Thursday, 12th December 2024

ನಮಗೇಕೆ ಬೇಕಿತ್ತು ಈ ಚಂದ್ರನ ಉಸಾಬರಿ?

ಚಂದ್ರಯಾನ-೩ರ ಪ್ರಗ್ಯಾನ್ ನೌಕೆ ಚಂದ್ರನಲ್ಲಿ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಗಂಧಕ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಮುಖ್ಯವಾಗಿ ಆಮ್ಲಜನಕದ ಇರುವಿಕೆಯನ್ನು ದೃಢಪಡಿಸಿದೆ. ಇದೇನು ಅಮೆರಿಕದಂತೆ ಮೇಲಿಂದ ಕಕ್ಷೆಯಲ್ಲಿದ್ದು ನೋಡಿ ಅಂದಾಜಿಸಿದ್ದಲ್ಲ. ಬದಲಿಗೆ ಸಲಕರಣೆಗಳು ಅಲ್ಲಿನ ಕಲ್ಲು ಮಣ್ಣನ್ನು ಮುಟ್ಟಿ ಪರೀಕ್ಷಿಸಿದ್ದು ಎಂಬುದು ವಿಶೇಷ.

ಚಂದ್ರಯಾನದ ಯಶಸ್ಸಿನ ವಿವರವನ್ನೆಲ್ಲ ಈಗಾಗಲೇ ಬೇಕಾದಷ್ಟು ತಿಳಿದಿರುತ್ತೀರಿ. ಅದೆಲ್ಲ ಸರಿ, ಆದರೆ ಈ ಚಂದ್ರನ ಉಸಾಬರಿ ನಮಗೇಕೆ? ಇಲ್ಲಿಯೇ ನೆಲದಲ್ಲಿ, ದೇಶದಲ್ಲಿ ಮಾಡಲು ಬೇಕಾದಷ್ಟು ಕೆಲಸ ಬಾಕಿಯಿರುವಾಗ ಈ ಮುಡಿಗೆ ಮಲ್ಲಿಗೆ ಬೇಕಿತ್ತಾ? ಚಂದ್ರಯಾನವೇನು ದೀಪಾವಳಿಯ ರಾಕೆಟ್ ಅನ್ನು ಖಾಲಿ ಬಾಟಲಿಯಲ್ಲಿಟ್ಟು ಹಾರಿಸಿದಂತಲ್ಲವಲ್ಲ! ಜತೆಯಲ್ಲಿ ಇದೊಂದು ಪ್ರಶ್ನೆ ನನ್ನನ್ನು ಬಹುವಾಗಿ ಕಾಡಿತು.
೧೯೬೯ರಲ್ಲಿಯೇ ಅಮೆರಿಕದವರು ಚಂದ್ರನ ಮೇಲೆ ಹೋಗಿ, ಇಳಿದು, ಒಂದು ಹಿಡಿ ಮಣ್ಣು, ಕಲ್ಲು ತುಂಬಿಸಿಕೊಂಡು ಬಂದದ್ದಾಗಿದೆ. ಮನುಷ್ಯನ್ನು ಕಳುಹಿಸಿ ಇಳಿಸಬೇಕೆಂದರೆ ಅದೆಷ್ಟೋ ಮುಂಜಾಗ್ರತೆ ಬೇಕು. ಹಾಗೆ ಮನುಷ್ಯನೇ ಹೋಗಿ ಬಂದಾದ ಮೇಲೆ ರೋಬೋಟಿಕ್ ಯಂತ್ರ ಕಳಿಸುವ ಯೋಜನೆ ಏನು ಮಹಾ? ಒಂದು ರೋಬೋಟ್ ಗಾಡಿ ಕಳುಹಿಸುವುದಂತೆ, ಅದಕ್ಕೆ ೬೫೦ ಕೋಟಿ ರು. ಖರ್ಚಂತೆ. ಅದು ಉಳಿದವರಿಗಿಂತ
ತೀರಾ ಅಗ್ಗದಲ್ಲಿ ಸಾಧಿಸಿದ್ದಂತೆ. ಅಲ್ಲಾ, ಮನುಷ್ಯನೇ ಹೋಗಿ ಬಂದ ಮೇಲೆ, ಮತ್ತೆ ಮಷಿನ್ ಕಳುಹಿಸಿ ಅದೇನು ಅಂತರಿಕ್ಷದ ಮೊದಲನೇ ಕ್ಲಾಸಿನಲ್ಲಿ ಪಾಸಾಗಿಯೇ ಮುಂದೆ ಹೋಗಬೇಕಾದಂಥ ಸ್ಥಿತಿಯೇ? ಅದು ಕೂಡ ಹಿಂದಿನ ಪ್ರಯತ್ನದಲ್ಲಿ ವಿಫಲವಾದ ನಂತರ ಸುಮ್ಮನೆ ಆರಾಮಾಗಿ ಇನ್ನೇನೋ ಮಾಡಿಕೊಂಡು ಇರುವುದು ಬಿಟ್ಟು, ಇಷ್ಟು ಜಲ್ದಿ ಇನ್ನೊಮ್ಮೆ ಖರ್ಚು ಮಾಡಿ ಹಾರಿಸುವ ಅವಶ್ಯಕತೆಯಾದರೂ ಏನಿತ್ತು?

ಪ್ರತಿಷ್ಠೆಯೊಂದೇ ಕಾರಣವೇ? ಹಿಂದಿನದು ಹೋಗಿ ಮುಟ್ಟಲೇ ಇಲ್ಲ, ಹಾಗಾಗಿ ಆ ಖರ್ಚನ್ನೂ ಈ ಸಲದ್ದಕ್ಕೆ ಸೇರಿಸಿಯೇ ನೋಡಿದರೆ ಅದಕ್ಕೆ ೯೭೦ ಕೋಟಿ, ಇದಕ್ಕೆ ೬೫೦ ಕೋಟಿ. ಒಟ್ಟು ೧,೬೨೦ ಕೋಟಿ! ಚಂದ್ರಯಾನ-೩ರ ಫಲಿತಾಂಶಕ್ಕೆ ತಗುಲಿದ ಒಟ್ಟು ವೆಚ್ಚ ಅದು. ಇನ್ನು ಚಂದ್ರನಲ್ಲಿ ನೀರಿದ್ದರೆ ಏನಂತೆ? ಇಲ್ಲಿ ಭೂಮಿಯ ಮೇಲೆ ನೀರಿಗೇನು ಕೊರತೆಯೇ? ಶೇ.೭೧ ರಷ್ಟು ನೀರೇ ತುಂಬಿಕೊಂಡಿದೆ. ಅಕಸ್ಮಾತ್ ಬೇರೆ ಗ್ರಹದಿಂದ ಇನ್ಯಾವುದೋ ಒಂದು ಏಲಿಯನ್ ಲ್ಯಾಂಡರ್ ಬಂದರೆ ಅದು ಭೂಮಿಯ ಶೇ.೨೯ರಷ್ಟು ಭಾಗದಲ್ಲಿಯೇ ಇಳಿಯಬೇಕು. ಅಷ್ಟೊಂದು ನೀರು ಇಲ್ಲಿಯೇ ಇರುವಾಗ ಚಂದ್ರನಲ್ಲಿ ನೀರಿದ್ದರೆಷ್ಟು ಬಿಟ್ಟರೆಷ್ಟು? ನೀರು ಇದ್ದರೆ ಜೀವಿಗಳಿರಬಹುದೇ ಎಂಬುದು ಮುಂದಿನ ಪ್ರಶ್ನೆ. ಅಂಥ ಬುದ್ಧಿವಂತ ಏಲಿಯನ್ ಇರುವುದಕ್ಕಂತೂ ಸಾಧ್ಯವಿಲ್ಲ. ಇನ್ನು ನಾಲ್ಕಾರು ಹುಳುವೋ, ಬ್ಯಾಕ್ಟೀರಿಯಾವೋ ಕಂಡರೆ ಅದನ್ನು ಕಟ್ಟಿಕೊಂಡು
ನಮಗೇನಾಗಬೇಕಾಗಿದೆ? ಹಾಗಾದರೆ ಇದೆಲ್ಲ ಕೇವಲ ಪ್ರತಿಷ್ಠೆಗೆ ವ್ಯಯಿಸಿದ ಹಣವೇ? ಆ ತಲುಬು ಭಾರತಕ್ಕೇ ಏಕೆ? ಇದೇನು ಭಾರತದವರೆಲ್ಲ ಹೆಮ್ಮೆಪಟ್ಟು ಚಪ್ಪಾಳೆ ತಟ್ಟಲಿ ಎಂದು ನಡೆಸಿದ ಮೆಗಾ ಷೋ ಕೆಟ್ಟುಹೋಯ್ತೆ!

ಅದೆಲ್ಲದಕ್ಕಿಂತ ಮೊದಲು ಈ ಅಮೆರಿಕದವರು ಹೋದದ್ದು ಹೌದೋ ಅಲ್ಲವೋ ಎಂಬ ಗೊಂದಲ ಹಲವರಲ್ಲಿದೆ. ಅವರು ಹೋಗಿದ್ದು ಬೋಗಸ್, ಅದೆಲ್ಲ ಸ್ಟುಡಿಯೋದಲ್ಲಿ ಫೋಟೋ ತೆಗೆದದ್ದು ಎಂಬಿತ್ಯಾದಿ ವಿತಂಡವಾದ. ಇದನ್ನು ಹೌದು ಅಥವಾ ಇಲ್ಲವೆಂದು ಹೇಳಲಿಕ್ಕೆ ಎಂಥೆಂಥ ಘಟಾನುಘಟಿಗಳೇ ಹಿಂದೇಟು ಹಾಕುವುದಿದೆ. ಆದರೆ ಇಲ್ಲೊಂದನ್ನು ಗ್ರಹಿಸಬೇಕು. ಹೌದು, ಅಮೆರಿಕದವರು ಕಾಲಿಟ್ಟದ್ದು ನಿಜ ಎಂದು
ಹೇಳುವವರೆಲ್ಲ ವಿಜ್ಞಾನಿಗಳು. ಹೋಗಿಲ್ಲ, ಅಲ್ಲಿನ ಫೋಟೋದಲ್ಲಿ ಅದಿಲ್ಲ, ಹೀಗಿದೆ ಇತ್ಯಾದಿ ಹೇಳುವವರು ಯಾರೂ ವಿಜ್ಞಾನಿಗಳಲ್ಲ. ಆದರೂ, ಅವರ ವಾದವನ್ನು ಅಲ್ಲವೆನ್ನುವುದು, ಪ್ರತಿವಾದ ಮಾಡಿ ವೈಜ್ಞಾನಿಕವಾಗಿಯೇ ಹೌದೆನ್ನುವುದು ಕೂಡ ಅವಶ್ಯಕತೆಯಿದೆ. ಚಂದ್ರನ ಮೇಲೆ ಅಮೆರಿಕದ ಗಗನಯಾನಿಗಳು ಕಾಲಿಟ್ಟ ಸಮಯದಲ್ಲಿ ತೆಗೆದ ಫೋಟೋ, ವಿಡಿಯೋಗಳ ಮೇಲೆ ಎತ್ತಲ್ಪಡುವ ಪ್ರಶ್ನೆಗಳು ಮೇಲ್ನೋಟಕ್ಕೆ ಸಮಂಜಸವೆನಿಸುತ್ತವೆ. ಮೊದಲನೆಯದಾಗಿ ಅಂದು ಚಂದ್ರನ ಮೇಲೆ ತೆಗೆದ ಫೋಟೋದಲ್ಲಿ ನಕ್ಷತ್ರಗಳು ಕಾಣಿಸುತ್ತಿಲ್ಲ ಎಂದು. ಬೋಗಸ್ ಎಂದು ಪ್ರಶ್ನಿಸುವ ಬಹುಮುಖ್ಯವಾದ ವಿಚಾರವೇ ಅದು.  ಚಂದ್ರನಲ್ಲಿ ಯಾವುದೇ ವಾತಾವರಣ ಇಲ್ಲ. ಹಾಗಾಗಿ ಭೂಮಿಯಲ್ಲಿ ರಾತ್ರಿ ನೋಡಿದ್ದಕ್ಕಿಂತ ಸ್ಪಷ್ಟವಾಗಿ ಚಂದ್ರನಿಂದ ನಕ್ಷತ್ರ ಕಾಣಿಸಬೇಕಲ್ಲ. ನಕ್ಷತ್ರ ಫೋಟೋದಲ್ಲಿ ಏಕೆ ಕಾಣಿಸುತ್ತಿಲ್ಲ ಎಂಬುದು ಅರ್ಥವಾಗಬೇಕೆಂದರೆ ಮೊದಲು ಫೋಟೋಗ್ರಫಿಯ ಒಂದೆರಡು ಬೇಸಿಕ್ಸ್‌ನ ಅರಿವು ಇರಬೇಕು. ವಾತಾವರಣವಿಲ್ಲದ್ದರಿಂದ ಚಂದ್ರನ ಮೇಲೆ ಸೂರ್ಯ, ಬೆಳಕು ಅತ್ಯಂತ ಪ್ರಖರ. ಬೆಳಕು ಜಾಸ್ತಿಯಿದ್ದಾಗ ಫೋಟೋ ಸೆರೆಹಿಡಿಯಬೇಕೆಂದರೆ ಶಟರ್ ಸ್ಪೀಡ್ (ಕ್ಯಾಮೆರಾ ಸೆನ್ಸರ್ ಬೆಳಕಿಗೆ ತೆರೆದುಕೊಳ್ಳುವ ಸಮಯ) ಅತ್ಯಂತ ವೇಗದಲ್ಲಿರಬೇಕು. ಇಲ್ಲದಿದ್ದರೆ ಕ್ಯಾಮೆರಾದ ಸೆನ್ಸರ್ ಮೇಲೆ ಜಾಸ್ತಿ ಬೆಳಕು ಬಿದ್ದು ಉಳಿದ ಯಾವುದೇ ವಸ್ತು ಕಾಣಿಸುವುದಿಲ್ಲ. ಇದನ್ನು
ಫೋಟೋಗ್ರಫಿ ಭಾಷೆಯಲ್ಲಿ ಓವರ್ ಎಕ್ಸ್‌ಪೋಷರ್ ಅನ್ನುವುದು. ಹಾಗಾಗಿ ಅತ್ಯಂತ ವೇಗದ ಶಟರ್ ಸ್ಪೀಡ್‌ನಲ್ಲಿ ತೆಗೆದ  ಫೋಟೋದಲ್ಲಿ ಚಿಕ್ಕ ಬೆಳಕಾದ ನಕ್ಷತ್ರ ಕಾಣಿಸುವುದಿಲ್ಲ.

ನೀವು ಇಸ್ರೋ ಚಂದ್ರಯಾನ-೩ ಕಳುಹಿಸಿದ ಫೋಟೋ ನೋಡಿದರೆ ಅದರಲ್ಲಿಯೂ ನಕ್ಷತ್ರಗಳು ಕಾಣಿಸುವುದಿಲ್ಲ! ಇದೊಂದೇ ಸಾಕು. ಇದೇ ರೀತಿ ಫೋಟೋಗಳಲ್ಲಿ ನೆರಳಿನ ಬಾಗುವಿಕೆ, ಅಮೆರಿಕದ ಬಾವುಟ ಹಾರುವಂತೆ ಇರುವುದು ಇತ್ಯಾದಿ ಕುರಿತಾದ ಪ್ರಶ್ನೆಗಳು. ಪ್ರತಿಯೊಂದಕ್ಕೂ ಇರುವ ವೈಜ್ಞಾನಿಕ ಸಮಜಾಯಿಷಿ ನೋಡಿದ ಮೇಲೆ ಇವೆಲ್ಲ ವಿತಂಡವಾದಗಳು, ನೆಲಗಟ್ಟಿಲ್ಲದೇ ಕಟ್ಟಿದ ಗಾಳಿಗೋಪುರ ಎನ್ನುವುದು ತಿಳಿಯುತ್ತದೆ. ಇದನ್ನೆಲ್ಲ ಕೇಳಿದವರಿಗೆಲ್ಲ ಉತ್ತರಿಸಿ ವಿವರಿಸುವ ಅವಶ್ಯಕತೆ ನಾಸಾಕ್ಕೆ ಇದ್ದಂತಿಲ್ಲ. ಚಂದ್ರನಲ್ಲಿ ಇಳಿದದ್ದೇ ಸುಳ್ಳೆನ್ನುವುದಕ್ಕೆ ಅದೆಷ್ಟೋ ಡಾಕ್ಯುಮೆಂಟರಿಗಳು ಇವೆ. ಅವೆಲ್ಲದರ ವಾದ ನಿಂತಿರುವುದು, ಭೂಮಿಯ ಮೇಲೆ ಕಂಡಂತೆಯೇ ಚಂದ್ರನ ಮೇಲಿಂದಲೂ ಕಾಣಿಸಬೇಕು ಎಂಬ ತರ್ಕದ ಮೇಲೆ. ಈ ವಾದವನ್ನು ಅಲ್ಲವೆಂದು ಫೋಟೋ ತಜ್ಞರು, ವಿಜ್ಞಾನಿಗಳು, ಎಂಜಿನಿಯರುಗಳು ಅದೆಷ್ಟೇ ಹೇಳಿದರೂ, ನಮ್ಮಲ್ಲಿ ಗಾಳಿಗಿಂತ ದುರ್ನಾತದೆಡೆಗೇ ಸೆಳೆತ ಜಾಸ್ತಿ, ಇರಲಿ. ಇನ್ನು ಈ ನಾಸಾದವರು ಅಂದೇ ಹೋದವರು ಮತ್ತೊಮ್ಮೆ ಏಕೆ ಹೋಗಲಿಲ್ಲ? ಅಂದು ೧೯೬೯ರಲ್ಲಿ, ಶೀತಲ ಯುದ್ಧದ ಸಮಯದಲ್ಲಿ ಇದೊಂದು ಸಾಧಿಸುವ ಅವಶ್ಯಕತೆ ಅಮೆರಿಕಕ್ಕೆ ಇತ್ತು. ಅಂದು ಚಂದ್ರನ ಮೇಲೆ ಇಳಿದು ಅಮೆರಿಕ ಆ ಸ್ಪರ್ಧೆಯಲ್ಲಿ ಗೆದ್ದಾಗಿತ್ತು. ಚಂದ್ರನಲ್ಲಿ ಏನಿದೆ ಎಂಬುದನ್ನು ನೋಡಿಯಾಗಿತ್ತು.

ಅಲ್ಲಿ ಇರುವ ಸ್ಥಿತಿಯಿಂದಾಗಿ, ವಾತಾವರಣವಿಲ್ಲದ ನೆಲದಲ್ಲಿ ಜೀವಿಗಳು ಇರಲು ಸಾಧ್ಯವಿಲ್ಲ, ಹಾಗಾಗಿ ಅದೊಂದು ಬರಡು ಭೂಮಿ. ಅಲ್ಲಿ ಇನ್ನೇನೂ ತಿಳಿಯಲು ಬಾಕಿ ಉಳಿದಂತಿರಲಿಲ್ಲ. ಅಲ್ಲದೆ ಅಮೆರಿಕಕ್ಕೆ ಆರ್ಥಿಕವಾಗಿ ಹೊಡೆತ ಬಿದ್ದದ್ದು ವಿಯೆಟ್ನಾಂ ಯುದ್ಧದಿಂದ. ಅದು ೧೯೭೫ರ ವರೆಗೆ ನಡೆಯಿತು. ಯುದ್ಧ ತರುವಾಯದ ಆರ್ಥಿಕ ಬಿಕ್ಕಟ್ಟಿ ನಿಂದಾಗಿ ಚಂದ್ರನ ಪ್ರೋಗ್ರಾಮುಗಳ ಹೊಟ್ಟೆ ಹೊರೆಯುವುದು ಸರಕಾರಕ್ಕೆ ಕಷ್ಟವಾಯಿತು. ಜತೆಗೆ ಅಲ್ಲಿ ಅಂಥ ಅವಶ್ಯಕತೆಯೇ ಇರಲಿಲ್ಲ. ಹಾಗಾಗಿ ಅಮೆರಿಕ ೧೯೭೨ರಲ್ಲಿ ಚಂದ್ರನ ಉಸಾಬರಿ ಬಿಟ್ಟುಬಿಟ್ಟಿತು ಮತ್ತು ಚಂದ್ರಯಾನದ ಎಲ್ಲ ಪ್ರಾಜೆಕ್ಟ್‌ಗಳನ್ನು ಸ್ಥಗಿತಗೊಳಿಸಿತು. ನಂತರದಲ್ಲಿ
ಮಂಗಳ, ಸೂರ್ಯ, ಮಿಲ್ಕಿ ವೇ ಆಚೆಗೇನಿದೆ ಎಂಬುದಕ್ಕೆ ಅವರು ಹೆಚ್ಚು ಒತ್ತುಕೊಟ್ಟರು. ಅದಾಗಲೇ ಅವರ ಗಮನ ಹಬಲ್, ನಂತರದಲ್ಲಿ ಜೇಮ್ಸ್ ವೆಬ್ (೧೦ ಬಿಲಿಯನ್ ಡಾಲರ್ ವೆಚ್ಚ), ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ ಮೊದಲಾ ದವುಗಳತ್ತ ಕೇಂದ್ರೀಕೃತವಾಗಿತ್ತು. ಅಮೆರಿಕಕ್ಕೆ ಅಲ್ಲಿಂದಿಲ್ಲಿಗೂ ಇನ್ನೊಮ್ಮೆ ಚಂದ್ರನಲ್ಲಿಗೆ ನೌಕೆ, ರೋಬೋಟ್ ಅಥವಾ ಮನುಷ್ಯನನ್ನು ಕಳುಹಿಸುವುದು ಸಾಧ್ಯವಿತ್ತು; ಆದರೆ ಅದು ಯಾವ ಪುರುಷಾರ್ಥಕ್ಕೆ? ಇದೆಲ್ಲದರಿಂದ ಚಂದ್ರನನ್ನು ಅಮೆರಿಕ, ತರುವಾಯ ವಿಜ್ಞಾನ ಕೆಲವು ಕಾಲ ಮರೆತುಬಿಟ್ಟಿತು.

ಇದೆಲ್ಲ ಬದಲಾದದ್ದು ಒಂದು ವಿಚಿತ್ರ ಸನ್ನಿವೇಶದಲ್ಲಿ. ಅಮೆರಿಕದ ಆಡಳಿತದಲ್ಲಿರುವ ಪೋರ್ಟರಿಕೋ ಸಮುದ್ರತಟದಲ್ಲಿರುವ ರೇಡಾರ್ ಅನ್ನು ಅಲ್ಲಿನ ವಿಜ್ಞಾನಿಗಳು ಕುತೂಹಲಕ್ಕೆ ಚಂದ್ರನತ್ತ ತಿರುಗಿಸಿ ನೋಡುತ್ತಿದ್ದಾಗ ಚಂದ್ರನ ಧ್ರುವಗಳಲ್ಲಿ ಒಂದಿಷ್ಟು ಜಾಗ ಹೊಳೆಯುವುದು ಕಾಣಿಸಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಪರ್ವತ, ಕಂದಕಗಳು ಕಂಡವು. ಅಲ್ಲಿನ ಪರ್ವತವೊಂದರ ಎತ್ತರ ೯ ಕಿಲೋಮೀಟರ್. ಈ ಪರ್ವತಗಳ ಕಣಿವೆಗಳಲ್ಲಿ ಈ ಹೊಳೆಯುವುದು ಕಾಣಿಸಿದ್ದು. ಇದು ಏನೆಂದು ಕೆಲವು ಕಾಲ ಬಗೆಹರಿಯಲಿಲ್ಲ. ರೇಡಾರ್‌ನಲ್ಲಿ ಅದು ನೀರು ಅಥವಾ ಐಸ್ ಎಂದು ಹೇಳಲು ಸಾಧ್ಯವಾಗುತ್ತಿರಲಿಲ್ಲ. ವಾತಾವರಣವೇ ಇಲ್ಲದ್ದರಿಂದ ಸಾಧ್ಯತೆ ತೀರಾ ಕ್ಷೀಣ.  ಹೌದೋ ಅಲ್ಲವೋ ಎಂದು ತಿಳಿಯಲಿಕ್ಕೆ ಪುನಃ ಅದೆಷ್ಟೋ ಮಿಲಿಯನ್ ಡಾಲರ್ ಹಣ ವ್ಯಯಿಸಬೇಕಿತ್ತು. ಆಗ ಅಲೆನ್ ಬೈಂಡರ್ ಎಂಬ ನಾಸಾ ವಿಜ್ಞಾನಿ ‘ಅತ್ಯಂತ ಕಡಿಮೆ ಖರ್ಚಿನಲ್ಲಿ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿ, ಅದು ಚಂದ್ರನ ಕಕ್ಷೆ ಯಿಂದಲೇ ಅಲ್ಲಿ ನೀರಿದೆಯೇ ಇಲ್ಲವೇ ಎಂಬುದನ್ನು ಕಂಡುಕೊಳ್ಳುವಂತೆ ಮಾಡೋಣ’ ಎಂದು ಕಂಡ ಕಂಡ ರಾಜಕಾರಣಿಗಳಿಗೆ ದುಂಬಾಲು ಬೀಳಲು ಶುರುಮಾಡಿದ. ನಾಸಾ ಮತ್ತು ಅಮೆರಿಕದ ರಾಜಕಾರಣಿಗಳಿಗೆ ಆಸಕ್ತಿಯೇ ಇದ್ದಿರಲಿಲ್ಲ.

ಕೊನೆಗೂ ಅಮೆರಿಕ ಒಂದು ನೌಕೆಯನ್ನು ಕಳುಹಿಸುವುದು ಎಂದಾಯಿತು. ಆ ನೌಕೆ ಪ್ರಾಸ್ಪೆಕ್ಟರ್ ರೋವರ್. ಅದು ಮೊದಲ ಬಾರಿ ಚಂದ್ರನಲ್ಲಿ ಹೈಡ್ರೋಜನ್ ಗುರುತಿಸಿದ್ದು. ಚಂದ್ರನ ಕೆಲವೊಂದಿಷ್ಟು ಭಾಗಗಳಲ್ಲಿ ಯಥೇಚ್ಛ ಹೈಡ್ರೋಜನ್ ಇರುವುದು ಆಗ ಅಂದಾಜಾಯಿತು, ೧೯೯೮ರಲ್ಲಿ. ಹೈಡ್ರೋಜನ್ ಇದೆ, ಧ್ರುವಗಳಲ್ಲಿ ಹೊಳಪು ಇದೆ. ಹಾಗಾಗಿ ಅದು ಐಸ್, ಘನೀಕೃತ ನೀರು ಎನ್ನುವುದು ಪಕ್ಕಾ ಊಹೆಯಾಗಿತ್ತು. ಅಲ್ಲಿನ ಉಷ್ಣತೆ -೨೫೦ ಸೆ. ಗಿಂತ ಕಡಿಮೆ. ಇಲ್ಲಿ ಸೂರ್ಯನ ಪ್ರಕಾಶ ತಾಗುವುದೇ ಇಲ್ಲ. ಹಾಗಾಗಿ ಇಡೀ ಸೌರಮಂಡಲದಲ್ಲಿಯೇ ಅತ್ಯಂತ ಕಡಿಮೆ ಉಷ್ಣತೆ ಇರುವ ಜಾಗಗಳಲ್ಲಿ ಚಂದ್ರನ ದಕ್ಷಿಣ ಧ್ರುವ ಕೂಡ ಒಂದು. ಅಲ್ಲಿ ನೀರು ಘನೀಕರಿಸುತ್ತ, ಹಲವಾರು ಪದರಗಳಲ್ಲಿ ಇದೆ. ಅಲ್ಲಿ ಎಂದಿಗೂ ಉಷ್ಣತೆ ಇದಕ್ಕಿಂತ ಹೆಚ್ಚಿಗೆ ಏರದೇ ಇರುವುದರಿಂದ ಅಲ್ಲಿನದು ನೀರು, ಐಸ್ ಎಂದರೆ ಅದು ಸುಮಾರು ೪೫೦ ಕೋಟಿ ವರ್ಷದಿಂದ ಹಾಗೆಯೇ ಇದೆ. ಹಾಗಾಗಿ ಆ ನೀರು ಭೂಮಿಯ ಮತ್ತು ಚಂದ್ರನ ಇತಿಹಾಸವನ್ನು ಬಿಡಿಸಿ ಹೇಳುವ ಪಳೆಯುಳಿಕೆಯೆಂದಾಯಿತು.

ನೀರು ಇದೆ ಎಂದು ಹೇಳುವುದೇ ಒಂದು ದೊಡ್ಡ ವಿಷಯ. ನೀರಿದೆಯೆಂದರೆ ಜೀವ ಇರುವ ಸಾಧ್ಯತೆಯಿದೆ ಎಂಬುದು ಇದಕ್ಕೆ ಕಾರಣವಲ್ಲ. ಅಥವಾ ಅಲ್ಲಿ ಏನೋ ಒಂದು ಹುಳು ಹುಪ್ಪಟೆ ಸಿಕ್ಕಬಹುದು ಎಂಬ ಆಸೆಯೂ ಯಾರಿಗೂ ಇಲ್ಲ.  ಏಕೆಂದರೆ ಅಲ್ಲಿನ ವಾತಾವರಣ ಅಷ್ಟು ಕಠೋರ. ಹಾಗಾದರೆ ಅಲ್ಲಿನ ನೀರಿಗೆ ಏಕೆ ಅಷ್ಟು ಮಹತ್ವ? ನೀರು ಎಂದರೆ ಜಲಜನಕ ಮತ್ತು ಆಮ್ಲಜನಕ ಸೇರಿ ಆಗುವುದಲ್ಲವೇ? ಅದನ್ನು ವಿಭಜಿಸಿದರೆ ಉಸಿರಾಟಕ್ಕೆ ಆಮ್ಲಜನಕ ಅಲ್ಲಿಯೇ ಉತ್ಪಾದಿಸಿಕೊಳ್ಳಬಹುದು. ಇನ್ನು ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಿ ಕೊಳ್ಳಬಹುದು. ಸೂರ್ಯನ ಶಾಖದ ಸೋಲಾರ್ ಪ್ಯಾನಲ್ ಇದ್ದರೆ ಬೇಕಾದಷ್ಟು ಸೌಲಭ್ಯವಾಯಿತು. ಹೀಗಾಗಿ ನೀರು ಇದೆ ಎಂದು ಪಕ್ಕಾ ಆಗುವುದೆಂದರೆ ಅಲ್ಲಿ ಒಂದು ಚಿಕ್ಕ ಮನೆಯನ್ನು ವಿಜ್ಞಾನಿಗಳಿಗೆ ಕಟ್ಟಿಡುವ ಸಾಧ್ಯತೆ ಈಗ ತೆರೆದುಕೊಂಡಿತು. ಅದೇನು ಅಲ್ಲಿಯೇ ಹೋಗಿ ಕಾಯಂ ಇರಲಿಕ್ಕೆ ಮಾಡಿಕೊಳ್ಳುವ ವ್ಯವಸ್ಥೆಯಲ್ಲ. ಆಗೀಗ ಹೋಗಿ ಉಳಿದು, ಪ್ರಯೋಗ ಮಾಡಿ ಬರುವ ಒಂದು ಪ್ರಯೋಗಾಲಯ. ನೀರೇ ಇಲ್ಲದಿದ್ದರೆ ಇದೆಲ್ಲ ಸಾಧ್ಯವೇ ಇಲ್ಲ. ಕೆಲವು ನಿಮಿಷಕ್ಕೆ ಹೋಗಿ ಬಂದರೆ ಹೆಚ್ಚಿನ ಪ್ರಯೋಗಗಳನ್ನು ಮಾಡಲಿಕ್ಕೆ ಆಗುವುದಿಲ್ಲ. ನೀರನ್ನು ಭೂಮಿಯಿಂದ ಟ್ಯಾಂಕರ್‌ನಲ್ಲಿ ಹೊಡೆಯಲಿಕ್ಕೂ ಸಾಧ್ಯವಿಲ್ಲ. ಪೈಪ್ ಹಾಕಲಿಕ್ಕೂ ಬರುವುದಿಲ್ಲ. ನೀರು ಭಾರ, ಹಾಗಾಗಿ ಇಲ್ಲಿಂದ ಒಯ್ಯುವುದು ಬಲು ಖರ್ಚಿನ ಕೆಲಸ. ಭೂಮಿಯಾಚೆಗಿನ ಪ್ರವಾಸಕ್ಕೆ ನೀರೇ ಮುಖ್ಯ. ಹೀಗೆ ನೀರಿದೆಯೆಂಬ ಒಂದೇ ವಿಷಯವು ಚಂದ್ರನ ಮೇಲಿನ ಆಸೆ, ಆಸಕ್ತಿಯನ್ನು ಎಲ್ಲರಲ್ಲೂ ಹೆಚ್ಚಿಸಿತು. ಚಂದ್ರನ ನೆಲ ಈಗ ಗಗನಯಾನಿಗಳನ್ನು ಕಳುಹಿಸಲು ಯೋಗ್ಯವೆನಿಸಲು ಶುರುವಾಯಿತು.

ಬಳಸಲಿಕ್ಕೆ ನೀರು, ಆಮ್ಲಜನಕ ಮತ್ತು ಇಂಧನವಾಗಿ ಜಲಜನಕ ಇವು ಅದೆಷ್ಟೋ ಸಾಧ್ಯತೆಗಳನ್ನು ತೆರೆದವು. ಆದರೆ ಇದೆಲ್ಲ ಅಲ್ಲಿ ಇಳಿದು ಕಂಡುಕೊಂಡದ್ದಲ್ಲ. ಹಾಗಾಗಿ ಇದನ್ನೆಲ್ಲಾ ಇನ್ನೊಮ್ಮೆ ಪರಾಮರ್ಶಿಸ
ಬೇಕಿತ್ತು. ಆ ಕೆಲಸವಾದದ್ದು ೨೦೦೮-೦೯ರಲ್ಲಿ. ಚಂದ್ರನಲ್ಲಿರುವುದು ನೀರೇ ಎಂದು ನಮಗೆ ಪಕ್ಕಾ ಆದದ್ದು ಆಗಲೇ. ಒಟ್ಟಾರೆ, ಚಂದ್ರನ ಮೇಲೆ ಹೈಡ್ರೋಜನ್ ಇದ್ದದ್ದು ತಿಳಿದ ಮರುಕ್ಷಣದಿಂದಲೇ ನೆಲೆಗೂಡಿಗೆ ಬಿದ್ದಿದ್ದ ಚಂದ್ರನ ರೇಸ್ ಇನ್ನೊಮ್ಮೆ ಶುರುವಾದದ್ದು. ಅಮೆರಿಕ ಇನ್ನೊಮ್ಮೆ ಚಂದ್ರನಲ್ಲಿಗೆ ಹೋಗಲು ತಯಾರಿ ಶುರುಮಾಡಿಕೊಂಡದ್ದು. ಹೊಸತಾಗಿ ಚಂದ್ರನ ಕಾರ್ಯಕ್ರಮಕ್ಕೆ ಇನ್ನೊಮ್ಮೆ ಚಾಲ್ತಿ ಕೊಟ್ಟದ್ದು
ಜಾರ್ಜ್ ಬುಷ್. ನಂತರ ಇದು ಅದರ ಪಾಡಿಗೆ ನಿಧಾನಕ್ಕೆ ನಡೆದುಕೊಂಡು ಬಂದಿತ್ತು. ಆದರೆ ೨೦೦೮ರಲ್ಲಿ ಅಮೆರಿಕ ಆರ್ಥಿಕ ಮುಗ್ಗಟ್ಟು ಎದುರಿಸಿತಲ್ಲ, ಆಗ ಒಬಾಮ ಈ ಕಾರ್ಯಕ್ರಮವನ್ನು ನಿಲ್ಲಿಸಿಬಿಟ್ಟರು. ನಂತರ ಬಂದ ಟ್ರಂಪ್ ಪುನಃ ಇದಕ್ಕೆ ಚಾಲನೆ ಕೊಟ್ಟರು. ಇಂದು ಬೈಡನ್ ಕೂಡ ಈ ಯೋಜನೆಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆದರೆ ಈಗ ಚಂದ್ರನತ್ತ ಹೊರಡಲು ಸನ್ನದ್ಧವಾಗಿ ನಿಂತದ್ದು ಕೇವಲ ಅಮೆರಿಕ ಆಗಿರಲಿಲ್ಲ. ರಷ್ಯಾ ಕೂಡ ಬಾಹ್ಯಾಕಾಶದಲ್ಲಿ ಬಹಳ ಹಿಂದೆ ಬಿದ್ದಾಗಿತ್ತು. ಇಂಥ ಸಮಯದಲ್ಲಿ ಅಮೆರಿಕದ ಜತೆ ಹೊಸ ದೇಶಗಳು ಸ್ಪರ್ಧೆಗಿಳಿದವು. ಅದರಲ್ಲಿ ಮುಂಚೂಣಿ ಸಾಧಿಸಿದ್ದು ಚೀನಾ. ಈಗಾಗಲೇ ಚೀನಾ ಮೂರು ಬಾರಿ ಚಂದ್ರಯಾನ ಮಾಡಿದೆಯಂತೆ (ಅದು ಹೇಳಿಕೊಳ್ಳುವಂತೆ). ಅದರಲ್ಲಿ ಒಂದಕ್ಕೆ ಮಾತ್ರ ಸಾಕ್ಷಿ ಪುರಾವೆ ಸಿಕ್ಕಿದ್ದು ಬೇರೆ ವಿಷಯ. ಆದರೆ ಚೀನಾ ಅಥವಾ ಇನ್ನೊಬ್ಬರು ದಕ್ಷಿಣ ಧ್ರುವದಲ್ಲಿ ಗಗನನೌಕೆಯನ್ನು ಇಳಿಸಿಲ್ಲ, ಮುಂದೆ ಇಳಿಸುವ ಯೋಜನೆಯಿದೆ ಎಂದು ಚೀನಾ ಹೇಳಿಕೊಂಡಿದೆ.

ಕೇವಲ ದೇಶಗಳಷ್ಟೇ ಅಲ್ಲ, ಇಸ್ರೇಲಿನ ಒಂದು ಖಾಸಗಿ ಸಂಸ್ಥೆ ೨೦೧೯ರಲ್ಲಿ ಚಂದ್ರಯಾನಕ್ಕೆ ಕೈಹಾಕಿತ್ತು. ಆದರೆ ಅದು ವಿಫಲವಾಗಿ ಬೂದಿಯಾಯಿತು. ಜಪಾನಿನ ಐಸ್ಪೇಸ್ ಎಂಬ ಖಾಸಗಿ ಕಂಪನಿ ಕೂಡ ಇದಕ್ಕೆ ಮುಂದಾಗಿ ಕೈ ಸುಟ್ಟುಕೊಂಡಿತು. ರಷ್ಯಾ ೧೯೭೬ರ ಚಂದ್ರಯಾನದ ಪ್ರಯತ್ನದ ಐವತ್ತು ವರ್ಷದ ನಂತರ ಇನ್ನೊಮ್ಮೆ ಪ್ರಯತ್ನ ಪಟ್ಟಿತು. ಅದು ಕೂಡ ಚಂದ್ರನ ಮೇಲೆ ಕ್ರ್ಯಾಶ್ ಆಯಿತು. ಇದೆಲ್ಲದರ ನಡುವೆ ಭಾರತದ ಚಂದ್ರಯಾನ-೨. ಅದು ಏನಾಯಿತೆಂದು ನಿಮಗೆ ಗೊತ್ತು. ಇಂಥ ಸ್ಥಿತಿಯಿರುವಾಗ ಭಾರತ ನಾಲ್ಕೇ ವರ್ಷದೊಳಗೆ ಇನ್ನೊಂದು ಕಾರ್ಯಕ್ರಮವನ್ನು ಇಷ್ಟು ವೇಗದಲ್ಲಿ ಸಿದ್ಧವಾಗಿ ಸಿದ್ದು, ಅದನ್ನು ಸಾಧಿಸಿದ್ದು, ಅದರಲ್ಲಿಯೂ ಹಿಂದೆಂದೂ ಇಳಿಯದ ಮತ್ತು ಈಗ ನೀರಿದೆಯೆಂಬ ಕಾರಣಕ್ಕೆ ಅಲ್ಲಿಯೇ ಇಳಿಯಬೇಕಾದ ಅವಶ್ಯಕತೆಯಿರುವ ಜಾಗದಲ್ಲಿ ಇಳಿದದ್ದು! ಅದರಲ್ಲಿಯೂ ಇಷ್ಟು ಅಗ್ಗದಲ್ಲಿ. ವೆಚ್ಚ ಬಹಳ ಮುಖ್ಯವಾಗು ವುದು ಏಕೆಂದರೆ, ಅಗ್ಗವಾದಷ್ಟು ಹೆಚ್ಚಿನ ಬಾರಿ ಯಾನ ನಡೆಸಬಹುದು. ಅಷ್ಟು ಕಡಿಮೆ ಖರ್ಚಿನಲ್ಲಿ ಇದೆಲ್ಲವನ್ನು ಸಾಧಿಸುವುದು ಕೂಡ ಕೇವಲ ಒಂದೇ ಕಾರ್ಯಕ್ರಮದ ಆರ್ಥಿಕ ದೃಷ್ಟಿಯಿಂದಲ್ಲ, ಮುಂದಿನ ಹಲವು ಯಾನಕ್ಕೆ ಸಾಧ್ಯತೆಯಾಗುವುದರಿಂದ ಮುಖ್ಯವಾಗುತ್ತದೆ.

ಈಗ ಚಂದ್ರಯಾನ-೩ರ ಪ್ರಗ್ಯಾನ್ ನೌಕೆ ಚಂದ್ರನಲ್ಲಿ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಗಂಧಕ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಮುಖ್ಯವಾಗಿ ಆಮ್ಲಜನಕದ ಇರುವಿಕೆಯನ್ನು ದೃಢಪಡಿಸಿದೆ. ಇದೇನು ಅಮೆರಿಕದಂತೆ ಮೇಲಿಂದ ಕಕ್ಷೆಯಲ್ಲಿದ್ದು ನೋಡಿ ಅಂದಾಜಿಸಿದ್ದಲ್ಲ. ಬದಲಿಗೆ ಸಲಕರಣೆಗಳು ಅಲ್ಲಿನ ಕಲ್ಲು ಮಣ್ಣನ್ನು ಮುಟ್ಟಿ ಪರೀಕ್ಷಿಸಿದ್ದು ಎಂಬುದು ವಿಶೇಷ. ಹೈಡ್ರೋಜನ್ ಇರುವಿಕೆ ಯನ್ನು ಈ ಮಿಷನ್ ಇನ್ನೂ ದೃಢೀಕರಿಸಿಲ್ಲ. ಇದು ದೇಶದ ಪ್ರತಿಷ್ಠೆಯ ವಿಷಯ ಎಂಬುದು ಹೌದು. ಆದರೆ ಅದಷ್ಟೇ ಅಲ್ಲ. ಇದು ಸೂಪರ್ ಪವರ್ ಆಗಬೇಕೆಂದು ಹೊರಟ ದೇಶದ ಅವಶ್ಯಕತೆಯೂ ಹೌದು. ಅಮೆರಿಕ, ಚೀನಾಕ್ಕೆ ಸಮನಾಗಿ ನಿಲ್ಲುವ ತಯಾರಿ ಇದು. ಇಲ್ಲದಿದ್ದರೆ ಹಿಂದುಳಿದುಬಿಡುತ್ತೇವೆ. ಇವಿಷ್ಟು ಹಿನ್ನೆಲೆಯಲ್ಲಿ ಇದೆಲ್ಲದರ ಅವಶ್ಯಕತೆ, ಮುಂದಿನ ಸಾಧ್ಯತೆ ಇವೆಲ್ಲದರ ಊಹೆಯನ್ನು ನಿಮ್ಮ ಜಿಜ್ಞಾಸೆಗೆ ಬಿಡುತ್ತಿದ್ದೇನೆ.