ಬೆಂಗಳೂರು: ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಯಶ್ (Rocking Star Yash) ಇಂದು ಪ್ಯಾನ್ ಇಂಡಿಯಾ ಸ್ಟಾರ್(Pan India) ಆಗಿ ಮಿಂಚುತ್ತಿದ್ದಾರೆ. ಅಭಿಮಾನಿಗಳಿಂದ ರಾಕಿಂಗ್ ಸ್ಟಾರ್ ಎಂಬ ಬಿರುದು ಪಡೆದುಕೊಂಡಿದ್ದಾರೆ. ಬಸ್ ಚಾಲಕನ ಮಗನಾಗಿರುವ ರಾಕಿಂಗ್ ಸ್ಟಾರ್ ಯಶ್, ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ, ಇಂದು ಬರ್ತ್ ಡೇ(Birthday) ಆಚರಿಸಿಕೊಳ್ಳುತ್ತಿರುವ ನಟ ಯಶ್ ಒಂದೇ ದಿನದಲ್ಲಿ ಇಷ್ಟೆಲ್ಲಾ ಸಾಧಿಸಲು ಸಾಧ್ಯವಾಗಿಲ್ಲ. ತಮ್ಮ ಕಠಿಣ ಪರಿಶ್ರಮದಿಂದ ಸ್ಟಾರ್ ಆಗಿರುವ ಯಶ್ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸಂಗತಿಗಳು ಇಲ್ಲಿವೆ (Yash Birthday).
ಮೈದಾನದಲ್ಲಿ ಮಲಗುತ್ತಿದ್ದರು
ಯಶ್ ಅವಕಾಶಗಳಿಗಾಗಿ ಹುಡುಕುತ್ತಿದ್ದ ದಿನಗಳಲ್ಲಿ ಊಟಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಇತ್ತು. ಯಶ್ ಎಷ್ಟೋ ಬಾರಿ ಕಳ್ಳೆಪುರಿ, ನೀರು ಕುಡಿದುಕೊಂಡು ಇರುತ್ತಿದ್ದರು. ಮಲಗುವುದಕ್ಕೂ ಜಾಗ ಇರಲಿಲ್ಲ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಲಗಿ ಬೆಳಗ್ಗೆ ಎದ್ದು ಯಾವುದೋ ಶೌಚಾಯಲಯಕ್ಕೆ ನಾನು ಕಣ್ಣಾರೆ ನೋಡಿದ್ದೇನೆ ಎಂದು ಯಶ್ ಸ್ನೇಹಿತ್ ಮತ್ತು ನಟ ನಂಜುಂಡ ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ್ದರು.
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆದಿದ್ದ ಯಶ್
ಒಂದು ದಿನ ಮಲಗುವುದಕ್ಕೂ ಜಾಗವಿಲ್ಲದೆ ಮೆಜೆಸ್ಟಿಕ್ ನ ಮೈಸೂರು ಬಸ್ ನಿಲ್ದಾಣದಲ್ಲಿ ಮಲಗಿದ್ದರಂತೆ. ಒಂದು ಕಡೆ ಯಾರ್ರೀ ಮೈಸೂರು ಎಂದು ಕರೆಯುವವರು, ಇನ್ನೊಂದು ಕಡೆ ಗಾಂಧಿನಗರ. ಆಗ ಎಲ್ಲೂ ಹೋಗದೆ ಅಲ್ಲೇ ಉಳಿದೆ. ಆ ರಾತ್ರಿ ಭಿಕ್ಷುಕರು, ವೇಶ್ಯೆಯರು ಎಲ್ಲ ತರಹದ ಜನ ಬರುತ್ತಿದ್ದರು. ಬಸ್ ನಿಲ್ದಾಣದಲ್ಲಿ ಪೊಲೀಸರು ಲಾಠಿಯಲ್ಲಿ ಹೊಡೆಯುತ್ತಿದ್ದರು. ಆಗಲೇ ನಾನು ಗಾಂಧಿನಗರದಲ್ಲಿ ಎತ್ತರಕ್ಕೆ ಬೆಳೆಯಬೇಕು ಎಂಬ ಛಲ ಮೂಡಿತ್ತು. ಆ ಕರಾಳ ರಾತ್ರಿ ಹುಮ್ಮಸ್ಸು, ಛಲ ತುಂಬಿತ್ತು ಎಂದು ಯಶ್ ಹೇಳಿದ್ದರು.
ಹೋಟೆಲ್ ಬಿಲ್ ಕೊಡಲು ಹಣ ಇರುತ್ತಿರಲಿಲ್ಲ
ಯಶ್ ನಟನೆಯ ಹಿಂದೆ ರಂಗಭೂಮಿ ಬಣ್ಣದ ನಂಟು ಇದೆ. ಯಶ್ ಹಣವಿಲ್ಲದಿದ್ದಾಗಲೂ ಹೋಟೆಲ್ ನಲ್ಲಿ ಬೇಕಾದ್ದೆಲ್ಲವನ್ನು ತಿನ್ನುತ್ತಿದ್ದರು. ಹಣ ಕೇಳಿದರೆ ಸ್ಟಾರ್ ಆದ ಮೇಲೆ ಕೊಡುತ್ತೇನೆ ಎನ್ನುತ್ತಿದ್ದರು. ಬಳಿಕ ಹೀರೋ ಆದಮೇಲೆ ಆ ಹೋಟೆಲ್ ಮಾಲೀಕರಿಗೆ ಸಾವಿರ ರೂಪಾಯಿ ಕೊಟ್ಟಿದ್ದರಂತೆ. ಅವರಿಗೆ ಯಾವ ಬಾಕಿ ಎಂದು ಅರ್ಥವಾಗುತ್ತಿರಲಿಲ್ಲ ಎಂದು ಕಾರ್ಯಕ್ರಮವೊಂದರಲ್ಲಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದರು.
ಯಶ್ ಏನು ಓದಿದ್ದಾರೆ?
ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಯಶ್ ಎಲ್ಲಿವರೆಗೆ ಓದಿದ್ದಾರೆಎಂಬ ಕುತೂಹಲ ಹಲವರಿಗೆ ಇರುತ್ತದೆ. ಈ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ರಾಕಿಂಗ್ ಸ್ಟಾರ್, ತಾವು ಪಿಯುಸಿಗೆ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಬೇಕಾಯಿತು. ಇದಕ್ಕೆ ಕಾರಣ ಸಿನಿಮಾದಲ್ಲಿ ನಟಿಸಬೇಕು, ಹೀರೋ ಆಗಬೇಕು ಎಂಬ ಕನಸು. ಆ ಕನಸಿಗಾಗಿ ತಾನು ಪಿಯುಸಿಗೆ ವಿದ್ಯಾಭ್ಯಾಸ ನಿಲ್ಲಿಸಬೇಕಾಯಿತು ಎಂದಿದ್ದರು.
ಯಶ್ ತಂದೆ ಬಿಎಂಟಿಸಿ ಡ್ರೈವರ್
ಯಶ್ ಹುಟ್ಟಿ ಬೆಳೆದದ್ದು ಮಾಧ್ಯಮ ಕುಟುಂಬದಲ್ಲಿ. ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಯ ಮಗನಾಗಿ ಯಶ್ ಜನಿಸಿದರು. ಇವರ ತಂದೆ ಬೆಂಗಳೂರು `ಬಿಎಂಟಿಸಿ’ಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರ ತಂದೆ ಬಿಎಂಟಿಸಿ ಚಾಲಕರಾಗಿದ್ದಾಗಲೇ ಯಶ್ ಸ್ಟಾರ್ ಎನಿಸಿಕೊಂಡಿದ್ದರು. ಯಶ್ ಅವರಿಗೆ ತಂದೆಯ ಕೆಲಸದ ಬಗ್ಗೆ ಕೀಳರಿಮೆಯಾಗಲಿ, ಮುಜುಗರವಾಗಲಿ ಇರಲಿಲ್ಲ. ಯಾಕೆಂದರೆ ಆ ಕೆಲಸದಿಂದಲೇ ತಾವೆಲ್ಲ ಎಷ್ಟು ಎತ್ತರಕ್ಕೆ ಬರಲು ಸಾಧ್ಯವಾಯಿತು ಎನ್ನುತ್ತಾರೆ ಯಶ್.
ರಾಕಿಂಗ್ ಸ್ಟಾರ್‌ಗೆ ರಿಯಲ್ ಸ್ಟಾರ್ ಸ್ಪೂರ್ತಿ
ಹೈಸ್ಕೂಲ್-ಕಾಲೇಜು ದಿನಗಳಲ್ಲಿ ಹಲವು ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಯಶ್ ಒಂದು ಸಲ ಮೈಸೂರಿನಲ್ಲಿ ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಬೇಕಾದರೆ ರಿಯಲ್ ಸ್ಟಾರ್ ಉಪೇಂದ್ರರವರು ನೋಡಿ ಯಶ್‌ರನ್ನು ತುಂಬಾ ಹೊಗಳಿದ್ದರು.`ವಿಕೆಂಡ್ ವಿಥ್ ರಮೇಶ್’ ಕಾರ್ಯಕ್ರಮದಲ್ಲಿ ಈ ಘಟನೆ ನೆನೆದ ಯಶ್, ಉಪೇಂದ್ರರವರು ತಮಗೆ ಸ್ಫೂರ್ತಿ ಎಂದರು.
ಮೊದಲ ಸಿನಿಮಾ
2007ರಲ್ಲಿ ತೆರೆಗೆ ಬಂದ ‘ಜಂಬದ ಹುಡುಗಿ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಯಶ್ 2008ರಲ್ಲಿ ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ ‘ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಈ ಚಿತ್ರದಲ್ಲಿನ ಅಭಿನಯಕ್ಕೋಸ್ಕರ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದರು. ತಾವು ಮೊದಲ ಬಾರಿ ನಾಯಕನಾಗಿ ನಟಿಸಿದ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದು ರಾಧಿಕಾ ಪಂಡಿತ್.
ಯಶೋಮಾರ್ಗ
ಯಶ್-ರಾಧಿಕಾ ದಂಪತಿ ‘ಯಶೋಮಾರ್ಗ’ ಎಂಬ ಸಂಸ್ಥೆ ಸ್ಥಾಪಿಸಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಯಶೋಮಾರ್ಗ ಸಂಸ್ಥೆಯ ಅಡಿಯಲ್ಲಿ ಯಶ್ ದಂಪತಿ 4 ಕೋಟಿ ವೆಚ್ಚ ಮಾಡಿ ಕೊಪ್ಪಳ ನಗರ ಕೆರೆಯ ಹೂಳೆತ್ತಿಸಿ, ಕೊಪ್ಪಳ ಜನತೆಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದರು.
ಈ ಸುದ್ದಿಯನ್ನೂ ಓದಿ:Vinod Kambli: ಯಶಸ್ವಿ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿನೋದ್ ಕಾಂಬ್ಳಿ!