Friday, 22nd November 2024

ನಟಿ ತಾರಾ ಅನುರಾಧಾ ತಾಯಿ ಅಂತ್ಯಕ್ರಿಯೆ ಇಂದು

ಮೈಸೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧಾ ಅವರ ತಾಯಿ ಟಿ.ಪುಷ್ಪಲತಾ(73) ನಿಧನರಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್​ ತಾಲೂಕಿನ ಚಿಕ್ಕಹೊಸಳ್ಳಿ ಗ್ರಾಮದಲ್ಲಿ ಗುರುವಾರ ಅಂತ್ಯ ಕ್ರಿಯೆ ನೆರವೇರಲಿದೆ.

ಮೈಸೂರಿನ ಕುರುಬಾರಹಳ್ಳಿ ವೃತ್ತದ ಸಮೀಪ ‘ಚಿಕ್ಕಿಯ ಮೂಗುತಿ’ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಅದರಲ್ಲಿ ಭಾಗ ವಹಿಸಿದ್ದ ತಾರಾ ಅವರೊಂದಿಗೆ ಪುಷ್ಪಾಲತಾ ಅವರೂ ಇದ್ದರು. ಈ ವೇಳೆ ಪುಷ್ಪಲತಾ ಅವರಿಗೆ ತೀವ್ರವಾಗಿ ವಾಂತಿ ಯಾಗಿತ್ತು. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಹೃದಯಾಘಾತವಾಗಿ ಕೊನೆಯುಸಿರೆಳೆದರು.

ಬುಧವಾರ ರಾತ್ರಿ ಮೃತದೇಹವನ್ನು ಬೆಂಗಳೂರಿಗೆ ರವಾನಿಸಲಾಯಿತು. ಗುರುವಾರ ಜೆ.ಪಿ. ನಗರದ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಆನೇಕಲ್​ಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತೆ. ಬಳಿಕ ಅಂತ್ಯಕ್ರಿಯೆ ನೆರವೇರ ಲಿದೆ.

ತಾರಾ ಅವರ ಪುತ್ರನನ್ನು ನೋಡಿಕೊಳ್ಳಲೆಂದು ಪುಷ್ಟಲತಾ ಕೂಡ ಶೂಟಿಂಗ್​ ಸ್ಥಳಕ್ಕೆ ಹೋಗುತ್ತಿದ್ದರು. ಅಂತೆಯೇ ಬುಧವಾರ ಮೈಸೂರಿಗೆ ಬಂದಿದ್ದರು.

ಪುಷ್ಪಾಲತಾ ಅವರಿಗೆ ಪುತ್ರಿಯರಾದ ತಾರಾ, ಅನಿತಾ ಹಾಗೂ ಪುತ್ರ ಅನಿಲ್​ಕುಮಾರ್​ ಇದ್ದಾರೆ. ಪುಷ್ಪಾಲತಾ ಅವರ ಪತಿ 7 ವರ್ಷದ ಹಿಂದೆ ಮೃತಪಟ್ಟಿದ್ದರು. ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 2017ನೇ ಸಾಲಿನ ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಾರಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಕ್ಷಣವನ್ನು ಕಣ್ತುಂಬಿಕೊಂಡಿದ್ದರು.