ಹೂವಪ್ಪ ಐ.ಎಚ್. ಬೆಂಗಳೂರು
ಗಣೇಶನ ಹಬ್ಬಕ್ಕೆ ಖರೀದಿ ಜೋರು
ಏರದ ಬೆಲೆ, ಗ್ರಾಹಕರು ಖುಷ್
ಗೌರಿ, ಗಣೇಶ ಹಬ್ಬದ ಅದ್ದೂರಿಯಾಗಿ ಹಬ್ಬ ಆಚರಿಸಲು ಸಾರ್ವಜನಿಕರು ಸಿದ್ಧತೆ ನಡೆಸಿದ್ದಾರೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಗೌರಿ, ಗಣೇಶ ಮೂರ್ತಿ ರಾರಾಜಿಸುತ್ತಿದ್ದು, ಖರೀದಿ ಭರಾಟೆ ಜೋರಾಗಿದೆ.
250 ರು. ನಿಂದ ಹಿಡಿದು 10 ಸಾವಿರ ರು. ವರೆಗಿನ ವಿಗ್ರಹಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಳೆದ ವರ್ಷ ಮಳೆ ಇಲ್ಲದೆ ಬರಗಾಲದ ಹಿನ್ನೆಲೆಯಲ್ಲಿ ರೈತರ ಪಾಲಿಗೆ ಗಣೇಶ ಹಬ್ಬ ಕಳೆಗಟ್ಟಿರಲಿಲ್ಲ. ಆದರೆ, ಈ ಬಾರಿ ಉತ್ತಮ ಮಳೆಯೊಂದಿಗೆ ಉತ್ತಮ ಬೆಳೆ ಬಂದಿದೆ ಹೀಗಾಗಿ ರೈತರು ಮತ್ತು ಜನಸಾಮಾನ್ಯರು ಗೌರಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿ ಪೂಜೆ ಸಾಮಗ್ರಿಗಳನ್ನು ಖರೀದಿಸಲು
ಮಾರುಕಟ್ಟೆಗೆ ಜಮಾಯಿಸುತ್ತಿದ್ದಾರೆ.
ಗಾಂಧಿ ಬಜಾರ್, ಜಯನಗರ, ಬಸವನಗುಡಿ, ಬನಶಂಕರಿ, ರಾಜಾಜಿನಗರ, ಮಹಾಲಕ್ಷ್ಮೀ ಪುರಂ ಮಶ್ವರ ಸೇರಿ
ನಗರದ ವಿವಿಧ ಭಾಗಗಳಲ್ಲಿ ಹೂವು, ಹಣ್ಣಿನ ತಾತ್ಕಾಲಿಕ ಮಳಿಗೆಗಳು, ಗಣಪತಿ ವಿಗ್ರಹಗಳನ್ನು ಮಾರಾಟ ಮಾಡುವ ಅಂಗಡಿಗಳು ತಲೆ ಎತ್ತಿವೆ. ಯಾವುದೇ ಹಬ್ಬ ಬಂದರೂ ಹೂವಿನ ದರ ಕೇಳುವ ಹಾಗೆಯೇ ಇರಲ್ಲ. ಮೂರು ದಿನ ಮುನ್ನವೇ ಎಲ್ಲವೂ ದುಬಾರಿ ಆಗಿರುತ್ತವೆ. ಆದರೆ ಈ ಬಾರಿ ಗೌರಿ ಗಣೇಶನ ಹಬ್ಬಕ್ಕೆ ಹಣ್ಣು-ಹೂವು- ತರಕಾರಿ ಅಷ್ಟ್ಟೇನು ದುಬಾರಿಯೇನೂ ಆಗಿಲ್ಲ. ಅದರಲ್ಲೂ ಈ ಬಾರಿ ಸೇವಂತಿಗೆ ಸೇರಿದಂತೆ ಕೆಲವು ಹೂವುಗಳ ಬೆಲೆಯೂ ಕೈ ಸುಡುತ್ತಿಲ್ಲ.
ಕನಕಾಂಬರ ಈಗಲೂ ದುಬಾರಿ: ವರಮಹಾಲಕ್ಷ್ಮಿ ಹಬ್ಬದ ಅವಧಿಯಲ್ಲಿನ ದರಕ್ಕೆ ಹೋಲಿಸಿದರೆ ಗೌರಿ ಗಣೇಶನ ಹಬ್ಬಕ್ಕೆ ಹೂವಿನ ದರ ಕಡಿಮೆಯಾಗಿದೆ. ಕನಕಾಂಬರ ಮಾತ್ರ ಕೆ.ಜಿಗೆ ೩ ಸಾವಿರದಂತೆ ಮಾರಾಟವಾಗುತ್ತಿದ್ದು, ಈಗಲೂ ದುಬಾರಿಯಾಗಿಯೇ ಉಳಿದಿದೆ. ಇನ್ನೂ ಪೂಜೆಗೆ ಬೇಕಾಗುವ ಬಾಳೆಕಂದು 60 ರು. ಮಾವಿನಸೊಪ್ಪಿನ ಕಟ್ಟಿಗೆ 20 ರು. ಗರಿಕೆ 30 ರು.ಗೆ ಭಿಕರಿಯಾಗುತ್ತದೆ.
ಸೇಬು, ಕೆಜಿಗೆ 180-250 ರು. ದಾಳಿಂಬೆ 200-220 ರು. ಸೇರಿದಂತೆ ಪ್ರಮುಖ ಹಣ್ಣುಗಳ ಬೆಲೆ ಕೆಜಿಗೆ 200 ರು.
ಆಸುಪಾಸಿನ ಇದೆ. ಸೀಬೆ, ಮರ ಸೇಬು, ದ್ರಾಕ್ಷಿ, ಮೋಸಂಬಿ, ಕಿತ್ತಳೆ, ಸಪೋಟ ಸೇರಿದಂತೆ ಇತರೆ ಹಣ್ಣುಗಳ ದರವೂ
ಸಾಮಾನ್ಯವಾಗಿದೆ. ಕೆಲವರು ಪ್ರತ್ಯೇಕವಾಗಿಯೇ ಹಣ್ಣುಗಳನ್ನು ಖರೀದಿಸಿದರೆ, ಇನ್ನು ಕೆಲವರು ಹಬ್ಬಕ್ಕೆ ಸೀಮಿತ ವಾಗಿ ಎಲ್ಲಾ ಹಣ್ಣುಗಳನ್ನು ಕೆಜಿ ಲೆಕ್ಕದಲ್ಲಿ ಖರೀದಿಸಿದ್ದು ಕಂಡು ಬಂದಿತು. ಇನ್ನುಳಿದ ಟೊಮೆಟೊ, ಮೂಲಂಗಿ, ಬದನೆ ಸಹಿತ ಬಹಳಷ್ಟು ತರಕಾರಿಗಳ ದರಗಳನ್ನೂ ಭಾರೀ ವ್ಯತ್ಯಯವಾಗಿರುವುದೇನೂ ಕಂಡುಬಂದಿಲ್ಲ.
ಇಳುವರಿ ಏರಿಕೆ
ಮೈಸೂರು, ಕೋಲಾರ ಚಿಕ್ಕಬಳ್ಳಾಪುರ, ಸೇರಿದಂತೆ ಹಲವು ಭಾಗಗಳಲ್ಲಿ ಸೇವಂತಿಗೆ ಹೂವು ಬೆಳೆಯಲಾಗುತ್ತಿದೆ. ಈ ಬಾರಿ ಸೇವಂತಿಗೆ ಹೂವು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ವರಮಹಾಲಕ್ಷ್ಮಿ ಹಬ್ಬದ ವೇಳೆ ಗಗನ ಕ್ಕೇರಿದ್ದ ಹೂವು -ಹಣ್ಣು ಬೆಲೆ ಈಗ ಸ್ವಲ್ಪ ಇಳಿದಿದೆ. ತರಕಾರಿಗಳ ಬೆಲೆ ಹಣ್ಣುಗಳ ಬೆಲೆಯಲ್ಲಿ ಹೆಚ್ಚೇನೂ
ವ್ಯತ್ಯಾಸವಿಲ್ಲ. ವರ ಮಹಾಲಕ್ಷ್ಮಿ ಹಬ್ಬದಲ್ಲಿದ್ದ ಹೂವಿನ ದರ ಹೆಚ್ಚಿತ್ತು, ಈಗ ತುಸು ಇಳಿದಿದೆ.
ಹೂ ದರ ಕೆಜಿಗೆ ಕನಕಾಂಬರ 800 ಮಲ್ಲಿಗೆ 300 600 ಗುಲಾಬಿ 150 200 ಸೇವಂತಿಗೆ 150 200 ಸುಗಂಧರಾಜ 100 200 ಚಂಡು ಹೂ 200 ತರಕಾರಿ ದರ ಕೆಜಿಗೆ ಬಟಾಣಿ 260 ಕ್ಯಾರೆಟ್ 120 ಗೌರಿಕಾಯಿ 80 ಈರುಳ್ಳಿ 60 ಹಸಿ ಮೆಣಸಿನಕಾಯಿ 80 ಬೀ 80 ಬೆಂಡೆಕಾಯಿ 40 ಹೂಕೋಸು 30 ಬಿಟ್ರೋಟ್ 25 ಗೌರಿ ಗಣೇಶ ಹಬ್ಬದ ಖರೀದಿಯಲ್ಲಿ ನಿರತರಾಗಿರುವ ಜನ.
ಇಳಿಯದ ಬಾಳೆಯ ಬೆಲೆ
ಆದರೆ ಬಾಳೆಹಣ್ಣಿನ ಬೆಲೆಯಲ್ಲಿ ಮಾತ್ರ ಇಳಿಕೆಯಾಗಿಯೇ ಇಲ್ಲ. ಕೃಷ್ಣ ಜನ್ಮಾಷ್ಟಮಿಗೂ ಬಾಳೆ ಹಣ್ಣಿನ ಬೆಲೆ ಏರಿಕೆಯಾಗಿತ್ತು. ಈಗಲೂ ಕೆಜಿಗೆ 120 ರಿಂದ 160 ರು. ವರೆಗೂ ಏಲಕ್ಕಿ ಬಾಳೆ ಮಾರಾಟವಾಗುತ್ತಿದೆ. ಬಾಳೆ ಹಣ್ಣಿನ ಇಳುವರಿ ಕಡಿಮೆಯಾಗಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.