ಸಿಂಗರ್ ದಿಲ್ಜಿತ್ ದೋಸಾಂಝ್ ಅವರ ಜೈಪುರ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ದೂರುಗಳ ಮಹಾಪೂರವೇ ಹರಿದುಬಂದಿದೆ. ಇಲ್ಲಿನ ಆರ್.ಐ.ಐ.ಸಿ.ಒ. ಇಂಡಸ್ಟ್ರಿಯಲ್ ಏರಿಯಾದಲ್ಲಿ ನವಂಬರ್ 3ರಂದು ನಡೆದಿದ್ದ ಈ ಸಂಗೀತ ಕಾರ್ಯಕ್ರಮದಲ್ಲಿ ವ್ಯವಸ್ಥೆಗಳಿಗಿಂತ ಅಧ್ವಾನಗಳೇ ಹೆಚ್ಚಾಗಿದ್ದು ಇದೀಗ ಆಯೋಜಕರ ವಿರುದ್ಧ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಕಿಡಿ ಕಾರಿದ್ದಾರೆ.
ದಿಲ್ಜಿತ್ ಸಂಗೀತ ಕಾರ್ಯಕ್ರಮದ ವಿಡಿಯೋಗಳು ಇದೀಗ ಎಲ್ಲೆಡೆ ಹರಿದಾಡುತ್ತಾ ಸಂಚಲನವನ್ನುಂಟುಮಾಡುತ್ತಿದ್ದರೆ, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಗೀತ ಪ್ರಿಯರು ಮತ್ತು ದಿಲ್ಜಿತ್ ಅಭಿಮಾನಿಗಳು ಇಲ್ಲಿನ ಅವ್ಯವಸ್ಥೆ ಮತ್ತು ಕಳಪೆ ಭದ್ರತಾ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ ಹಾಗೂ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮಾರು 100ಕ್ಕೂ ಹೆಚ್ಚು ಮೊಬೈಲ್ ಫೋನ್ ಗಳು ಕಳ್ಳತನವಾಗಿರುವುದರ ಬಗ್ಗೆ ಪ್ರೇಕ್ಷಕರು ದೂರಿಕೊಂಡಿದ್ದಾರೆ.
ಈ ಎಲ್ಲಾ ಅಧ್ವಾನಗಳ ಬಗ್ಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು, ಮಹಿಳೆಯೊಬ್ಬರು ಬರೆದುಕೊಂಡಿರುವಂತೆ, “ಸ್ಟೇಜ್ ಬಳಿಯೇ ಜಾಗ ಹಿಡಿಯಬೇಕೆಂಬ ಕಾರಣಕ್ಕೆ ನಾವು ಮಧ್ಯಾಹ್ನ 2 ಗಂಟೆಗೇ ಕಾರ್ಯಕ್ರಮದ ಸ್ಥಳವನ್ನು ತಲುಪಿದೆವು, ನಮ್ಮ ಬಳಿ 7999 ರೂ.ಗಳ ಗೋಲ್ಡ್ ಟಿಕೆಟ್ ಇತ್ತು. ಆದರೆ ಅಲ್ಲಿನ ವ್ಯವಸ್ಥೆಗಳು ಎಷ್ಟು ಕಳಪೆಯಾಗಿತ್ತೆಂದರೆ ಜೈಪುರದಂತಹ ಜಾಗದಲ್ಲೇ ಸರಿಯಾದ ಕುಡಿಯುವ ನೀರಿನ ವ್ವವಸ್ಥೆಗಳಿರಲಿಲ್ಲ. ನಾವು ಇತರರ ಬಳಿ ನೀರನ್ನು ಕೇಳಿ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು.” ಎಂದು ಆಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಗೀತ ಕಾರ್ಯಕ್ರಮ ಕೊನೆಯಾದ ಬಳಿಕ ಹಲವರಿಗೆ ತಮ್ಮ ಮೊಬೇಲ್ ಫೋನ್ ಗಳು ಕಾಣೆಯಾಗಿರುವ ವಿಚಾರ ಗೊತ್ತಾಗಿದೆ, ಸುಮಾರು 50ಕ್ಕೂ ಹೆಚ್ಚು ಜನರು ತಮ್ಮ ಮೊಬೈಲ್ ಫೋನ್ ಗಳನ್ನು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: Kiki Hakansson: ಮೊದಲ ವಿಶ್ವ ಸುಂದರಿ ಕಿಕಿ ಹಕಾನ್ಸನ್ ನಿಧನ
“ನಾನು ಎಲ್ಲಾ ಕಡೆ ನನ್ನ ಮೊಬೈಲ್ ಗಾಗಿ ಹುಡುಕಾಡುತ್ತಿದ್ದೆ, ಆ ಸಂದರ್ಭದಲ್ಲೇ ಸುಮಾರು 15-20 ಜನ ತಮ್ಮ ತಮ್ಮ ಫೋನ್ ಗಳಿಗಾಗಿ ಹುಡುಕಾಡುತ್ತಿದ್ದರು. ಬಳಿಕ ನಾವು ನಂಗನೇರ್ ಸಾದರ್ ಥಾಣಾ ಪೊಲೀಸ್ ಠಾಣೆಗೆ ಹೋಗಿ ದೂರನ್ನು ನೀಡಿದೆವು.” ಎಂದು ಇನ್ನೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
“ನನಗೀಗ ಯಾರನ್ನು ದೂಷಿಸಬೇಕೆಂದೇ ತಿಳಿಯುತ್ತಿಲ್ಲ, ಈ ಕಾರ್ಯಕ್ರಮಕ್ಕೆ ದುಬಾರಿ ಟಿಕೆಟ್ ಇರಿಸಿದ ಆಯೋಜಕರನ್ನೇ..? ಅಥವಾ ಪೊಲೀಸರನ್ನೇ? ಸುಮಾರು 600-1000 ಜನ ಪೊಲೀಸ್ ಸಿಬ್ಬಂದಿಗಳಿದ್ದರೂ ಅವರಿಗೆ ಇಂತಹ ಘಟನೆಯ ಬಗ್ಗೆ ಯಾವುದೇ ಸುಳಿವಿರಲಿಲ್ಲವೇ? ಕಾರ್ಯಕ್ರಮದ ಬಳಿಕವಂತೂ ಒಟ್ಟಾರೆ ಗೊಂದಲ ಸೃಷ್ಟಿಯಾಗಿತ್ತು, ಪ್ರೇಕ್ಷಕರು ನಿರ್ಗಮನ ದ್ವಾರದತ್ತ ಒಮ್ಮಿಂದೊಮ್ಮೆಲೇ ನುಗ್ಗತೊಡಗಿದರು. ಒಟ್ಟಿನಲ್ಲಿ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿತ್ತು..” ಎಂದು ಇನ್ನೊಬ್ಬರು ಖೇದ ವ್ಯಕ್ತಪಡಿಸಿದ್ದಾರೆ.
ಇನ್ನೊಂದು ವಿಡಿಯೋದಲ್ಲಿ ಫ್ಯಾನ್ಸ್ ದಿಲ್ಜಿತ್ ಅವರಲ್ಲಿ ತಮ್ಮ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ಸಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದೇ ರೀತಿ, ದೆಹಲಿಯ ಜೆ.ಎಲ್,ಎನ್, ಸ್ಟೇಡಿಯಂನಲ್ಲಿ ನಡೆದಿದ್ದ ದಿಲ್ಜಿತ್ ಸಂಗೀತ ಕಾರ್ಯಕ್ರಮದಲ್ಲೂ ಸಾಕಷ್ಟು ಅಧ್ವಾನಗಳು ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ದಿಲ್ಜಿತ್ ಅವರು ತಮ್ಮ ದಿಲ್-ಲುಮಿನಾಟಿ 10 ಸಿಟಿ ಟೂರ್ ಎಂಬ ಕಾರ್ಯಕ್ರಮದಡಿಯಲ್ಲಿ ದೆಹಲಿ, ಹೈದ್ರಾಬಾದ್, ಅಹಮದಾಬಾದ್, ಲಕ್ನೋ, ಪುಣೆ, ಕೊಲ್ಕೊತ್ತಾ ಮೊದಲಾದ ನಗರಗಳಲ್ಲಿ ಕಾರ್ಯಕ್ರಮ ನೀಡಲಿದ್ದಾರೆ ಮತ್ತು ಈ ಕಾರ್ಯಕ್ರಮ ಗೌಹಾತಿಯಲ್ಲಿ ಡಿ.29ರಂದು ಸಮಾಪನಗೊಳ್ಳಲಿದೆ.