Sunday, 15th December 2024

ಬಸ್ಸಿನಲ್ಲಿ 124 ಮಂದಿ ಪ್ರಯಾಣ: ಬಸ್ಸು ಪೊಲೀಸ್‌ ವಶಕ್ಕೆ

ಡೆಹ್ರಾಡೂನ್: ಖಾಸಗಿ ಬಸ್​ನಲ್ಲಿ ನೂರಕ್ಕೂ ಅಧಿಕ ಮಂದಿ ಪ್ರಯಾಣಿಸಿರುವ ಆತಂಕಕಾರಿ ಘಟನೆ ಉತ್ತರಾಖಂಡ್​ನಲ್ಲಿ ನಡೆದಿದೆ.

ಒಂದು ರೈಲ್ವೇ ಬೋಗಿಗಿಂತ ಹೆಚ್ಚಿನ ಸಂಖ್ಯೆಯ ಜನರನ್ನು ಬಸ್​ನಲ್ಲಿ ಸಾಗಿಸಿದ್ದಾರೆ. ಪೊಲೀಸರೇ ಒಂದು ಕ್ಷಣ ದಂಗಾಗಿದ್ದು, ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.

ಖಾಸಗಿ ಬಸ್ ಉತ್ತರಪ್ರದೇಶದ ಫಿಲಿಬಿತ್​ನಿಂದ ಉತ್ತರಾಖಂಡ್​ನ ಡೆಹ್ರಾಡೂನ್​ಗೆ ತೆರಳುತ್ತಿತ್ತು. ಈ ಬಸ್​ ಒಟ್ಟು 32 ಸಾಮಾನ್ಯ ಸೀಟ್​ಗಳು ಮತ್ತು 15 ಸ್ಲೀಪರ್​ ಸೀಟ್​ಗಳನ್ನು ಹೊಂದಿದೆ. ಈ ಬಸ್​ನ್ನು ಶ್ಯಾಮ್​ಪುರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಸ್​ನ ಒಳಗೆ ಪ್ರವೇಶಿ ಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಬಸ್​ನಲ್ಲಿ ಇದ್ದ ಆಸನ ವ್ಯವಸ್ಥೆಗಿಂತ ಮೂರು ಪಟ್ಟು ಹೆಚ್ಚು ಜನರು ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು.

ಈ ವೇಳೆ ಬಸ್​ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಿದಾಗ ಒಟ್ಟು ಪ್ರಯಾಣಿಕರ ಸಂಖ್ಯೆ ನೂರರ ಗಡಿ ದಾಟಿದೆ. ಬಸ್​ನಲ್ಲಿ ಒಟ್ಟು 124 ಮಂದಿ ಪ್ರಯಾಣಿಸು ತ್ತಿದ್ದರು. ಈ ಬಸ್​ ಫಿಲಿಬಿತ್​ನಿಂದ ಹೊರಟು ಡೆಹ್ರಾಡೂನ್​ ತಲುಪುವಾಗ ಹಲವು ಪೊಲೀಸ್​ ಚೆಕ್​ಪೋಸ್ಟ್​ಗಳನ್ನು ದಾಟಿದ್ದರೂ, ಎಲ್ಲಿಯೂ ತಪಾಸಣೆ ನಡೆಸದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಬಳಿಕ ಈ ಬಸ್​ನ್ನು ಶ್ಯಾಮಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸ್​ನಲ್ಲಿದ್ದ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಗಳಿಗೆ ತೆರಳಲು ಬೇರೆ ವಾಹನಗಳ ಮೂಲಕ ಕಳುಹಿಸುವ ಕೆಲಸವನ್ನು ಪೊಲೀಸರು ಮಾಡಿದರು.

ಕಳೆದ ಆಗಸ್ಟ್​ 28ರಂದು ಡೆಹ್ರಾಡೂನ್​ನಿಂದ ಲಖೀಂಪುರ ಖೇರಿಗೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಚಾಂಡಿಘಾಟ್​ನಲ್ಲಿ ಪೊಲೀಸರು ತಪಾಸಣೆ ನಡೆಸಿದ್ದರು. 47 ಪ್ರಯಾಣಿಕರ ಸೀಟಿನ ಬಸ್​ನಲ್ಲಿ ಒಟ್ಟು 185 ಪ್ರಯಾಣಿಕರನ್ನು ತುಂಬಲಾಗಿತ್ತು.