ಹೈದರಾಬಾದ್: ತೆಲಂಗಾಣದ ಜುಬ್ಲಿ ಹಿಲ್ಸ್ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರೊಂದಿಗೆ ಆಟವಾಡಿ, ಆದರೆ ಮತ ಹಾಕಬೇಡಿ ಎಂದು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ.ರಾಮ ರಾವ್ ಕರೆ ನೀಡಿದ್ದಾರೆ.
ಮರು ಆಯ್ಕೆ ಬಯಸಿರುವ ಬಿಆರ್‌ಎಸ್ ಶಾಸಕ ಮಗಂತಿ ಗೋಪಿನಾಥ್ ಪರ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಭಾಗವಹಿಸಿದ ಕೆ.ಟಿ.ರಾಮ ರಾವ್ (ಕೆಟಿಆರ್), ಅಜರುದ್ದೀನ್ ನಿಮ್ಮ ಮನೆ ಹತ್ತಿರ ಬಂದರೆ, ನಿಮ್ಮ ಮಕ್ಕಳನ್ನು ಅವರೊಂದಿಗೆ ಕ್ರಿಕೆಟ್ ಆಡಲು ಬಿಡಿ. ಆದರೆ, ಗೋಪಿನಾಥ್‌ಗೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ.
ಕ್ಷೇತ್ರದ ಏರಿಯಾಗಳಲ್ಲಿ ಅಜರ್ ಈ ಹಿಂದೆ ಎಂದಾದರೂ ಕಾಣಿಸಿಕೊಂಡಿದ್ದರೇ? ಎಂದು ಪ್ರಶ್ನಿಸಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ಅಜರುದ್ದೀನ್ ಅವರು ಕ್ಷೇತ್ರದಿಂದ ನಾಪತ್ತೆಯಾಗುತ್ತಾರೆ ಎಂದಿರುವ ಕೆಟಿಆರ್, ಚುನಾವಣೆ ಮುಗಿದ ಬಳಿಕ ಅವರು ಮತ್ತೆ ಇಲ್ಲಿ ಕಾಣಿಸಿಕೊಳ್ಳುತ್ತಾರೆಯೇ?’ ಎಂದು ಕೇಳಿದ್ದಾರೆ.
ಅಜರುದ್ದೀನ್ ಈ ಹಿಂದೆ ಉತ್ತರ ಪ್ರದೇಶದ ಮೊರಾದಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಚುನಾವಣೆ ಮುಗಿದ ಬಳಿಕ ಮತ್ತೆ ಆ ಕಡೆ ತಿರುಗಿ ನೋಡಲಿಲ್ಲ. ಜುಬ್ಲಿ ಹಿಲ್ಸ್‌ನಲ್ಲೂ ಹಾಗೆಯೇ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಕ್ರೀಡಾಪಟುಗಳು, ಸಿನಿಮಾ ನಟರು ಕೆಲಸ ಮಾಡುವುದಿಲ್ಲ. ಗೋಪಿನಾಥ್ ಅವರಂತಹ ಸಾಮಾನ್ಯರು ಜನರಿಗಾಗಿ ದುಡಿಯುತ್ತಾರೆ ಎಂದಿರುವ ಕೆಟಿಆರ್, ‘ನಾವೂ ಅಜರುದ್ದೀನ್ ಅವರ ಅಭಿಮಾನಿಗಳು. ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ. ಆದರೆ, ಶ್ರೇಷ್ಠ ರಾಜಕಾರಣಿಯಲ್ಲ’ ಎಂದು ಟೀಕಿಸಿದ್ದಾರೆ.
‘ಜನರು ಕಾಂಗ್ರೆಸ್‌ಗೆ 11 ಅವಕಾಶಗಳನ್ನು ನೀಡಿದ್ದರು. ಆದರೂ ಆ ಪಕ್ಷ ದ್ರೋಹ ಮಾಡಿತು. ಅಲ್ಪಸಂಖ್ಯಾತರು ಬಡವರಾಗಿಯೇ ಉಳಿದಿರುವುದಕ್ಕೆ ಕಾಂಗ್ರೆಸ್ ಕಾರಣ’ ಎಂದು ದೂರಿದ್ದಾರೆ.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.