ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶತಕದತ್ತ ದಾಪುಗಾಲಿಡುತ್ತದ್ದು, 14ನೇ ವಾರ ಸಾಗುತ್ತಿದೆ. ಕಳೆದ ಭಾನುವಾರ ದೊಡ್ಮನೆಯಿಂದ ಮತ್ತೋರ್ವ ಸ್ಪರ್ಧಿ ಔಟ್ ಆದರು. 90 ದಿನಗಳನ್ನು ಪೂರೈಸಿರುವ ಶೋನಲ್ಲಿ ಐಶ್ವರ್ಯಾ ಸಿಂಧೋಗಿ ಎಲಿಮಿನೇಟ್ ಆಗಿ ಹೊರಬಂದರು. ಕಳೆದ ಕೆಲವು ವಾರಗಳಿಂದ ಇವರು ಡೇಂಜರ್ ಝೋನ್ನಲ್ಲೇ ಇದ್ದರು. ಅಂತಿಮವಾಗಿ ಬಿಗ್ ಬಾಸ್ ಪ್ರಯಾಣವನ್ನು ಮಹತ್ವದ ಘಟ್ಟದಲ್ಲೇ ಐಶ್ವರ್ಯಾ ಕೊನೆಗೊಳಿಸಿದ್ದಾರೆ.
ಎಲಿಮಿನೇಟ್ ಆದ ಐಶ್ವರ್ಯಾಗೆ ಬಿಗ್ ಬಾಸ್ ವಿಶೇಷವಾಗಿ ವಿದಾಯ ಪತ್ರವನ್ನು ಕೂಡ ಬರೆದರು. “ಪ್ರೀತಿಯ ಐಶ್ವರ್ಯಾ, 13 ವಾರಗಳ ಕಾಲ ಒಬ್ಬ ಪ್ರಬಲ ಸ್ಪರ್ಧಿಯಾಗಿ ಈ ಮನೆಯಲ್ಲಿ ಜೀವಿಸಿರುವುದು ಸಂತೋಷಕರ ವಿಷಯ. ತುಸು ಬೇಸರವಿದ್ದರೂ, ನಗು, ದುಃಖ,ಕೋಪ, ತುಂಟಾಟ ಹೀಗೆ ನಿಮ್ಮ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಮನೆಯಿಂದ ಈಗ ನಿಮ್ಮನ್ನು ಕಳಿಸಿಕೊಡಲೇಬೇಕಾಗಿದೆ. ತನ್ನವರು ಯಾರೂ ಇಲ್ಲ ಎಂಬ ಕೊರಗಿನೊಂದಿಗೆ ಈ ಮನೆಯನ್ನು ನೀವು ಪ್ರವೇಶ ಮಾಡಿದ್ರಿ. ಆದರೆ ಈಗ ಬಿಗ್ ಬಾಸ್ ಮನೆಯವರು, ಕರುನಾಡಿನ ಮನೆಮನೆಯವರ ಪ್ರೀತಿಯನ್ನು ಗಳಿಸಿದ್ದೀರಿ” ಎಂದು ಪತ್ರದಲ್ಲಿ ಬರೆಯಲಾಗಿತ್ತು.
ಈ ಪತ್ರವನ್ನು ಹಿಡಿದುಕೊಂಡೇ ಐಶ್ವರ್ಯಾ ಬಿಗ್ ಬಾಸ್ ಮುಖ್ಯದ್ವಾರದಿಂದ ಹೊರಬಂದರು. ಅಲ್ಲಿಂದ ಐಶು ನೇರವಾಗಿ ಬಂದಿದ್ದು ಕಿಚ್ಚನ ವೇದಿಕೆಗೆ. ಅಲ್ಲಿ ತೋರಿಸಿದ ವಿಟಿ ನೋಡಿ ಮತ್ತೆ ಭಾವುಕರಾದರು. ಮೊದಲಿದ್ದ ಎನರ್ಜಿಯನ್ನು ಕಳೆದುಕೊಂಡೆ. ಅದೇ ನನ್ನ ಸೋಲಿಗೆ ಕಾರಣವಾಯ್ತು ಅಂತಾ ಕಿಚ್ಚನ ಎದುರು ಹೇಳಿದರು.
ಕೊನೆಯದಾಗಿ ಕಳುಹಿಸಿ ಕಡುವ ವೇಳೆ ಸುದೀಪ್ ಅವರು ಐಶ್ವರ್ಯ ಅವರಿಗೆ, ಮುಂದೆ ಯಾವ ಪ್ಲಾನ್ನಲ್ಲಿದ್ದೀರಿ ಎಂದು ಕೇಳುತ್ತಾರೆ. ಇದಕ್ಕೆ ಅದಕ್ಕೆ ಪ್ರತಿಕ್ರಿಯಿಸಿದ ಐಶ್ವರ್ಯ, ಸರ್ ನಾನು ನಿಮ್ಮ ಜೊತೆ ಒಂದು ಸಿನಿಮಾ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ಸುದೀಪ್, ‘ಓ..’ ಎನ್ನುತ್ತಾರೆ. ಮತ್ತೆ ಮಾತು ಮುಂದುವರಿಸಿದ ಐಶ್ವರ್ಯ, ಸರ್ ಯಾವುದೇ ಪಾತ್ರವಾದರೂ ಪರವಾಗಿಲ್ಲ. ಚಿಕ್ಕ ರೋಲ್ ಆದರೂ ಪರ್ವಾಗಿಲ್ಲ. ನಾನು ಮಾಡ್ತೀನಿ ಎಂದಿದ್ದಾರೆ. ಅದಕ್ಕೆ ಸುದೀಪ್, ಡನ್ ಎಂದು ಹೇಳಿದ್ದಾರೆ. ಹೀಗಾಗಿ ಐಶ್ವರ್ಯಾ ಅವರು ಕಿಚ್ಚ ಸುದೀಪ್ ನಟನೆಯ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.