Monday, 16th September 2024

ಶ್ರೀಲಂಕಾ ಏಕೆ ಭಾರತದಲ್ಲಿ ಸೇರಿಕೊಂಡಿಲ್ಲ ?

ವಿದೇಶ ವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್

dhyapaa@gmail.com

ಅಖಂಡ ಭಾರತದ ವಿಷಯ ಬಂದಾಗ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಸೇರಿದಂತೆ ನಾವು ಕೆಲವು ದೇಶಗಳನ್ನು ಉಲ್ಲೇಖಿಸುತ್ತೇ ವಾದರೂ ಶ್ರೀಲಂಕಾ ಇದರಿಂದ ಹೊರಗುಳಿಯುತ್ತದೆ. ಹಿಂದೆ ಶ್ರೀಲಂಕಾ ಭಾರತದ ಭಾಗವಾಗಿತ್ತೇ? ಅಥವಾ ಮುಂದೊಂದು ದಿನ ಅದು ಭಾರತವನ್ನು ಸೇರಬಹುದೇ?

ಭಾರತದ ದಕ್ಷಿಣದಲ್ಲಿರುವ ಶ್ರೀಲಂಕಾ, ಹಿಂದೂ ಮಹಾಸಾಗರದ ಮುತ್ತು. ಒಂದು ಕಾಲದಲ್ಲಿ ರತ್ನಗಳ ಗಣಿ, ಇಂದು ಅದ್ಭುತ ನೈಸರ್ಗಿಕ ಸೌಂದರ್ಯದ ಖನಿ. ಶ್ರೀಲಂಕಾದ ಚಹಾ ಮತ್ತು ದಾಲ್ಚಿನ್ನಿ ಇಂದು ವಿಶ್ವವ್ಯಾಪಿಯಷ್ಟೇ ಅಲ್ಲ, ಹೆಸರುವಾಸಿಯೂ ಹೌದು. ಶ್ರೀಲಂಕಾ ಆರ್ಥಿಕವಾಗಿ ಇಂದು ಜರ್ಜರಿತಗೊಂಡಿದೆ ನಿಜ. ಆದರೆ ಅನೇಕ ಸಾಂಸ್ಕೃತಿಕ ಆಕ್ರಮಣದ ನಡುವೆಯೂ ತನ್ನ ಪ್ರತಿ ರೋಧಕ ಶಕ್ತಿಯಿಂದ ಪುನಃ ಎದ್ದು ನಿಂತಿರುವ ಲಂಕಾ, ಇಂದೂ ಕೂಡ ಸಾಂಸ್ಕೃತಿಕವಾಗಿ ಶ್ರೀಮಂತ ದೇಶ.

ಭಾರತದ ದಕ್ಷಿಣದಿಂದ ಶ್ರೀಲಂಕಾದ ಉತ್ತರದ ತುದಿಗೆ ಇರುವ ದೂರ ಕೇವಲ ಐವತ್ನಾಲ್ಕು ಕಿ.ಮೀ. ಅಂದರೆ, ಬೆಂಗಳೂರಿನಿಂದ ತುಮಕೂರಿಗೆ ಇರುವ ದೂರಕ್ಕಿಂತಲೂ ಸುಮಾರು ಹದಿನೈದು ಕಿಲೋಮೀಟರ್ ಕಮ್ಮಿ. ಭಾರದದ್ದೇ ಭಾಗವಾಗಿರುವ ಅಂಡ ಮಾನ್ ಮತ್ತು ನಿಕೋಬಾರ್ ದ್ವೀಪಗಳ ದೂರ ಸಾವಿರ ಕಿ.ಮೀಗಿಂತಲೂ ಹೆಚ್ಚು. ಇಂದು ಶ್ರೀಲಂಕಾದಲ್ಲಿ ಶೇ.75 ರಷ್ಟಿರುವ ಸಿಂಹಳಿಯರು ಕ್ರಿಸ್ತ ಪೂರ್ವ ಆರನೆಯ ಶತಮಾನದಲ್ಲಿ ಉತ್ತರ ಭಾರತ ದಿಂದ ವಲಸೆ ಬಂದವರು ಎನ್ನಲಾಗುತ್ತದೆ.

ಕ್ರಿಸ್ತಶಕ ಹದಿಮೂರನೇ ಶತಮಾನದ ಕಾಲಕ್ಕೆ ಭಾರತದಿಂದ ತಮಿಳರು ಲಂಕೆಗೆ ಬಂದರು. ಅಂದು ಲಂಕೆಯ ಉತ್ತರಕ್ಕೆ ವಲಸೆ ಬಂದ ತಮಿಳರು ಇಂದಿಗೂ ದೇಶದ ಜನಸಂಖ್ಯೆಯ ಶೇಕಡಾ ಹದಿನೈದರಷ್ಟಿದ್ದಾರೆ. ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಲಂಕಾ ಪ್ರವೇಶ ಮಾಡಿದ ಬೌದ್ಧ ಧರ್ಮವನ್ನು ಇಂದು ದೇಶದ ಎಪ್ಪತ್ತು ಪ್ರತಿಶತ ಜನ ಆಲಂಗಿಸಿಕೊಂಡಿದ್ದಾರೆ. ಭಾರತದ ದಕ್ಷಿಣ ಭಾಗವನ್ನಾಳಿದ ಚೋಳರ, ಪಾಂಡ್ಯರ ಅವಧಿಯಲ್ಲಿ ಲಂಕಾ ಭಾರತದ ಭಾಗವಾಗಿತ್ತು. ಇನ್ನು, ಲಂಕೆಯೊಂದು ಇಲ್ಲದಿದ್ದರೆ ರಾಮಾ ಯಣವೇ ಅಪೂರ್ಣ ವಾಗುತ್ತಿತ್ತು ಎನ್ನುವುದು ಎಲ್ಲರಿಗೂ ವಿದಿತ.

ಮಾಡರ್ನ್ ನೇಶನ್ ಸ್ಟೇಟ್ಸ್ ಅಥವಾ ಆಧುನಿಕ ರಾಷ್ಟ್ರ ರಾಜ್ಯಗಳು ಎನ್ನುವಾಗ ಸಂಸ್ಕೃತಿ, ಭಾಷೆ, ಇತಿಹಾಸವನ್ನು ಪರಿಗಣಿಸಲಾಗು ತ್ತದೆ. ಮೊದಲು ಯುರೋಪ್‌ನಲ್ಲಿ ಈ ಪರಿಕಲ್ಪನೆ ಆರಂಭವಾದದ್ದು ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನದಲ್ಲಿ. ಯುರೋಪ್‌ ನಲ್ಲಿ ಅದಕ್ಕೂ ಮೊದಲು ಬೇರೆ ಬೇರೆ ಭಾಷೆ ಮಾತಾಡುವವರು, ಬೇರೆ ಬೇರೆ ಸಂಸ್ಕೃತಿಯ ಜನರು ಬೇರೆ ಬೇರೆ ರಾಜ್ಯಗಳಲ್ಲಿ, ರಾಜರ ಆಳ್ವಿಕೆಯಲ್ಲಿ ಇರುತ್ತಿದ್ದರು. ಜನರಲ್ಲಿ ರಾಷ್ಟ್ರವಾದದ ಕಲ್ಪನೆ ಹುಟ್ಟಿದಾಗ ಇಟಾಲಿಯನ್ ಯುನಿಫಿಕೇಷನ್, ಜರ್ಮನ್ ಯುನಿಫಿಕೇಷನ್‌ಗಳು ಹುಟ್ಟಿದವು.

ಇದೇ ಆಧಾರದ ಮೇಲೆ ಅನ್ಯ ರಾಷ್ಟ್ರಗಳ ಸ್ಥಾಪನೆಯೂ ಆಯಿತು. ಅದರ ಜೊತೆಗೆ, ಕೆಲವು ಕಡೆಗಳಲ್ಲಿ, ಒಂದೇ ಇತಿಹಾಸ, ಒಂದೇ ಭಾಷೆ
ಮತ್ತು ಒಂದೇ ಸಂಸ್ಕೃತಿಯನ್ನು ಕುಡಿದು ಬೆಳೆದ ಭೂಮಿಯೂ ಬೇರೆ ಬೇರೆ ದೇಶವಾಗಿ ವಿಭಜನೆಗೊಂಡು ಎದ್ದು ನಿಂತಿತು. ಅಂಥವು ಗಳಲ್ಲಿ 1947ರಲ್ಲಿ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಂಡ ಭಾರತ ಕೂಡ ಒಂದು. 1948 ರಲ್ಲಿ ಸ್ವಾತಂತ್ರ್ಯ ಪಡೆದ ಶ್ರೀಲಂಕಾವೂ ಒಂದು. ಇದು ಪುಟ್ಟ ದೇಶ ಶ್ರೀಲಂಕಾದ ಪುಟ್ಟ ಚರಿತ್ರೆ. ಹಾಗಾದರೆ, ಭಾರತದೊಂದಿಗಿನ ಸಾಮ್ಯತೆಯ ಹೊರತಾಗಿಯೂ ಲಂಕಾ ಏಕೆ ಭಾರತ ದೊಂದಿಗೆ ಸೇರಿಲ್ಲ? ರಾಮಾಯಣ ಕಾಲದ ರಾವಣನ ರಾಜಧಾನಿಯಾದ ಲಂಕೆಯೇ ಇಂದಿನ ಶ್ರೀಲಂಕಾ ಆದರೆ ಅದು ಎಂದೋ ಭಾರತಕ್ಕೆ ಸೇರಬೇಕಿತ್ತು. ಏಕೆಂದರೆ ಶ್ರೀರಾಮ ಅದನ್ನು ಜಯಿಸಿದ್ದ. ಆದರೆ ಹಾಗಾಗಲಿಲ್ಲ.

ರಾವಣ ವಧೆಯ ನಂತರ ವಿಭೀಷಣನಿಗೆ ಲಂಕೆಯ ಹೊಣೆ ಹೊರಿಸಿ ಶ್ರೀರಾಮ ಅಯೋಧ್ಯೆಗೆ ಹಿಂತಿರುಗಿದ. ಲಂಕೆಯ ಅದೃಷ್ಟವೋ, ದುರಾದೃಷ್ಟವೋ, ಅದೇ ಮಾದರಿ ಮುಂದುವರಿಯಿತು. ಶ್ರೀಲಂಕಾದ ಇತಿಹಾಸದಲ್ಲಿ, ಹೊರಗಿನವರು ದಾಳಿ ಮಾಡಿ ತನ್ನ ವಶಕ್ಕೆ ಪಡೆದುಕೊಂಡರೂ ಸ್ವತಃ ರಾಜ್ಯ ಆಳಿದವರು ಕಮ್ಮಿ. ಭಾರತದ ಪಶ್ಚಿಮ ಭಾಗದಲ್ಲಿ ರಾಜ್ಯವಾಳುತ್ತಿದ್ದ ವಿಜಯ ಎಂಬ ಹೆಸರಿನ ದೊರೆ
ತನ್ನ ಏಳುನೂರು ಭಟರೊಂದಿಗೆ ಶ್ರೀಲಂಕಾಕ್ಕೆ ಬಂದು ಅದನ್ನು ವಶಪಡಿಸಿಕೊಂಡಿದ್ದ, ಆತನೇ ಲಂಕೆಯ ಮೊದಲ ರಾಜ ಎಂಬ ಇತಿಹಾಸವೂ ಇದೆ.

ನಂತರ, ಚೋಳರು ಮತ್ತು ಪಾಂಡ್ಯರು ದಕ್ಷಿಣ ಭಾರತದಲ್ಲಿ ರಾಜ್ಯಭಾರ ಮಾಡುವಾಗ ಲಂಕೆಯನ್ನು ವಶಪಡಿಸಿಕೊಂಡರೂ, ತಾವೇ ರಾಜ್ಯವನ್ನಾಳಲಿಲ್ಲ. ತಮ್ಮ ಅಡಿಯಲ್ಲಿದ್ದು, ತಮ್ಮ ಮಾತಿನಂತೆ ನಡೆಯುವ ಸಿಂಹಳಿಯರಿಗೇ ರಾಜ್ಯ ನಡೆಸುವ ಸ್ವಾತಂತ್ರ್ಯ ನೀಡಿದ್ದರು. ಅವರ ನಂತರ ದಕ್ಷಿಣ ಭಾರತದಲ್ಲಿ ರಾಜ್ಯವಾಳಿದವರಾರಿಗೂ ಲಂಕೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲೇ ಇಲ್ಲ. ಇದರಿಂದ
ಸಿಂಹಳಿಯರೇ ಅಽಕಾರ ನಡೆಸಿದರು. ಶ್ರೀಲಂಕಾಕ್ಕೆ ಬಂದ ಡಚ್ಚರು, ಪೋರ್ಚುಗೀಸರು ಹೆಚ್ಚು ಕಾಲ ನಿಲ್ಲಲಿಲ್ಲ. ನಂತರ ಬಂದ ಬ್ರಿಟಿಷರು
ಕೂಡ ಭಾರತ ಮತ್ತು ಶ್ರೀಲಂಕಾವನ್ನು ಬೇರೆ ಬೇರೆಯಾಗಿಯೇ ಆಳಿದರು.

ಬ್ರಿಟಿಷರು ಭಾರತಕ್ಕೆ ಬರುವುದಕ್ಕಿಂತ ಮೊದಲು, ದೇಶದಲ್ಲಿ ಅನೇಕ ರಾಜ್ಯಗಳಿದ್ದು, ಬೇರೆ ಬೇರೆ ರಾಜರು ರಾಜ್ಯ ಆಳುತ್ತಿದ್ದರು. ಬ್ರಿಟಿಷರು ಆಡಳಿತ ಸುಗಮವಾಗಿರಲು ಬ್ರಿಟಿಷ್ ಇಂಡಿಯಾ ಸ್ಥಾಪಿಸಿ, ಎಲ್ಲ ಪ್ರಾಂತ್ಯಗಳನ್ನೂ ಒಗ್ಗೂಡಿಸಿ ಒಂದೇ ಆಡಳಿತದ ಅಡಿಯಲ್ಲಿ ತಂದರು. ಭಾರತದಲ್ಲಿ ಏಕೀಕೃತ ರಾಷ್ಟ್ರದ ಪ್ರೇರಣೆ ಹುಟ್ಟಿದ್ದು ಅಲ್ಲಿಂದಲೇ. ಆ ಸಂದರ್ಭದಲ್ಲಿ ಬ್ರಿಟಿಷ್ ಇಂಡಿಯಾದ ಒಳಗೂ ಸಾಕಷ್ಟು ಸಂಘರ್ಷ ಗಳಿದ್ದವು. ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಪಾಕಿಸ್ತಾನವನ್ನು ಹಿಂದೂಸ್ತಾನದಿಂದ ಕತ್ತರಿಸಿ ಬೇರ್ಪಡಿಸಿದ್ದರು. ಅದರಂತೆ ಇನ್ನೂ ಕೆಲವು ಬೇರೆ ಬೇರೆ ರಾಜ್ಯಗಳ (ದೇಶಗಳ) ಬೇಡಿಕೆಯನ್ನು ಕೆಲವು ನವಾಬರು ಮುಂದಿಟ್ಟಿದ್ದರು.

ಅದಕ್ಕಾಗಿ ಒತ್ತಡ ಎಷ್ಟಿತ್ತೆಂದರೆ, ಅಂದು ಉಕ್ಕಿನ ಮನುಷ್ಯ ಎಂದೇ ಹೆಸರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಇಲ್ಲದಿದ್ದರೆ ದೇಶ ಛಿದ್ರ ಛಿದ್ರವಾಗಿ ಹರಿದು ಹಂಚಿಹೋಗುತ್ತಿತ್ತು. ಅಂಥ ಸಂದರ್ಭದಲ್ಲಿ ಶ್ರೀಲಂಕಾ ಭಾರತವನ್ನು ಕೂಡಿಕೊಳ್ಳುವ ಕನಸು ಕೂಡ ಕಾಣುವಂತಿ
ರಲಿಲ್ಲ. ಮೊದಲನೆಯದಾಗಿ, ನೂರಾರು ವರ್ಷ ಸ್ವತಂತ್ರವಾಗಿರುವ ಯಾವುದೇ ದೇಶವಾದರೂ ಇನ್ನೊಂದು ದೇಶದ ಭಾಗವಾಗುವು ದನ್ನಾಗಲಿ, ಇನ್ನೊಂದು ದೇಶದೊಂದಿಗೆ ಸೇರುವುದನ್ನಾಗಲೀ ಇಷ್ಟಪಡುವುದಿಲ್ಲ.

ಅದಕ್ಕೊ ಮೊದಲು, ಹೊರಗಿನಿಂದ ಶ್ರೀಲಂಕಾಕ್ಕೆ ಬಂದ ಇಂಡೋ ಆರ್ಯನ್ನರು ಅಲ್ಲಿಯವರಾಗೇ ಉಳಿದರು. ಸ್ಥಳೀಯರೊಂದಿಗೆ ಸೇರಿಕೊಂಡು, ಅವರ ಸಂಸ್ಕೃತಿಗೆ ಅವರ ವಿಚಾರ, ಆಚಾರ, ಆಹಾರಕ್ಕೆ ಒಗ್ಗಿಕೊಂಡು ಅಲ್ಲಿಯವರೇ ಆಗಿದ್ದರು. ಎಂದೂ ಹಿಂತಿರುಗಿ ತಮ್ಮ ಮೂಲಸ್ಥಾನಕ್ಕೆ ಹೋಗುವ ವಿಚಾರವನ್ನೂ ಮಾಡಲಿಲ್ಲ. ಅದೂ ಲಂಕೆಗೆ ವರ (ಶಾಪ!) ವಾಯಿತು. ಕೊನೆಯ ಮತ್ತು ಪ್ರಮುಖವಾಗಿ, ಎಂಬತ್ತರ ದಶಕಕ್ಕಿಂತ ಮೊದಲು ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧ ಚೆನ್ನಾಗೇ ಇತ್ತು. ಆದರೆ 1983 ರಲ್ಲಿ ಲಿಬರೇಷನ್ ಟೈಗರ್ ಆಫ್ ತಮಿಳ್ ಏಲಮ್ (ಎಲ್‌ಟಿಟಿಇ) ಆರಂಭಿಸಿದ ಅಂತರ್ಯುದ್ಧ ಎರಡು ದೇಶಗಳ ಒಗ್ಗೂಡಿಕೆ ಇರಲಿ, ಮೊದಲಿದ್ದ ಸೌಹಾರ್ದ ಸಂಬಂಧವನ್ನೂ ಕೆಡಿಸಿತ್ತು.

ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯವನ್ನು ಪ್ರತ್ಯೇಕ ರಾಜ್ಯ (ರಾಷ್ಟ್ರ) ಮಾಡಲು ಎಲ್‌ಟಿಟಿಇ ಹೋರಾಟ ನಡೆಸಿತ್ತು. ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಭಾರತದ ಗುಪ್ತಚರ ಸಂಸ್ಥೆ ಖಂಘ ಮತ್ತು ತಮಿಳುನಾಡು ರಾಜ್ಯ ಸರಕಾರ ಎಲ್‌ಟಿಟಿಇಗೆ ಹಣಕಾಸಿನ
ಸಹಾಯ ಮತ್ತು ಸೈನಿಕ ತರಬೇತಿ ನೀಡುತ್ತಿವೆ ಎಂಬ ಅನುಮಾನ ಶ್ರೀಲಂಕಾಕ್ಕೆ ಇತ್ತು. ಎರಡೂ ದೇಶಗಳ ನಡುವೆ ನಡೆದ ಶಾಂತಿ ಒಪ್ಪಂದ ಮತ್ತು ಭಾರತದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯ ಹತ್ಯೆಯ ನಂತರ ಭಾರತ ಎಲ್‌ಟಿಟಿಇಯನ್ನು ಆತಂಕವಾದಿ ಸಂಘಟನೆ ಎಂದು ಘೋಷಿಸಿತು. ಆ ನಂತರವೇ ಸ್ಥಿತಿ ಸ್ವಲ್ಪ ಬದಲಾದದ್ದು. ಆಂತರಿಕ ಯುದ್ಧದ ಸಂದರ್ಭ ದಲ್ಲಿ ಶ್ರೀಲಂಕಾ ಭಾರತವನ್ನು ಸಂದೇ ಹದಿಂದಲೇ ನೋಡುತ್ತಿತ್ತು. ಅಂದಿನ ಆ ಮನಸ್ಥಿತಿ ಅವರನ್ನು ಸಮಯ ಸಾಧಕ ಚೀನಾ ಕಡೆ ಮುಖಮಾಡುವಂತೆ ಮಾಡಿತು.

ಭಾರತದ ಮೇಲಿನ ಸಂದೇಹ ಎಷ್ಟು ಬಲವಾಗಿತ್ತೆಂದರೆ, ಚೀನಾದ ಅವಕಾಶವಾದದ ಮುಖವನ್ನು ಗುರುತಿಸುವಲ್ಲಿ ಶ್ರೀಲಂಕಾ ವಿಫಲ ವಾಗಿತ್ತು. ಚೀನಾ ತೋಡಿದ ಗುಂಡಿಯೊಳಕ್ಕೆ ಇಳಿಯುತ್ತಾ ಸಾಗಿತ್ತು ಶ್ರೀಲಂಕಾ. ಚೀನಾ ಶ್ರೀಲಂಕಾದ ಬಂದರು, ಕಾರ್ಖಾನೆಗಳ
ಅಭಿವೃದ್ಧಿಗೆ ಹಣ ತೊಡಗಿಸುವುದಾಗಿ ಹೇಳಿತು. ಅದರಂತೆ ಹಂಪಂಟೋಟ ಬಂದರು, ಕೊಲಂಬೊ ಪೋರ್ಟ್ ಸಿಟಿ ಯೋಜನೆಗಳಲ್ಲಿ ಹಣ ತೊಡಗಿಸಿದೆ.

ಹಣ ಮರು ಪಾವತಿಸಲಾಗದಿದ್ದಾಗ ತನಗೇ ಬಿಟ್ಟುಕೊಡುವಂತೆಯೂ ಕೇಳಿತು. ಅದರಿಂದ ರೊಚ್ಚಿಗೆದ್ದ ಸ್ಥಳೀಯರು ಸರಕಾರದ ವಿರುದ್ಧ ಪ್ರತಿಭಟನೆಗೆ ಳಿದರು. ಕರೋನಾ ಆರಂಭವಾಗುವುದಕ್ಕೂ ಮೊದಲು ಚೀನಾದ ಬಳಿ ಐದು ಶತಕೋಟಿ ಡಾಲರ್ ಸಾಲ ಮಾಡಿತ್ತು ಶ್ರೀಲಂಕಾ. ಅದೇ ದೇಶದ ವಿದೇಶಿ ಸಾಲದ ಶೇಕಡಾ ಹತ್ತರಷ್ಟಿದೆ. ಉಳಿದ ದೇಶಗಳು ಸ್ವಲ್ಪ ಕಾಲ ತಾಳಿಯಾವು, ಆದರೆ ಚೀನಾ? ಅದು
ಕಾಯುತ್ತಿರುವುದೇ ಇಂಥ ಸಂದರ್ಭಗಳಿಗೆ. ಸದ್ಯ ಶ್ರೀಲಂಕಾದ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ಆಹಾರದ ಕೊರತೆ, ಇಂಧನದ ಕೊರತೆ, ದೀರ್ಘಾವಧಿಯ ವಿದ್ಯುತ್ ಕಡಿತ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ.

ದೇಶ ಬಿಟ್ಟು ಹೊರಟಿದ್ದಾರೆ. ಈಗಾಗಲೇ ಸಾವಿರದ ಸಂಖ್ಯೆಯಲ್ಲಿ ತಮಿಳುನಾಡಿಗೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಗುಳೆಹೋಗುವ ನಿರೀಕ್ಷೆಯಿದೆ. ಕಂಗಾಲಾಗಿ ಪ್ರತಿಭಟನೆಗೆ ಮುಂದಾದ ಜನರನ್ನು ನಿಗ್ರಹಿಸಲು ಸೈನ್ಯ ಬೀದಿಗೆ ಇಳಿದಿದೆ. ಒಂದು ಕಾಲದಲ್ಲಿ ಸ್ವರ್ಣ ಲಂಕೆ ಎಂದೇ ಹೆಸರಾಗಿದ್ದ ದೇಶದಲ್ಲಿ ಇಂದು ಸಿಮೆಂಟ್, ಔಷಧ, ಸಕ್ಕರೆ, ಬೇಳೆ-ಕಾಳು, ಪೆಟ್ರೋಲ್ ಮುಂತಾದ ಅಗತ್ಯ ವಸ್ತುಗಳಿಗೆ ಬರವೋ ಬರ. ಎಲ್ಲಿಯವರೆಗೆ ಎಂದರೆ, ಕಾಗದ ಇಲ್ಲ ಎನ್ನುವ ಕಾರಣಕ್ಕೆ ಲಕ್ಷಾಂತರ ಮಕ್ಕಳ ಪರೀಕ್ಷೆ ರದ್ದಾಗಿದೆ. ಕಾರಣ, ಇದೆಲ್ಲವೂ ಶ್ರೀಲಂಕಾಕ್ಕೆ ಅನ್ಯ ರಾಷ್ಟ್ರಗಳಿಂದ ಆಮದಾಗಬೇಕು.

ಆದರೆ, ಖರೀದಿಸಲು ದೇಶದಲ್ಲಿ ವಿದೇಶಿ ಕರೆನ್ಸಿಯ ಕೊರತೆ ಇದೆ. ಶ್ರೀಲಂಕಾ ಕಳೆದ ವರ್ಷ ಸುಮಾರು ಹತ್ತು ಬಿಲಿಯನ್ ಡಾಲರ್ ವ್ಯಾಪಾರದ ಕೊರತೆ ಹೊಂದಿದೆ. ಅಂದರೆ, ಕಳೆದ ವರ್ಷ ರಫ್ತು ಮಾಡಿದ್ದಕ್ಕಿಂತ ಹೆಚ್ಚು ಮೊತ್ತದ ವಸ್ತುಗಳು ಆಮದಾಗಿವೆ. ದೇಶದ
ಜಿಡಿಪಿಗೆ ಸುಮಾರು ಹತ್ತು ಪ್ರತಿಶತ ಕೊಡುಗೆ ನೀಡುತ್ತಿದ್ದ ಪ್ರವಾಸೋದ್ಯಮ, 2019ರಲ್ಲಿ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಮತ್ತು ನಂತರದ ಎರಡು ವರ್ಷ ಕರೋನಾ ನೀಡಿದ ಮರ್ಮಾಘಾತದಿಂದ ಹಳ್ಳ ಹಿಡಿದಿದೆ.

ಮೂರು ವರ್ಷಗಳ ಹಿಂದೆ ಒಂದೂವರೆ ಶತಕೋಟಿ ಡಾಲರ್ ನಷ್ಟಿದ್ದ ವಿದೇಶಿ ನೇರ ಹೂಡಿಕೆ ಕಳೆದ ವರ್ಷ ಐದು ನೂರು ಮಿಲಿಯನ್ ಡಾಲರ್‌ಗೆ ಇಳಿದಿದೆ. ಅಂದರೆ, ಸುಮಾರು ಅರವತ್ತೈದು ಪ್ರತಿಶತ ಕುಸಿದಿದೆ. ಇದು ಅಲ್ಲಿಯ ಸರಕಾರವೇ ನೀಡಿದ ಅಂಕಿ ಅಂಶ. ಈ
ಸಂದರ್ಭದಲ್ಲಿ ಲಂಕಾ, ಭಾರತವೂ ಸೇರಿದಂತೆ ಇನ್ನೂ ಕೆಲವು ದೇಶಗಳ ಕಡೆ ಸಹಾಯಕ್ಕಾಗಿ, ಸಾಲಕ್ಕಾಗಿ ಮುಖಮಾಡಿದೆ.

ಕಳೆದ ತಿಂಗಳು ಭಾರತ ಶ್ರೀಲಂಕಾಕ್ಕೆ ಪೆಟ್ರೋಲಿಯಮ್ ಉತ್ಪನ್ನ ಖರೀದಿಸಲು ಐದು ನೂರು ಮಿಲಿ ಯನ್ ಡಾಲರ್ ಸಾಲ ವಿಸ್ತರಿಸಿದೆ.
ಜತೆಗೆ, ಕಳೆದ ವಾರ ಆಹಾರ, ಔಷಧಿ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಒಂದು ಬಿಲಿಯನ್ ಡಾಲರ್ ಸಾಲ ಘೋಷಿಸಿ,
ವಿಶ್ವಾಸಾರ್ಹ ನೆರೆ ರಾಷ್ಟ್ರವಾಗಿ ಹೊರಹೊಮ್ಮಿದೆ.

ವಿಪರ್ಯಾಸವೆಂದರೆ, ಸ್ನೇಹಿತನಂತೆ ನಟಿಸಿದ್ದ ಚೀನಾ ಮಾತ್ರ ಯಾವುದೇ ಸಹಾಯಕ್ಕೆ ನಿಂತಿಲ್ಲ. ಕೊನೆ ಪಕ್ಷ ಒಂದು ಸಣ್ಣ ಆಶ್ವಾಸನೆ ಯನ್ನೂ ನೀಡುತ್ತಿಲ್ಲ. ಉದ್ದೇಶವೇ ಮೋ ವಾಗಿರುವಾಗ ಅದರಿಂದ ಅಪೇಕ್ಷಿಸುವುದೂ ಅಪರಾಧವೇ ಬಿಡಿ! ಶ್ರೀಲಂಕಾ ಯಾವುದೋ ಒಂದು ಘಳಿಗೆಯಲ್ಲಿ ಭಾರತವನ್ನು ಸೇರಿಕೊಂಡಿದ್ದರೆ ಇಂದು ಈ ಪರಿಸ್ಥಿತಿ ಎದುರಿಸಬೇಕಾಗುತ್ತಿರಲಿಲ್ಲ ಅಲ್ಲವೇ? ಅದರ ಕುರಿತು ಒಂದು ಅನುಕಂಪವಿದೆ. ಎನಿ ವೇ, ಶ್ರಿ ಲಂಕಾ ಆದಷ್ಟು ಬೇಗೆ ಈ ಸಂಕಷ್ಟದಿಂದ ಹೊರಗೆ ಬರಲಿ. ಸದ್ಯ ಶ್ರೀಲಂಕಾದ ಪರಿಸ್ಥಿತಿ ಗೂಡಿಲ್ಲದ
ಗುಬ್ಬಿಯಂತಾಗಿದೆ. ಗಿಡುಗನ ಕೈ ಸೇರದೇ ಗುಬ್ಬಿ ತನ್ನ ಗೂಡು ಸೇರಿಕೊಳ್ಳಲಿ.