Thursday, 19th September 2024

ರೈತರ ಪ್ರತಿಭಟನೆ: ಹಿಂಸಾಚಾರದ ರೂವಾರಿ ಪಂಜಾಬಿ ಗಾಯಕ, ನಟ ದೀಪ್​ ಸಿಧು ?

ನವದೆಹಲಿ: ಗಣರಾಜ್ಯೋತ್ಸವ ದಿನ ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಲು ಕಾರಣ ಪಂಜಾಬಿ ಗಾಯಕ ಹಾಗೂ ನಟ ದೀಪ್​ ಸಿಧು ಎಂದು ಆರೋಪ ಕೇಳಿ ಬಂದಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಸಿಖ್​ ಧರ್ಮದ ನಿಶಾನ್​ ಸಾಹಿಬ್​ ಆರೋಹಣ ಮಾಡುವ ಮೂಲಕ ದೇಶದ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ದೆಹಲಿಯ ಕೆಂಪು ಕೋಟೆಯಲ್ಲಿ ನಾವು ನಡೆಸುತ್ತಿದ್ದ ಆಂದೋಲನವನ್ನು ದೀಪ್​ ಸಿಧು ಹಿಂಸಾಚಾರಕ್ಕೆ ತಿರುಗಿಸಿದ್ದಾರೆ. ಆದರೆ ಸಿಧು ಯಾರ ಪರವಾಗಿ ಈ ಕೆಲಸ ಮಾಡಿದ್ದಾರೆ ಅನ್ನೋದೇ ತಿಳಿದಿಲ್ಲ ಎಂದು ಭಾರತೀಯ ಕಿಸಾನ್​ ಸಂಘದ ಜೋಗಿಂದರ್​ ಸಿಂಗ್​ ಉಗ್ರಾಹನ್​ ಹೇಳಿದ್ದಾರೆ. ವಿಡಿಯೋಗಳಲ್ಲಿ ದೀಪ್​ ಸಿಧು ಖಲ್ಸಾ ಧ್ವಜವನ್ನ ಹಿಡಿದು ನಿಂತಿರುವುದು ಹಾಗೂ ಕೆಂಪು ಕೋಟೆಯಲ್ಲಿ ಮಜದೂರ್​ ಏಕ್ತಾ ಎಂದು ಘೋಷಣೆ ಕೂಗುತ್ತಿರುವುದನ್ನು ಕಾಣಬಹುದಾಗಿದೆ. ಈತನ ವಿರುದ್ಧ ಖಾಲಿಸ್ತಾನ ಚಳವಳಿಯನ್ನ ಬೆಂಬಲಿಸಿದ ಆರೋಪವಿದೆ.

ಹಿಂಸಾಚಾರದ ಬಳಿಕ ಸಿಧು, ಪ್ರಧಾನಿ ಮೋದಿ ಹಾಗೂ ಬಿಜೆಪಿಯ ಗುರುದಾಸಪುರ ಸಂಸದ ಹಾಗೂ ಬಾಲಿವುಡ್​ ನಟ ಸನ್ನಿ ಡಿಯೋಲ್​ ಜೊತೆ ಇರುವ ಫೋಟೋಗಳು ವೈರಲ್​ ಆಗಿದೆ. 2019ರ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಸನ್ನಿ ಡಿಯೋಲ್​ ಪರ ಪ್ರಚಾರ ನಡೆಸಿರೋದಾಗಿ ಸಿಧು ಹೇಳಿಕೊಂಡಿದ್ದಾನೆ.

ನಾವು ಮಹಾನ್​ ಸಾಹಿಬ್​ ಧ್ವಜವನ್ನ ಕೆಂಪು ಕೋಟೆಯ ಮೇಲೆ ಹಾರಿಸಿದ್ದೇವೆ. ಪ್ರತಿಭಟನೆಯ ವೇಳೆ ನಮ್ಮ ಧ್ವಜವನ್ನ ಹಾರಿಸುವ ಹಕ್ಕು ನಮಗಿದೆ. ಪ್ರತಿಭಟನೆ ಅಂದ ಮೇಲೆ ಸಿಟ್ಟು, ಆಕ್ರೋಶಗಳನ್ನ ಹೊರಹಾಕುವುದು ಸಹಜ. ಸಿಖ್​ ಧ್ವಜ ಹಾರಿಸುವ ವೇಳೆ ರಾಷ್ಟ್ರ ಧ್ವಜವನ್ನ ನಾವು ಕೆಳಗಿಳಿಸಿರಲಿಲ್ಲ ಎಂದೂ ಹೇಳಿಕೊಂಡಿದ್ದಾನೆ.