Monday, 16th September 2024

ಇಂತಹ ಅಸಾಧಾರಣ ಕರ್ತವ್ಯ ಪ್ರಜ್ಞೆ ಯಾವೊಬ್ಬ ಮಹಿಳೆಗೂ ಮಾದರಿಯಾಗದಿರಲಿ !

ಅಭಿವ್ಯಕ್ತಿ

ಉಷಾ ಜೆ.ಎಂ

ತಾಯ್ತನವೆನ್ನುವುದು ಪ್ರತಿಯೊಬ್ಬ ಹೆಣ್ಣಿನ ಜೀವನದಲ್ಲಿ ಅತ್ಯಮೂಲ್ಯವಾದ ಕ್ಷಣ. ಒಂಭತ್ತು ತಿಂಗಳುಗಳ ಕಾಲ ಮಗುವನ್ನು ಹೊತ್ತು, ಹೆರುವ ಹೊತ್ತಿಗೆ ಹೆಣ್ಣಿನದೇಹ ಮತ್ತು ಮನಸ್ಸು ಸಾಕಷ್ಟು ಬಳಲಿರುತ್ತದೆ. ಹೆರಿಗೆಯ ನಂತರದ ಸಮಯದಲ್ಲಿ ಮಗುವಿಗೆ ಹಾಲುಣಿಸುವ ಸಂದರ್ಭಕ್ಕನುಗುಣವಾಗಿ ತಾಯಿ ಎಚ್ಚರದಿಂದರ ಬೇಕಾಗಿರುತ್ತದೆ. ಇದು ತಾಯಂದಿರ ಮನಸ್ಥಿತಿ ಮೇಲೆ ಸಾಕಷ್ಟು ಪರಿಣಾಮ ಬೀರಿರುತ್ತದೆ. ಇಂತಹ ಸಂದರ್ಭದಲ್ಲಿ ಉದ್ಯೋಗಸ್ಥ ಮಹಿಳೆ ಕಚೇರಿ ಕೆಲಸಕ್ಕೆ ಹೋದರೆ, ಕೆಲಸದ ಒತ್ತಡವೂ ಇದರ ಜೊತೆ ಸೇರಿ, ಆಯಾಸ, ಎದೆ ನೋವು, ಎದೆ ಹಾಲು ಉತ್ಪತ್ತಿಯಲ್ಲಿ ಸಮಸ್ಯೆ ಆಗುವ ಸಾಧ್ಯತೆಗಳೇ ಹೆಚ್ಚು.

ಇದರಿಂದ ಮಗು ಮತ್ತು ತಾಯಿಯ ಹೊಂದಾಣಿಕೆಯಲ್ಲಿ ಸಮಸ್ಯೆಯುಂಟಾಗಿ, ಮಗುವಿನ ಬೆಳವಣಿಗೆಯ ಮೇಲೂ ಪ್ರಭಾವ ಬೀರಿದ ಸಾಕಷ್ಟು ಉದಾಹರಣೆಗಳನ್ನು ನೋಡಿದ್ದೇವೆ. ಹಾಗಾಗಿ ಗುಣಮಟ್ಟದ ಹೆರಿಗೆ ರಜೆ ತಾಯಿ ಮತ್ತು ಮಗುವಿನ ಆರೋಗ್ಯದ
ಮೂಲಾಧಾರ. ಒಂದು ಅಧ್ಯಯನದ ಪ್ರಕಾರ ತಿಂಗಳಿಗಿಂತ ಅಧಿಕ ಹೆರಿಗೆ ರಜೆ ಶಿಶುಮರಣದ ಸಂಖ್ಯೆಯನ್ನು ಕಡಿಮೆ
ಮಾಡುತ್ತದೆ. ತಾಯಿ ಮಗುವಿನ ಜೊತೆ ಇರುವುದರಿಂದ ಎದೆ ಹಾಲು ಕುಡಿಸುವುದಕ್ಕೂ, ಚ್ಚುಚ್ಚುಮದ್ದು ಕೊಡಿಸು ವುದಕ್ಕೂ
ಸಹಕಾರಿಯಾಗುತ್ತದೆ.

ಇದನ್ನೆಲ್ಲ ಮನಗಂಡು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಾಗುತ್ತಿರುವುದರಿಂದ, ಭಾರತ ಸರಕಾರ ಮಾರ್ಚ್
೨೦೧೭ ರಲ್ಲಿ ಅದುವರೆಗಿದ್ದ ೧೨ ತಿಂಗಳ ವೇತನ ಸಹಿತ ಹೆರಿಗೆ ರಜೆಯನ್ನು ೨೬ ವಾರಗಳವರೆಗೆ ಹೆಚ್ಚಿಸಿತು. ಸ್ವಲ್ಪ ತಡವಾಗಿ
ಯಾದರೂ ಹೆರಿಗೆ ರಜೆಯ ಮಹತ್ವವನ್ನು ಅರಿತುಕೊಂಡು ಮಹಿಳೆಯರ ಮತ್ತು ಮಕ್ಕಳ ಹಿತದೃಷ್ಟಿಯಿಂದ ಅನೇಕ
ಮುಂದುವರಿದ ರಾಷ್ಟ್ರಗಳಿಗೆ ಸರಿಸಮನಾಗಿ ರಜೆ ನೀಡಿ, ಉದ್ಯೋಗಸ್ಥ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿತು. ಹೊಸ
ಕಾನೂನಿನನ್ವಯ ಹೆರಿಗೆ ರಜೆಯಲ್ಲಿನ ವೇತನವನ್ನು ಸಂಪೂರ್ಣ ವಾಗಿ ಕಂಪನಿಗಳೇ ಭರಿಸಬೇಕು ಮತ್ತು ೫೦ಕ್ಕಿಂತಲೂ ಅಧಿಕ
ಮಹಿಳಾ ಉದ್ಯೋಗಿಗಳು ಇರುವ ಕಂಪನಿಗಳಲ್ಲಿ ಶಿಶು ಕೇಂದ್ರಗಳನ್ನು ಸ್ಥಾಪಿಸಲು ಸೂಚಿಸಲಾಯಿತು.

ದೊಡ್ಡ ದೊಡ್ಡ ಕಂಪನಿಗಳಿಗೆ ಇದರಿಂದ ಯಾವುದೇ ಸಮಸ್ಯೆಯಾಗದೇ ಸುಲಭವಾಗಿ ಈ ಕಾನೂನನ್ನು ಒಪ್ಪಿಕೊಂಡವು. ಆದರೆ
ಅಸಂಘಟಿತ ವಲಯ ದಲ್ಲಿನ ಸಣ್ಣ ಮತ್ತು ಮಧ್ಯಮಗಾತ್ರದ ಕಂಪನಿಗಳಿಗೆ ಇದು ಆರ್ಥಿಕ ಹೊರೆಯನಿಸಿ, ಮಹಿಳಾ
ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಹಿಂದು ಮುಂದು ನೋಡುತ್ತಿವೆ. ಕೆಲಸಕ್ಕೆ ಸೇರಿಸಿಕೊಂಡರೂ ವೇತನದಲ್ಲಿ ತಾರತಮ್ಯ
ಮಾಡಲಾಗುತ್ತಿದೆ.

ಹೆಚ್ಚುತ್ತಿರುವ ನಗರೀಕರಣದ ಪ್ರಭಾವದಿಂದ ಜನರು ತಮ್ಮ ತಮ್ಮ ಊರುಗಳನ್ನು ಬಿಟ್ಟು ನಗರಗಳಿಗೆ ವಲಸೆ ಬರುತ್ತಿದ್ದಾರೆ.
ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿವೆ. ಇದರಿಂದ ಮಗುವಿನ ತಂದೆ ತಾಯಿಯ ಮೇಲೆ ಜವಬ್ದಾರಿ ಹೆಚ್ಚಾಗಿದೆ. ಅನೇಕ ಕಂಪನಿಗಳು ಹೆರಿಗೆ ರಜೆಗೆ ಹೋಗುವವರನ್ನ ಮತ್ತು ಹೆರಿಗೆ ರಜೆಯನ್ನು ಮುಗಿಸಿ ಬಂದವರನ್ನು ಹೊರೆಯಾಗಿ ನೋಡುತ್ತಿವೆ.
ಬಡ್ತಿಕೊಡುವಾಗ ಅನೇಕ ಕಂಪನಿಗಳು ಹೆರಿಗೆ ರಜೆಯಿಂದ ಬಂದವರನ್ನು ಪರಿಗಣಿಸುತ್ತಿಲ್ಲ. ವೈಯಕ್ತಿಕ ಒತ್ತಡದ ಜೊತೆ ವೃತ್ತಿ ಯಲ್ಲಿನ ಒತ್ತಡಗಳು ತಾಯಂದಿರನ್ನು ಇನ್ನೂ ಮಾನಸಿಕವಾಗಿ ಕುಗ್ಗಿಸುತ್ತವೆ.

ಇನ್ನು ಕೆಲವು ಕಂಪನಿಗಳು ಹೆರಿಗೆ ರಜೆಗೆಂದು ಹೋಗುವವರಿಗೆ, ಕೆಲವು ವಾರಗಳಲ್ಲಿಯೇ ಹೆರಿಗೆರಜೆ ಯಿಂದ ವಾಪಸ್ಸು ಬಂದವರ ಉದಾಹರಣೆ ಕೊಟ್ಟ ಘಟನೆ ಗಳು ನಡೆದಿವೆ. ಇದಕ್ಕೆ ಇಂಬು ಕೊಡುವಂತೆ ಉತ್ತರ ಪ್ರದೇಶದ ಘಾಜಿಯಾಬಾದನಲ್ಲಿ ಹೆರಿಗೆಯಾದ ಕೇವಲ ಎರಡು ವಾರಗಳಲ್ಲೇ ಹಸುಗೂಸಿ ನೊಂದಿಗೆ ಕರ್ತವ್ಯಕ್ಕೆ ಹಾಜರಾದ ಐ.ಎಎಸ್. ಅಧಿಕಾರಿಯ ಘಟನೆ. ಕರೋನಾ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವಯಸ್ಸಾದ ವರು, ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರು ತುಂಬಾ ಎಚ್ಚರಿಕೆ ಯಿಂದಿರಬೇಕೆಂಬ ಸೂಚನೆಯಿದ್ದರೂ ಕೂಡ ತನ್ನ ಹಸುಗೂಸನ್ನು ಕಚೇರಿಗೆ ಕರೆತಂದಿದ್ದಾರೆ.

ಕರೋನಾ ಮುನ್ನೆಚರಿಕೆಗಳನ್ನು ಪಾಲಿಸಲು ನಿಯಮಗಳನ್ನು ರೂಪಿಸುವವರೇ ನಿಯಮಗಳನ್ನು ಮುರಿದಿರುವುದು ಪರ್ಯಾಸ.
ಹೆರಿಗೆ ರಜೆಯನ್ನು ಸಂಪೂರ್ಣವಾಗಿ ಉಪಯೋಗಿಸಿ ಕೊಳ್ಳದಿರುವುದು ಇವರ ವೈಯಕ್ತಿಕ ಆಯ್ಕೆಯಾದರೂ, ಕರೋನಾ
ಹರಡುತ್ತಿರುವ ಇಂತಹ ಸಂದರ್ಭದಲ್ಲಿ ೧೪ ದಿನಗಳ ಮಗುವನ್ನು ಕಚೇರಿಗೆ ಕರೆತಂದು ಬೇಜವಬ್ದಾರಿ ಮೆರೆದಿದ್ದಾರೆ. ಈಗ
ಮನೆಯಿಂದಲೇ ಕೆಲಸ ನಿರ್ವಹಿಸುವುದು ಸರ್ವೇಸಾಮಾನ್ಯವಾಗಿದೆ. ಅಷ್ಟೊಂದು ಕೆಲಸವಿದ್ದರೆ ಮನೆಯಿಂದಲೇ ಕೆಲಸ
ನಿರ್ವಹಿಸಬಹುದಿತ್ತು. ಇವರು ಇದನ್ನು ಕರ್ತವ್ಯದ ಮೇಲಿನ ಪ್ರೀತಿಯಿಂದ ಮಾಡಿದರೋ ಅಥವಾ ಮೇಲಾಧಿಕಾರಿಗಳನ್ನು
ಮೆಚ್ಚಿಸುವ ಸಲುವಾಗಿ ಯೋ ಅಥವಾ ಪ್ರಚಾರಕ್ಕಾಗಿ ಮಾಡಿರುವರೋ ಗೊತ್ತಿಲ್ಲ.

ಆದರೆ ಕಚೇರಿಗೆ ಮಗುವನ್ನು ಕರೆತರುವುದರ ಜೊತೆಗೆ ಅದರ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಒಂದು ಕೆಟ್ಟ ನಿದರ್ಶನಕ್ಕೆ ನಾಂದಿ ಹಾಡಿರುವುದಂತು ನಿಜ. ಇನ್ನು ಇವರು ಭಾರತದ ಹಳ್ಳಿಗಳಲ್ಲಿ ಹೆರಿಗೆಯಾದ ಕೆಲವೇ ವಾರಗಳಲ್ಲಿ ಮಹಿಳೆಯರು ಕೆಲಸಗಳಿಗೆ ಹೋಗುತ್ತಾರೆಂದು ಹೇಳುವುದರ ಮೂಲಕ ತಮ್ಮನ್ನು ತಾವು ಸಮರ್ಥಿಸಿ ಕೊಂಡಿದ್ದಾರೆ. ಹೌದು, ಹಳ್ಳಿಗಳಲ್ಲಿನ ಮಹಿಳೆಯರಿಗೆ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಎಂದು ಇರುವುದಿಲ್ಲ. ಇವರಿಗೆ ವೃತ್ತಿಯೇ ಜೀವನ. ಹಾಗಾಗಿ ಇವರಿಗೆ ಕೆಲಸಕ್ಕೆ ಹೋಗದೆ ಬೇರೆದಾರಿ ಇರುವುದಿಲ್ಲ.

ಬಾಣಂತಿಯರಿಗೆ ಮತ್ತು ಶಿಶುಗಳಿಗೆ ಸರಿಯಾದ ಆರೈಕೆ ಸಿಗುವಂತೆ ನಿಯಮಗಳನ್ನು ರೂಪಿಸುವುದು ಸರಕಾರದ ಕರ್ತವ್ಯ ಮತ್ತು ಅಂಥ ನಿಯಮಗಳನ್ನು ಕಾರ್ಯರೂಪಕ್ಕೆ ತರುವುದು ಇಂತಹ ಅಧಿಕಾರಿಗಳ ಕರ್ತವ್ಯ. ಅದನ್ನು ಬಿಟ್ಟು ಸಮಾಜದಲ್ಲಿನ ಇಂತಹ ನ್ಯೂನ್ಯತೆಗಳನ್ನೇ ಹೆಮ್ಮೆಯಿಂದ ಹೇಳಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ಐಎಎಸ್ ಅಧಿಕಾರಿಯಾದ ಇವರಿಗೆ ಎಲ್ಲಾ ರೀತಿಯ
ಸವಲತ್ತುಗಳು ಸಿಗುತ್ತವೆ. ಪ್ರತಿ ಒಂದು ಅಥವಾ ಎರಡು ಘಂಟೆಗೊಮ್ಮೆ ಪ್ಯಾಡ್ ಬದಲಾಯಿಸಲು ಸರಿಯಾದ ಶೌಚಾಲಯಗಳು, ಮಗುವಿಗೆ ಹಾಲು ಕುಡಿಸಲು ಪ್ರತ್ಯೇಕ ವಾದ ಕೋಣೆ ಬೇಕು. ಕಚೇರಿಯಲ್ಲಿ ಕೆಲಸ ನಿರ್ವಹಿಸುವಾಗ ಮಗುವನ್ನು ನೋಡಿಕೊಳ್ಳಲು ಸಹಾಯಕರು ಬೇಕಾಗುತ್ತದೆ.

ಆದರೆ ಸಾಮಾನ್ಯ ಮಹಿಳೆ ಯರಿಗೆ ಇಂತಹ ಸವಲತ್ತುಗಳನ್ನು ಪಡೆಯುವ ಅದೃಷ್ಟ ಇರಬೇಕಲ್ಲ. ಗರ್ಭಿಣಿಯಾದಾಗಿನಿಂದ ಹಿಡಿದು ಹೆರಿಗೆರಜೆ ಮುಗಿಸಿಕೊಂಡು ಬಂದ ಮೇಲೂ ಒಂದಿಲ್ಲೊಂದು ರೀತಿಯಲ್ಲಿ ತಾರತಮ್ಯವನ್ನು ಉದ್ಯೋಗಸ್ಥ ಮಹಿಳೆಯರು ಅನುಭವಿಸು ತ್ತಿದ್ದಾರೆ. ಇಂತಹ ಘಟನೆಗಳು ಹೀಗೆ ಮುಂದುವರಿದರೆ ಹೆರಿಗೆ ರಜೆ ತೆಗೆದುಕೊಂಡವರ ಮತ್ತು ತೆಗೆದುಕೊಳ್ಳದವರ ಮಧ್ಯೆ ಕಂಪನಿಗಳು ತಾರತಮ್ಯ ಮಾಡಲು ಪ್ರಾರಂಭಿಸಬಹುದು. ಈಗಾಗಲೇ ವೇತನ ತಾರತಮ್ಯ, ಬಡ್ತಿಯಲಿ ತಾರತಮ್ಯ ಅನುಭವಿಸುತ್ತಿರುವ ಮಹಿಳೆಯರು, ಮಹಿಳೆಯರೇ ಹುಟ್ಟು ಹಾಕುವ ಇಂತಹ ಹೊಸ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.

ಇಂತಹ ಒತ್ತಡಗಳಿಂದ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನ ಮಾಡಲಾಗದೆ ಅನೇಕ ಪ್ರತಿಭಾವಂತ ಹೆಣ್ಣು ಮಕ್ಕಳು ತಮ್ಮ ವೃತ್ತಿಜೀವನಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಮೊದಲ ಆರು ತಿಂಗಳು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ತುಂಬಾ ಮಹತ್ವಕಾರಿ ಎಂದು ವಿಶ್ವಸಂಸ್ಥೆ ಹೇಳಿದೆ. ಹಾಗಾಗಿ ಇಂತಹ ಘಟನೆಗಳನ್ನು ತಡೆಯಲು ಎಲ್ಲಾ ಮಹಿಳೆಯರ ಮತ್ತು ಮಕ್ಕಳ ಹಿತದೃಷ್ಟಿಯಿಂದ ಹೆರಿಗೆ ರಜೆಯನ್ನು ಕಡ್ಡಾಯಗೊಳಿಸುವುದೇ ಉತ್ತಮ. ಇನ್ನು ಈ ರೀತಿಯ ನಿದರ್ಶನಗಳನ್ನು ಯಾವುದೇ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕೊಡುವುದು ಬೇಡ. ಅಲ್ಲದೇ ಬೇಜವಬ್ದಾರಿ ಯಿಂದ ಕೂಡಿದ ಇಂತಹ ಕರ್ತವ್ಯ ಪ್ರಜ್ಞೆ ಯಾವೊಬ್ಬ ಮಹಿಳೆಗೂ ಮಾದರಿಯಾಗದೆ ಸುಂದರ ವಾದ ತಾಯ್ತನದ ಅನುಭವವನ್ನು ಅನುಭವಿಸುವಂತಾಗಲಿ.

ವೃತ್ತಿಪರತೆ ಜೊತೆ ಜೊತೆಗೆ ತಾಯ್ತನದ ಕರ್ತವ್ಯವನ್ನು ಮಹಿಳೆಯರು ನಿಭಾಯಿಸುವಂತಾಗಲಿ.

Leave a Reply

Your email address will not be published. Required fields are marked *