ತಿರುವನಂತಪುರ: ಕೇರಳದ ಪ್ರಖ್ಯಾತ ಗುರುವಾಯೂರು ದೇವಸ್ಥಾನದಲ್ಲಿ (Guruvayur Temple) ಶ್ರೀಕೃಷ್ಣನಿಗೆ ಪ್ರಿಯವಾದ ʼತುಳಸಿ’ (Tulsi plant) ಸಮರ್ಪಿಸುವುದನ್ನೇ ನಿಷೇಧಿಸಲಾಗಿದೆ. ಇದನ್ನು ಗುರುವಾಯೂರು ದೇವಸ್ವಂ ಆಡಳಿತಾಧಿಕಾರಿ ಕೆ. ಪಿ. ವಿನಯನ್ ಖಚಿತಪಡಿಸಿದ್ದಾರೆ.
ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಗುರುವಾಯೂರು ಶ್ರೀಕೃಷ್ಣ ದೇಗುಲದಲ್ಲಿ ಸಮರ್ಪಣೆಗೆ ಎಂದು ಭಕ್ತರು ತಂದುಕೊಡುವ ತುಳಸಿಯನ್ನು ಪ್ರತ್ಯೇಕಿಸುವ ಕೆಲಸ ಮಾಡುವಾಗ ದೇವಾಲಯದ ಸಿಬ್ಬಂದಿಗೆ ಅಲರ್ಜಿ ಮತ್ತು ಇತರೆ ಆರೋಗ್ಯ ಸಮಸ್ಯೆಗಳಾಗಿವೆ. ಅನೇಕರ ಕೈ ಚರ್ಮಗಳು ಎದ್ದು ಹೋಗಿರುವ ಉದಾಹರಣೆಗಳೂ ಇವೆ. ಭಕ್ತರು ತರುವ ತುಳಸಿಯಲ್ಲಿ ಅತಿಯಾದ ಕೀಟನಾಶಕ ಇದ್ದು, ದೇಗುಲದ ಸಿಬಂದಿಗೆ ಅಲರ್ಜಿ-ತುರಿಕೆಯಂಥ ಸಮಸ್ಯೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬಹುತೇಕ ಭಕ್ತರು ಅಂಗಡಿಗಳಿಂದ ತುಳಸಿ ತರುತ್ತಾರೆ. ವ್ಯಾಪಾರಸ್ಥರು ತುಳಸಿ ಹಾಳಾಗದಂತೆ ರಕ್ಷಿಸಲು ಹೆಚ್ಚಿನ ಕೀಟನಾಶಕ ಸಿಂಪಡಿಸಿರುತ್ತಾರೆ. ಹೀಗಾಗಿ ತುಳಸಿ ನಿಷೇಧಿಸಲಾಗಿದೆ. ದೇಗುಲಕ್ಕೆ ಅಗತ್ಯವಿರುವಷ್ಟು ಕೀಟನಾಶಕ ಸಿಂಪಡಿಸದಿರುವ ತುಳಸಿ ಖರೀದಿಗೆ ವ್ಯವಸ್ಥೆ ಮಾಡಲಾಗಿದೆಯೆಂದು ದೇಗುಲ ತಿಳಿಸಿದೆ.
ಇತ್ತೀಚೆಗೆ ಕೆಲವು ತಿಂಗಳ ಹಿಂದೆ ದೇವಾಲಯದಲ್ಲಿ ನೀಡಲಾದ ಕಣಗಿಲೆ ಹೂವನ್ನು 24 ವರ್ಷದ ಯುವತಿಯೊಬ್ಬಳು ಪ್ರಸಾದ ಎಂದು ಸೇವಿಸಿ ಮೃತಪಟ್ಟಿದ್ದಳು. ಇದಾದ ಬಳಿಕ ಬಹುತೇಕ ದೇವಸ್ಥಾನಗಳಲ್ಲಿ ಹೂವು, ಹಣ್ಣುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲಾಗಿದೆ. ಶಬರಿಮಲೆ ದೇವಸ್ಥಾನದಲ್ಲಿ ಅರವಣ ಪಾಯಸ ಪ್ರಸಾದಕ್ಕೆ ಬಳಸಿದ ಏಲಕ್ಕಿಯಲ್ಲಿ ಕೀಟನಾಶಕ ಪ್ರಮಾಣ ಹೆಚ್ಚು ಕಂಡು ಬಂದು ವಿವಾದಕ್ಕೀಡಾಗಿತ್ತು. ಬಳಿಕ ಶಬರಿಮಲೆ ಆಡಳಿತ ಮಂಡಳಿ ಆ ಅರವಣ ಪಾಯಸದ ಲಕ್ಷಾಂತರ ಕಂಟೈನರ್‌ಗಳನ್ನು ತ್ಯಾಜ್ಯಕ್ಕೆ ಹಾಕಿತ್ತು.
ಇದನ್ನೂ ಓದಿ: Sabarimala Temple: ಶಬರಿಮಲೆ ಪ್ರಸಾದದಲ್ಲೂ ಕ್ರಿಮಿನಾಶಕ; 6.65 ಲಕ್ಷ ಕಂಟೈನರ್ ಪ್ರಸಾದ ಗೊಬ್ಬರಕ್ಕೆ!