Wednesday, 23rd October 2024

#Budget2020: ಸೋಲಾರ್‌ ರೈತ, ರೈಲ್‌ ಕಿಸಾನ್‌, ಸಾಗರಮಿತ್ರ….. ಕೃಷಿ ಕ್ಷೇತ್ರಕ್ಕೆ16 ಅಂಶಗಳ ಕ್ರಿಯಾಯೋಜನೆ

2022ರ ವೇಳೇಗೆ ರೈತರ ಆದಾಯ ದುಪ್ಪಟ್ಟು ಮಾಡುವ ಮಾತುಗಳನ್ನಾಡುತ್ತಿರುವ ಕೇಂದ್ರ ಸರ್ಕಾರದ ಆಶಯಗಳನ್ನು ಪ್ರತಿಧ್ವನಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಕ್ಷೇತ್ರ ಹಾಗೂ ರೈತರ ಪುನಶ್ಚೇತನಕ್ಕೆಂದು 16 ಅಂಶಗಳ ಯೋಜನೆಯೊಂದನ್ನು ಮುಂದಿಟ್ಟಿದ್ದಾರೆ.

ಇದಕ್ಕೆಂದು ತರಲಾದ ಮೂರು ಮಾದರಿ ಕಾನೂನುಗಳನ್ನು — ಮಾದರಿ ಕೃಷಿ ಮತ್ತು ಭೂ ಗುತ್ತಿಗೆ ಕಾಯಿದೆ, 2016; APMC, 2017 ಮತ್ತು ಕಾಂಟ್ರಾಕ್ಟ್ ಕೃಷಿ , 2018 — ಅನುಷ್ಠಾನಕ್ಕೆ ತರಲು ಇಚ್ಛಿಸುವ ರಾಜ್ಯ ಸರ್ಕಾರಗಳಿಗೆ ಉತ್ತೇಜನ ನೀಡುವುದಾಗಿ ಸೀತಾರಾಮನ್ ತಿಳಿಸಿದ್ದಾರೆ.

ಈ 16 ಅಂಶಗಳು ಇಂತಿವೆ:

1. ಗೊಬ್ಬರದ ಸರಿಯಾದ ಬಳಕೆ ಹಾಗೂ ನೀರಿನ ಮಿತವ್ಯಯದೊಂದಿಗೆ ರಸಗೊಬ್ಬರಗಳ ಸಮತೋಲಿತ ಬಳಕೆ ಕುರಿತಂತೆ ರೈತಿರಗೆ ನೆರವಾಗಲು ಸರ್ಕಾರ ಪ್ರಸ್ತಾವನೆ ಮುಂದಿಟ್ಟಿದೆ.

2. ದೇಶಾದ್ಯಂತ ಇರುವ 100 ಬರಪೀಡಿತ ಜಿಲ್ಲೆಗಳಿಗೆ ಸಮಗ್ರ ಯೋಜನೆ.

3. ’ಅನ್ನದಾತ’ ಯೋಜನೆಯನ್ನು ವಿಸ್ತರಿಸುವ ಮೂಲಕ, ’ಊರ್ಜದಾತ’ ಯೋಜನೆಯನ್ನೂ ಇದರ ವ್ಯಾಪ್ತಿಗೆ ತಂದು, ರೈತರ ಪಂಪ್‌ಸೆಟ್‌ಗಳನ್ನು ಸೋಲಾರ್‌ ಗ್ರಿಡ್‌ನೊಂದಿಗೆ ಸಂಪರ್ಕಿಸಲು ಕ್ರಮ. ಬಂಜರು ಹಾಗೂ ಬರಪೀಡಿತ ಜಮೀನುಗಳನ್ನು ಹೊಂದಿರುವ ರೈತರು ತಮ್ಮ ಭೂಮಿಯಲ್ಲಿ ಸೋಲಾರ್‌ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಅಳವಡಿಸಿ, ಉತ್ಪಾದನೆಯಾದ ವಿದ್ಯುತ್‌ಅನ್ನು ಗ್ರಿಡ್‌ಗಳಿಗೆ ಮಾರಾಟ ಮಾಡಬಹುದಾಗಿದೆ.

4. ಪ್ರಧಾನ ಮಂತ್ರಿ ಕುಸುಮ ಸೋಲಾರ್‌ ಯೋಜನೆಯ ವಿಸ್ತರಣೆಯ ಮೂಲಕ 20 ಲಕ್ಷ ರೈತರಿಗೆ ನೆರವು.

5. ರಾಷ್ಟ್ರೀಯ ಕೃಷಿ & ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ಪ್ರಾಯೋಜಿತ ಕಾರ್ಯಕ್ರಮವೊಂದರಲ್ಲಿ, ದೇಶಾದ್ಯಂತ ಇರುವ ಗೋದಾಮುಗಳನ್ನು ಮ್ಯಾಪ್‌ಗಳ ಮೇಲೆ ಜಿಯೋಟ್ಯಾಗಿಂಗ್ ಮೂಲಕ ಗುರುತಿಸಿ ಹೊಸ ಗೋದಾಮುಗಳ ಸ್ಥಾಪನೆಗೆ ಕ್ರಮ.

6. ಗ್ರಾಮೀಣ ಪ್ರದೇಶಗಳಲ್ಲಿರುವ ಮಹಿಳೆಯರಿಗೆ ನೆರವಾಗಲು, ಮಹಿಳಾ ಸ್ವಸಹಾಯ ಗುಂಪುಗಳಿಗೆ ಗ್ರಾಮ ದಾಸ್ತಾನು ಯೋಜನೆಗಳಲ್ಲಿ ಭಾಗಿಯಾಗಲು ಪ್ರೋತ್ಸಾಹ. ಇದಕ್ಕಾಗಿ ಮುದ್ರಾ ಹಾಗೂ ನಬಾರ್ಡ್ ನೆರವನ್ನು, ‘ಧಾನ್ಯಲಕ್ಷ್ಮೀ’ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳು ಪಡೆದುಕೊಳ್ಳಬಹುದಾಗಿದೆ.

7. ರಾಷ್ಟ್ರಾದ್ಯಂತ ಶೀತಲ ಸಂಗ್ರಹಣನೆಯನ್ನು ಅಬಾಧಿತವಾಗಿ ಒದಗಿಸಲು ರೈಲ್ವೇ ಇಲಾಖೆ ಮೂಲಕ ಕಿಸಾನ್ ರೈಲು ಯೋಜನೆಗೆ ಚಾಲನೆ. ಹಾಲು ಹಾಗೂ ಇನ್ನಿತರ ಆಹಾರ ಸಾಮಗ್ರಿಗಳ ಸಾಗಾಟಕ್ಕಾಗಿ ಶೀತಲ ಸಂಸ್ಕರಣೆ ಸೌಲಭ್ಯವಿರುವ ಕೋಚ್‌ಗಳ ಪ್ರಾರಂಭ.

8. ತೋಟಗಾರಿಕಾ ಉತ್ಪಾದನೆಯು ನಿರೀಕ್ಷೆಗಿಂತಲೂ ಹೆಚ್ಚಿದ್ದು, 311 ದಶಲಕ್ಷ ಮೆಟ್ರಿಕ್ ಟನ್‌ನಷ್ಟು ಆಹಾರ ಧಾನ್ಯಗಳನ್ನು ಉತ್ಪಾದಿಸಿದೆ. ರಾಜ್ಯ ಸರ್ಕಾರದ ಉತ್ತೇಜನದಿಂದ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಬೆಳೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರಗಳೊಂದಿಗೆ ಜಂಟಿ ನೆರವು.

9. ಮಳೆ ಚೆನ್ನಾಗಿ ಆಗುವ ಪ್ರದೇಶಗಳಲ್ಲಿ ಸೋಲಾರ್‌ ಶಕ್ತಿ, ಜೇನು ಸಾಕಣೆಯಂಥ ಚಟುವಟಿಕೆಗಳನ್ನು, ವ್ಯವಸಾಯದ ಚಟುವಟಿಕೆ ಇಲ್ಲದ ಕಾಲದಲ್ಲಿ ನಡೆಸಲು ಉತ್ತೇಜನ.

10. ಆನ್ಲೈನ್ ಸಾವಯವ ಮಾರುಕಟ್ಟೆಗೆ ಇನ್ನಷ್ಟು ಬಲ.

11. 2025ರ ವೇಳೆಗೆ ಕ್ಷೀರ ಸಂಸ್ಕರಣಾ ಸಾಮರ್ಥ್ಯವನ್ನು 108 ದಶಲಕ್ಷ ಟನ್‌ಗಳಿಗೆ ಏರಿಕೆ ಮಾಡುವ ಉದ್ದೇಶ.

12. 2021-22ರ ವೇಳೆಗೆ ಮೀನುಗಾರಿಕಾ ಉತ್ಪಾದನೆಯನ್ನು 200 ಲಕ್ಷ ಟನ್‌ಗಳಿಗೆ ಏರಿಕೆ ಮಾಡುವ ಗುರಿ.

13. 2021ರ ವೇಳೆಗೆ 15 ಲಕ್ಷ ಕೋಟಿ ರೂಗಳ ಕೃಷಿ ಸಾಲ ವಿತರಣೆಯ ಗುರಿ.

14. 2025ರ ಒಳಗೆ ಜಾನುವಾರುಗಳಿಗೆ ಬಾಧಿಸುತ್ತಿರುವ ಕಾಲು ಬಾಯಿ ಹಾಗೂ ಬ್ರುಸ್ಸೆಲ್ಲಾಸಿಸ್‌ ರೋಗಗಳನ್ನು ನಿರ್ಮೂಲನೆ ಮಾಡುವ ಗುರಿ.

15. ಆಲ್ಗೇ ಹಾಗೂ ಸಮುದ್ರಕಳೆಯ ಕೃಷಿಗೆ ಉತ್ತೇಜನ.

16. ಮೀನುಗಾರಿಕಾ ಕ್ಷೇತ್ರದಲ್ಲಿ ಯುವಕರನ್ನು ಒಳಗೊಳ್ಳಲು ’ಸಾಗರ ಮಿತ್ರ’ ಅಭಿಯಾನ. ಈ ಮೂಲಕ 500 ಮೀನುಗಾರಿಕಾ ಉತ್ಪಾದಕರ ಸಂಘಟನೆಗಳ ಸ್ಥಾಪನೆಗೆ ಉತ್ತೇಜನ.