ಡೆಹ್ರಾಡೂನ್: ಖಾಸಗಿ ಬಸ್ನಲ್ಲಿ ನೂರಕ್ಕೂ ಅಧಿಕ ಮಂದಿ ಪ್ರಯಾಣಿಸಿರುವ ಆತಂಕಕಾರಿ ಘಟನೆ ಉತ್ತರಾಖಂಡ್ನಲ್ಲಿ ನಡೆದಿದೆ.
ಒಂದು ರೈಲ್ವೇ ಬೋಗಿಗಿಂತ ಹೆಚ್ಚಿನ ಸಂಖ್ಯೆಯ ಜನರನ್ನು ಬಸ್ನಲ್ಲಿ ಸಾಗಿಸಿದ್ದಾರೆ. ಪೊಲೀಸರೇ ಒಂದು ಕ್ಷಣ ದಂಗಾಗಿದ್ದು, ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.
ಖಾಸಗಿ ಬಸ್ ಉತ್ತರಪ್ರದೇಶದ ಫಿಲಿಬಿತ್ನಿಂದ ಉತ್ತರಾಖಂಡ್ನ ಡೆಹ್ರಾಡೂನ್ಗೆ ತೆರಳುತ್ತಿತ್ತು. ಈ ಬಸ್ ಒಟ್ಟು 32 ಸಾಮಾನ್ಯ ಸೀಟ್ಗಳು ಮತ್ತು 15 ಸ್ಲೀಪರ್ ಸೀಟ್ಗಳನ್ನು ಹೊಂದಿದೆ. ಈ ಬಸ್ನ್ನು ಶ್ಯಾಮ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಸ್ನ ಒಳಗೆ ಪ್ರವೇಶಿ ಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಬಸ್ನಲ್ಲಿ ಇದ್ದ ಆಸನ ವ್ಯವಸ್ಥೆಗಿಂತ ಮೂರು ಪಟ್ಟು ಹೆಚ್ಚು ಜನರು ಬಸ್ನಲ್ಲಿ ಪ್ರಯಾಣಿಸುತ್ತಿದ್ದರು.
ಈ ವೇಳೆ ಬಸ್ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಿದಾಗ ಒಟ್ಟು ಪ್ರಯಾಣಿಕರ ಸಂಖ್ಯೆ ನೂರರ ಗಡಿ ದಾಟಿದೆ. ಬಸ್ನಲ್ಲಿ ಒಟ್ಟು 124 ಮಂದಿ ಪ್ರಯಾಣಿಸು ತ್ತಿದ್ದರು. ಈ ಬಸ್ ಫಿಲಿಬಿತ್ನಿಂದ ಹೊರಟು ಡೆಹ್ರಾಡೂನ್ ತಲುಪುವಾಗ ಹಲವು ಪೊಲೀಸ್ ಚೆಕ್ಪೋಸ್ಟ್ಗಳನ್ನು ದಾಟಿದ್ದರೂ, ಎಲ್ಲಿಯೂ ತಪಾಸಣೆ ನಡೆಸದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಬಳಿಕ ಈ ಬಸ್ನ್ನು ಶ್ಯಾಮಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸ್ನಲ್ಲಿದ್ದ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಗಳಿಗೆ ತೆರಳಲು ಬೇರೆ ವಾಹನಗಳ ಮೂಲಕ ಕಳುಹಿಸುವ ಕೆಲಸವನ್ನು ಪೊಲೀಸರು ಮಾಡಿದರು.
ಕಳೆದ ಆಗಸ್ಟ್ 28ರಂದು ಡೆಹ್ರಾಡೂನ್ನಿಂದ ಲಖೀಂಪುರ ಖೇರಿಗೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಚಾಂಡಿಘಾಟ್ನಲ್ಲಿ ಪೊಲೀಸರು ತಪಾಸಣೆ ನಡೆಸಿದ್ದರು. 47 ಪ್ರಯಾಣಿಕರ ಸೀಟಿನ ಬಸ್ನಲ್ಲಿ ಒಟ್ಟು 185 ಪ್ರಯಾಣಿಕರನ್ನು ತುಂಬಲಾಗಿತ್ತು.