Wednesday, 30th October 2024

Mahakaali Movie: ಭಾರತದ ಮೊದಲ ಮಹಿಳಾ ಸೂಪರ್ ಹೀರೋ ‘ಮಹಾಕಾಳಿ’ ಕಥೆ ಹೇಳಲಿದ್ದಾರೆ ‘ಹನುಮಾನ್’ ಸಿನಿಮಾ ಸಾರಥಿ

Mahakaali Movie

ಹೈದರಾಬಾದ್‌: ತೆಲುಗಿನ ‘ಹನುಮಾನ್’ (Hanu-Man) ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ (Prasanth Varma) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹನುಮಾನ್ 2 ಜತೆಗೆ ಬಾಲಯ್ಯ ಅವರ ಪುತ್ರ ಮೋಕ್ಷಜ್ಞ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದರ ಬೆನ್ನಲ್ಲೇ ಪ್ರಶಾಂತ್ ಭಾರತದ ಮೊದಲ ಮಹಿಳಾ ಸೂಪರ್ ಹೀರೋ ʼಮಹಾಕಾಳಿʼ (Mahakaali) ಕಥೆಯನ್ನು ಹೇಳಲು ಹೊರಟಿದ್ದಾರೆ.

ಪ್ರಶಾಂತ್ ವರ್ಮಾ ತಮ್ಮದೇ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ನಡಿ ಮೂರನೇ ಚಿತ್ರ ಘೋಷಣೆ ಮಾಡಿದ್ದಾರೆ. ʼಮಹಾಕಾಳಿʼ ಸಿನಿಮಾಗೆ ಪ್ರಶಾಂತ್ ಕಥೆ ಬರೆದಿದ್ದಾರೆ. ಆದರೆ ಅವರು ಆ್ಯಕ್ಷನ್‌ ಕಟ್‌ ಹೇಳುತ್ತಿಲ್ಲ. ಅದರ ಬದಲಾಗಿ ನಿರ್ದೇಶಕಿಗೆ ಅವಕಾಶ ನೀಡಿದ್ದಾರೆ. ಈ ಹಿಂದೆ ʼಮಾರ್ಟಿನ್ ಲೂಥರ್ ಕಿಂಗ್ʼ ಎಂಬ ಚಿತ್ರ ನಿರ್ದೇಶಿಸಿದ್ದ ಪೂಜಾ ಅಪರ್ಣಾ ಕೊಲ್ಲೂರು ʼಮಹಾಕಾಳಿʼಯ ಸಾರಥ್ಯ ವಹಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಜನಪ್ರಿಯ ದೇವಿಯಾಗಿರುವ ಕಾಳಿ ಹಿನ್ನೆಲೆ, ಅಲ್ಲಿನ ನೆಲದ ಸಂಸ್ಕೃತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗುತ್ತದೆ. ಮಹಾಕಾಳಿ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಹುಡುಗಿಯೊಬ್ಬಳು ಹುಲಿಗೆ ತನ್ನ ಹಣೆ ಕೊಟ್ಟು ನಿಂತಿರುವ ಲುಕ್ ಅನ್ನು ಅನಾವರಣಗೊಳಿಸಲಾಗಿದೆ.

ʼಮಹಾಕಾಳಿʼ ಸಿನಿಮಾವನ್ನು ಆರ್‌ಕೆಎಂಡಿ ಸ್ಟುಡಿಯೋಸ್ ಬ್ಯಾನರ್‌ನಡಿ ರಿಜ್ವಾನ್ ರಮೇಶ್ ದುಗ್ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಆರ್‌ಕೆ ದುಗ್ಗಲ್ ಚಿತ್ರ ಪ್ರೆಸೆಂಟ್ ಮಾಡುತ್ತಿದೆ. ಸ್ಮರಣ್ ಸಾಯಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ʼಮಹಾಕಾಳಿʼ ಸಿನಿಮಾ ಭಾರತ ಮಾತ್ರವಲ್ಲದೆ ಇತರ ವಿದೇಶಿ ಭಾಷೆಗಳಲ್ಲಿ ಚಿತ್ರ ಮೂಡಿ ಬರಲಿದೆ. ʼಹನುಮಾನ್ʼ ಸಿನಿಮಾ ಜಪಾನ್ ಹಾಗೂ ಇತರ ಭಾಷೆಗಳಲ್ಲಿ ಭರ್ಜರಿ ಹಿಟ್ ಕಂಡಿತ್ತು. ಶೀಘ್ರದಲ್ಲೇ ಚಿತ್ರದ ತಾರಾಬಳಗ ಹಾಗೂ ಉಳಿದ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

ತೇಜ ಸಜ್ಜಾ ನಟನೆಯ `ಹನುಮಾನ್’ ಸಿನಿಮಾ ಈ ವರ್ಷದ ಜ. 12ರಂದು ತೆರೆಕಂಡಿತ್ತು. ಪ್ರಶಾಂತ್ ವರ್ಮಾ ನಿರ್ದೇಶನದ ಈ ಚಿತ್ರ ವಿಮರ್ಶಕರಿಂದ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ವಿನಯ್ ರೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಇನ್ನೂ ಹಲವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಡಿಮೆ ಬಜೆಟ್‌ನಲ್ಲಿ ತಯಾರಾಗಿ 350 ಕೋಟಿ ರೂ.ಗೊಂತ ಅಧಿಕ ಗಳಿಸಿದೆ.

ಈ ಸುದ್ದಿಯನ್ನೂ ಓದಿ: Dasara Celebration In Movie: ದಸರಾ ಮಹತ್ವ ಸಾರುವ ಬಾಲಿವುಡ್‌ನ 5 ಸಿನಿಮಾಗಳಿವು