Friday, 13th December 2024

ಪ್ರತಿಭಟನಾ ನಿರತ ಪ್ರಯಾಣಿಕರ ಮೇಲೆ ಹಲ್ಲೆ ಆರೋಪ: ಪ್ರಕರಣ ದಾಖಲು

ಚೆನ್ನೈ: ಮಧುರೈ ವಿಮಾನ ನಿಲ್ದಾಣದಲ್ಲಿ ಪ್ರತಿಭಟನಾ ನಿರತ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಎಐಎಡಿಎಂಕೆ ಶಾಸಕ ಪಿಆರ್ ಸೆಂಥಿಲ್ನಾಥನ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.

ಎಡಪ್ಪಾಡಿ ಪಳನಿಸ್ವಾಮಿ ಅವರು ಶಿವಗಂಗೈನಲ್ಲಿ ನಡೆದ ಎಐಎಡಿಎಂಕೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಚೆನ್ನೈ ವಿಮಾನ ನಿಲ್ದಾಣದಿಂದ ಮಧುರೈಗೆ ತೆರಳುತ್ತಿದ್ದರು. ಈ ವೇಳೆ, ಪಳನಿಸ್ವಾಮಿ ಅವರ ಜೊತೆ ಪ್ರಯಾಣಿಸು ತ್ತಿರುವುದಾಗಿ ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ಲೈವ್ ಮಾಡಿದ್ದಾನೆ. ಈ ವೇಳೆ ವ್ಯಕ್ತಿ ಅವರ ವಿರುದ್ಧ ಘೋಷಣೆ ಕೂಗಿದ್ದಾನೆ.

ʻತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತರಾಗಿದ್ದ ವಿ.ಕೆ.ಶಶಿಕಲಾ ಅವರಿಗೆ ಪಳನಿ ಸ್ವಾಮಿ ಅವರು ದ್ರೋಹ ಮಾಡಿದ್ದಾರೆʼ ಎಂದು ವ್ಯಕ್ತಿ ಆರೋಪಿಸಿದ್ದಾರೆ.

ಇದಾದ ಬೆನ್ನಲ್ಲೇ ಪಳನಿಸ್ವಾಮಿ ಅವರ ಅಂಗರಕ್ಷಕರು ಫೇಸ್‌ಬುಕ್‌ನಲ್ಲಿ ಲೈವ್‌ನಲ್ಲಿ ಹಾಗೂ ಪಳನಿಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ವ್ಯಕ್ತಿಯ ಸೆಲ್ ಫೋನ್ ಕಿತ್ತುಕೊಂಡು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ವಿಮಾನ ನಿಲ್ದಾಣದ ಪೊಲೀಸರ ತನಿಖೆಯಲ್ಲಿ, ವ್ಯಕ್ತಿ ಸಿಂಗಾಪುರದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

ವಿಮಾನ ನಿಲ್ದಾಣದಿಂದ ಫೇಸ್‌ಬುಕ್ ಲೈವ್ ಸ್ಟ್ರೀಮ್ ಅನ್ನು ಶೇರ್ ಮಾಡಿದ ಆರೋಪದ ಮೇಲೆ ಪ್ರಯಾಣಿಕನನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ.