Thursday, 19th September 2024

ವಿಗಹಭಂಜಕ ಚಿತ್ತಸ್ಥಿತಿ ಭಾರತದ ನೆಲದಲ್ಲೇಕೆ?

ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ಮಹಾನ್ ರಾಷ್ಟ್ರ ಭಾರತ. ಇಲ್ಲಿನ ನಿವಾಸಿಗಳ ಭಾಷೆ, ಭಾವ, ಬಣ್ಣ, ಜನಾಂಗೀಯತೆ, ನಂಬಿಕೆ ಮತ್ತು ಅಭಿಪ್ರಾಯಗಳು ಒಂದಕ್ಕಿಂತಾ ಒಂದು ಭಿನ್ನ. ಇಷ್ಟಾಗಿಯೂ
ಭಾರತ ಸೌಹಾರ್ದದ ತವರೂರು, ಶಾಂತಿಯ ನೆಲೆವೀಡು. ಆದರೆ ಕೆಲವರಿಗೆ ಭಾರತ ಇಂಥ ‘ಯಥಾಸ್ಥಿತಿ’ಯ ಕಾಯಂ ಅನುಭೋಗಿಯಾಗುವುದು ಅದೇಕೋ ಇಷ್ಟವಿಲ್ಲ ಎನಿಸುತ್ತದೆ. ಹೀಗಾಗಿ ಈ ನೆಲದ ಸ್ಥಾಪಿತ ಸದಾಶಯಗಳ ಜೇನುಗೂಡಿಗೆ, ಶಾಂತಿ-ನೆಮ್ಮದಿಗಳ ಸರೋವರಕ್ಕೆ ವಿನಾಕಾರಣ ಕಲ್ಲೆಸೆದು ಕದಡಿ, ಅದರಿಂದ ಸೃಷ್ಟಿಯಾಗುವ ಅಸಹನೀಯ ದಳ್ಳುರಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಇಂಥವರು ಯತ್ನಿಸುತ್ತಾರೆ. ಅದರಲ್ಲೂ, ಭಾರತೀಯತೆ ಎಂಬ ವೃಕ್ಷದಲ್ಲಿನ ಹಿಂದೂ, ಹಿಂದುತ್ವ, ಸನಾತನ ಧರ್ಮ, ಧಾರ್ಮಿಕ ನಂಬುಗೆ ಎಂಬ ರುಚಿಕಟ್ಟಾದ ಹಣ್ಣುಗಳನ್ನು ಕಂಡರಂತೂ ಹೊಡೆದುರುಳಿಸಲು ಇಂಥವರ ಕೈಗಳಲ್ಲಿ ಕಲ್ಲುಗಳು ಕುಣಿಯುತ್ತಿರುತ್ತವೆ. ಈ ಪೈಕಿಯ ಆಸಾಮಿಗಳ ಪಟ್ಟಿಗೆ ಹೊಸ ಸೇರ್ಪಡೆ ತಮಿಳುನಾಡಿನ ಮುಖ್ಯಮಂತ್ರಿಗಳ ಸುಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್. ಇವರಿಗೆ ಸನಾತನ ಧರ್ಮವು ಕರೋನಾ, ಡೆಂಘೀ, ಮಲೇರಿಯಾ ವ್ಯಾಧಿಗಳ ವೈರಸ್‌ನಂತೆ ಕಂಡಿರುವುದು ವಿಶ್ವದ ಎಷ್ಟನೇ ಅದ್ಭುತವೋ?! ಅತಿ ಅಪಾಯಕಾರಿಯಾಗಿರುವ ಸನಾತನ ಧರ್ಮದ ಮೂಲೋತ್ಪಾಟನೆಗೆ ಇವರು ಕಟಿಬದ್ಧರಂತೆ! ದೇವರಲ್ಲಿ ನಂಬಿಕೆಯಿಲ್ಲದ ಕಟ್ಟಾ ನಾಸ್ತಿಕರೂ ಆಡಲು ಹಿಂಜರಿಯುವ ಸಮಾಜಭಂಜಕ ಮಾತುಗಳು ಉದಯನಿಧಿಯವರ ಬಾಯಿಂದ ಆಣಿಮುತ್ತುಗಳಂತೆ ಉದುರಿವೆ. ಇದನ್ನು ಕಂಡು, ‘ಅದು ಹಾಗಲ್ಲಪ್ಪಾ, ಹೀಗೆ’ ಎಂದು ಬುದ್ಧಿವಾದ ಹೇಳಬೇಕಿದ್ದ ಅವರ ತಂದೆಯೂ ಇಂಥ ಚಿತ್ತಸ್ಥಿತಿಯವರೇ; ಲೋಕೋದ್ಧಾರಕ ಶ್ರೀರಾಮನನ್ನು ‘ಆತ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದ?’ ಎಂದು ಪ್ರಶ್ನಿಸಿದ್ದ ಅವರ ತಾತನದ್ದೂ ಇಂಥ ಚಾಳಿಯೇ. ಹೀಗಿರುವಾಗ ಸನಾತನ ಸಂಸ್ಕೃತಿಯ ಅರಿವು ಉದಯನಿಧಿಯಲ್ಲಿ ಹೇಗೆ ತಾನೇ ಉದಯಿಸೀತು? ಯಾವುದೇ ಮಾತಿರಲಿ, ಕೃತಿಯಿರಲಿ, ಅದರ ಪ್ರಸ್ತುತಿಗೆ ಔಚಿತ್ಯಪ್ರಜ್ಞೆ ಎಂಬುದೊಂದಿರುತ್ತದೆ. ಆದರೆ ಅದು ಉದಯನಿಧಿಗೆ ಪ್ರಾಯಶಃ ಇದ್ದಂತಿಲ್ಲ. ಇಂಥ ಮಾತುಗಳಿಂದ ಜನಸಮುದಾಯದಲ್ಲಿ ಒಡಕುಂಟಾಗುತ್ತದೆ ಎಂಬ ಸೂಕ್ಷ್ಮಪ್ರಜ್ಞೆ ಯಿಲ್ಲದೆಯೇ ಜನರನ್ನು ಆಳುವ ಮಹತ್ವದ ಹುದ್ದೆಯೊಂದನ್ನು ಅವರು ಅಲಂಕರಿಸಿರುವುದು ವಿಪರ್ಯಾಸವಷ್ಟೇ.

Leave a Reply

Your email address will not be published. Required fields are marked *