ಶರಣಬಸವ ಹುಲಿಹೈದರ, ಕೊಪ್ಪಳ
ಇನ್ನೂ ನಿಗದಿ ಆಗದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನಾಂಕ
ಕನಕಗಿರಿ ತಹಸೀಲ್ದಾರ್ ಗೆ ಚುನಾವಣಾ ಜವಾಬ್ದಾರಿ
ಕನಕಗಿರಿ ತಹಸೀಲ್ದಾರ್ ಗೆ ಸಮಯ ಕೊರತೆಯೋ? ಅಥವಾ ಕೆಲಸದ ಒತ್ತಡವೋ ಗೊತ್ತಿಲ್ಲ. ಇಲ್ಲಿನ ಪಟ್ಟಣ ಪಂಚಾಯಿತಿ ನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಬಗ್ಗೆ ಭಾರಿ ತಾತ್ಸಾರ ತೋರಿದ್ದಾರೆ.
ಹೌದು, ದೇವರು ಕೊಟ್ಟರೂ, ಪೂಜಾರಿ ಕೊಡಲಿಲ್ಲ ಎಂಬ ಮಾತಿನಂತೆ, ಸರಕಾರ ಮೀಸಲಾತಿ ನಿಗದಿ ಮಾಡಿದರೂ, ಕನಕಗಿರಿ ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಇಲ್ಲಿನ ತಹಸೀಲ್ದಾರ್ ದಿನಾಂಕ ನಿಗದಿ ಮಾಡಿಲ್ಲ. ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಯಲ್ಲಿ ಚುನಾವಣೆ ಮುಗಿದರೂ ಕನಕಗಿರಿ ಪಪಂಗೆ ಚುನಾವಣೆ ನಡೆಸಬೇಕಿರುವ, ಇಲ್ಲಿನ ತಹಸೀಲ್ದಾರ್ ಕನಿಷ್ಠ ದಿನಾಂಕ ನಿಗದಿ ಮಾಡುವ ಗೋಜಿಗೂ ಹೋಗಿಲ್ಲ. ತಹಸೀಲ್ದಾರ್ ಅವರ ಈ ನಡೆಯಿಂದ ಕನಕಗಿರಿ ಪಟ್ಟಣ ಪಂಚಾಯತ್ ಸದಸ್ಯರಿಗೆ ಅಧಿಕಾರ ವಹಿಸಿಕೊಳ್ಳುವ ಕಾಲ ಇನ್ನೂ ಕೂಡಿ ಬಂದಿಲ್ಲ. ಅಧಿಕಾರಿಗಳ ವಿಳಂಬ ಧೋರಣೆಗೆ ವಿರುದ್ಧ ಕೆಲ ಪಪಂ ಸದಸ್ಯರು ಒಳಗೊಳಗೆ ಕುದಿಯುತ್ತಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿ ವಿವಾದದ ಹಿನ್ನೆಲೆ ರಾಜ್ಯಾದ್ಯಂತ ಎಲ್ಲೂ ಹೊಸ ಸದಸ್ಯರು ಅಧಿಕಾರ ವಹಿಸಿಕೊಂಡಿರಲಿಲ್ಲ. ಸರಕಾರ ಬರೋಬ್ಬರಿ ೨ ವರ್ಷ ೮ ತಿಂಗಳ ನಂತರ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ಮಾಡಿದ್ದು, ಚಾತಕ ಪಕ್ಷಿಯಂತೆ ಕಾಯ್ದಿದ್ದ ಹೊಸ ಸದಸ್ಯರು ಅಧಿಕಾರ ಸಿಕ್ಕಿತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಈ ಭಾಗ್ಯ ಕನಕಗಿರಿ ಪಟ್ಟಣ ಪಂಚಾಯತ್ ಸದಸ್ಯರಿಗೆ ಇನ್ನೂ ದೊರೆತಿಲ್ಲ. ಇದರಿಂದ ಇಲ್ಲಿನ ಪಪಂ ಸದಸ್ಯರು ಒಂದೊಂದು ದಿನವನ್ನೂ ಶತಮಾನದಂತೆ ತಳ್ಳುತ್ತಿದ್ದು, ಕೆಲವರಿಗಂತೂ ತಾಳ್ಮೆಯ ಕಟ್ಟೆ ಹೊಡೆದಿದೆ.
ಒಂದೇ ಬಾಕಿ: ಎರಡನೇ ಅವಧಿಗಾಗಿ ಗಂಗಾವತಿ, ಕೊಪ್ಪಳ ನಗರಸಭೆ ಹಾಗೂ ಕಳೆದ ೨೦೨೧ರ ಡಿ.೨೭ರಂದು ಚುನಾವಣೆ ನಡೆದು, ಡಿ.೩೦ಕ್ಕೆ ಫಲಿತಾಂಶ ಪ್ರಕಟವಾಗಿದ್ದ, ಕಾರಟಗಿ, ಯಲಬುರ್ಗಾ, ಕುಷ್ಟಗಿ ಪುರಸಭೆ ಹಾಗೂ ಕುಕನೂರು, ಭಾಗ್ಯನಗರ, ತಾವರಗೇರ ಮತ್ತು ಕನಕಗಿರಿ ಪಟ್ಟಣ ಪಂಚಾಯತ್ ಗೆ ಮೊದಲ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯನ್ನು ಸರಕಾರ ಕಳೆದ ಆ.೫ ರಂದು ಪ್ರಕಟಿಸಿತ್ತು. ಜಿಲ್ಲಾಧಿಕಾರಿಗಳು,
ಗಂಗಾವತಿ, ಕೊಪ್ಪಳ ನಗರಸಭೆಯ ಚುನಾವಣೆ ಜವಾಬ್ದಾರಿಯನ್ನು ಉಪ ವಿಭಾಗಾಧಿಕಾರಿಗಳಿಗೆ ಹಾಗೂ ಇತರೇ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಆಯಾ ತಹಸೀಲ್ದಾರ್ ಗೆ ವಹಿಸಿ ಆದೇಶ ಮಾಡಿದ್ದಾರೆ. ಕುಷ್ಟಗಿ ಪುರಸಭೆ ಚುನಾವಣೆ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು, ಉಳಿದ ಎಲ್ಲ ಕಡೆ ಚುನಾವಣೆ ಮುಗಿದಿವೆ. ಆದರೆ, ಕನಕಗಿರಿ ಪಪಂನಲ್ಲಿ ಮಾತ್ರ ಇನ್ನೂ ದಿನಾಂಕ ನಿಗದಿ ಆಗಿಲ್ಲ
ಕಾಂಗ್ರೆಸ್ ಗೆ ಬಹುಮತ!
ಕನಕಗಿರಿ ಪಟ್ಟಣ ಪಂಚಾಯಿತಿ ಒಟ್ಟು ೧೭ ಸದಸ್ಯ ಬಲ ಹೊಂದಿದೆ. ಕಾಂಗ್ರೆಸ್ ನಿಂದ ೧೨ ಸದಸ್ಯರು ಆಯ್ಕೆ ಆಗಿದ್ದರೆ, ಬಿಜೆಪಿಯಿಂದ ಚುನಾಯಿತರಾದ ೫ ಸದಸ್ಯರು ಇದ್ದಾರೆ. ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ
ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ಟಿಗೆ ಮೀಸಲಾಗಿದೆ. ಈ ಎರಡೂ ಮೀಸಲಾತಿಯಲ್ಲಿ ನಾಮಪತ್ರ ಸಲ್ಲಿಸಲು ಬಿಜೆಪಿಯಲ್ಲಿ ಅರ್ಹರೇ ಇಲ್ಲ. ಇದರಿಂದ ಅನಾಯಾಸವಾಗಿ ಕನಕಗಿರಿ ’ಕೈ’ವಶ ಆಗಿದೆ. ಇಡೀ ೧೭ ಸದಸ್ಯರ ಪೈಕಿ ಕಂಠಿ ರಂಗಪ್ಪ ನಾಯಕ ಒಬ್ಬರು ಮಾತ್ರ ಎಸ್ಟಿ ವರ್ಗಕ್ಕೆ ಸೇರಿದ್ದು, ಉಪಾಧ್ಯಕ್ಷ ಸ್ಥಾನ ಇವರಿಗೆ ಫಿಕ್ಸ್ ಆಗಿದೆ. ಇನ್ನು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು, ಕಾಂಗ್ರೆಸ್ ನಲ್ಲೇ ತನುಶ್ರೀ ರಾಮಚಂದ್ರ ಸೇರಿ ೪ ಸದಸ್ಯರು ಅರ್ಹರಿದ್ದಾರೆ.
*
ಗಂಗಾವತಿ ಹಾಗೂ ಕೊಪ್ಪಳ ನಗರಸಭೆಗೆ ಉಪ ವಿಭಾಗಾಧಿಕಾರಿ ಹಾಗೂ ಇತರೇ ಸ್ಥಳೀಯ ಸಂಸ್ಥೆಗಳಿಗೆ ಆಯಾ ತಹಸೀಲ್ದಾರ್ ಗಳನ್ನು ಚುನಾವಣೆ ಅಧಿಕಾರಿಯಾಗಿ ನೇಮಿಸಿ, ಆದೇಶ ಮಾಡಿದ್ದೇನೆ. ಅವರೇ ದಿನಾಂಕ ನಿಗದಿ ಮಾಡಿ, ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಬೇಕು. ಕನಕಗಿರಿ ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸುವ ಜವಾಬ್ದಾರಿ ಕನಕಗಿರಿ ತಹಸೀಲ್ದಾರ್ ಗೆ ನೀಡಲಾಗಿದೆ. ಅವರಿಂದಲೇ ಮಾಹಿತಿ ಪಡೆಯಬಹುದು.
– ನಲಿನ್ ಅತುಲ್, ಜಿಲ್ಲಾಧಿಕಾರಿ,
ಶಾಸಕರು, ಸಂಸದರು ಕೂಡ ಮತದಾನ ಮಾಡಲು ಅರ್ಹರಾಗಿದ್ದಾರೆ. ಈ ಹಿನ್ನೆಲೆ ಒಂದಷ್ಟು ತಡವಾಗಿದೆ. ಸೆ.೫ರ ನಂತರ ದಿನಾಂಕ ನಿಗದಿ ಮಾಡುತ್ತೇನೆ.
– ವಿಶ್ವನಾಥ್, ತಹಸೀಲ್ದಾರ್, ಕನಕಗಿರಿ
ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ ೨ ವರ್ಷ ೮ ತಿಂಗಳ ನಂತರ ಅಧಿಕಾರ ವಹಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಮುಗಿದರೂ ಕನಕಗಿರಿಯಲ್ಲಿ ದಿನಾಂಕ ನಿಗದಿ ಆಗಿಲ್ಲ. ಇದು ಜನರಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಮಾಡುವ ಅನ್ಯಾಯ.
– ಹೆಸರು ಹೇಳಲು ಇಚ್ಚಿಸದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ