Monday, 25th November 2024

Drug Bust: ಮಾದಕ ವಸ್ತು ಬೃಹತ್‌ ಜಾಲ ಪತ್ತೆ; ಬರೋಬ್ಬರಿ 1,814 ಕೋಟಿ ರೂ. ಮೌಲ್ಯದ MD ಡ್ರಗ್ಸ್‌ ಸೀಜ್‌

Drug burst

ಭೋಪಾಲ್‌: ದೆಹಲಿಯಲ್ಲಿ ಭಾರೀ ಮೊತ್ತದ ಮಾದಕ ವಸ್ತು ಜಾಲ(Drug Bust) ಬಯಲಾದ ಬೆನ್ನಲ್ಲೇ ಮಧ್ಯಪ್ರದೇಶದಲ್ಲೂ ₹1,814 ಕೋಟಿ ಮೌಲ್ಯದ ಎಂಡಿ ಡ್ರಗ್ಸ್ ಮತ್ತು ಕಚ್ಚಾ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಬಳಿಯ ಕಾರ್ಖಾನೆಯಲ್ಲಿ ಈ ಭಾರೀ ಮೊತ್ತದ ಡ್ರಗ್ಸ್‌ ವಶಕ್ಕೆ ಪಡೆದಿರುವ ಪೊಲೀಸರು ಇಬ್ಬರನ್ನು ಅರೆಸ್ಟ್‌ ಮಾಡಿದ್ದಾರೆ.

ಈ ಬಗ್ಗೆ ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಮಾಹಿತಿ ನೀಡಿದ್ದು, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ದೆಹಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಭೋಪಾಲ್‌ನ ಕಾರ್ಖಾನೆಯೊಂದರ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಎಂಡಿ ಡ್ರಗ್ಸ್‌ ಮತ್ತು ಅದರ ಕಚ್ಚಾವಸ್ತುಗಳ್ನು ವಶಕ್ಕೆ ಪಡೆಯಲಾಗಿದೆ. ಈ ಮಾದಕ ವಸ್ತುವಿನ ಬೆಲೆ ಬರೋಬ್ಬರಿ 1814 ಕೋಟಿಗಳು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮಾದಕವಸ್ತು ಕಳ್ಳಸಾಗಣೆ ಮತ್ತು ದುರುಪಯೋಗವನ್ನು ಎದುರಿಸುವಲ್ಲಿ ಮಾದಕ ವಸ್ತು ನಿಗ್ರಹ ದಳದ ದಣಿವರಿಯದ ಪ್ರಯತ್ನವನ್ನು ತೋರಿಸುತ್ತದೆ. ನಮ್ಮ ಸಮಾಜದ ಆರೋಗ್ಯ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಅವರ ಪೊಲೀಸರು ಮತ್ತು ಮಾದಕ ವಸ್ತು ನಿಗ್ರಹ ದಳದ ಜಂಟೀ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಭಾರತವನ್ನು ಸುರಕ್ಷಿತ ಮತ್ತು ಆರೋಗ್ಯಕರ ರಾಷ್ಟ್ರವನ್ನಾಗಿ ಮಾಡುವ ಅವರ ಧ್ಯೇಯಕ್ಕೆ ನಾವು ಬೆಂಬಲವಾಗಿ ನಿಲ್ಲೋಣ ಎಂದು ಕರೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಭಾರೀ ಮಾದಕ ವಸ್ತು ಜಾಲವನ್ನು ದೆಹಲಿ ಪೊಲೀಸರು ಬೇಧಿಸಿದ್ದು, ಬರೋಬ್ಬರಿ 2,000 ಕೋಟಿ ರೂ. 500ಕೆ.ಜಿ ಕೊಕೇನ್‌ ಸೀಜ್‌(Drug Seize) ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ದಕ್ಷಿಣ ದೆಹಲಿಯಲ್ಲಿ ಪೊಲೀಸರು ರೇಡ್‌ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅರೆಸ್ಟ್‌ ಮಾಡಿದ್ದರು.

ಇನ್ನು ಈ ಬೃಹತ್‌ ಮಾದಕ ವಸ್ತು ಜಾಲದ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಸಿಂಡಿಕೇಟ್‌ ಇರುವಂತೆ ಮೇಲ್ನೋಟಕ್ಕೆ ಕಂಡು ಬಂದಿದೆ. ಇನ್ನು ಪ್ರಕರಣದಲ್ಲಿ ಇಬ್ಬರು ಆಫ್ಘನ್‌ ಪ್ರಜೆಗಳನ್ನು ಅರೆಸ್ಟ್‌ ಮಾಡಲಾಗಿದೆ. ಇವರ ಬಳಿ 400 ಗ್ರಾಂ ಹೆರಾಯಿನ್‌ ಮತ್ತು 160 ಗ್ರಾಂ ಕೊಕೇನ್‌ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರೆದಿದೆ.

ಈ ಸುದ್ದಿಯನ್ನೂ ಓದಿ: Drug Bust: ಬೃಹತ್‌ ಮಾದಕ ವಸ್ತು ಜಾಲ ಬಯಲು; 2,000 ಕೋಟಿ ರೂ. ಮೌಲ್ಯದ ಕೊಕೇನ್‌ ಸೀಜ್‌