದುವೆ ಊಟ ಮುಗಿಸಿ, ಶ್ರೀಗಳ ಆಪ್ತರನ್ನು ಸಂಪರ್ಕಿಸಿ ದಾಗ, ಅವರು ಊರಲ್ಲಿ ಇಲ್ಲವೆಂಬುದು ತಿಳಿಯಿತು. ಸದ್ಯದಲ್ಲಿಯೇ ಒಮ್ಮೆ ಶ್ರೀಗಳನ್ನು ಸಂಪರ್ಕಿಸಿ, ಅವರ ಸಮಯ ಪಡೆದು ಅವರನ್ನು ಭೇಟಿ ಮಾಡಿ ಬರಬೇಕು. ಈ ಘಟನೆ ನಡೆದು ಮೊನ್ನೆಗೆ ಸರಿಯಾಗಿ ಒಂದು ವರ್ಷವಾದಾಗ, ಯಾಕೋ ಇವೆ ನೆನಪಾಯಿತು. ಘಟನೆ ಏನೇ ಇರಲಿ, ಅದಕ್ಕಿಂತ ಎತ್ತರದಲ್ಲಿ ನಿಂತು ನೋಡಬೇಕಂತೆ. ಆಗ ನಾವು ಘಟನೆಯ ಪಾತ್ರಧಾರಿ ಗಳಾಗದೇ ಉದಾರ ಮನಸ್ಸಿನಿಂದ, ಸಮಷ್ಠಿ ಪ್ರಜ್ಞೆ ಮೆರೆಯಲು ಸಾಧ್ಯವಾಗುತ್ತದೆ.

ಇಲ್ಲೂ ಶ್ರೀಗಳು ಆ ಒಂದು ಸಂದೇಶ ನೀಡಿರಬಹುದು ಎಂದು ನಾನು ಭಾವಿಸಿದೆ. ಈ ರೀತಿಯ ಪುಟಕಿಗಳು ಸಂಬಂಧಗಳನ್ನು
ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ನಂಬಿದವನು ನಾನು. ಸಂಬಂಧಗಳು ದುರ್ಬಲವಾಗಿzಗ ಮಾತ್ರ ಅವು ಬಾಯಿಬಡಿದು ಕೊಳ್ಳುತ್ತವೆ. ಪರಸ್ಪರ ನಂಬಿಕೆ, ಗೌರವ, ವಿಶ್ವಾಸಗಳಲ್ಲಿ ಅರಳಿದ ಸಂಬಂಧಗಳು ಇಂಥ ಘಟನೆಯ ನಂತರ ಮತ್ತಷ್ಟು ಮಾಗು ತ್ತವೆ, mature ಆಗುತ್ತವೆ.

ಇಲ್ಲಿ ನನಗೆ ಇತ್ತೀಚಿನ ಮತ್ತೊಂದು ಪ್ರಸಂಗ ನೆನಪಿಗೆ ಬರುತ್ತಿದೆ. ಸುಮಾರು ಹದಿನೈದು ದಿನಗಳ ಹಿಂದೆ, ನನ್ನ ‘ಸಂಪಾದಕರ ಸದ್ಯಶೋಧನೆ’ ಅಂಕಣದಲ್ಲಿ, ‘ಮನುಷ್ಯನ habits ಬದಲಿಸುವುದು ಕಷ್ಟ, ಕರೋನಾಕ್ಕೆ ಸದ್ಯ ಲಭ್ಯವಿರುವ ವ್ಯಾಕ್ಸಿನ್ ಅಂದ್ರೆ ಮಾಸ್ಕ್ ಒಂದೇ, ಇದು ಅನೇಕರಿಗೆ ಗೊತ್ತಿದ್ದರೂ ಅವರು ಮಾಸ್ಕ್ ಧರಿಸುವುದಿಲ್ಲ. ಸೀಟ್ ಬೆಲ್ಟ್ ಕಡ್ಡಾಯ ಮಾಡಿ ಮೂವತ್ತಾರು ವರ್ಷಗಳಾದರೂ, ಇಂದಿಗೂ ಅಮೆರಿಕದಲ್ಲಿ ಶೇ.ಎರಡರಷ್ಟು ಮಂದಿ ಸೀಟ್ ಬೆಲ್ಟ್ ಧರಿಸುವುದಿಲ್ಲ’ ಎಂದು ಹೇಳಿ, ಪೂಜನೀಯರ ಬಗ್ಗೆ ಮೂರು ಪದಗಳ ಪದಪುಂಜ ಬರೆದಿದ್ದೆ. ಅದನ್ನು ಬರೆಯದಿದ್ದರೂ ನಡೆಯುತ್ತಿತ್ತು. ಅದು ನಿತ್ಯ ರೂಢಿಯಲ್ಲಿ ಗಾದೆಯಂತೆ
ಬಳಕೆಯಲ್ಲಿದ್ದರೂ, ಅದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು ಎಂದು ಆ ಕ್ಷಣದಲ್ಲಿ ನನಗೆ ಅನಿಸಿರಲಿಲ್ಲ.

ಮರುದಿನ ಆ ಬಗ್ಗೆ ಅನೇಕರು ಫೋನ್ ಮಾಡಿ, ಮೆಸೇಜ್ ಮಾಡಿ ತಮ್ಮ ವಿರೋಧ ವ್ಯಕ್ತಪಡಿಸಿದಾಗ, ನಾನು ಅವರಲ್ಲಿ ಸಮರ್ಥ ನೆಗೆ ಇಳಿಯಲಿಲ್ಲ. ‘ಹೌದು, ಹಾಗೆ ಬರೆಯಬಾರದಿತ್ತು. ನಾನು ಬರೆದಿದ್ದು ಸರಿ ಎಂದು ವಾದ ಮಾಡುವುದಿಲ್ಲ. ನಾಳೆ ಈ ಬಗ್ಗೆ ಪತ್ರಿಕೆಯಲ್ಲಿ ವಿಷಾದ ಕೋರುತ್ತೇನೆ. ಆದರೆ ಇಡೀ ಲೇಖನದ ಆಶಯ ಅದಲ್ಲ. ಆ ಲೇಖನ ಮನುಷ್ಯನ ಹವ್ಯಾಸ ಬದಲಿಸುವುದು ಕಷ್ಟ ಎಂಬುದರ ಬಗ್ಗೆ ಇದೆ. ಅದನ್ನು ಗಮನಿಸಬೇಕು. ಮೂಲ ಉದ್ದೇಶವೇ ಸರಿ ಇಲ್ಲದಿದ್ದರೆ, ಅದರಲ್ಲಿ ನಂಜು ತುಂಬಿದ್ದರೆ, ಧಾರ್ಮಿಕ ವನೆಗಳಿಗೆ ಧಕ್ಕೆ ತರಬೇಕು ಎಂಬ ದುರುದ್ದೇಶವಿದ್ದಿದ್ದರೆ ಬೇರೆ ಮಾತು’ ಎಂದು ಸವಿನಯದಿಂದ ತಿಳಿಸಿದೆ.

ಅದರಿಂದ ಅವರಿಗೆ ಎಷ್ಟು ಸಮಾಧಾನವಾಯಿತೋ ಕಾಣೆ. ಮರುದಿನದ ಸಂಚಿಕೆಯಲ್ಲಿ ‘ವಿಷಾದ’ ಪ್ರಕಟಿಸಿದೆ. ಆದರೆ ಕೆಲವರಿಗೆ ಇದರಿಂದ ಸಮಾಧಾನವಾಗಲಿಲ್ಲ. ಜೈನ ಸಮೂದಾಯದ ಸಂಘಟನೆಯೊಂದರ ಮುಖ್ಯಸ್ಥರು, ‘ನೀವು ಮೂವತ್ತು ಸೆಕೆಂಡುಗಳ ವಿಡಿಯೋ ಮಾಡಿ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ನಿಮ್ಮ ವಿರುದ್ಧ ಹೋರಾಟ ಮಾಡುತ್ತೇವೆ, ಕಚೇರಿಗೆ ಮುತ್ತಿಗೆ ಹಾಕುತ್ತೇವೆ, ನಾವು ಅಹಿಂಸಾವಾದಿಗಳು, ಆದರೂ ನಮ್ಮ ತಾಳ್ಮೆಗೆ ಮಿತಿಯಿದೆ’ ಎಂದೆ ಬೊಬ್ಬಿರಿದರು.

ಆಗ ನಾನು ಅತ್ಯಂತ ಸಮಾಧಾನದಿಂದ, ‘ನೋಡಿ, ನಾನು ಕಳೆದ ಮೂರು ಮಹಾಮಸ್ತಕಾಭಿಷೇಕಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡವನು. ಜೈನ ಸಿದ್ಧಾಂತ, ಯತಿಗಳು, ಸ್ವಾಮೀಜಿಗಳ ಬಗ್ಗೆ ಗೌರವ ಇಟ್ಟುಕೊಂಡವನು. ಕಳೆದ ಮಹಾ ಮಸ್ತಕಾಭಿಷೇಕದಲ್ಲಿ ಇಡೀ ಪತ್ರಿಕೆಯಲ್ಲಿ ಬೇರೆ ಯಾವ ಸುದ್ದಿಯನ್ನೂ ಪ್ರಕಟಿಸದೇ, ಎ ಹದಿನೆಂಟು ಪುಟಗಳನ್ನೂ ಮಹಾಮಸ್ತಕಾಭಿಷೇಕಕ್ಕಾಗಿ ಮುಡುಪಿಟ್ಟವನು. ಬೇರೆ ಯಾರೂ ಮಾಡದ ಈ ಕೆಲಸಕ್ಕೆ, ಆಗ ನೀವು ಒಂದು ಫೋನ್ ಕೂಡ ಮಾಡಲಿಲ್ಲ. ಒಂದು ಮೆಸೇಜನ್ನೂ ಕಳಿಸಿ ಅಭಿನಂದಿಸಲಿಲ್ಲ. ಈಗ ಮೂರು ಪದ ಬಳಕೆಗೆ, ಅದರಲ್ಲೂ ನಾನು ವಿಷಾದ ವ್ಯಕ್ತಪಡಿಸಿದ ನಂತರವೂ , ಪ್ರತಿಭಟನೆ
ಮಾತಾಡುತ್ತಿದ್ದೀರ?’ ಎಂದು ಕೇಳಿದೆ.

ಅಷ್ಟಾಗಿಯೂ ಅವರಿಗೆ ಸಮಾಧಾನವಾಗಲಿಲ್ಲ. ‘ನೀವು ಕ್ಷಮೆ ಕೇಳಿದ ವಿಡಿಯೋ ಕಳಿಸದಿದ್ದರೆ, ಪರಿಸ್ಥಿತಿ ತಿಳಿಯಾಗಲಿಕ್ಕಿಲ್ಲ. ನಾವು ಯಾವುದಕ್ಕೂ ನಮ್ಮ ಸ್ವಾಮೀಜಿಯವರನ್ನು ಕೇಳಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು. ಮುಂದಿನ ಒಂದೆರಡು ದಿನಗಳಲ್ಲಿ, ಅವರಲ್ಲಿ ಕೆಲವರು, ಸ್ವಾಮೀಜಿ ಯವರನ್ನು ಭೇಟಿಯಾಗಿ, ಈ ಎ ಘಟನಾವಳಿಗಳನ್ನು ವಿವರಿಸಿದರು. ‘ನೀವೆಲ್ಲ ಭಟ್ಟರನ್ನು ಯಾರೆಂದು ತಿಳಿದಿದ್ದೀರಿ? ಅವರು ನಮ್ಮವರು. ಮಠದ ಭಕ್ತರು. ಕಳೆದ ಮೂರೂವರೆ ದಶಕಗಳಿಂದ ಮಠದ ಜತೆಗೆ ಸಂಪರ್ಕ, ಸಂಬಂಧ ಇಟ್ಟುಕೊಂಡವರು.

ಅವರು ಸಂಪಾದಕರಾಗಿದ್ದ ಪತ್ರಿಕೆಗಳಲ್ಲಿ ನಮ್ಮ ವಿಚಾರಗಳ ಬಗ್ಗೆ ಸವಿವರವಾಗಿ ಬರೆದವರು. ಅಂಥವರ ಬಗ್ಗೆ ಈ ರೀತಿಯ
ನಿಲುವು ತಾಳುವುದು ಸರಿಯಲ್ಲ. ಇದನ್ನು ಇಲ್ಲಿಗೇ ನಿಲ್ಲಿಸಿ’ ಎಂದು ಸ್ವಾಮೀಜಿಯವರು ಅವರಿಗೆ ಹೇಳಿದರೆಂದು ನನಗೆ
ಗೊತ್ತಾಯಿತು. ಪ್ರತಿಭಟನೆಯ ಮಾತಾಡಿದವರಿಗೆ, ಫೋನಿನಲ್ಲಿ ನನ್ನನ್ನು ನಿಂದಿಸಿದವರಿಗೆ ಮಾಹಿತಿಯ ಕೊರತೆ ಮತ್ತು
ನನ್ನ ಹಾಗೂ ಜೈನ ಮಠಗಳೊಂದಿಗಿನ ಸಂಬಂಧ ಗೊತ್ತಿಲ್ಲದ್ದರಿಂದ, ನಾನು ಇವರೆಲ್ಲರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗಿದ್ದರೂ ನಾನು ಆ ಮೂರು ಪದಗಳನ್ನು ಬರೆಯಲೇಬಾರದಿತ್ತು. ತಪ್ಪಾಗಿದೆ, ತಿದ್ದಿಕೊಳ್ಳೋಣ!ಡಿ

Leave a Reply

Your email address will not be published. Required fields are marked *