Monday, 16th September 2024

ಭೀಮಾ ಕೋರೆಗಾಂವ್‌ ಪ್ರಕರಣ: ಮಾ.3ರಂದು ನವಲಖಾ ಜಾಮೀನು ಅರ್ಜಿ ವಿಚಾರಣೆ

ನವದೆಹಲಿ: ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ ಗೌತಮ್‌ ನವಲಖಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಬುಧವಾರ ನಿಗದಿ ಮಾಡಿದೆ.

ಫೆ.8 ರಂದು ಬಾಂಬೆ ಹೈಕೋರ್ಟ್, ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಫೆ.19 ರಂದು ನವಲಖಾ, ಕೋರ್ಟ್‌ ಮೊರೆ ಹೋಗಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಯು.ಯು ಲಲಿತ, ಇಂದಿರಾ ಬ್ಯಾನರ್ಜಿ ಮತ್ತು ಕೆ.ಎಂ ಜೋಸೆಫ್‌ ಅವರ ಪೀಠವು ನವಲಖಾ ಅವರ ಅರ್ಜಿ ವಿಚಾರಣೆಯನ್ನು ಮಾರ್ಚ್‌ 3 ರಂದು ನಡೆಸುವುದಾಗಿ ಹೇಳಿದೆ.

ಎಲ್ಗಾರ್‌ ಪರಿಷದ್‌-ಮಾವೊ ನಡುವೆ ಸಂಪರ್ಕ ಇದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನವಲಖಾ ಅವರನ್ನು ಬಂಧಿಸ ಲಾಗಿತ್ತು. ಡಿಸೆಂಬರ್‌ 31, 2017ರಲ್ಲಿ ಪುಣೆಯಲ್ಲಿ ನಡೆದ ಎಲ್ಗಾರ್‌ ಪರಿಷದ್‌ ಸಭೆಯಲ್ಲಿ ಹೋರಾಟಗಾರರೊಬ್ಬರು ಮಾಡಿದ ಭಾಷಣವು ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಪ್ರಚೋದನೆ ನೀಡಿತ್ತು. ಇದು ಮಾವೋವಾದಿಗಳ ಬೆಂಬಲಿತ ಸಭೆಯಾಗಿತ್ತು ಎಂಬುದಾಗಿ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ತನಿಖೆ ನಡೆಸುತ್ತಿರುವ ಎನ್‌ಐಎ, ಹೋರಾಟಗಾರ ಗೌತಮ್‌ ಅನ್ನು ಬಂಧಿಸಿತ್ತು.

ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸದೆ ತನ್ನನ್ನು 90 ದಿನಗಳ ಕಾಲ ಬಂಧನದಲ್ಲಿಡಲಾಗಿದೆ. ಹಾಗಾಗಿ ತನಗೆ ಶಾಸನಬದ್ಧ ಜಾಮೀನು ನೀಡಬೇಕು ಎಂದು ಎನ್‌ಐಎನ ವಿಶೇಷ ನ್ಯಾಯಾಲಯಕ್ಕೆ ಗೌತಮ್‌ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ತಿರಸ್ಕರಿಸಿತ್ತು. ಅಲ್ಲದೆ ಎನ್‌ಐಎ ಮನವಿ ಮೇರೆಗೆ ಚಾರ್ಜ್‌ಶೀಟ್‌ ಅನ್ನು ಸಲ್ಲಿಸಲು 90-180 ದಿನಗಳ ಸಮಯಾವಕಾಶವನ್ನು ನೀಡಿತ್ತು.

ಹಾಗಾಗಿ ಎನ್‌ಐಎ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಗೌತಮ್‌, ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ ಬಾಂಬೆ ಹೈಕೋರ್ಟ್‌ ಕೂಡ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.

Leave a Reply

Your email address will not be published. Required fields are marked *