ಲಕ್ನೋ: ಕರೋನಾ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯಗಳು ಕಟ್ಟುನಿಟ್ಟಿನ ಲಾಕ್ಡೌನ್ ಘೋಷಣೆ ಮಾಡಿವೆ.
ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಪೊಲೀಸ್ ಇಲಾಖೆ ಸಿಬ್ಬಂದಿ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ಅನೇಕ ರಾಜ್ಯಗಳಲ್ಲಿ ವರದಿಯಾಗಿದೆ. ಇದೇ ರೀತಿ 17 ವರ್ಷದ ಯುವಕನನ್ನು ಪೊಲೀಸರು ಲಾಠಿಯಿಂದ ಥಳಿಸಿದ ಹಿನ್ನಲೆ ಆತ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಮತ್ತು ಒಬ್ಬರು ಹೋಮ್ಗಾರ್ಡ್ ಅನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಲಕ್ನೋದ ಬಟ್ಪುರಿ ಪ್ರದೇಶದ ಬಂಗರ್ಮನ್ ನಲ್ಲಿ ಯುವಕ ಮನೆ ಮುಂದೆ ತರಕಾರಿ ಮಾರಾಟ ಮಾಡುತ್ತಿದ್ದ. ಈ ವೇಳೆ ಕರೋನಾ ಕರ್ಫ್ಯೂ ನಿಯಮ ಉಲ್ಲಂಘಿಸಿದ ಎಂದು ಪೊಲೀಸರು ಹಲ್ಲೆ ನಡೆಸಿದ್ದರು. ಬಳಿಕ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಈ ವೇಳೆ ಆತನ ಆರೋಗ್ಯ ಗಂಭೀರಗೊಂಡಿದೆ. ಅನಾರೋಗ್ಯಗೊಂಡ ಆತನನ್ನು ತಕ್ಷಣಕ್ಕೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪೊಲೀಸರ ಈ ದುರ್ವತನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಲಕ್ನೋದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಪ್ರಕರಣ ಸಂಬಂಧ ಕಾನ್ಸಟೇಬಲ್ ವಿಜಯ್ ಚೌಧರಿಯನ್ನು ತಕ್ಷಣಕ್ಕೆ ಅಮಾನತು ಮಾಡಲಾಗಿದೆ.
ಕಳೆದೆರಡು ದಿನಗಳ ಹಿಂದೆ ಮಧ್ಯ ಪ್ರದೇಶದಲ್ಲಿ ಕೂಡ ಮಾಸ್ಕ್ ಹಾಕಿಲ್ಲ ಎಂಬ ಒಂದೇ ಕಾರಣಕ್ಕೆ ಮಹಿಳೆಯ ಮೇಲೆ ಅಮಾನುಷವಾಗಿ ನಡುರಸ್ತೆಯಲ್ಲಿ ಪೊಲೀಸರು ಎಳೆದಾಡಿರುವ ಘಟನೆ ನಡೆದಿತ್ತು.