Thursday, 19th September 2024

ಭಾರತ, ಆಸ್ಟ್ರೇಲಿಯಾ ನಡುವೆ ಏಳು ಒಪ್ಪಂದಗಳಿಗೆ ಸಹಿ

ಕೋವಿಡ್ -19 ತಡೆಗೆ ವೈದ್ಯಕೀಯ ಸಂಶೋಧನೆ ವಿನಿಮಯಕ್ಕೆ ಒಪ್ಪಿಗೆ
ದೆಹಲಿ,- ಕೊವಿಡ್‍-19ರಿಂದ ಎದುರಾಗುವ ಆರ್ಥಿಕ ಪರಿಣಾಮಗಳನ್ನು ನಿರ್ವಹಿಸಲು, ಭವಿಷ್ಯದ ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಜನರ ಜೀವ ಉಳಿಸುವ ಜಾಗತಿಕ ಸಹಕಾರದ ಮಹತ್ವವನ್ನು ಮನಗಂಡಿರುವ  ಭಾರತ ಮತ್ತು ಆಸ್ಟ್ರೇಲಿಯಾ, ಗುರುವಾರ ವೈಜ್ಞಾನಿಕ ಮತ್ತು ವೈದ್ಯಕೀಯ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಯೋಜನಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಜಾಗತಿಕ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಆರೋಗ್ಯ ರಕ್ಷಣೆ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಬಲಪಡಿಸಲು ನಿರ್ಧರಿಸಿವೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ ಕುರಿತ ಜಂಟಿ ಹೇಳಿಕೆಯನ್ನು ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ನಡುವೆ ಗುರುವಾರ ನಡೆದ ಭಾರತ-ಆಸ್ಟ್ರೇಲಿಯಾ ನಾಯಕರ ವರ್ಚ್ಯುಯಲ್‍ ಶೃಂಗಸಭೆಯ ನಂತರ ಬಿಡುಗಡೆ ಮಾಡಲಾಯಿತು.

12 ಅಂಶಗಳ ಜಂಟಿ ಹೇಳಿಕೆಯು ಭಯೋತ್ಪಾದನೆ ವಿರುದ್ಧ ಹೋರಾಡುವಲ್ಲಿ ಉಭಯ ದೇಶಗಳ ನಡುವಿನ ಸಹಕಾರವನ್ನು ಹೆಚ್ಚಿಸುವುದು, ರಕ್ಷಣಾ ಮತ್ತು ಸಾಗರ ವಲಯದಲ್ಲಿ ಸಹಕಾರವನ್ನು ಹೆಚ್ಚಿಸುವುದು, ಜನರ ನಡುವೆ ಸಂಪರ್ಕವನ್ನು ಬಲಪಡಿಸುವುದು ಮತ್ತು ಆರ್ಥಿಕ ಸಹಕಾರವನ್ನು ಹೆಚ್ಚಿಸುವುದನ್ನು ಒಳಗೊಂಡಿದೆ.
ವರ್ಚುವಲ್ ಶೃಂಗಸಭೆಯ ನಂತರ, ಭಾರತ ಮತ್ತು ಆಸ್ಟ್ರೇಲಿಯಾ  ಸೈಬರ್ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣೆ, ಪರಸ್ಪರ ಸಾರಿಗೆ ಸಹಕಾರ ಮತ್ತು ಜಲ ಸಂಪನ್ಮೂಲ ನಿರ್ವಹಣೆ, ಸಾರ್ವಜನಿಕ ಆಡಳಿತ ಹಾಗೂ ಆಡಳಿತ ಸುಧಾರಣೆ ವಲಯಗಳಲ್ಲಿ ಏಳು ಒಪ್ಪಂದಗಳಿಗೆ ಸಹಿ ಹಾಕಿವೆ.

ಕೊವಿಡ್‍-19 ಸೋಂಕು ತಡೆಗೆ ಇಡೀ ವಿಶ್ವ ಹೋರಾಡುತ್ತಿರುವ ಸಂದರ್ಭದಲ್ಲಿ , ಸಾಂಕ್ರಾಮಿಕ ರೋಗವನ್ನು ತಡೆಯುವಲ್ಲಿ ಸನ್ನದ್ಧತೆಯ ಸಾಮರ್ಥ್ಯ ಸುಧಾರಿಸಲು ಕೊವಿಡ್-19ಕ್ಕೆ ಅಂತಾರಾಷ್ಟ್ರೀಯ ಆರೋಗ್ಯ ನಿರ್ವಹಣೆಯ ಸ್ವತಂತ್ರ ಮತ್ತು ಸಮಗ್ರ ಮೌಲ್ಯಮಾಪನದ ಶಿಫಾರಸುಗಳನ್ನು ಮಾಡಲು ಉಭಯ ದೇಶಗಳು ಒಪ್ಪಿವೆ.
ತಮ್ಮ ದೇಶಗಳಲ್ಲಿ ಕೊವಿಡ್‍-19 ತಡೆ ನಿರ್ವಹಣೆ ಕಾರ್ಯಗಳನ್ನು ಬೆಂಬಲಿಸಲು ಭಾರತ ಮತ್ತು ಆಸ್ಟ್ರೇಲಿಯಾ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆಗಳ ಸಹಯೋಗವನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿವೆ.

‘ನಾವು ಕೊವಿಡ್‍-19 ಕ್ಕೆ ಪ್ರತಿಕ್ರಿಯಿಸಲು ಮತ್ತು ಚಿಕಿತ್ಸೆ ಒದಗಿಸಲು ನವೀನ ಪರಿಹಾರಗಳನ್ನು ಉತ್ತೇಜಿಸುವುದಕ್ಕೆ ಆಸ್ಟ್ರೇಲಿಯಾ – ಭಾರತ ಕಾರ್ಯತಂತ್ರ ಸಂಶೋಧನಾ ನಿಧಿ ಪ್ರೋತ್ಸಾಹಕ್ಕೆ ಬದ್ಧರಾಗಿದ್ದೇವೆ.’ ಎಂದು  ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆರೋಗ್ಯ, ತಂತ್ರಜ್ಞಾನ ಮತ್ತು ಇತರ ಸರಕು ಮತ್ತು ಸೇವೆಗಳಿಗೆ ಪೂರೈಕೆ ಸರಪಳಿಗಳನ್ನು ಬಲಪಡಿಸಲು ಬಹುಪಕ್ಷೀಯ, ಪ್ರಾದೇಶಿಕ ಮತ್ತು ಬಹುಪಕ್ಷೀಯ ಕಾರ್ಯವಿಧಾನಗಳ ಮೂಲಕ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಉಭಯ ದೇಶಗಳು ಒಪ್ಪಿವೆ.

Leave a Reply

Your email address will not be published. Required fields are marked *