ಆನ್ಲೈನ್ ಮದ್ಯಕ್ಕೆ ಡಿಮ್ಯಾಂಡ್ ಮಾಡಿದ ಕುಡುಕರು
ಶೇ.52ರಷ್ಟು ಜನರಿಂದ ಮನೆಗೆ ಮದ್ಯ ಸರಬರಾಜಿಗೆ ಬೇಡಿಕೆ
ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು
ಸದಾ ಸರಕಾರದ ಬೆನ್ನೆಲುಬಾಗಿರುವ ಮದ್ಯಪ್ರಿಯರು ಸರಕಾರದ ಮುಂದೆ ತಮ್ಮ ಬೇಡಿಕೆಯೊಂದನ್ನು ಮಂಡಿಸಿದ್ದಾರೆ. ಅದೇನಂದ್ರೆ ಲಾಕ್ ಡೌನ್ ಮಾಡಿದ್ರೂ ಪರವಾಗಿಲ್ಲ, ನಮಗೆ ಮನೆ ಮನೆಗೆ ಮದ್ಯ ಸಿಗೋ ವ್ಯವಸ್ಥೆ ಮಾಡಿ ಎಂದು ಒತ್ತಾಯ ಮಾಡಿದ್ದಾರೆ.
ಕೋವಿಡ್ ಸಂಕಷ್ಟದಲ್ಲಿ ಸರಕಾರದ ಪಾಲಿನ ಎವರ್ಗ್ರೀನ್ ಎಕಾನಮಿ ವಾರಿಯರ್ಸ್ಗಳಾದ ಮದ್ಯಪ್ರಿಯರು, ಆನ್ಲೈನ್ ಮದ್ಯ ಮಾರಾಟಕ್ಕೆ ಸರಕಾರ ಅಸ್ತು ಎನ್ನಬೇಕೆಂಬ ಬೇಡಿಕೆಯನ್ನಿಟ್ಟಿದ್ದಾರೆ. ಆ ಮೂಲಕ ಲಾಕ್ ಡೌನ್ ಸಮಸ್ಯೆ, ಡ್ರಂಕ್ ಆಂಡ್ ಡ್ರೈವ್ ಕಿರಿಕಿರಿ ತಪ್ಪಿಸಿಕೊಂಡು ಮನೆ ಯಲ್ಲಿಯೇ ಕುಡಿದು ನೆಮ್ಮದಿಯಾಗಿ ಮಲಗಬಹುದು ಎಂಬ ಭಾವನೆ ಅವರದ್ದು. ಹೀಗಾಗಿ, ದೇಶದಲ್ಲಿ ಶೇ.52 ರಷ್ಟು ಜನರು ಆನ್ಲೈನ್ ಮದ್ಯ ಮಾರಾಟಕ್ಕೆ ಅವಕಾಶ ಸಿಗಲಿ ಎಂದು ಒತ್ತಾಯಿಸಿದ್ದಾರೆ.
ಇನ್ನುಳಿದ ಶೇ.42ರಷ್ಟು ಜನರು ಮನೆಯಲ್ಲಿ ಮಡದಿ ಮಕ್ಕಳು ಎಣ್ಣೆ ಒಡೆಯಲು ಬಿಡುವುದಿಲ್ಲ, ಹೀಗಾಗಿ, ಬಾರೇ ಬೆಸ್ಟ್ ಪ್ಲೇಸ್ ಎನ್ನುವ ಕೆಟಗರಿ ಇರಬಹುದು. ಮದ್ಯ ಮಾರಾಟಗಾರರ ಒಕ್ಕೂಟವಾದ ದಿ.ಇಂಟರ್ನ್ಯಾಷನಲ್ ಸ್ಪಿರಿಟ್ ಆಂಡ್ ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ನಡೆದ ಸಮೀಕ್ಷೆಯೊಂದರಲ್ಲಿ ಭಾಗವಹಿಸಿದ್ದ ಶೇ.೫೨ರಷ್ಟು ಜನರು ಮನೆಮನೆಗೆ ಮದ್ಯ ಸರಬರಾಜು ಮಾಡುವ ಆನ್ಲೈನ್ ವ್ಯವಸ್ಥೆಯನ್ನು ಜಾರಿಗೆ ತರುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ಈ ಸಂಸ್ಥೆ ಕರ್ನಾಟಕ ಸರಕಾರಕ್ಕೆ ಪತ್ರ ಬರೆದು, ಆನ್ಲೈನ್ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿ ಕೊಂಡಿದೆ. ತಮ್ಮ ಮತ್ತು ತಮ್ಮವರ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮದ್ಯಪ್ರಿಯರ ಮನವಿಗೆ ಸ್ಪಂದಿಸು ವಂತೆ ವಕಾಲತ್ತು ವಹಿಸಿದೆ.
ರಾಜ್ಯದಲ್ಲಿಯೂ ಆನ್ಲೈನ್ ಮೂಲಕ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡುವ ಯೋಜನೆ ಆರಂಭಿಸುವುದಾಗಿ ಅಂದಿನ ಅಬಕಾರಿ ಸಚಿವ ನಾಗೇಶ್ ತಿಳಿಸಿದ್ದರು. ಮದ್ಯಪ್ರಿಯರು ಲಡ್ಡು ಬಂದು ಬಾಯಿಗೆ ಬಿತ್ತು ಎಂದುಕೊಂಡು ಖುಷಿಯಾಗಿದ್ದರು. ಆದರೆ, ಅವರ ಹೇಳಿಕೆ ಬಹುದೊಡ್ಡ ವಿವಾದ ಸೃಷ್ಟಿ ಮಾಡಿತ್ತು. ಸಚಿವರ ಹೇಳಿಕೆಗೆ ವಿರೋಧ ಹೆಚ್ಚಾದ ಕಾರಣ ಯೋಜನೆ ಕೈಬಿಡುವ ನಿರ್ಧಾರಕ್ಕೆ ಇಲಾಖೆ ಬಂದಿರುವುದಾಗಿ ಸಚಿವರು ಘೋಷಣೆ ಮಾಡಿದ್ದರು. ಇದೀಗ ಸಾರ್ವಜನಿಕರಿಂದಲೇ ಒತ್ತಡ ಕೇಳಿಬಂದಿದ್ದು, ಸರಕಾರ ಈ ಯೋಜನೆಯನ್ನು ಮರು ಆರಂಭ ಮಾಡಲಿದೆಯೇ ಕಾದು ನೋಡ ಬೇಕಿದೆ.
ದಾಖಲೆ ಮದ್ಯ ಮಾರಾಟ 2019ರ ಡಿ.31ರಂದು 3.62 ಲಕ್ಷ ಮದ್ಯ ಬಾಕ್ಸ್ ಮಾರಾಟವಾಗಿತ್ತು. 2018ರಲ್ಲಿ 3.82 ಲಕ್ಷ ಮಾರಾಟವಾಗಿದೆ. 2020 ರಲ್ಲಿ ಕಡಿಮೆ ಮದ್ಯ ಮಾರಾಟವಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಮದ್ಯ ಖರೀದಿ ಏರಿಕೆಯಾಗಿದೆ. 2021ರ ಡಿಸೆಂಬರ್ನಲ್ಲಿ 17.18 ಲಕ್ಷ ಕಾಟನ್ ಬಾಕ್ಸ್ ಮದ್ಯ ಮಾರಾಟವಾಗಿದ್ದರೆ, ಸುಮಾರು 10.13 ಲಕ್ಷ ಕಾಟನ್ ಬಾಕ್ಸ್ ಬಿಯರ್ ಮಾರಾಟವಾಗಿದೆ. ಸರಕಾರಕ್ಕೆ ಇದರಿಂದ ೯೭೭.೩೭ ಕೋಟಿ ರು.ಆದಾಯ ಬಂದಿದೆ. ಅಬಕಾರಿ ಇಲಾಖೆ ಆದಾಯ ೬೩೯.೦೫ ಕೋಟಿ ರು. ಗಳಷ್ಟಾಗಿದೆ.
ಕರೋನಾ ಮೊದಲ ಅಲೆಯ ಸಂದರ್ಭದಲ್ಲಿ ೮೪೪.೨೫ ಕೋಟಿ ರು.ಗಳಷ್ಟು ವಹಿವಾಟು ನಡೆದಿದ್ದು, ಈ ಬಾರಿ ನೈಟ್ ಕರ್ಫ್ಯೂ ಹಾಗೂ ನಿಷೇಧಾಜ್ಞೆ
ನಡುವೆಯೂ ಮದ್ಯದ ಮಾರಾಟದಲ್ಲಿ ಶೇ.೧೩ರಷ್ಟು ಹೆಚ್ಚಳವಾಗಿದೆ. ದಿನದ ಅಂತ್ಯದೊಳಗೆ ೧೬೫ ಕೋಟಿ ರು.ಗಳಿಗೂ ಅಧಿಕ ವಹಿವಾಟು ನಡೆದಿದೆ.
ಕೆಲ ರಾಜ್ಯಗಳಲ್ಲಿ ಆನ್ಲೈನ್ ಮಾರಾಟ ಈಗಾಗಲೇ ದೇಶದ ಅನೇಕ ರಾಜ್ಯಗಳಲ್ಲಿ ಆನ್ಲೈನ್ ಮದ್ಯ ಮಾರಾಟದ ವ್ಯವಸ್ಥೆಯಿದೆ. ಪಶ್ಚಿಮ ಬಂಗಾಳ
ರಾಜ್ಯದಲ್ಲಿ ಆನ್ಲೈನ್ ಮೂಲಕ ಸುಮಾರು ೧.೫ ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, ೧.೯೧ ಲಕ್ಷ ಆರ್ಡರ್ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮೇ ೨೦೨೦ರಿಂದ ಮಾರ್ಚ್ ೨೦೨೧ರವರೆಗೆ ಸುಮಾರು ೬೦ ಲಕ್ಷ ಆರ್ಡರ್ಗಳನ್ನು ಆನ್ಲೈನ್ ಮೂಲಕವೇ ಮಾಡಲಾಗಿದೆ. ಜತೆಗೆ, ದೇಶದಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ.೫೨ರಷ್ಟು ಜನರು ಆನ್ಲೈನ್ನಲ್ಲಿ ಮದ್ಯ ಮಾರಾಟ ಮಾಡುವುದು ಸೂಕ್ತ. ಕರೋನಾ ಭೀತಿ ಹಿನ್ನೆಲೆಯಲ್ಲಿ
ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜತೆಗೆ, ಸುರಕ್ಷತೆಯಿಂದ ಇರಬಹುದು. ಹೀಗಾಗಿ, ರಾಜ್ಯದಲ್ಲಿಯೂ ಆನ್ಲೈನ್ ಮಾರಾಟ ಆರಂಭಿಸುವುದು
ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.