ಮುಂಬೈ: ಬಾಲಿವುಡ್ ನ (Bollywood) ಎವರ್ ಗ್ರೀನ್ ಹೀರೋ, ನಟ ಅನಿಲ್ ಕಪೂರ್ (Anil Kapoor) ಅವರಿಗೆ ಇಂದು (ಡಿಸೆಂಬರ್ 24) ಜನ್ಮದಿನದ (Birthday) ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅನಿಲ್ ಕಪೂರ್ ಅವರು ಕನ್ನಡದ ‘ಪಲ್ಲವಿ ಅನುಪಲ್ಲವಿ’ (Pallavi Anupallavi) ಸಿನಿಮಾದಲ್ಲಿ ನಟಿಸಿದ್ದರು. ಈ ಮೂಲಕ ಕನ್ನಡ ಚಿತ್ರರಂಗಕ್ಕೆ (Sandalwood) ಪರಿಚಯಗೊಂಡರು. ಬಾಲಿವುಡ್ ನಟ ಅನಿಲ್ ಕಪೂರ್ಗೆ ಕನ್ನಡದ ಸಿನಿಮಾ (Kannada Cinema) ಆಫರ್ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
ಅನಿಲ್ ಕಪೂರ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1979ರಲ್ಲಿ. ಹಿಂದಿಯ ‘ಹಮಾರೆ ತುಮಾರೆ’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರದಲ್ಲಿ ಅವರು ಸಣ್ಣ ಪಾತ್ರ ಮಾಡಿದ್ದರು. 1980ರಲ್ಲಿ ರಿಲೀಸ್ ಆದ ತೆಲುಗಿನ ‘ವಂಶ ವೃಕ್ಷ’ ಸಿನಿಮಾದಲ್ಲಿ ಅನಿಲ್ ಕಪೂರ್ ನಟಿಸಿದರು. ಈ ಚಿತ್ರವನ್ನು ಬಾಪು ಅವರು ನಿರ್ದೇಶನ ಮಾಡಿದ್ದರು. ಆ ವರ್ಷ ಎರಡು ಹಿಂದಿ ಸಿನಿಮಾಗಳಲ್ಲಿ ಅನಿಲ್ ಕಪೂರ್ ನಟಿಸಿದ್ದರು.
ಈ ಸುದ್ದಿಯನ್ನೂ ಓದಿ: Viral Video: ಇಂಡಿಗೋ ವಿಮಾನದಲ್ಲಿ ʼಟೀ ಸರ್ವ್ʼ ಮಾಡಿದ ಪ್ರಯಾಣಿಕರು; ವೈರಲ್ ಆಯ್ತು ಈ ವಿಡಿಯೊ
ಮೊದಲಿಗೆ ‘ಪಲ್ಲವಿ ಅನುಪಲ್ಲವಿ’ ಸಿನಿಮಾ ನಿರ್ದೇಶನ ಮಾಡುವ ಆಲೋಚನೆ ಮಣಿರತ್ನಂ (Mani Ratnam) ಅವರಿಗೆ ಇರಲಿಲ್ಲ. ಈ ಬಗ್ಗೆ ಅವರು ವೇದಿಕೆ ಮೇಲೆ ಹೇಳಿಕೊಂಡಿದ್ದರು. ‘ನಾನು ನನ್ನ ಮೊದಲ ಸಿನಿಮಾ ಮಾಡಿದಾಗ ನನಗೆ ಸಿನಿಮಾ ಮಾಡೋದು ಹೇಗೆ ಎಂದು ಗೊತ್ತಿರಲಿಲ್ಲ. ನನಗೆ ಕನ್ನಡ ಬರುತ್ತಿರಲಿಲ್ಲ. ಆದರೂ ಕನ್ನಡ ಸಿನಿಮಾ ಮಾಡಿದೆ. ನಾನು ಒಂದು ಸ್ಕ್ರಿಪ್ಟ್ ರೆಡಿ ಮಾಡಿಕೊಂಡೆ. ಯಾವುದಾದರೂ ಒಂದು ದೊಡ್ಡ ನಿರ್ದೇಶಕನ ಮನ ಒಲಿಸಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ಆಗ ಅವರ ಜೊತೆ ಸಹಾಯಕ ನಿರ್ದೇಶಕನಾಗಿ ಸೇರಿಕೊಂಡು ಸಿನಿಮಾ ಬಗ್ಗೆ ಕಲಿಯಬೇಕು ಎಂದುಕೊಂಡಿದ್ದೆ. ಆದರೆ, ನಾನೇ ನಿರ್ದೇಶನ ಮಾಡಬೇಕಾಗಿ ಬಂತು’ ಎಂದು ಮಣಿರತ್ನಂ ಹೇಳಿದ್ದರು.
ವಂಶ ವೃಕ್ಷ’ ಸಿನಿಮಾನ ಮಣಿರತ್ನಂ ವೀಕ್ಷಿಸಿದ್ದರು. ಈ ಚಿತ್ರದಲ್ಲಿ ಅನಿಲ್ ಕಪೂರ್ ಪಾತ್ರ ಮಣಿರತ್ನಂ ಅವರಿಗೆ ಇಷ್ಟ ಆಗಿತ್ತು. ತಮ್ಮ ಮೊದಲ ಸಿನಿಮಾಗೆ ಅನಿಲ್ ಸೂಕ್ತ ಎಂದು ಮಣಿರತ್ನಂ ನಿರ್ಧರಿಸಿದರು. ಅವರು ಅನಿಲ್ ಕಪೂರ್ಗೆ ಆಫರ್ ನೀಡಿದರು. ಅನಿಲ್ ಕಪೂರ್ ಅವರು ಖುಷಿಯಿಂದ ಒಪ್ಪಿ ಸಿನಿಮಾ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಯಿತು.
ಈ ಸಿನಿಮಾದಲ್ಲಿ ನಾಯಕಿ ಆಗಿ ನಟಿಸೋಕೆ ಮೊದಲು ಸುಹಾಸಿನಿಗೆ (Suhasini) ಆಫರ್ ನೀಡಲಾಗಿತ್ತು. ಆದರೆ, ಈ ಆಫರ್ನ ಅವರು ತಿರಸ್ಕರಿಸಿದರು. ಆ ಬಳಿಕ ಕಿರಣ್ ವೈರಾಲೆ (Kiran Vairale) ಅವರು ತಂಡ ಸೇರಿಕೊಂಡರು. ಈ ಸಿನಿಮಾ ರಿಲೀಸ್ ಆಗಿ 40 ವರ್ಷಗಳ ಮೇಲಾಗಿದೆ. ಈಗಲೂ ಸಿನಿಮಾ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಅನಿಲ್ ಕಪೂರ್ ಅವರ ವೃತ್ತಿ ಜೀವನದಲ್ಲಿ ಈ ಸಿನಿಮಾ ಮುಖ್ಯ ಎನಿಸಿಕೊಂಡಿದೆ. ಅವರು ನಟಿಸಿದ ಏಕೈಕ ಕನ್ನಡ ಸಿನಿಮಾ ಇದಾಗಿದ್ದು, ಇದೀಗ ಮತ್ತೊಂದು ಕನ್ನಡ ಚಿತ್ರದ ಮೂಲಕ 41 ವರ್ಷಗಳ ನಂತರ ಅನಿಲ್ ಕಪೂರ್ ಅವರು ಸ್ಯಂಡಲ್‌ವುಡ್‌ಗೆ ರಿ-ಎಂಟ್ರಿ ಕೊಡಲಿದ್ದಾರೆ.
ಪಲ್ಲವಿ ಅನುಪಲ್ಲವಿ’ ಚಿತ್ರದಲ್ಲಿ ನಟಿಸಿದ ನಂತರ ಅನಿಲ್ ಕಪೂರ್ ಅವರು ಬೇರೆ ಯಾವುದೇ ಕನ್ನಡ ಸಿನಿಮಾದಲ್ಲಿಯೂ ನಟಿಸಿರಲಿಲ್ಲ. ಅನಿಲ್ ಕಪೂರ್ ಅವರನ್ನು ಮತ್ತೆ ಕನ್ನಡ ಸಿನಿಮಾಗಳಿಗೆ ಕರೆತರುವ ಪ್ರಯತ್ನಗಳು ಸಾಕಷ್ಟು ನಡೆದಿತ್ತಾದರೂ, ಇಲ್ಲಿಯವರೆಗೂ ಅದು ಸಾಧ್ಯವಾಗಿರಲಿಲ್ಲ. ಆದರೆ,ಇದೀಗ ಅವರು ಬಹಳ ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.
ಯಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಅನಿಲ್ ಕಪೂರ್ ಅವರು ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ (Social Media) ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.ಈ ಕುರಿತು ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಪ್ರತಿನಿತ್ಯ ಅನಿಲ್ ಕಪೂರ್ ಅವರು ಟಾಕ್ಸಿಕ್ ಸೆಟ್ ಶೂಟಿಂಗ್‌ಗೆ ಎಂಟ್ರಿ ಕೊಡುತ್ತಿರುವುದು ಅನಿಲ್ ಕಪೂರ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಅನುಮಾನವನ್ನು ಹುಟ್ಟು ಹಾಕಿದೆ.
‘ಟಾಕ್ಸಿಕ್’ ಚಿತ್ರದ ಚಿತ್ರೀಕರಣ ಇದೀಗ ಮುಂಬೈನಲ್ಲಿ ನಡೆಯುತ್ತಿದ್ದು, ಚಿತ್ರೀಕರಣಕ್ಕೆ ಅನಿಲ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ (Kiara Advani) ಜೊತೆಯಾಗಿ ಪ್ರಯಾಣ ಬೆಳೆಸಿದ್ದರಿಂದ, ಅನಿಲ್ ಕಪೂರ್ ಈ ಚಿತ್ರದಲ್ಲಿ ನಟಿಸುತ್ತಿರುವ ಮಾಹಿತಿ ಹೊರಬಿದ್ದಿದೆ.