Wednesday, 30th October 2024

ಎಲ್ಲ ಒಕೆ ಆದರೆ, ಮಾದಕ ದ್ರವ್ಯ ವ್ಯಸನ ಏಕೆ ?

ಅಭಿಮತ

ಡಾ.ಮುರಲೀ ಮೋಹನ್ ಚೂಂತಾರು

ಜೂನ್ ೨೬ ರಂದು ವಿಶ್ವದಾದ್ಯಂತ ಮಾದಕವಸ್ತು ವಿರೋಧಿ ದಿನ ಎಂದು ಆಚರಿಸಲಾಗುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವ ಜನತೆಯನ್ನು ಜಾಗೃತಗೊಳಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ ಎಂದರೂ ತಪ್ಪಲ್ಲ. ಇಂದು ನಾವು ಜೀವಿಸುತ್ತಿರುವ ಈ ಕಾಲಘಟ್ಟ ಎನ್ನುವುದು, ಬಹಳ ಸ್ಪರ್ಧಾತ್ಮಕ ಜಗತ್ತು. ಎಲ್ಲವೂ ಬಹಳ ವೇಗ ದಲ್ಲಿ ನಡೆಯುತ್ತದೆ. ಕಣ್ಣು ಮಿಟುಕಿಸುವುದರ ಒಳಗೆ ಏನೆಲ್ಲ ನಡೆದು ಬಿಡುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಒತ್ತಡವೂ ಬಹಳ ಇರುತ್ತದೆ.

ಈಗಿನ ಒತ್ತಡದ, ಧಾವಂತದ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ, ಯುವ ಜನತೆ ವೇಗಕ್ಕೆ ತಾಳ ಹಾಕಲು ಕಷ್ಟವಾಗಿ ತಪ್ಪುದಾರಿ ಹಿಡಿಯುತ್ತಾರೆ ಎಂದರೂ ತಪ್ಪಲ್ಲ. ನಮ್ಮ ಇಂದಿನ ನಾಗರೀಕ ಜೀವನಶೈಲಿಯಲ್ಲಿ ಮೋಜು,ಮಸ್ತಿ ತಡ ರಾತ್ರಿಯ ಪಾರ್ಟಿ ಇತ್ಯಾದಿಗಳು ಮಾಮೂಲಿಯಾಗಿವೆ. ಈ ಹಂತದಲ್ಲಿ ಹದಿ ಹರೆಯದ ಯುವ ಜನತೆ ದಾರಿ ತಪ್ಪುವುದು ಸಾಮಾನ್ಯ. ಈ ದಿಸೆಯಲ್ಲಿ ತಂದೆ ತಾಯಂದಿರ ಆಸರೆ, ಮಾರ್ಗದರ್ಶನ ಅತೀ ಅಗತ್ಯ. ಹದಿ ಹರೆಯದಲ್ಲಿ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯದಿದ್ದಲ್ಲಿ ಅನಾಹುತವಾಗುವ ಸಾಧ್ಯತೆಯಿದೆ.

ಅಫೀಮು ಎನ್ನುವುದು ಗಸಗಸೆಯಿಂದ ತಯಾರು ಮಾಡಲಾದ, ಔಷಧಿಯ ಗುಣವುಳ್ಳ ವಸ್ತು. ಅಫೀಮ್‌ನಿಂದ ತಯಾರಾದ Morphine (ಮಾರ್ಪಿನ್) ಎನ್ನುವ ಶುದ್ಧ ರಾಸಾಯನಿಕ ವಸ್ತುವನ್ನು, ಇಂದಿಗೂ ವೈದಕೀಯ ಶಾಸ್ತ್ರದಲ್ಲಿ ನೋವುನಿವಾರಕ ಚುಚ್ಚುಮದ್ದಿನ ರೂಪದಲ್ಲಿ ಬಳಸಲಾಗುತ್ತದೆ. ಅಪಘಾತದಲ್ಲಿ ಪೆಟ್ಟುಬಿದ್ದು ತೀವ್ರ ಸ್ಪರೂಪದ ನೋವಿ ರುವಾಗ, ಹೃದಯಘಾತವಾಗಿ ಅತಿಯಾದ ಎದೆನೋವು ಇದ್ದಲ್ಲಿ ನೋವುನಿವಾರಕವಾಗಿ ಇಂದಿಗೂ ಬಳಸಲಾಗುತ್ತದೆ. ಇದರಿಂದ ಸಣ್ಣ ಪ್ರಮಾಣದಲ್ಲಿ ನಿದ್ದೆ ಬರಬಹುದು. ಅಫೀಮಿ ನಿಂದ ತಯಾರಿಸಲಾದ ಹೆರಾಯಿನ್ ಎಂಬ ಮಾದಕವಸ್ತು ಕೂಡಾ ಪಾಶ್ಚಾತ್ಯ ದೇಶಗಳಲ್ಲಿ ಹೇರಳವಾಗಿ ಬಳಕೆಯಲ್ಲಿದೆ. ಇದರಿಂದ ಶರೀರದ ನೋವು, ಬಳಲಿಕೆ, ಮಾನಸಿಕ ದುಗುಡ ಕಡಿಮೆಯಾಗಿ ಕ್ಷಣಿಕವಾಗಿ ಖುಷಿ ಸಿಗುತ್ತದೆ. ಮನಸ್ಸಿನ ಬೇಸರ, ನಿರಾಸೆ ಎಲ್ಲವೂ ತಗ್ಗಿ ನಿರಾಳವಾಗುತ್ತದೆ. ಈ ಕಾರಣದಿಂದಲೇ ಜನ ಹೆರಾಯಿನಾ ಚುಚ್ಚುಮದ್ದನ್ನು ಮತ್ತೆ ಮತ್ತೆ ಬಳಸುತ್ತಾರೆ. ಕ್ರಮೇಣ ಚಟವಾಗಿ ಮಾರ್ಪಾಡಾಗುತ್ತದೆ. ಮತ್ತೆ ಮತ್ತೆ ತೆಗೆದುಕೊಳ್ಳಬೇಕೆಂಬ ತುಡಿತ ಉಂಟಾಗುತ್ತದೆ.

ತೆಗೆದುಕೊಳ್ಳ ದಿದ್ದಲ್ಲಿ withdrwal syndrome ಉಂಟಾಗುತ್ತದೆ. ಮನುಷ್ಯ ಆ ಮಾನಸಿಕ ಸ್ಥಿಮಿತ ಕಳಕೊಂಡು ಹುಚ್ಚನಂತಾಗು ತ್ತಾನೆ. ಹೆರಾಯಿನ್ ಬಳಕೆಯಿಂದ ಲೈಗಿಂಕ ಆಸೆ ಹೆಚ್ಚಾಗು ತ್ತದೆ. ಆದರೆ ಲೈಂಗಿಕ ಸಾಮರ್ಥ್ಯ ಕುಗ್ಗುತ್ತದೆ. ಈಗಿನ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಮಾದಕ ವಸ್ತುಗಳ ಬಳಕೆ ಎಂದರೂ ತಪ್ಪಲ್ಲ. ಒಟ್ಟಿನಲ್ಲಿ ಅಫೀಮು ಎನ್ನುವುದು ಔಷಽಯ ಗುಣವುಳ್ಳ ಮಾದಕವಸ್ತು ಇದರ ಚಟಕ್ಕೆ ಹದಿಹರೆಯದ  ಯುವಕರು ಬಿದ್ದಲ್ಲಿ ಮತ್ತೆ ಹೊರ ಬರುವುದು ಬಹಳ ಕಷ್ಟ. ಇನ್ನು ‘ಗಾಂಜಾ’ದ ವಿಷಯಕ್ಕೆ ಬರೋಣ. ಇದು ಕೂಡಾ ಸಸ್ಯ ಮೂಲದಿಂದಲೇ ಬಂದಂತಹ ಇನ್ನೊಂದು ಮಾದಕ ವಸ್ತು.

ಈಗೀಗ ಹಳ್ಳಿ ಹಳ್ಳಿಗಳಲ್ಲೂ ಇದನ್ನು ಅಕ್ರಮವಾಗಿ ಬೆಳೆಸುತ್ತಿದ್ದಾರೆ. ಸರಕಾರ ಇದರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೂ, ಜನರು ಅಕ್ರಮವಾಗಿ ಬೆಳೆದು, ಹಣ ಮಾಡುವ ದಂದೆಯಲ್ಲಿ ತೊಡಗಿzರೆ. ಕಾಲಕ್ರಮೇಣ ಮಾದಕ ವಸ್ತುಗಳ ಬಳಕೆ ಜಾಸ್ತಿಯಾದಂತೆ, ಶರೀರದ ಒಂದೊಂದು ಅಂಗಗಳನ್ನು ಆಪೋಶನ ತೆಗೆದು ಕೊಳ್ಳುತ್ತದೆ. ಕೆಲಸ ಮಾಡಲು ಅಶಕ್ತರಾಗಿ, ಗಳಿಕೆ ಇಲ್ಲದಂ ತಾಗಿ, ಮನೆಮಠ ಕಳೆದುಕೊಂಡು, ಹೆಂಡತಿ ಮಕ್ಕಳನ್ನು ಕಳೆದುಕೊಂಡು ಬೀದಿ ಪಾಲಾಗುತ್ತಾರೆ. ಚಟಕ್ಕೆ ದಾಸರಾಗಿ, ಮಾದಕ ದ್ರವ್ಯ ಸಿಗದಾದಾಗ ಹಣದ ಅವಶ್ಯಕತೆಗಾಗಿ ಕೊಲೆ, ಸುಲಿಗೆ, ಕಳ್ಳತನ ಮಾಡಲೂ ಹೇಸದ ಮನಃಸ್ಥಿತಿಗೆ ಬಂದು ತಲುಪುತ್ತಾರೆ. ಒಟ್ಟಿನಲ್ಲಿ ಮಾದಕ ದ್ರವ್ಯಗಳ ದಾಸನಾದವ ನನ್ನು ಚಟ ಬಿಡಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಒಂದು ದೊಡ್ಡ ಭಗೀರಥ ಪ್ರಯತ್ನವೆಂದರೂ ಸುಳ್ಳಲ್ಲ.

ಮಾದಕ ವಸ್ತು ಚಟಕ್ಕೆ ಬೀಳದಂತೆ ತಡೆಗಟ್ಟುವುದು ಹೇಗೆ? ೧. ಹದಿಹರೆಯದಲ್ಲಿ ಬೆಳೆಯುವ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು.
೨. ಅತಿಯಾದ ಒತ್ತಡ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಅತಿಯಾದ ಮುದ್ದಿನಿಂದ ಬೆಳೆಸಬಾರದು. ನಮ್ಮ ನಿರೀಕ್ಷೆಗಳಿಗೆ ಕಡಿವಾಣ ಹಾಕಿ ಮಕ್ಕಳ ಮೇಲೆ ವಿಪರೀತ ಒತ್ತಡ ಬೀಳದಂತೆ ನೋಡಿಕೊಳ್ಳಬೇಕು.

೩. ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅನಗತ್ಯವಾಗಿ ಅವರಿಗೆ ಬೈದು, ಹೊಡೆದು, ಬುದ್ಧಿ ಹೇಳುವುದನ್ನು ಬಿಟ್ಟು, ಆಪ್ತಮಿತ್ರರಂತೆ ಅವರ ಕಷ್ಟ ಸುಖಗಳನ್ನು ವಿಚಾರಿಸುತ್ತಾ ಅವರಿಗೆ ಸೂಕ್ತ ಸಾಂತ್ವನ ಕೊಡಬೇಕು. ಇದು ತಂದೆ ತಾಯಿಂದಿರ ಆದ್ಯ ಧರ್ಮ. ೪. ಮಕ್ಕಳ ಮೇಲೆ ಅತೀಯಾದ ನಿರೀಕ್ಷೆಗಳನ್ನು ಹೇರಿ, ಒತ್ತಡದ ಸನ್ನಿವೇಶಗಳನ್ನು ಮಾಡಿಕೊಡಬಾರದು. ತಮ್ಮ ಮಕ್ಕಳ ಸಾಮಥ್ರ್ಯ ಮತ್ತು ಬುದ್ದಿವಂತಿಕೆಗಳ ಅರಿವು ಹೆತ್ತವರಿಗೆ ಇರಬೇಕು. ಅವರ ಸಾಮರ್ಥ್ಯ ಮತ್ತು ಬುದ್ಧಿಶಕ್ತಿಗೆ ಮೀರಿದ ಗುರಿಗಳನ್ನು ಸಾಧಿಸುವಂತೆ ಇವರಿಗೆ ಒತ್ತಡ ತಂದಲ್ಲಿ ವ್ಯಕ್ತಿರಿಕ್ತ ಪರಿಣಾಮ ಉಂಟಾಗಬಹುದು.  ತಾವು ಸಾಧಿಸಲಾಗದ ಗುರಿಗಳನ್ನು ತಮ್ಮ ಮಕ್ಕಳಾದರೂ ಸಾಧಿಸಲಿ ಎಂಬ ಹುಂಬತನಕ್ಕೆ ಪ್ರಯತ್ನಿಸಲೇಬಾರದು.
೫. ಮಕ್ಕಳನ್ನು ಅತಿಯಾಗಿ ಮುದ್ದುಮಾಡಿ, ಕೈತುಂಬಾ ಹಣ ನೀಡಿ, ಕೇಳಿದ್ದೆಲ್ಲ ನೀಡಿದ್ದಲ್ಲಿ ದಾರಿ ತಪ್ಪುವ ಎಲ್ಲಾ ಸಾಧ್ಯತೆ ಇರುತ್ತದೆ. ಮಾಹಿತಿ ತಂತ್ರಜ್ಞಾನ, ಅಂತರ್ಜಾಲದ ದುರ್ಬಳಕೆಯಿಂದ, ಹದಿಹರೆಯದ ಮಕ್ಕಳು ಬಹುಬೇಗ ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಈ ದಿಸೆಯಲ್ಲಿ ಹೆತ್ತವರಿಗೆ
ಹೆಚ್ಚಿನ ಜವಾಬ್ದಾರಿ ಇರುತ್ತದೆ. ನಮ್ಮ ಮಕ್ಕಳ ಸಾಮರ್ಥ್ಯದ ಅರಿವಿನ ಜೊತೆಗೆ, ಹೆತ್ತವರು ತಮ್ಮ ಸ್ಥಾನಮಾನದ ಬಗ್ಗೆ ಹೆಚ್ಚು ಪ್ರಾಶಸ್ತ್ಯ ಕೊಡದೆ ಮಕ್ಕಳನ್ನು ಮಕ್ಕಳ ರೀತಿಯಲ್ಲಿ ಬೆಳೆಸಿದ್ದಲ್ಲಿ ಅವರು ಮುಂದೆ ಸಮಾಜದ ಸತ್ಪ್ರಜೆ ಆಗಬಹುದು. ಅದರ ನಮ್ಮ ನಿಮ್ಮ ಮತ್ತು ಸಮಾಜದ ಹಿತ ಅಡಗಿದೆ.
ಮುಕ್ತಾಯಕ್ಕೂ ಮುನ್ನ ಇಂದಿನ ಜೀವನಶೈಲಿ, ಅತಿಯಾದ ಕೆಲಸದ ಒತ್ತಡ, ಸಂಬಂಧಗಳಲ್ಲಿನ ಭಾವನಾತ್ಮಕತೆಯ ಕೊರತೆ, ದಿನ ನಿತ್ಯದ ಜೀವನದಲ್ಲಿನ ಜಂಜಾಟಗಳು, ಯಾಂತ್ರೀಕೃತ ಬದುಕಿನ ನೋವು ಮತ್ತು ಸಂಕಟಗಳು, ದಿನನಿತ್ಯದ ವ್ಯವಹಾರದಲ್ಲಿನ ಆರ್ಥಿಕ ಏರು ಪೇರು, ಇವವೂ ಮೇಳ್ಮೆಸಿ ನಮ್ಮ ಮನಸ್ಸು ಮತ್ತು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಮನುಷ್ಯ ಮಾನಸಿಕ ಖಿನ್ನತಗೆ ಬಲಿಯಾಗುತ್ತಾನೆ.

ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಬಲಿಯಾಗುತ್ತಿರುವವರ ಸಂಖ್ಯೆ ಬಹಳವಾಗಿದ್ದು, ಅದರಲ್ಲೂ ವಿಶೇಷವಾಗಿ ಇಂದು ನಮ್ಮ ಯುವ ಜನತೆ ಹೆಚ್ಚಿನ ಪ್ರಮಾಣದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಮಾದಕ ದ್ರವ್ಯಗಳ ದುಷ್ಚಟಗಳಿಗೆ ಬಳಿಯಾಗುವುದು ನಿಜಕ್ಕೂ ವಿಪರ್ಯಾಸ. ಮತ್ತು ನಾಗರಿಕ ಜಗತ್ತಿನ ದುರಂತವೇ ಸರಿ. ಈ ದಿಸೆಯಲ್ಲಿ ನಾವು ಹಿರಿಯರೆಲ್ಲ ಸೇರಿ ಹದಿಹರೆಯದ ಚಂಚಲ ಮನಸ್ಸಿನ ಯುವ ಜನತೆಗೆ ಹೆಚ್ಚಿನ ಆತ್ಮ ವಿಶ್ವಾಸ ತುಂಬಬೇಕು. ಮತ್ತು ಒತ್ತಡ ನಿರ್ವಹಿಸಲು ಸಹಕರಿಸಬೇಕು. ಮತ್ತು ಮಾದಕ ವಸ್ತುಗಳ ಮೊರೆ ಹೋಗದಂತೆ ಸರಿಯಾದ ಮಾರ್ಗದರ್ಶನ ನೀಡಬೇಕು.
ಹಾಗೇ ಮಾಡಿದ್ದಲ್ಲಿ ಮಾತ್ರ ‘ವಿಶ್ವಮಾದಕ ದ್ರವ್ಯ ವಿರೋಧಿ ದಿನ’ ಆಚರಣೆಗೆ ಹೆಚ್ಚಿನ ಮೌಲ್ಯ ಬರಬಹುದು. ಮತ್ತು ಅದರಲ್ಲಿಯೇ ನಮ್ಮನಾಡು, ದೇಶ ಮತ್ತು ವಿಶ್ವದ ಶಾಂತಿ ಮತ್ತು ಸಾಮರಸ್ಯ ಅಡಗಿದೆ.

(ಲೇಖಕರು: ಭಾರತೀಯ ರೆಡ್ ಕ್ರಸ್ ಸಂಸ್ಥೆ, ಮಾಜಿ
ಸಭಾಪತಿ ಮಂಗಳೂರು)