Sunday, 12th January 2025

Health Tips: ಆರೋಗ್ಯದ ಬಗ್ಗೆ ನಿರ್ಣಯಗಳಿವೆಯೇ? ಹಾಗಾದರೆ ಇದು ತಿಳಿದಿರಲಿ

Health Tips

ಬೆಂಗಳೂರು: ಹೊಸ ವರ್ಷ (New Year) ಬಂದಿದೆ. ಈ ವರ್ಷದಲ್ಲಿ ತೂಕ ಇಳಿಸಬೇಕು ಅಥವಾ ಕೆಲವು ಅಭ್ಯಾಸಗಳನ್ನು ಬಿಡಬೇಕು ಇಲ್ಲವೇ ಆರೋಗ್ಯಕರ ಆಹಾರವನ್ನೇ ತಿನ್ನಬೇಕು, ಎಲ್ಲೆಲ್ಲಿಗೋ ಪ್ರಯಾಣಿಸಬೇಕು, ಇದಿಷ್ಟು ಪುಸ್ತಕಗಳನ್ನು ಓದಬೇಕು, ಇದಿಷ್ಟು ಹಣ ಉಳಿಸಬೇಕು, ದಿನಕ್ಕಿಷ್ಟು ವ್ಯಾಯಾಮ ಮಾಡಬೇಕು… ಇಂಥ ಏನೇನೋ ನಿರ್ಣಯಗಳನ್ನು ತೆಗೆದುಕೊಳ್ಳುವವರು ಸಿಕ್ಕಾಪಟ್ಟೆ ಜನರಿದ್ದಾರೆ. ಆದರೆ ಒಂದೆರಡು ತಿಂಗಳು ಕಳೆಯುವಷ್ಟರಲ್ಲಿ ಈ ನಿರ್ಣಯಗಳು ತಿಳಿಯದೆಯೇ ಕೈಯಿಂದ ಜಾರಿ ಹೋಗಿರುತ್ತವೆ. ಅದರಲ್ಲೂ ಆರೋಗ್ಯದ ಕುರಿತಾಗಿ ನಿರ್ಣಯಗಳನ್ನು ಮಾಡಿಕೊಂಡಿದ್ದರೆ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಅಷ್ಟೇಕೆ ಕಷ್ಟ ಎನಿಸುತ್ತದೆ ನಮಗೆ? (Health Tips)

ಆರೋಗ್ಯಪೂರ್ಣವಾಗಿ ಬದುಕಬೇಕೆಂದರೆ ಬದುಕಿನ ಎಲ್ಲಾ ಅಭ್ಯಾಸಗಳೂ ಆರೋಗ್ಯದೆಡೆಗೇ ಕೊಂಡೊಯ್ಯಬೇಕು- ಈ ತತ್ವಜ್ಞಾನ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಈಗಾಗಲೇ ಇರುವಂಥ ಅಭ್ಯಾಸಗಳನ್ನು ಎಲ್ಲಿ ಮತ್ತು ಹೇಗೆ ಬದಲಿಸಬೇಕು? ಎಲ್ಲಿಂದ ಪ್ರಾರಂಭಿಸಬೇಕು ಎಂಬುದು ಬಗೆಹರಿಯುವುದಿಲ್ಲ. ಮುಖ್ಯವಾಗಿ ಬಾಯಿ ಬೇಡುವುದನ್ನು ತಿನ್ನುತ್ತಾ ಬಂದವರಿಗೆ ಈಗ ಇದ್ದಕ್ಕಿದ್ದಂತೆ ಆರೋಗ್ಯಕರ ತಿನಿಸುಗಳು ಆದ್ಯತೆಯಾಗಬೇಕು ಎಂದರೆ- ʻನನ್ನಿಷ್ಟದ ಈರುಳ್ಳಿ ಪಕೋಡಾ, ಜಿಲೇಬಿಗಳನ್ನೆಲ್ಲಾ ಬಿಟ್ಟು ಬದುಕುವುದಾದರೂ ಹೇಗೆ?ʼ ಎಂದು ಗೋಳಾಡುವಂತಾಗುತ್ತದೆ. ಇಂಥ ಕೆಲವು ಸರಳ ಮಾರ್ಪಾಡುಗಳಿಂದ ಬದಲಾವಣೆಯನ್ನು ಪ್ರಾರಂಭಿಸಬಹುದು.

ಸಕ್ಕರೆಭರಿತ ಜ್ಯೂಸ್‌: ಇವುಗಳಿಂದಲೇ ಪ್ರಾರಂಭಿಸೋಣ. ಬಣ್ಣಬಣ್ಣದ ಬಾಟಲಿಗಳಲ್ಲಿರುವ ಜ್ಯೂಸ್‌ಗಳು ಕಣ್ಮನ ಸೆಳೆಯುವ ಬಗ್ಗೆ ಅನುಮಾನವೇ ಇಲ್ಲ. ಆದರೆ ನಿಸ್ಸಂದೇಹವಾಗಿ ಆರೋಗ್ಯಕ್ಕೂ ಹಾನಿಕರ. ಸಿಕ್ಕಾಪಟ್ಟೆ ಫ್ರಕ್ಟೋಸ್‌ ಇರುವ ಇವು ಶರೀರದ ಮೇಲೆ ನಾನಾ ರೀತಿಯಲ್ಲಿ ಪ್ರತಾಪ ತೋರಿಸುತ್ತವೆ. ಹಲ್ಲುಗಳನ್ನೂ ಹಾಳು ಮಾಡುತ್ತವೆ. ಬದಲಿಗೆ, ಸರಳವಾಗಿ ನೀರಿಗೆ ಬೇಕಾದ ಹಣ್ಣುಗಳ ರಸಗಳನ್ನು ಸೇರಿಸಿಕೊಳ್ಳಬಹುದು, ಸಿಹಿ ಇಲ್ಲದೆಯೇ! ನಿಜ ಬೆಲ್ಲ-ಸಕ್ಕರೆ ಹಾಕದೆಯೇ ಹಲವು ಫ್ಲೇವರ್‌ಗಳನ್ನು ಒಂದಕ್ಕೊಂದು ಬೆರೆಸಿದರೆ ಸೋಜಿಗದ ರುಚಿಯ ಪೇಯ ಸಿದ್ಧವಾಗುತ್ತದೆ. ಉದಾ, ಕೆಲವು ಚಮಚ ಅನಾಸಸ್‌ ರಸಕ್ಕೆ ಒಂದೆರಡು ಹನಿ ನಿಂಬೆರಸ ಅಥವಾ ಸಣ್ಣ ಚೂರು ಚಕ್ಕೆಯನ್ನು ನೆನೆಸಿದ ನೀರಿಗೆ ಒಂದೆರಡು ಹನಿ ಪುದೀನಾ ರಸ- ಇಂಥವು.

ಸಂಸ್ಕರಿತ ಆಹಾರ: ಹಸಿವಾದಾಗೆಲ್ಲ ನಮ್ಮ ಕೈಗೆ ಸುಲಭವಾಗಿ ಎಟುಕಬಲ್ಲ ಚಿಪ್ಸ್‌, ಕುಕೀಸ್‌ ಮುಂತಾದವುಗಳ ಚಟ ಅಂಟಿದರೆ ಬಿಡುವುದು ಕಷ್ಟವೇ. ಆದರೆ ಮುಂದುವರಿದರೆ ಇನ್ನಷ್ಟು ಕಷ್ಟ. ಇವುಗಳ ಬದಲಿಗೆ ಹಸಿವಾದಾಗ ಹಣ್ಣುಗಳು ಸರಿ. ಅದಲ್ಲದಿದ್ದರೆ ತರಕಾರಿ ಸಲಾಡ್‌ ಅಥವಾ ಒಣಹಣ್ಣು-ಬೀಜಗಳು, ಮತ್ತೂ ಹಸಿವಾದರೆ ಪ್ರೊಟೀನ್‌ ಬಾರ್‌ ಅಥವಾ ಶೇಂಗಾ ಚಿಕ್ಕಿಗಳು- ನೋಡಿ ಎಷ್ಟೆಲ್ಲಾ ಆಯ್ಕೆಗಳಿವೆ ನಮಗೆ! ಮಾಂಸಾಹಾರಿಗಳಾಗಿದ್ದರೆ ಸಂಸ್ಕರಿತ ರೆಡ್‌ಮೀಟ್‌ ನಂಥವು ಯಾವತ್ತಿದ್ದರೂ ತೊಂದರೆ ತರುತ್ತವೆ. ಆದಷ್ಟೂ ಕೊಬ್ಬು ಕಡಿಮೆಯಿರುವ, ಸಂಸ್ಕರಿಸದ ಆಹಾರ ಕ್ಷೇಮ

ಚಟುವಟಿಕೆ ಬೇಕು: ಇದರ ಬಗ್ಗೆ ಉಪನ್ಯಾಸವೇ ಬೇಡ. ನಿಮ್ಮಿಷ್ಟದ ಯಾವುದಾದರೂ ದೈಹಿಕ ಚಟುವಟಿಕೆ- ನಡಿಗೆ, ಜಾಗಿಂಗ್‌, ಸೈಕಲಿಂಗ್‌, ಯೋಗ, ಏರೋಬಿಕ್ಸ್‌, ಈಜು, ಝುಂಬಾ, ನಾಟ್ಯ, ಜಿಮ್-‌ ಎಷ್ಟೊಂದು ಅವಕಾಶಗಳಿವೆ ಚಟುವಟಿಕೆಗೆ. ಆಸಕ್ತಿ-ಅನುಕೂಲಕ್ಕೆ ಸೂಕ್ತವಾದ್ದನ್ನು ಮಾಡುವುದು ಕಷ್ಟವಲ್ಲ.

ಕ್ರಮ ಬದಲಿಸಿ: ನಿಮಗೆ ಅಥವಾ ನಿಮ್ಮ ಕುಟುಂಬಕ್ಕೆ ಅಡುಗೆಯನ್ನು ನೀವು ಮಾಡುವವರಾದರೆ, ಕೆಲವು ಮಾರ್ಪಾಡುಗಳನ್ನು ಖಂಡಿತಾ ಮಾಡಬಹುದು. ಕರಿದ ತಿಂಡಿಗಳ ಬದಲು ಬೇಕ್‌ ಮಾಡಿದ ಅಥವಾ ಹಬೆಯಲ್ಲಿ ಬೇಯಿಸಿದ ತಿಂಡಿಗಳನ್ನು ಆಯ್ಕೆ ಮಾಡಿ. ಕರಿಯಲೇ ಬೇಕೆಂದಿದದ್ದರೆ ಡೀಪ್‌ ಫ್ರೈಯಿಂಗ್‌ ಬದಲು ಏರ್‌ ಫ್ರೈಯಿಂಗ್‌ ಆಗುತ್ತದಾ ನೋಡಿ. ಫ್ರೈಡ್‌ ಮೋಮೋಗಳಂತೆಯೇ ಸ್ಟೀಮ್ಡ್‌ ಮೋಮೋಗಳೂ ರುಚಿಯಾಗಿರುತ್ತವೆ. ಆಯ್ಕೆ ನಿಮ್ಮದು.

ವಿಶ್ರಾಂತಿ ಬೇಕು: ಮೊದಲನೆಯದಾಗಿ ದಿನಕ್ಕೆಂಟು ತಾಸಿನ ನಿಯಮಿತವಾದ ನಿದ್ದೆಗೆ ಆದ್ಯತೆ ನೀಡಿ. ಶರೀರ ಮತ್ತು ಮನಸ್ಸಿನ ಒತ್ತಡ ಕಡಿಮೆ ಮಾಡುವಲ್ಲಿ ನಿದ್ದೆಯ ಪಾತ್ರ ಅತ್ಯಂತ ಮಹತ್ವದ್ದು. ಮಾತ್ರವಲ್ಲ, ಹೊರಗಿನ ಒತ್ತಡಗಳು ಮಿತಿಮೀರಿದಾಗ ಒಳಗೇನಾಗುತ್ತಿದೆ ಎನ್ನುವುದು ಕೇಳಿಸುವುದಿಲ್ಲ. ಹಾಗಾಗಿ ನಾವೂ ಕೊಂಚ ಮನಸ್ಸಿನ ಒಳ ಹೊಕ್ಕು ಕೇಳಿಸಿಕೊಳ್ಳುವುದು ಅನಿವಾರ್ಯ. ಯೋಗ, ಪ್ರಾಣಾಯಾಮ ಅಥವಾ ಧ್ಯಾನವನ್ನು ರೂಢಿಸಿಕೊಳ್ಳಲು ಸಾಧ್ಯವೇ ಎಂದು ಪ್ರಯತ್ನಿಸಿ.

ಈ ಸುದ್ದಿಯನ್ನೂ ಓದಿ: Health Tips: ರಕ್ತದೊತ್ತಡ ನಿಯಂತ್ರಣಕ್ಕೆ ‘ಆರೋಗ್ಯಕರ ಜೀವನ ಶೈಲಿ’ಯೇ ರಾಮ ಬಾಣ – ಇಲ್ಲಿದೆ ಅಮೂಲ್ಯ ಟಿಪ್ಸ್