STOCKS SPLIT IN 2025: ICICI, ಡಿಕ್ಸಾನ್, HCL ಈ ವರ್ಷ ಷೇರು ವಿಭಜನೆ
ಷೇರು ವಿಭಜನೆಯಾಗುವುದರಿಂದ ಕಂಪನಿಯ ಫಂಡಮೆಂಟಲ್ ವಿಷಯಗಳು ಬದಲಾಗುವುದಿಲ್ಲ. ಆದರೆ ಷೇರು ಖರೀದಿಸುವವರಿಗೆ ದುಬಾರಿ ಎನ್ನಿಸುವುದಿಲ್ಲ. ಜತೆಗೆ ಷೇರು ವಿಭಜನೆಯಾಗುತ್ತಿದ್ದರೆ ಅಂಥ ಕಂಪನಿ ಚೆನ್ನಾಗಿ ಬೆಳೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಲಾಂಗ್ ಟರ್ಮ್ ಹೂಡಿಕೆದಾರರಿಗೆ ಷೇರುಗಳ ವಿಭಜನೆಯು ಗುಡ್ ನ್ಯೂಸ್ ಎನ್ನಬಹುದು.


- ಕೇಶವ ಪ್ರಸಾದ್ ಬಿ.
ಮುಂಬೈ: ಷೇರುಗಳ ದರ ಹೆಚ್ಚಿದಂತೆ ಕೊಳ್ಳುವವರಿಗೆ ದುಬಾರಿ ಎನ್ನಿಸುತ್ತದೆ. ತೆಗೆದುಕೊಳ್ಳಬೇಕೇ ಬೇಡವೇ ಎಂದು ಆಲೋಚಿಸುವುದು ಸಹಜ. ಹೀಗಾಗಿ, ಈ ವರ್ಷ ಕೆಲವು ಪ್ರಮುಖ ಷೇರುಗಳು ವಿಭಜನೆಯಾಗುವ(STOCKS SPLIT IN 2025) ಅಥವಾ SPLIT ಆಗುವ ಸಾಧ್ಯತೆ ಇದೆ. ಏಕೆಂದರೆ ಅಂಥ ಷೇರುಗಳ ದರ 1,000 ರುಪಾಯಿಗಳ ಗಡಿ ದಾಟಿವೆ. ಕೆಲವು ಷೇರುಗಳ ದರ 2,000 ರುಪಾಯಿಗಳಿಂತಲೂ ಹೆಚ್ಚಿವೆ. ಷೇರು ವಿಭಜನೆಯಾಗುವುದರಿಂದ ಕಂಪನಿಯ ಫಂಡಮೆಂಟಲ್ ವಿಷಯಗಳು ಬದಲಾಗುವುದಿಲ್ಲ. ಆದರೆ ಷೇರು ಖರೀದಿಸುವವರಿಗೆ ದುಬಾರಿ ಎನ್ನಿಸುವುದಿಲ್ಲ. ಜತೆಗೆ ಷೇರು ವಿಭಜನೆಯಾಗುತ್ತಿದ್ದರೆ ಅಂಥ ಕಂಪನಿ ಚೆನ್ನಾಗಿ ಬೆಳೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಲಾಂಗ್ ಟರ್ಮ್ ಹೂಡಿಕೆದಾರರಿಗೆ ಷೇರುಗಳ ವಿಭಜನೆಯು ಗುಡ್ ನ್ಯೂಸ್ ಎನ್ನಬಹುದು. ಹೊಸತಾಗಿ ಹೂಡಿಕೆ ಮಾಡಲು ಬಯಸುವವರಿಗೂ ಇದು ಅನುಕೂಲಕರ. ಈಕ್ವಿಟಿ ಮಾಸ್ಟರ್ ಪ್ರಕಾರ, 5 ಪ್ರಮುಖ ಷೇರುಗಳು ಈ ವರ್ಷ ವಿಭಜನೆಯಾಗುವ ನಿರೀಕ್ಷೆ ಇದೆ. ಅವುಗಳು ಯಾವುದು ಎಂಬುದನ್ನು ನೋಡೋಣ.
- ಐಸಿಐಸಿಐ ಬ್ಯಾಂಕ್
ICICI Bank ಷೇರಿನ ಈಗಿನ ದರ: 1,450/-
ICICI Bank ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ಗಳಲ್ಲೊಂದು. ರಿಟೇಲ್, ಎಸ್‌ಎಂಇ ಮತ್ತು ಕಾರ್ಪೊರೇಟ್ ಗ್ರಾಹಕರಿಗೆ ಸಾಲ ಸೇರಿದಂತೆ ಹಣಕಾಸು ಸೇವೆಗಳನ್ನು ನೀಡುತ್ತದೆ. ಐಸಿಐಸಿಐ ಬ್ಯಾಂಕ್ 7,000ಕ್ಕೂ ಹೆಚ್ಚು ಶಾಖೆಗಳನ್ನು ಒಳಗೊಂಡಿದೆ. 16,000 ಎಟಿಎಂಗಳನ್ನು ಹೊಂದಿದೆ. ಕೊನೆಯ ಬಾರಿಗೆ 2004ರ ಮೇನಲ್ಲಿ ICICI ಷೇರು ವಿಭಜನೆಯಾಗಿತ್ತು. ಅದಕ್ಕೂ ಹಿಂದೆ 1994ರಲ್ಲಿ ಮೊದಲ ಸಲ ವಿಭಜನೆಯಾಗಿತ್ತು. ಬ್ಯಾಂಕಿನ ನಿವ್ವಳ ಲಾಭ ಕಳೆದೊಂದು ವರ್ಷದಲ್ಲಿ 18% ಏರಿಕೆಯಾಗಿದೆ. ಬ್ಯಾಂಕಿನ ಅಸೆಟ್ ಕ್ವಾಲಿಟಿ ಕೂಡ ಚೆನ್ನಾಗಿದೆ.
- ಡಿಕ್ಸಾನ್ ಟೆಕ್ನಾಲಜೀಸ್
Dixon Technologies ಷೇರಿನ ಈಗಿ ದರ : 15,025/-
ಡಿಕ್ಸಾನ್ ಟೆಕ್ನಾಲಜೀಸ್ ಕಂಪನಿಯ ಷೇರು ಹೂಡಿಕೆದಾರರಿಗೆ ಕಳೆದ 8 ವರ್ಷಗಳಲ್ಲಿ ಅದ್ಭುತ ರಿಟರ್ನ್ ಕೊಟ್ಟಿದೆ. ಗಮನಿಸಿ, 2017ರ ಸೆಪ್ಟಂಬರ್‌ನಲ್ಲಿ ಡಿಕ್ಸಾನ್ ಷೇರಿನ ದರ ಕೇವಲ 530/- ಇತ್ತು. ಈಗ 15,025/- ಇದೆ. ಅಂದರೆ 2,724% ಏರಿಕೆಯಾಗಿದೆ. ಸುಮಾರು 28 ಪಟ್ಟು ಹೆಚ್ಚಳವಾಗಿದೆ.
ಡಿಕ್ಸಾನ್ ಟೆಕ್ನಾಲಜೀಸ್ ಭಾರತದ ಅತಿ ದೊಡ್ಡ ಲಿಸ್ಟೆಡ್ ಎಲೆಕ್ಟ್ರಾನಿಕ್ಸ್ ಮಾನ್ಯುಫಾಕ್ಚರಿಂಗ್ ಸರ್ವೀಸ್ (EMS) ಕಂಪನಿಯಾಗಿದೆ. ಇದು ಸ್ಮಾರ್ಟ್‌ಫೋನ್, ಟಿವಿ, ಲೈಟಿಂಗ್, ವಾಷಿಂಗ್ ಮೆಷೀನ್, ಐಟಿ ಹಾರ್ಡ್‌ವೇರ್, ಟೆಲಿಕಾಂ ಉತ್ಪನ್ನಗಳನ್ನು ತಯಾರಿಸುತ್ತದೆ. ಗ್ಲೋಬಲ್ ಮತ್ತು ಡೊಮೆಸ್ಟಿಕ್ ಬ್ರಾಂಡ್‌ಗಳಿಗೆ ಪೂರೈಸುತ್ತದೆ. 2021ರ ಮಾರ್ಚ್‌ನಲ್ಲಿ ಕೊನೆಯ ಬಾರಿಗೆ ಡಿಕ್ಸಾನ್ ಷೇರು ವಿಭಜನೆಯಾಗಿತ್ತು. ಬಳಿಕ ಷೇರು 400% ಏರಿಕೆಯಾಗಿದೆ.
- ಎಚ್‌ಸಿಎಲ್ ಟೆಕ್ನಾಲಜೀಸ್
HCL Technologies ಷೇರಿನ ಈಗಿನ ದರ: 1,649/-
ಎಚ್‌ಸಿಎಲ್ ಟೆಕ್ನಾಲಜೀಸ್ ಭಾರತದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾಗಿದೆ. ಐಟಿ ಮತ್ತು ಎಂಜಿನಿಯರಿಂಗ್ ಸೇವೆಗಳನ್ನು ಒದಗಿಸುತ್ತದೆ. ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಒಳಗೊಂಡಿದೆ. 60ಕ್ಕೂ ಹೆಚ್ಚು ದೇಶಗಳಿಗೆ ಐಟಿ ಸರ್ವೀಸ್ ಒದಗಿಸುತ್ತದೆ. ಕೊನೆಯ ಬಾರಿಗೆ 2000ರಲ್ಲಿ ಎಚ್‌ಸಿಎಲ್ ಷೇರು ವಿಭಜನೆಯಾಗಿತ್ತು.
- ಸಿಪ್ಲಾ
Cipla ಷೇರಿನ ಈಗಿನ ದರ: 1,484
ಭಾರತದ ಔಷಧ ಕ್ಷೇತ್ರದಲ್ಲಿ ಸಿಪ್ಲಾ ದೊಡ್ಡ ಬ್ರಾಂಡ್ ಆಗಿ ಜನಪ್ರಿಯತೆ ಗಳಿಸಿದೆ. ಹಲವು ದೇಶಗಳಿಗೆ ಔಷಧ ರಫ್ತು ಮಾಡುತ್ತದೆ. ಉತ್ತರ ಅಮೆರಿಕ, ಅಫ್ರಿಕ, ಯುರೋಪಿಗೆ ಔಷಧ ರಫ್ತು ಮಾಡುತ್ತದೆ. 2004ರಲ್ಲಿ ಕೊನೆಯ ಬಾರಿಗೆ ಸಿಪ್ಲಾ ಷೇರು ವಿಭಜನೆಯಾಗಿತ್ತು.
- ಮಹೀಂದ್ರಾ & ಮಹೀಂದ್ರಾ
Mahindra & Mahindra ಷೇರಿನ ಈಗಿನ ದರ : 3,014/-
ಮಹೀಂದ್ರಾ & ಮಹೀಂದ್ರಾ ಕಂಪನಿಯು ಭಾರತದ ಪ್ರಮುಖ ಆಟೊಮೊಬೈಲ್ ಕಂಪನಿಗಳಲ್ಲೊಂದಾಗಿದೆ. ಎಸ್‌ಯುವಿ ಜತೆಗೆ ಕೃಷಿ ಉಪಕರಣಗಳನ್ನು, ಟ್ರಾಕ್ಟರ್ ಗಳನ್ನೂ ತಯಾರಿಸುತ್ತಿದೆ. ಕೊನೆಯ ಬಾರಿಎ 2010ರಲ್ಲಿ ಮಹೀಂದ್ರಾ ಷೇರಿನ ವಿಭಜನೆಯಾಗಿತ್ತು. ಬಳಿಕ ಷೇರು 1,100% ರಿಟರ್ನ್ ಕೊಟ್ಟಿತ್ತು.
ಭಾರತೀಯ ಸ್ಟಾಕ್ ಮಾರ್ಕೆಟ್ ಇಂಡೆಕ್ಸ್‌ಗಳು ಕಳೆದ ಶುಕ್ರವಾರ ಅಂದ್ರೆ ಮೇ 23ರಂದು 1 ಪರ್ಸೆಂಟ್ ಏರಿಕೆ ದಾಖಲಿಸಿತ್ತು. ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಟಿಸಿ ಷೇರುಗಳ ದರ ಏರಿಕೆ ಆಗಿತ್ತು. ಸೆನ್ಸೆಕ್ಸ್ 769 ಅಂಕ ಏರಿಕೆಯಾಗಿದ್ದು, 81,721 ಕ್ಕೆ ಸ್ಥಿರವಾಗಿತ್ತು. ನಿಫ್ಟಿ 243 ಅಂಕ ಏರಿಕೆಯಾಗಿ 24,853ಕ್ಕೆ ಸ್ಥಿರವಾಗಿತ್ತು. ತಜ್ಞರ ಪ್ರಕಾರ ಬುಲ್ಸ್ ಕಂಬ್ಯಾಕ್ ಆಗಿದೆ. ನಿಫ್ಟಿಯ ಟ್ರೆಂಡ್ ಕೂಡ ಬುಲ್ಲಿಶ್ ಆಗಿದೆ. ನಿಫ್ಟಿಯ ಮುಂದಿನ ಟಾರ್ಗೆಟ್ 25,000 ಆಗಿದೆ. ನಿಫ್ಟಿಗೆ 24,500ರಲ್ಲಿ ತಕ್ಷಣದ ಸಪೋರ್ಟ್ ಲೆವೆಲ್ ಇದೆ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸೀನಿಯರ್ ಟೆಕ್ನಿಕಲ್ ರಿಸರ್ಚ್ ಅನಾಲಿಸ್ಟ್ ಆಗಿರುವ ನಾಗರಾಜ್ ಶೆಟ್ಟಿ ಅವರ ಪ್ರಕಾರ, ನಿಫ್ಟಿ 50 ಡೈಲಿ ಚಾರ್ಟ್, ಲಾಂಗ್ ಬುಲ್ ಕ್ಯಾಂಡಲ್ ಪ್ಯಾಟರ್ನ್ ಅನ್ನು ಬಿಂಬಿಸಿದೆ.
ಕೆಲವು ಪ್ರಮುಖ ಕಂಪನಿಗಳು ಕಳೆದ ಜನವರಿ-ಮಾರ್ಚ್ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿದ್ದು, ವಿವರ ಇಂತಿದೆ.
JSW STEEL LIMITED: ಜೆಎಸ್‌ಡಬ್ಲ್ಯು ಸ್ಟೀಲ್ q4 ರಿಸಲ್ಟ್ ಪ್ರಕಟಿಸಿದ್ದು, 1,503 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,299 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು. ಜೆಎಸ್‌ಡಬ್ಲ್ಯು ಸ್ಟೀಲ್ 4ನೇ ತ್ರೈಮಾಸಿಕದಲ್ಲಿ 44,819 ಕೋಟಿ ರುಪಾಯಿ ಆದಾಯ ಗಳಿಸಿದ್ದು, 3% ಇಳಿಕೆ ದಾಖಲಿಸಿದೆ. ಮುಂಬಯಿ ಮೂಲದ ಜಿಂದಾಲ್ ಸೌತ್ ವೆಸ್ಟ್ ಸ್ಟೀಲ್ ಲಿಮಿಟೆಡ್ ಅಥವಾ ಜೆಎಸ್‌ಡಬ್ಲ್ಯು ಸ್ಟೀಲ್, ದೇಶದ ಎರಡನೇ ಅತಿ ದೊಡ್ಡ ಖಾಸಗಿ ಉಕ್ಕು ಉತ್ಪಾದಕ ಕಂಪನಿಯಾಗಿದೆ. ಬಳ್ಳಾರಿ-ಹೊಸಪೇಟೆಯ ತೋರಣಗಲ್ಲಿನಲ್ಲಿ ಜೆಎಸ್‌ಡಬ್ಲ್ಯು ವಿಜಯನಗರ ಉಕ್ಕು ಉತ್ಪಾದನೆಯ ಘಟಕವನ್ನು ಹೊಂದಿದೆ. JSW Steel ಷೇರಿನ ಈಗಿನ ದರ 1009 ರುಪಾಯಿ ಆಗಿದೆ.
ASHOK LEYLAND: ಆಟೊಮೊಬೈಲ್ ವಯದ ಅಶೋಕ್ ಲೇಲ್ಯಾಂಡ್ ಕ್ಯೂ 4 ರಿಸಲ್ಟ್ ಪ್ರಕಟಿಸಿದ್ದು, 1,246 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 900 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು. ಕಂಪನಿಯ ಆದಾಯ 11,907 ಕೋಟಿ ರುಪಾಯಿಗೆ ಏರಿಕೆಯಾಗಿದೆ. ಪ್ರತಿ ಷೇರಿಗೆ 1 ಬೋನಸ್ ಷೇರು ನೀಡಲು ಕಂಪನಿ ಉದ್ದೇಶಿಸಿದೆ. ಅಶೋಕ್ ಲೇಲ್ಯಾಂಡ್ ಪ್ರತಿ ಷೇರಿನ ದರ 238/- ಆಗಿದೆ.
ಈ ಸುದ್ದಿಯನ್ನೂ ಓದಿ: ಟಾಟಾ-ಅಂಬಾನಿ ಮಾತ್ರವಲ್ಲ, ನಡೆಯುತ್ತಿದೆ ನವೋದ್ಯಮಗಳ ಕ್ರಾಂತಿ
ಭಾರತದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆಯೇ ಎಂದು ಅನೇಕ ಉದ್ಯಮಿಗಳು ಕೇಳುತ್ತಿದ್ದಾರೆ. ಏಕೆಂದರೆ ಕೋವಿಡ್ ಕೇವಲ ಆರೋಗ್ಯ ವಿಚಾರವಾಗಿ ಉಳಿದಿಲ್ಲ. ಇದು ನೇರವಾಗಿ ಉದ್ದಿಮೆ, ವಾಣಿಜ್ಯ ಚಟುವಟಿಕೆಗಳ ಮೇಲೆ ಕೂಡ ಪ್ರಭಾವ ಬೀರುತ್ತದೆ.
ವರದಿಗಳ ಪ್ರಕಾರ ಸಿಂಗಾಪುರ, ಹಾಂಕಾಂಗ್, ಚೀನಾದಲ್ಲಿ ಕೋವಿಡ್ ಕೇಸ್‌ಗಳು ಸಂಖ್ಯೆ ಹೆಚ್ಚುತ್ತಿದೆ. ಭಾರತದಲ್ಲೂ ಒಂದಷ್ಟು ಪ್ರಕರಣಗಳು ಮುಂಬಯಿ, ದಿಲ್ಲಿ, ಚೆನ್ನೈನಲ್ಲಿ ಪತ್ತೆಯಾಗಿವೆ. ಹೀಗಿದ್ದರೂ ಆರೋಗ್ಯ ತಜ್ಞರ ಪ್ರಕಾರ ಈಗ ಕಳವಳಪಡಬೇಕಾದ ಅಗತ್ಯ ಇಲ್ಲ. ಹೀಗಿದ್ದರೂ ಮುನ್ನೆಚ್ಚರ ಅಗತ್ಯ. ಭಾರತದ ಪಬ್ಲಿಕ್ ಹೆಲ್ತ್ ವಿಜಿಲೆನ್ಸ್ ಈಗ ಅತ್ಯುತ್ತಮವಾಗಿ ಇರುವುದರಿಂದ ಸಾರ್ವಜನಿಕರನ್ನು ಅಪ್ ಡೇಟ್ ಮಾಡುತ್ತಿದೆ.
ಕೇರಳ ಕರಾವಳಿಯನ್ನು ನೈಋತ್ಯ ಮುಂಗಾರು ಪ್ರವೇಶಿಸಿದ್ದು, ವಾಡಿಕೆಗಿಂತ ಒಂದು ವಾರ ಮೊದಲೇ ಪ್ರವೇಶಿಸಿದೆ. ಸಾಮಾನ್ಯವಾಗಿ ಜೂನ್ 1ಕ್ಕೆ ಪ್ರವೇಶಿಸುವ ಮುಂಗಾರು ಈ ಸಲ 2009ರ ಬಳಿಕ ಮೊದಲ ಬಾರಿಗೆ ಒಂದು ವಾರ ಮೊದಲೇ ಬಂದಿದೆ. ಈ ವರ್ಷ ಉತ್ತಮ ಮುಂಗಾರು ಮಳೆ ನಿರೀಕ್ಷಿಸಲಾಗಿದೆ. ಒಳ್ಳೆಯ ಮಳೆ-ಬೆಳೆ ಆದರೆ ಗ್ರಾಮಾಂತರ ಪ್ರದೇಶದ ಆರ್ಥಿಕ ಚಟುವಟಕೆಗಳೂ ಸಕ್ರಿಯವಾಗುತ್ತವೆ. ಹಣದುಬ್ಬರ ಇಳಿಕೆಗೂ ಸಹಕಾರಿಯಾಗುತ್ತದೆ. ಹೀಗಾಗಿ ಮಳೆಗೂ, ಆರ್ಥಿಕತೆಗೂ ಸಂಬಂಧ ಇದ್ದೇ ಇದೆ.
ಅಮೆರಿಕದ ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಕಂಪನಿಯು ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆಯನ್ನು ನೀಡಲು ಉದ್ದೇಶಿಸಿದೆ. ಪ್ರತಿ ತಿಂಗಳು 10 ಡಾಲರ್ ವೆಚ್ಚದಲ್ಲಿ ನಿರಂತರ ಇಂಟರ್ ನೆಟ್ ಸೇವೆ ಒದಗಿಸಲು ಮುಂದಾಗಿದೆ ಎಂದು ಇಕನಾಮಿಕ್ ಟೈಮ್ಸ್ ವರದಿ ತಿಳಿಸಿದೆ. ಅಂದರೆ ತಿಂಗಳಿಗೆ 840 ರುಪಾಯಿಗೆ ಸಿಗಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಸಕ್ತ ಸಾಲಿನಲ್ಲಿ ಸರಕಾರಕ್ಕೆ ದಾಖಲೆಯ 2 ಲಕ್ಷದ 70 ಸಾವಿರ ಕೋಟಿ ರುಪಾಯಿ ಡಿವಿಡೆಂಡ್ ಅನ್ನು ನೀಡಲಿದೆ. ಡಾಲರ್ ಮಾರಾಟ, ವಿದೇಶಿ ವಿನಿಮಯ ಸಂಗ್ರಹದ ಲಾಭ, ಬಡ್ಡಿ ಆದಾಯದ ಹೆಚ್ಚಳದಿಂದ ಆರ್‌ಬಿಐಗೆ ಇದು ಸಾಧ್ಯವಾಗಿದೆ.
ಹಾಗಾದರೆ ಆರ್‌ಬಿಐ ಲಾಭ ಗಳಿಸುತ್ತದೆಯೇ ಎಂದು ನೀವು ಕೇಳಬಹುದು. ವಾಸ್ತವವಾಗಿ ಆರ್‌ಬಿಐನ ಗುರಿ ಲಾಭ ಗಳಿಸುವುದಲ್ಲ. ಆರ್ಥಿಕತೆಯನ್ನು ಸ್ಥಿರವಾಗಿಡುವುದು, ಬ್ಯಾಲೆನ್ಸ್ ತಪ್ಪದಂತೆ ಸಹಕರಿಸುವುದು, ಬ್ಯಾಂಕಿಂಗ್ ವಲಯದ ಆರೋಗ್ಯ ವಿಚಾರಿಸುವುದು, ಹಣದುಬ್ಬರ ನಿಯಂತ್ರಣಕ್ಕೆ ಸಹಕರಿಸುವುದು ಆರ್‌ಬಿಐ ಕೆಲಸ. ಅದು ನೋಟುಗಳನ್ನೂ ಮುದ್ರಿಸುತ್ತದೆ. ದೇಶದ ವಿದೇಶಿ ವಿನಿಮಯ ಸಂಗ್ರಹವನ್ನೂ ನಿರ್ವಹಿಸುತ್ತದೆ. ಈ ಚಟುವಟಿಕೆಗಳಲ್ಲಿ ಆರ್‌ಬಿಐಗೆ ಹೆಚ್ಚುವರಿ ಹಣ ಸಂಗ್ರಹವಾಗುತ್ತದೆ. ಅದನ್ನು ಡಿವಿಡೆಂಡ್ ರೂಪದಲ್ಲಿ ಸರಕಾರಕ್ಕೆ ಆರ್‌ಇಐ ಸಲ್ಲಿಸುತ್ತದೆ.
ಕೊನೆಯದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಲ್ಲಿ ತಯಾರಾಗಿ ಅಮೆರಿಕದಲ್ಲಿ ಮಾರಾಟವಾಗುವ ಆಪಲ್ ಐಫೋನ್‌ಗಳ ಮೇಲೆ 25% ತೆರಿಗೆ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಸ್ವಾರಸ್ಯವೆಂದರೆ ಇಕನಾಮಕ್ ಟೈಮ್ಸ್ ಪ್ರಕಾರ, ಟ್ರಂಪ್ 25% ತೆರಿಗೆ ಹಾಕಿದರೂ, ಅಮೆರಿಕದಲ್ಲಿ ಭಾರತದಲ್ಲಿ ತಯಾರಾಗುವ ಐಫೋನ್ ದರ ಅಗ್ಗವಾಗಿಯೇ ಮಾರಾಟವಾಗಲಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನೀಶಿಯೇಟಿವ್ ಸಂಸ್ಥೆಯ ವರದಿ ತಿಳಿಸಿದೆ.