Thursday, 12th December 2024

ಡ್ರಗ್ಸ್ ಪಾರ್ಟಿ ಪ್ರಕರಣ: ಶಾರೂಕ್ ಪುತ್ರ ಆರ್ಯನ್ ಖಾನ್ ಬಂಧನ

ಮುಂಬೈ: ಐಷಾರಾಮಿ ಹಡಗಿನಲ್ಲಿ ನಡೆದಿದ್ದ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿ ನಾರ್ಕೊಟಿಕ್ಸ್ ಕ್ರೈಮ್ ಬ್ರ್ಯಾಂಚ್ ಅಧಿಕಾರಿಗಳ ತಂಡ ಬಾಲಿವುಡ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಬಂಧಿಸಿದೆ.

ಪ್ರಕರಣ ಸಂಬಂಧ ಮುಂಬೈನ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಿದ ಎನ್‌ಸಿಬಿ, ಆರ್ಯನ್ ಖಾನ್ ನನ್ನು ಬಂಧಿಸಿದೆ.

ರೇವ್ ಪಾರ್ಟಿ ನಡೆಯುತ್ತಿದ್ದ ಬಗ್ಗೆ ನಿಖರ ಮಾಹಿತಿ ಪಡೆದು ಏಕಾಏಕಿ ದಾಳಿ ನಡೆಸಿದ ತಂಡ 8 ಮಂದಿಯನ್ನು ವಶಕ್ಕೆ ಪಡೆದಿದ್ದು ಅವರಲ್ಲಿ ಇಬ್ಬರು ಯುವತಿಯರೂ ಸೇರಿದ್ದಾರೆ. ವಶಕ್ಕೆ ಪಡೆದವರ ಹೆಸರುಗಳು ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೊಹಕ್ ಜಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾ ಆಗಿದ್ದಾರೆ ಎಂದು ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ತಿಳಿಸಿದ್ದಾರೆ.

ವಶಕ್ಕೆ ಪಡೆದವರಿಂದ ಎಂಡಿಎಂಎ, ಎಸ್ಕೆಸಿ, ಕೊಕೈನ್, ಎಂಡಿ ಮತ್ತು ಚರಸ್ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಡ್ರಗ್ಸ್ ಪಾರ್ಟಿಗೆ ಸಂಬಂಧಿಸಿದಂತೆ ಸಂಸ್ಥೆ ಆಯೋಜಕರ ವಿರುದ್ಧ ಎಫ್ ಐಆರ್ ದಾಖಲಿಸಿದೆ.

ಸಮುದ್ರ ಮಧ್ಯೆ ಹಡಗಿನಲ್ಲಿ ನಟರು, ಉದ್ಯಮಿಗಳು ಮತ್ತು ಶ್ರೀಮಂತರ ಮಕ್ಕಳು ಸೇರಿ ಪಾರ್ಟಿ ಮಾಡುತ್ತಿದ್ದಾರೆ ಎಂದು ಎನ್ ಸಿಬಿಗೆ ಮಾಹಿತಿ ಸಿಕ್ಕಿತು. ಜಾಡು ಹಿಡಿದು ಕಳೆದ ಎರಡು ವಾರಗಳಿಂದ ಎನ್ ಸಿಬಿ ತೀವ್ರ ವಿಚಾರಣೆ ನಡೆಸಿ ಜಾಡು ಹಿಡಿದು ಹೊರಟಿತ್ತು. ನಿಖರ ಆಧಾರ ಸಿಕ್ಕಿಯೇ ನಾವು ದಾಳಿ ಮಾಡಿದ್ದೇವೆ. ಬಾಲಿವುಡ್ ಸಂಪರ್ಕ ಇರುವುದು ಸಹ ಬೆಳಕಿಗೆ ಬಂದಿದೆ ಎಂದು ಎನ್ ಸಿಬಿ ಮುಖ್ಯಸ್ಥ ಎಸ್ ಎನ್ ಪ್ರಧಾನ್ ತಿಳಿಸಿದ್ದಾರೆ.

ಶಂಕಿತರನ್ನು ತೀವ್ರ ಶೋಧ ನಡೆಸಿದಾಗ ವಿವಿಧ ಬಟ್ಟೆಗಳಲ್ಲಿ, ಶೂ, ಒಳ ಉಡುಪುಗಳಲ್ಲಿ ಮಾದಕ ವಸ್ತುಗಳನ್ನು ಅಡಗಿಸಿಟ್ಟಿದ್ದು ಬೆಳಕಿಗೆ ಬಂದು ವಶಪಡಿಸಿಕೊಳ್ಳಲಾಗಿದೆ.